ಪ್ಯಾಸೆಂಜರ್ ಆಟೋವೊಂದು ತುಂಗಭದ್ರಾ ಕಾಲುವೆಗೆ ಬಿದ್ದು ಮೂವರು ಮೃತಪಟ್ಟು, ಮೂರು ಜನ ನೀರುಪಾಲಾದ ಘಟನೆ ಇಂದು ಮುಂಜಾನೆ ತಾಲೂಕಿನ ಕೊಳಗಲ್ಲು ಗ್ರಾಮದ ಬಳಿ ಜರುಗಿದೆ.
ಒಟ್ಟು ಹತ್ತು ಜನ ಅಟೋದಲ್ಲಿ ಪ್ರಯಾಣಿಸುತ್ತಿದ್ದರು. ನಾಲ್ವರು ಪಾರಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಇನ್ನೂ ಮೂರು ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತದೆ ಎಂದು ಎಸ್ಪಿ ಸೈದುಲ್ ಅದಾವತ್ ಮಾಹಿತಿ ನೀಡಿದ್ದಾರೆ.
ಎರಡು ಬೈಕ್ ಗಳ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಗಜೇಂದ್ರಗಡ ಪಟ್ಟಣದ ಹೊರವಲಯದ ಇಳಕಲ್ ಕ್ರಾಸ್ ಬಳಿಯ ಸುಖಸಾಗರ್ ಡಾಬಾ ಬಳಿ ನಡೆದಿದೆ.
ಘಟನೆಯಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇ ಬನ್ನಿಗೋಳ ಗ್ರಾಮದ ವೃದ್ಧ ಯಲ್ಲಪ್ಪ ಹನಮಪ್ಪ ಅಂಗಡಿ (70)ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಕನಕಪ್ಪ ವಾಲ್ಮೀಕಿ, ಶಿವಲಿಂಗಪ್ಪ ಗಾಂಜಿ, ಶರಣಪ್ಪ ತಗ್ಗಿನಮನಿ, ಮಹಾಂತೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಚಿಕಿತ್ಸೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಸವಾರರು ಕುಂಟೋಜಿಯಿಂದ ಗಜೇಂದ್ರಗಡಕ್ಕೆ, ಮತ್ತೊಂದು ಬೈಕ್ ಗಜೇಂದ್ರಗಡದಿಂದ ಹಿರೇ ಬನ್ನಿಗೋಳ ಗ್ರಾಮಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ಸುದ್ದಿ ತಿಳಿದು ಗಜೇಂದ್ರಗಡ ಠಾಣೆಯ ಪಿಎಸ್ಐ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಮ್ಮ ಬದುಕಿನಲ್ಲಿ ಸರ್ವವೂ ವಿಧಿಲಿಖಿತ. ಎಲ್ಲವೂ ನಾವೆಣಿಸಿದಂತೆ ನಡೆಯುತ್ತದೆಯೆಂತಾದರೆ, ಮನುಷ್ಯನ ಜೀವನ ಹೀಗಿರುತ್ತಲೇ ಇರಲಿಲ್ಲ. ಕಷ್ಟ ಕೋಟಲೆಗಳು, ನೋವುಗಳು, ಬಡತನ, ಸಂಕಷ್ಟ ಎಲ್ಲವುಗಳಿಂದಲೂ ಅತೀತರಾಗಿ ಬದುಕಿಬಿಡಬಹುದಿತ್ತು. ಆದರೆ, ಹಾಗಲ್ಲವಲ್ಲ?! ನಾವು ಲೆಕ್ಕ ಹಾಕುವುದು, ಕನಸು ಕಾಣುವುದು ಒಂದಾದರೆ, ವಿಧಿಯಾಟ ಅದಕ್ಕೆ ತದ್ವಿರುದ್ಧ.
ಕೆಲವರ ಬಾಳಲ್ಲಿ ದುರಾದೃಷ್ಟವೆನ್ನುವದು ಅವರಿಗಿಂತಲೂ ಮುಂದೆಯೇ ಇರುತ್ತದೆ. ಈ ಇಬ್ಬರು ಹುಮ್ಮಸ್ಸಿನ, ಸುಂದರ ಜೀವನದ ಬಗ್ಗೆ ಹಲವಾರು ಕನಸಿನ ಬುತ್ತಿಗಳನ್ನು ಕಟ್ಟಿಕೊಂಡಿದ್ದ ಯುವಕರ ಬದುಕಿನಲ್ಲೂ ಕಾಣದ ವಿಧಿ ಹಾಗೊಂದು ದಾಳ ಉರುಳಿಸಿಯೇಬಿಟ್ಟಿತ್ತು.
ಒಬ್ಬಾತ ನಿಂಗಪ್ಪ ಹಲವಾಗಲಿ. ಇಳಿವಯಸ್ಸಿನ ಸಂಧ್ಯಾಕಾಲದಲ್ಲಿ ಮಕ್ಕಳು ಕಣ್ಣೆದುರಿಗೇ ಬೆಳೆಯುತ್ತಿರುವ ಕ್ಷಣಗಳನ್ನು ಕಣ್ಣೆದುರೇ ನೋಡಿ, ಬಡತನದಲ್ಲೂ ನೆಮ್ಮದಿ ಕಾಣುತ್ತಿದ್ದ ತಂದೆ-ತಾಯಿ. ಜೊತೆಗೆ ಅವಿವಾಹಿತ ಅಣ್ಣ.
ಇನ್ನೊಬ್ಬಾತ ಮಹೇಶ ವಕ್ರದ. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಮಹೇಶನೇನೂ ಬಂಗಾರದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಬೆಳೆದವನಲ್ಲ. ತಾಯಿಯೇ ಕೂಲಿ-ನಾಲಿ ಮಾಡಿ ಸಾಕಿದಳು, ಬೆಳೆಸಿ ಓದಿಸಿದಳು. ಈ ಕುಟುಂಬಕ್ಕೆ ಕಷ್ಟವೇ ಹಾಸಿಗೆ, ಬಡತನವೇ ಹೊದಿಕೆ. ಸ್ವಂತದ್ದೆನ್ನುವ ಅಂಗುಲ ಜಾಗವೂ ಇಲ್ಲ. ಛಲ ಬಿಡದೇ ಓದಿದ ಮತ್ತು ಯಶಸ್ಸಿನ ಬೆನ್ನತ್ತಿ ಓಡಿದ. ಪಿಯುಸಿಯಲ್ಲಿ ತಾಲೂಕಿಗೇ ಪ್ರಥಮ ಸ್ಥಾನ ಪಡೆದು ಪಾಸ್ ಆದ ಪ್ರತಿಭಾವಂತ.
ಮಹೇಶ್ ಇಂತಹ ಬಡತನದಲ್ಲಿಯೇ ಇಬ್ಬರು ತಂಗಿಯರ ಮದುವೆ ಮಾಡಿದ. ಕಣ್ತುಂಬ ಕನಸುಗಳನ್ನೇ ತುಂಬಿಕೊಂಡಿದ್ದ ಈತ ಶಿಕ್ಷಕನಾಗಬೇಕೆಂಬ ಕನಸು ಕಂಡು ಧಾರವಾಡದ ಡಯಟ್ ನಲ್ಲಿ ಡಿ.ಎಡ್ ಮುಗಿಸಿದ. ಮುಂದೆ ಕುಟುಂಬ ನಿರ್ವಹಣೆ ಕಷ್ಟವಾಯಿತು. 2014ರಲ್ಲಿ ಕೆ.ಎಸ್.ಆರ್.ಪಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕವಾದ. ನಂತರ 2016ರಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನವನ್ನೂ ಪಡೆದು ಆಯ್ಕೆಯಾದ.
ಸರಕಾರಿ ನೌಕರಿ ಸಿಗುವವರೆಗೂ ತನ್ನ ಹುಟ್ಟೂರಿನ ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದ ಮಹೇಶ ಮತ್ತು ಆತನ ತಾಯಿ ಪೊಲೀಸ್ ಇಲಾಖೆಯಲ್ಲಿ ನೇಮಕವಾದ ನಂತರ ಪೊಲೀಸ್ ಕ್ವಾರ್ಟರ್ಸ್ ನಲ್ಲೇ ವಾಸವಾಗಿದ್ದರು.
ಕರ್ತವ್ಯದಲ್ಲಿದ್ದಾಗ ಬಡ ಮಕ್ಕಳನ್ನು, ಕೂಲಿಕಾರರನ್ನು, ದಿನದ 14 ಗಂಟೆ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಡವರನ್ನು ನೋಡಿ ಮರುಗುತ್ತಿದ್ದ. ಅವನಿಗೇ ಅರಿವಿಲ್ಲದಂತೆ ಕಣ್ಣಾಲಿ ತುಂಬಿಹೋಗುತ್ತಿತ್ತು. ಮಹೇಶನಿಗೆ ಜನಸೇವೆ ಮಾಡಬೇಕೆಂಬ ಅಪಾರ ತುಡಿತವಿತ್ತು.
ಹಗಲು ರಾತ್ರಿಯೆನ್ನದೇ ಪಿಎಸ್ಐ ಹುದ್ದೆ ಪಡೆಯಲೇಬೇಕೆಂಬ ಛಲದಿಂದ ಓದು ಮುಂದುವರೆಸಿದ್ದ. ಆದರೆ ವಿಧಿ? ಈತನ ಪಿ.ಎಸ್.ಐ ಕನಸು ಇಷ್ಟವಾಗಲಿಲ್ಲವೇನೋ. ನಿಂಗಪ್ಪನ ಬಡತನದ ನೋವು ಇಲ್ಲಿಗೇ ಸಾಕೆಂದು ಎಣಿಸಿತೇನೋ. ಕರ್ತವ್ಯ ಮುಗಿಸಿ ಮುಂಡರಗಿಗೆ ವಾಪಸ್ಸಾಗುತ್ತಿದ್ದ ಈ ಇಬ್ಬರೂ ಸ್ನೇಹಿತರು ಸಾವಿನಲ್ಲೂ ಜೊತೆಯಾದರು.
ಕಣ್ಣ ತುಂಬ ಕನಸು ಹೊತ್ತು ಗುರಿಯೆಡೆಗೆ ಸಾಗುತ್ತಿದ್ದ ಇಬ್ಬರ ಜೀವವೂ ಸೋತು ವಿಧಿಯಾಟದ ಕೈ ಮೇಲಾಯಿತು. ಇನ್ನೂ ಕ್ರಮಿಸಬೇಕಿದ್ದ ದೂರ ಅಲ್ಲಿಗೇ ಮುಗಿದುಹೋಗಿತ್ತು. ಹೇಗಾದರೂ ಸರಿ, ಉಸಿರಿನೊಂದಿಗೆ ಹಿಂದಿರುಗಿ ಬರಲಿ ಎಂಬ ಕುಟುಂಬಸ್ಥರ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.
ನಿಂಗಪ್ಪನ ಕುಟುಂಬದ ಗಟ್ಟಿ ಆಧಾರಸ್ಥಂಭ ಸರಿದುಹೋಗಿದೆ. ಮಗ ಮಹೇಶನನ್ನು ಕಳೆದುಕೊಂಡ ತಾಯಿಗೆ ಸ್ವಂತ ಸೂರಿಲ್ಲ. ಪೊಲೀಸ್ ಕ್ವಾಟರ್ಸ್ ನ್ನೇ ಆಶ್ರಯಿಸಿದ್ದ ಕುಟುಂಬ ಈಗ ಅಕ್ಷರಶಃ ಬೀದಿಗೆ ಬಂದು ನಿಂತಿದೆ. ಬದುಕಿನ ಊರುಗೋಲಾಗಿದ್ದ, ಎದೆಯೆತ್ತರ ಬೆಳೆದುನಿಂತ ಗುಂಡುಕಲ್ಲಿನಂತಿದ್ದ ಈ ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಮುಂದಿನ ದಿಕ್ಕೇನು?
ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಈ ಎರಡೂ ಕುಟುಂಬಗಳಿಗೆ ಸಾಂತ್ವನದ ಜೊತೆಗೆ ಸೂಕ್ತ ವ್ಯವಸ್ಥೆ, ಜೀವನ ನಿರ್ವಹಣೆಗೊಂದು ಮಾರ್ಗ ಒದಗಿಸಿಕೊಡಲಿ, ಮಕ್ಕಳ ಅಗಲಿಕೆಯ ನೋವಿಗೆ ಸೂಕ್ತ ಸ್ಪಂದನೆ ನೀಡಲಿ ಎಂಬುದು ನಮ್ಮ ಆಶಯ.
ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗದಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ನವಿಲು ತೀರ್ಥ ಡ್ಯಾಂನಿಂದ ನಿನ್ನೆ ರಾತ್ರಿ 12,500 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ನರಗುಂದ ತಾಲೂಕಿನ ಹಲವು ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಲು ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.
ನರಗುಂದ ತಾಲೂಕಿನ ನದಿಪಾತ್ರದ ಗ್ರಾಮಗಳಾದ ಲಕಮಾಪೂರ, ಬೆಳ್ಳೇರಿ, ವಾಸನ, ಶಿರೋಳ, ಕೊಣ್ಣೂರ, ಬೂದಿಹಾಳ ಹಾಗೂ ಕಲ್ಲಾಪೂರ ಸೇರಿದಂತೆ ಎಂಟು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಧ್ವನಿ ವಾರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಮಲಪ್ರಭಾ ನದಿ ತೀರಕ್ಕೆ ಜನ, ಜಾನುವಾರು ಹೋಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ನರಗುಂದ ತಹಸೀಲ್ದಾರ್ ಎ ಡಿ ಅಮರವಾದಗಿ ಮಾಹಿತಿ ನೀಡಿದ್ದಾರೆ. ನವಿಲು ತೀರ್ಥದಿಂದ ಬಿಡುಗಡೆಗೊಳ್ಳುವ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.
ವ್ಯಾಪಕ ಮಳೆಯಿಂದ ಬೆಳೆಹಾನಿಯಾಗಿದ್ದು ಪ್ರತಿ ಎಕರೆಗೆ ಸರಕಾರ 50 ಸಾವಿರ ರೂಪಾಯಿ ಪರಿಹಾರ ಕೊಡಬೇಕೆಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ರೈತರ ಕೃಷಿ ಭೂಮಿಗಳಲ್ಲಿದ್ದ ಶೇಂಗಾ, ಮೆಣಸಿನಗಿಡ, ಹತ್ತಿ, ಉಳ್ಳಾಗಡ್ಡಿ, ಗೋವಿನಜೋಳ ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.
ಕೂಡಲೇ ರಾಜ್ಯ ಸರಕಾರ ರೈತರಿಗೆ ಬೆಳೆ ಪರಿಹಾರ ಹಾಗೂ ನಿರಂತರ ಮಳೆಯಿಂದ ಹಾನಿಯಾಗಿರುವ ಮನೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಪರಿಹಾರ ಬಿಡುಗಡೆ ವಿಳಂಬವಾದರೆ ಮುಂಬರುವ ದಿನಗಳಲ್ಲಿ ರೈತರ ಕ್ರಾಂತಿಯಿಂದ ರಾಜಕೀಯ ನಾಯಕರು ಬುದ್ಧಿ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುಲಿಕೇಶಿ ಪ್ರತಿಮೆ ಸ್ಥಾಪಿಸಲು ಆಗ್ರಹ
ಕನ್ನಡ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಹಾಗೂ ಬೆಂಗಳೂರಿನ ವಿಧಾನಸೌಧದ ಮುಂದೆ ಸ್ಥಾಪಿಸಬೇಕು. ಉತ್ತರ ಪಥೇಶ್ವರ ಹರ್ಷವರ್ಧನನು ಇಮ್ಮಡಿ ಪುಲಿಕೇಶಿಯ ಎದುರು ಸೋಲನ್ನು ಒಪ್ಪಿಕೊಂಡು, ಇಮ್ಮಡಿ ಪುಲಿಕೇಶಿಗೆ ‘ದಕ್ಷಿಣ ಪಥೇಶ್ವರ’ ಬಿರುದು ನೀಡಿದ್ದಾನೆ. ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮನಸ್ಸು ಮಾಡಿದ್ದರೆ ಭಾರತದ ಚಕ್ರರ್ತಿಯಾಗಿ ಮರೆಯಬಹುದಿತ್ತು’ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜು, ಜಿಲ್ಲಾಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಸಂಚಾಲಕ ಮಂಜುನಾಥ ಬುರಡಿ, ಶಿವಪ್ಪ ಚಿಕ್ಕಬಳ್ಳಾಪುರ, ರಾಮು ಮಂಡ್ಯ ಇದ್ದರು.
ವೇಗವಾಗಿ ಹೊರಟಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಹಳ್ಳಿಕೇರಿ-ಬನ್ನಿಕೊಪ್ಪ ಮಧ್ಯೆ ಸಂಜೆ ನಡೆದಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ ಅಲ್ಲಾಭಕ್ಷಿ (35) ಮೃತಪಟ್ಟ ದುರ್ಧೈವಿ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ನಾಲ್ವರು ಲಕ್ಕುಂಡಿ ಗ್ರಾಮದವರೆಂದು ತಿಳಿದು ಬಂದಿದೆ.
ಮೃತ ಅಲ್ಲಾಭಕ್ಷಿ ಕಾರಿನಲ್ಲಿ ಸಿಲುಕಿ ಮೃತಪಟ್ಟರೆ, ಉಳಿದವರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯಗಳು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತದ ಸೌಂಡಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನ ಓಡೋಡಿ ಬಂದು ನೋಡಿ ಮಮ್ಮಲ ಮರುಗಿದರು. ಅಷ್ಟೇ ಅಲ್ಲ ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಐವರು ಗೆಳೆಯರಾಗಿದ್ದು ಬನ್ನಿಕೊಪ್ಪದ ಕಡೆ ಹೊರಟಿದ್ದರು ಎನ್ನಲಾಗಿದೆ. ಗಾಯಗೊಂಡವರು ಸದ್ಯ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇನ್ ಸ್ಪೈರ್ ಅವಾರ್ಡ್ 2020-21 ನೇ ಸಾಲಿನ 9ನೇ ರಾಷ್ಟ್ರಹಂತದ ವಸ್ತುಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯು ನವದೆಹಲಿಯಲ್ಲಿ ಸೆ. 14 ರಿಂದ 16 ರ ವರೆಗೆ ನಡೆಯಲಿದ್ದು, ಗದಗ ಜಿಲ್ಲೆಯಿಂದ 6 ವಿದ್ಯಾರ್ಥಿಗಳು ಶನಿವಾರ ರೈಲು ಮೂಲಕ ನವದೆಹಲಿಗೆ ತೆರಳಿದರು.
ಮುಂಡರಗಿ ತಾಲ್ಲೂಕಿನ ಶ್ರೀನಿವಾಸ್ ಅಂಬರೀಷ್ ಮಸಲವಾಡ, ಗಜೇಂದ್ರಗಡ ತಾಲೂಕಿನ ಅನುಶ್ರೀ ಅಮರಯ್ಯ ಗೌರಿಮಠ, ಕಳಕೇಶ್ ಶಂಕ್ರಪ್ಪ ಗುಂಡಿ, ಈಶ್ವರ್ ಸಂಗಪ್ಪ ಸೂರಿ, ಶಿರಹಟ್ಟಿ ತಾಲೂಕಿನ ರೇಷ್ಮಾ ಶೇಖಪ್ಪ ಲಮಾಣಿ, ಗದಗ ಶಹರದ ನೇಹಾ ಬಿ ಕುಲಕರ್ಣಿ ಈ ಆರು ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಯೊಂದಿಗೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಉಸ್ತುವಾರಿ ಶಿಕ್ಷಕಿಯಾಗಿ ಶ್ರೀಮತಿ ಭುವನೇಶ್ವರಿ ಜಿ ಪೋಲೀಸ್ ಪಾಟೀಲ್ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ ಪ್ರಾಚಾರ್ಯ ಎಸ್ ಡಿ ಗಾಂಜಿ, ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಉಪನ್ಯಾಸಕ ಶಂಕರ್ ಹಡಗಲಿ, ಹಿರಿಯ ಉಪನ್ಯಾಸಕರಾದ ಆರ್. ಎಸ್. ಬುರಡಿ, ತಾಂತ್ರಿಕ ಸಹಾಯಕರಾದ ಶ್ರೀಮತಿ ಎಸ್. ಎಸ್.ಗೌಡರ ಹಾಗೂ ತಾಲೂಕು ನೋಡಲ್ ಶಿಕ್ಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.
ಈ ಬಾರಿ ಜಿಲ್ಲೆಯ ಶಿರುಂದ-ಯಲಿಶಿರುಂದ, ಬೆಳದಡಿ ತಾಂಡಾ ಹಾಗೂ ನಾಗಾವಿ ಭಾಗದಲ್ಲಿ ರಾಜ್ಯದಲ್ಲೇ ದಾಖಲೆ ಪ್ರಮಾಣದ ಮಳೆಯಾಗಿದ್ದು, ಗದಗ-ಬೆಳದಡಿ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತದೆ.
ನೀರಿನಿಂದ ರಸ್ತೆಯು ಸುರಕ್ಷಿತವಾಗಿ ಉಳಿಯಬೇಕಾದರೆ ತಡೆಗೋಡೆ ನಿರ್ಮಾಣ ಅವಶ್ಯಕವಾಗಿದೆ ಎಂದು ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ದಿ.11 ರಂದು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮನವಿ ಸಲ್ಲಿಸಿದರು. ಇಲ್ಲಿನ ಹಿರಿಕೆರೆಯು ಭರ್ತಿಯಾದ ಪರಿಣಾಮ ಅಂತರ್ಜಲದ ಮಟ್ಟ ಹೆಚ್ಚಾಗಿ ಸುಮಾರು 5 ಸಾವಿರ ಎಕರೆ ಹೊಲಗಳ ಬೆಳೆಗಳು ನಾಶವಾಗಿದ್ದು, ಜಮೀನಿನಲ್ಲಿ ಸಂಗ್ರಹವಾಗುವ ನೀರು ರಸ್ತೆಗೆ ಹರಿದು ರಸ್ತೆಯು ಹದಗೆಟ್ಟು ಹೋಗಿದೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಜೊತೆಗೆ ಗದಗ-ಬೆಳದಡಿ ರಸ್ತೆಯ ಹಿತದೃಷ್ಠಿಯಿಂದ ತಡೆಗೋಡೆ ನಿರ್ಮಾಣ ಅಗತ್ಯವಾಗಿದೆ ಎಂದರು.
ಇತಿಹಾಸ ಪ್ರಸಿದ್ಧವಾದ ವಿಜಯನಗರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಬುಕ್ಕನಕೆರೆಯಲ್ಲಿ ತುಂಬಿಕೊಂಡಿರುವ ಅಪಾರ ಪ್ರಮಾಣದ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಹೊರಹಾಕಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಸಚಿವರು ಕ್ರಮ ವಹಿಸುವಂತೆ ಮನವಿ ಮಾಡಿದರು.
ತಾ.ಪಂ ಮಾಜಿ ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯರಾದ ಬಿ.ಎಸ್ ಚಿಂಚಲಿ ಮಾತನಾಡಿ, ಮಳೆಯಿಂದ ಹಾಳಾಗಿರುವ ಇಚಲಹಳ್ಳದ ೨ ಕೆರೆಗಳನ್ನು ದುರಸ್ತಿಗೊಳಿಸುವುದರ ಜೊತೆಗೆ ಬೆಳೆಹಾನಿಯಾದ ರೈತರಿಗೆ ಶೀಘ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ನಾಗಾವಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ನಾಗಾವಿ ತಾಂಡಾದ ಗಣೇಶ ಲಮಾಣಿ, ಗದಗ-ನಾಗಾವಿ ಸಂಪರ್ಕ ರಸ್ತೆ ಹಾಳಾಗಿರುವುದರಿಂದ ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಸಂಚಾರಿಗಳಿಗೆ ತೀವ್ರ ತೊಂದರೆಯುಂಟಾಗಿದ್ದು, ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಿ ರಸ್ತೆ ಸುಧಾರಿಸಬೇಕೆಂದು ಮನವಿ ಮಾಡಿದರು.
ವಿ.ಪ ಸದಸ್ಯರಾದ ಎಸ್.ವಿ ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಣ್ಣ ಪಲ್ಲೇದ, ಜಿಲ್ಲಾಧಿಕಾರಿಗಳಾದ ವೈಶಾಲಿ. ಎಂ.ಎಲ್, ಸಿ.ಇ.ಓ. ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ ದೇವರಾಜು ಇವರ ಉಪಸ್ಥಿತಿಯಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ರಾಜು ಕುರಡಗಿ, ವಿಜಯಕುಮಾರ ಗಡ್ಡಿ, ಭೀಮಸಿಂಗ್ ರಾಠೋಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭದ್ರೇಶ ಕುಸಲಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.