Home Blog Page 3220

ಅತಿವೃಷ್ಠಿಯಿಂದ ಗದಗ ಜಿಲ್ಲೆಯಲ್ಲಿ ಸುಮಾರು 811.26 ಕೋಟಿ ರೂ. ಹಾನಿ

ಉಸ್ತುವಾರಿ ಸಚಿವ ಬಿ.ಸಿ.ಪಾಟೀಲರಿಂದ ಅತಿವೃಷ್ಠಿ ಹಾನಿ ಪ್ರದೇಶಗಳಿಗೆ ಭೇಟಿ, ಪರಿಶೀಲನೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ಅಧಿಕ ಪ್ರಮಾಣದ ಬೆಳೆ, ಮನೆ, ಸರ್ಕಾರಿ ಆಸ್ತಿ ಹಾನಿಗೊಳಗಾಗಿದ್ದು ಹಾನಿಯ ಪ್ರಮಾಣವನ್ನು 811.26 ಕೋಟಿ ಎಂದು ಅಂದಾಜಿಸಲಾಗಿದೆ. ಹಾನಿಯ ಸಮೀಕ್ಷಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಹಾಗೂ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರಿಕಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿದಾಗ ಜಿಲ್ಲೆಯಲ್ಲಿ 93 ಸಾವರಿ ಹೆಕ್ಟೇರ ಕೃಷಿ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿತ್ತು. ಇದರಲ್ಲಿ 76 ಸಾವಿರ ಹೆಕ್ಟೇರ ಪ್ರದೇಶದ ಬೆಳೆಗಳ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ.

ಸೆಪ್ಟೆಂಬರ 12ರ ನಂತರ ಪರಿಹಾರ ಮೊತ್ತವನ್ನು ಅರ್ಹರಿಗೆ ನೀಡಲು ಮುಖ್ಯ ಮಂತ್ರಿಗಳು ಸೂಚಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಈ ವರೆಗೆ 7 ಮಾನವ ಜೀವ ಹಾನಿ ಸಂಭವಿಸಿದ್ದು ಇದರಲ್ಲಿ 4 ಕುಟುಂಬಗಳಿಗೆ ತಲಾ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಜೊತೆಗೆ ಇಬ್ಬರು ಕರ್ತವ್ಯ ನಿರತ ಪೋಲಿಸರ ಪೇದೆಗಳ ಜೀವ ಹಾನಿ ಸಂಭವಿಸಿದ್ದು ಆ ಕುಟುಂಬಗಳಿಗೆ ಶೀಘ್ರವೇ ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತವನ್ನು ದೊರಕಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಒಟ್ಟು 59 ಜಾನುವಾರುಗಳ ಜೀವಹಾನಿಯಾಗಿದ್ದು, 1601 ಹಾನಿಯಾದ ಮನೆಗಳ ಪೈಕಿ 655 ಮನೆಗಳಿಗೆ ಮಾರ್ಗಸೂಚಿಗಳನ್ವಯ ಪರಿಹಾರ ನೀಡಲಾಗಿದೆ. ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಲೋಕೊಪಯೋಗಿ ಇಲಾಖೆ ರಸ್ತೆಗಳು ಅಧಿಕ ಹಾನಿಗೊಳಗಾಗಿದ್ದು ಜೊತೆಗೆ ಕೆರೆಗಳು ಸಹ ಹಾನಿಗೊಳಗಾಗಿವೆ. ಹಾನಿಯಾದ ಬೆಳೆ, ಮನೆಗಳಿಗೆ ಸರ್ಕಾರದ ನೆರವನ್ನು ಪಕ್ಷಪಾತ ಮಾಡದೆ ವಿತರಣೆಗೆ ತಿಳಿಸಲಾಗಿದೆ ಎಂದರು.

ಕೃಷಿ ಹಾಗೂ ತೋಟಗಾರಿಕೆ ಪ್ರದೇಶಗಳ ಹಾನಿ ಪ್ರಮಾಣ ಅಪಾರವಾಗಿದ್ದು ಈ ಕುರಿತು ಸಮೀಕ್ಷಾ ಪ್ರಗತಿಯಲ್ಲಿದೆ. ರಾಜ್ಯ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸೇರಿ 612 ಕೀ.ಮಿ. ರಸ್ತೆ ಹಾನಿಗೊಳಗಾಗಿದ್ದು 96 ಕೋಟಿ ಹಾನಿ ಪ್ರಮಾಣ ಅಂದಾಜಿಸಲಾಗಿದೆ. ಅದರಂತೆ 94 ಸೇತುವೆಗಳು ಹಾನಿಯಾಗಿದದ 34 ಕೋಟಿ ನಷ್ಟವಾಗಿದೆ. ಕುಡಿಯುವ ನೀರಿನ ಹಾನಿ ಪ್ರಮಾಣ 26 ಲಕ್ಷ ಎಂದು ಅಂದಾಜಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆಯ 5 ಕೆರೆಗಳು ಹಾನಿಗಿಡಾಗಿದ್ದು ಅಂದಾಜು 1 ಕೋಟಿ ರೂ. ಹಾನಿಯಾಗಿದೆ ಎಂದು ವರದಿಯಾಗಿದೆ. 241 ವಿದ್ಯುತ್ ಕಂಬಗಳ ಹಾನಿಯ ಪ್ರಮಾಣ 28 ಲಕ್ಷ, ಪ್ರಾಥಮಿಕ ಶಾಲಾ ಕೊಠಡಿಗಳು 174 ಹಾನಿಯಾಗಿದ್ದು 5.6 ಕೋಟಿ ರೂ ಹಾಗೂ 122 ಅಂಗನವಾಡಿ ಕೊಠಡಿಗಳು ಹಾನಿಯಾಗಿದ್ದು 2.44 ಕೋಟಿ ರೂ. ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿದ್ದು ಅಧಿಕಾರಿಗಳು ಸಂತ್ರಸ್ಥರಿಗೆ ತಕ್ಷಣವೇ ಸ್ಪಂದಿಸುವ ಕಾರ್ಯ ಮಾಡಬೇಕು. ನಿಖರ ಹಾನಿಯ ಪ್ರಮಾಣ ಅಂದಾಜಿಸಿ ಪರಿಹಾರ ಕಾರ್ಯ ಚುರುಕುಗೊಳಿಸಲು ತಿಳಿಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ. ಎಂ.ಎಲ್, ಜಿ.ಪಂ. ಸಿ.ಇ.ಓ. ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತದನಂತರ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ, ಮೊದಲಿಗೆ ಕುರ್ತಕೋಟಿಯಲ್ಲಿ ಹಳ್ಳದ ನೀರಿನಿಂದ ಹಾನಿಗೊಳಗಾದ ಸೇತುವೆ, ರಸ್ತೆ ವೀಕ್ಷಿಸಿದರು. ನಂತರ ಅತಿಯಾದ ಮಳೆಯಿಂದಾಗಿ ಹಾನಿಗೊಳಗಾದ ಶೇಂಗಾ ಬೆಳೆದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂತೂರ-ಬೆಂತೂರ ಗ್ರಾಮದಲ್ಲಿ ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದ ಅವರು ಕಳಸಾಪುರದಲ್ಲಿ ಪಂಚಾಯತರಾಜ್ ಇಲಾಖೆಯ ಹಾನಿಗೊಳಗಾದ ರಸ್ತೆಯನ್ನು ವೀಕ್ಷಿಸಿದರು. ನಾಗಾವಿಯಲ್ಲಿ ಅತಿಯಾದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿರುವದನ್ನು ಪರಿಶೀಲಿನೆ ನಡೆಸಿದರು. ಗದಗ ನಗರದ ದೋಬಿ ಘಾಟನ ಸೇತುವೆ ಹಾಗೂ ಮಕಾನ ಗಲ್ಲಿಯಲ್ಲಿ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ನಂತರ ಬೆಟಗೇರಿಯ ವಾರ್ಡ ನಂ.3 ಬಣ್ಣದ ನಗರಕ್ಕೆ ಭೇಟಿ ನೀಡಿ ಅಗತ್ಯದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹುತಾತ್ಮ ಪೊಲೀಸರ ಕುಟುಂಬಗಳಿಗೆ ಸಾಂತ್ವನ ಹೇಳದ ಜನಪ್ರತಿನಿಧಿಗಳು! ಮತದ ಗುಂಗಿನಲ್ಲಿ ಸೂತಕದ ಮನೆ ಮರೆತರು?

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜಕೀಯ ಮರೆತು ಮತಕ್ಕೋಸ್ಕರ ಬಡಿದಾಡಿ ಸಾವನ್ನಪ್ಪಿದಾಗ ಶಾಸಕರು, ಸಚಿವರು, ರಾಜಕೀಯ ಮುಖಂಡರು ಆ ಸಾವಿನ ಮನೆಯ ಮುಂದೆ ಕಾರ್ಯಕ್ರಮ ಮಾಡಿದ್ದು ರಾಜ್ಯದ ಇತಿಹಾಸ.

ಆದರೆ ನಮ್ಮ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡರಗಿ ಪೊಲೀಸ್‌ ಠಾಣೆಯ ನಾಗರಹಳ್ಳಿ ಮತ್ತು ಹಮ್ಮಿಗಿ ಗ್ರಾಮದ ಸಿಬ್ಬಂದಿಗಳಿಬ್ಬರು ಸಾರ್ವಜನಿಕರಿಗಾಗಿ ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾದರು.

ಇದನ್ನೂ ಓದಿ ಕೊನೆಗೂ ಶವವಾಗಿ ಪತ್ತೆಯಾದ ಮಹೇಶ್; ಇಲಾಖೆಗೆ ಜೊತೆಯಲ್ಲಿ ಸೇರಿ, ಜೊತೆಯಾಗಿ ಇಹಲೋಕ ತ್ಯಜಿಸಿದ ಸ್ನೇಹಿತರು!

ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಯಾವೊಬ್ಬ ರಾಜಕೀಯ ನಾಯಕರೂ ಭಾಗಿಯಾಗದಿರುವದು ನಮ್ಮ ನಿಮ್ಮೆಲ್ಲರ ದುರ್ದೈವ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರ ದುದುಪೀರ ಹಣಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ಅಥವಾ ಹಿತೈಷಿಗಳು ಮರಣ ಹೊಂದಿದಾಗ, ಆಯಾ ಪಕ್ಷದ ಶಾಸಕರು, ಮುಖಂಡರುಗಳು ಓಡಿಹೋಗಿ ಮಾಲೆ ಹಾಕಿ ನಮನ ಸಲ್ಲಿಸಿ ಬರುವುದು ಸಂಪ್ರದಾಯ. ಆದರೆ ಜನಸೇವೆಗಾಗಿಯೇ ಪ್ರಾಣತೆತ್ತ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ ವಕ್ರದ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನು ಘಟನೆ ನಡೆದು ಮೂರು ದಿನ ಕಳೆದರೂ ಯಾವ ಪಕ್ಷದ ರಾಜಕಾರಣಿಗಳೂ ಮಾಡಿಲ್ಲ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಇಬ್ಬರೂ ಸಿಬ್ಬಂದಿಗಳು ಅತ್ಯಂತ ಬಡತನದಲ್ಲಿಯೂ ಕಷ್ಟಪಟ್ಟು ಕಲಿತು ಸ್ವಸಾಮರ್ಥ್ಯದಿಂದಲೇ ನೌಕರಿ ಪಡೆದವರು. ಕನಿಷ್ಠಪಕ್ಷ ಪೊಲೀಸ್ ಹುದ್ದೆಗೆ ಗೌರವ ಕೊಟ್ಟಾದರೂ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಬಹುದಿತ್ತು.

ಮೃತರ ಕುಟುಂಬದವರು ಆರ್ಥಿಕ ಸಹಕಾರವನ್ನೇನೂ ಕೇಳುವದಿಲ್ಲ. ಅವರು ಬಯಸುವದು ‘ಬೆಂಬಲಕ್ಕೆ ನಾವಿದ್ದೇವೆ’ ಎಂಬ ಧೈರ್ಯ ತುಂಬುವ, ಸಾಂತ್ವನದ ಮಾತುಗಳನ್ನಷ್ಟೇ. ಆದ್ದರಿಂದ ರಾಜಕೀಯ ಮುಖಂಡರು ಈಗಲಾದರೂ ಅವರ ಮನೆಗೆ ತೆರಳಿ ಒಂದೆರಡು ಸಾಂತ್ವನದ ಮಾತುಗಳನ್ನಾದರೂ ಹೇಳಿಬರಲಿ ಎಂಬ ಆಶಯವನ್ನು ದುದುಪೀರ ಹಣಗಿ ವ್ಯಕ್ತಪಡಿಸಿದ್ದಾರೆ.

ಮಳೆಹಾನಿ ತುರ್ತು ಕ್ರಮ ಕೈಗೊಳ್ಳಿ; ಎಚ್.ಕೆ.ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಯಾದ ಕಳಸಾಪೂರ, ನಾಗಾವಿ, ನಾಗಾವಿ ತಾಂಡಾದ ಹಲವು ಪ್ರದೇಶಗಳಿಗೆ ಶಾಸಕ ಎಚ್.ಕೆ.ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ ಎದಕ ಬರ್ತಾರಿಲ್ಲಿ, ದನ ಕಾಯಾಕ ಬಂದಾನೇನ ಅಂವ; ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ಲೆಫ್ಟ್ ರೈಟ್

ನಾಗಾವಿ ತಾಂಡಾದಲ್ಲಿ ಭಾರಿ ಪ್ರಮಾಣದಲ್ಲಿ ಒಡೆದ ಸೇತುವೆಯನ್ನು ವೀಕ್ಷಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮೂಲ ಸೌಕರ್ಯ ಸೇರಿದಂತೆ ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ಪ್ರಮುಖವಾಗಿ ಕುಡಿಯುವ ನೀರು ಕಾಮಗಾರಿಯ ಪೈಪ್‌ಲೈನ್ ಹಾಳಾಗಿದ್ದು, ನೀರು ಪೂರೈಕೆಗಾಗಿ ಬೋರ್‌ವೆಲ್ ಕೊರೆಸಲು ಪ್ರವಾಹದ ವಿಶೇಷ ಅನುದಾನ ಬಿಡುಗಡೆಗೊಳಿಸಲು ಸೂಚಿಸಿದರು.

ರಸ್ತೆ ಸಂಪೂರ್ಣ ಹಾಳಾಗಿದ್ದು ಮಕ್ಕಳು ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿಪಡಿಸಲು ಆಗ್ರಹಿಸಿದರು.

ನಾಗಾವಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ಮನೆ, ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳನ್ನು ಎಚ್.ಕೆ.ಪಾಟೀಲ ವೀಕ್ಷಿಸಿದರು.

ಈ ಸಂದರ್ಭದಲ್ಲಿ ವಾಸಣ್ಣ ಕುರಡಗಿ, ಬಿ.ಆರ್.ದೇವರಡ್ಡಿ, ಸಿದ್ದು ಪಾಟೀಲ, ಬಿ.ವಿ.ಸುಂಕಾಪೂರ, ತಹಸೀಲ್ದಾರ ಕಿಶನ್ ಕಲಾಲ, ಸಹಾಯಕ ತೋಟಗಾರಿಕೆ ಅಧಿಕಾರಿ ಶೈಲೇಂದ್ರ ಬಿರಾದಾರ, ಕೃಷಿ ಅಧಿಕಾರಿ ರವಿ, ತಾಪಂ ಇ ಓ ಧರ್ಮೇಂದ್ರ ನಾಗಾವಿ, ಕಳಸಾಪೂರ ಗ್ರಾಪಂ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರು-ಬಸ್ ಡಿಕ್ಕಿ; ಮೂವರು ಸ್ಥಳದಲ್ಲಿಯೇ ಸಾವು, ನಾಲ್ವರು ಗಾಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಖಾಸಗಿ ಬಸ್ ಹಾಗೂ ಇನೋವಾ ಕಾರ ಮಧ್ಯ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ಜರುಗಿದೆ.

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪನ್ನಪಟ್ಟಿ ಬಳಿ ಈ ದುರ್ಘಟನೆ ಸಂಭವಿಸಿದೆ.

ಕೇರಳ ರಾಜ್ಯದ ಇನೋವಾ ಕಾರು ಹಾಗೂ ಬಸ್ ನಡುವೆ ಡಿಕ್ಕಿ ಸಂಬಂಧಿಸಿದೆ. ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎದಕ ಬರ್ತಾರಿಲ್ಲಿ, ದನ ಕಾಯಾಕ ಬಂದಾನೇನ ಅಂವ; ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ಲೆಫ್ಟ್ ರೈಟ್

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಹಲವು ಸ್ಥಳಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಇಂದು ಶುಕ್ರವಾರ ಭೇಟಿ ನೀಡಿ ನೆರೆಹಾವಳಿ, ಬೆಳೆ ಹಾನಿಯ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಮಳೆಯಿಂದಾಗಿ ಬೆಳೆ, ಜಮೀನು ಹಾನಿಯಾಗಿ ಸಂಕಷ್ಟ ಎದುರಿಸುತ್ತಿರುವ ರೈತ ಮಹಿಳೆ ಸುಮಿತ್ರಾ ಕಟ್ಟಿಮನಿ ಸಚಿವರೆದುರು ಕಣ್ಣೀರಿಟ್ಟು ಅಳಲು ತೋಡಿಕೊಂಡರು.

ಸುಮಿತ್ರಾರಿಗೆ ಸೇರಿದ 10 ಎಕರೆ ಜಮೀನು ಸಂಪೂರ್ಣ ಕೊಚ್ಚಿ ಹೋಗಿದೆ. ಸವಳು ಹಳ್ಳದ ಆರ್ಭಟಕ್ಕೆ ಜಮೀನಿನಲ್ಲಿ ಹಾಕಿದ್ದ ಮೆಣಸಿನಕಾಯಿ, ಈರುಳ್ಳಿ, ಶೇಂಗಾ, ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ಸವಳು ಹಳ್ಳದ ಇಕ್ಕೆಲಗಳಲ್ಲಿ ಮುಳ್ಳುಕಂಟಿಗಳು ಯಥೇಚ್ಛವಾಗಿ ಬೆಳೆದಿದ್ದು ಹಳ್ಳ ತನ್ನ ದಾರಿ ಬದಲಿಸಿದ್ದೇ ಈ ಅವಾಂತರಕ್ಕೆ ಕಾರಣವೆಂಬ ಅಭಿಪ್ರಾಯಗಳು ರೈತರಿಂದ ಕೇಳಿಬಂದಿವೆ.

ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ಸಚಿವ ಸಿ.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೊಂದ ರೈತ ಮಹಿಳೆ ಸುಮಿತ್ರಾ, ಅತೀವ ನೋವಿನಿಂದ ತಮ್ಮ ದುಃಖ ತೋಡಿಕೊಂಡರು.

`ನೋಡ್ರಿ ಸಾಹೇಬ್ರೆ. ಬಡ್ಡಿ ಸಾಲ ಮಾಡಿ ಕೃಷಿ ಮಾಡಿದ್ದೆ. ಈ ಮಳೆಗೆ ಎಲ್ಲವೂ ಕೊಚ್ಚಿಹೋಯ್ತು. ಬೆಳೆ ನಾಶವಾಗಿದ್ದಷ್ಟೇ ಅಲ್ದೆ ಈ ಭೂಮಿ ಕೃಷಿ ಮಾಡೋಕೂ ಸಾಧ್ಯವಾಗದಂತೆ ಹಾನಿಗೊಳಗಾಯ್ತು. ಅಗದೀ ಫಲವತ್ತಾದ ಭೂಮಿ ನಮ್ದು. ಎಲ್ಲಾ ಬೆಳೆಗಳೂ ಹೋಯ್ತು. ಭೂಮಿಯೂ ಹಾಳಾಯ್ತು. ಮಣ್ಣು ಕೊಚ್ಚಿಹೋಗಿ, ಗರಸುಮಣ್ಣು ಮತ್ತು ಮರಳು ಹೊಲದಲ್ಲಿ ಎರಡು-ಮೂರು ಅಡಿಗಳಷ್ಟು ನಿಂತಿದೆ. ಈಗ ಮತ್ತೆ ಭೂಮಿ ಹಸನು ಮಾಡಿ ಬೆಳೆ ಬೆಳೆಯೋದಾದ್ರೂ ಹ್ಯಾಂಗ್ರೀ? ಅಲ್ಲೀವರೆಗೆ ನಾವು ಬದುಕು ನಡೆಸೋಕೆ ದಾರಿ ಯಾವ್ದು ಸರ್? ನಮಗೆ ಜಮೀನು ಸರಿ ಮಾಡಿಸಿಕೊಡಿ. ನಮಗೆ ನ್ಯಾಯ ಕೊಡಿಸಿ, ಪರಿಹಾರ ಒದಗಿಸಿ. ಹೇಗಾದರೂ ಬದುಕಿಕೊಳ್ತೇವೆ’ ಎಂದು ಕಣ್ಣೀರು ಹಾಕಿದರು.

ಜಂಟಿ ಕೃಷಿ ನಿರ್ದೇಶಕರ ವಿರುದ್ಧ ಗರಂ ಆದ ಸಿ.ಸಿ. ಪಾಟೀಲ್

ತಾಲೂಕಿನ ಹೊಂಬಳ ಗ್ರಾಮದಲ್ಲಿ ಬೆಳೆಹಾನಿ ವೀಕ್ಷಣೆಯ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರನ್ನು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ತರಾಟೆಗೆ ತೆಗೆದುಕೊಂಡರು. ಪ್ರಸ್ತುತ ಮಹಿಳೆಯ ಕೃಷಿ ಭೂಮಿ ಹಾಳಾದ ವಿಷಯವನ್ನು ಚರ್ಚೆಸುವದಕ್ಕಾಗಿ ಕೃಷಿ ಅಧಿಕಾರಿಗಳನ್ನು ಸಚಿವರು ಕೇಳಲು ಮುಂದಾದರು. ಆದರೆ, ಈ ವೇಳೆ ಅಧಿಕಾರಿಗಳು ಸ್ಥಳದಲ್ಲಿ ಗೈರಾಗಿರುವದಕ್ಕೆ ಕೆಂಡಾಮಂಡಲವಾದರು.

ಸರ್ವೆ ಮಾಡಬೇಕಾದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ನನ್ನ ಹಿಂದೆ ಇರಬೇಕು. ಜಂಟಿ ಕೃಷಿ ನಿರ್ದೇಶಕ ಒಂದು ಕಿಲೊಮೀಟರ್ ಹಿಂದ ಅದಾನ ಅಂದ್ರ ದನಾ ಕಾಯಾಕ ಹೋಗಲಿ ಎಂದು ಸಿಸಿ ಪಾಟೀಲ ತಮ್ಮ ಆಪ್ತ ಸಹಾಯಕರಿಗೆ ಗದರಿದರು.

ಕಂದಕಕ್ಕೆ ಜಾರಿದ ಸಾರಿಗೆ ಬಸ್; ಚಾಲಕನ ಸಮಯ ಪ್ರಜ್ಞೆ, ಪ್ರಯಾಣಿಕರು ಸೇಫ್

ವಿಜಯಸಾಕ್ಷಿ ಸುದ್ದಿ, ರೋಣ

ಜೆಂಟ್ ಪಿನ್ ತುಂಡಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ ಬಸ್ ಕಂದಕಕ್ಕೆ ಜಾರಿದ ಘಟನೆ
ತಾಲೂಕಿನ ಜಕ್ಕಲಿ ಗ್ರಾಮದ ವಸತಿ ನಿಲಯದ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ಮಾರನಬಸರಿ ಗ್ರಾಮದಿಂದ ಜಕ್ಕಲಿ ಮಾರ್ಗವಾಗಿ ಬಸ್ ಗದಗ ಕಡೆಗೆ ಹೊರಟಿತ್ತು. ಜಕ್ಕಲಿ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇರುವ ವಸತಿ ನಿಲಯದ ಬಳಿ ಬಸ್ ನ ಜೆಂಟ್ ಪಿನ್ ತುಂಡಾಗಿದ್ದರಿಂದ ಬಸ್ ಕಂದಕ್ಕೆ ಜಾರಿದೆ. ಆಗ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಹದಿನೈದಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣವನ್ನು ಉಳಿಸಿದ್ದಾನೆ ಎನ್ನಲಾಗಿದೆ.

ರೋಣ ಸಾರಿಗೆ ಸಂಸ್ಥೆಯು ತಾಲೂಕಿನ ಗ್ರಾಮೀಣ ಭಾಗಗಳಿಗೆ ಡಕೋಟಾ ಬಸ್ ಒಡಿಸುತ್ತಿರುವ ಮೂಲಕ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ವಿಜಯಸಾಕ್ಷಿ ಸುದ್ದಿ, ಗದಗ

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಆರೋಪದಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಮಧ್ಯರಾತ್ರಿ ನಡೆದಿದೆ.

ಜವಳಿಗಲ್ಲಿಯ ಸುದೀಪ್ ಮುಂಡೆವಾಡೆ(20) ಎಂಬಾತನೇ ಮೃತಪಟ್ಟ ದುರ್ಧೈವಿ ಎಂದು ಪೊಲೀಸರು ತಿಳಿಸಿದ್ದಾರೆ.

ತೋಂಟದಾರ್ಯ ಮಠದ ದ್ವಾರ ಬಾಗಿಲದ ಬಳಿ ಸೆಟ್ಲಮೆಂಟ್ ನ ಓರ್ವ ಸೇರಿದಂತೆ ಐದಾರು ಯುವಕರ ಗುಂಪೊಂದು ಚಾಕುವಿನಿಂದ ಇರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಹೊಟ್ಟೆಯ ಭಾಗದಲ್ಲಿ ಮೂರು ಕಡೆ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವ ಆಗಿ ಸುದೀಪ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ನಿನ್ನೆ ಗುರುವಾರ ಒಂಬತ್ತನೇ ದಿನದ ಗಣಪತಿ ವಿಸರ್ಜನೆ ಕಾರ್ಯಕ್ರಮ ಇತ್ತು.

ಪೊಲೀಸರ ಕಾರ್ಯಾಚರಣೆ; ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಅಕ್ರಮವಾಗಿ ನಾಡ ಪಿಸ್ತೂಲ್ ಹೊಂದಿದ ಆರೋಪದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲ ಆರೋಪಿಗಳು ತಲೆಮರೆಸಿಕೊಂಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಯಡ್ರಾಮಿ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಝಳಕಿ ಗ್ರಾಮದ ಸೈಫನ್ ಸಾಬ್ ಶಿರೂರು ಹಾಗೂ ಗುರುಲಿಂಗಪ್ಪ ಹಡಪದ ನಾಡ ಪಿಸ್ತೂಲ್ ಹೊಂದಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ ಒಂದು ನಾಡ ಪಿಸ್ತೂಲ್, ಮೂರು ಸಜೀವ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡ ಕೆಲ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಭಾರೀ ಮಳೆ ಹಿನ್ನೆಲೆ; ಮನೆ ಗೋಡೆ ಕುಸಿದು ವೃದ್ಧೆ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಮನೆಯ ಗೋಡೆಗಳು ನೆನೆದು ಕುಸಿದು ಬಿದ್ದ ಪರಿಣಾಮವಾಗಿ ವೃದ್ಧೆ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ದುರ್ಗಾದೇವಿ ದೇವಸ್ಥಾನದ ಹತ್ತಿರ ತಗಡಿನ ಶೆಡ್ ನಲ್ಲಿ ವಾಸವಿದ್ದ ವೃದ್ಧೆ ಲಕ್ಷ್ಮವ್ವ ತಂದೆ ಹನಮಪ್ಪ ಮಾದರ (80) ಮೃತಪಟ್ಟ ನತದೃಷ್ಟೆ.

ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಈ ದುರ್ಘಟನೆ ಜರುಗಿದೆ.

ಸುದ್ದಿ ತಿಳಿದು ರೋಣ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಣ್ಣಿನಲ್ಲಿ ಸಿಲುಕಿದ್ದ ಮೃತದೇಹ ಹೊರಗಡೆ ತೆಗೆದರು. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಬ್ಯಾಂಕ್; 85 ಸಾವಿರ ರೂ. ದಂಡ ವಿಧಿಸಿದ ಆಯೋಗ

0

ವಿಜಯಸಾಕ್ಷಿ ಸುದ್ದಿ, ಧಾರವಾಡ

ಕನ್ನಡದಲ್ಲಿ ಬರೆದ ಕಾಸೋಲೆ (ಚೆಕ್) ಯನ್ನು ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂ.ದಂಡ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಧಾರವಾಡದ ಇಂಗ್ಲೀಷ್ ಪ್ರಾಧ್ಯಾಪಕ ವಾದಿರಾಜಾಚಾರ್ಯ ಇನಾಮದಾರ ಎಂಬುವರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣ ಹಿಂಪಡೆಯಲು ಕನ್ನಡದಲ್ಲಿ ಬರೆದು ಸಲ್ಲಿಸಿದ್ದ ಕಾಸೋಲೆ (ಚೆಕ್) ಯನ್ನು ಹಳಿಯಾಳದ ಎಸ್‌ಬಿಐ ಶಾಖೆ ತಿರಸ್ಕರಿಸಿತ್ತು. ಇದರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ದೂರುದಾರರ ಉಳಿತಾಯ ಖಾತೆಯಲ್ಲಿ 9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇದ್ದರೂ ಕೂಡ ಕೇವಲ 6 ಸಾವಿರ ರೂ. ಮೌಲ್ಯದ ಚೆಕ್ಕನ್ನು ಕನ್ನಡ ಭಾಷೆಯಲ್ಲಿ ಬರೆದುದಕ್ಕಾಗಿ ಅಮಾನ್ಯ ಮಾಡಿರುವುದನ್ನು, ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ಹಳಿಯಾಳ ಎಸ್‌ಬಿಐ ಬ್ಯಾಂಕ್ ಶಾಖೆಯು ಫಿರ್ಯಾದಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ.

ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ತೀರ್ಪು ನೀಡಿದ್ದಾರೆ .

ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರದ ಬಳಕೆ ನಿಯಮಾನುಸಾರ ಸ್ಥಳೀಯ ಭಾಷಾ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ತೀರ್ಪು ವಿಶೇಷ ಹಾಗೂ ಮಹತ್ವದ್ದೆನಿಸಿದೆ.

error: Content is protected !!