Home Blog Page 3221

ರಣರಕ್ಕಸ ಮಳೆಗೆ ಗದಗ ಜಿಲ್ಲೆ ತತ್ತರ; ರಸ್ತೆಯಲ್ಲಿ ಹರಿದ ನೀರು, ಕೊಚ್ಚಿ ಹೋದ ರಸ್ತೆ, ರಾಜಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ವ್ಯಕ್ತಿ ಪಾರು

0

ವಿಜಯಸಾಕ್ಷಿ ಸುದ್ದಿ, ಗದಗ

ಸೋಮವಾರ ರಾತ್ರಿ ಸುರಿದ ರಣರಕ್ಕಸ ಮಳೆಗೆ ಗದಗ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ.

ಗದಗ-ಬೆಟಗೇರಿಯ ಅವಳಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚರಂಡಿ ತುಂಬಿ, ರಸ್ತೆಯಲ್ಲಿ ನೀರು ಹರಿಯುವ ದೃಶ್ಯ ಸಾಮಾನ್ಯವಾಗಿತ್ತು. ಗಂಗಿಮಡಿ ಆಶ್ರಯ ಕಾಲೋನಿ, ಬೆಟಗೇರಿಯ ಭಜಂತ್ರಿ ಅವರ ಓಣಿ, ಕನ್ಯಾಳ ಅಗಸಿ, ಮಂಜುನಾಥ್ ನಗರ, ಬಸ್ ನಿಲ್ದಾಣ ಸಂಪೂರ್ಣ ನೀರಿನಿಂದ ಜಲಾವೃತವಾಗಿತ್ತು. ಬಸ್ ನಿಲ್ದಾಣದ ಪಕ್ಕದ ಮಾರುಕಟ್ಟೆಗೆ ರಾಜಕಾಲುವೆಯ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿ ಆಗಿತ್ತು.

ಬೆಟಗೇರಿಯ ಬಸ್ ನಿಲ್ದಾಣದಿಂದ ಶರಣಬಸವೇಶ್ವರ ನಗರಕ್ಕೆ ಸಂಚರಿಸಲು ಜನ ಪರದಾಡಿದರು.

ಮನೆಗೆ ನೀರು ನುಗ್ಗಿದ್ದರಿಂದ ಮಕ್ಕಳು, ವೃದ್ಧರು ಪರದಾಡಿದರು. ಮನೆಯಲ್ಲಿದ್ದ ದವಸ ಧಾನ್ಯಗಳು, ಮಾಡಿದ ಅಡುಗೆಯೂ ನೀರು ಪಾಲಾಗಿ ಕೆಲವರು ರಾತ್ರಿ ಉಪವಾಸ, ವನವಾಸ ಅನುಭವಿಸಿದರು.

ರಾಜೀವಗಾಂಧಿ ನಗರದ ನೆಲ್ಸನ್ ಮಂಡೇಲಾ ಸ್ಕೂಲ್ ಬಳಿಯ ಮನೆಗಳಿಗೂ ನೀರು ನುಗ್ಗಿದ್ದರಿಂದ ಜನ ಹೈರಾಣಾದರು. ನೀರು ಹೊರ ಹಾಕಲು ಹರಸಾಹಸ ಪಟ್ಟ ಜನರು, ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗದಗ-ಬೆಟಗೇರಿ ಅವಳಿ ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಮುಳಗುಂದ ನಾಕಾ ಬಳಿಯ ಪಿಬ್ಲ್ಯೂಡಿ ವಸತಿ ನಿಲಯಗಳ ಪಕ್ಕದ ಮನೆಗಳಿಗೂ ನೀರು ನುಗ್ಗಿದೆ. ಬೆಟಗೇರಿಯ ರಾಜಕಾಲುವೆಯ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಜಗಳ ಗಲ್ಲಿ, ಬಸ್ ನಿಲ್ದಾಣದ ಹಿಂಬಾಗ ಲಕ್ಷ್ಮಿ ಚಾಳ, ಎಸ್ ಎಮ್ ಕೃಷ್ಣ ನಗರ ಸೇರಿದಂತೆ ಅನೇಕ ಬಡಾವಣೆಯಲ್ಲಿ ನೀರು ನಿಂತಿದೆ. ಸ್ಟೇಷನ್ ರಸ್ತೆ, ಮಹಾವೀರ ಕಾಲೋನಿಯಲ್ಲಿ ಕೂಡ ನೀರು ನಿಂತಿದೆ.

16ನೇ ವಾರ್ಡ್‌ನಲ್ಲೂ ಕೆಲ ಮನೆಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಲ್ಲಿ ನಿಂತ ದೃಶ್ಯಗಳು ಕಂಡುಬಂದಿವೆ.

ಲಕ್ಷ್ಮೇಶ್ವರದಲ್ಲೂ ವರುಣನ ಅರ್ಭಟಕ್ಕೆ ಜನ ನಲುಗಿದ್ದ, ರಾತ್ರಿಯಿಡೀ ಸಂಕಷ್ಟ ಅನುಭವಿಸಿದ್ದಾರೆ. ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಪಟ್ಟಣದ ನಿರಾಶ್ರಿತರಿಗೆ ಅಂಜುಮನ್ ಏ ಇಸ್ಲಾಂ ಸಂಸ್ಥೆ ಹಾಗೂ ದೂದಪೀರಾ ದರ್ಗಾ ಕಮಿಟಿ ಅವರು ತಾತ್ಕಾಲಿಕ ಆಶ್ರಯ ಒದಗಿಸಿ ಮಾನವೀಯತೆ ಮೆರದಿದ್ದಾರೆ.


ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ಕೆರೆ ಕೋಡಿ ಒಡೆದು ಮನೆಗೆ ನೀರು ನುಗ್ಗಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೊಂಬಳದಲ್ಲೂ ರೈತರ ಬೆಳೆದ ಮೆಣಸಿನಕಾಯಿ, ಈರುಳ್ಳಿ, ಸೇರಿದಂತೆ ಅನೇಕ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿದ್ದು, ಹಿರೇಹಂದಿಗೋಳಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ ರಸ್ತೆ ಕಿತ್ತು ಹೋಗಿದೆ.

ತೇಲಿಹೋದ ಬಣವೆಗಳು

ಮಳೆ ಜನರಿಗಷ್ಟೇ ಅಲ್ಲ. ರೈತರಿಗೂ ಸಂಕಷ್ಟ ತಂದಿದೆ. ಗದಗ ತಾಲೂಕಿನ ಮದಗಾನೂರು ಗ್ರಾಮದ ಅಕ್ಕಪಕ್ಕದ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ರೈತರ ಜಮೀನುಗಳಲ್ಲಿ ಹಾಕಿದ್ದ ಹೊಟ್ಟು ಮೇವಿನ ಬಣವೆಗಳು, ರೈತರ ಎದುರೇ ನೀರಲ್ಲಿ ತೇಲಿ ಹೋಗಿದ್ದು, ರೈತರ ಜಂಘಾಬಲವೇ ಉಡುಗಿ ಹೋಗಿದೆ. ಒಟ್ನಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಜನರಿಗೆ, ರೈತ ಸಮುದಾಯಕ್ಕೆ ಸಾಕಷ್ಟು ಸಂಕಷ್ಟ ತಂದಿದೆ.

ಜಿಲ್ಲೆಯ ಡಂಬಳ, ಶಿರಹಟ್ಟಿ ತಾಲೂಕಿನ ಮಜ್ಜೂರು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಈ ನೀರು ಬನ್ನಿಕೊಪ್ಪ ಗ್ರಾಮದಲ್ಲಿ ಸಂಕಷ್ಟ ತಂದಿದ್ದು, ಹಳ್ಳ ತುಂಬಿ ಹರಿಯುತ್ತಿದ್ದು, ಕೆಲ ಮನೆಗಳು ಜಲಾವೃತಗೊಂಡಿವೆ. ಬನ

ನಗರಸಭೆ ಅಧ್ಯಕ್ಷೆ ದಾಸರ ಭೇಟಿ

ಮಳೆಯ ರುದ್ರನರ್ತನದ ನಂತರ ಜನರ ಸಂಕಷ್ಟ ಕೇಳಲು ರಾತ್ರಿಯೇ ನಗರ ಸಂಚರಿಸಿ ಜನರ ಸಂಕಷ್ಟ ಆಲಿಸಿ ಸಾಂತ್ವನ ಹೇಳಿದರು.

ಭಾಷಣಕ್ಕೆ, ಚಪ್ಪಾಳೆಗಷ್ಟೇ ಸೀಮಿತವಲ್ಲ; ಸದ್ದಿಲ್ಲದೇ ಕೋಮು ಸೌಹಾರ್ದತೆಯ ಕಾರ್ಯದಲ್ಲಿ ತೊಡಗಿದ ನ್ಯಾಯವಾದಿ

ವಿಜಯಸಾಕ್ಷಿ ಸುದ್ದಿ, ಗದಗ

ಸಮಾಜದಲ್ಲಿ ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗಿ ಅಶಾಂತಿ ಹೆಚ್ಚುತ್ತಿದೆ, ಎಲ್ಲರೂ ಸಾಮರಸ್ಯದಿಂದ ಬಾಳಬೇಕು, ಜಾತಿ-ಜಾತಿಗಳ ನಡುವಿನ ಅಂತರ ದೂರವಾಗಬೇಕು, ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬಾಳಬೇಕು…

ಇವೇ ಮುಂತಾದ ಸಿದ್ಧ ಭಾಷಣಗಳನ್ನು ನಾವು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವಲ್ಲ? ಆದರೆ, ಹಾಗೆ ಬರಿಯ ಮಾತನಾಡುವವರು ಎಷ್ಟು ಜನ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂಬ ಉತ್ತರ ಹುಡುಕಿ ಹೊರಟರೆ ಸಿಗುವದು ದೊಡ್ಡ ಸೊನ್ನೆಯೇ. ಮಾತುಗಳು, ಹೇಳಿಕೆಗಳು ಬರಿಯ ಭಾಷಣಕ್ಕೆ, ಚಪ್ಪಾಳೆಗಷ್ಟೇ ಸೀಮಿತವಾಗಿಬಿಡುತ್ತದೆ. ಆದರೆ, ಇಲ್ಲೊಬ್ಬರಿದ್ದಾರೆ. ಹೇಳದೇ ಮಾಡುವವನು ರೂಢಿಯೊಳಗುತ್ತಮನು ಎಂಬಂತೆ ಸದ್ದಿಲ್ಲದೇ ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.

ಅವರು ಮುಕ್ತಾರ ಅಹ್ಮದ ಎ ಮೌಲ್ವಿ. ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು. ವಿಶೇಷವೆಂದರೆ, 169 ವರ್ಷಗಳ ಗದಗ ಜಿಲ್ಲೆಯ ಇತಿಹಾಸದಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲನೇ ಮುಸ್ಲಿಂ ಸಮುದಾಯದ ನ್ಯಾಯವಾದಿಗಳು.

ಕರ್ನಾಟಕದಲ್ಲೇ ಜಿಲ್ಲಾ ವಕೀಲರ ಸಂಘದ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರೂ ಹೌದು. ಹೀಗೆ ವಿಶೇಷತೆಗಳು ಹಲವಾರು ಇವೆ. ಮುಕ್ತಾರ್ ಎಂತಲೇ ಕರೆಯಲ್ಪಡುವ ಇವರು ಲಕ್ಷ್ಮೇಶ್ವರದಲ್ಲಿ ಹುಟ್ಟಿ, ಗದಗದಲ್ಲೇ ಬೆಳೆದವರು.

ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು, ಸರ್ವರೂ ಭಾವೈಕ್ಯತೆಯಿಂದ ಬಾಳಬೇಕೆಂದು ಅಪಾರ ಕಳಕಳಿ ಹೊಂದಿರುವ ಮುಕ್ತಾರ್,  ಕಳೆದ ಏಳು ವರ್ಷಗಳಿಂದ ಜಿಲ್ಲಾ ವಕೀಲರ ಸಂಘದ ಕಛೇರಿಯಲ್ಲಿ ಐದು ದಿನಗಳ ಕಾಲ ವಿಜೃಂಭಣೆಯಿಂದ, ಅಷ್ಟೇ ಶ್ರದ್ಧಾ-ಭಕ್ತಿಯಿಂದ, ಸಂಪ್ರದಾಯವನ್ನು ಚಾಚೂ ತಪ್ಪದೇ ಗಣೇಶೋತ್ಸವ ಆಚರಣೆ ಮಾಡುತ್ತ ಬಂದಿದ್ದಾರೆ.

ಈಗ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಸಂಘದ ಸಾರಥ್ಯ ವಹಿಸಿದ ನಂತರ ಗಣೇಶ ಚತುರ್ಥಿಯ ದಿನ ಜಿಲ್ಲಾ ವಕೀಲರ ಸಂಘದ ಕಛೇರಿಯಲ್ಲಿ, ತಮ್ಮ ಸಹ ಉದ್ಯೋಗಿಗಳ ನೆರವಿನಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಪೂಜೆ-ಪುನಸ್ಕಾರದ ನೇತೃತ್ವ ವಹಿಸಿ, ಐದು ದಿನಗಳ ಕಾಲ ಗಣೇಶ್ ಹಬ್ಬ ಆಚರಿಸುತ್ತಾರೆ.  ಐದನೇ ದಿನಕ್ಕೆ ಗಣೇಶ ಮೂರ್ತಿಯನ್ನು ಅತಿ ಸಂಭ್ರಮದಿಂದ ವಿಸರ್ಜಿಸಲಾಗುತ್ತದೆ.

ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ವಿರಳವೆನಿಸುವ ಇಂಥ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆ, ಉದ್ದೇಶಗಳನ್ನು ಅವರ ಮಾತುಗಳಲ್ಲಿಯೇ ಕೇಳಿದರೆ ಚೆನ್ನ. ಅಲ್ಲವಾ?

“ಸಧ್ಯದ ಪರಿಸ್ಥಿತಿಯಲ್ಲಿ ಕೋಮುಸೌಹಾರ್ದವನ್ನು ಕೆಡಿಸುವ ಕಾರ್ಯಗಳೇ ಹೆಚ್ಚಾಗಿ ನಡೆಯುತ್ತಿವೆ. ಗಣೇಶೋತ್ಸವ ಕಾರ್ಯಕ್ರಮ ಎಲ್ಲ ಸಮುದಾಯದವರೂ ಸೇರಿ ಒಗ್ಗಟ್ಟಾಗಿ ಆಚರಿಸಬೇಕೆಂಬ ಉದ್ದೇಶದಿಂದಲೇ ಬಾಲಗಂಗಾಧರನಾಥ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದ್ದು. ಸಮುದಾಯದಲ್ಲಿ ಭಾವೈಕ್ಯತೆ ಬೆಳೆಯಬೇಕೇ ಹೊರತು, ನಮ್ಮನಮ್ಮಲ್ಲಿಯೇ ವೈಮನಸ್ಸು ಬೆಳೆಯಬಾರದು.

ನಮ್ಮಲ್ಲಿ ಅಂಥ ಉದ್ದೇಶವೇ ಇಲ್ಲದಂತೆ ನಮ್ಮ ಧರ್ಮದ ಸಂಪ್ರದಾಯಗಳನ್ನು ಆಚರಿಸುತ್ತೇವೆ, ಬೇರೆ ಧರ್ಮದ ಆಚರಣೆಗಳಿಗೂ ಗೌರವ ಕೊಟ್ಟು, ಆಚರಣೆ ಮಾಡುತ್ತಿದ್ದೇವೆ. ಒಬ್ಬ ನ್ಯಾಯವಾದಿಯಾಗಿ, ಸಾರ್ವಜನಿಕರೂ ಇಂಥ ಆಚರಣೆಗೆ ಮುಂದಾಗಿ, ಸಮಾಜದಲ್ಲಿ ಸದ್ಭಾವನೆ ಮೂಡಬೇಕೆಂಬ ಉದ್ದೇಶದಿಂದಲೇ ಕಳೆದೆ ಏಳು ವರ್ಷಗಳಿಂದ ಈ ಆಚರಣೆಯನ್ನು ನಡೆಸಿಕೊಂಡು ಬಂದಿದ್ದೇವೆ.” ಎನ್ನುತ್ತಾರೆ ಮುಕ್ತಾರ ಅಹ್ಮದ್ ಎ. ಮೌಲ್ವಿ.

ಕೋಮು ಸೌಹಾರ್ದತೆಗೆ ಹೆಸರಾಗಿರುವ ಗದಗ ಜಿಲ್ಲೆಯವರೇ ಆಗಿರುವದರಿಂದ ಇದೊಂದು ವಿಶೇಷ ಎಂಬ ಭಾವನೆಯನ್ನೇ ಮುಕ್ತಾರ್ ಹೊಂದಿಲ್ಲ. ಒಟ್ಟಾರೆ, ಸಮುದಾಯದಲ್ಲಿರುವ ದ್ವೇಷದ ವಾತಾವರಣ ದೂರವಾಗಬೇಕು. ಕೆಲವರು ರಾಜಕೀಯ ಲಾಭದ ಉದ್ದೇಶದಿಂದ ಇಂಥ ಆಚರಣೆ ಮಾಡಲು ಹೊರಡುತ್ತಾರೆ. ಆದರೆ, ಅದು ಸಮಾಜಕ್ಕೆ ಯಾವುದೇ ಉತ್ತಮ ಸಂದೇಶವನ್ನು ನೀಡಲಾರವು.

ವಿದ್ಯಾವಂತರು, ಸಾಮಾಜಿಕ ಪ್ರಜ್ಞೆಯುಳ್ಳ ಪ್ರತಿಯೊಬ್ಬರೂ ಇಂಥ ಸೌಹಾರ್ದಯುತ ಆಚರಣೆಗಳನ್ನು ಪಾಲಿಸತೊಡಗಿದರೆ, ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷಗಳು ತಾನಾಗಿಯೇ ದೂರವಾಗಿ ಶಾಂತಿ ನೆಲೆಸುತ್ತದೆ ಎಂಬುದು ಮುಕ್ತಾರರ ಅಭಿಪ್ರಾಯವಾಗಿದೆ.

ಮುಕ್ತಾರರು ಜಾತ್ಯಾತೀತತೆಯ ಹಿನ್ನೆಲೆಯಲ್ಲಿ ಉತ್ತಮ ಕಾರ್ಯ ನಡೆಸುತ್ತಿದ್ದಾರೆ. ಸಾಮಾಜಿಕ ವಾತಾವರಣ ಹಾಳಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮುಕ್ತಾರರಂಥಹ ವಿದ್ಯಾವಂತರು, ಯುವಕರು ಇಂಥ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕಿದೆ. ಸಮಾಜದಲ್ಲಿ ಕೋಮುಸೌಹಾರ್ದತೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕಿದೆ. ಪ್ರತಿಯೊಂದು ಜಾತಿ-ಧರ್ಮದವರೂ ನಾವೆಲ್ಲ ಒಂದು ಎಂಬ ಭಾವನೆಯನ್ನು ಅರಿತು-ಬೆರೆತು ಬದುಕಿದಾಗಲೇ ಎಲ್ಲರ ಬದುಕೂ ಹಸನಾಗುತ್ತದೆ.

ಹನಮರಡ್ಡಿ ಗೂಳರಡ್ಡಿ(ಅಪ್ಪಣ್ಣ), ಹೈಕೋರ್ಟ್ ನ್ಯಾಯವಾದಿ, ಧಾರವಾಡ

ಖಾಕಿ ಪಡೆಯಿಂದ ಭರ್ಜರಿ ಬೇಟೆ; ನಾಡ ಪಿಸ್ತೂಲ್ ಮಾರಾಟ, ನಾಲ್ವರ ಬಂಧನ

ಕಿಂಗ್ ಪಿನ್ ಸೈಫನ್ ಪರಾರಿ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕಲಬುರಗಿಯ ಜಿಲ್ಲೆಯ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ. ಈ ಕಾರ್ಯಾಚರಣೆ ಮೂಲಕ ಮಧ್ಯಪ್ರದೇಶದಿಂದ ಅಕ್ರಮವಾಗಿ ನಾಡ ಪಿಸ್ತೂಲ್ ಗಳನ್ನು ತಂದು ಕಲಬುರಗಿಯಲ್ಲಿ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆಯ ವೇಳೆ ಹೊರಬಿದ್ದ ವಿಷಯಗಳು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ದಂಗುಬಡಿಸಿದೆ. ಅಲ್ಲಿಗೆ, ಉತ್ತರ ಕರ್ನಾಟಕದ ಅಕ್ರಮ ಪಿಸ್ತೂಲ್ ದಂಧೆಯ ಮೂಲಬೇರು ಮಧ್ಯಪ್ರದೇಶದಲ್ಲಿ ಹರಡಿಕೊಂಡಿರುವ ವಿಷಯ ಹೊರಬಿದ್ದದ್ದೂ ಅಷ್ಟೇ ರೋಚಕವಾಗಿದೆ.

ಘಟನೆಯ ವಿವರ

ಮಧ್ಯಪ್ರದೇಶದಲ್ಲಿ ಸಿದ್ಧವಾಗುತ್ತಿದ್ದ ನಾಡ ಪಿಸ್ತೂಲುಗಳನ್ನು 20 ಸಾವಿರ ರೂ.ಗಳಿಗೆ ಖರೀದಿಸಿ ಉತ್ತರ ಕರ್ನಾಟಕ ಭಾಗಗಳಲ್ಲಿ 80 ಸಾವಿರ ರೂ.ಗಳವರೆಗೂ ಮಾರಾಟ ಮಾಡುತ್ತಿದ್ದರು.

ಈ ಸಂಬಂಧ ಖಚಿತ ಮಾಹಿತಿಯ ಬೆನ್ನುಬಿದ್ದ ಕಲಬುರಗಿ ಪೊಲೀಸ್ ಅಧಿಕಾರಿಗಳು, ಕಲಬುರಗಿಯಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮತ್ತು ಅಕ್ರಮವಾಗಿ ಖರೀದಿ ಮಾಡಿದ ಮೂರು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ನಾಡ ಪಿಸ್ತೂಲ್, 18 ಜೀವಂತ ಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಕಲಬುರಗಿ ಪೋಲೀಸ್ ವರಿಷ್ಠಾಧಿಕಾರಿ ಇಷಾ ಪಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಅಫಜಲಪುರ ಮೂಲದ ನಾಲ್ವರು ಆರೋಪಿಗಳಾದ ಭೀಮಣ್ಣಾ, ಸಿದ್ದಪ್ಪ, ಸಲೀಂ ಹಾಗೂ ಪರಸಯ್ಯರನ್ನು ಬಂಧಿಸಲಾಗಿದ್ದು, ಮಧ್ಯವರ್ತಿ ಆರೋಪಿ ಸೈಫನ್ ಎಂಬ ವ್ಯಕ್ತಿ ತಲೆಮರೆಸಿಕೊಂಡಿದ್ದು, ಖಾಕಿ ಪಡೆ ಈತನ ಪತ್ತೆಗೆ ಬಲೆಬೀಸಿದೆ.

ಬಂಧಿತ ಆರೋಪಿ ಭೀಮಣ್ಣ ಮಧ್ಯಪ್ರದೇಶದಿಂದ ನಾಡ ಪಿಸ್ತೂಲ್ ಗಳನ್ನು 20 ಸಾವಿರಕ್ಕೆ ಖರೀದಿಸಿ, ಇಲ್ಲಿ 65 ರಿಂದ 80 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂಬ ವಿಷಯ ತಿಳಿದುಬಂದಿದೆ. ಬಂಧಿತ ಆರೋಪಿಗಳು ಒಬ್ಬರಿಗಿಂತ ಇನ್ನೊಬ್ಬರು ಭಯಂಕರ ಕ್ರಿಮಿನಲ್ ಗಳಾಗಿದ್ದು, ತಲೆಮರೆಸಿಕೊಂಡಿರುವ ಕಿಂಗ್ ಪಿನ್ ಸೈಫನ್ ಅಕ್ರಮ ಪಿಸ್ತೂಲ್ ದಂಧೆಯ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಇನ್ನೊಬ್ಬ ಬಂಧಿತ ಆರೋಪಿ ಸಲೀಂ ದುಡ್ಡು ಪಡೆದು, ಗುಪ್ತ ನಿಧಿ ಇರುವ ಜಾಗದ ಬಗ್ಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ನಿಧಿ ಇರುವ ಜಾಗದ ಬಗ್ಗೆ ತಪ್ಪಾಗಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಬಾರಿ ಜನರಿಂದ ಒದೆ ತಿಂದಿದ್ದ ಎಂದು ಹೇಳಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ನಾಡ ಪಿಸ್ತೂಲ್ ಖರೀದಿಸಿ ಸದಾ ಜೊತೆಗೇ ಇಟ್ಟುಕೊಳ್ಳುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನೊಬ್ಬ ಬಂಧಿತ ಆರೋಪಿ ಪರಸಯ್ಯ, ಆಸ್ತಿ ವಿಚಾರದಲ್ಲಿ ಸಾಕಷ್ಟು ಗಲಾಟೆ ಮಾಡಿಕೊಂಡಿದ್ದು, ಈ ವಿಷಯಕ್ಕಾಗಿ ಪಿಸ್ತೂಲ್ ಖರೀದಿ ಮಾಡಿದ್ದ ಎಂದು ಎಸ್ಪಿ ಹೇಳಿದರು. ಈ ದಂಧೆಯ ಹಿಂದಿರುವ ಮುಖ್ಯ ಕಿಂಗ್ ಪಿನ್ ಸೈಫನ್ ತಪ್ಪಿಸಿಕೊಂಡಿದ್ದು, ಈತನ ಪತ್ತೆಗಾಗಿ ಕಲಬುರಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.

ಕಾರು-ಬಸ್ ನಡುವೆ ಅಪಘಾತ; ನಿವೃತ್ತ ಶಿಕ್ಷಕ ಸೇರಿ ಇಬ್ಬರು ಸ್ಥಳದಲ್ಲಿಯೇ ಸಾವು, ಇಬ್ಬರು ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಸಾರಿಗೆ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಓರ್ವ ನಿವೃತ್ತ ಶಿಕ್ಷಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ದುರ್ಘಟನೆ ಜರುಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯಲ್ಲಿ ಕಾರಿನಲ್ಲಿದ್ದ ನವಲಗುಂದದ ಬಸವರಡ್ಡಿ ಹಾಗೂ ಹನಮಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರ ಬಾಗಲಕೋಟಯಿಂದ ವಾಪಾಸು ಬರುವಾಗ ಈ ದುರಂತ ಸಂಬಂಧಿಸಿದೆ. ನವೀನ ಹಾಗೂ ಮಂಜುನಾಥ್ ಎಂಬುವವರು ಗಾಯಗೊಂಡಿದ್ದಾರೆ. ಕಾರು ನಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಲಾಕ್ ಫಂಗಸ್‌ನಿಂದ ಕಣ್ಣು, ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ನೆಲೆ ಕಲ್ಪಿಸಿದ ತಹಸೀಲ್ದಾರ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಬಸ್ತಿಕೇರಿ ಓಣಿಯ ನಿವಾಸಿ ಬಸವರಾಜ ನಿಂಗಪ್ಪ ಮಡಿವಾಳರ ಎಂಬಾತ ಕೊರೋನಾದಿಂದ ಬದುಕಿದ್ದರೂ ದೃಷ್ಟಿದೋಷದಿಂದ ಸಂಕಷ್ಟ ಅನುಭವಿಸುತ್ತಿದ್ದರು. ಕುಟುಂಬ ನಿರ್ವಹಣೆಯೇ ಕಷ್ಟವಾದ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಮನೆಯೂ ಬಿದ್ದು ಕುಟುಂಬ ಬೀದಿಗೆ ಬಂದು ನಿಲ್ಲುವಂತಾಯಿತು.

ತಾಯಿ, ಪತ್ನಿ, ಇಬ್ಬರು ಮಕ್ಕಳಿರುವ ಬಡ ಕುಟುಂಬ ಬಸವರಾಜ ಮತ್ತು ಅವನ ತಾಯಿಗೆ ಕೊರೋನಾ ಸೋಂಕು ತಗುಲಿತ್ತು. ತಾಯಿ ದೇವರ ದಯದಿಂದ ಪಾರಾದರೆ, ಮನೆಗೆ ಆಧಾರ ಸ್ತಂಭವಾಗಿದ್ದ ಬಸವರಾಜ ಬ್ಲಾಕ್ ಫಂಗಸ್‌ನಿಂದ ದೃಷ್ಟಿ ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಮನೆಗೆ ಆಧಾರ ಸ್ತಂಭವಾಗಿದ್ದ ಬಸವರಾಜ ಮನೆಹಿಡಿದು ಕುಳಿತಾಗ ಆತನ ಹೆಂಡತಿಯೇ ಕೂಲಿ ಮಾಡಿ ಕುಟುಂಬ ಸಾಗಿಸುತ್ತಿದ್ದಾಳೆ.

ಇದೀಗ ಇದ್ದ ಒಂದು ಮನೆಯೂ ಮಳೆಗೆ ಆಹುತಿಯಾಗಿದ್ದು, ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬಂದಿತ್ತು. ಕಣ್ಣು ಕಾಣದ ಗಂಡ, ಎರಡು ಪುಟ್ಟ ಮಕ್ಕಳು, ವಯಸ್ಸಾದ ಅಜ್ಜಿ ಬಿದ್ದ ಮನೆ ಸಂಕಷ್ಟಗಳ ಸರಮಾಲೆಯಲ್ಲಿ ಬಸವರಾಜ ಪತ್ನಿ ನಿರ್ಮಲಾ ಜೀವನ ಸಾಗಿಸುತ್ತಿದ್ದಾರೆ.

ದುಡಿದು ಜೀವನ ಸಾಗಿಸುತ್ತಿದ್ದ ಬಸವರಾಜನ ಕುಟುಂಬಕ್ಕೆ ಸರ್ಕಾರ ಆಸರೆಯಾಗಿ ಕೂಡಲೇ ನಿವೇಶನ, ಮಾಶಾಸನ ನೀಡಬೇಕು ಎಂದು ಪಟ್ಟಣದ ಶಂಕರ ಬ್ಯಾಡಗಿ, ಗುರುಪುತ್ರ ಮೇಡ್ಲೇರಿ ಅವರು ತಹಸೀಲ್ದಾರರಿಗೆ ಮಾಹಿತಿ ನೀಡಿದರು.

ಸುದ್ದಿ ತಿಳಿಯುತ್ತಿದ್ದಂತೆ ನೊಂದ ಕುಟುಂಬದ ನೆರವಿಗೆ ತಹಸೀಲ್ದಾರ ಪರಶುರಾಮ ಸತ್ತಿಗೇರಿ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ತಾತ್ಕಾಲಿಕವಾಗಿ ಪುರಸಭೆ ಕ್ವಾಟರ್ಸ್ ನಲ್ಲಿ ಆಶ್ರಯ ವ್ಯವಸ್ಥೆ, ಆಹಾರದ ಕಿಟ್ ನೀಡಿ ಮಾನವೀಯ ಕಾರ್ಯ ಮಾಡಿದರು. ಒಂದೇ ಗಂಟೆಯಲ್ಲಿ ಆತನಿಗೆ ವಿಕಲಚೇತನ ಮಾಶಾಸನ ದೊರಕುವಂತೆ ಮಾಡುವ ಮೂಲಕ ತಹಸೀಲ್ದಾರ ಅವರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕೊರೋನಾ ಜೀವನ ಹಾಳು ಮಾಡಿದರೆ ಮಳೆ ಬದುಕನ್ನೇ ಕಸಿದುಕೊಂಡಿದೆ. ಇದ್ದ ಒಂದು ಮನೆಯು ಮಳೆಯಿಂದ ಬಿದ್ದಿದ್ದು ನಮ್ಮ ಬದುಕು ಈಗ ಬೀದಿಗೆ ಬಂದಿದೆ. ಚಿಕ್ಕ ಮಕ್ಕಳನ್ನು, ತಾಯಿಯನ್ನು ಪತ್ನಿಯೇ ಕೂಲಿ ನಾಲಿ ಮಾಡಿ ಸಲುಹುವಂತಾಗಿದೆ. ಸರಕಾರ ನಮಗೆ ಸಹಾಯ ಮಾಡಲಿ, ಮಾಶಾಸನ, ಆಶ್ರಯ ನಿವೇಶನ ಕಲ್ಪಿಸಬೇಕು.

-ಬಸವರಾಜ್ ನಿಂಗಪ್ಪ ಮಡಿವಾಳರ, ನೊಂದ ವ್ಯಕ್ತಿ.

ಕೇಸರಿ ಟೋಪಿ, ಹಣೆಗೆ ತಿಲಕ; ಮಾದರಿಯಾದ ಇನ್ಸ್‌ಪೆಕ್ಟರ್ ಕಾಲಿಮಿರ್ಚಿ

ಭಾವೈಕ್ಯತೆಗೆ ಸಾಕ್ಷಿಯಾದ ಗೋಕುಲ ಪೊಲೀಸ್ ಠಾಣೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಅಲ್ಲಿ ಈ ಸಲದ ಗಣೇಶೋತ್ಸವ ವಿಭಿನ್ನವಾಗಿತ್ತು. ಒಂದೆಡೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಾಕಷ್ಟು ವಿರೋಧಗಳು, ಗೊಂದಲಗಳು, ತಲೆಬಿಸಿಗಳು ಸೃಷ್ಟಿಯಾಗಿ ತುಸು ಬಿಸಿಯ ವಾತಾವರಣವೇ ಕಂಡುಬರುತ್ತಿದ್ದರೆ, ಇಂಥ ವಾತಾವರಣವನ್ನು ನಿಯಂತ್ರಿಸಬೇಕಾದ ಪೊಲೀಸ್ ಸಿಬ್ಬಂದಿ ಹೈರಾಣಾಗಿದ್ದಂತೂ ಸುಳ್ಳಲ್ಲ. ಆದರೆ, ಅದೇ ಹುಬ್ಬಳ್ಳಿಯ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಮಾತ್ರ ಅಖಂಡ ಭಾರತದ ಕನಸು ನನಸಾದಂತೆ ಭಾಸವಾಗಿತ್ತು.

ಜಾತಿ-ಧರ್ಮಗಳ ನಡುವಿನ ಭಿನ್ನತೆಯನ್ನು ಬಗ್ಗಿಸಿ ಏಕತೆಯನ್ನು ಸಾರುವಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳೂ ಕೈಜೋಡಿಸಿ ಮಾದರಿಯಾದರು. ನಮ್ಮದೆಲ್ಲವೂ ಒಂದೇ ಕುಲವೆಂದು ಸಮಾಜಕ್ಕೊಂದು ಉತ್ತಮ ಸಂದೇಶವನ್ನೂ ನೀಡಿದರು.

ಇಡೀ ಠಾಣೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ತಳಿರು-ತೋರಣಗಳಿಂದ ಸಿಂಗರಿಸಲ್ಪಟ್ಟ ಪೊಲೀಸ್ ಠಾಣೆ ತನ್ನ ಅಸಲೀ ರೂಪವನ್ನೇ ಮರೆಮಾಚಿಕೊಂಡಿತ್ತು. ಅಚ್ಚಬಿಳಿಯ ಪಂಚೆ-ಅಂಗಿ, ಶಲ್ಯ ಧರಿಸಿದ ಠಾಣೆಯ ಸಿಬ್ಬಂದಿಗಳು ಅತ್ತಿಂದಿತ್ತ ಓಡಾಡುತ್ತ ಹಬ್ಬದ ತಯಾರಿಯಲ್ಲಿ ತೊಡಗಿದ್ದ ದೃಶ್ಯ ಒಂದೆಡೆಯಾದರೆ, ಠಾಣೆಯ ಇನ್ಸ್‌ಪೆಕ್ಟರ್ ಜಾಕೀರ್ ಪಾಷಾ ಕಾಲಿಮಿರ್ಚಿ ಸ್ವತಃ ವಿಘ್ನವಿನಾಶಕ ಗಣಪತಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಹೊತ್ತುತಂದರು. ತಲೆಯ ಮೇಲೆ ಕೇಸರಿ ಟೋಪಿ, ಎಲ್ಲರ ಹಣೆಯಲ್ಲಿ ಕೇಸರಿ ತಿಲಕ, ಎಲ್ಲರ ಬಾಯಲ್ಲೂ ಭಕ್ತಿ ಶ್ಲೋಕ-ಭಜನೆಗಳು. ಇಲ್ಲಿ ಯಾರದ್ದು ಯಾವ ಜಾತಿ, ಯಾವ ಕುಲ?!

ಪ್ರತಿಷ್ಠಾಪನೆಯೂ ವಿದ್ಯುಕ್ತವಾಗಿ ನೆರವೇರಿತು. ಸಿಬ್ಬಂದಿಗಳೆಲ್ಲರೂ ಸೇರಿ ಭಜನೆ ಪದಗಳನ್ನು ಹಾಡಿ ಏಕತೆಯ ಸಂದೇಶ ಸಾರಿದರು. ಜಾತಿ-ಧರ್ಮಗಳ ಸಂಕೋಲೆಗಿಂತ ಭಾವೈಕ್ಯತೆಯ ಒಗ್ಗಟ್ಟೇ ಮುಖ್ಯ ಎಂಬುದನ್ನು ಸ್ವತಃ ಬಿಂಬಿಸಿ ಮಾದರಿಯಾದರು. ಪ್ರಸಾದ ಹಂಚಿ ಪುನೀತರಾದರು, ಒಟ್ಟಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಹೇಳದೇ ಮಾಡುವನು ರೂಢಿಯೊಳಗುತ್ತಮನು ಎಂಬಂತೆ, ಹೇಳಿ ತಿದ್ದುವದಕ್ಕಿಂತ ಮಾಡಿ ಮಾದರಿಯಾಗುವದೇ ಲೇಸು ಎಂಬ ಸಂದೇಶವನ್ನೂ ಸಮಾಜಕ್ಕೆ ತಿಳಿಸಿದ್ದು ಮಾದರೀ ಕಾರ್ಯವೆಂಬ ಮೆಚ್ಚುಗೆಗೂ ಪಾತ್ರವಾದರು. ಈ ವಿಭಿನ್ನ ಕಾರ್ಯಕ್ಕೆ ಧ್ವನಿಯಾದವರು ಠಾಣೆಯ ಇನ್ಸ್‌ಪೆಕ್ಟರ್ ಜಾಕೀರ್ ಪಾಷಾ ಕಾಲಿಮಿರ್ಚಿ ಎಂಬುದನ್ನು ಬೇರೆ ಹೇಳಬೇಕಿಲ್ಲ ತಾನೆ?!

ಒಟ್ಟಿನಲ್ಲಿ, ಹುಬ್ಬಳ್ಳಿಯ ಗೋಕುಲ್ ರಸ್ತೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿಭಿನ್ನವಾಗಿ ಗಣೇಶೋತ್ಸವ ಆಚರಿಸಿ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ್ದು ಮಾದರಿ ಕಾರ್ಯ ಎಂಬ ಮೆಚ್ಚುಗೆ ಎಲ್ಲೆಡೆ ವ್ಯಕ್ತವಾಗಿದೆ.

ಹಬ್ಬಗಳ ಸಾಲಿನಲ್ಲಿ ಗಣೇಶೋತ್ಸವ ಮೊದಲನೆಯ ಹಾಗೂ ಅದ್ಧೂರಿಯಾಗಿ ನಾಡಿನಾದ್ಯಂತ ಆಚರಿಸಲ್ಪಡುವ ಹಬ್ಬ. ಭಾರತದ ಭವ್ಯ ಪರಂಪರೆಯಲ್ಲಿ ಗಣೇಶೋತ್ಸವಕ್ಕೆ ಅಗ್ರಸ್ಥಾನವಿದೆ. ಭಾಷೆ, ಜಾತಿ, ಧರ್ಮಗಳಲ್ಲಿ ವಿವಿಧತೆಯನ್ನು ಹೊಂದಿದ್ದರೂ ಬಹುತೇಕ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ಈ ಹಬ್ಬವನ್ನು ಆಚರಿಸುತ್ತ ಬರಲಾಗಿದೆ. ಗೋಕುಲ ಪೊಲೀಸ್ ಸ್ಟೇಷನ್ನಲ್ಲಿ ಇದು ನನ್ನ ಎರಡನೆಯ ಗಣೇಶೋತ್ಸವ. ಇಲ್ಲಿ ಎಲ್ಲರದ್ದೂ ಒಂದೇ ಜಾತಿ. ಅದು ಖಾಕಿ ಜಾತಿ. ಯಾವುದೇ ಜಾತಿ-ಧರ್ಮದಿಂದ ಬಂದಿದ್ದರೂ ನಾವೆಲ್ಲ ಭಾರತೀಯರು. ಎಲ್ಲ ಕೆಲಸ ಕಾರ್ಯಗಳ ನಡುವೆಯೂ ಎಲ್ಲ ಸಿಬ್ಬಂದಿಗಳು ಸೇರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಸತ್ಯನಾರಾಯಣ ಪೂಜೆಯನ್ನೂ ನೆರವೇರಿಸಿದ್ದೇವೆ. ವರ್ಷದ ಎಲ್ಲಾ ದಿನವೂ ಕೆಲಸಗಳೇನು ಕಡಿಮೆಯಿಲ್ಲ. ಆದರೆ, ಸರ್ವರಿಗೂ ಒಳಿತಾಗಲಿ ಎಂಬ ಉದ್ದೇಶದಿಂದ ಎಲ್ಲರೂ ಕೂಡಿ ಹಬ್ಬ ಆಚರಿಸಿ ನಮ್ಮ ಕಾರ್ಯದಲ್ಲಿ ತೊಡಗುತ್ತಿದ್ದೇವೆ.

-ಜಾಕೀರ್ ಪಾಷಾ ಕಾಲಿಮಿರ್ಚಿ. ಇನ್ಸ್‌ಪೆಕ್ಟರ್, ಗೋಕುಲ ರೋಡ್ ಪೊಲೀಸ್ ಠಾಣೆ

ಗದಗ ಜಿಲ್ಲೆಯಲ್ಲಿ ಭಾರೀ ಮಳೆ; ಸಿಡಿಲು ಬಡಿದು ಓರ್ವ ಸಾವು,‌ ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್, ಸವಾರ ಬಚಾವ್

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಸಿಡಲಿಗೆ ಓರ್ವ ಸಾವನ್ನಪ್ಪಿದ್ದು, ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ನರಗುಂದ ಸಮೀಪದ ಇಂಜನಿಯರಿಂಗ್ ಕಾಲೇಜು ಬಳಿಯ ಮರದ ಕೆಳಗೆ ನಾಲ್ವರು ಆಶ್ರಯ ಪಡೆದಿದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು ಅಶೋಕ ಎಂಬವರು ಮೃತಪಟ್ಟಿದ್ದಾರೆ. ಮಗು ಸಮೇತ ಮಹಿಳೆ ಹಾಗೂ ಇನ್ನೊಬ್ಬ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಸಂಜೆ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಮಹಿಳೆ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಳು.

ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಸರಕಾರಿ ಶಾಲೆ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ.

1ರಿಂದ 7ನೇ ತರಗತಿಗಳ ಕೊಠಡಿಗಳಿಗೆ ನೀರು ನುಗ್ಗಿದ್ದರಿಂದ ಮಕ್ಕಳು ಪರದಾಡಿದರು. ಅಡುಗೆ ಕೊಠಡಿಯಲ್ಲಿ ಇದ್ದ ಬಿಸಿಯೂಟ ಸಾಮಾಗ್ರಿಗಳು ನೀರಲ್ಲಿ ನಿಂತಿವೆ. ಸರಿಯಾಗಿ ನೀರು ಹರಿದು ಹೋಗಲು ಚರಂಡಿ ಇಲ್ಲದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಯಾವಗಲ್ ಗ್ರಾಮದ ಬಳಿಯ ಬಡಗಿ ಹಳ್ಳ ಉಕ್ಕಿ ಹರಿಯುತ್ತದೆ. ಬೈಕ್ ಸವಾರನೊಬ್ಬ ಉಕ್ಕಿ ಹರಿಯುತ್ತಿರುವ ಹಳ್ಳ ದಾಟಲು ಮುಂದಾಗಿದ್ದ ವೇಳೆ ಬೈಕ್ ಕೊಚ್ಚಿ ಹೋಗಿದ್ದು, ಸವಾರ ಬಚಾವ್ ಆಗಿದ್ದಾನೆ. ರೈತ ಕುಮಾರ್ ಎಂಬಾತ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ವಾಪಾಸು ಬರುವಾಗ ಈ ಘಟನೆ ಜರುಗಿದೆ.

ಕೊಚ್ಚಿಕೊಂಡು ಹೋಗಿದ್ದ ಬೈಕ್ ಅನ್ನು ಗ್ರಾಮಸ್ಥರು ಪತ್ತೆ ಹಚ್ಚಿ ದಡಕ್ಕೆ ಸೇರಿಸಿದ್ದಾರೆ.

ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು, 1.10 ಲಕ್ಷ ರೂ. ದಂಡ

0

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆಯನ್ನು ಪ್ರೀತಿಸುವದಾಗಿ ಹೇಳಿ ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪಿತನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಆರೋಪಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಯಲ್ಲಪ್ಪ ಶಿವಪ್ಪ ಹಾಲಿಯವರ ಎಂಬಾತ ಅಪ್ರಾಪ್ತೆಯನ್ನು ಪ್ರೀತಿಸುವದಾಗಿ ಹೇಳಿ ಅವಳನ್ನು ಖಾಸಗಿ ವಾಹನದಲ್ಲಿ ಅಪಹರಿಸಿಕೊಂಡು ಶಿರೋಳ ಗ್ರಾಮಕ್ಕೆ ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿ ಇರಿಸಿಕೊಂಡು ಅಪ್ರಾಪ್ತೆಯೆಂದು ತಿಳಿದಿದ್ದರೂ ಅತ್ಯಾಚಾರ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರೋಣ ಪೊಲೀಸ್ ಠಾಣೆಯಲ್ಲಿ ಕಲಂ 363, 366, 376(2)(ಐ) ಐಪಿಸಿ ಕಲಂ4 ಮತ್ತು 6, ಪೋಕ್ಸೋ ಕಾಯ್ದೆ 2012ರ ಪ್ರಕಾರ ಪ್ರಕರಣ ದಾಖಲಾಗಿತ್ತು.

ಪ್ರಸ್ತುತ ಪ್ರಕರಣದಲ್ಲಿ ಸಿಪಿಐ ಕೆ.ಸಿ. ಪ್ರಕಾಶ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 22.9.2018ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧವು ಸಾಬೀತಾಗಿದ್ದರಿಂದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1,10,000ರೂ. ಗಳನ್ನು ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.

ಆರ್ ಟಿ ಓ ಏಜೆಂಟ್ ನ ಕೊಲೆ ಪ್ರಕರಣ ಭೇದಿಸಿದ ಮುಂಡರಗಿ ಪೊಲೀಸರು; ಆರೋಪಿ ಅಂದರ್

ವಿಜಯಸಾಕ್ಷಿ ಸುದ್ದಿ, ಗದಗ

ಆರ್ ಟಿ ಓ ಏಜೆಂಟನ ಕೊಲೆಗೈದ ಆರೋಪಿಯನ್ನು ಮುಂಡರಗಿ ಪೊಲೀಸರು ಬಂಧಿಸಿದ್ದಾರೆ. ಮುಂಡರಗಿ ತಾಲೂಕಿನ ಡ.ಸ ರಾಮೇನಹಳ್ಳಿ ಗ್ರಾಮದ ಮುತ್ತಪ್ಪ ಹನಮಪ್ಪ ಬೆಟಗೇರಿ (30) ಎಂಬಾತನೇ ಬಂಧಿತ ಆರೋಪಿ.

ಈ ಕುರಿತು ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಈ ಮಾಹಿತಿ ನೀಡಿದ್ದಾರೆ.

ಕಳೆದ ಆಗಸ್ಟ್ 24ರಂದು ಸಂಜೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರು‌- ಡ.ಸ ರಾಮೇನಹಳ್ಳಿ ಗ್ರಾಮದ ರಸ್ತೆಯಲ್ಲಿ ಗದಗನ ಗಂಗಿಮಡಿ ನಿವಾಸಿ ಆರ್ ಟಿ ಓ ಏಜೆಂಟ್ 35 ವಯಸ್ಸಿನ ಮಾರುತಿ ರಾಮಣ್ಣ ಅಂಕಲಗಿ ಎಂಬಾತನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ತಂದೆ ರಾಮಣ್ಣ ಎಂಬುವವರು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೊಲೆ ಪ್ರಕರಣ ಭೇದಿಸಲು ಎಸ್ಪಿ ಶಿವಪ್ರಕಾಶ್ ದೇವರಾಜು, ನರಗುಂದ ವಿಭಾಗದ ಡಿವೈಎಸ್ಪಿ ವಾಯ್ ಎಸ್ ಏಗನಗೌಡರ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಇನ್ಸ್‌ಪೆಕ್ಟರ್ ವೀರಣ್ಣ ಹಳ್ಳಿ ನೇತೃತ್ವದಲ್ಲಿ
ಸಿಬ್ಬಂದಿಗಳಾದ ಮಹೇಶ್ ಹೂಗಾರ, ಜೆ. ಐ ‌ಬಚ್ಚೇರಿ, ಮಹೇಶ್ ಗೊಳಗೊಳಕಿ, ಶರಣು ನಾಗೇಂದ್ರಗಡ ಹಾಗೂ ಮಂಜು ಮಾದರ ಅವರ ತಂಡವನ್ನು ‌ರಚಿಸಲಾಗಿತ್ತು.

ಕೊಲೆಗೆ ಹಣಕಾಸಿನ ‌ವ್ಯವಹಾರವೇ ಕಾರಣ ಎನ್ನಲಾಗಿದ್ದು, ಮೃತ ಮಾರುತಿ, ಆರೋಪಿ ಮುತ್ತುಗೆ 1.60 ಲಕ್ಷ ರೂ.ಹಣ ಕೊಡಬೇಕಿತ್ತು. ಪದೇ ಪದೇ ಕೇಳಿದರೂ ಮೃತ ಮಾರುತಿ ಹಣ ಕೊಟ್ಟಿರಲಿಲ್ಲ ಎಂದು ಎಸ್ಪಿ ಹೇಳಿದರು.

ಕೊಲೆಯ ನಡೆದ ದಿನ ಮೃತ ಮಾರುತಿ ಕಪ್ಪತಗುಡ್ಡ ನೋಡಲು ಹೋಗುವ ಪ್ಲಾನ್ ಇತ್ತು ಎಂದು ತಿಳಿದು ಬಂದಿದೆ. ಆದರೆ ಮುತ್ತು, ಮಾರುತಿಯನ್ನು ತನ್ನ ಜಮೀನಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರೂ ಮದ್ಯ ಸೇವಿಸಿದ್ದಾರೆ ಎಂದು ಹೇಳಿದರು. ಆನಂತರ ನಡೆದ ಬಾಯಿ‌ ಮಾತಿನ ಜಗಳ ಮಾರುತಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದರು.

ಕೊಲೆ ಆರೋಪಿಯನ್ನು ಬಂಧಿಸಿದ ತಂಡದ ಕಾರ್ಯಾಚರಣೆಗೆ ಎಸ್ಪಿ ಶಿವಪ್ರಕಾಶ್ ದೇವರಾಜು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ; ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ವೃದ್ಧೆ ರಕ್ಷಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು. ಬುಧವಾರ ಸಂಜೆ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಜಮೀನಿಗೆ ಹೋಗಿ ಮನೆಗೆ ವಾಪಾಸು ಬರುವಾಗ ನೀರಿನಲ್ಲಿ ಸಿಲುಕಿದ್ದ ವೃದ್ಧೆಯನ್ನು ಗ್ರಾಮದ ಯಂಕಪ್ಪ ಹಾಗೂ ಶರಣಪ್ಪ ರಕ್ಷಣೆ ಮಾಡಿ ದಡಕ್ಕೆ ಸೇರಿಸಿದ್ದಾರೆ.

ಮುಂಜಾನೆಯಿಂದಲೂ ಜಿಲ್ಲೆಯ ನರಗುಂದ ತಾಲೂಕಿನ ಕುರ್ಲಗೇರಿ ಹಾಗೂ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತದೆ. ಕುರ್ಲಗೇರಿ ಹಾಗೂ ಯಾವಗಲ್ ಗ್ರಾಮದ ಬಳಿ ಇರುವ ಸೇತುವೆಗಳು ಜಲಾವೃತವಾಗಿದ್ದು, ನರಗುಂದ ಹಾಗೂ ರೋಣ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ‌ಕಡಿತವಾಗಿದೆ.

ಪ್ರವಾಹದಿಂದ ರೈತರು ಬೆಳೆದ ಬೆಳೆಗಳು ನೀರುಪಾಲಾಗಿದ್ದು, ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಿ, ಈರುಳ್ಳಿ ಹಾಗೂ ಗೋವಿನಜೋಳ ಬೆಳೆಗಳಲ್ಲಿ ನೀರು ನಿಂತು ಹಾನಿಯಾಗಿದೆ.

error: Content is protected !!