ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ನರೇಗಲ್ಲ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ಶನಿವಾರ ಉರುಳು ಸೇವೆ ಸಲ್ಲಿಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಘಟನೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಪಟ್ಟಣದ ಸಂತೆ ಬಜಾರದಲ್ಲಿರುವ ಆಂಜನೇಯ ದೇವಸ್ಥಾನದಿಂದ ಗ್ರಾಮದೇವಿ ದೇವಸ್ಥಾನದವರೆಗೆ ಕಾರ್ಯಕರ್ತರು ಉರುಳು ಸೇವೆ ಸಲ್ಲಿಸಿ, “ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲಿ” ಎಂದು ಸಂಕಲ್ಪ ಮಾಡಿದರು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ಹೊತ್ತು ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, “ಜಿ.ಎಸ್. ಪಾಟೀಲರು ಜಿಲ್ಲೆಯ ಹಿರಿಯ ಶಾಸಕರಾಗಿ ಎಲ್ಲರನ್ನು ಸಮಾನವಾಗಿ ಕರೆದುಕೊಂಡು ಹೋಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣ ಮಾಡಿದ್ದಾರೆ. ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇಂದಿರಾ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದ ಅವರ ಹಿರಿತನ ಹಾಗೂ ಪಕ್ಷಕ್ಕಾಗಿ ದುಡಿದ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ” ಎಂದು ಎಚ್ಚರಿಸಿದರು.
ಯುವ ಮುಖಂಡರಾದ ಸದ್ದಾಂ ನಶೇಖಾನ ಹಾಗೂ ಗುಡದಪ್ಪ ಗೋಡಿ ಮಾತನಾಡಿ, “ನೆಲ-ಜಲ ಅಭಿವೃದ್ಧಿಗಾಗಿ ಸಾವಿರಾರು ಕೆರೆಗಳನ್ನು ನಿರ್ಮಿಸಿ ‘ಸಾವಿರ ಕೆರೆಗಳ ಸರದಾರ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೈತರ ಭೂಮಿ ಉಳಿಸಿ, ಯುವಕರಿಗೆ ಉದ್ಯೋಗ ಕಲ್ಪಿಸಿ, ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಬದುಕಿನ ದಾರಿ ತೋರಿದ ನಾಯಕರಿಗೆ ಸಚಿವ ಸ್ಥಾನ ನೀಡದೇ ಇರುವುದು ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲಿ ಎಂಬ ಉದ್ದೇಶದಿಂದ ನಮ್ಮೂರಿನ ದೇವರಿಗೆ ಹರಕೆ ಹೊತ್ತು ಉರುಳು ಸೇವೆ ಸಲ್ಲಿಸಿದ್ದೇವೆ. ಈಗಲಾದರೂ ಹೈಕಮಾಂಡ್ ಸರಿಯಾದ ನಿರ್ಧಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿಂಗನಗೌಡ ಲಕ್ಕನಗೌಡ್ರ, ವೀರನಗೌಡ ಪಾಟೀಲ, ಅಲ್ಲಾಬಕ್ಷಿ ನದಾಫ್, ಸಂತೋಷ ಹನಮಸಾಗರ, ಕಳಕಪ್ಪ ಅಬ್ಬಿಗೇರಿ, ಶೇಖಪ್ಪ ಜುಟ್ಲದ, ಅಂದಾನಗೌಡ ಪಾಟೀಲ, ಕಳನಗೌಡ ಪೊಲೀಸ್ ಪಾಟೀಲ, ಕುಮಾರಸ್ವಾಮಿ ಕೋರಧಾನ್ಯಮಠ, ಶೇಖಪ್ಪ ಕೆಂಗಾರ, ಎ.ಎ. ನವಲಗುಂದ, ಸೋಮನಗೌಡ ಲಕ್ಕನಗೌಡ್ರ, ಬಾಳಪ್ಪ ಸೋಮಗೊಂಡ, ಫಕ್ರುಸಾಬ್ ರೇವಡಿಗಾರ, ಮಹ್ಮದಗೌಸ ಹೊಸಮನಿ, ಮಾಸಪ್ಪ ಕೊಂಡಿ, ವೀರಪ್ಪ ಹಾಲನ್ನವರ, ಆಶೀಫ್ ಹೊಸಮನಿ, ಸುರೇಶ ಹುನಗುಂದ, ದಾದಾಸಾಬ ನದಾಫ್, ವೀರೇಶ ಪಮ್ಮಾರ, ಪ್ರಕಾಶ ಪಾದಗಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.
“ಸಾವಿರ ಕೆರೆಗಳ ಸರದಾರ, ಜನಪರ ನಾಯಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಇರುವುದು ಕ್ಷೇತ್ರದ ಜನರ ಭಾವನೆಗೆ ಧಕ್ಕೆ. ಈಗಲಾದರೂ ಹೈಕಮಾಂಡ್ ನ್ಯಾಯ ಕೊಡಬೇಕು.”
ಶರಣಪ್ಪ ಬೆಟಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
- ಜಿ.ಎಸ್.ಪಿ ಸಚಿವರಾದ್ರೆ 101 ತೆಂಗಿನಕಾಯಿ ಹರಕೆ
- ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲೆಂದು ಅಭಿಮಾನಿಗಳ ವಿಶೇಷ ಸಂಕಲ್ಪ
- ನರೇಗಲ್ಲ ಗ್ರಾಮದೇವಿ ದುರ್ಗಾದೇವಿಗೆ 101 ತೆಂಗಿನಕಾಯಿ ಒಡೆಯುವ ಹರಕೆ
- ಸಚಿವ ಸ್ಥಾನಕ್ಕಾಗಿ ಉರುಳು ಸೇವೆ, ಡೊಳ್ಳು ಮಜಲು ಮೂಲಕ ಪ್ರಾರ್ಥನೆ
- “ಈ ಬಾರಿ ಜಿ.ಎಸ್.ಪಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಕಾರ್ಯಕರ್ತರ ಆಗ್ರಹ



