ವಿಜಯಸಾಕ್ಷಿ ಸುದ್ದಿ, ನರೇಗಲ್: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್‌ಗೆ ಆಯ್ಕೆಯಾಗಿದ್ದು, ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.
ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಎ 6ನೇ ಸೆಮಿಸ್ಟರ್‌ನ ಕಳಕಾಪುರ ಗ್ರಾಮದ ಶಾರುಖ್ ಹಸನಸಾಬ್ ಗೌಡರ, ಬಿಎ 4ನೇ ಸೆಮಿಸ್ಟರ್‌ನ ಮಾರನಬಸರಿ ಗ್ರಾಮದ ಬಸವರಾಜ್ ಲಂಕೆಪ್ಪ ಕುರಿ, ಬಿಎ 4ನೇ ಸೆಮಿಸ್ಟರ್‌ನ ಜಕ್ಕಲಿ ಗ್ರಾಮದ ಶಬ್ಬೀರಸಾಬ್ ಅಲ್ಲಿಸಾಬ್ ಬಸಾಪುರ ಹಾಗೂ ಬಿಎಸ್‌ಸಿ 4ನೇ ಸೆಮಿಸ್ಟರ್‌ನ ಜಕ್ಕಲಿ ಗ್ರಾಮದ ಶಂಕರಪ್ಪ ಮಲ್ಲಪ್ಪ ಇಟಗಿ ಅವರು ಸೇನೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲೆ ಜಯಶ್ರೀ ಮುತಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗ್ನಿವೀರ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ, ಸಿಡಿಸಿ ಸದಸ್ಯರು ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.
ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ವಿವಿಧ ಕಂಪನಿಗಳಿಗೆ 79 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಇದೀಗ ನಾಲ್ವರು ವಿದ್ಯಾರ್ಥಿಗಳು ಸೇನೆಗೆ ಆಯ್ಕೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಪ್ರಸಕ್ತ ಸಾಲಿನ ಪ್ರಥಮ ವರ್ಷದ ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ವಿವಿಧ ಊರುಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಬಿಸಿಎ ವಿಭಾಗದ ಪ್ರವೇಶಾತಿ ಈಗಾಗಲೇ ಪೂರ್ಣಗೊಂಡಿದೆ. ಬಿಎ, ಬಿಕಾಂ ಹಾಗೂ ಬಿಎಸ್‌ಸಿ (ಸಿಎಸ್) ವಿಭಾಗಗಳಿಗೆ ಪ್ರವೇಶಾತಿ ಪ್ರಕ್ರಿಯೆ ಮುಂದುವರಿದಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.



