ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಭಾರಿ ದಂಡದ ಬರೆ, ಉತ್ಪಾದನಾ ವೆಚ್ಚದ ಏರಿಕೆ ಹಾಗೂ ಗಣಿಗಾರಿಕೆ ಕ್ಷೇತ್ರದ ಮೇಲಿನ ಕಠಿಣ ನಿಯಮಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ರಷರ್ ಉದ್ಯಮಿಗಳು ಜಲ್ಲಿ ಹಾಗೂ ಇತರೆ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳಕ್ಕೆ ತೀರ್ಮಾನಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗದಗ ಜಿಲ್ಲಾ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಆರ್.ಸಿ. ಕಾಮಾಜಿ, “ಪೆಟ್ರೋಲ್, ಡೀಸೆಲ್, ವಿದ್ಯುತ್, ಕಾರ್ಮಿಕರ ವೇತನ ಸೇರಿದಂತೆ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಇದರ ಜತೆಗೆ ಸರ್ಕಾರ ವಿಧಿಸುತ್ತಿರುವ ಕೋಟ್ಯಂತರ ರೂಪಾಯಿ ದಂಡ ಉದ್ಯಮದ ಬೆನ್ನೆಲುಬೇ ಮುರಿಯುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ದೇಶದ ಬೇರೆ ಯಾವುದೇ ರಾಜ್ಯದಲ್ಲಿಲ್ಲದಷ್ಟು ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಗಣಿಗಾರಿಕೆ ಉದ್ಯಮಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಡಿಟ್ ವರದಿಯನ್ನು ಕಡೆಗಣಿಸಿ ಕೆಎಸ್‌ಆರ್‌ಎಸ್‌ಎ ಮೂಲಕ ಡ್ರೋನ್ ಸರ್ವೇ ನಡೆಸಿರುವುದು ಅವೈಜ್ಞಾನಿಕ ಕ್ರಮ ಎಂದು ಟೀಕಿಸಿದರು.
“2005-06ರಿಂದ 2024ರವರೆಗಿನ ಸುಮಾರು 18 ವರ್ಷಗಳ ಹಳೆಯ ವರದಿಯನ್ನು ಆಧರಿಸಿ ಈಗಿನ ಮಾಲೀಕರಿಗೆ ‘ಒನ್ ಟೈಮ್ ಸೆಟ್ಲ್‌ಮೆಂಟ್’ ಹೆಸರಿನಲ್ಲಿ ದಂಡ ವಿಧಿಸುವುದು ಕಾನೂನುಬಾಹಿರ. ಈ ಅವಧಿಯಲ್ಲಿ ಮಾಲೀಕರು ಬದಲಾಗಿದ್ದರೂ ಹಳೆಯ ದಾಖಲೆ ಮುಂದಿಟ್ಟು ದಂಡ ಹಾಕಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಒಂದೇ ಕಚ್ಚಾ ವಸ್ತುವಿಗೆ ಎರಡು ಬಾರಿ ರಾಯಲ್ಟಿ ವಸೂಲಿ ಮಾಡುತ್ತಿದೆ. ಕ್ವಾರಿ ಮಾಲೀಕರಿಂದ ರಾಯಲ್ಟಿ ಪಡೆಯುವುದಲ್ಲದೆ, ಸರ್ಕಾರದ ಕಾಮಗಾರಿಗಳ ಗುತ್ತಿಗೆದಾರರಿಂದಲೂ ಮತ್ತೆ ರಾಯಲ್ಟಿ ವಸೂಲಿ ಮಾಡುತ್ತಿರುವುದು ಉದ್ಯಮದ ಮೇಲೆ ಹೆಚ್ಚುವರಿ ಹೊರೆ ತಂದಿದೆ ಎಂದು ದೂರಿದರು.
“ಉದ್ಯಮ ಉಳಿಸಿಕೊಳ್ಳಲು ಜಲ್ಲಿ ಹಾಗೂ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಿ. ಸುರೇಂದ್ರರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕ್ರಷರ್ ಮಾಲೀಕರು ಉಪಸ್ಥಿತರಿದ್ದರು.
“ಸರ್ಕಾರದ ಭಾರಿ ದಂಡ, ಡೀಸೆಲ್-ವಿದ್ಯುತ್ ದರ ಏರಿಕೆಯಿಂದ ಕ್ರಷರ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ನಷ್ಟ ತಡೆಯಲು ಜಲ್ಲಿ ದರ ಹೆಚ್ಚಳ ಅನಿವಾರ್ಯವಾಗಿದೆ.”
ಆರ್.ಸಿ. ಕಾಮಾಜಿ
ಅಧ್ಯಕ್ಷರು, ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘ



