ಬೆಂಗಳೂರು;- ರಾಜ್ಯ ಸರ್ಕಾರವು ಡಿಸೆಂಬರ್ 4ರಿಂದ ಡಿಸೆಂಬರ್ 15 ರವರೆಗೆ ಚಳಿಗಾಲ ಅಧಿವೇಶನ ನಡೆಸುವುದಾಗಿ ಹೇಳಿದೆ.ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಈ ಹಿಂದೆ ನವೆಂಬರ್ ಕೊನೇ ವಾರದಲ್ಲಿ ಅಧಿವೇಶನ ಆರಂಭಿಸಿ, ಬೆಂಗಳೂರಿನಲ್ಲಿ 10 ದಿನ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನ ಕಲಾಪ ನಡೆಸುವ ಬಗ್ಗೆ ಚಿಂತನೆ ನಡೆದಿತ್ತು ಎನ್ನಲಾಗಿತ್ತು. ಆದರೆ ನಿನ್ನೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸುವುದಾಗಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ.
ಆಧಾಯಕ್ಕಾಗಿ ಜಾಹೀರಾತಿಗೆ ಮಣೆಹಾಕಿದ ಪಾಲಿಕೆ : ಹೈಕೋರ್ಟ್ ಆದೇಶಕ್ಕೆ ಇಲ್ಲದ ಬೆಲೆ
ಬೆಂಗಳೂರು;- ನಗರದಲ್ಲಿ ಚಿಕ್ಕ ಪುಟ್ಟ ಕಾರ್ಯಕ್ರಮಗಳಿಂದ ಆರಂಭಿಸಿ, ಅಂಗಡಿಮುಂಗಟ್ಟುಗಳವರೆಗೆ ಎಲ್ಲದಕ್ಕೂ ಜಾಹೀರಾತು ಫಲಕ ಹಾಕೋದು ಕಾಮನ್. ಇದರಲ್ಲಿ ನೂರು ಅಧಿಕೃತವಾದರೇ, ಸಾವಿರ ಅನಧಿಕೃತ. ಆದರೆ ನಗರದಲ್ಲಿ ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಲು ಹಾಗೂ ಬಿಬಿಎಂಪಿ ಖಜಾನೆ ಭರ್ತಿ ಮಾಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಇದಕ್ಕಾಗಿ ಜಾಹೀರಾತು ಬೈಲಾಗೆ ತಿದ್ದುಪಡಿ ಮಾಡಲು ಬಿಬಿಎಂಪಿ ಸಿದ್ಧವಾಗಿದೆ. ನಗರದ ಸೌಂದರ್ಯ ಮತ್ತು ಪರಿಸರ ಹಾಳು ಮಾಡುತ್ತಿರುವ ಜಾಹೀರಾತು ಪ್ರದರ್ಶನವನ್ನು ಈ ಹಿಂದೆ ನಿಷೇಧಿಸಲಾಗಿತ್ತು. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕೆಲ ಸಂದರ್ಭಗಳನ್ನು ಹೊರತುಪಡಿಸಿ ಜಾಹೀರಾತು ಪ್ರದರ್ಶನ ಸಂಪೂರ್ಣ ನಿಷೇಧಿಸಲಾಗಿದೆ.
ಅದರೂ ಕೂಡ ರಾಜಕೀಯ ಪಕ್ಷಗಳು ಸೇರಿ ಖಾಸಗಿಯವರು ಎಲ್ಲೆಂದರಲ್ಲಿ ಫ್ಲೆಕ್ಸ್ , ಬ್ಯಾನರ್ ಗಳನ್ನು ಅಳವಡಿಸಿ ಬಿಬಿಎಂಪಿ ನಿಯಮ ಹಾಗೂ ಹೈಕೋರ್ಟ್ ಆದೇಶ ಉಲ್ಲಂಘನೆ ನಡೆಯುತ್ತಲೇ ಇತ್ತು. ಈಗ ಅದಕ್ಕೊಂದು ಉಪಾಯ ಕಂಡುಕೊಂಡಿದೆ ಪಾಲಿಕೆ. ಈ ರೂಲ್ಸ್ ಪ್ರಕಾರ ಬಿಬಿಎಂಪಿಯ ಬೊಕ್ಕಸ ತುಂಬಿಸಿಕೊಳ್ಳೋದು ಪ್ಲ್ಯಾನ್.
ಇದಕ್ಕಾಗಿ ಬಿಬಿಎಂಪಿ ಬೈಲಾಗೇ ತಿದ್ದುಪಡಿ ತಂದು ಬಿಬಿಎಂಪಿ ಹೊಸ ಜಾಹೀರಾತು ಪಾಲಿಸಿ ರೂಪಿಸಲು ಮುಂದಾಗಿದೆ. ಇದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬೈಲಾದಲ್ಲಿ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿ ಬಳಿಕ ಬಿಬಿಎಂಪಿಯ ಜಾಹೀರಾತು ದರ ಕಳೆದ ಅವಧಿಗಿಂತ 50% ರಷ್ಟು ದರ ಏರಿಕೆಮಾಡೋ ಲೆಕ್ಕಾಚಾರದಲ್ಲಿದೆ ಪಾಲಿಕೆ.
ಇದಲ್ಲದೇ ಬಿಬಿಎಂಪಿ ಒಡೆತನದ ಜಾಗಗಳಲ್ಲಿ ಮಾತ್ರ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಬೇಕು ಎಂಬ ನಿಯಮ ರೂಪಿಸಲು ಮುಂದಾಗಿದೆ. ಅಲ್ಲದೇ ಜಾಹೀರಾತು ಪ್ರದರ್ಶನದಿಂದ ಆದಾಯ ಹೆಚ್ಚಿಸಿಕೊಳ್ಳಲು ವಲಯಗಳ ನಿಗದಿ ಮಾಡಲಾಗುತ್ತಿದೆ. ಬಿಬಿಎಂಪಿ ವಲಯ ಅನುಸಾರವಾಗಿ ಪ್ರತ್ಯೇಕ ದರ ನಿಗದಿ ಮಾಡಬೇಕು ಎಂದು ನಿಯಮ ರೂಪಿಸಲಾಗುತ್ತಿದೆ.
ಬರದ ಪರಿಸ್ಥಿತಿ: ಕೇಂದ್ರಕ್ಕೆ 5,326 ಕೋಟಿ ರೂ.ಪರಿಹಾರ ಕೋರಿ ಕೇಂದ್ರಕ್ಕೆ ರಾಜ್ಯದಿಂದ ಪ್ರಸ್ತಾವ
ಬೆಂಗಳೂರು;- ಮಳೆಯ ಕೊರತೆ ಹಿನ್ನೆಲೆ 5,326 ಕೋಟಿ ರೂ.ಪರಿಹಾರ ಕೋರಿ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೆ ಘೋಷಿಸಲಾಗಿದೆ. ಇದರ ಜೊತೆಗೆ ಇನ್ನೂ 21 ತಾಲೂಕುಗಳನ್ನು ಅ.12ರಂದು ಬರಪೀಡಿತ ಎಂದು ಘೋಷಿಸಿ ಹೊರಡಿಸಿದ್ದ ಆದೇಶಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ಬರಪರಿಸ್ಥಿತಿಯಿಂದಾಗಿ ಅಂದಾಜು 33,770 ಕೋಟಿ ರೂ.ಗಳಷ್ಟು ಕೃಷಿ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎನ್‍ಡಿಆರ್ ಎಫ್ ನಿಯಮಾವಳಿಗಳ ಪ್ರಕಾರ 4,414 ಕೋಟಿ ರೂ.ಗಳ ಬೆಳೆ ಪರಿಹಾರ, ಜಾನುವಾರುಗಳಿಗೆ ಸಂಬಂಧಿಸಿದಂತೆ 355 ಕೋಟಿ ರೂ., ಕುಡಿಯುವ ನೀರು ಸರಬರಾಜು ಮಾಡಲು 554 ಕೋಟಿ ರೂ.ಸೇರಿದಂತೆ 5326.87 ಕೋಟಿ ರೂ.ಗಳ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ರಸಗೊಬ್ಬರ ಬಫರ್ ಸ್ಟಾಕ್ ದಾಸ್ತಾನು ಮಾಡಲು ರಾಜ್ಯ ಸಹಕಾರ ಮಾರಾಟ ಮಂಡಳಿಗೆ 200 ಕೋಟಿ ರೂ. ಹಾಗೂ ರಾಜ್ಯ ಬೀಜ ನಿಗಮಕ್ಕೆ 200 ಕೋಟಿ ರೂ.ಗಳ ಬ್ಯಾಂಕ್ ಸಾಲಕ್ಕೆ ಸರಕಾರದ ಖಾತ್ರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಹಂಗಾಮಿ ಅಧ್ಯಕ್ಷರು ಅಂತಾ ಯಾವ ಆಧಾರದಲ್ಲಿ ಮಾಡಿದ್ದೀರಿ?: ಸಿಎಂ ಇಬ್ರಾಹಿಂ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳ ವಿಸರ್ಜನೆ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದ ಸಿಎಂ ಇಬ್ರಾಹಿಂ, ಹಂಗಾಮಿ ಅಧ್ಯಕ್ಷರು ಅಂತಾ ಯಾವ ಆಧಾರದಲ್ಲಿ ಮಾಡಿದ್ದೀರಿ? ದೇವರು ಮತ್ತು ಜನ ನನ್ನ ಕೈಹಿಡಿಯುತ್ತಾರೆ. ಎಲ್ಲವನ್ನೂ ಹೊರಗೆ ತಂದರೆ ಒಳ್ಳೆಯದಲ್ಲ, ವಿಸರ್ಜನೆ ತಪ್ಪು. ಆದೇಶ ವಾಪಸ್ ಪಡೆದು ಪಕ್ಷದ ಸಭೆ ಕರೆಯಿರಿ.
ನಾನು ಹೋಗದೇ ಇದ್ದರೆ ಚನ್ನಪಟ್ಟಣದಲ್ಲಿ ಹೆಚ್ಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರಾ? ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು? ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಾನು ಹಾಸನ, ಮಂಡ್ಯ, ಹೊಳೆನರಸೀಪುರಕ್ಕೆ ಹೋಗಿ ಸಭೆ ಮಾಡುತ್ತೇನೆ ಎಂದರು.
ಸ್ಥಾನಮಾನಕ್ಕಿಂತ ಕಾನೂನು ದೊಡ್ಡದು: ಬಿವೈ ರಾಘವೇಂದ್ರ
ಶಿವಮೊಗ್ಗ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ, ಕಾನೂನು ಚೌಕಟ್ಟಿನಲ್ಲಿ ಯಾರು ಕೂಡ ದೊಡ್ಡವರಲ್ಲ. ಸ್ಥಾನಮಾನಕ್ಕಿಂತ ಕಾನೂನು ದೊಡ್ಡದು. ಕಾನೂನು ಚೌಕಟ್ಟಿನಲ್ಲಿ ಯಾರು ಏನು ಎದುರಿಸಬೇಕು ಅದನ್ನ ಎದುರಿಸಬೇಕು. ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ತೆರವುಗೊಳಿಸುವ ಕೆಲಸ ಆಗಿದೆ. ಕಾನೂನು ಪ್ರಕ್ರಿಯೆ ಏನು ಇದೆ ಅದು ಆಗುತ್ತದೆ ಎಂದರು.
ಶರಣಪ್ರಕಾಶ್ ಪಾಟೀಲ್ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಡಬೇಕು: ಭಗವಂತ ಖೂಬಾ
ಕಲಬುರಗಿ: ಬಿಜೆಪಿ ಕಾರ್ಯಕರ್ತ ಶಿವಕುಮಾರ್(35) ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಧರ್ಮಕ್ಕಾಗಿ ಹೋರಾಟ ಮಾಡುವವರ ಹತ್ತಿಕ್ಕುವ ಕೆಲಸ ಆಗುತ್ತಿದೆ. ಬಿಜೆಪಿ ಮುಖಂಡ ಶಿವಕುಮಾರ್ಗೆ ‘ಕೈ’ ಕಾರ್ಯಕರ್ತರು ಥಳಸಿದ್ದಾರೆ.
ಶಿವಕುಮಾರ್ ಆತ್ಮಹತ್ಯೆಗೂ ಮುನ್ನ ಆಡಿಯೋ ರೇಕಾರ್ಡ್ ಮಾಡಿದ್ದಾನೆ. ಸಚಿವ ಶರಣಪ್ರಕಾಶ್ ಪಾಟೀಲ್ ವಿರುದ್ದ ಆಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾತನಾಡುತ್ತಿಲ್ಲ. ಶರಣಪ್ರಕಾಶ್ ಪಾಟೀಲ್ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಡಿಕೆಶಿ ರಾಜೀನಾಮೆ ನೀಡಬೇಕು ಅನ್ನೋದು ನಮ್ಮ ಪಕ್ಷದ ಆಗ್ರಹ: ಅಶ್ವತ್ಥನಾರಾಯಣ
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಡಾ. ಅಶ್ವಥ್ ನಾರಾಯಣ, ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದರೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು. ನಮ್ಮ ಮೇಲೆ ಪೇ ಸಿಎಂ ಆರೋಪ ಮಾಡಿದ್ದರು. ಈಗ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಮೇಲೆ ಬಂದಿರುವ ಆರೋಪದ ಬಗ್ಗೆ ಮುಕ್ತ ತನಿಖೆ ಆಗಬೇಕಿದೆ. ಹೀಗಾಗಿ ಡಿಕೆಶಿ ರಾಜೀನಾಮೆ ನೀಡಬೇಕು ಅನ್ನೋದು ನಮ್ಮ ಪಕ್ಷದ ಆಗ್ರಹ ಎಂದರು.
ಜಯದ ಓಟದ ಕುದುರೆ ನಿಲ್ಲಿಸಲು ಮಾಡಿದ ಹುನ್ನಾರವಾಗಿದೆ: ಸಚಿವ ನಾಗೇಂದ್ರ
ಬಳ್ಳಾರಿ: ದಕ್ಷಿಣ ಭಾರತದಲ್ಲಿ ಅಗ್ರಗಣ್ಯ ನಾಯಕನಾಗಿರೋ ಡಿಕೆಶಿ ತುಳಿಯಲು ಪ್ಲಾನ್ ಮಾಡಲಾಗ್ತಿದೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ವಿರುದ್ಧ ಸಚಿವ ನಾಗೇಂದ್ರ ಹರಿಹಾಯ್ದಿದ್ದಾರೆ. ಡಿಕೆಶಿ ಸ್ಪೀಡ್ ನಿಯಂತ್ರಣ ಮಾಡಲು ಮತ್ತು ಅವರ ಜಯದ ಓಟದ ಕುದುರೆ ನಿಲ್ಲಿಸಲು ಮಾಡಿದ ಹುನ್ನಾರವಾಗಿದೆ. ಲೋಕಸಭೆ ಚುನಾವಣೆ ಹಿನ್ನಲೆ ಡಿಕೆಶಿ ಮೇಲೆ ಒತ್ತಡ ತರಲು ಹೀಗೆ ಮಾಡ್ತಿದ್ದಾರೆ. ಎಲ್ಲಾ ತನಿಖೆಯಿಂದ ಮುಕ್ತವಾಗಿ ಹೊರಗೆ ಬರುತ್ತಾರೆ. ಎಲ್ಲೋ ರೈಡ್ ಆದ್ರೂ ಇವರ ಮೇಲೆ ಗೂಬೆ ಕುರಿಸುತ್ತಾರೆ.. ಎಲ್ಲಿ ಹಣ ಸಿಕ್ಕರೂ ಡಿಕೆಶಿ ಹಣ ಎನ್ನುತ್ತಾರೆ. ಜೆಡಿಎಸ್ ಬಿಜೆಪಿ ಇಬ್ಬರು ಕುತಂತ್ರ ಮಾಡ್ತಿದ್ದಾರೆ ಎಂದರು.
ಬೆಳಗಾವಿ ರಾಜಕೀಯ ವಿಚಾರ
ಪೂರ್ವ ನಿಯೋಜಿತ ಕಾರ್ಯಕ್ಕೆ ಡಿಕೆಶಿ ಹೋಗಿರಲಿಲ್ಲ, ಅನಿರೀಕ್ಷಿತ ಭೇಟಿ ಹೀಗಾಗಿ ಯಾವ ಶಾಸಕರು ಇರಲಿಲ್ಲ. ಸತೀಶ್ ಜಾರಕಿಹೊಳಿ ವಿಚಾರಕ್ಕೂ ಬೆಳಗಾವಿ ಶಾಸಕರು ಡಿಕೆಶಿ ಜೊತೆಗೆ ಹೋಗದೇ ಇರೋದಕ್ಕೆ ಸಂಬಂಧವಿಲ್ಲ. ಸತೀಶ್ ಜಾರಕಿಹೊಳಿ ಅವರಿಗೆ ಯಾವುದೇ ಗುಂಪು ಮಾಡಿಕೊಂಡಿಲ್ಲ ಎಲ್ಲರೂ ಒಟ್ಟಾಗಿದ್ದೇವೆ. ಸತೀಶ್ ಜಾರಕಿಹೊಳಿ ಪಕ್ಷದ ಹಿರಿಯರು, ಡಿಕೆಶಿ ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಚಿವ ನಾಗೇಂದ್ರ ಹೇಳಿದರು.
ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಉಚ್ಚಾಟಿಸಿದ್ದೇವೆ: ದೇವೇಗೌಡ
ಬೆಂಗಳೂರು: ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದೇವೆ.
ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಉಚ್ಚಾಟಿಸಿದ್ದೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ನೇಮಕ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳ ಆರೋಪ; ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ
ಕಲಬುರಗಿ: ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಂದ ಕಿರುಕುಳಕ್ಕೊಳಗಾಗಿರುವುದಾಗಿ ಆರೋಪಿಸಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ. ನನ್ನ ಸಂಬಂಧಿ ನರಸಪ್ಪ ಎಂಬವರ ಹೊಲಕ್ಕೆ ಹೋಗಿ ಕೈ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಆತ್ಮಹತ್ಯೆಗೂ ಮುನ್ನ ಶಿವಕುಮಾರ್ ಮೂರು ಆಡಿಯೋದಲ್ಲಿ ಹೇಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮೂರು ಆಡಿಯೋ ರೆಕಾರ್ಡ್ ಮಾಡಿರುವ ಶಿವಕುಮಾರ್ ತನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ನೇರ ಕಾರಣ ಎಂದು ಆರೋಪಿಸಿದ್ದಾರೆ. ನಾನು ಹಿಂದೂ ಹುಲಿಯಾಗಿದ್ದೇನೆ, ಹಿಂದೂ ಹುಲಿಯಾಗಿಯೇ ಸಾಯುತ್ತೇನೆ. ಹಿಂದೂ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಬಾರದು. ಮಾತಾಡಿದರೆ ಇವರಿಗೆ ಬೆಂಕಿ ಬಿಳುತ್ತದೆ.
ಹಾಗಾಗಿ ನನ್ನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣ ಎಂದು ಆರೋಪಿಸಿ ಆಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

