ಧಾರವಾಡ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನ್ಯಾಯಾಲಯದ ಆಡಳಿತ ಕಚೇರಿಗೆ ಬಂದ ಇಮೇಲ್‌ನಲ್ಲಿ ಸ್ಫೋಟದ ಬಗ್ಗೆ ಬೆದರಿಕೆ ಹಾಕಲಾಗಿದ್ದರಿಂದ ಭದ್ರತಾ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡರು.
ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿದ್ದ ವಕೀಲರು, ಕಕ್ಷಿದಾರರು ಹಾಗೂ ಸಿಬ್ಬಂದಿಯನ್ನು ಹೊರಗೆ ಸ್ಥಳಾಂತರಿಸಲಾಯಿತು. ಬೆದರಿಕೆ ಸಂದೇಶದಲ್ಲಿ, “ನಿನ್ನೆ ಮಧ್ಯಾಹ್ನ 2 ಗಂಟೆಗೆ ನಿಮ್ಮ ನ್ಯಾಯಾಲಯದಲ್ಲಿ 23 ಸೈನೈಡ್ ಅನಿಲ ಬಾಂಬ್‌ಗಳು ಸ್ಫೋಟಗೊಂಡಿವೆ. ನಿನ್ನೆ ನಡೆದದ್ದು ಕೇವಲ ಪರೀಕ್ಷೆ, ಇಂದು ನಡೆಯುವುದು ನಿಜವಾದ ದಾಳಿ” ಎಂದು ಉಲ್ಲೇಖಿಸಲಾಗಿತ್ತು.
ಇಮೇಲ್‌ನಲ್ಲಿನ ಈ ಬೆದರಿಕೆ ನ್ಯಾಯಾಲಯದ ಸುತ್ತಮುತ್ತ ಆತಂಕ ಸೃಷ್ಟಿಸಿತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದರು.
ಪರಿಶೀಲನಾ ಕಾರ್ಯಾಚರಣೆಯ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದ್ದು, ಬೆದರಿಕೆ ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೈಬರ್ ತಜ್ಞರ ಸಹಾಯದಿಂದ ಇಮೇಲ್ ಕಳುಹಿಸಿದ ವ್ಯಕ್ತಿ ಅಥವಾ ಗುಂಪಿನ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.



