Home Blog Page 3227

ಕೋಳಿ, ಕುರಿಗಿಂತ ಮನುಷ್ಯನ ಪ್ರಾಣ ಕನಿಷ್ಠವಾಗಿದೆ; ಬಸವರಾಜ್ ಹೊರಟ್ಟಿ ವಿಷಾದ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಕರಾವಳಿ ಭಾಗದಲ್ಲಿ ನಡೆದ ಯುವಕನ ಹತ್ಯೆಯ ಘಟನೆ ತುಂಬಾ ನೋವಿನ ಸಂಗತಿ. ಇಂಥಾ ಘಟನೆಗಳು ಎಲ್ಲಿಯೂ ನಡೆಯಬಾರದು. ಇಂಥ ಸಮಯದಲ್ಲಿ ಇಂಟಲಿಜೆನ್ಸ್‌ನವರು ಪೊಲೀಸ್ ಇಲಾಖೆಗಿಂತ ಹೆಚ್ಚು ಶೀಘ್ರವಾಗಿ ಕೆಲಸ ಮಾಡಿ ಸರಕಾರಕ್ಕೆ ಮಾಹಿತಿ ಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಖೇದ ವ್ಯಕ್ತಪಡಿಸಿದರು.

ಅವರು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಇಂಥ ಘಟನೆಗಳು ನಡೆಯಬಾರದಿತ್ತು. ಆದರೆ ನಡೆಯುತ್ತಲೇ ಇವೆ. ಯಾವುದೇ ಜಾತಿಯಿರಲಿ, ಏನೇ ಇರಲಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂಥ ಘಟನೆಗಳಲ್ಲಿ ಆರೋಪಿತರಿಗೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ಇವತ್ತಿನರವೆಗೂ ಗೊತ್ತಾಗಿಲ್ಲ. ಸೂಕ್ತ ಶಿಕ್ಷೆ ಆದಾಗ ಮಾತ್ರ ಇಂಥ ಘಟನೆಗಳು ಕಡಿಮೆಯಾಗುತ್ತವೆ.

ಆದರೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಎಂದು ಹಲವಾರು ಕಾನೂನುಗಳ ಕಾರಣಕ್ಕೆ ಶಿಕ್ಷೆ ನಿಧಾನವಗುತ್ತಿದೆ. ಹತ್ತು-ಹದಿನೈದು ವರ್ಷ ಕಳೆಯುವದರಲ್ಲಿ ಜನರು ಅದನ್ನು ಮರೆತುಬಿಡುತ್ತಾರೆ ಎಂದು ವಿಷಾದಿಸಿದರು.

ಮುಂದುವರೆದ ಅವರು, ಹಿಂದೊಮ್ಮೆ ನಾನು ಇಸ್ರೇಲ್‌ಗೆ ಹೋಗಿದ್ದೆ. ಅಲ್ಲಿಯ ಕಾನೂನು ಹೇಗಿದೆಯೆಂದರೆ, ಬೆಳಿಗ್ಗೆ ಇಂಥಾ ಘಟನೆಯಾದರೆ ಸಂಜೆಯ ವೇಳೆಗೇ ಅಪರಾಧಿಗಳಿಗೆ ಗಲ್ಲುಶಿಕ್ಷೆಯ ತೀರ್ಪು ಬರುತ್ತದೆ. ನಮ್ಮಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಬಾರದು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು.

ಹಾಗಾದರೆ ಮಾತ್ರ ಇಂಥ ಘಟನೆಗಳು ಮರುಕಳಿಸದಂತೆ ತಡೆಬಹುದು. ಇಂಥ ಸಮಯದಲ್ಲಿ ಎಲ್ಲ ಪಕ್ಷಗಳೂ ಒಂದಾಗಿ ನಾಡಿನಲ್ಲಿ ಶಾಂತಿ ಕಾಪಾಡಬೇಕೇ ಹೊರತು ಒಬ್ಬರನ್ನೊಬ್ಬರು ಎತ್ತಿ ಕಟ್ಟುವ ಪರಿಸ್ಥಿತಿ ಬರಬಾರದು ಎಂದರು.

ವಿರೋಧ ಪಕ್ಷ ಕೇವಲ ಟೀಕೆ ಮಾಡುತ್ತಾ ಕುಳಿತರೆ ಸರಿಯಲ್ಲ. ಮುಖ್ಯಮಂತ್ರಿಗಳು ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆದು ಮುಂದೆ ಇಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿಸಿ, ಅದನ್ನು ಮಾಧ್ಯಮದ ಮೂಲಕ ಜನರಿಗೆ ಗೊತ್ತಾಗುವಂತೆ ಮಾಡಬೇಕು. ಹಾಗಾದಾಗ ಇಂಥಾ ಘಟನೆಗಳು ಮತ್ತೆ ನಡೆಯೋದಿಲ್ಲ.

ಕೋಳಿ, ಕುರಿಗಿಂತ ಮನುಷ್ಯನ ಜೀವನ ಕನಿಷ್ಠವಾದ ಹಾಗಾಗಿದೆ. ಹೈದರಾಬಾದ್‌ನಲ್ಲಿ ನಮ್ಮ ಸಜ್ಜನ ಶೂಟೌಟ್ ಮಾಡಲಿಲ್ಲವೇನು? ಇಂಥ ಸಮಯದಲ್ಲಿ ಪೊಲೀಸರು ಸಣ್ಣ ತಪ್ಪು ಮಾಡಿದರೂ ಹತ್ಯೆಯಂಥಹ ಘಟನೆಗಳು ಸಂಭವಿಸುವದು ನಿಂತರೆ ನಾನೇನೂ ಅದನ್ನು ತಪ್ಪೆನ್ನುವದಿಲ್ಲ ಎಂದು ಹೇಳಿದರು.

ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮೂವರನ್ನು ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ವಿಜಯಸಾಕ್ಷಿ ಸುದ್ದಿ, ರೋಣ

ಕಳೆದ ಹಲವು ದಿನಗಳಿಂದ ಡಿಎಪಿ ಮಂಗಲ ಹೆಸರಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ.

ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ನಕಲಿ ಗೊಬ್ಬರ ಮಾರಾಟ ಮಾಡುವವರ ಜಾಲವೇ ಹುಟ್ಟಿಕೊಂಡಿತ್ತು. ನೂರಾರು ರೈತರು ನಕಲಿ ಗೊಬ್ಬರವನ್ನು ಬಳಕೆ ಮಾಡುವ ಮೂಲಕ ಸಂಕಷ್ಟವನ್ನು ಸಹ ಅನುಭವಿಸಿದ್ದರು. ಕೃಷಿ ಇಲಾಖೆಯ ಅಧಿಕಾರಿಗಳು ನಕಲಿ ಗೊಬ್ಬರದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದರು. ಇದನ್ನು ಗಮನಿಸಿದ್ದ ಸವಡಿ ಗ್ರಾಮದ ರೈತರು ಶನಿವಾರ ಲಾರಿ ಸಮೇತ ನಕಲಿ ಗೊಬ್ಬರ ಪೂರೈಕೆ ಮಾಡುತ್ತಿದ್ದವರನ್ನು ಕೂಡಿ ಹಾಕಿ ಚಳಿ‌ ಬಿಡಿಸಿದ್ದಾರೆ.

ಸುದ್ದಿ ತಿಳಿದು ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ ಹಾಗೂ ಮಂಜುನಾಥ್ ತಂದೆ ಚಂದ್ರಪ್ಪ ಹಾಗೂ ಲಾರಿ ಚಾಲಕ ತಮಿಳುನಾಡಿನ ಬಾಲಮೃಗ ಎಂಬುವವರನ್ನು ವಶಕ್ಕೆ ಪಡೆದು 50 ಕೆ ಜಿಯ 475 ಬ್ಯಾಗ ವಶಪಡಿಸಿಕೊಂಡಿದ್ದಾರೆ.

ನಕಲಿ ರಸಗೊಬ್ಬರ ಮಾರಾಟ ಜಾಲದ ಕಿಂಗ್ ಫಿನ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

ನಕಲಿ ಗೊಬ್ಬರ ಮಾರಾಟ ಹೇಗೆ?

ಚೀಲದ ಮೇಲೆ ಡಿಎಪಿ ಮಂಗಲ ಎಂದು ಬರೆಯುವ ಮೂಲಕ ಚೀಲದೊಳಗೆ ನಕಲಿ ಗೊಬ್ಬರವನ್ನು ತುಂಬಿರಲಾಗಿರುತ್ತದೆ. ಮುಗ್ಧ ರೈತರು ಡಿಎಪಿ ಗೊಬ್ಬರ ಇರಬಹುದು ಎಂದು ನಂಬಿ ಖರೀದಿಸುತ್ತಾರೆ. ಆದರೆ ಚೀಲದ ಮೇಲೆ ಮಾತ್ರ ಡಿಎಪಿ ಎಂದು ಇದ್ದು ಚೀಲದೊಳಗೆ ಬೂದಿ ಮಾತ್ರ ಇರುತ್ತದೆ. ಇದನ್ನು ಪರೀಕ್ಷೆ ಮಾಡಿದರೆ ಸಾಕು ಬೂದಿ ಹಾಗೂ ಮಣ್ಣು ಹೊರ ಬರುತ್ತದೆ.

ಗದಗ ಜಿಲ್ಲಾಧಿಕಾರಿಯಾಗಿ ದಿವ್ಯ ಪ್ರಭು ನೇಮಕ

0

ವಿಜಯಸಾಕ್ಷಿ ಸುದ್ದಿ, ಗದಗ

ಜುಲೈ 11ರಂದು ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರ ವರ್ಗಾವಣೆ ನಂತರ ಗದಗ ಜಿಲ್ಲಾಧಿಕಾರಿಯಾಗಿ ಹೊನ್ನಾಂಬ ಅವರು ನೇಮಕವಾಗಿದ್ದರು.

ಆದರೆ ಅವರು ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕಿದ್ದರಿಂದ ಸ್ಥಾನದ ನಿರೀಕ್ಷೆಯಲ್ಲಿದ್ದ 2014ರ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ ದಿವ್ಯ ಪ್ರಭು ಜಿ ಆರ್ ಜೆ ಅವರನ್ನು ಸರಕಾರ ಗದಗ ಡಿಸಿಯನ್ನಾಗಿ ನೇಮಕ ಮಾಡಿ ಶನಿವಾರ ಸಂಜೆ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಯ 27 ಜನ ಸಮಾಜ ಕಂಟಕರಿಗೆ ಕಾದಿದೆ ಶಿಕ್ಷೆ; ಆದೇಶ ಬಂದ ತಕ್ಷಣವೇ ಗಡಿಪಾರು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಾದ್ಯಂತ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವಂತೆ ಹಾಗೂ ಸಮಾಜದ ಶಾಂತಿಯನ್ನು ಹಾಳುಮಾಡುವ ಕೃತ್ಯಗಳಲ್ಲಿ ತೊಡಗಿಕೊಂಡ ವ್ಯಕ್ತಿಗಳನ್ನು ಗಡಿಪಾರು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಗದಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕುಕೃತ್ಯಗಳಲ್ಲಿ ತೊಡಗಿಕೊಂಡು ಕಾನೂನುಬಾಹಿರ ಚಟುವಟಿಕೆಗಳಾದ ಓ.ಸಿ/ ಮಟಕಾದಂಥಹ ಜೂಜಾಟ, ಗಾಂಜಾದಂಥಹ ಮಾದಕ ವಸ್ತುಗಳ ಮಾರಾಟ, ಅಕ್ರಮ ಸಾರಾಯಿ ಮಾರಾಟ, ಸಾರ್ವಜನಿಕರ ಆಸ್ತಿ ಮತ್ತು ಜೀವಹಾನಿ ಉಂಟುಮಾಡುತ್ತಿರುವ, ಇದನ್ನೇ ವೃತ್ತಿಯಾಗಿಸಿಕೊಂಡ, ಇಂಥ ಜನರ ಸಹವಾಸಕ್ಕೆ ಬಿದ್ದು ಅಪರಾಧ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸುತ್ತ ಬಂದಿದ್ದರೂ ಕೂಡ ಇಂಥವರು ತಮ್ಮ ಹಳೆಯ ಚಾಳಿಯನ್ನು ಬಿಟ್ಟು ಬದಲಾಗಲಿಲ್ಲ ಮತ್ತು ತಮ್ಮ ಹಳೆಯ ಕೆಲಸಗಳನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ.

ಇಂಥವರನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗಿಯೇ ಇರುತ್ತಾರೆ, ಸಮಾಜದಲ್ಲಿ ಅಶಾಂತಿಯನ್ನುಂಟುಮಾಡುವ ಕೆಲಸಗಳಲ್ಲಿ ಮುಂದುವರಿಯುತ್ತಾರೆ ಮತ್ತು ಉಳಿದವರಿಗೂ ಕೂಡ ಇಂಥದೇ ಅಪರಾಧಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾಗಬಹುದು ಎಂ ಉದ್ದೇಶದಿಂದ ಇಂಥವರ ಮೇಲೆ ಕರ್ನಾಟಕ ಪೊಲೀಸ್ ಅಧಿನಿಯಮ-1963 ಕಲಂ;56(ಜಿ),(ಎಸ್),(ಎ) ಕಾಯ್ದೆಯ ಅಡಿಯಲ್ಲಿ ಗದಗ ಜಿಲ್ಲೆಯಿಂದ ಗಡಿಪಾರು ಮಾಡುವದು ಅನಿವಾರ್ಯವಾಗಿದೆ.

ಈ ಸಂಬಂಧ 78(3) ಕೆ.ಪಿ ಕಾಯ್ದೆ-154 ಪ್ರಕರಣ(180 ಆರೋಪಿಗಳ ಬಂಧನ), ಬೆಟ್ಟಿಂಗ್-13 ಪ್ರಕರಣ (22 ಆರೋಪಿಗಳ ಬಂಧನ) , 87 ಕೆಪಿ ಕಾಯ್ದೆ- 70 ಪ್ರಕರಣ(450 ಆರೋಪಿಗಳ ಬಂಧನ), ಅಬಕಾರಿ ಕಾಯ್ದೆ- 138 ಪ್ರಕರಣ(140 ಆರೋಪಿಗಳ ಬಂಧನ), ಹಾಗೂ ಮರಳು ಮಾಫಿಯಾ ವಿರುದ್ಧ 30 ಪ್ರಕರಣಗಳನ್ನು ದಾಖಲಿಸಿ 37 ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ. ಅಲ್ಲದೇ, 39 ಪ್ರಕರಣಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತಹಶೀಲ್ದಾರರಿಗೆ ಒಪ್ಪಿಸಿ ಒಟ್ಟೂ 7,84,238.ರೂಗಳ ದಂಡ ವಿಧಿಸಲಾಗಿದೆ.

ಗಡಿಪಾರು ವಿಷಯಕ್ಕೆ ಸಂಬಂಧಿಸಿ ಈಗಾಗಲೇ 6 ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಈ ಪೈಕಿ ಲಕ್ಷ್ಮೇಶ್ವರದ ಒಬ್ಬನಿಗೆ ಜು.7ರಂದು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದ್ದು, ಇನ್ನೂ 5 ಜನರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಪ್ರಸ್ತುತ ಸಾಲಿನಲ್ಲಿಯೂ ಕಾನೂನು ಹಾಗೂ ಪೊಲೀಸ್ ಇಲಾಖೆಯ ಯಾವುದೇ ಭಯವಿಲ್ಲದೇ ಅಪರಾಧೀ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಜಿಲ್ಲೆಯ ಒಟ್ಟೂ 27 ವ್ಯಕ್ತಿಗಳನ್ನು ಗುರುತಿಸಿ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಆದೇಶ ಬಂದ ತಕ್ಷಣವೇ ಈ ಎಲ್ಲ 27 ಜನರನ್ನೂ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ನಿಗಾ ಇಡಲಾಗುತ್ತದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ಚಕ್ಕಡಿಗೆ ಟಿಪ್ಪರ್ ಡಿಕ್ಕಿ; ಆಕ್ರೋಶಗೊಂಡ ಸ್ಥಳೀಯರಿಂದ ಚಾಲಕನಿಗೆ ಧರ್ಮದೇಟು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಗೊಜನೂರ ಗ್ರಾಮದಲ್ಲಿ ಎಂಸ್ಯಾಂಡ್ ಸಾಗಿಸುವ ಟಿಪ್ಪರ್ ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದು ಎತ್ತು ಮತ್ತು ರೈತನನ್ನು ಗಾಯಗೊಳಿಸಿದ ಘಟನೆ ನಡೆದಿದೆ. ಇದರಿಂದಾಗಿ ಆಕ್ರೋಶಗೊಂಡ ಗ್ರಾಮಸ್ಥರು ಟಿಪ್ಪರ್ ಚಾಲಕನನ್ನು ತಡೆದು ಧರ್ಮದೇಟು‌ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಗಂಟೆಗೆ ಹೆಚ್ಚು ಕಾಲ ಈ ಮಾರ್ಗವಾಗಿ ಸಂಚರಿಸುವ ಟಿಪ್ಪರ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಬೀರಪ್ಪ ಗುಡ್ಡಣ್ಣವರ ಎಂಬ ರೈತ ತಮ್ಮ ಎತ್ತಿನ ಚಕ್ಕಡಿಯಲ್ಲಿ ತಾಯಿ, ಪತ್ನಿ, ಮಗಳು ಮತ್ತು ಒಬ್ಬ ಕೂಲಿಕಾರರನ್ನು ಕರೆದುಕೊಂಡು ಹೊಲಕ್ಕೆ ಹೋಗುತ್ತಿದ್ದರು. ಈ ವೇಳೆ ಯರ‍್ರಾಬರ‍್ರಿಯಾಗಿ ಬಂದ ಟಿಪ್ಪರ್ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಕ್ಕಡಿಯಲ್ಲಿದ್ದವರು ಮುಗ್ಗರಿಸಿದ್ದು ಎತ್ತು ಮತ್ತು ರೈತನಿಗೆ ಗಾಯವಾಗಿದೆ.

ಅದೃಷ್ಟವಶಾತ್ ಚಕ್ಕಡಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನ ಪಡಿಸಿ ಲಾರಿ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ರೈತ ಮುಖಂಡರಾದ ಮಹಾಂತಗೌಡ ಪಾಟೀಲ, ಚನ್ನಪ್ಪ ಷಣ್ಮುಕಿ, ವಿರುಪಾಕ್ಷಗೌಡ ಪಾಟೀಲ, ನಿಂಗಪ್ಪ ಕಾಟಿ, ಕೇಶಪ್ಪ ಜಾಲಮ್ಮನವರ, ಬಸವರಾಜ ಜಾಲಮ್ಮನವರ, ಪ್ರಕಾಶ ಗುಡ್ಡಣ್ಣವರ ಇದ್ದರು.

ಕುಸಿದುಬಿದ್ದ ಮನೆ; ವೃದ್ಧೆ ದಾರುಣ ಸಾವು

ವಿಜಯಸಾಕ್ಷಿ ಸುದ್ದಿ, ಹಾವೇರಿ

ಇತ್ತೀಚೆಗೆ ಸುರಿದ ಭಾರೀ ಮಳೆಯ ಪರಿಣಾಮವಾಗಿ ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ಮನೆ ಕುಸಿದುಬಿದ್ದು, ಮನೆಯಲ್ಲಿದ್ದ ವೃದ್ಧೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗ್ರಾಮದ 67 ವರ್ಷದ ಪದ್ಮಮ್ಮ ಪಾಟೀಲ ಮೃತ ದುರ್ದೈವಿಯಾಗಿದ್ದಾರೆ. ಸ್ನಾನಕ್ಕೆಂದು ಸ್ನಾನದ ಕೋಣೆಗೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ವೃದ್ಧೆಯ ಮೈಮೇಲೆ ಗೋಡೆಯ ಮಣ್ಣು, ಮೇಲ್ಛಾವಣಿಗೆ ಹಾಕಿದ್ದ ಕಟ್ಟಿಗೆಯ ತೊಲೆ, ಕಂಬಗಳ ಸಮೇತ ಬಿದ್ದ ಪರಿಣಾಮ, ಪದ್ಮಮ್ಮ ಪಾಟೀಲ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೆಲಸಮಯದವರೆಗೂ ಮನೆಯ ಇತರ ಭಾಗಗಳೂ ಕುಸಿದುಬೀಳುತ್ತಲೇ ಇದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮನೆ ಕುಸಿದು ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಎಂಥವರೂ ಮರುಗುವಂತಿದೆ. ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಅಂಗಡಿಯಲ್ಲಿ ಪ್ರತ್ಯಕ್ಷನಾದ ನಾಗಪ್ಪ!

0

ವಿಜಯಸಾಕ್ಷಿ ಸುದ್ದಿ, ಗದಗ

ನಾಗರ ಪಂಚಮಿಗೂ ಮೊದಲೇ ನರಗುಂದದ ಅಂಗಡಿಯೊಂದರಲ್ಲಿ ನಾಗರಾಜ್ ದರ್ಶನ ನೀಡಿದ್ದಾನೆ! ಗದಗ ಜಿಲ್ಲೆ ನರಗುಂದ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ಸುರೇಶ್ ಪಟ್ಟೇದ್ ಎಂಬುವರಿಗೆ ಸೇರಿದ ದಲ್ಲಾಳಿ ಅಂಗಡಿಯಲ್ಲಿ ನಾಗಪ್ಪ ಪ್ರತ್ಯಕ್ಷನಾಗಿದ್ದ.

ಅಂಗಡಿಯ ಒಳಗೇ ಇರುವ ವೇಳೆ ಕಾಣಿಸಿಕೊಂಡ ನಾಗರಹಾವನ್ನು ಕಂಡು ಭಯಭೀತರಾದ ಅಂಗಡಿಯ ಮಾಲಕ ಸುರೇಶ್ ಪಟ್ಟೇದ್ ತಕ್ಷಣ ನಗರದ ಉರಗತಜ್ಞ ಸ್ನೇಕ್ ಬುಡ್ಡಾಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ವಿನಂತಿಸಿದರು.

ಕೆಲವೇ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಸ್ನೇಕ್ ಬುಡ್ಡಾ ನಾಗರಹಾವನ್ನು ಸೆರೆಹಿಡಿದು, ಹಾವಿನೊಂದಿಗೆ ಕೆಲಸಮಯ ಕಳೆದು, ನಿರ್ಜನ ಪ್ರದೇಶಕ್ಕೆ ಬಿಟ್ಟು ಬಂದಾಗ ಅಂಗಡಿಯ ಮಾಲಕ ಹಾಗೂ ಎಪಿಎಂಸಿ ಯಾರ್ಡ್‌ನ ಸಾರ್ವಜನಿಕರು ನಿಟ್ಟುಸಿರುಬಿಟ್ಟರು.

ಗೃಹ ಸಚಿವರ ರಾಜೀನಾಮೆಗೆ ಡಬ್ಲ್ಯೂಪಿಐ ಒತ್ತಾಯ

ವಿಜಯಸಾಕ್ಷಿ ಸುದ್ದಿ, ತುಮಕೂರು

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಸಮರ್ಥರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅರಗ ಜ್ಞಾನೇಂದ್ರ ಅವರು ಗೃಹ ಮಂತ್ರಿಯಾದ ನಂತರ ಹಿಂದೂ, ಮುಸ್ಲಿಂ ಎನ್ನದೆ ಸಾಲು ಸಾಲು ಹೆಣಗಳು ಉರುಳುತ್ತಿವೆ. ಅದರಲ್ಲಿಯೂ ಕುಟುಂಬಕ್ಕೆ ಆಧಾರಸ್ತಂಬವಾಗಿದ್ದ ಹದಿ ಹರೆಯದ ಯುವಕರು ಕೊಲೆಗೀಡಾಡುತ್ತಿರುವುದು ತುಂಬಾ ಆತಂಕಕಾರಿ ವಿಚಾರವಾಗಿದೆ. ಈ ಹಿಂದಿನ ಘಟನೆಗಳಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಂಡಿದ್ದರೆ, ಇಂದು ಬೆಳ್ಳಾರದಲ್ಲಿ ಎರಡು ಹೆಣಗಳು ಬೀಳುತ್ತಿರಲಿಲ್ಲ ಎಂದಿರುವ ತಾಜುದ್ದೀನ್ ಶರೀಫ್, ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಜವಾಬ್ದಾರಿ ನಿಭಾಯಿಸಲು ಅಸಮರ್ಥರಾಗಿದ್ದಾರೆ ಎಂಬುದನ್ನು ಈ ಎರಡು ಘಟನೆಗಳು ಮತ್ತೆ ಸಾಬೀತು ಪಡಿಸಿವೆ ಎಂದು ದೂರಿದ್ದಾರೆ.

ಮತ್ತಷ್ಟು ಯುವಕರ ಹತ್ಯೆ ಆಗುವುದಕ್ಕೂ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ವೆಲ್ಪೇರ್ ಪಾರ್ಟಿ ಅಪ್ ಇಂಡಿಯಾದ ಒತ್ತಾಯವಾಗಿದೆ ಎಂದು ತಾಜುದ್ದೀನ್ ಶರೀಫ್ ತಿಳಿಸಿದ್ದಾರೆ.

ಯುವಕರಿಗೆ ಪ್ರಚೋದನಕಾರಿ ಭಾಷಣದ ಮೂಲಕ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಎಂದು‌ ತಾಜುದ್ದೀನ್ ಶರೀಫ್ ಎಚ್ಚರಿಸಿದ್ದಾರೆ.

ಮೊಬೈಲ್ ನಲ್ಲಿ ಸೆರೆಯಾದ ಹಾವುಗಳ ಮಿಲನ

0

ವಿಜಯಸಾಕ್ಷಿ ಸುದ್ದಿ, ಹಾವೇರಿ

ಈ ಭೂಮಿಯಲ್ಲಿ ಹುಟ್ಟಿದ ಪ್ರತೀ ಜೀವಿಗಳೂ ಕೂಡ ತಮ್ಮ ಸಂತತಿಯನ್ನು ಮುಂದುವರೆಸುವ ಉದ್ದೇಶದಿಂದ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಕೊಳ್ಳುವದು ಪ್ರಕೃತಿಯ ನಿಯಮ. ಮನುಷ್ಯ ಜೀವಿಯನ್ನು ಹೊರತುಪಡಿಸಿದರೆ, ಉಳಿದೆಲ್ಲ ಜೀವಿಗಳಲ್ಲಿಯೂ ಈ ಸಂತಾನೋತ್ಪತ್ತಿ ಕ್ರಿಯೆಗೆ ನಿಗದಿತವಾದ ಕಾಲವಿದೆ. ಇತರ ಜೀವಿಗಳು ಮನುಷ್ಯರಂತೆ ಕೇವಲ ಮೋಜಿಗಾಗಿಯಷ್ಟೇ ಅಲ್ಲದೆ, ಸಂತಾನೋತ್ಪತ್ತಿ ಕ್ರಿಯೆಯನ್ನು ನಿಗದಿತ ಕಾಲದಲ್ಲಿ ಮಾತ್ರ ಒಂದು ವೃತದಂತೆಯೇ ಪಾಲಿಸುತ್ತವೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೀಗಿಹಳ್ಳಿ ಪ್ಲಾಟ್ ನಲ್ಲಿ ಇತ್ತೀಚೆಗೆ ಎರಡು ಕೇರೆಹಾವುಗಳು ಮಿಲನದಲ್ಲಿ ತೊಡಗಿರುವ ದೃಶ್ಯವನ್ನು ಉರಗ ಪ್ರೇಮಿ ಕೃಷ್ಣಾರೆಡ್ಡಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಆರೇಳು ನಿಮಿಷಗಳ ಕಾಲ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಕೇರೆಹಾವುಗಳು, ಸಾಕಷ್ಟು ಜನ ಸುತ್ತಲೂ ನಿಂತು ಕುತೂಹಲದಿಂದ ನಿಂತು ನೋಡುತ್ತಿದ್ದರೂ ವಿಚಲಿತರಾಗದೇ ತಮ್ಮದೇ ಧ್ಯಾನದಲ್ಲಿ, ಸರಸ ಸಲ್ಲಾಪದಲ್ಲಿ ತೊಡಗಿರುವುದು ಕಂಡುಬಂದಿತು.

ಭಾರೀ ಮಳೆಗೆ ಕುಸಿದ ಛಾವಣಿ; ಉಸಿರುಗಟ್ಟಿ ಮನೆ ಮಾಲೀಕ ಸಾವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಪಟ್ಟಣದಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಣ್ಣಿನ ಮನೆ ಕುಸಿದು ಬಿದ್ದು ಮನೆ ಮಾಲೀಕ ಉಸಿರು ಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಸಂಜೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ಚಾವಡಿ ಓಣಿ ನಿವಾಸಿ ಮೂಲತಃ ಡೋಣಿ ಗ್ರಾಮದ ಅಶೋಕ ಹಳ್ಳಿಕೇರಿ (62) ಮೃತಪಟ್ಟ ದುರ್ಧೈವಿ. ಬುಧವಾರ ರಾತ್ರಿಯಿಡಿ ಮಳೆ ಸುರಿದ ಪರಿಣಾಮ ಮಣ್ಣಿನ ಮನೆ ಸಂಪೂರ್ಣ ನೆನೆದಿತ್ತು. ಹಳೆ ಮನೆಯಾಗಿದ್ದರಿಂದ‌ ಗುರುವಾರ ಸಂಜೆ ಏಕಾಏಕಿ ಕುಸಿದು ಬಿದ್ದಿದೆ.

ಮನೆ ಮಾಲೀಕ ಅಶೋಕ ಅವರು ಹಿತ್ತಲಬಾಗಿಲನಲ್ಲಿ ಒಳಬರುತ್ತಿದ್ದ ವೇಳೆ ಛಾವಣಿಯ ಸಂಪೂರ್ಣವಾಗಿ ಅವರ ಮೇಲೆಯೇ ಬಿದ್ದಿದೆ.

ಮುಂಬಾಗಿನಲ್ಲಿ ಇದ್ದ ಮನೆ ಮಂದಿ ತಕ್ಷಣವೇ ತುರ್ತು ಸಹಾಯವಾಣಿ ERSS-112 ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ 112ನ ಎಎಸ್ಐಗಳಾದ ಮಾರುತಿ ಜೋಗದಂಡಕರ್, ಪ್ರಕಾಶ್ ಲಮಾಣಿ ಹಾಗೂ ಸಿಬ್ಬಂದಿ ನಾಗರಾಜ್ ಹೆಬ್ಬಳ್ಳಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಜೆಸಿಬಿ ನೆರವಿನಿಂದ ಮಣ್ಣು ತೆಗೆದು, ಅಶೋಕ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಉಸಿರುಗಟ್ಟಿ ಮೃತಪಟ್ಟಿರುವುದನ್ನು ಖಚಿತಪಡಿಸಿದರು.

ಮುಂಡರಗಿ ಪೊಲೀಸ್ ಠಾಣೆಯ ಎಎಸ್ಐ ಶೇಖರ್ ಕಡಬಿನ‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!