Home Blog Page 3228

ಡೀಸೆಲ್‌ ಟ್ಯಾಂಕರ್-ಬೈಕ್ ಡಿಕ್ಕಿ; ಸುಟ್ಟು ಕರಕಲಾದ ಬೈಕ್ ಸವಾರ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ಡೀಸೆಲ್ ತುಂಬಿದ ಟ್ಯಾಂಕರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಟ್ಯಾಂಕರ್ ಲಾರಿ ಮುಗುಚಿದ ಪರಿಣಾಮ, ಅದರ ರಭಸಕ್ಕೆ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್ ಸವಾರ ಸುಟ್ಟು ಕರಲಾಗಿರುವ ಹೃದಯ ವಿದ್ರಾಹಕ ಘಟನೆ ಭಾನುವಾರ ಬೆಳಿಗ್ಗೆ ಪಟ್ಟಣದ ಹೊರವಲಯದ ದಾವಣಗೆರೆ- ಹೊಳಲು ರಾಜ್ಯಹೆದ್ದಾರಿಯಲ್ಲಿ ನಡೆದಿದೆ.

ಮೂಲತಃ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಗೇರಿ ಗ್ರಾಮದ ಹರಪನಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದ ನಾಗರಾಜ್(32) ಸುಟ್ಟು ಕರಕಲಾಗಿರುವ ದುರ್ದೈವಿ ಬೈಕ್ ಸವಾರ. ಹಿಂಬದಿಯ ಸವಾರ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದ ಚಂದ್ರು(38) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ದಾವಣಗೆರೆ ಕಡೆಯಿಂದ ಹರಪನಹಳ್ಳಿಗೆ ಬರುತ್ತಿದ್ದ ಡೀಸೆಲ್ ತುಂಬಿದ ಲಾರಿ ಟ್ಯಾಂಕರ್ ಹಾಗೂ ಹರಪನಹಳ್ಳಿಯಿಂದ ಜಮೀನಿಗೆ ಹೋಗಿ ಬರುತ್ತಿದ್ದ ಬೈಕ್ ಸವಾರರು, ಪಟ್ಟಣದ ಹೊರವಲಯದ ಕಣಿವೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮುಗುಚಿಬಿದ್ದಿದೆ. ಲಾರಿ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಕ್ಷಣಾರ್ಧದಲ್ಲಿಯೇ ಬೆಂಕಿ ಧಗಧಗಿಸಿದೆ.

ಬೆಂಕಿಯಲ್ಲಿ ಸಿಲುಕಿದ ನಾಗರಾಜ್ ಸುಟ್ಟು ಕರಕಲಾಗಿದ್ದರೆ, ಹಿಂಬದಿ ಸವಾರ ಚಂದ್ರು ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತಿಯೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಹಾಗೂ ತುರ್ತುಸೇವಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಬೆಂಕಿಯನ್ನು ನಿಯಂತ್ರಿಸಿದ್ದಾರೆ.

ಅವಘಡದಲ್ಲಿ ಟ್ಯಾಂಕರ್ ಲಾರಿ, ಬೈಕ್ ಹಾಗೂ ಬೈಕ್ ಸವಾರ ಸಂಪೂರ್ಣವಾಗಿ ಸುಟ್ಟು ಕರುಕಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ನಾಗರಾಜ್ ಕಮ್ಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹರಪನಹಳ್ಳಿ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.

ಸೆಲ್ಫೀ ವಿಡಿಯೋ ಮಾಡಿ ತುಂಗಭದ್ರಾ ನದಿಗೆ ಹಾರಿದ ಯುವಕ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಯಾವುದೋ ಒಂದು ಕ್ಷುಲ್ಲಕ ಕಾರಣವನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವಕನೊಬ್ಬ ಉಕ್ಕಿ ಹರಿಯುತ್ತಿರುವ ನದಿಗೆ ಹಾರಿದ ಘಟನೆ ಬುಧವಾರ ನಡೆದಿದೆ.
ನದಿಗೆ ಹಾರಿದ ಯುವಕನನ್ನು ಮುಂಡರಗಿ ಪಟ್ಟಣದ ನಿವಾಸಿ ವಿಶ್ವನಾಥ್ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಸೆಲ್ಫೀ ವಿಡಿಯೋ ದಾಖಲಿಸಿರುವ ಯುವಕ ‘ನಾನು ಸಾಯಬೇಕೆಂದು ನಿರ್ಧಾರ ಮಾಡಿದ್ದೇನೆ.
ನಾನು ಸಾಕಷ್ಟು ಟೂರ್ನಮೆಂಟ್‌ಗಳಲ್ಲಿ ಆಡಿ ಬಂದಿದ್ದೇನೆ. ನನಗೆ ಜವಾಬ್ದಾರಿಯಿಲ್ಲವಾ? ನನಗೆ ಜವಾಬ್ದಾರಿ ಬರುತ್ತೋ ಬಿಡುತ್ತೋ ಎನ್ನುವದು ನನ್ನ ವೈಯಕ್ತಿಕ ವಿಷಯ. ನನಗೆ ನೀವು ಮಾಡಿರುವ ದ್ರೋಹವನ್ನು ನಾನು ಈ ಕ್ಷಣಕ್ಕೆ ಮರೆತಿದ್ದರೂ, ಎಂದಿಗೂ ಮರೆಯೋದಿಲ್ಲ. ನನ್ನ ಟೀಂನಲ್ಲಿರುವವರೂ ಮರೆಯೋದಿಲ್ಲ. ಟೀಂನಲ್ಲಿರುವ ಎಲ್ಲರೂ ನಮ್ಮವರೇ. ನನ್ನ ಮನಸ್ಸಿಗಾದ ನೋವಿನ ಕಾರಣಕ್ಕೆ ನಾನು ಸಾಯುತ್ತಿದ್ದೇನೆ’ ಎಂದು ರೆಕಾರ್ಡ್ ಮಾಡಿದ ಬಳಿಕ ಕೊರ್ಲಹಳ್ಳಿ ಗ್ರಾಮದ ಬಳಿಯಿರುವ ತುಂಗಭದ್ರಾ ಸೇತುವೆಯ ಮೇಲಿಂದ ನದಿಗೆ ಹಾರಿದ್ದು, ನೋಡನೋಡುತ್ತಿದ್ದಂತೆ ಯುವಕ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಹೋದ ಎನ್ನಲಾಗಿದೆ.

ವಿಜಯ ಶಿಂಧೆಯಿಂದ ಮೋಸಹೋದ ಮಹಿಳೆಯ ಕಣ್ಣೀರು `ಈ ಮನುಷ್ಯ ಹೀಗೆ ಮಾಡ್ಬಾರದಿತ್ರೀ…’

ವಿಜಯಸಾಕ್ಷಿ ಸುದ್ದಿ, ಗದಗ

ವಿಜಯ ಶಿಂಧೆಯನ್ನು ಸಣ್ಣವನಿದ್ದಾಗಿಂದಲೂ ನೋಡಿದ್ದೇವೆ. ನಮ್ಮ ಮನೆಯ ಎದುರೇ ಶಿಂಧೆಯ ಮನೆಯಿತ್ತು. ನಾವು ಪಟ್ಟ ಕಷ್ಟಗಳನ್ನೆಲ್ಲ ಆತ ಕಣ್ಣೆದುರೇ ನೋಡಿದ್ದಾನೆ. ಚಹಾ ಅಂಗಡಿ ನಡೆಸುತ್ತ, ಅದೇ ಆದಾಯದಲ್ಲಿ ಜೀವನವನ್ನೂ ನಡೆಸಿ, ಸ್ವಂತ ಸೂರು ನಿರ್ಮಿಸಿಸಿಕೊಳ್ಳುವ ಕನಸು ಕಂಡು ಶಿಂಧೆಯ ಬಳಿ ನಿತ್ಯವೂ 500-800ರೂ, ಹೀಗೆ ಸಾಧ್ಯವಾದಷ್ಟು ಹಣ ಕಟ್ಟುತ್ತಿದ್ದೆ. ದುಡಿದು ತಿನ್ನುವರ ಹೊಟ್ಟೆಯ ಮೇಲೆ ಈ ಮನುಷ್ಯ ಹೀಗೆ ಬರೆ ಎಳೆಯಬಾರದಿತ್ತು. ನಮ್ಮ ಕಷ್ಟಗಳನ್ನು ಕಣ್ಣಾರೆ ಕಂಡಿದ್ದರೂ ಕೂಡ ಹೀಗೆ ಮೋಸ ಮಾಡಬಾರದಿತ್ತು…’
ವಿಜಯ ಶಿಂಧೆ ಕೋಟ್ಯಾಂತರ ರೂ. ಮೋಸ ಮಾಡಿ ಕಣ್ಮರೆಯಾಗಿ, ಮತ್ತೀಗ ಬಂಧನದ ಸುದ್ದಿ ಗದಗದಲ್ಲಿ ಹರಡುತ್ತಿದ್ದಂತೆಯೇ ಒಂದೊಂದೇ ಪ್ರಕರಣಗಳು ಬಯಲಿಗೆ ಬರುತ್ತಿದ್ದು ಹಣ ಕಳೆದುಕೊಂಡವರು ಕಣ್ಣೀರಿಡುತ್ತಿದ್ದಾರೆ.
ಈತನಲ್ಲಿ ಹಣ ಹೂಡಿದ, ನಿತ್ಯದ ದುಡಿಮೆಯ ಗಳಿಕೆಯನ್ನೇ ನಂಬಿಕೊಂಡಿದ್ದ ಸಣ್ಣ ಸಣ್ಣ ವ್ಯಾಪಾರಸ್ಥರೆಲ್ಲರೂ ಕಂಗಾಲಾಗಿದ್ದಾರೆ. ಹತ್ತಾರು ವರ್ಷಗಳಿಂದ ಶಿಂಧೆಯಲ್ಲಿ ಮನೆ/ನಿವೇಶನ ಖರೀದಿಗಾಗಿ ಲಕ್ಷ ಲಕ್ಷ ರೂ. ಹಣ ನೀಡಿದ್ದ ಸಣ್ಣ ಆದಾಯ ಹೊಂದಿದ ವ್ಯಾಪಾರಸ್ಥರು ದಾರಿ ಕಾಣದಂತಾಗಿದ್ದಾರೆ. ಈ ಮಹಿಳೆ ಪುಷ್ಪಾ ಶೆಟ್ಟರ್, ನಗರದ ಗಾಂಧೀ ಸರ್ಕಲ್ ನಲ್ಲಿ ಸಣ್ಣದೊಂದು ಟೀಸ್ಟಾಲ್ ನಡೆಸುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದವರು. ಸಹಜವಾಗಿಯೇ ಸ್ವಂತದೊಂದು ಮನೆ ನಿರ್ಮಿಸಿಕೊಳ್ಳಬೇಕೆಂದು ಕನಸು ಕಾಣುತ್ತ ಕಳೆದ ಹತ್ತು ವರ್ಷಗಳಿಂದಲೂ ಶಿಂಧೆಯ ಬಳಿ ಆರ್.ಡಿ, ಪಿಗ್ಮಿ ರೂಪದಲ್ಲಿ ನಿಯಮಿತವಾಗಿ ಹಣ ತೊಡಗಿಸುತ್ತಿದ್ದರು. ಇದೀಗ ಶಿಂಧೆಯ ಮೋಸದಾಟ ತಿಳಿಯುತ್ತಿದ್ದಂತೆಯೇ ದಿಕ್ಕು ತೋಚದೇ ಕಣ್ಣಿರಿಡುತ್ತಿದ್ದಾರೆ. ಈಕೆ ಕಳೆದುಕೊಂಡಿದ್ದು ಬರೋಬ್ಬರಿ 21 ಲಕ್ಷ.ರೂ!
ನಮ್ಮದೇ ಮಕ್ಕಳು ಹಣ ಕೇಳಿದರೆ ಯಾಕೆ ಏನು ಎಂದು ವಿಚಾರಿಸಿಯೇ ಹಣ ಕೊಡುತ್ತಿದ್ದ ನಾವು ಈ ಮನುಷ್ಯನನ್ನು ಕಣ್ಣುಮುಚ್ಚಿ ನಂಬಿದ್ದೇ ತಪ್ಪಾಯ್ತೇನೋ. ನಮಗೆ ಮನೆ ಕೊಟ್ಟಿದ್ದು ನಿಜವಾದರೂ, ಆ ಮನೆಯನ್ನ ಬೇರೊಬ್ಬರ ಹೆಸರಿಗೆ ಬರೆದಿದ್ದಾನೆ. ಜಮೀನು ಮಾರಾಟ ಮಾಡಿ ಬಂದ ಹಣವನ್ನೂ ಆತನಿಗೇ ನೀಡಿದ್ದೆವು. ಕೊರೋನಾ ಲಾಕ್ಡೌನ್ ಸಮಯದಲ್ಲಿ ಆದಾಯವೇ ಇಲ್ಲದೆ ಸಂಕಷ್ಟದಲ್ಲಿದ್ದಾಗಲೂ ಯಾರ್ಯಾರಿಂದಲೋ ಸಾಲ ಪಡೆದು ಪಿಗ್ಮಿ ಕಟ್ಟಿದ್ದೇನೆ. ಈ ಮನುಷ್ಯ ಹೀಗೆ ಮಾಡಬಾರದಿತ್ತು.
ಮನೆ/ಜಾಗದ ಮೌಲ್ಯ ಕಡಿಮೆಯೆಂದರೂ 21 ಲಕ್ಷ.ರೂ ಬೆಲೆಬಾಳುತ್ತದೆ. ಹೀಗೆ ಇದ್ದಕ್ಕಿದ್ದಂತೆ ಲಾಸ್ ಆಗಿದೆ ಎಂದು ಹೇಳುತ್ತ ನಾಪತ್ತೆಯಾದರೆ ನಮ್ಮ ಗತಿಯೇನು? ಈಗ ಮನೆಯನ್ನಾದರೂ ಕೊಡಿಸಿ. ಇಲ್ಲವಾದರೆ ಹಣವನ್ನಾದರೂ ಮರಳಿ ಕೊಡಿಸಬೇಕು. ಟೀ ಅಂಗಡಿ ಬಿಟ್ಟರೆ ನಮಗೆ ಬೇರೆ ಆಧಾರವಿಲ್ಲ. ಈತನಿಂದ ಇನ್ನೂ ಸಾಕಷ್ಟು ಜನ ಮೋಸಹೋಗಿದ್ದಾರೆ. ಆದರೆ, ಯಾರೂ ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಪುಷ್ಪಾ ಶೆಟ್ಟರ್ ಕಣ್ಣೀರಿಟ್ಟರು.

ಸಿದ್ದನಕೊಳ್ಳ ಮಠದ ಧರ್ಮಾಧಿಕಾರಿ ಶಿವಕುಮಾರ್ ಸ್ವಾಮಿಗಳಿಗೆ ಪತ್ನಿ‌ ವಿಯೋಗ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ
ಬಾಗಲಕೋಟೆ ಜಿಲ್ಲೆಯ ಅಮೀನಗಡ ತಾಲ್ಲೂಕಿನ ಶ್ರೀ ಕ್ಷೇತ್ರ ಸಿದ್ಧನಕೊಳ್ಳದ ನಿರಂತರ ದಾಸೋಹ ಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ ಸ್ವಾಮೀಜಿಗಳ ಧರ್ಮಪತ್ನಿ ಶ್ರೀಮತಿ. ರೇಖಾ ಕೋಂ. ಶಿವಕುಮಾರ ಕಂಬಾಳಿಹಿರೇಮಠ ಬುಧವಾರ ಅನಾರೋಗ್ಯದ ಕಾರಣ ನಿಧನ ಹೊಂದಿದರು. ಅವರಿಗೆ ಪತಿ, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ. ಮೃತರ ಅಂತ್ಯಕ್ರಿಯೆ ಸಂಜೆ ರೋಣ ತಾಲ್ಲೂಕಿನ ಮಾರನಬಸರಿ ಗ್ರಾಮದಲ್ಲಿ ನೆರವೇರಲಿದೆ.
ಸಂತಾಪ: ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ, ಶಾಸಕ ಕಳಕಪ್ಪ ಬಂಡಿ, ಮಾಜಿ ಶಾಸಕರಾದ ಜಿ.ಎಸ್. ಪಾಟೀಲ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಹೊಂದಿದ ವಾಹನ ಸವಾರರಿಗೆ ಪೊಲೀಸರ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಸಿಬ್ಬಂದಿಗಳು ಜು.11 ರಿಂದ ಜು.16 ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಮೋಟಾರು ವಾಹನ ನಿಯಮ ಉಲ್ಲಂಘಿಸಿದ ಒಟ್ಟು 158 ವಾಹನಗಳ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಕಳೆದ ವರ್ಷವೂ ಇದೇ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು. ಇದಾದ ಬಳಿಕವೂ ದೋಷಪೂರಿತ ಸೈಲೆನ್ಸರ್‌ಗಳ ಬಳಕೆ ಕುರಿತು ಹಲವು ದೂರುಗಳು ಬಂದಿದ್ದವು.
ಶಬ್ದ ನಿಷೇಧಿತ ಪ್ರದೇಶದಲ್ಲಿ ಅತಿಯಾದ ಕರ್ಕಶ ಶಬ್ದ ಮಾಡಿದ ದ್ವಿ ಚಕ್ರವಾಹನ ಸ್ಥಳೀಯ ನಿವಾಸಿಗಳು ಸೇರಿದಂತೆ ಹಲವು ಮಂದಿ ಸ್ಥಳೀಯರು ಕರ್ಕಶ ಶಬ್ದ ಸೈಲೆನ್ಸರ್‌ಗಳ ನಿರಂತರ ಬಳಕೆಯ ಬಗ್ಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದು ಸೈಲೆನ್ಸರ್‌ಗಳನ್ನು ಅಳತೆ ಮಾಡಿ ವಾಹನ ಸವಾರರಿಗೆ ದಂಡ ವಿಧಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ಈ ಕಾರ್ಯಾಚರಣೆ ಮುಂದುವರಿಯುತ್ತದೆ. ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಮಗೆ ದೂರುಗಳು ಬಂದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನಾವು ಕರ್ಕಶ ಶಬ್ದ ಮಾಡುವ ದೋಷಪೂರಿತ ಸೈಲೆನ್ಸರ್ ತಯಾರಕರು ಮತ್ತು ಸ್ಥಳೀಯವಾಗಿ ಅವುಗಳನ್ನು ಅಳವಡಿಸುವಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

80 ಡೆಸಿಬಲ್‌ನ ಮಿತಿಯನ್ನು ದಾಟುವ ಯಾವುದೇ ಸೈಲೆನ್ಸರ್‌ಗಳನ್ನು ದೋಷಯುಕ್ತ ಸೈಲೆನ್ಸರ್‌ಗಳು ಎಂದು ಗುರುತಿಸಲಾಗುತ್ತದೆ. ವಶಪಡಿಸಿಕೊಂಡ ೧೫೮ ಸೈಲೆನ್ಸರ್‌ಗಳನ್ನು ಜೆಸಿಬಿ ಬಳಸಿ ನಾಶಪಡಿಸಲಾಯಿತು.
ಇದೇ ವೇಳೆ ಗದಗ ಠಾಣೆಯ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಾಲೆಹೊಸೂರಿನಲ್ಲಿ ನೂತನ ಬಸ್ ತಂಗುದಾಣ ಉದ್ಘಾಟಿಸಿದ `ಎಮ್ಮೆ!’

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಅಲ್ಲೊಂದು ಭರ್ಜರಿಯಾದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿತ್ತು. ಈ ಬಸ್ ನಿಲ್ದಾಣ ಕಟ್ಟಡದ ಉದ್ಘಾಟನೆ ಯಾವಾಗ ಎಂದು ಎದುರು ನೋಡುತ್ತಿದ್ದ ಜನ ಅದಕ್ಕೊಂದು ಶುಭ ಮುಹೂರ್ತವನ್ನು ನಿಗದಿ ಮಾಡಿಯೇಬಿಟ್ಟರು. ಮಂಗಳವಾರದಂದು ಅವರೆಲ್ಲ ಎದುರುನೋಡುತ್ತಿದ್ದ ಶುಭ ಸಮಯ ಬಂದೇಬಿಟ್ಟಿತು. ಗ್ರಾಮಸ್ಥರೆಲ್ಲರೂ ಸೇರಿ ಉದ್ಘಾಟಕರನ್ನು ಬಿಗಿ ಭದ್ರತೆಯೊಂದಿಗೆ, ದೊಡ್ಡ ಸ್ವರದ ಮೈಕ್ ಸ್ವಾಗತದೊಂದಿಗೆ, ಹೂಮಾಲೆಗಳಿಂದ, ಬ್ಯಾನರ್ ಗಳಿಂದ ಸಿಂಗಾರಗೊಂಡಿದ್ದ ಬಸ್ ನಿಲ್ದಾಣದ ಬಳಿ ಕರೆತಂದು ರಿಬ್ಬನ್ ಕಟ್ ಮಾಡಿಸಿ ಉದ್ಘಾಟಿಸಲಾಯಿತು. ಪ್ರಸ್ತುತ ಲೋಕಾರ್ಪಣೆಗೊಂಡಿದ್ದು ತೆಂಗಿನ ಗರಿಗಳಿಂದ ಸಿದ್ಧಪಡಿಸಿದ್ದ ಬಸ್ ನಿಲ್ದಾಣ ಹಾಗೂ ಉದ್ಘಾಟಿಸಿದ್ದು ಯಾವುದೋ ರಾಜಕಾರಣಿ ಅಥವಾ ಜನಪ್ರತಿನಿಧಿಯಲ್ಲ. ಬದಲಾಗಿ ಉದ್ಘಾಟನೆಗೆಂದು ಆಹ್ವಾನಿಸಿದ್ದು ಒಂದು ಎಮ್ಮೆಯನ್ನು!
 
ನಮ್ಮದೇ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಇಂಥದೊಂದು ವಿನೂತನ ಪ್ರತಿಭಟನೆ ನಡೆದಿದೆ. ರಾಜ್ಯ ರೈತ ಸಂಘ ಆಯೋಜಿಸಿದ್ದ ಈ ವಿನೂತನ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು, ನೂರಾರು ಗ್ರಾಮಸ್ಥರು ಪಾಲ್ಗೊಂಡರು.
ಹಲವು ವರ್ಷಗಳಿಂದ ಬಾಲೆಹೊಸೂರು ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲ. ಬಸ್ ಗಾಗಿ ಕಾಯುವ ಸಂದರ್ಭದಲ್ಲಿ ಗ್ರಾಮಸ್ಥರು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಗಾಗಿ ಕಾಯುವಾಗ ಕುಳಿತುಕೊಳ್ಳಲು, ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಬಸ್ ತಂಗುದಾಣವನ್ನು ನಿರ್ಮಿಸಿಕೊಡಿ ಎಂದು ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯತಕ್ಕೆ, ತಹಶೀಲ್ದಾರರಿಗೆ ವಿನಂತಿ ಮಾಡಿ ಮನವಿ ಸಲ್ಲಿಸಿದ್ದರೂ ಕೂಡ ಇದುವರೆಗೂ ಯಾರೂ ಕಾರ್ಯಪ್ರವೃತ್ತರಾಗಿಲ್ಲ.
ಈ ಹಿಂದೆ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ಗದಗ-ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿಯವರಲ್ಲೂ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡ ಬಸ್ ತಂಗುದಾಣ ನಿರ್ಮಾಣದ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರೆಲ್ಲರೂ ಶಾಸಕ, ಸಂಸದರ ವಿರುದ್ಧ ಕಿಡಿಯಾದರು. ಇದೇ ಕಾರಣಕ್ಕೆ ಇಂದು ಈ ರೀತಿಯಲ್ಲಿ ಪ್ರತಿಭಟಿಸುತ್ತಿದ್ದೇವೆ. ಇಷ್ಟರಮೇಲೂ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಬಸ್ ತಂಗುದಾಣ ನಿರ್ಮಿಸಿಕೊಡದಿದ್ದಲ್ಲಿ ಇನ್ನೂ ಬೇರೆ ವಿಧದ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
`ಶಾಸಕ, ಸಂಸದರ ಅನುದಾನದಡಿಯಲ್ಲಿ ನಿರ್ಮಾಣವಾದ ನೂತನ ಬಸ್ ತಂಗುದಾಣದ ಉದ್ಘಾಟನಾ ಸಮಾರಂಭ’, ` ಮರಣ ಹೊಂದಿದ ಶಾಸಕ-ಸಂಸದರ ಶವಯಾತ್ರೆಯಲ್ಲಿ ಸಾಗುತ್ತಿರುವ ಪಂಚಾಯತ ಸದಸ್ಯರ ಪಾದಯಾತ್ರೆ’ ಎಂದೂ ಬ್ಯಾನರ್ ಕಟ್ಟಿ ರಾಜ್ಯ ರೈತ ಸಂಘ ಹಾಗೂ ಗ್ರಾಮಸ್ಥರೆಲ್ಲರೂ ಆಕ್ರೋಶ ಹೊರಹಾಕಿದರು. ನೂರಾರು ಗ್ರಾಮಸ್ಥರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಯೂಸುಫ್ ಡಂಬಳ‌ ನೇಮಕ

0

ವಿಜಯಸಾಕ್ಷಿ ಸುದ್ದಿ, ಗದಗ 
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಗದಗ ನಗರದ ಮೊಹಮ್ಮದ್ ಯೂಸುಫ್ ಎನ್. ಡಂಬಳ ಅವರನ್ನು ನೇಮಿಸಲಾಗಿದೆ.

ಕೆಪಿಸಿಸಿ ರಾಜ್ಯ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಕೆ ಪುಟ್ಟಸ್ವಾಮಿಗೌಡ ಅವರು ಈ ನೇಮಕ ಮಾಡಿದ್ದಾರೆ.
ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಮೊಹಮ್ಮದ್ ಯುಸೂಫ್ ಎನ್ ಡಂಬಳ ಅವರ ನೇಮಕವನ್ನು ಗೆಳೆಯರು ಹಾಗೂ ಅಭಿಮಾನಿಗಳು ಸ್ವಾಗತಿಸಿ ಅಭಿನಂದಿಸಿದ್ದಾರೆ.

ಸೈಬರ್ ಪೊಲೀಸರ ಕಾರ್ಯಾಚರಣೆ; ಕೋಟಿ ಕೋಟಿ ವಂಚನೆ ಮಾಡಿದ್ದ ಫೈನಾನ್ಸ್ ಮಾಲೀಕ ವಿಜಯ್ ಶಿಂಧೆ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ದೊಡ್ಡ ದೊಡ್ಡ ಕುಳಗಳಿಂದ ಕೋಟ್ಯಾಂತರ ರೂಪಾಯಿಗಳ ವಂಚನೆ ಆರೋಪ ಹೊತ್ತಿದ್ದ ಫೈನಾನ್ಸ್ ಮಾಲೀಕ ಇಲ್ಲಿನ ರಾಜೀವ್ ಗಾಂಧಿ ನಗರದ ನಿವಾಸಿ ವಿಜಯ್ ರಾಘವೇಂದ್ರ ಶಿಂಧೆಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಶ್ರೀ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದ ವಿಜಯ ಶಿಂಧೆ ಗದಗ-ಬೆಟಗೇರಿ ಅವಳಿನಗರದ ಶ್ರೀಮಂತ ಜನರಿಗೆ ಕೋಟ್ಯಾಂತರ ರೂಪಾಯಿಗಳ ವಂಚನೆ ಮಾಡಿದ್ದ.

ನಗರದ ಸ್ಟೇಷನ್ ರಸ್ತೆಯ ನಗರಸಭೆ ಎದುರು ಕಛೇರಿ ತೆರದು ಫೈನಾನ್ಸ್ ದಂಧೆ ನಡೆಸುತ್ತಿದ್ದ ಆರೋಪಿ ವಿಜಯ ಶಿಂಧೆ ಅವಳಿ ನಗರದ ದೋ ನಂಬರ್ ದಂಧೆಕೋರರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಬಡ್ಡಿಹಣ, ನಿವೇಶನ‌ ಹಾಗೂ ಜಮೀನು ‌ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ. ಇದ್ದಕ್ಕಿದ್ದಂತೆ ಕಳೆದ ಎರಡು ವರ್ಷಗಳ ಹಿಂದೆ `ಲಾಸ್ ಆಗೀನಿ’ ಎಂಬ ಫೋಸ್ ಕೊಟ್ಟ ಭೂಪ ವಿಜಯ ಶಿಂಧೆ ದುಡ್ಡು ಹಾಕಿದವರಿಗೆ ಉಂಡೆನಾಮ ಹಾಕಿದ.

ಇದನ್ನು ಕೇಳಿದ ನಂಬರ್ ಟೂ ಬ್ಯುಸಿನೆಸ್ ಮಾಡುವವರೆಲ್ಲಾ ಅದುರಿಹೋದರು. ಹಾಕಿದ ದುಡ್ಡಿಗೆ ಯಾವುದೇ ಪುರಾವೆ ಇಲ್ಲ. ದೊಡ್ಡ ಮೊತ್ತದ ಬಡ್ಡಿ ಬರುವ ದುರಾಸೆಯಿಂದ ಲಕ್ಷ-ಲಕ್ಷ ಹಣ ಕೊಟ್ಟವರು ಹಾಸಿಗೆ ಹಿಡಿದರು!
ಇಷ್ಟೆಲ್ಲಾ ಆದರೂ ಲಾಸ್ ಆದ ಬಗ್ಗೆ ಫೋಸ್ ಕೊಟ್ಟಿದ್ದ ವಿಜಯ ಶಿಂಧೆಯ ಬಗ್ಗೆ ಯಾರೂ ದೂರು ಕೊಡಲು ಮುಂದಾಗಲಿಲ್ಲ. ಆದರೂ ಒಬ್ಬರು ಧೈರ್ಯ ಮಾಡಿ ಆತನ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದರು.

2020ರ ಅಕ್ಟೋಬರ್ ನಿಂದ 2022ರ ಏಪ್ರಿಲ್ 23 ರವರೆಗೆ ಈ ವಂಚನೆ ನಡೆದಿದೆ

2020ರ ಅಕ್ಟೋಬರ್ 1ರಂದು ಹತ್ತು ಲಕ್ಷ ರೂಪಾಯಿ ಹಾಗೂ 407.07 ಗ್ರಾಂ. ಬಂಗಾರದ ಆಭರಣಗಳನ್ನು ನೀವು ಕೇಳಿದಾಗ ಯಾವುದೇ ತಕರಾರು ಇಲ್ಲದೇ ವಾಪಾಸು ಕೊಡ್ತೀನಿ ಅಂತ ಹೇಳಿ ಇದುವರೆಗೂ ಕೊಡದೇ ವಿಜಯ ಶಿಂಧೆ ಮೋಸ ಮಾಡಿದ್ದಾರೆ ಎಂದು ಕಳಸಾಪೂರ ರಸ್ತೆಯ ಸಂತೋಷ ಪ್ರಭಾಕರ್ ಮುತಗಾರ ಎಂಬುವವರು ಸೈಬರ್ ಠಾಣೆಗೆ ಕಳೆದ ತಿಂಗಳು ಅಂದರೆ, ಜೂನ್ 03ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ದೀರ್ಘ ಕಾಲ ತನಿಖೆ ನಡೆಸಿ ಸೋಮವಾರ ಬಂಧಿಸಿ ಕಂಬಿಯ ಹಿಂದೆ ನೂಕಿದ್ದಾರೆ. ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವಿಜಯ ಶಿಂಧೆ ಬಂಧಿಸಿದ ಪೊಲೀಸರ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲದೆ ಹಣ ಹೂಡಿಕೆ ಮಾಡಿದ ಬಗ್ಗೆ ಯಾರಾದರೂ ಸೂಕ್ತ ದಾಖಲೆಗಳನ್ನು ಹೊಂದಿದ್ದರೆ ಸೈಬರ್ ಠಾಣೆಗೆ ಮಾಹಿತಿ ನೀಡಲು ಎಸ್ಪಿ ಶಿವಪ್ರಕಾಶ್ ದೇವರಾಜು ಕೋರಿದ್ದಾರೆ.

ತನಿಖೆಯ ಕುರಿತು ಅಪಸ್ವರ

ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಆರೋಪಿ ವಿಜಯ ಶಿಂಧೆಯ ಬಂಧನದ ಬಗ್ಗೆ ಹಣ ಕಳೆದುಕೊಂಡವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಕಾಟಾಚಾರಕ್ಕೆ ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ವಿಷಯವೇನೇ ಇದ್ದರೂ ಕಳೆದುಕೊಂಡ ಹಣ ವಾಪಸ್ ಸಿಗುವದೂ ಅನುಮಾನವೇ ಎಂಬ ಮಾತುಗಳೂ ಹರಿದಾಡುತ್ತಿವೆ.

ಇಸ್ಪೀಟು ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ; 27 ಜನರ ಬಂಧನ,13 ಸಾವಿರ ರೂ. ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ
 
ಜಿಲ್ಲೆಯ ವಿವಿಧೆಡೆ ಇಸ್ಪೀಟು ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ 27 ಜನರನ್ನು ವಶಕ್ಕೆ ಪಡೆದು ಸುಮಾರು 13 ಸಾವಿರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಮುಳಗುಂದದ ಎರಡು ಕಡೆ, ನರೇಗಲ್ ಹಾಗೂ ಶಿರಹಟ್ಟಿಗಳಲ್ಲಿ ನಾಲ್ಕು ಪ್ರತ್ಯೇಕ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಿ.14ರಂದು ಮುಳಗುಂದ ಪಟ್ಟಣದ ಸವಳಬಾವಿ ಓಣಿಯಲ್ಲಿರುವ ಈಶ್ವರ ದೇವಸ್ಥಾನದ ಎದುರು ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಆಡುತ್ತಿದ್ದ ರಾಜೇಸಾಬ್ ಕಾಶಿಮಸಾಬ್ ಡಾಲಾಯತ್, ಯಲ್ಲಪ್ಪಾ ಶೇಖರಪ್ಪಾ ಬೆಂತೂರು, ಮಹಮದ್ ರಫೀಕ್ ದಾವಲಸಾಬ ಮಾಲದಾರ, ಜಹೀದ್ ಪರ್ಜಲಸಾಬ್ ಡಾಲಾಯತ್, ಈಶಪ್ಪ ಸಿದ್ಧಪ್ಪ ಮೊರಬದ್, ಚೆನ್ನಬಸಪ್ಪ ಶಿದ್ದರಾಮಪ್ಪ ಕಿತ್ತೂರು, ಬಸವರಾಜ ಬಸಲಿಂಗಪ್ಪ ಮಟ್ಟಿ ಇವರನ್ನು ಬಂಧಿಸಿ ಜೂಜಿನಲ್ಲಿ ತೊಡಗಿಸಿಕೊಂಡಿದ್ದ 2900.ರೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ಎಎಸ್ಐ ಬಿ.ಎಂ. ಕುರ್ತಕೋಟಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ದಿನ ಸವಳಬಾವಿ ಓಣಿಯಲ್ಲಿರುವ ಗರಡಿಮನೆಯ ಪಕ್ಕದ ಸಾರ್ವಜನಿಕ ಬಯಲು ಜಾಗದಲ್ಲಿ ಗುಂಪಾಗಿ ಕುಳಿತು ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಚೆನ್ನಪ್ಪ ಫಕೀರಪ್ಪ ಕಲ್ಯಾಣಿ, ಹಸನಸಾಬ್ ನಬಿಸಾಬ್ ಹುಬ್ಬಳ್ಳಿ, ಬಸವರಾಜ ಕೋಶಪ್ಪ ವಸ್ತ್ರದ, ಬಸಪ್ಪ ಸೋಮಪ್ಪ ಲಕ್ಷ್ಮೇಶ್ವರ, ಇಸ್ಮಾಯಿಲ್ ಜಮಾಲಸಾಬನವರ್, ಗೂಳಪ್ಪ ಫಕೀರಪ್ಪ ಕಳಸದ್, ಫಕೀರಪ್ಪ ತಿಪ್ಪಣ್ಣ ಜೋಗಿ, ಮಲ್ಲಪ್ಪ ನೀಲಪ್ಪ ಕೋಳಿವಾಡ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತರಿಂದ ಆಟಕ್ಕೆ ತೊಡಗಿಸಿದ್ದ 3820 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಸದಲಗಿ ಈ ದಾಳಿಯ ನೇತೃತ್ವ ವಹಿಸಿದ್ದರು.
 ನರೇಗಲ್ ಠಾಣಾ ವ್ಯಾಪ್ತಿಯ ಡ.ಸ ಹಡಗಲಿ ಗ್ರಾಮದ ಆಶ್ರಯ ಕಾಲೋನಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದಿರುವ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿಕೊಂಡಿದ್ದ ಪ್ರವೀಣ ಯಮನೂರಪ್ಪ ಚೆಗರಡ್ಡಿ, ಪ್ರಕಾಶ ರುದ್ರಗೌಡ ಪಾಟೀಲ, ಮಂಜುನಾಥ ಪರಸಪ್ಪ ಮಲ್ಲಾಪುರ, ಚನ್ನಬಸನಗೌಡ ವೀರನಗೌಡ್ರ, ಶರಣಪ್ಪ ಸಂಗಪ್ಪ ಮೇಟಿ ಇವರನ್ನು ನರೇಗಲ್ ಠಾಣೆಯ ಪಿಎಸ್ಐ ಕಿರಣಕುಮಾರ್ ಹಾಗೂ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಆರೋಪಿತರಿಂದ ಆಟದಲ್ಲಿ ತೊಡಗಿಸಿದ್ದ 2200ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ನರೇಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿ.15ರಂದು ಶಿರಹಟ್ಟಿ ಠಾಣೆಯಲ್ಲಿ ಇಂಥದೇ ಇಸ್ಪೀಟ್ ಜೂಜಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಶಿರಹಟ್ಟಿ ಜಲ್ಲಿಗೇರಿ ಗ್ರಾಮದ ಸರ್ವೇಶ್ವರ ದೇವಸ್ಥಾನದ ಎದುರಿಗಿರುವ ಯುವಕ ಮಂಡಳಕ್ಕೆ ಸೇರಿದ ಸ್ಥಳದಲ್ಲಿ ಕುಮಾರ ಮುದುಕಪ್ಪ ಚಿಂಚಲಿ, ಮಲ್ಲೇಶ ಶೇಖಪ್ಪ ಕಟಗಿ, ಮಲ್ಲಪ್ಪ ದೇವಪ್ಪ ಕುಳಗೇರಿ, ಕೃಷ್ಣಪ್ಪ ತಿಪ್ಪಣ್ಣ ಗಡೇದ, ಮಂಜಪ್ಪ ಮಲ್ಲಪ್ಪ ತಳವಾರ, ಮಂಜುನಾಥ ಬಸಪ್ಪ ಗುಳ್ಳಣ್ಣವರ್ ಹಾಗೂ ವೆಂಕಟೇಶ ರಾಮಣ್ಣ ಕಲಾಲ ಇವರುಗಳು ಅಂದರ್-ಬಾಹರ್ ಆಟ ಆಡುತ್ತಿದ್ದಾಗ ಪಿಎಸ್ಐ ಪ್ರವೀಣ ಗಂಗೋಳ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿತರನ್ನು ಹಾಗೂ ಆಟದಲ್ಲಿ ತೊಡಗಿಸಿಕೊಂಡಿದ್ದ 4230.ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಿಇಟಿ ನಂತರ ಸಿಇಟಿ ನಡೆಸಿ; ಪ್ರೊ. ಹನಮಂತಗೌಡ್ರ


ವಿಜಯಸಾಕ್ಷಿ ಸುದ್ದಿ, ನರಗುಂದ
ರಾಜ್ಯದಲ್ಲಿ 15000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಶಿಕ್ಷಕ ಹುದ್ದೆಗಳು ಸಂಪೂರ್ಣ ಭರ್ತಿಯಾಗದಿದ್ದಲ್ಲಿ ಡಿಸೆಂಬರ್ ತಿಂಗಳೊಳಗಾಗಿ ಮತ್ತೊಮ್ಮೆ ಸಿಇಟಿ ನಡೆಸಲಾಗುವದೆಂದು‌ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ. ಆದರೆ ಟಿಇಟಿ ನಡೆದ ನಂತರ ‌ಸಿಇಟಿ ನಡೆದರೆ ಉತ್ತಮ ಎಂದು ನರಗುಂದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊಫೆಸರ್‌ ಬಿ.ಸಿ.ಹನಮಂತಗೌಡ್ರ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಟಿಇಟಿ ನಡೆದ ನಂತರ ‌ಸಿಇಟಿ ನಡೆಸಿದರೆ ಬಹಳಷ್ಟು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಮಾನ್ಯ ಶಿಕ್ಷಣ ಸಚಿವರು ಇದಕ್ಕೆ ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

error: Content is protected !!