Home Blog Page 3230

ಬೆಳ್ಳಂಬೆಳಗ್ಗೆ ತಪ್ಪಿದ ಅನಾಹುತ; ಏಳು ಜನ ಪ್ರಾಣಪಾಯದಿಂದ ಪಾರು

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಜನರು ಕಂಗೆಟ್ಟಿದ್ದಾರೆ. ರೋಣ ತಾಲೂಕಿನ ಮೇಗೂರು ಗ್ರಾಮದಲ್ಲಿಯೂ ವರುಣರಾಯನ ಆರ್ಭಟದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಸಂಭವಿಸುತ್ತಿದೆ. ಸಾರ್ವಜನಿಕರು ಮಳೆಯ ಪರಿಣಾಮವಾಗಿ ಶನಿವಾರ ನಸುಕಿನಲ್ಲಿ ಮೇಗೂರಿನ ಶಿವಾನಂದ ಅರಹುಣಸಿ ಎಂಬುವರ ಮನೆಯ ಛಾವಣಿ ಸಂಪೂರ್ಣ ನೆಲಕಚ್ಚಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಶಿವಾನಂದ ಅರಹುಣಸಿ ಎಂಬುವರ ಮನೆಯೊಳಗೆ ರಾತ್ರಿ ಕುಟುಂಬದ ಏಳು ಸದಸ್ಯರು ಮಲಗಿ ನಿದ್ರಿಸಿದ್ದರು. ನಸುಕಿನ ವೇಳೆಯಲ್ಲಿ ದೊಡ್ಡದಾದ ಸದ್ದು ಕೇಳಿಬರತೊಡಗಿತು. ಏಕಾಏಕಿ ಕೇಳಿಬಂದ ಶಬ್ಧ ಎಲ್ಲಿಂದ, ಏನು ಎಂದೂ ಯೋಚಿಸದೇ ತಕ್ಷಣ ಮನೆಯಿಂದ ಹೊರಭಾಗಕ್ಕೆ ಬಂದು ನಿಂತಿದ್ದು ನೋಡನೋಡುತ್ತಿದ್ದಂತೆ ಇಡೀ ಮನೆಯ ಮೇಲ್ಛಾವಣಿ ಕುಸಿದು ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ. ತಕ್ಷಣ ಎಚ್ಚೆತ್ತು ಸ್ಥಳದಿಂದ ಹೊರಕ್ಕೆ ಬಂದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಛಾವಣಿ ಕುಸಿದ ಪರಿಣಾಮವಾಗಿ ಲಕ್ಷಾಂತರ ರೂ. ಮೌಲ್ಯದ ಅಡುಗೆ ಸಾಮಗ್ರಿ ಹಾಗೂ ಇನ್ನಿತರೇ ವಸ್ತುಗಳು ಹಾನಿಗೊಂಡಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಜಿ.ಪಂ ಸದಸ್ಯ ಶಿವಕುಮಾರ ನೀಲಗುಂದ ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ನಾನು ಪಿ.ಎಸ್.ಐ ಅದೀನಲೇ ನಿಮ್ಮೌನ…! ರೋಣದ ವಿದ್ಯಾರ್ಥಿಗೆ ದಮ್ಕಿ

ವಿಜಯಸಾಕ್ಷಿ ಸುದ್ದಿ, ಗದಗ:

ಹಳೆಯ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ವಿದ್ಯಾರ್ಥಿಯೊಬ್ಬನಿಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳಿಂದ ಬೈದು ಫೋನಿನಲ್ಲಿ ಕೀಳುಮಟ್ಟದ ಶಬ್ಧಗಳಿಂದ ಬೈದು ತಾನು ಪಿಎಸ್‌ಐ ಇದ್ದೇನೆ ಎಂದು ಸುಳ್ಳು ಹೇಳಿ ಬೆದರಿಸಿರುವ ಬಗ್ಗೆ ಪ್ರಕರಣವೊಂದು ರೋಣದಿಂದ ವರದಿಯಾಗಿದೆ.

ಘಟನೆಯ ವಿವರ

ದೂರು ನೀಡಿರುವ ವಿದ್ಯಾರ್ಥಿ ರೋಣದ ವಿಜಯ ದೇವಪ್ಪ ಮಡಿವಾಳರ ಆಗಿದ್ದು, ಈತ ನಿತ್ಯ ರೋಣದಿಂದ ಗಜೇಂದ್ರಗಢ ಪಟ್ಟಣದಲ್ಲಿರುವ ಸರ್ಕಾರಿ ಡಿಪ್ಲೋಮಾ ಕಾಲೇಜಿಗೆ ವ್ಯಾಸಂಗಕ್ಕಾಗಿ ಹೋಗುತ್ತಿದ್ದ. ರೋಣದವನೇ ಆದ ಸಂತೋಷ ಫಕೀರಪ್ಪ ಚಲವಾದಿ ಎಂಬ ವ್ಯಕ್ತಿ ಪರಿಚಯದವನಿರುತ್ತಾನೆ.

ಈಗೊಂದು ವರ್ಷದ ಹಿಂದೆ ವಿಜಯ ಮಡಿವಾಳರನ ಸ್ನೇಹಿತ ಸತೀಶ ಉಳ್ಳಾಗಡ್ಡಿ ಎಂಬುವನ ಅಣ್ಣ ಸಂಜು ಉಳ್ಳಾಗಡ್ಡಿ ಈತ ಫಿರ್ಯಾದಿಯ ಸ್ನೇಹಿತ ಸಂತೋಷ ಚಲವಾದಿ ಹಾಗೂ ಇನ್ನೂ ಕೆಲವರ ಮೇಲೆ ಯಾವುದೋ ವಿಷಯಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸಂತೋಷ ಹಾಗೂ ಅವನ ತಮ್ಮ ನಾಗರಾಜ ಚಲವಾದಿ ಇಬ್ಬರೂ ಸೇರಿಕೊಂಡು ಎದುರಾದಾಗಲೆಲ್ಲಾ ನಮ್ಮ ವೈರಿ ಸತೀಶ ಉಳ್ಳಾಗಡ್ಡಿಯ ಜೊತೆ ಅಡ್ಡಾಡಬೇಡ. ಅವನ ಸಹವಾಸ ಬಿಟ್ಟುಬಿಡು. ಇಲ್ಲವಾದರೆ ನಿನಗೂ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಇದಾದ ಬಳಿಕ, ಜುಲೈ.೧ರಂದು ಬೆಳಿಗ್ಗೆ ೮-೩೦ರ ಹೊತ್ತಿಗೆ ಕಾಲೇಜಿಗೆ ತೆರಳುತ್ತಿದ್ದ ವಿಜಯ ಮಡಿವಾಳರ ರೋಣ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಸಂತೋಷ ಚಲವಾದಿ ಇವನ ಹತ್ತಿರವೇ ಬಂದು, `ಲೇಯ್, ಬೋ…ಮಗನೇ ವಿಜಯ, ಶಿವಪೇಟೆಯ ಹುಡುಗ್ರ ಜೊತಿ ಅಡ್ಯಾಡಬೇಡ ಅಂತ ನಿನಗೆ ಮೊದಲೇ ಹೇಳಿದ್ದೆ ಹೌದಿಲ್ಲೋ? ಮತ್ಯಾಕ ಅವರ ಜೋಡಿ ಓಡಾಡ್ತಿದ್ದೀ? ನಿನಗೊಂದು ಗತಿ ಕಾಣಿಸ್ತೇನಿ ನೋಡ್ತಿರು ಎಂದು ಬೆದರಿಕೆ ಹಾಕಿದ್ದ.

ನಂತರ ಜುಲೈ.೪ರ ರಾತ್ರಿ ೮-೫೬ರ ಹೊತ್ತಿಗೆ ವಿಜಯ ಮಡಿವಾಳರ ಮೊಬೈಲ್ ನಂಬರಿಗೆ ಕರೆಯೊಂದು ಬಂದಿದ್ದು, ಯಾರು ಮಾತಾಡ್ತಿರೋದು ಅಂತ ಕೇಳಿದಾಗ ಆ ವ್ಯಕ್ತಿಯು`ಸಂತೂಗೆ ಏನು ಮಾತಾಡಿದಿ ನೀನು? ನಾನು ಪಿ.ಎಸ್.ಐ ಅದೀನಲೇ ಎಂದು ಧಮಕಿ ಹಾಕಿ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಸಿದ್ದಾರೆ.

ಅಲ್ಲದೇ ಅದೇ ದಿನ ರಾತ್ರಿ ೧೦ ಗಂಟೆಯ ಹೊತ್ತಿಗೆ ಆರೋಪಿ ಸಂತೋಷ ಹಾಗೂ ನಾಗರಾಜ ಫಕೀರಪ್ಪ ಚಲವಾದಿ ಇಬ್ಬರೂ ಕೂಡಿಕೊಂಡು ವಿಜಯನ ಮನೆಯ ಬಳಿಯೇ ಬಂದು ಅವನ ತಂದೆ ದೇವಪ್ಪ ಮಡಿವಾಳರ ಇವರಿಗೆ `ನಿಮ್ಮ ಮಗ ವಿಜಯನಿಗೆ ಬುದ್ಧಿ ಹೇಳಿ. ಸತೀಶ ಉಳ್ಳಾಗಡ್ಡಿ ಸಂಗಡ ಅಡ್ಡಾಡಲಿಕ್ಕೆ ಬಿಡಬೇಡ್ರಿ. ಹಾಗೆ ಮತ್ತೆ ಅಡ್ಡಾಡಿದ್ದು ಕಂಡಿದ್ದೇ ಹೌದಾದರೆ ಆತನನ್ನು ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ದಾಖಲಿಸಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರೋಣದ ಪೊಲೀಸರು ತನಿಖೆ ನಡೆಸಿದ್ದಾರೆ.

ಬಿ.ಡಿ.ಹಿರೇಮಠ ಬಂಧನ ಖಂಡಿಸಿ ಬೇಡ ಜಂಗಮರಿಂದ ಬೃಹತ್ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ರಾಜ್ಯದ ಬೇಡ ಜಂಗಮರಿಗೆ ಸಂವಿಧಾನಿಕವಾಗಿ ಸಿಗಬೇಕಾದ ಜಾತಿ ಪ್ರಮಾಣ ಪತ್ರ ಪಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸತ್ಯ ಪ್ರತಿಪಾದನಾ ಸತ್ಯಾಗ್ರಹದ ನೇತ್ರತ್ವ ವಹಿಸಿದ್ದ ಬಿ.ಡಿ.ಹಿರೇಮಠ ಅವರನ್ನು ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ತಾಲ್ಲೂಕಾ ಬೇಡ ಜಂಗಮ ಸಮಾಜದವರಿಂದ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಹೃದಯ ಭಾಗದಲ್ಲಿರುವ ನೀಲಮ್ಮನ ಕೆರೆಯ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ್ ಅನಿಲ ಬಡಿಗೇರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕಾ ಬೇಡ ಜಂಗಮ ಸಮಾಜದ ಅಧ್ಯಕ್ಷ ಶ್ರೀಶೈಲ ಮೂಲಿಮನಿ ಮಾತನಾಡಿ, ಬೇಡ ಜಂಗಮರ ಜಾತಿ ಪ್ರಮಾಣ ಪತ್ರಕ್ಕಾಗಿ ಹಮ್ಮಿಕೊಂಡಿದ್ದ ಸತ್ಯಾಗ್ರಹದಲ್ಲಿ ರಾಜ್ಯಾಧ್ಯಕ್ಷರಾದ ಬಿ.ಡಿ.ಹಿರೇಮಠ ಅವರು ಮುಖ್ಯಮಂತ್ರಿಗಳ ಮನೆಗೆ ಮನವಿ ಕೊಡಲು ಹೋಗುವ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಬೇಡ ಜಂಗಮರ ಹೋರಾಟಕ್ಕೆ ಮಾಡುತ್ತಿರುವ ಅನ್ಯಾಯವಾಗಿದ್ದು ತಕ್ಷಣವೇ ಅವರನ್ನು  ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಏಯ್ ಸುಮ್ನೆ ಕುತ್ಕೊಳಪಾ, ನೀನು ಇಡೀ ಊರನ್ನೇ ಲೂಟಿ ಮಾಡಿದ್ದು ಗೊತ್ತಿದೆ; ನಗರಸಭೆ ಅಧ್ಯಕ್ಷೆ ಉಷಾ ದಾಸರ ಏಕವಚನ ಪ್ರಯೋಗ

ಸಿಎಂಸಿ ವಿರೋಧ ಪಕ್ಷದ ನಾಯಕರಿಗೆ ಏಕವಚನ ಪದ ಪ್ರಯೋಗಿಸಿದ ಉಷಾ!!

ಪ್ರತಿಪಕ್ಷದ ಆಕ್ರೋಶಕ್ಕೆ ಬೇಸತ್ತು ಕಣ್ಣೀರು ಸುರಿಸುತ್ತಾ ಸಭಾತ್ಯಾಗಕ್ಕೆ ಮುಂದಾದ ಅಧ್ಯಕ್ಷೆ ದಾಸರ್

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆಯ ವಿಶೇಷ ಸಾಮಾನ್ಯ ಸಭೆ ಕದನ ಕುತೂಹಲದ ಘಟ್ಟ ತಲುಪಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ್ ದಾಸರ್ ಪ್ರತಿಪಕ್ಷದ ನಾಯಕ ಎಲ್.ಡಿ.ಚಂದಾವರಿ ವಿರುದ್ಧ ಏಕವಚನ ಪದ ಪ್ರಯೋಗಿಸಿ, ಕೊನೆಗೆ ಅಳುತ್ತಲೇ ಸಭೆಯಿಂದ ಹೊರನಡೆಯಲು‌ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ನಗರಸಭೆಗೆ ಸ್ಥಾತಿ ಸಮಿತಿ ಸದಸ್ಯರ ಆಯ್ಕೆ ಹಾಗೂ ನಗರಸಭೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಹೈಸ್ಕೂಲ್ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಬುಧವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.

ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರತಿ ಪಕ್ಷದ ನಾಯಕ ಎಲ್‌.ಡಿ. ಚಂದಾವರಿಯವರು ಎರಡು ತಿಂಗಳಿನಿಂದ ಸಭೆ ನಡೆದಿಲ್ಲ, ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ನೀವು ನಾಲ್ಕು ಜನ ಪಿಎಗಳನ್ನ ಇಟ್ಟುಕೊಂಡು ಏನು ಪ್ರಯೋಜನವಾಗಿಲ್ಲ ಎನ್ನುತ್ತಿದ್ದಂತೆ ಅಧ್ಯಕ್ಷೆ ಉಷಾ ಮಹೇಶ್ ದಾಸರ್ ಹರಿ ಹಾಯ್ದರು.

“ಏಯ್ ಸುಮ್ನೆ ಕುತ್ಕೊಳಪಾ, ನೀನು ಇಡೀ ಊರನ್ನೇ ಲೂಟಿ ಮಾಡಿದ್ದು ನಮಗೂ ಗೊತ್ತಿದೆ. ಇಟ್ಕೊಂಡಿದಿನಿ ಅಂದ್ರೆ ಏನರ್ಥ? ಅವರು ನನ್ನ ಸಹೋದರ ಸಮಾನರು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷೆಯ ಪದಪ್ರಯೋಗದಿಂದ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.

ಇನ್ನುಳಿದ ಸದಸ್ಯರು ಪ್ರತಿಭಟನಾನಿರತ ಸದಸ್ಯರ ಮನವೊಲಿಸಿ ಚರ್ಚೆ ಆರಂಭಿಸುತ್ತಿದ್ದಂತೆ ಕಣ್ಣಾಲಿ ತೇವಗೊಂಡ ಉಷಾ ದಾಸರ್ ಅಳುತ್ತಲೇ ಸಭೆಯಿಂದ ನಿರ್ಗಮಿಸಲು ಮುಂದಾದರು. ಬಿಜೆಪಿ ಸದಸ್ಯರು ಅವರನ್ನು ಸಮಾಧಾನಪಡಿಸಿ, ಸಭೆ ಮುಂದುವರಿಯಲು ಸಹಕರಿಸಿದರು.

ತಾಯಿ ಬಿಟ್ಟು ಅಗಲಿದ್ದ ಜಿಂಕೆ ಮರಿ ರಕ್ಷಣೆ; ಝೂಗೆ ಹಸ್ತಾಂತರ ಮಾಡಿದ ಗ್ರಾ.ಪಂ ಅಧ್ಯಕ್ಷ

ಪ್ರಾಣಿ ಸಂಗ್ರಹಾಲಯಕ್ಕೆ ಜಿಂಕೆ ಮರಿ ಹಸ್ತಾಂತರ ಮಾಡಿದ ಗ್ರಾಪಂ ಅಧ್ಯಕ್ಷ ದಾವಲಸಾಬ ಹಿತ್ತಲಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಜಿಂಕೆ ಮರಿಯೊಂದು ತಾಯಿ ಬಿಟ್ಟು ಅಗಲಿದ ಘಟನೆ ನಡೆದಿದೆ. ಹೌದು ಬೆಳಹೋಡ ಗ್ರಾಮದ ಸಿದ್ದಪ್ಪ ಹುಲಕೋಟಿ ಹಾಗೂ ನಾಗಪ್ಪ ಕುರಡಗಿ ಎಂಬ ರೈತರು ಜಮೀನ ಕೆಲಸಕ್ಕೆಂದು ಹೋಗಿದ್ದರು. ಆ ವೇಳೆ ಜಿಂಕೆಯೊಂದು ಮರಿಯನ್ನು ಜಮೀನಲ್ಲಿ ಬಿಟ್ಟು ಹೋಗಿದೆ.

ಜಿಂಕೆ ಮರಿಯನ್ನು ಕಂಡ ರೈತರು ತಕ್ಷಣ ಹಿಡಿಕೊಂಡು ಗ್ರಾಮ ಪಂಚಾಯತಿಗೆ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಓ ಅನಿತಾ ಕೊಟ್ಟಿಗೆ ಅವರ ಕೈಯಲ್ಲಿ ಕೊಟ್ಟು ಇದನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಕೋರಿದ್ದಾರೆ.

ವಿಷಯ ತಿಳಿದ ಗ್ರಾಮ ಪಂಚಾಯತ್ ಅಧ್ಯಕ್ಷ ದಾವಲಸಾಬ್ ಹಿತ್ತಲಮನಿ ಹಾಗೂ ಸದಸ್ಯ ಗೂಳಪ್ಪ ಬೇರೆನವರ ಅವರು ಪ್ರಾಣಿ ಸಂಗ್ರಹಾಲಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು.

ಗ್ರಾಪಂ ಅಧ್ಯಕ್ಷ ದಾವಲಸಾಬ್ ಹಿತ್ತಲಮನಿ ಹಾಗೂ ಸದಸ್ಯ ಗೂಳಪ್ಪ ಅವರು ಬಿಂಕದಕಟ್ಟಿಯಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಜಿಂಕೆ ಮರಿಯನ್ನು ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಮಾನವೀಯತೆ ಮೆರೆದ ರೈತರು ಹಾಗೂ ಗ್ರಾಮ ಪಂಚಾಯಿತಿಯವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಕ್ಕಳನ್ನು ಎಳೆದುಕೊಂಡು ಹೋದ ಹುಬ್ಬಳ್ಳಿಯ ಪುಂಡರು!

ವಿಜಯಸಾಕ್ಷಿ ಸುದ್ದಿ, ಗದಗ:

ಮನೆಯೊಳಗೆ ನುಗ್ಗಿದ ಪುಂಡರ ಗುಂಪೊಂದು ಮನೆಯಲ್ಲಿದ್ದ ಮಹಿಳೆ ಹಾಗೂ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಬೈದು ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನೂ ಬಲವಂತವಾಗಿ ತಮ್ಮೊಂದಿಗೆ ಎಳೆದೊಯ್ದ ಪ್ರಕರಣ ಭಾನುವಾರ ಗದಗದಲ್ಲಿ ನಡೆದಿದೆ.

ಕಳಸಾಪುರ ರಸ್ತೆಯ ನಂದೀಶ್ವರ ನಗರದ ಸುಕನ್ಯಾ ಜೀವನಕುಮಾರ್ ಪಾರ್ಷಾ ದೂರುದಾರರಾಗಿದ್ದಾರೆ. ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ಚಾಕು ಹಾಗೂ ಇನ್ನಿತರ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ಹುಬ್ಬಳ್ಳಿಯ ಚೇತನ ಕಾಲೋನಿಯ ಜೀವನಕುಮಾರ್ ಪಾರ್ಷಾ ಹಾಗೂ ಇನ್ನಿತರರ ಗುಂಪು, ಸುಕನ್ಯಾ ಅವರಿಗೆ ಹಾಗೂ ಅವರ ಸಂಬಂಧಿಗಳಿಗೆ ಹೊಡೆದು, ಅವಾಚ್ಯ ಶಬ್ಧಗಳಿಂದ ಬೈದು, ಕಾಲಿನಿಂದ ಒದ್ದು, ಹೊಡೆದಿದ್ದಾರೆ.

ಅಷ್ಟೇ ಅಲ್ದೇ`ನಿಮ್ಮನ್ನೆಲ್ಲಾ ಸಾಯಿಸಿಬಿಡ್ತೀನಿ, ನಿನ್ನ ಹಿಂದೆ ಎಷ್ಟೇ ಜನ ಬಂದ್ರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ, ನಿಮ್ಮ ಸಂಬಂಧಿಕರನ್ನೂ ಸುಮ್ಮನೇ ಬಿಡುವದಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಡೋದಿದ್ದರೂ ಕೊಡಿ ನೋಡೋಣ’ ಎಂದು ಬೆದರಿಸಿ, ಸುಕನ್ಯಾರ ಮಕ್ಕಳಾದ ಏಳು ವರ್ಷದ ರಿತ್ವಿಕ ಪಾರ್ಷಾ ಹಾಗೂ ಐದು ವರ್ಷದ ರಚಿತಾ ಪಾರ್ಷಾರನ್ನು ಹೆದರಿಸಿ ಬಲವಂತವಾಗಿ ಎತ್ತಿಕೊಂಡು ಹೊರಗಿನಿಂದ ಮನೆಯ ಬಾಗಿಲು ಚಿಲಕ ಹಾಕಿ ಅವರು ಬಂದಿದ್ದ ವಾಹನದಲ್ಲಿ ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಸದರಿ ಪ್ರಕರಣದ ಬಗ್ಗೆ ಜೀವನಕುಮಾರ್ ಪಾರ್ಷಾ, ಬರ್ನಾಬಸ್ ಪಾರ್ಷಾ, ಪುಲ್ಲಯ್ಯ ಪಾರ್ಷಾ, ಪ್ರೇಮಮ್ಮ ಪಾರ್ಷಾ ಹಾಗೂ ವಿಜಯಕುಮಾರಿ ಗದ್ದಮ್ ಇನ್ನಿತರರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವದಾಗಿ ತಿಳಿದುಬಂದಿದೆ.

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಕೊಲೆ

ರಾಜ್ಯದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji ) ಅವರನ್ನು ಹುಬ್ಬಳ್ಳಿಯಲ್ಲಿ ಕೊಲೆ (Murder in Hubli) ಮಾಡಲಾಗಿದೆ, ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಹುಬ್ಬಳ್ಳಿಯ ಉಣಕಲ್ ನ ಖಾಸಗಿ ಹೋಟೆಲ್ ನಲ್ಲಿ ಹತ್ಯೆ ನಡೆದಿದೆ. ಹೋಟೆಲ್‌ reception ಬಳಿ ಕೊಲೆ ನಡೆದಿದೆ ಎಂದು ವರದಿಯಾಗಿದೆ. ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಚಂದ್ರಶೇಖರ್ ಗುರೂಜಿ ಸರಳವಾಸ್ತು ಮೂಲಕ ಜನಪ್ರಿಯಗಳಿಸಿದವರು. ಚಂದ್ರಶೇಖರ್ ಅವರು ಭಾರತ ಮತ್ತು ವಿದೇಶಗಳಲ್ಲಿ ವಾಸ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಭಕ್ತರ ವೇಷ ಧರಿಸಿ ಬಂದು ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ. ಗುರೂಜಿ ಕೆಳಗೆ ಬೀಳುತ್ತಿದ್ದಾಗ ಮತ್ತೆ ಚಾಕುವಿನಿಂದ ಇರಿದು ಓಡಿಹೋಗಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ದೃಶ್ಯಗಳು ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಘಟನಾ ಸ್ಥಳಕ್ಕೆ ಶ್ವಾನದಳವನ್ನು ಕರೆತರಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ರೌಡಿ ಶೀಟರ್ಸ್ ಪರೇಡ್; ಡಿವೈಎಸ್ಪಿ ಬಿರಾದಾರ್ ಖಡಕ್ ವಾರ್ನಿಂಗ್

ವಿಜಯಸಾಕ್ಷಿ ಸುದ್ದಿ, ಗದಗ:

ಬೆಟಗೇರಿ ಬಡಾವಣೆ, ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಶೀಟರ್ಗಳಿಗೆ ಪೊಲೀಸ್ ಪರೇಡ್ ನಡೆಸಲಾಯಿತು. ನಗರದ ಹೆಲ್ತ್ ಕ್ಯಾಂಪ್ ಬಳಿರುವ ಪೊಲೀಸ್ ಕ್ವಾರ್ಟರ್ಸ್ ನಲ್ಲಿ 40ಕ್ಕೂ ಹೆಚ್ಚು ರೌಡಿ ಶೀಟರ್ಗಳನ್ನು ಕರೆಯಿಸಿ, ಯಾವುದೇ ರೀತಿಯ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಕೊಳ್ಳದಂತೆ ಖಡಕ್ ಎಚ್ಚರಿಕೆ ನೀಡಲಾಯಿತು.

ಈಗಾಗಲೇ ಬೇರೆಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ಗಳಿಗೆ ಡಿವೈಎಸ್ಪಿ ವಿಜಯ ಬಿರಾದಾರ್, ಇನ್ನು ಮುಂದೆ ಇಂಥಹ ಕೀಳು ಮಟ್ಟದ ಕೆಲಸಗಳನನು ಬಿಟ್ಟು ಶಾಂತ, ಮರ್ಯಾದಸ್ಥ ಉದ್ಯೋಗ ಮಾಡಿ ರೌಡಿಗಳು ಎಂಬ ಹಣೆಪಟ್ಟಿಯನ್ನು ಕಳಚಿ ಜೀವನ ನಡೆಸಿ ಎಂದು ಬುದ್ಧಿವಾದ ಹೇಳಿದರು. ಮುಂದಿನ ದಿನಗಳಲ್ಲಿ ಇಂಥ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿ ಠಾಣೆಯ ಮೆಟ್ಟಿಲು ಹತ್ತುವಂತಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ರೌಡಿ ಶೀಟರ್ ಪರೇಡ್ ಸಮಯದಲ್ಲಿ ಬೆಟಗೇರಿಯ ಸಿಪಿಐ ಬಿ.ಜಿ.ಸುಬ್ಬಾಪೂರಮಠ, ಬಡಾವಣೆಯ ಪಿಎಸ್ಐ ಆರ್.ಆರ್.ಮುಂಡೆವಾಡಗಿ, ಬೆಟಗೇರಿಯ ಪಿಎಸ್ ಐ ಪ್ರಕಾಶ ಬಣಾಕಾರ, ಪಿಎಸ್ಐ(ಕ್ರೈಂ) ಎಚ್.ಎಚ್.ನೀಲಗುಂದ, ಎಎಸ್ಐ ಎಮ್.ಎಸ್.ಪಾಟೀಲ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ಶಿರಹಟ್ಟಿ ತಾಲ್ಲೂಕಿನಲ್ಲಿ ಡಬಲ್ ಮರ್ಡರ್; ಮಲಗಿದ್ದ ಇಬ್ಬರು ಯುವಕರನ್ನು ಕೊಲೆಗೈದ ಹಂತಕನಿಗೆ ಥಳಿತ!

ಚಿಕನ್ ಊಟ ಮಾಡಿದ‌ ಮನೆಯಲ್ಲೇ ಎರಡು ಹೆಣ ಉರುಳಿಸಿ ಕಿರಾತಕ..

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ರಾತ್ರಿ ಹೊಟ್ಟೆತುಂಬ ಚಿಕನ್ ಊಟ ಮಾಡಿ ಮನೆ ಮೇಲೆ ಮಲಗಿದ್ದ ಇಬ್ಬರು ಯುವಕರನ್ನು ವ್ಯಕ್ತಿಯೊಬ್ಬ ಮನಬಂದಂತೆ ದೊಡ್ಡದಾದ ಬಡಿಗೆಯಿಂದ ತಲೆಗೆ ಹೊಡೆದು ಕೊಲೆಗೈದ ಅಮಾನುಷ ಘಟನೆ ತಾಲ್ಲೂಕಿನ ಕೆರಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

ಫಕ್ಕಿರೇಶ್ ಮಾಚೇನಹಳ್ಳಿ(17) ಮಹಾಂತೇಶ್ ಮಾಚೇನಹಳ್ಳಿ (28) ಕೊಲೆಗೀಡಾದ ದುರ್ದೈವಿಗಳು.

ಅಲಗಿಲವಾಡ ಗ್ರಾಮದ ನಿವಾಸಿ ಅರೋಪಿ ಮಂಜುನಾಥ್(40) ಕೊಲೆ ಮಾಡಿದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ರಾತ್ರಿ ಕೊಲೆಯಾದ ಯುವಕನ ತಾಯಿ ಮೂವರು ಜನ್ರಿಗೆ ಚಿಕನ್ ಊಟ ಮಾಡಿ ಹೊಟ್ಟೆತುಂಬಾ ಊಟ ಮಾಡಿಸಿದ್ದಾಳೆ. ಆದ್ರೆ ಆರೋಪಿ ಮಂಜುನಾಥ್ ಮೊದಲೇ ಸ್ಕೆಚ್ ಹಾಕಿದ ರೀತಿಯಲ್ಲಿ ನಸುಕಿನ ಜಾವ ಎದ್ದವನೇ ಮಹಾಂತೇಶ್ ಎಂಬಾತನ ತಲೆ ಮೇಲೆ ಬಡಗೆಯಿಂದ ಬಲವಾಗಿ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.

ತಕ್ಷಣವೇ ಮಹಾಂತೇಶ್ ಚೀರುತ್ತಿದ್ದಂತೆಯೇ ಪಕ್ಕದಲ್ಲಿಯೇ ಮಲಗಿದ್ದ ಫಕ್ಕೀರೇಶ್ ಎಚ್ಚರವಾಗಿ ಕೂಗುತ್ತಿದ್ದಂತೆಯೇ ಆತನ ಮೇಲೂ ಬಡಿಗೆಯಿಂದ ತಲೆಗೆ ಹೊಡಿದಿದ್ದಾನೆ. ಮಲಗಿದಲ್ಲೇ ಇಬ್ಬರು ಯುವಕರ ಉಸಿರು ನಿಲ್ಲಿಸಿದ್ದಾನೆ. ಇಬ್ಬರನ್ನು ಮನಬಂದಂತೆ ಥಳಿಸಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರ ಮಧ್ಯಯೇ ಚಿರಾಟ ಕೇಳಿದ ಮನೆ ಮಂದಿ, ಮನೆ ಮೇಲೆ ಬಂದು ನೋಡುವಷ್ಟರಲ್ಲಿ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ದಂಗಾಗಿದ್ದಾರೆ.

ಕೂಡಲೇ ಅಕ್ಕಪಕ್ಕದ ಜನರು ಎಚ್ಚೆತ್ತುಕೊಂಡು ಆರೋಪಿ ಮಂಜುನಾಥ್ ನನ್ನು ಹಿಡಿಯಲು ಹೋಗಿದ್ದಾರೆ. ಅವರ ಮೇಲೂ ದಾಳಿಗೆ ಮುಂದಾಗಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಜನರು ಆತನನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ತರ ಆಕ್ರಂಧನ ಮುಗಿಲು ಮುಟ್ಟಿದೆ. ಕೊಲೆಗೈದ ಆರೋಪಿ ಮಂಜುನಾಥನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದ ಶಿರಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಮಂಜುನಾಥ್ ನನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಎಸ್ಸಿ ಶಿವಪ್ರಕಾಶ್ ದೇವರಾಜ್, ಡಿವೈಎಸ್ಪಿ ವಿಜಯ ಬಿರಾದಾರ, ಇನ್ಸ್‌ಪೆಕ್ಟರ್ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಪ್ಪತಗುಡ್ಡದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಆತಂಕದಲ್ಲಿ ಗ್ರಾಮಸ್ಥರು

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ತಾಲೂಕಿನ ಡೋಣಿ ಗ್ರಾಮದ ಕಪ್ಪತಗುಡ್ಡದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮದ ಜನತೆಯಲ್ಲಿ ಆತಂಕ ಮೂಡಿಸಿದೆ. ಬುಧವಾರ ಮುಂಜಾನೆಯ ಸಮಯದಲ್ಲಿ ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಕೆಲ ದಾರಿಹೋಕರು ಚಿರತೆಯು ರಸ್ತೆಯಂಚಿನ ಕಾಡಿನಲ್ಲಿ ಅಡ್ಡಾಡುತ್ತಿರುವದನ್ನು ಗಮನಿಸಿದ್ದಲ್ಲದೇ, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಂದೊಬ್ಬರಿಗೆ ಹಂಚುವ ಮೂಲಕ ವೈರಲ್ ಆಗುತ್ತಿದೆ.

ಈ ಹಿಂದೆಯೂ ಕೂಡ ಕಪ್ಪತಗುಡ್ಡದ ಸರಹದ್ದಿನಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರೆಲ್ಲರೂ ಭಯಭೀತರಾಗಿದ್ದಾರೆ.

error: Content is protected !!