Home Blog Page 3230

ನಾಲ್ವರು ಮಕ್ಕಳಿಗೆ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಶರಣಾದ ಮಾಜಿ ಯೋಧ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ:

ತಂದೆ ತನ್ನ ನಾಲ್ವರು ಮಕ್ಕಳಿಗೆ ವಿಷ ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.

ಗೋಪಾಲ ದೊಡ್ಡಪ್ಪ ಹಾದಿಮನಿ, ಮಹಾದೇವಿ (46), ಸೌಮ್ಯಾ (19) ಸ್ವಾತಿ (16), ಸಾಕ್ಷಿ (12), ಸೃಜನ ಮೃತರು.

ಗೋಪಾಲ ಮಾಜಿ ಯೋಧನಾಗಿದ್ದು, ಪತ್ನಿಯು ಜು.6ರಂದು ಬ್ಲಾಕ್ ಫಂಗಸ್ ನಿಂದ ತೀರಿಕೊಂಡಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಾಜಿ ಯೋಧ ಇದೇ ಕಾರಣಕ್ಕೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಂಕೇಶ್ವರ ಸರ್ಕಾರ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹಗಳನ್ನು ಹೊರತರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟ್ಟ ಕಂದಮ್ಮನ ಮೃತದೇಹ ಕಂಡು ಗ್ರಾಮಸ್ಥರು ಮಮ್ಮಲ‌ ಮರುಗಿದರು.
ಸಂಕೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಡೆತ್ ನೋಟ್, ಇಪ್ಪತ್ತು ಸಾವಿರ ರೂ.ಪತ್ತೆ

ನಮ್ಮ ಸಾವಿಗೆ ನಾವೇ ಕಾರಣ. ಬೇರೆ ಯಾರೂ ಅಲ್ಲ. ಇಪ್ಪತ್ತು ಸಾವಿರ ಹಣವಿದೆ. ಅಂತ್ಯಕ್ರಿಯೆಗೆ ಬಳಸಿ. ಅಂತ್ಯಕ್ರಿಯೆ ನಡೆಸಿದವರಿಗೆ ಧನ್ಯವಾದಗಳು ಎಂದು ಡೆತನೋಟ್ ನಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

ವಿಜಯಸಾಕ್ಷಿ ವರದಿ ಫಲಶ್ರುತಿ; ಕ್ರೀಡಾಪಟುಗೆ ಆರ್ಥಿಕ ಸಹಾಯ

0

ವಿಜಯಸಾಕ್ಷಿ ಸುದ್ದಿ,ಕೊಪ್ಪಳ

ತಾಲೂಕಿನ ಗಬ್ಬೂರು ಗ್ರಾಮದ ಕ್ರೀಡಾಪಟು ಎರಿಸ್ವಾಮಿ ಹರಿಜನ ಅವರಿಗೆ ಕೊಪ್ಪಳದ ಡಿಆರ್ ಎಎಸ್ಐ ಚಂದ್ರಪ್ಪ ಶಿಡ್ಲಪ್ಪನವರ ಅವರು ಆರ್ಥಿಕ ಸಹಾಯ ನೀಡಿದರು.

ಕ್ರೀಡಾಪಟು ಎರಿಸ್ವಾಮಿ ಹರಿಜನ ಅವರ ಕುರಿತು ಪತ್ರಿಕಾ ವರದಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡ ಸುದ್ದಿ ನೋಡಿದ ಚಂದ್ರಪ್ಪ ಅವರು ಗಬ್ಬೂರು ಗ್ರಾಮಕ್ಕೆ ತೆರಳಿ ಎರಿಸ್ವಾಮಿ ತಾಯಿಗೆ 15 ಸಾವಿರ ರೂಪಾಯಿ ನಗದು ನೀಡಿ ಶುಭ ಕೋರಿದರು.

ಗದಗ ನಗರದ ಶ್ರೀ ಪ್ರಭುರಾಜೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಓದುತ್ತಿರುವ ಎರಿಸ್ವಾಮಿ ರಾಷ್ಟ್ರಮಟ್ಟದ ಥ್ರೋಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ. ಇದೇ ಅಕ್ಟೋಬರ್ 29ರಿಂದ 31ರವರೆಗೆ ಹರಿಯಾಣ ರಾಜ್ಯದ ರೋಥಕ್ ಎಂ.ಡಿ. ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸೀನಿಯರ್ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಇದೇ ಅಕ್ಟೋಬರ್ 25 ರಿಂದ 29 ರವರೆಗೆ ಎರಿಸ್ವಾಮಿಗೆ ಪರೀಕ್ಷೆಗಳಿವೆ. ಹಾಗಾಗಿ ಟೀಮ್ನೊಂದಿಗೆ ಹರಿಯಾಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿಸಿಕೊಂಡು ಸ್ವಂತ ಖರ್ಚಿನಲ್ಲಿ ಹೋಗಬೇಕೆಂದರೆ ಆರ್ಥಿಕ ಸಮಸ್ಯೆ ಎದುರಾಗಿದೆ. ಇದನ್ನು ಗಮನಿಸಿದ ಚಂದ್ರಪ್ಪ ಅವರು ಆರ್ಥಿಕ ಸಹಾಯ ನೀಡಲು ಮುಂದೆ ಬಂದರು.

ಕಷ್ಟದಿಂದಲೇ ಮೇಲೆ ಬಂದ ಚಂದ್ರಪ್ಪ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಹಲವಾರು ಜನರಿಗೆ ವೈಯಕ್ತಿಕ ಸಹಾಯ ಮಾಡಿದ ಅವರು ಗಿಣಿಗೇರಿ ಕೆರೆ ಅಭಿವೃದ್ಧಿಗೆ 21 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು. ಕ್ರೀಡಾಪಟು ಎರಿಸ್ವಾಮಿಗೆ ಆರ್ಥಿಕ ಸಹಾಯ ಮಾಡಿದ್ದಕ್ಕೆ ಗಬ್ಬೂರು ಗ್ರಾಮಸ್ಥರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಯಾರಾದರೂ ಆರ್ಥಿಕ ಸಹಾಯ ಮಾಡುವವರಿದ್ದರೆ ಎರಿಸ್ವಾಮಿ (9741 169676) ಅವರನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಗಾಯಕ ಅಮರೇಶ್ ಜವಳಿ, ಸಂಗೊಳ್ಳಿ ರಾಯಣ್ಣ ಸೇನೆ ತಾಲೂಕು ಅಧ್ಯಕ್ಷ ಕುಬೇರ ಮಜ್ಜಿಗಿ, ಯುವ ಮುಖಂಡರಾದ ವೈ.ಎಂ. ಕೋಲ್ಕಾರ್, ಬಸವರಾಜ ಹಳ್ಳಿ ಶರಣಪ್ಪ ದೊಡ್ಮನಿ ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಥ್ರೋ ಬಾಲ್ ಕ್ರೀಡೆಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆಗೆ ಬೇಕಿದೆ ಸಹಾಯ ಹಸ್ತ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಪ್ರತಿಭೆ ಯಾರ ಸ್ವತ್ತೂ ಅಲ್ಲ, ಪ್ರತಿಭೆಗೆ ಬಡತನ, ಸಿರಿತನದ ಬೇಧವಿಲ್ಲ. ಬಡತನದ ಬೇಗುದಿಯಲ್ಲೇ ಬೆಳೆದ ಕ್ರೀಡಾ ಪ್ರತಿಭೆಯೊಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ರಾಜ್ಯವನ್ನು, ಅದರಲ್ಲೂ ಕಲ್ಯಾಣ ಕರ್ನಾಟಕವನ್ನು ಬೆಳಗಲು ಸಹಾಯಹಸ್ತ ಬೇಕಿದೆ.

ತಾಲೂಕಿನ ಗಬ್ಬೂರು ಗ್ರಾಮದ ಎರಿಸ್ವಾಮಿ ಹರಿಜನ ಎಂಬ ಗ್ರಾಮೀಣ ಯುವ ಪ್ರತಿಭೆ ರಾಷ್ಟ್ರ ಮಟ್ಟದ ಥ್ರೋ ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ.

ಗದಗ ನಗರದ ಶ್ರೀ ಪ್ರಭುರಾಜೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಓದುತ್ತಿರುವ ಎರಿಸ್ವಾಮಿ ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಥ್ರೋ ಬಾಲ್ ಅಸೋಸಿಯೇಷನ್ ಕೈಗೊಂಡಿದ್ದ ಥ್ರೋ ಬಾಲ್ ಸೀನಿಯರ್ ವಿಭಾಗದ ತಂಡಕ್ಕೆ ಆಯ್ಕೆಯಾಗಿದ್ದರು. ಈ ಮೂಲಕ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಆಯ್ಕೆಯಾದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆ ಎರಿಸ್ವಾಮಿಗೆ ಸಲ್ಲುತ್ತದೆ.

ಇದೇ ಅಕ್ಟೋಬರ್ 29 ರಿಂದ 31 ರವರೆಗೆ ಹರಿಯಾಣ ರಾಜ್ಯದ ರೋಥಕ್ ಎಂ.ಡಿ. ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸೀನಿಯರ್ ಥ್ರೋ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಬಡತನದ ಕುಟುಂಬದಲ್ಲಿ ಜನಿಸಿ ಈ ಮಟ್ಟಕ್ಕೆ ಸಾಧನೆ ಮಾಡುವ ಮೂಲಕ ಗಬ್ಬೂರು ಗ್ರಾಮಕ್ಕೆ ಹಾಗೂ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದ ಎರಿಸ್ವಾಮಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಸಹಾಯದ ನೀರೀಕ್ಷೆ:
ಎರಿಸ್ವಾಮಿಗೆ ಅ.25 ರಿಂದ 29 ರವರೆಗೆ ಪರೀಕ್ಷೆಗಳಿವೆ. ಹಾಗಾಗಿ ಟೀಮ್‌ನೊಂದಿಗೆ ಹರಿಯಾಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿ‌ಸಿಕೊಂಡು ಹೋಗಬೇಕೆಂದರೆ ಆರ್ಥಿಕ ಸಮಸ್ಯೆ ಎದುರಾಗಿದೆ. ಹಾಗಾಗಿ ಯಾರಾದರೂ ದಾನಿಗಳು ಮುಂದೆ ಬಂದು ಈ ಕ್ರೀಡಾ ಪಟುಗೆ ಸಹಾಯ ಮಾಡಿದರೆ ಆತ ಇನ್ನಷ್ಟು ಸಾಧನೆ ಮಾಡಲು ನೆರವು ನೀಡಿದಂತಾಗುತ್ತದೆ. ಹೆಚ್ಚಿನ ಮಾಹಿತಿಗೆ ಎರಿಸ್ವಾಮಿ ಸಂಪರ್ಕಿಸಿ: 97411 69676

ಅನೈತಿಕ ಸಂಬಂಧದ ಶಂಕೆ; ಕೊಲೆ ಮಾಡಿ ಹೂತು ಹಾಕಿದ್ದ ಆರೋಪಿ ಮಹಾಂತೇಶ್

ವಿಜಯಸಾಕ್ಷಿ ಸುದ್ದಿ, ಗದಗ:

ಕಂಠಮಟ ಸಾರಾಯಿ‌ ಕುಡಿದು ಭರ್ಜರಿ ಚಿಕನ್ ಪಾರ್ಟಿ ಮಾಡಿ ಗೆಳೆಯನ್ನನ್ನು ಕೊಲೆಗೈದು ಹಳ್ಳದಲ್ಲಿ ಎಸೆದು ಹೋಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ‌ ಗ್ರಾಮದಲ್ಲಿ ನಡೆದಿದೆ.

ಕೊತಬಾಳ‌ ಗ್ರಾಮದ ಸಿದ್ದಪ್ಪ ಪಾಗದ (48) ಎಂಬಾತನೇ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಮಹಾಂತೇಶ್ ಎಂಬಾತನೇ ಕೊಲೆ ಮಾಡಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಯಾದ ಸಿದ್ದಪ್ಪ ಪಾಗದ, ಕೊಲೆ ಆರೋಪಿ ಮಹಾಂತೇಶ್ ನ‌ ಮನೆಯಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ.

ನಿನ್ನೆ ರಾತ್ರಿ ಕೊತಬಾಳ ಗ್ರಾಮದ ಹೊರವಲಯದ ಆರೋಪಿಯ ಜಮೀನಿಗೆ ಇಬ್ಬರು ಪಾರ್ಟಿ ಮಾಡಲು ತೆರಳಿದ್ದರು. ಮದ್ಯ ಹಾಗೂ ಚಿಕನ್ ಪಾರ್ಟಿ ಮಾಡಿದ ನಂತರ ಆರೋಪಿ ಮಹಾಂತೇಶ್ ಪಿಕಾಸಿಯಿಂದ ಸಿದ್ದಪ್ಪನಿಗೆ ಹೊಡೆದು ಕೊಲೆ ಮಾಡಿದ್ದಾನೆ.

ನಂತರ ಪಕ್ಕದ ಹಳ್ಳದಲ್ಲಿ ಶವ ತಂದು ಹೂತು ಹಾಕಿ ಪರಾರಿಯಾಗಿದ್ದ.

ಮಾಹಿತಿ ತಿಳಿದ ರೋಣ ಸಿಪಿಐ ಸುಧೀರಕುಮಾರ್ ಬೆಂಕಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಭೇಟಿ ಕೊಲೆಗೆ ಕಾರಣ ಹಾಗೂ ಆರೋಪಿಯ ಬಗ್ಗೆ ಮಾಹಿತಿ ಪಡೆದರು.

ಆರೋಪಿ ಮಹಾಂತೇಶ್ ನನ್ನು ಪೊಲೀಸರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಜಮೀನಿನಲ್ಲಿ ಚಾಲುಕ್ಯ ಕಾಲದ ಶಿಲ್ಪಗಳು ಪತ್ತೆ; ಕ್ರಿ.ಶ. 12ನೇ ಶತಮಾನದ, ಲಿಪಿ, ಸುಂದರ ಕೆತ್ತನೆಯುಳ್ಳ ದೇವಾಲಯ ತಳಹದಿಯ ರತಿಕ್ರೀಡೆ ವಿಗ್ರಹಗಳು ಗೋಚರ

ವಿಜಯಸಾಕ್ಷಿ ಸುದ್ದಿ, ಡಂಬಳ (ಧರ್ಮಪುರ)

ಡಂಬಳ ಗ್ರಾಮದ ಜಮೀನಿನೊಳಗೆ ಚಾಲುಕ್ಯ ಕಾಲದ ಶಿಲ್ಪಗಳು ಪತ್ತೆಯಾಗಿವೆ. ಹೊಲದಲ್ಲಿರುವ ಮರವೊಂದರಲ್ಲಿ ಜೇನು ಕಟ್ಟಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸ್ಥಳೀಯರು ತೆರಳಿದಾಗ ಇಲ್ಲಿ ದೇಗುಲದ ಅವಶೇಷಗಳು ಲಭಿಸಿವೆ.

ತಳವಿನ್ಯಾಸ ನಕ್ಷತ್ರದಾಕಾರದ ದೇವಾಲಯದ ಪಾಣಿಪೀಠ ಸ್ವಲ್ಪ ಮಟ್ಟಿಗೆ ನಕ್ಷತ್ರದಾಕಾರದ ತಳಹದಿ, ನವರಂಗ, ಮಧ್ಯದಲ್ಲಿರುವ ವೃತ್ತಾಕಾರದ ನಾಟ್ಯಪೀಠವು ಸುಂದರವಾದ ಅಷ್ಟದಳ ಕಮಲದ ಹೂವಿನ ಸುಂದರ ಕೆತ್ತನೆಯಿದ್ದು ಚಾಲುಕ್ಯ ಶೈಲಿಯ ಕಂಬಗಳು ಅಲ್ಲಲ್ಲಿ ಮುರಿದು ಬಿದ್ದಿದ್ದು ಕಾಣುತ್ತಿವೆ.

ರತಿ ಕ್ರಿಡೆಯ ಆಕಾರದ ಸುಂದರ ಕೆತ್ತನೆಯ ವಿಗ್ರಹಗಳು ಪತ್ತೆಯಾಗಿದ್ದು, ಶಿಥಿಲಾವಸ್ಥೆಯಲ್ಲಿ ಇರುವುದು ಕಾಣುತ್ತಿವೆ. ಆನೆ, ಸಿಂಹ ಯಾಳಿಗಳ ಸಾಲುಗಳನ್ನು ಉಬ್ಬುಶಿಲ್ಪಗಳಲ್ಲಿ ಬಿಡಿಸಲಾಗಿವೆ. ವಿವಿಧ ನರ್ತನೆಯ ಶಿಲ್ಪಗಳು ಕೆತ್ತಲಾಗಿರುವ ಶಿಲೆಗಳು, ಬಿದ್ದಿರುವ ಕಂಬಗಳು, ದೇವಾಲಯ ಗರ್ಭಗೃಹ ಮೆಲ್ಭಾಗ ಬಿದ್ದು ಮಣ್ಣಿನೊಳಗೆ ದೇವಾಲಯ ಹುದುಗಿದೆ ಎಂದು ಊಹಿಸಲಾಗಿದೆ.

ಶಿಲ್ಪಗಳು ಚಾಲುಕ್ಯಶೈಲಿಯಲ್ಲಿ ಇರುವುದರಿಂದ ಈ ದೇವಾಲಯ ಕ್ರಿ.ಶ. 12ನೇ ಶತಮಾನದ್ದೆಂದು ಊಹಿಸಲಾಗಿದೆ. ಈ ದೇವಾಲಯದ ಕಂಬಗಳ ಹಾಗೂ ಪೀಠದ ಸುತ್ತಮುತ್ತಲೂ ಸುಂದರ ಕೆತ್ತನೆಯ ಮುಖ ಮಂಟಪ ಲಲಾಟದ ಲಕ್ಷ್ಮಿ ವಿಗ್ರಹ ಕಿರುಶಿಲ್ಪವಿರುವುದು ಕಾಣುತ್ತದೆ. ಇಲ್ಲಿ ಪತ್ತೆಯಾಗಿರುವ ಶಾಸನದ ಹಾಗೂ ಈ ದೇವಾಲಯದ ಬಗ್ಗೆ ಸಂಪೂರ್ಣವಾಗಿ ಇತಿಹಾಸ ತಜ್ಞರಿಂದ ಕೂಡಲೇ ಸಂಶೋಧನೆ ಮಾಡಿಸಿ, ಈ ದೇವಾಲಯ ಪುನರ್ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಂಶೋಧನೆ ಮಾಡಿಸಿ ವರದಿ
ಐತಿಹಾಸಿಕ ಹಿನ್ನೆಲೆಯುಳ್ಳ ಡಂಬಳ ಗ್ರಾಮದೊಳಗೆ ಇಂದು ಸಿಕ್ಕಿರುವ ಕ್ರಿ.ಶ. 12 ಶತಮಾನದ ಶಾಸನದ ಬಗ್ಗೆ ಮಾಹಿತಿ ನಮಗೆ ಲಭ್ಯವಾಗಿದೆ. ಕೂಡಲೇ ಇದಕ್ಕೆ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತಂದು, ಅದರ ಬಗ್ಗೆ ಸಂಶೋಧನೆ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

ಡಾ| ಆಶಪ್ಪ ಪೂಜಾರ
ತಹಸೀಲ್ದಾರ್, ಮುಂಡರಗಿ

ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ

ಮುರ್ತುಜಸಾಬ ತಾಂಬೋಟಿ ಅವರ ಜಮೀನಿನೊಂದರಲ್ಲಿ ಪುರಾತನ ಕಾಲದ ಶಾಸನ ಹಾಗೂ ದೇವಾಲಯದ ಅವಶೇಷಗಳು ದೊರೆತಿರುವ ಮಾಹಿತಿ ಲಭ್ಯವಾಗಿದೆ. ಶೀಘ್ರವಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಇಂತಹ ಇತಿಹಾಸ ಹಿನ್ನೆಲೆಯುಳ್ಳ ದೇವಾಲಯಗಳನ್ನು ಸಂರಕ್ಷಣೆ ಮಾಡತ್ತೇವೆ.

  • ರವೀಂದ್ರ ಹತ್ತಿಕಾಳ
    ಸಂರಕ್ಷಣಾ ಸಹಾಯಕ ಅಧಿಕಾರಿಗಳು
    ಪುರಾತತ್ವ ಇಲಾಖೆ ಗದಗ

ಘಟಪ್ರಭಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಲೋಕಾಪುರ;

ಕಲ್ಲಿಗೆ ಡಿಕ್ಕಿಯಾಗಿ ಕಾರು ಪಲ್ಟಿ ಹೊಡೆದು ಘಟಪ್ರಭಾ ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ.

ಮೃತರು ರಾಮದುರ್ಗ ತಾಲೂಕಿನ ಗುಡಮ್ಮನಾಳ, ಮುದೇನಕೊಪ್ಪ, ಬಿಡಕಿ ಹಾಗೂ ಸುನ್ನಾಳ ಗ್ರಾಮದವರು. ಕಾರು ಚಾಲಕ ಸುನೀಲ ಸದಪ್ಪ ಅರಬೆಂಚಿ (24), ಮಹಾದೇವಗೌಡ ಶಂಕರ್ ಗೌಡ ಪಾಟೀಲ (27), ವಿಜಯ ಶಿವಾನಂದ ಲಟ್ಟಿ (26), ಎರಿತಾತಾ ಮೌನೇಶ್ವರ ಕಂಬಾರ (26) ಮೃತರು. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಆರು ಜನರು ಮುಧೋಳದಿಂದ ಸಾಲಹಳ್ಳಿ ಕಡೆಗೆ ಹೊರಟಿದ್ದಾಗ ಹಲಕಿ ಗ್ರಾಮದ ಬಳಿ‌ ಕಲ್ಲಿಗೆ ಡಿಕ್ಕಿ ಹೊಡೆದ ಕಾರು ರಸ್ತೆ ಬದಿಯ ಘಟಪ್ರಭಾ ಕಾಲುವೆಗೆ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ.

ಮೃತದೇಹ ಹಾಗೂ ಕಾರನ್ನು ಕ್ರೇನ್ ಮೂಲಕ‌ ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ಲೋಕಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ, ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಮಗ

0

ವಿಜಯಸಾಕ್ಷಿ ಸುದ್ದಿ, ಮೈಸೂರು:

ತಂದೆ ಹಾಗೂ ಆತನ ಜೊತೆಗಿದ್ದ ಮಹಿಳೆಯನ್ನು ಯುವಕ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರು ನಗರದ ಶ್ರೀನಗರದಲ್ಲಿಂದು ಸಂಭವಿಸಿದೆ.

ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಕೊಪ್ಪಲು ನಿವಾಸಿ ಸಾಗರ್ ತಲೆಮರೆಸಿಕೊಂಡಿದ್ದಾನೆ.

ಮೈಸೂರಿನ ಶ್ರೀನಗರದ ನಿವಾಸಿ ಲತಾ ಮನೆಗೆ ನುಗ್ಗಿ ಮೊದಲು ತಂದೆಯನ್ನು ನಂತರ ಲತಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನನಿಗೂ ಮಚ್ಚಿನಿಂದ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಈತನನ್ನು ಆಸ್ಪತ್ರೆಗೆ ದಾಖಲಾಗಿದೆ. ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಸಿಯೂಟ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ;

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಮಕ್ಕಳಿಗೆ ಊಟ ಬಡಿಸುವ ಮೂಲಕ ಬಿಸಿಯೂಟ ಪ್ರಾರಂಭೋತ್ಸವಕ್ಕೆ
ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಬಿಸಿಯೂಟ ಕಾರ್ಯಕ್ರಮ ಇಂದು ಪ್ರಾರಂಭ ಆಗಿರುವುದು ಖುಷಿಯ ವಿಚಾರ. ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಹಾಗೂ ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಡುಗೆ ಮಾಡುವವರು ಜಾಗ್ರತೆ ವಹಿಸಿ ಮಕ್ಕಳ ಆರೋಗ್ಯ ಕಾಪಾಡಬೇಕೆಂದರು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಎಚ್.ಡಿ. ರಾಯರಡ್ಡಿ, ಗ್ರಾಪಂ ಸದಸ್ಯರಾದ ಬಾಪುಗೌಡ ಹಿರೇಗೌಡ್ರ, ಪ್ರಧಾನ ಗುರು ವಿ.ಜಿ. ಬೋಗಾರ, ಸಹ ಶಿಕ್ಷಕರಾದ ಎ.ಜಿ. ಅರಗಂಜಿ, ಬಿ. ಎಸ್. ಮಾಳಣ್ಣವರ, ಜಿ.ಎಸ್. ಮೂಗನೂರ, ಎಸ್.ಐ. ತಳವಾರ, ಎಂ.ಎ ದಳವಾಯಿ, ಹಿರಿಯರಾದ ಬಸನಗೌಡ ಮುದಿಗೌಡ್ರ, ಅಡಿವೆಪ್ಪ ಮರಿಯಣ್ಣವರ, ಅಡುಗೆ ಸಹಾಯಕಿಯರು ಉಪಸ್ಥಿತರಿದ್ದರು.

ವಾಲ್ಮೀಕಿ ಸ್ತ್ರೀ ಶಕ್ತಿ ಸಂಘದಿಂದ ಗ್ರಾಪಂ ಅಧ್ಯಕ್ಷ, ಸದಸ್ಯರಿಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ:

ಗ್ರಾಮದಲ್ಲಿ ವಾಲ್ಮೀಕಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಹಾಗೂ ವಾಲ್ಮೀಕಿ ಯುವಕ ಮಂಡಳ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವಕ್ಕೆ
ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬೇಟೆ ಆಡಿ ಜೀವನ ನಡೆಸುತ್ತಿದ್ದ ರತ್ನಾಕರ ಎಂಬ ವ್ಯಕ್ತಿ ನಾರದ ಮುನಿಗಳ ಮಾತು ಕೇಳಿ ತನ್ನ ತಪ್ಪು ತಿದ್ದಿಕೊಂಡು ಕೊನೆಗೆ ಮಹರ್ಷಿ ವಾಲ್ಮೀಕಿಯಾಗಿ ಬದಲಾಗಿ ಪವಿತ್ರ ಮಹಾಕಾವ್ಯ ರಾಮಾಯಣ ಬರೆದು ವಾಲ್ಮೀಕಿ ಮನ್ನಣೆ ಪಡೆಯುತ್ತಾರೆ. ನಾವು ಹುಟ್ಟುತ್ತಲೆ ಒಳ್ಳೆಯವರು ಅಥವಾ ಕೆಟ್ಟವರಾಗಿ ಹುಟ್ಟಿರುವುದಿಲ್ಲ ಎಂಬುದನ್ನು ವಾಲ್ಮೀಕಿಯ ಜೀವನ ನಮಗೆ ಕಲಿಸುತ್ತದೆ. ನಾವು ಮಾಡುವ ಕಾರ್ಯ ನಮ್ಮ ಶ್ರೇಷ್ಠತೆ ನಿರ್ಧರಿಸುವುದು ಎಂದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಹಾಗೂ ವಾಲ್ಮೀಕಿ ಯುವಕ ಮಂಡಳದ ವತಿಯಿಂದ ಗ್ರಾಪಂ, ಅಧ್ಯಕ್ಷರು, ಸದಸ್ಯರನ್ನು ಸನ್ಮಾನಿಸಲಾಯಿತು.

ಮಾಜಿ ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಪ್ರೊ. ಬಿ.ಸಿ. ಹನಮಂತಗೌಡ್ರ ಮಾತನಾಡಿದರು. ವೇದಿಕೆ ಮೇಲೆ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ಶೃತಿ ಬ್ಯಾಳಿ, ಶಂಕ್ರಮ್ಮ ಚಲವಾದಿ ಉಪಸ್ಥಿತರಿದ್ದರು.

ವಾಲ್ಮೀಕಿ ಸಮಾಜದ ಮುಖಂಡರು, ಯುವಕರು, ತಾಯಂದಿರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ನಾಯಕರು‌ ಹತಾಶರಾಗಿದ್ದಾರೆ: ವಿಜಯೇಂದ್ರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ದೇಶಾದ್ಯಂತ ಸೋತು ತಣ್ಣಗಾಗಿರುವ ಕಾಂಗ್ರೆಸ್ ನಾಯಕರು ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ ಎಂದು
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.

ಸಿಂಧಗಿ ಉಪ ಚುನಾವಣೆಗೆ ಹೋಗುವಾಗ ಮಾರ್ಗ‌ ಮಧ್ಯೆ ಬುಧವಾರ ಕೊಪ್ಪಳದ ಶ್ರೀಗವಿಮಠಕ್ಕೆ ಭೇಟಿ ನೀಡಿ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಬಿಜೆಪಿ ಮಾಡಿದ ಕೆಲಸದಿಂದ ಬಿಜೆಪಿ ವೋಟ್ ಕೇಳುತ್ತದೆ
ಕಾಂಗ್ರೆಸ್ ನಾಯಕರು ಹತಾಶರಾಗಿ ಪ್ರಧಾನಿ ‌ಮೋದಿ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ ಎಂದರು.

ಉಪ ಚುನಾವಣೆಯಲ್ಲಿ ಆರ್ ಎಸ್ ಎಸ್ ಬಗ್ಗೆ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಪಸಂಖ್ಯಾತರನ್ನು ಒಲೈಕೆ ಮಾಡಲು ಕಾಂಗ್ರೆಸ್‌ನವರು ಬಿಜೆಪಿ ಹಾಗೂ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆರ್ ಎಸ್ ಎಸ್‌ಗೆ ಹಣ ಎಲ್ಲಿಂದ ಬರುತ್ತೆ ಎಂಬ ಎಚ್ ಡಿಕೆ ಹೇಳಿಕೆಗೆ ಇಂಥ ಕೆಲಸಕ್ಕೆ ಬಾರದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು‌.

error: Content is protected !!