Home Blog Page 3232

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಿದ್ದು ಪಲ್ಲೇದ ಅಧಿಕಾರ ಸ್ವೀಕಾರ

ವಿಜಯಸಾಕ್ಷಿ ಸುದ್ದಿ, ಗದಗ:

ತೀವ್ರ ಕುತೂಹಲ ಮೂಡಿಸಿದ್ದ ಗದಗ- ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕೊನೆಗೂ ಪ್ರಭಲ ಲಿಂಗಾಯತ ಪಂಚಮಸಾಲಿ ಸಮುದಾಯಕ ಒಲಿದಿದೆ.

ಸಿದ್ದು ಪಲ್ಲೇದ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿ‌ ಬುಧವಾರ ಆದೇಶ ಮಾಡಿದ್ದು, ಸಿದ್ದು ಪಲ್ಲೇದ ಅಧಿಕಾರ ಸ್ವೀಕರಿಸಿದರು. ಸಂಗಮೇಶ ದುಂದೂರು ಅಧಿಕಾರ ಹಸ್ತಾಂತರಿಸಿದರು.

ಕಳೆದ ಮಾರ್ಚ್ ತಿಂಗಳಲ್ಲಿ ಶ್ರೀ ಪತಿ ಉಡುಪಿ ಅವರನ್ನು ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಬಿಜೆಪಿ ಪಾಳೆಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ಇರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಮುಖಂಡರಲ್ಲಿ ತೀವ್ರ ಅಸಮಾಧಾನ ಮೂಡಿತ್ತು. ಹೀಗಾಗಿ ಶ್ರೀಪತಿ ಉಡುಪಿ ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಆದೇಶ ತಡೆಹಿಡಿಯಲಾಗಿತ್ತು.

ಇದನ್ನೂ ಓದಿ ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀಪತಿ ಉಡುಪಿ ನೇಮಕ: ಬಿಜೆಪಿ ಪಾಳೆಯದಲ್ಲಿ ತೀವ್ರ ಅಸಮಾಧಾನ

ಮತ್ತೀಗ ಮೂರು ವರ್ಷಗಳ ಕಾಲ ಸಿದ್ದಪ್ಪ ಚನ್ನಬಸಪ್ಪ ಪಲ್ಲೇದ ಅವರನ್ನು ನೇಮಿಸಿ ಸರಕಾರದ ಅಧೀನ ಕಾರ್ಯದರ್ಶಿ ಲತಾ ಕೆ ಅವರು ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ನಗರಸಭೆ ಸದಸ್ಯರಾದ ವಿನಾಯಕ ಮಾನ್ವಿ, ಅನಿಲ ಅಬ್ಬಿಗೇರಿ, ಮುಖಂಡರಾದ ಪ್ರಶಾಂತ ನಾಯ್ಕರ್, ಕುಮಾರ್ ಮಾರನಬಸರಿ ಸೇರಿದಂತೆ ಅನೇಕರಿದ್ದರು.

ಡಿಸಿ ಆದೇಶ ಉಲ್ಲಂಘನೆ; ಮಾಂಸಾಹಾರಿ ಹೋಟೆಲ್ ಮೇಲೆ ಪೊಲೀಸರ ದಾಳಿ

ವಿಜಯಸಾಕ್ಷಿ ಸುದ್ದಿ, ಗದಗ:

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದರು.

ಆದರೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಮಾಂಸಾಹಾರಿ ಹೋಟೆಲ್ ಸೇರಿದಂತೆ ಎರಡು ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯ ರೋಣ ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಛೇರಿ ಬಳಿ ಮದ್ಯ ಮಾರಾಟ ಮಾಡುತ್ತಿದ್ದ ಕರೀಮ್ ಖಾಸಿಮಸಾಬ್ ಪಠಾಣ್ ಎಂಬಾತನನ್ನು ಬಂಧಿಸಿ ಆತನಿಂದ 7 ನೂರು ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಗದಗನ ಧೋಬಿ ಘಾಟ್ ಬಳಿಯ ರಿಂಗ್ ರೋಡ್ ನಲ್ಲಿ ಸಾವಜಿ ಕಿಚನ್ ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶಹರ ಠಾಣೆಯ ಪಿಎಸ್ಐ ಜಿ ಟಿ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ನಾರಾಯಣ ಹನಮಂತಸಾ ಕಾಟವಾ ಎಂಬಾತನನ್ನು ವಶಕ್ಕೆ ಪಡೆದು, 422 ರೂ.ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓ.ಸಿ ಜೂಜಾಟ; ಕುಖ್ಯಾತ ಬುಕ್ಕಿ‌ ಸೇರಿ ಮೂವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಇಲ್ಲಿನ ಸ್ಟೇಷನ್ ರಸ್ತೆಯ ಗೌರಿ ಶಂಕರ್ ಲಾಡ್ಜ್ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಓ.ಸಿ. ಜೂಜಾಟದಲ್ಲಿ ತೊಡಗಿದ್ದ ಕುಖ್ಯಾತ ಮಟ್ಕಾ ಬುಕ್ಕಿ ಸೇರಿದಂತೆ ಮೂವರನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಜನರಿಂದ ಹಣ ಪಡೆದು ಓ.ಸಿ ಕಲ್ಯಾಣಿ ಎಂಬ ಜೂಜಾಟದಲ್ಲಿ ತೊಡಗಿದ್ದ ಜೋಡ ಮಾರುತಿ ದೇವಸ್ಥಾನದ ಬಳಿಯ ಕಿಲ್ಲಾ ಓಣಿಯ ಮಾಧುಸಾ ರಾಮನಾಥಸಾ ಮಿಸ್ಕಿನ್, ಬೆಟಗೇರಿಯ ಮಂಜುನಾಥ್ ನಗರದ ಕಣವಿ ಪ್ಲಾಟ್ ನಿವಾಸಿ ಯಲ್ಲಪ್ಪ ಪರಶುರಾಮ ಢಗೆ ಹಾಗೂ ಜವಳಗಲ್ಲಿಯ ಪೆಂಟರ್ ಹುಚ್ಚಪ್ಪ ಜಟ್ಟೆಪ್ಪ ಅರಕೇರಿ ಎಂಬುವರನ್ನು ಶಹರ ಠಾಣೆಯ ಪಿಎಸ್ಐ ಜಿ ಟಿ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 12ಸಾವಿರ ರೂಪಾಯಿಗಳನ್ನು ಹಾಗೂ ಚೀಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣಾಧೀನ ಖೈದಿ ಆತ್ಮಹತ್ಯೆಗೆ ಯತ್ನ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ವಿಚಾರಣಾಧೀನ ಖೈದಿಯೊಬ್ಬ ಹಣೆಗೆ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಪ್ರಶಾಂತ ಆತ್ಮಹತ್ಯೆಗೆ ಯತ್ನಿಸಿದಾತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಶುಕ್ರವಾರ ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.

ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆರೋಪಿ ಪ್ರಶಾಂತ್ ಮನವಿ ಮಾಡಿದ್ದ. ಆದರೆ, ಪೊಲೀಸರು ವಿಚಾರಣೆಯೂ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ನಗರದ ಹೊರ ವಲಯದಲ್ಲಿರುವ ಕಾರಾಗೃಹದಲ್ಲಿಯೇ ಇರಿಸುತ್ತೇವೆ ಎಂದಿದ್ದಾರೆ‌. ಇದರಿಂದಾಗಿ ಬೇಸತ್ತ ಆರೋಪಿ ಹಣೆಗೆ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಪೊಲೀಸರು ಆರೋಪಿಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಿಪಂ ಸಿಇಒ ಡಾ.ಸುಶೀಲಾರಿಂದ ನರೇಗಾ ಕಾಮಗಾರಿ ವೀಕ್ಷಣೆ; ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ

ಆರ್ಥಿಕತೆ ಸುಧಾರಣೆಗೆ ಸಹಕಾರಿ

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಅಂಗನವಾಡಿ, ಮಹಿಳಾ ವರ್ಕ್ಶೆಡ್, ಘನತ್ಯಾಜ್ಯ ವಿಲೇವಾರಿ ಘಟಕ, ಡಿಜಿಟಲ್ ಗ್ರಂಥಾಲಯ ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳ ಸ್ಥಳಕ್ಕೆ ಶುಕ್ರವಾರ ಜಿಪಂ ಸಿಇಒ ಡಾ.ಸುಶೀಲಾ ಅವರು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಬಳಿಕ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ವೀಕ್ಷಿಸಿ, ಕೂಲಿಕಾರರ ಕುಂದು ಕೊರತೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಡಾ.ಸುಶೀಲಾ ಅವರು, ಗ್ರಾಮೀಣ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ೧೦೦ ದಿನಗಳವರೆಗೆ ನರೇಗಾದಡಿ ಕೆಲಸ ನೀಡಲಾಗುತ್ತಿದೆ.

ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕತೆ ಸುಧಾರಣೆಗೆ ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಾಪು ಹಿರೇಗೌಡ್ರ, ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ, ತಾಪಂ ಇಒ ಹೊನ್ನಯ್ಯ ಬಿ.ಕೆ., ಎಂ.ಡಿ.ತೋಗುಣಸಿ, ಚಂದ್ರಶೇಖರ ಕುರ್ತಕೋಟಿ, ಸುರೇಶ ಬಾಳಿಕಾಯಿ, ಶೈನಾಜ್ ಮುಜಾವರ್ ಸೇರಿದಂತೆ ಹಲವರಿದ್ದರು.

ಆಕರ್ಷಣೀಯವಾಗಿ ಡಿಜಿಟಲ್ ಗ್ರಂಥಾಲಯ ರಚಿಸಿ ಓದುಗರಿಗೆ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಬೇಕು. ಜಲಜೀವನ್ ಮಿಷನ್ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

ಡಾ.ಸುಶೀಲಾ, ಜಿಪಂ ಸಿಇಒ

ಭೂಮಿ ಯೋಜನೆ ಅನುಷ್ಠಾನ ರಾಜ್ಯಕ್ಕೆ ನವಲಗುಂದ ಪ್ರಥಮ

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಭೂಮಿ ಯೋಜನೆಯಡಿ 2022 ರ ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿದ ನವಲಗುಂದ ತಾಲ್ಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಭೂ ಮಾಪನ ಇಲಾಖೆ ಆಯುಕ್ತ ಮುನೇಶ ಮೌದ್ಗೀಲ್ ಅಭಿನಂದಿಸಿದ್ದಾರೆ.

ನವಲಗುಂದ ತಹಶೀಲ್ದಾರ್ ಅನಿಲ ಬಡಿಗೇರ ಅವರಿಗೆ ಅಭಿನಂದನಾ ಪತ್ರ ಬರೆದಿರುವ ಅವರು, ಭೂಮಿ ಯೋಜನೆಯಡಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೆವಾರಿ ಮಾಡಿ 4.72 ಸಿಗ್ಮಾ ಮೌಲ್ಯ ಹಾಗೂ 3.947 ರಷ್ಟು ವಿಲೇವಾರಿ ಸೂಚ್ಯಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಈ ಸಾಧನೆಗೆ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯತತ್ವರತೆ ಕಾರಣವಾಗಿದೆ. ಬರುವ ದಿನಗಳಲ್ಲಿಯೂ ಇದೇ ಉತ್ಸಾಹ ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಮುನೀಶ ಮೌದ್ಗೀಲ್ ತಿಳಿಸಿದ್ದಾರೆ. 

ಹೋಟೆಲ್ ಗೋಡೆ ಕುಸಿದು ಮಾಲೀಕ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಇಲ್ಲಿಯ ಕೃಷಿ ಇಲಾಖೆಯ ಎದುರಿನ ತೋಟದವರ ಹೋಟೆಲ್ ಗೋಡೆ ಕುಸಿದು ಮಾಲೀಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬರಿಗೆ ಕಾಲು ಮುರಿದ ಘಟನೆ ಬುಧವಾರ ಸಂಜೆ ನಡೆದಿದೆ.

ಹುಬ್ಬಳ್ಳಿ- ವಿಜಯಪೂರ ರಾಷ್ಟ್ರೀಯ ಹೆದ್ದಾರಿಯ ಬಳಿ ಮಾಜಿ ಸಚಿವ ಕೆ.ಎನ್.ಗಡ್ಡಿ ಯವರ ಮನೆಯ ಪಕ್ಕದಲ್ಲಿದ್ದ ತೋಟದವರ ಹೋಟೆಲ್ ಗೋಡೆ ಕುಸಿದ ಪರಿಣಾಮ ಮಾಲಿಕ ಶಿವಪ್ಪ ಬಸವಂತಪ್ಪ ತೋಟದ (65) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟರೆ,  ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಶಿದ್ಲಿಂಗಪ್ಪ ಕಲ್ಲಪ್ಪ ತೋಟದ (50) ಎಂಬುವರ ಕಾಲು ಮುರಿದಿದ್ದು, ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಳೆದೆರಡು ದಿನದಿಂದ ಸುರಿದ ಮಳೆಗೆ ಹೋಟೆಲ್ ಗೋಡೆ ಸಂಪೂರ್ಣವಾಗಿ ನೆನೆದು ನೀರು ಒಳಗಡೆ ಬರುತ್ತಿದ್ದುದನ್ನು ಕಂಡ ಮಾಲಿಕ ಶಿವಪ್ಪ ತೋಟದ ನೀರು ಬರುತ್ತಿರುವ ಸ್ಥಳವನ್ನು ಮಣ್ಣು ಹಾಕಿ ಮುಚ್ಚಲು ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ, ತಹಶೀಲ್ದಾರ್ ಅನಿಲ ಬಡಿಗೇರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ನವಲಗುಂದದಲ್ಲಿ ಜವಳಿ ಪಾರ್ಕ ನಿರ್ಮಾಣ, ಐದು ಸಾವಿರ ಉದ್ಯೋಗ ಸೃಷ್ಟಿಸುವ ಗುರಿ; ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಜವಳಿ ಪಾರ್ಕ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಇನ್ನೇನು ಮೂರು ತಿಂಗಳ ಒಳಗಾಗಿ ಕೆಲಸ ಪ್ರಾರಂಭಿಸಿ ಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಜೊತೆಗೆ ತರಬೇತಿಯನ್ನು
ನೀಡಲಾಗುವುದೆಂದು  ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಭರವಸೆ ನೀಡಿದರು.

ಸೋಮವಾರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ
ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ವರ್ಷದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಗೊಳಿಸಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಾಕಷ್ಟು
ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ನವಲಗುಂದ ಕ್ಷೇತ್ರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳನ್ನು
ಪರಿಣಾಮಕಾರಿಯಾಗಿ ಭ್ರಷ್ಟಾಚಾರ ಹಾಗೂ ಕಳಂಕ ರಹಿತವಾಗಿ  ಅನುಷ್ಠಾನ ಮಾಡಲಾಗುತ್ತಿದೆ.
ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮವರು ಎನ್ನುವಂತೆ ಬಿಜೆಪಿ ನಡೆದುಕೊಂಡು ಬರುತ್ತಿದ್ದು ಮೇಕ್ ಇನ್ ಇಂಡಿಯಾ ಮೂಲಕ ಯುವಕರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಆಕ್ಷಿಜನ್ ಘಟಕಗಳನ್ನು ನಿರ್ಮಾಣ ಮಾಡಿ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ.
       

ಬಸವಣ್ಣನವರ ಇತಿಹಾಸವನ್ನು ಪ್ರಪಂಚಕ್ಕೆ ಗುರಿತಿಸುವ ಹಾಗೆ ರೂ.612 ಕೋಟಿ ಹಣವನ್ನು
ಖರ್ಚು ಮಾಡಲಾಗುತ್ತಿದ್ದು ನಾಡಿನಲ್ಲಿ ಉತ್ತುಮ ಕಾರ್ಯಗಳು ನಡೆಯುತ್ತಿರುವುದದಕ್ಕೆ
ಜನರ ಆಶೀರ್ವಾದವೆ ಸಾಕ್ಷಿಯಾಗಿದೆ. ಕಳೆದ ಎಂಟು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕೇ ಸಾಥ್ ಸಬ್ ಕಾ ವಿಕಾಸ ಜೊತೆಗೆ ಎಲ್ಲರ ಜೊತೆಗಿದ್ದು ಪ್ರಪಂಚವೇ ಮೆಚ್ಚುವಂತ ಕಾರ್ಯವನ್ನು ಮಾಡಿರುವ ಕಿರು ಹೊತ್ತಿಗೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಅವರು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
 

ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡರ, ಎನ್.ಪಿ.ಕುಲಕರ್ಣಿ, ಬಸಣ್ಣ ಬೆಳವಣಕಿ, ಶಂಕರಗೌಡ ರಾಯನಗೌಡರ, ಮಹೇಶ ತೊಗಲಂಗಿ, ಮಹಾಂತೇಶ ಕಲಾಲ, ಬಸವರಾಜ ಕಟ್ಟಿಮನಿ, ವಿನಾಯಕ ದಾಡಿಬಾವಿ, ಪ್ರಭು ಇಬ್ರಾಹಿಂಪೂರ ಇತರರು ಉಪಸ್ಥಿತರಿದ್ದರು.

ಬೈಕ್ ಮುಖಾಮುಖಿ ಡಿಕ್ಕಿ; ಲಾರಿಯಡಿ ಸಿಲುಕಿ ಇಬ್ಬರು ಸಾವು, ಮತ್ತಿಬ್ಬರು ಗಂಭೀರ

ವಿಜಯಸಾಕ್ಷಿ ಸುದ್ದಿ, ಗದಗ:

ಲಾರಿ ಓವರ್ ಟೆಕ್ ಮಾಡಲು ಹೋಗಿ ಲಾರಿ ಚಕ್ರದಲ್ಲಿ ಬೈಕ್ ಸವಾರರಿಬ್ಬರು ಸಿಲುಕಿ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಮುಂಡರಗಿ ತಾಲ್ಲೂಕಿನ ಬೆಣ್ಣಿಹಳ್ಳಿ ಸಮೀಪ ‌ನಡೆದಿದೆ.

ಮುಂಡರಗಿ ತಾಲ್ಲೂಕಿನ ಬಸಾಪುರ ಗ್ರಾಮದ ಹನಮಪ್ಪ ಪ್ರಕಾಶಪ್ಪ ಇದ್ಲಿ (40), ಫಕ್ಕೀರಪ್ಪ ಭೀಮಣ್ಣ ಇದ್ಲಿ(38) ಎಂಬ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ‌.

ತಾಲ್ಲೂಕಿನ ಕೊರ್ಲಹಳ್ಳಿ‌ ಗ್ರಾಮದ ಬೈಕ್ ಸವಾರರಾದ ದಾವಲಸಾಬ ಖಾಸಿಂಸಾಬ ಹಣಗಿ (26) ಹಾಗೂ ಲಾಲಸಾಬ ಮಾಬುಸಾಬ ಹಂಚಿನಾಳ(26) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಡರಗಿ ಕಡೆಯಿಂದ ಕೊರ್ಲಹಳ್ಳಿ ಕಡೆಗೆ ಹೊರಟಿದ್ದ ಲಾರಿಯನ್ನು ಲಾರಿ ಹಿಂಬದಿಯಲ್ಲಿದ್ದ ಗಾಯಾಳು ಬೈಕ್ ಸವಾರರು ಓವರ್ ಟೆಕ್ ಮಾಡಿದ್ದಾರೆ. ಈ ವೇಳೆ ಲಾರಿ ಎದುರಿಗೆ ಬರುತ್ತಿದ್ದ ಕೊರ್ಲಹಳ್ಳಿಯಿಂದ ಮುಂಡರಗಿ ಕಡೆಗೆ ಹೊರಟಿದ್ದ ಮೃತ ಬೈಕ್ ಸವಾರರ‌ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಮುಂಡರಗಿ‌ ಕಡೆಗೆ ಹೊರಟಿದ್ದ ಬೈಕ್ ಸವಾರರಿಬ್ಬರು ಲಾರಿ ಚಕ್ರಕ್ಕೆ ಸಿಲುಕಿ ಅಸುನೀಗಿದ್ದಾರೆ. ಓರ್ವ ಸ್ಥಳದಲ್ಲೇ‌ ಮೃತಪಟ್ಟಿದ್ದರೆ, ಇನ್ನೋರ್ವ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮುಂಡರಗಿ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾತು ತಪ್ಪಿದ ಪ್ರಧಾನಿ ಮೋದಿ; ಉಮರ್ ಫಾರೂಕ್ ಖಂಡನೆ

ವಿಜಯಸಾಕ್ಷಿ ಸುದ್ದಿ, ಗದಗ:

ಅಚ್ಚೇ ದಿನ್ ಆನೆವಾಲೆ ಎಂದು ಸುಳ್ಳು ಭರವಸೆ ಕೊಟ್ಟು ಜನರಿಂದ ಮತ ಪಡೆದು ಅಧಿಕಾರವನ್ನು ಗಿಟ್ಟಿಸಿಕೊಂಡ ಪ್ರಧಾನಿ, ಕೊಟ್ಟ ಮಾತಿನಂತೆ ನಡೆದಿಲ್ಲ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ದ ಅಧ್ಯಕ್ಷ ಉಮರ್ ಫಾರೂಕ ಹುಬ್ಬಳ್ಳಿ ಮೋದಿಯವರ ಬಂಡವಾಳ ಶಾಹಿ ನೀತಿಯನ್ನು ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಫಾರೂಕ್ ಹುಬ್ಬಳ್ಳಿ, ಅಧಿಕಾರಕ್ಕೆ ಬಂದ ನಂತರ ಭಾರತೀಯ ನಾಗರಿಕರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದ್ದರು. ಅದರೆ ಎಂಟು ವರುಷಗಳಾದರೂ ಖಾತೆಗೆ ಯಾವುದೇ ಹಣ ಜಮಾ ಆಗಿರುವುದಿಲ್ಲ.

ಸಬಕಾ ಸಾಥ್, ಸಬಕಾ ವಿಕಾಸ್ ಮತ್ತು ಸಬಕಾ ವಿಶ್ವಾಸ ಎಂದು ಇಡೀ ದೇಶದಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಿ ಕನ್ನಡ , ತಮಿಳು, ಮರಾಠಿ, ಮಲಯಾಳಂ ಮತ್ತು ಮುಂತಾದ ಇತರೆ ಭಾಷಿಕರಲ್ಲಿ ಅವಿಶ್ವಾಸ ಮೂಡಿಸಿದ್ದಾರೆ. ದೇಶದ ಬೆನ್ನೆಲಬು ಆಗಿರುವ ರೈತರ ಹಿತಾಸಕ್ತಿ ವಿರುದ್ಧ ಸಂಬಂಧಿಸಿದಂತೆ ಕಾನೂನು ಪಾಸು ಮಾಡಿ ರೈತರು ನಿರಂತರ ಹೋರಾಟ ಮಾಡಿದ ನಂತರ ಪ್ರಧಾನಿ ಮೋದಿಯವರು ರೈತರ ಕ್ಷಮೆ ಕೇಳುವಂತಾಗಿದ್ದು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿಲ್ಲ ಅನ್ನುವುದು ಇದರಿಂದಾಗಿ ಗೋಚರವಾಗಿದೆ.

ರೈಲು, ವಿಮಾನ ನಿಲ್ದಾಣಗಳನ್ನು ಮತ್ತು ಬಂದರುಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದು, ದೇಶವನ್ನು ಬಂಡವಾಳ ಶಾಹಿಗಳ ಕೈಗೆ ಕೊಟ್ಟಿದ್ದು, ದುಡಿಯುವ ಕೈಗಳಿಗೆ ಸೂಕ್ತ ದುಡಿಮೆ ಮತ್ತು ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ.

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಾಗಿ ಬಡವರ ಮತ್ತು ಮಧ್ಯಮ ವರ್ಗದವರ ಹೊಟ್ಟೆ ಮೇಲೆ ಬರೆ ಎಳೆದಿದ್ದಾರೆ.

ಜಿಡಿಪಿ ದರವು ಪ್ರಧಾನಿ ಮೋದಿಯವರ ಕಾಲದಲ್ಲಿ ಕುಸಿದಿರುವಷ್ಟು ಬೇರೆ ಯಾವ ಪ್ರಧಾನಿ ಕಾಲದಲ್ಲಿ ಕುಸಿದಿಲ್ಲ. ದೇಶದ ಅರ್ಥವ್ಯವಸ್ಥೆ ನಿರ್ವಹಣೆ ಸರಿಯಾದ ರೀತಿ ಆಗುತ್ತಿಲ್ಲ ಎಂದು ಅವರು ದೂರಿದ್ದಾರೆ.

ರಸ್ತೆಯಲ್ಲಿರುವ ಗುಂಡಿಗಳು, ಅನೇಕ ನಾಗರಿಕರ ಜೀವ ಹಾನಿಗೆ ಸಾಕ್ಷಿಯಾಗಿವೆ. ನೀರು ಸಂಗ್ರಹಕ್ಕೆ ಅನೂಕೂಲವಾಗಿರುವ ಆಣೆಕಟ್ಟುಗಳು ಹೂಳು ತುಂಬಿಕೊಂಡಿದ್ದು, ಮಳೆ ಬರದಿದ್ದರೆ ಕ್ರಿಕೆಟ್ ಮೈದಾನವಾಗುತ್ತವೆ. ಅವುಗಳ ಅಭಿವೃದ್ಧಿಗೆ ಯಾವುದೇ ಯೋಜನೆಗಳಿಲ್ಲ ಎಂದಿದ್ದಾರೆ.

ತಮ್ಮದೇ ಪಕ್ಷದ ಅನೇಕ ಜನಪ್ರತಿನಿಧಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿರುವುದು ನೋಡಿದರೆ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಶೇಕಡಾ 40 ರಷ್ಟು ಕಮೀಶನ್ ಪಡೆಯುವ ಸರ್ಕಾರದ ವ್ಯವಸ್ಥೆ ನಿರ್ಮಾಣವಾಗಿದ್ದನ್ನು ನೋಡಿದರೆ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಆಡಳಿತವನ್ನು ನಿರೀಕ್ಷೆ ಮಾಡಲಿಕ್ಕೆ ಆಗುವುದಿಲ್ಲ.
ಬಡವರ, ರೈತರ, ಕಾರ್ಮಿಕರ ಮಹಿಳೆಯರ, ಮಕ್ಕಳ ಮತ್ತು ನಿರ್ಗತಿಕರ ಆಶಾಕಿರಣಕ್ಕೆ ಪೂರಕವಾಗುವ ಯಾವ ಯೋಜನೆಗಳು ವಿಫುಲವಾಗಿ ತರುತ್ತೇವೆ ಎಂಬ ಅಚ್ಚೇ ದಿನ ಆಯೆಂಗೆ ಎಂಬ ಮಾತು ಬರೀ ಸುಳ್ಳು. ಕೊಟ್ಟ ಮಾತಿನಂತೆ ನಡೆಯದ ಪ್ರಧಾನಿ ಮೋದಿಯವರು ಆಗಿದ್ದಾರೆ ಎಂದು ಉಮರ್ ಫಾರೂಕ್ ಟೀಕಿಸಿದ್ದಾರೆ.

error: Content is protected !!