Home Blog Page 3239

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ (34), ಶೈಲಮ್ಮ (29) ಆತ್ಮಹತ್ಯೆಗೆ ಶರಣಾದ ದಂಪತಿ.

ನಿನ್ನೆ ಸಂಜೆ ಪತ್ನಿ ಶೈಲಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಪತ್ನಿಯ ಸಾವಿನ ಬಳಿಕ ಮನನೊಂದು ಪತಿಯೂ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪಿಎಸ್ ಐ ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀಪ್- ಲಾರಿ ಮಧ್ಯೆ ಭೀಕರ ಅಪಘಾತ; 8 ಜನರ ದಾರುಣ ಸಾವು

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ಚಿಂತಾಮಣಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸ್ಥಳದಲ್ಲೇ‌ ಸಾವಿಗೀಡಾಗಿ, ಹಲವರು ಗಾಯಗೊಂಡ ಘಟನೆ ಸಂಭವಿಸಿದೆ.

ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ಜೀಪ್ ಗೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮರಿನಾಯಕನಹಳ್ಳಿ ಬಳಿ ಸಿಮೆಂಟ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಮಾನವೀಯತೆ ಮೆರೆದ ಶಾಸಕರು

ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶಕುಮಾರ್, ಮಾಲೂರ್ ಶಾಸಕ ಕೆ.ವೈ. ನಂಜೇಗೌಡ ಗಾಯಾಳುಗಳನ್ನು ಸಾಗಿಸಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಸ್ಥಳಕ್ಕೆ‌ ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಕಾರು ಡಿಕ್ಕಿ; ಯುವಕರಿಬ್ಬರ ದುರ್ಮರಣ

0

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಕಾರು ರಸ್ತೆ ಬದಿಯ ಗೂಟದ ಕಲ್ಲಿಗೆ ಡಿಕ್ಕಿಯಾಗಿ ಬಳಿಕ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ್ದರಿಂದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ವಿನಾಯಕ‌ ಚಿದಾನಂದ ಕಾವೇರಿ (22) ಮುತ್ತು ಮಾಳಿ (22) ಮೃತ ಯುವಕರು. ಈರಯ್ಯ ಹಿರೇಮಠ (22) ಸ್ಥಿತಿ ಗಂಭೀರವಾಗಿದ್ದು, ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಥಣಿ ಪಟ್ಟಣದ ಈರಯ್ಯ ಅವರ ತಾಯಿಯನ್ನು ಧಾರವಾಡಕ್ಕೆ ಬಿಟ್ಟು ಬರುವಾಗ ರಾಯಬಾಗ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮುಂದಿನ ಸೀಟಿನಲ್ಲಿ ಕುಳಿತ ಚಾಲಕ ಹಾಗೂ ಮತ್ತೋರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಹಿಂದೆ ಕುಳಿತ ಇಬ್ಬರು ಸಣ್ಣಪುಟ್ಟ ಗಾಯಗಳಾಗಿವೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನಗಳ ತೆರವಿಗೆ ಸಂಸದ ಪ್ರತಾಪಸಿಂಹ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮೈಸೂರಿನಾದ್ಯಂತ 90ಕ್ಕೂ ಹೆಚ್ಚು ದೇವಾಲಯ ನೆಲಸಮಗೊಳಿಸಲು ಜಿಲ್ಲಾಡಳಿತ ಮುಂದಾಗಿರುವುದು ಸರಿಯಲ್ಲ. ಇದರಿಂದ ಹಿಂದು ಜನರ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಮೈಸೂರು ಸಂಸದ ಪ್ರತಾಪಸಿಂಹ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೆಡಿಪಿ ಸಭೆಯಲ್ಲಿ ಇದನ್ನೇ ಚರ್ಚೆ ಮಾಡಿದ್ದೇನೆ. ನ್ಯಾಯಾಲಯ ತೀರ್ಪು ನೆಪ ಮಾಡಿ ಮಧ್ಯರಾತ್ರಿ ಕಳ್ಳರ ರೀತಿ ಬಂದು ಹಿಂದು ದೇವಾಲಯ ಕೆಡವುತ್ತಿದ್ದಾರೆ. ಕಳ್ಳರು ದರೋಡೆಕೋರರು ಜನರಿಲ್ಲದ ವೇಳೆ ಮಾಡುವ ಹಾಗೆ ದೇವಸ್ಥಾನಗಳನ್ನು ಕೆಡವಲಾಗುತ್ತಿದೆ. ಇದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ರಸ್ತೆ ಮಧ್ಯೆ, ಅಕ್ರಮವಾಗಿ ನಿರ್ಮಿಸಿರುವ ಯಾವುದೇ ಕಟ್ಟಡ ಕೆಡವಲಿ. ಕೇವಲ ಹಿಂದು ದೇವಸ್ಥಾನ ಮಾತ್ರ ಟಾರ್ಗೆಟ್ ಮಾಡುತ್ತಿರುವುದೇಕೆ. ಚರ್ಚ್ ಮತ್ತು ಮಸೀದಿ ಇಲ್ಲವೆ ? ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತೆತ್ತಿದ್ದರೆ ಸುಪ್ರೀಂ ಕೋರ್ಟ್ ಆರ್ಡರ್ ನೆಪ ಹೇಳುತ್ತಿದ್ದಾರೆ. ನಮ್ಮ ಹತ್ತಿರವೂ ಸುಪ್ರೀಂಕೋರ್ಟ್ ಆರ್ಡರ್ ಇದೆ. 2009ರಲ್ಲಿ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತಲೆ ಎತ್ತಲು ಬಿಡಬೇಡಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಟಿರಿ. ಈ ಕಾರಣಕ್ಕಾಗಿಯೇ ರಾಜು ಮರ್ಡರ್ ಆಯಿತು ಎಂದು ಪ್ರತಾಪ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ದೇವರಾಜ ಅರಸ್ ರಸ್ತೆಯ ದರ್ಗಾ ತೆರವುಗೊಳಸಿದರೆ ಬಳೆ ತೊಟ್ಟು ಕೂರುವುದಿಲ್ಲ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಬಳೆ ತೊಡುವ ಹೆಣ್ಣಿನ ಬಗ್ಗೆ ತಾತ್ಸರ ಏಕೆ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ಅದೇಶ ಪರಾಮರ್ಶೆ ಮಾಡಿ ಮತ್ತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಬೇಕು. ನಮ್ಮ ಮನವಿಗೆ ಸ್ಪಂದಿಸಿದೆ ದೇವಸ್ಥಾನ ತೆರವು ಮಾಡಿದರೆ ರಾಜ್ಯಾದ್ಯಂತ ಜನಾಂದೋಲ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯನ್ನು ಬೆಚ್ಚಿ ಬಿಳಿಸಿದ ಡೆಂಘಿ ಜ್ವರ

0

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಜಿಲ್ಲೆಯಲ್ಲಿ ಡೆಂಘಿ ಜ್ವರ ಜನರನ್ನು ಕೆಂಗೆಡಿಸಿದ್ದು, 120ಕ್ಕೂ ಹೆಚ್ಚು ಜನರಲ್ಲಿ, ಅದರಲ್ಲೂ ಮಕ್ಕಳೇ ಜ್ವರಕ್ಕೆ ತುತ್ತಾಗಿರುವುದು ಪಾಲಕರಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಕಾಡುತ್ತಿದೆ.

ಪರಿಸ್ಥಿತಿ ಅವಲೋಕಿಸಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಕ್ತ ಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ನಟರಾಜ್ ಅವರ ನೇತೃತ್ವದಲ್ಲಿ ವೈದ್ಯರ ತಂಡ ರಚನೆ ಮಾಡಲಾಗಿದೆ.

ಡೆಂಘಿ ಸೇರಿದಂತೆ ಹಲವಾರು‌ ಪ್ರಕಾರ ತೊಂದರೆಗಳಿಂದ‌ ಮಕ್ಕಳು ಬಳಲುತ್ತಿದ್ದು,
ಜಿಲ್ಲಾ ಆಸ್ಪತ್ರೆ ಹಾಗೂ ಬಾಪೂಜಿ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

ವ್ಯಾಕ್ಸಿನ್ ಪಡೆದವರಿಗೂ ವಕ್ಕರಿಸಿದ ಸೋಂಕು!

0

ವಿಜಯಸಾಕ್ಷಿ ಸುದ್ದಿ, ಕೊಡಗು

ವ್ಯಾಕ್ಸಿನ್ ಪಡೆದಿದ್ದೇವೆ ಕೊರೊನಾ ಬರಲ್ಲ ಎಂದು ನೆಗ್ಲೆಟ್ ಮಾಡಿ ಕೋವಿಡ್ ನಿಯಮ ಉಲ್ಲಂಘಿಸುವ ಜನರೇ ಎಚ್ಚರ. ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದ ಕೊಡಗಿನ 953 ಜನರಿಗೆ ಮಹಾಮಾರಿ ಕೊರೊನಾ ವಕ್ಕರಿಸಿದೆ.

ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನೆಲ್ಲ ಆರ್ ಟಿಪಿಎಸ್ ಟೆಸ್ಟ್ ಮಾಡಲಾಗಿದೆ. ಈ ವೇಳೆ ಅವರೆಲ್ಲರಿಗೂ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲರಿಗೂ ಆಸ್ಪತ್ರೆ ಮತ್ತು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ.

ಸದ್ಯ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ. ಆದರೆ, ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಇದುವರೆಗೆ ಯಾರಿಗೂ ಸೋಂಕು ದೃಢಪಟ್ಟ ಪ್ರಕರಣಗಳಿಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾಹಿತಿ ನೀಡಿದ್ದಾರೆ.

ಕೊಕ್ಕರಗುಂದಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ‘ಕೊಕ್ಕೆ’; ಹರಿಯುತ್ತಿರುವ ಹಳ್ಳ ದಾಟಿದರೆ ಮಾತ್ರ ಶಾಲೆಗೆ ಹಾಜರು!

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ತಾಲೂಕಿನ ಕೊಕ್ಕರಗುಂದಿ ಗ್ರಾಮವು ಹಲವು ವರ್ಷಗಳಿಂದಲೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದ್ದು, ಸಾರಿಗೆ ಬಸ್ ವ್ಯವಸ್ಥೆಯೂ ಸರಿಯಾಗಿ ಇಲ್ಲದೆ, ಹರಿಯುತ್ತಿರುವ ಎರಡು ಹಳ್ಳ ದಾಟಿದರೆ ಮಾತ್ರ ತರಗತಿಗಳಿಗೆ ಹಾಜರಿ ಬೀಳುತ್ತದೆ.

ಗ್ರಾಮದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿದ್ದು, 800ಕ್ಕೂ ಅಧಿಕ ಮತದಾರರನ್ನು ಹೊಂದಿದೆ. ತಾಲೂಕಿನ ಕಡೇ ಹಳ್ಳಿ ಇದಾಗಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಹಾಳಾಗಿವೆ. 1ರಿಂದ 7ನೇ ತರಗತಿ ವರೆಗೂ ಸರಕಾರಿ ಶಾಲೆ ಇದ್ದು, ಮುಂದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಬೇರೆ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದೆ ಇರುವುದರಿಂದ ಆರೋಗ್ಯ ತಪಾಸಣೆಗೂ ಬೇರೆ ಊರುಗಳನ್ನೇ ಅವಲಂಬಿಸಬೇಕಾಗಿದೆ. ಇನ್ನೂ ಇಲ್ಲಿಯ ಬಹುತೇಕ ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಬಾಲೇಹೊಸೂರ ಗ್ರಾಮದಲ್ಲಿಯೇ ಹೊಂದಿದ್ದು, ಇದಕ್ಕೂ ದೈನಂದಿನ ಕೆಲಸಗಳನ್ನು ಬಿಟ್ಟು ಅಲೆದಾಡಬೇಕಾಗಿದೆ.

ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಮಾರಕ

ಪ್ರೌಢಶಾಲೆ ಸೇರಬೇಕೆಂದರೆ ಬೆಳ್ಳಟ್ಟಿ-ಲಕ್ಷ್ಮೇಶ್ವರ ಮುಂತಾದ ಕಡೆಗಳಿಗೆ ತೆರಳಬೇಕಾಗಿದೆ. ಬೆಳಗ್ಗೆ 7.15ಕ್ಕೆ ಒಂದೇ ಒಂದು ಬಸ್ ಮೇವುಂಡಿಯಿಂದ ಬರುತ್ತದೆ. ಲಕ್ಷ್ಮೇಶ್ವರಕ್ಕೆ ತೆರಳುತ್ತದೆ. ಆಮೇಲೆ ತಾಲೂಕು ಕೇಂದ್ರ ಶಿರಹಟ್ಟಿ ಅಥವಾ ಬೇರಾವುದೇ ಕಡೆಗಳಿಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲ.

ಹೆಣ್ಣುಮಕ್ಕಳು ನಡೆದುಕೊಂಡು ಅಷ್ಟು ದೂರ ತೆರಳಿ ಶಾಲೆ ಕಲಿಯುವುದಕ್ಕೆ ಪೋಷಕರ ಸಹಮತವಿಲ್ಲದೆ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೆಲಸ ನಿಮಿತ್ತ ಬೇರೆ ಊರುಗಳಿಗೆ ತೆರಳಲು 3-4 ಕಿ.ಮೀ. ನಡೆಯಬೇಕು. ಆಮೇಲೆ ಏನಾದರೂ ವಾಹನ ಸಿಕ್ಕರೆ ಪುಣ್ಯ.

ಆಮರಣ ಉಪವಾಸ: ಎಚ್ಚರಿಕೆ

ಗ್ರಾಮಸ್ಥರಾದ ಚನ್ನಬಸನಗೌಡ ಪಾಟೀಲ, ವಸಂತಗೌಡ ಪಾಟೀಲ ಮಾತನಾಡಿ, ಸಮರ್ಪಕ ಬಸ್ ಸಂಚಾರಕ್ಕೆ ಹಲವಾರು ಬಾರಿ ವಿನಂತಿಸಿಕೊಳ್ಳಲಾಗಿತ್ತು, ಇಲ್ಲಿಯವರೆಗೂ ಈ ಕೆಲಸ ಆಗಿಲ್ಲ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿರಹಟ್ಟಿ ತಹಸೀಲ್ದಾರ್ ಕಚೇರಿ ಎದುರುಗಡೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದರು.

2-3 ದಿನಗಳಲ್ಲಿ ಕ್ರಮ

ಲಕ್ಷ್ಮೇಶ್ವರ ಡಿಪೋ ಮ್ಯಾನೇಜರ್ ಅಶೋಕ ವೆರ್ಣೇಕರ ಪ್ರತಿಕ್ರಿಯಿಸಿ, 2-3 ದಿನಗಳಲ್ಲಿ ಸಮರ್ಪಕ ಬಸ್ ಸಂಚಾರ ಆರಂಭಿಸಲು ಕ್ರಮ ಕೈಕೊಳ್ಳಲಾಗುವುದು ಎಂದರು.

ಬಿಜೆಪಿ ಹಣದ ಆಫರ್ ಕೊಟ್ಟಿದ್ದು ನಿಜ; ಶಾಸಕ ಪಾಟೀಲ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ನಾನು ಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ಕೊಟ್ಟಿದ್ದು ನಿಜ ಎಂದು ವಲಸಿಗ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನಗೆ ಹಣದ ಆಫರ್ ಕೊಟ್ಟರೂ ನಾನು ಬೇಡ ಎಂದಿದ್ದೆ. ಯಾವುದೇ ಹಣ ನನಗೆ ಬೇಡ, ಒಳ್ಳೆಯ ಸ್ಥಾನ-ಮಾನ ಬೇಕು ಎಂದಿದ್ದೆ. ಹಣದ ಬದಲು ನನ್ನ ಕ್ಷೇತ್ರದ ಜನರಿಗೆ ಒಳ್ಳೆಯ ಸೇವೆ ಮಾಡುವ ನಿಟ್ಟಿನಲ್ಲಿ ಯೋಗ್ಯ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೆ ಎಂದು ಹೇಳಿದ್ದಾರೆ.

ಈಗ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಈ ವಿಚಾರದಲ್ಲಿ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ. ಬರುವ ಸಂಪುಟ ವಿಸ್ತರಣೆಯಲ್ಲಿ ಖಂಡಿತವಾಗಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರತಿಪಕ್ಷಗಳಿಗೆ ಪ್ರಬಲ‌ ಅಸ್ತ್ರ ಲಭಿಸಿಂತಾಗಿದೆ. ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ವಿಷಯ ಹಿಡಿದು ಸರ್ಕಾರದ ಮೇಲೆ‌ ಮುಗಿಬೀಳುವ, ರಾಜ್ಯಪಾಲರ ಮೊರೆ ಹೋಗುವ ಸಾಧ್ಯತೆ ಇದೆ.

ಮಧ್ಯವರ್ತಿಗಳು, ಏಜೆಂಟ್ ರನ್ನು ದೂರ ಇಟ್ಟಾಗ ಆರೋಪ ಮಾಡೋದು ಸಹಜ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಮಧ್ಯವರ್ತಿಗಳು, ಏಜೆಂಟ್ ರನ್ನು ದೂರ ಇಟ್ಟಾಗ, ಆರೋಪ ಮಾಡುವುದು ಸಹಜ. ಯಾವ ತನಿಖೆ ನಡೆಸಿದರೂ ಉತ್ತರ ನೀಡಲು ಸಿದ್ಧ ಎಂದು ಕಿಕ್ ಬ್ಯಾಕ್ ಆರೋಪಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಹಿರಿಯೂರು ನಗರಕ್ಕೆ ತೆರಳುವ ಮಾರ್ಗ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದವೂ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು. ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ 500 ಕೋಟಿ ರೂ‌. ಕಿಕ್ ಬ್ಯಾಕ್ ಆರೋಪ ಬಂದಿತ್ತು ಎಂದು ತಿರುಗೇಟು ನೀಡಿದರು.

ಕೃಷಿ ಇಲಾಖೆಯ ಟೆಂಡರ್ ಆನ್ ಲೈನ್ ಮೂಲಕ ನಡೆಯುತ್ತದೆ.‌ ಒಂದು ಪೈಸೆ ಕೂಡ ಅವ್ಯವಹಾರ ಸಾಧ್ಯವಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಇಲಾಖೆಗಳಿಗಿಂತ ಪಾರದರ್ಶಕವಾಗಿರುವುದು ಕೃಷಿ ಇಲಾಖೆ ಒಂದೇ.

ಪ್ರತಿಯೊಬ್ಬ ರೈತ ಆನ್ ಲೈನ್ ನಲ್ಲಿ ಹಣ ಕಟ್ಟುತ್ತಾನೆ.‌ ದುರುದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆರೋಪ ಪ್ರೂ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಜನ ವಿರೋಧಿ ಸರ್ಕಾರ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪಾಟೀಲ್, ಜನಪರವಾಗಿ ಅವರು ಇದ್ದದ್ದರೆ ಜನ ಯಾಕೆ ತಿರಸ್ಕಾರ ಮಾಡುತ್ತಿದ್ದರು. ಅದಕ್ಕಾಗೆ ಅವರು ವಿರೋಧ ಪಕ್ಷದಲ್ಲಿ ಇರುತ್ತಾರೆ.

2023 ರಲ್ಲಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ‌‌‌ ಎಂದು ಸಚಿವ ಬಿ.ಸಿ.ಪಾಟೀಲ ಭರವಸೆ ವ್ಯಕ್ತಪಡಿಸಿದರು.

ನಿಫಾ ವೈರಸ್ ಆತಂಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ರಾಜ್ಯದಲ್ಲಿ ಗಡಿ ಭಾಗದಲ್ಲಿ ಚೆಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ನೆಗಟಿವ್ ವರದಿ ಬಂದ ಬಳಿಕವಷ್ಟೇ ರಾಜ್ಯಕ್ಕೆ ಬರಲು ನಿಯಮ ಜಾರಿ ಇದೆ. ಉಳಿದ ರಾಜ್ಯಗಳಿಗಿಂತ ನಮ್ಮ ರಾಜ್ಯದವರು ಸೇಫ್ ಇದ್ದೇವೆ ಎಂದು ಹೇಳಿದರು.

ರೈತ ವಿರೋಧಿ ಕಾಯ್ದೆ ಖಂಡಿಸಿ ಭಾರತ್ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ, ಯಾವುದೂ ರೈತ ವಿರೋಧಿ ಕಾಯ್ದೆ ಇಲ್ಲ. ಸರ್ಕಾರ ರೈತರಿಗೆ ಹಿಂದಿಗಿಂತಲೂ ಎಂಎಸ್ ಪಿ ಹೆಚ್ಚು ನೀಡುತ್ತಿದೆ. ರೈತರ ಬೆಳೆದ ಬೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದು ಹೇಗೆ ರೈತ ವಿರೋಧಿ ನೀತಿ, ಇದು ರೈತ ಪರ ನೀತಿ. ಎಲ್ಲ ಕಾಯ್ದೆಗಳು ರೈತರ ಪರ ಇವೆ. ದುರುದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.

ಗಣೇಶೋತ್ಸವ ಷರತ್ತನ್ನು ಹಿಂದು ಪರ ಸಂಘಟನೆಗಳು ಉಲ್ಲಂಘನೆ ಮಾಡುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ ಮತ್ತು ಸಂಘ ಪರಿವಾರದವರು ಮಾತನಾಡುತ್ತಾರೆ. ಇದು ದೊಡ್ಡ ವಿಷಯ ಅಲ್ಲ. ಯಾರೂ ಸೆಡ್ಡು ಹೊಡೆಯುವ ಪ್ರಶ್ನೆಯೇ ಇಲ್ಲ. ಭಾರತೀಯರಾದ ನಾವು ಹಿಂದುಗಳು ಹಬ್ಬ ಮಾಡುತ್ತೇವೆ. ಗಣೇಶ ಹಬ್ಬಕ್ಕೆ ಐದು ದಿನ ಅವಕಾಶ ನೀಡಿದ್ದಾರೆ. ಇನ್ನೂ ನಾಲ್ಕು ದಿನ ಸಮಯ ಇದೆ. ಎಲ್ಲ ಸರಿ ಹೋಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯದ ಪಾಲಿನ ನೀರು ಬಳಕೆ‌ ಮಾಡಿಕೊಳ್ಳಲು ಅಗತ್ಯ ಯೋಜನೆ; ಸಚಿವ ಗೋವಿಂದ ಕಾರಜೋಳ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ರಾಜ್ಯದ ನೀರಾವರಿ ಯೋಜನೆಗಳಲ್ಲಿ ನಮ್ಮ ಪಾಲಿನ ನೀರನ್ನು ಉಪಯೋಗ ಮಾಡಿಕೊಳ್ಳಲು ಯೋಜನೆ ರೂಪಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಜಲಸಂಪನ್ಮೂಲ ಹಾಗೂ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಶನಿವಾರ ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಸಚಿವನಾಗಿ ಒಂದು ತಿಂಗಳಾಗಿದೆ. ಈ ಅವಧಿಯಲ್ಲಿ ಎರಡು ಬಾರಿ ಸಿಎಂ ಜೊತೆಗೆ ದೆಹಲಿಗೆ ಹೋಗಿ ಕೇಂದ್ರ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್ ಅವರೊಂದಿಗೆ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಸಭೆ ಮಾಡಿದ್ದೇವೆ.

ತಜ್ಞರ ಜೊತೆಗೂ ಸಭೆ ನಡೆಸಿ ಅಂತರರಾಜ್ಯ ಜಲವಿವಾದಗಳಲ್ಲಿ ನಮ್ಮ ಪರ ತೀರ್ಪು ಬರುವಂತೆ ವಾದ ಮಾಡಲು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಸಿಡಬ್ಲುಸಿ ಅಧಿಕಾರಿಗಳ ಜೊತೆಗೂ ಸಭೆ ಮಾಡಿದ್ದೇವೆ. ಎತ್ತಿನಹೊಳೆ ಯೋಜನೆಯಲ್ಲಿ ನಮಗೆ 24 ಟಿಎಂಸಿ ನೀರು ಬರಲಿದೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ.

ಖಂಡಿತವಾಗಲೂ ನಮ್ಮ ಪಾಲಿನ ನೀರನ್ನು ಉಪಯೋಗ ಮಾಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಐತಿಹಾಸಿಕ ನಗರ ಅನ್ನೋದು ಸಾಬೀತು ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಇನ್ನೂ ಏನೇನು ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬ ಬಗ್ಗೆ ಶಾಸಕರು, ಸಂಸದರು ತೀರ್ಮಾನಿಸುತ್ತಾರೆ.

ಅದೆಲ್ಲವನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಬೆಳಗಾವಿಯ ಬೈಪಾಸ್ ರಸ್ತೆಗೆ ಬಜೆಟ್‍ನಲ್ಲಿ ಅನುದಾನ ಘೋಷಣೆ ಮಾಡಿದ್ದೇವೆ, ಕಾಮಗಾರಿ ಪ್ರಕ್ರಿಯೆ ಶುರುವಾಗಿದ್ದು, ಆದಷ್ಟು ಬೇಗ ಕೆಲಸ ಆರಂಭವಾಗಲಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಶಾಸಕರ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಹುತೇಕ ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಕಲಬುರ್ಗಿ ಪಾಲಿಕೆಯಲ್ಲಿಯೂ ನೂರಕ್ಕೆ ನೂರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದೆ ಮಂಗಳ ಅಂಗಡಿ, ಶಾಸಕರಾದ ಅಭಯ ಪಾಟೀಲ್, ಅನಿಲ ಬೆನಕೆ, ನಗರ ಬಿಜೆಪಿ ಜಿಲ್ಲಾಧ್ಯಕ್ಷ ಶಶಿಕಾಂತ ಪಾಟೀಲ್, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ. ಜಿರಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!