ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹಳ್ಳಿಕೇರಿ ಗ್ರಾಮದ ಹನುಮಂತಪ್ಪ ಸಿದ್ದಪ್ಪ ಕೋರಿ (22) ಎಂಬ ಕುರಿಗಾಹಿ ಸಿಡಿಲು ಬಡಿದು ಸಾವಿಗೀಡಾದ ಘಟನೆ ಶನಿವಾರ ಸಂಜೆ ವೆಂಕಟಾಪೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರು, ಮಳೆಗಾಗಿ ಕಾಯುತ್ತಿದ್ದರು. ಕಳೆದ ಎರಡು ದಿನಗಳಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಇಂದು ಮಧ್ಯಾಹ್ನದಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದೆ.
ವೆಂಕಟಾಪೂರ ಗ್ರಾಮದ ಜಮೀನೊಂದರಲ್ಲಿ ಕುರಿಗಳನ್ನು ರಕ್ಷಿಸಲು ಹೋಗಿ ಹನುಮಂತಪ್ಪ ಕೋರಿ ಜೀವ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ದೇ ಮೂರು ಕುರಿಗಳು ಸಿಡಲಿಗೆ ಬಲಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಎಂ.ಎ.ನದಾಫ. ಉಪ ತಹಶಿಲ್ದಾರ ಸಿ.ಕೆ.ಬಳೂಟಗಿ. ಗ್ರಾಮಲೆಕ್ಕಾಧಿಕಾರಿ ಕು.ಸೌಮ್ಯ ಭೇಟಿ ಕೊಟ್ಟಿದ್ದರು.
ನರಗುಂದ ವಿಧಾನಸಭಾ ಮತಕ್ಷೇತ್ರದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಲೋಕಾರ್ಪಣೆ
ವಿಜಯಸಾಕ್ಷಿ ಸುದ್ದಿ, ನರಗುಂದ:
‘ನಿಮ್ಮೂರಿಗೆ ಬಂದಾಗ ನೀವು ತೋರಿಸಿರುವ ಪ್ರೀತಿ, ಕೊಟ್ಟಂತಹ ರೊಟ್ಟಿ ಬುತ್ತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾತ್ರಿಯಾದಾಗ ನಿಮ್ಮ ಕಟ್ಟೆಯ ಮೇಲೆ ನಮಗೆ ಜಾಗ ಕೊಟ್ರಿ. ಮನೆಯ ಮಗನಾಗಿ ನೋಡಿಕೊಂಡ್ರಿ. ಹೆಜ್ಜೆಗೆ ಹಜ್ಜೆ ಹಾಕಿದ್ರಿ. ಹೆಗಲಿಗೆ ಹೆಗಲು ಕೊಟ್ರಿ. ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಮುಂದುವರೆದ ಹೋರಾಟದಲ್ಲಿ ನಮ್ಮೊಂದಿಗೆ ಉಪವಾಸ ಕೂತ್ರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳಸಾ ಬಂಡೂರಿ ಯೋಜನೆಯ ಹೋರಾಟದ ಹೆಜ್ಜೆಗಳನ್ನು ಮೆಲುಕು ಹಾಕಿ ಭಾವುಕರಾದರು.
ಶುಕ್ರವಾರ ನರಗುಂದ ವಿಧಾನಸಭಾ ಮತಕ್ಷೇತ್ರದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ನಿಮ್ಮೆಲ್ಲರ ಒತ್ತಾಸೆಯಂತೆ ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಂದಿನ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ ಅವರ ಇಚ್ಛಾಶಕ್ತಿಯಿಂದ ಕಳಸಾ ಬಂಡೂರಿಗೆ ಅಡಿಗಲ್ಲು ಹಾಕಲಾಯಿತು. ಅಡಿಗಲ್ಲು ಹಾಕಬಾರದೆಂದು ಪ್ರಯತ್ನಿಸಿದರೂ ದಿಟ್ಟತನದ ನಿರ್ಧಾರದಿಂದ ೨೦೦೮ರಲ್ಲಿ ಜಲಸಂಪನ್ಮೂಲ ಸಚಿವನಾಗಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿತು.
ಈ ಹಿಂದೆಯೇ ಐದೂವರೆ ಕಿ.ಮೀ. ಇಂಟರ್‌ಲಿಂಕ್ ಕ್ಯಾನಲ್ ಪೂರ್ಣಗೊಳಿಸಿದ್ದೇವೆ. ಕೇವಲ ನದಿ ನೀರನ್ನು ಸ್ವಲ್ಪಮಟ್ಟಿಗೆ ತಿರುಗಿಸಿದರೆ ಕಳಸಾ ಬಂಡೂರಿ, ಮಹದಾಯಿ, ಮಲಪ್ರಭೆ ಸೇರುತ್ತದೆ. ಆದರೆ, ಅವತ್ತಿನ ಗೋವಾ ಸರ್ಕಾರ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಟ್ಟು ಕೊಡುವುದಿಲ್ಲವೆಂದು ಕೋರ್ಟ್‌ಗೆ ಹೋದರು. ಅವತ್ತಿನ ಯುಪಿಎ ಸರ್ಕಾರ ಟ್ರಿಬಿನಲ್ ತೀರ್ಪನ್ನು ನಮ್ಮ ವಿರುದ್ಧ ಮಾಡಿದ್ದನ್ನು ನೆನಪಿಟ್ಟುಕೊಳ್ಳಬೇಕು ಎಂದರು.
‘ಅಂದು ಕಳಸಾ ಬಂಡೂರಿ ವಿರೋಧಿಸಿದವರಿಂದು ಈ ಯೋಜನೆಗಾಗಿ ಪಾದಯಾತ್ರೆ ಮಾಡಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ, ಟ್ರಬಿನಲ್‌ಗೆ ಹೋಗಿ ನ್ಯಾಯ ಕೊಡುವಂತೆ ಆಗ್ರಹಿಸಿದ ಸಂದರ್ಭದಲ್ಲಿ ಮಹದಾಯಿಯನ್ನು ಮಲಪ್ರಭೆಗೆ ಜೋಡಿಸುವ ಇಂಟರ್‌ಲಿಂಕ್ ಕೆನಾಲ್‌ಗೆ ನೀರು ಹರಿಸುವುದಿಲ್ಲ, ನಾವು ನೀರು ಹರಿಯದಂತೆ ಗೋಡೆ ಕಟ್ಟುತ್ತೇವೆಂದು ಬರೆದು ಕೊಟ್ಟ ಪುಣ್ಯಾತ್ಮರು ಇವರು. ಹೀಗಾಗಿ ನಾವು ಮಾಡಿದ ಕೆನಾಲ್‌ಗೆ ಗೋಡೆ ಕಟ್ಟಿದವರನ್ನು, ಟ್ರಿಬಿನಲ್ ಮಾಡಿದವರನ್ನು, ನೀರು ಕೊಡುವುದಿಲ್ಲವೆಂದು ಹೇಳಿದವರನ್ನು ಬೆಂಬಲಿಸಬೇಕೋ? ಬೇಡವೋ? ಎಂಬ ತೀರ್ಮಾನ ನಿಮ್ಮದು ಎಂದು ಹೇಳಿದರು.
‘ಸುಮಾರು ಏಳು ವರ್ಷ ಅವರ ಕೈಯಲ್ಲಿ ಅಧಿಕಾರವಿತ್ತು. ಬಹುತೇಕ ಕಾಮಗಾರಿಗಳನ್ನು ನಾವು ಪೂರ್ಣಗೊಳಿಸಿದ್ವಿ. ಅವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ನೀರು ಕೊಟ್ಟು ದೊಡ್ಡ ಹೆಸರು ಮಾಡಿಕೊಳ್ಳಬಹುದಿತ್ತು. ಆದರೆ, ಈ ವೇಳೆ ರೈತ ಸಂಘಟನೆಗಳು ಹೋರಾಟ ಮಾಡಿದರೆ ಲಾಟಿ ಏಟಿನಿಂದ ಹೊಡೆದು ಹೋರಾಟ ಹತ್ತಿಕ್ಕಲು ಯತ್ನಿಸಿದವರು ಯಾರು?. ನವಲಗುಂದ, ನರಗುಂದದ ಮನೆಯಲ್ಲಿ ಗಂಡುಮಕ್ಕಳು ಇಲ್ಲದಾಗ ಹೆಣ್ಣುಮಕ್ಕಳನ್ನು ಬೂಟುಗಾಲಿನಲ್ಲಿ ಒದ್ದವರು ಯಾರು? ಎಂಬುವುದನ್ನು ಮರೆಯದೆ ನೆನಪಿಟ್ಟುಕೊಳ್ಳಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
‘ಯಾವುದೇ ಹೋರಾಟ ಮಾಡುವಾಗ ಬದ್ಧತೆ ಇರಬೇಕಾಗುತ್ತದೆ. ಈಗ ನಾವು ಮಹದಾಯಿ ಕಾಮಗಾರಿ ಅನುಷ್ಠಾನಗೊಳಿಸಲು ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ೧,೦೦೦ ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ ಮೀಸಲಿಟ್ಟಿರುವ ಅನುದಾನ ಬಳಕೆ ಮಾಡಬೇಕು ಎಲ್ಲ ಅನುಮತಿ ಕೊಡಿ ಎಂದು ಕೇಂದ್ರ ಜಲಸಂಪನ್ಮೂಲ ಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದು, ಮಾಡಿಕೊಡುತ್ತೇನೆಂದು ಭರವಸೆ ನೀಡಿದ್ದಾರೆ. ಕಾನೂನಿನನ್ವಯ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆಂದ ಅವರು, ಅಧಿಕಾರದಲ್ಲಿ ಇರಲಿ, ಇರದಿರಲಿ ನಮ್ಮ ಬದ್ಧತೆ ಸದಾ ಇರುತ್ತದೆ. ಯಲ್ಲಮ್ಮನ ಅಡಿಯಿಂದ ಬಾದಾಮಿ, ಬನಶಂಕರಿಯ ಮುಡಿವರೆಗೂ ಮಹದಾಯಿ ಹರಿಯಬೇಕು ಎಂಬುವುದು ನಮ್ಮ ಇಚ್ಛಾಶಕ್ತಿಯಾಗಿದೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದೇ ವೇಳೆ ಕರ್ನಾಟಕ ಕೊಳಚೆ ನಿರ್ಮಾಣ ಮಂಡಳಿಯಿಂದ ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಕ್ಕುಪತ್ರ ವಿತರಿಸಿದರು.
ಸಿ.ಸಿ.ಪಾಟೀಲ ಮಾತನಾಡಿ, ಏಳು ಲಿಪ್ಟ್ ಇರಿವೇಷನ್ ಲಿಸ್ಟ್ ಮಾಡಿದ್ದರು. ಕಳಪೆ ಮಟ್ಟದ ಕಾಮಗಾರಿಯಿಂದ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ೯೨ ಕೋಟಿ ರೂ. ನೀಡಿದರೆ ಹತ್ತು ಸಾವಿರ ರೈತರಿಗೆ ಅನುಕೂಲ ಆಗಲಿದೆ.
ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರೈತ ಯಾರಿಗೂ ಸೇರಿಲ್ಲ, ಎಲ್ಲರೂ ರೈತರಿಗೆ ಸೇರಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ರೈತರು, ನೆಲ, ಜಲದ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಲ್ಲಬೇಕು. ಅಂದಾಗ ರೈತರ, ರಾಜ್ಯದ ಹಿತಾಸಕ್ತಿ ಕಾಪಾಡಲು ಸಾಧ್ಯ. ನೀರಾವರಿ ಯೋಜನೆಗಳು ಪರಿಪೂರ್ಣತೆಯಾದಾಗ, ರೈತನ ಬೆವರಿನ ಹನಿ ಭೂಮಿಗೆ ಬಿದ್ದಾಗ ಭೂತಾಯಿ ಬಂಗಾರದ ಬೆಳೆ ಕೊಡುತ್ತಾಳೆ’.
ಸಮೀಪದ ಹಂಗನಕಟ್ಟಿ ಕ್ರಾಸ್ ತಿರುವಿನಲ್ಲಿ ಶುಕ್ರವಾರ ಸಂಜೆ ಹಂಗನಕಟ್ಟಿಯಿಂದ ಮದುವೆ ಸಮಾರಂಭವನ್ನು ಮುಗಿಸಿ ಕೊಂಡು ಅಣ್ಣಿಗೇರಿಗೆ ಹೊರಟಿದ್ದ ಟ್ರ್ಯಾಕ್ಟರ್ ಹುಕ್ ಮುರಿದು ಬಿದ್ದು ಟ್ರೇಲರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಪ್ರದೀಪ್ ಕರಿಬಸಣ್ಣನವರ (13) ವಿನಾಯಕ ಸಬನೇಶಿ (18) ಮೃತ ದುರ್ದೈವಿಗಳು.
18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ಆರು ಜನರಿಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದುಗಿನ ತೋಂಟದ ಲಿಂ.ಜ.ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನವಾದ ಫೆಬ್ರುವರಿ 21 ಅನ್ನು ಭಾವೈಕ್ಯತೆಯ ದಿನವನ್ನಾಗಿ ಆಚರಿಸಲು ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಗದುಗಿನ ತ್ರಿವಿಧ ದಾಸೋಹಮೂರ್ತಿ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ. ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳ ಐಕ್ಯಮಂಟಪ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತೋಂಟದಾರ್ಯ ಮಠದೊಂದಿಗೆ 35 ವರ್ಷದ ಒಡನಾಟವಿದ್ದು, ನನ್ನ ಮೇಲೆ ಲಿಂಗೈಕ್ಯ ಹಿರಿಯ ಶ್ರೀಗಳ ಆಶೀರ್ವಾದವಿದೆ. ಶ್ರೀಗಳ ಐಕ್ಯ ಮಂಟಪವನ್ನು ಲೋಕಾರ್ಪಣೆ ಮಾಡಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಅಲ್ಲದೆ, ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ ಎಂದ ಅವರು, ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕ. ಹೀಗಾಗಿ ಶ್ರೀಗಳು ನಮ್ಮೊಂದಿಗೆ ಬದುಕಿದ್ದು, ಅವರ ಐಕ್ಯ ಮಂಟಪ ನಮ್ಮೆಲ್ಲರ ಭಕ್ತಿಭಾವಗಳ ಐಕ್ಯವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಫೆಬ್ರುವರಿ 21 ಅನ್ನು ಭಾವೈಕ್ಯತೆಯ ದಿನವನ್ನಾಗಿ ಆಚರಿಸಬೇಕೆಂಬುವುದು ಶ್ರೀ ಮಠದ ಭಕ್ತರ ಆಸಯವಾಗಿತ್ತು. ಭಾವೈಕ್ಯತೆಯ ದಿನವನ್ನಾಗಿ ಆಚರಿಸುವಂತೆ ಸರ್ಕಾರಕ್ಕೂ ಹಲವು ಬಾರಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದಂದೇ ಸಿಎಂ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಆದೇಶಿಸಲಾಗುವುದು ಎಂದು ಹೇಳಿರುವುದು ಶ್ರೀಮಠದ ಭಕ್ತರಲ್ಲಿ ಹರ್ಷವನ್ನುಂಟು ಮಾಡಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದುರದುಂಡಿಶ್ವರ ಮಠ ಅರಬಾವಿ, ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ತೋಂಟದಾರ್ಯ ಶಾಖಾಮಠ ಮುಂಡರಗಿ-ಬೈಲೂರ, ಶ್ರೀ ಗುರುಬಸವ ಮಹಾಸ್ವಾಮಿಗಳು ತೋಂಟದಾರ್ಯ ಶಾಖಾ ಮಠ ಶಿರೋಳ, ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ದೊರೆಸ್ವಾಮಿ ವೀರಕ್ತಮಠ ಭೈರನಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಚಿವ ಕೆ.ಎಸ್.ಈಶ್ವರಪ್ಪ ಎರಡು ದಿನದ ಹಿಂದೆಯೇ ರಾಜೀನಾಮೆ ಕೊಡಲು ನಿರ್ಧರಿಸಿದ್ದರು
ವಿಜಯಸಾಕ್ಷಿ ಸುದ್ದಿ, ಗದಗ:
ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವುದು ಬಿಡುವುದು ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ತೀರ್ಮಾನಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ಮತಕ್ಷೇತ್ರಕ್ಕೆ 1306.5 ಕೋಟಿ ರೂ. ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿದರು.
ಈ ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಅವರನ್ನು ಬಂಧಿಸಲಿಲ್ಲ. ಕರ್ನಾಟಕ ಪೊಲೀಸ್ ತನಿಖೆ ವೇಳೆಯೂ ಬಂಧಿಸಲಿಲ್ಲ, ಪ್ರಕರಣ ಸಿಬಿಐಗೆ ಹಸ್ತಾಂತರವಾಗಿ ತನಿಖೆ ಮಾಡಿದರೂ ಕೆ.ಜೆ.ಜಾರ್ಜ್ ಅವರನ್ನು ಬಂಧಿಸಲಿಲ್ಲ. ಅಂದು ತಮ್ಮ ಮಂತ್ರಿಗಳನ್ನೇ ಬಂಧಿಸದಿರುವ ಕಾಂಗ್ರೆಸ್‌ನವರಿಗೆ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಹೀಗಾಗಿ ಪ್ರಕರಣದ ಸಂಪೂರ್ಣ ತನಿಖೆ ಆಗುವವರೆಗೂ ಸುಮ್ಮನಿದ್ದು, ಸಹಕರಿಸಬೇಕು. ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಅಲ್ಲದೆ, ಕಾಂಗ್ರೆಸ್ ನವರ ಆರೋಪ ಆಧಾರ ರಹಿತವಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ಎರಡು ದಿನನಗಳ ಹಿಂದೆಯೇ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ನನ್ನಿಂದ ಪಕ್ಷಕ್ಕೆ ಇರಿಸುಮುರಿಸು ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಈಗ ನೈತಿ ಹೊಣೆ ಹೊತ್ತು ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಕೆಡಿಪಿ ಸಭೆಯಲ್ಲಿ ಸಚಿವ ಬಿ.ಸಿ.ಪಾಟೀಲ ಹಾಗೂ ಶಾಸಕ ಕಳಕಪ್ಪ ಬಂಡಿ ಮಾತಿನ ಚಕಮಕಿಯ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಒಳ್ಳೆಯದಕ್ಕೆ ಹಲವಾರು ಚರ್ಚೆಗಳು ಆಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೈಜ ಚರ್ಚೆ ಸಹಜ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
–ಬಸವರಾಜ ಕರುಗಲ್. “ನಾನು ಯುದ್ಧ ಮಾಡೋಕೆ ಬಯಸಲ್ಲ, ತಡೆಯೋಕೆ ನೋಡ್ತಿನಿ.. ಒಂದು ವೇಳೆ ಯುದ್ಧ ಆದ್ರೆ ಗೆದ್ದೇ ಗೆಲ್ತಿನಿ”
ಸಿನಿಮಾ ಮುಗಿಯೊ ಸಮಯಕ್ಕೆ ರಾಕಿ ಭಾಯ್ ಹೇಳೋ ಖಡಕ್ ಡೈಲಾಗ್ ಇದು. ಈ ಡೈಲಾಗ್ ಮೂಲಕಾನೇ ಗೊತ್ತಾಗುತ್ತೆ, ರಾಕಿ ಭಾಯ್‌ಗೆ ಇರೊ ಕಾನ್ಫಿಡೆನ್ಸು, ಕಮಿಟ್‌ಮೆಂಟು, ಇಂಟಲಿಜೆನ್ಸು..
ಕೆಜಿಎಫ್ ಚಾಪ್ಟರ್-1ನ ಮುಂದುವರಿದ ಭಾಗ ಇದು ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಚಾಪ್ಟರ್-1ನಲ್ಲಿ ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತನಾಗ್ ಕಥೆಯನ್ನ ಹೇಳ್ತಾ ಹೋಗಿದ್ರು. ಫಾರ್ ಎ ಚೇಂಜ್.. ಚಾಪ್ಟರ್-2ನಲ್ಲಿ ಅನಂತನಾಗ್ ಹಾಸಿಗೆ ಹಿಡಿದಿರೊ ಕಾರಣ ನೀಡಿ ಸನ್ ಆಫ್ ಇಂಗಳಗಿ ಪಾತ್ರದಲ್ಲಿ ಪ್ರಕಾಶ್ ರಾಜ್ ಕಥೆಯನ್ನ ಮುಂದುವರಸ್ತಾರೆ.
ಗರುಡನ ಅಧೀನದಲ್ಲಿ ಚಿನ್ನದ ಗಣಿ ಗರುಡನ ನಂತರ ಆತನ ತಮ್ಮನ ವಶಕ್ಕೆ ಹೋಗುತ್ತೆ ಅಂತ ಕೊಳ್ಳೇಬಾಕರು ಲೆಕ್ಕ ಹಾಕಿರ‌್ತಾರೆ. ಆದರೆ ರಾಕಿ ಭಾಯ್ ಗರುಡನ ಸಹೋದರನನ್ನು ಗರುಡ ಇರುವ ಜಾಗಕ್ಕೆ ಕಳಿಸಿ, ತಾನು ಒಡೆಯನಾಗಿ ಸುಲ್ತಾನ್ ಎನಿಸಿಕೊಳ್ಳುತ್ತಾನೆ.
ಸುಲ್ತಾನ್‌ಗಿರಿ ಕಸಿದುಕೊಳ್ಳಲು ಅಧೀರನ ಪಾತ್ರದಲ್ಲಿ ಬರುವ ಮುನ್ನಾಭಾಯ್ ಸಂಜಯದತ್ ರಾಕಿ ಭಾಯ್ ಎದೆಗೆ ಗುಂಡಿಟ್ಟು ನಡುಕ ಹುಟ್ಟಿಸುತ್ತಾರೆ.
ಪಕ್ಕಾ ಬಿಸಿನೆಸ್‌ಮ್ಯಾನ್ ಎನಿಸಿಕೊಂಡಿರೊ ರಾಕಿ ಭಾಯ್ ಅಧೀರನಂಥ ಅಧೀರನನ್ನೇ ಅಲ್ಲಾಡಿಸಿ ಬಿಡುತ್ತಾನೆ. ಅದು ಹೇಗೆ ಅನ್ನೋದನ್ನ ಸಿನಿಮಾದಲ್ಲೇ ನೋಡಿ ತಿಳ್ಕೋಬೇಕು.
ಚಾಪ್ಟರ್-1ನಲ್ಲಿ ಇದ್ದಂತೆ ಪ್ರೀತಿಸಿದ ಹುಡುಗಿ ಇದ್ದಾಳೆ, ಅಮ್ಮ ಹಾಗೂ ಅಮ್ಮನ ನೆನಪುಗಳಿವೆ. ಕಥೆ ಮುಂದುವರಿಸಲು ಪ್ರಶ್ನೆ ಕೇಳೋದಕ್ಕೆ ಮಾಳವಿಕಾ ಇದಾರೆ, ಮಧ್ಯ ಮಧ್ಯ ಕಚಗುಳಿ ಇಡಲು ಪ್ಯೂನ್ ಕಾಮಿಡಿ ಕಿಲಾಡಿಯ ಗೋವಿಂದು ಇದಾರೆ. ಮಧ್ಯಂತರದ ನಂತರ ಚಿತ್ರದಲ್ಲಿ ಬರುವ ಹಾಡುಗಳು ಲ್ಯಾಗ್ ಎನಿಸಿದರೂ ಪ್ರಧಾನಿ ಪಾತ್ರದ ರವೀನಾ ಎದುರು ಬರುವ ರಾಕಿ ಭಾಯ್ ಅಲ್ಲಿ ಹೇಳುವ ಡೈಲಾಗ್‌ಗಳು ಮತ್ತೇ ಗಮನ ಬೇರೆ ಕಡೆ ಸುಳಿಯದಂತೆ ಮಾಡುತ್ತವೆ.
ಪತ್ರಕರ್ತನೊಬ್ಬ ಕದ್ದು ಮುಚ್ಚಿ ರಾಕಿ ಭಾಯ್ ಸಾಮ್ರಾಜ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾಗ ಪತ್ರಕರ್ತನೇ ಸೆರೆಯಾದಾಗ, “ನನಗೆ ಇತಿಹಾಸದಲ್ಲಿ ನಂಬಿಕೆ ಇಲ್ಲ. ಅವರಿವರು ಹೇಳಿದ್ದೇ ಸತ್ಯ ಅಲ್ಲ, ಕಣ್ಣಾರೆ ನೋಡು, ಅನಿಸಿದ್ದನ್ನ ಬರಿ” ಅನ್ನೋ ಡೈಲಾಗ್ ಪರೋಕ್ಷವಾಗಿ ಕೆಲ ಮಾಧ್ಯಮಗಳನ್ನ ಉದ್ದೇಶಿಸಿ ಹೇಳಿದ್ದು ಅನ್ನೊ ವಿಚಾರ ಎಂಥವರಿಗಾದರೂ ಗೊತ್ತಾಗುತ್ತೆ.
ಸಂಜಯದತ್, ರವೀನಾ ಟಂಡನ್ ಚಿತ್ರದ ಹೈಲೈಟ್. ರಾಖಿ ಭಾಯ್ ಆಗಿರೊ ಯಶ್ ಚಿತ್ರದ ಹೈಸ್ಪಿಡ್ ಎನರ್ಜಿ. ಪ್ರಕಾಶ್ ರಾಜ್, ಮಾಳವಿಕಾ, ಅಚ್ಯುತ್‌ರಾವ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಶಿಗಟ್ಟಲೆ ಇರುವ ವಿಲನ್‌ಗಳು ಪಾತ್ರಗಳಿಗೆ ಹೊಂದಿಕೆಯಾಗಿದ್ದಾರೆ. ರವಿ ಬಸ್ರೂರ್ ಸಂಗೀತದ ಹಾಡುಗಳು ಒಂದು ರೇಂಜ್‌ಗೆ ಒಕೆ, ಆದ್ರೆ ಅವರು ನೀಡಿರುವ ಬ್ಯಾಕ್ ಗ್ರೌಂಡ್ ಮ್ಯೂಜಿಕ್ ಎಕ್ಸಟ್ರಾರ್ಡಿನರಿ. ಭುವನ್ ಛಾಯಾಗ್ರಹಣ ಇಡೀ ಸಿನಿಮಾದ ಅತಿ ದೊಡ್ಡ ಪ್ಲಸ್ ಪಾಯಿಂಟ್. ಜಿಂದಾಲ್ ಸೇರಿದಂತೆ ಇರುವ ಹಲವು ಲೋಕೇಷನ್‌ಗಳು ಅತ್ಯದ್ಭುತ. ಹೊಂಬಾಳೆ ಪ್ರೊಡಕ್ಷನ್‌ನ ವಿಜಯ ಕಿರಂಗದೂರ ಕೋಟಿಗಟ್ಟಲೆ ಬಂಡವಾಳ ಹಾಕಿ ಅದರ ಮೂರ್ನಾಲ್ಕು ಪಟ್ಟು ಬಾಚಿಕೊಳ್ಳುವ ಲಕ್ಷಣಗಳಿವೆ.
ಅಧೀರ ಏನಾದ? ರಾಕಿಭಾಯ್ ನಿರ್ನಾಮಕ್ಕೆ ಕಂಕಣಬದ್ಧವಾಗಿದ್ದ ಪ್ರಧಾನಿ (ರವೀನಾ ಟಂಡನ್) ನಿರ್ಧಾರ ಏನಾಯ್ತು? ವಿಶ್ವದ ಚಿನ್ನವನ್ನೆಲ್ಲ ಸಂಗ್ರಹಿಸಿದ ರಾಖಿ ಭಾಯ್ ಮುಂದೆ ಏನಾದ? ಇವುಗಳನ್ನ ತಿಳ್ಕೊಬೇಕಾದರೆ ಕೆಜಿಎಫ್-2 ನೋಡ್ಲೇಬೇಕು.
ಮೇಲ್ನೋಟಕ್ಕಿದು ಗ್ಯಾಂಗ್‌ಸ್ಟರ್ ಸಿನಿಮಾ ಅನ್ಸುತ್ತೆ ನಿಜ. ಗ್ಯಾಂಗ್ ವಾರ್ ಜೊತೆ ಜೊತೆಗೆ ಅಮ್ಮನ ಆಸೆ ಈಡೇರಿಸುವ ಮುದ್ದು ಮಗನ, ಸಾಮಾನ್ಯರ ಪಾಲಿನ ಮನುಷ್ಯರೂಪದ ದೇವರನ್ನು ಹೊಂದಿರುವ ಚಿನ್ನದಂಥ ಕತೆ ಕೆಜಿಎಫ್-2.
ಗಂಗಾವತಿ: ಇಲ್ಲಿನ ಪಂಪಾನಗರದ ನಿವಾಸಿ ರಾಧಾಬಾಯಿ ಕಿಶನ್‌ರಾವ್ ಲಾಯದ್ಹುಣಸಿ(ಮಾಸ್ತರ್)(74) ಅವರು ಇಂದು ಬೆಳಗಿನ ಜಾವ 3.30 ರ ಸುಮಾರಿಗೆ ಲಘು ಹೃದಯಾಘಾತದಿಂದ ಕೊನೆಯುಸಿರೆಳೆದರು.
ಮೂಲತಃ ಹುಲಿ ಹೈದರ್ ಸಮೀಪದ ಲಾಯದ್ಹುಣಸಿ ಗ್ರಾಮದವರಾದ ಇವರು, ಪತಿ ಕಿಶನ್‌ರಾವ್ ಮಾಸ್ತರ್, ಮಕ್ಕಳಾದ ತೆರಿಗೆ ಸಲಹೆಗಾರ ವೆಂಕಟೇಶ, ವಕೀಲ ಮಲ್ಹಾರಿರಾವ್ ,ಜಿಲ್ಲಾ ದಸ್ತು ಬರಹಗಾರ ರಾಘವೇಂದ್ರ ಓರ್ವ ಪುತ್ರಿ,(ಪತಿ,ಮೂವರು ಪುತ್ರರು ,ಓರ್ವ ಪುತ್ರಿ) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .
ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಧ್ಯಾಹ್ನ 12 ಗಂಟೆಗೆ ಗಂಗಾವತಿಯ ಜುಲಾಯಿ ನಗರ ರಸ್ತೆ ರುದ್ರಭೂಮಿಯಲ್ಲಿ ಜರುಗಲಿದೆ.
ಮೂತ್ರಕೋಶದಲ್ಲಿ ಬರೋಬ್ಬರಿ 1 ಕೆಜಿ 100 ಗ್ರಾಂ ತೂಕದ ಮೂತ್ರ ಕೋಶದ ಕಲ್ಲನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಖಾಸಗಿ ಆಸ್ಪತ್ರೆಯ ವೈದ್ಯರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂತ್ರಕೋಶದಿಂದ ರಕ್ತಸ್ರಾವದ ತೊಂದರೆಯಿಂದ ಬಳಲುತ್ತಿದ್ದ 33 ವರ್ಷದ ವ್ಯಕ್ತಿಯೋರ್ವನು ನಗರದ ಆಶ್ರಯ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ. ಈ ವೇಳೆ ತಜ್ಞ ವೈದ್ಯರ ತಂಡ ರೋಗಿಯನ್ನು ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತ್ತು. ಬಳಿಕ ಸ್ಕ್ಯಾನಿಂಗ್‌ನಲ್ಲಿ ಭಾರೀ ಗಾತ್ರದ ಕಲ್ಲು ಇರುವದನ್ನು ವೈದ್ಯರ ತಂಡ ಖಚಿತಪಡಿಸಿಕೊಂಡಿದೆ.
ರೋಗಿಯ ರಕ್ತದೊತ್ತಡ ಸಹಜ ಸ್ಥಿತಿಗೆ ಬಂದ ಬಳಿಕ ಶಸ್ತ್ರ ಚಿಕಿತ್ಸೆ ಕೈಗೊಂಡ ವೈದ್ಯರು 1 ಕೆಜಿ 100 ಗ್ರಾಮ ತೂಕದ ಮೂತ್ರಕೋಶದ ಕಲ್ಲನ್ನು ಹೊರ ತೆಗೆದಿದ್ದಾರೆ.
ಆಶ್ರಯ ಆಸ್ಪತ್ರೆಯ ಡಾ.ಭುವನೇಶ, ಡಾ.ಶ್ರೀಧರ ಕುರಡಗಿ, ಡಾ.ಪಿ.ವಿ.ಮರಗಿ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಶಸ್ತ್ರ ಚಿಕಿತ್ಸೆ ನಡೆಸಿ ಕಲ್ಲನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಸದ್ಯ ರೋಗಿಯು ಆರೋಗ್ಯ ಮತ್ತು ಸುರಕ್ಷಿತವಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.
‘ಸಾಮಾನ್ಯವಾಗಿ ಮೂತ್ರ ಕೋಶದಲ್ಲಿ 1ಸೆಂಟಿ ಮೀಟರ್, 2ಸೆಂಟಿ ಮೀಟರ್‌ದಷ್ಟು ಕಿಡ್ನಿ ಸ್ಟೋನ್ ಇರುತ್ತವೆ. ಆದರೆ, ಈ ರೋಗಿಯಲ್ಲಿ 12 ಸೆಂ.ಮೀ.ನಷ್ಟು ಕಲ್ಲು 1 ಕೆ.ಜಿ 100 ಗ್ರಾಂ ತೂಕದ್ದಾಗಿದೆ. ಭಾರೀ ಗಾತ್ರದ ಕಿಡ್ನಿ ಸ್ಟೋನ್ ಪತ್ತೆಯಾಗಿರುವದು ಈ ಭಾಗದಲ್ಲಿ ಅಪರೂಪ ಎಂದು ಆಶ್ರಯ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀಧರ ಕುರಡಗಿ ಹೇಳಿದ್ದಾರೆ.
‘ಮೂತ್ರಕೋಶದ ಸಮಸ್ಯೆಗಳಿದ್ದಲ್ಲಿ ಅಲಕ್ಷಿಸುವಂತಿಲ್ಲ. ಕಿಡ್ನಿಯಲ್ಲಿ ಯಾವುದಾದರೂ ತೊಂದರೆ ಕಂಡು ಬಂದಲ್ಲಿ ತಕ್ಷಣ ತಜ್ಞ ವೈದ್ಯರಲ್ಲಿ ಪರೀಕ್ಷೆಗೆ ಒಳಪಡುವದು ಸೂಕ್ತ. ಇದೀಗ ಆಶ್ರಯ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಅವಕಾಶವಿದ್ದು, ಸರ್ಕಾರ ನೀಡಿರುವ ಯೋಜನೆಯ ಸದುಪಯೋಗ ಪಡೆದುಕೊಂಡು ಆರೋಗ್ಯದ ಕಾಳಜಿ ಹೊಂದಬೇಕು ಎಂದು ಶ್ರೀಧರ ಕುರಡಗಿ ತಿಳಿಸಿದ್ದಾರೆ.
ಕೆಲಸದ ಒತ್ತಡದಲ್ಲಿ ನಾಮಫಲಕದ ಬಗ್ಗೆ ಗಮನಹರಿಸಿರಲಿಲ್ಲ; ಕಾಂಬಳೆ
ವಿಜಯಸಾಕ್ಷಿ ಸುದ್ದಿ, ನವಲಗುಂದ: ಈ ಮೊದಲು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು, ನಮಗೆಲ್ಲಾ ಪ್ರತಿ ಗ್ರಾಮಕ್ಕೂ ಶುದ್ದ ಕುಡಿಯುವ ನೀರು ಪೂರೈಸಬೇಕೆಂದು ಗಡುವು ಕೊಟ್ಟಿದ್ದರು. ಆ ಕೆಲಸದಲ್ಲಿ ನಾವೆಲ್ಲರೂ ಮಗ್ನರಾಗಿದ್ದೇವು, ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಿದ್ದ ನಾಮಫಲಕವನ್ನು ಬದಲಿಸುವಲ್ಲಿ ಸ್ವಲ್ಪ ವಿಳಂಭವಾಗಿದ್ದು ನಿಜ. ವಿಜಯಸಾಕ್ಷಿ ಪತ್ರಿಕೆಯವರು ಗಮನಕ್ಕೆ ತಂದ ತಕ್ಷಣ ತಪ್ಪನ್ನು ತಿದ್ದುಕೊಂಡಿದ್ದೇವೆಂದು ತಾಲ್ಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ ಅನಿಸಿಕೆ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು ಬೇರೆ ಜಿಲ್ಲೆಯ ಉಸ್ತುವಾರಿಗಳಾಗಿದ್ದರೂ ಅವರ ಜನಸಂಪರ್ಕ ಕಾರ್ಯಾಲಯದ ನಾಮಫಲಕದಲ್ಲಿ ಇನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಏಪ್ರಿಲ್ 8 ರಂದು ವಿಜಯಸಾಕ್ಷಿ ವೆಬ್ ಪೋರ್ಟಲ್ ಹಾಗೂ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.
ಮೊದಲಿನ ನಾಮಫಲಕತಿದ್ದುಪಡಿಯಾದ ನಾಮಫಲಕ
ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಈಗ ಶಂಕರ ಪಾಟೀಲ ಮುನೇನಕೊಪ್ಪ ಅವರು ರಾಯಚೂರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆಂದು ಬದಲಾಯಿಸಿ ಹೊಸದಾಗಿ ನಾಮಫಲಕನ್ನು ಅಳವಡಿಸಿದ್ದಾರೆ.
ಈ ತಪ್ಪಿನ ಕುರಿತು ತಾಲ್ಲೂಕಾ ಬಿಜೆಪಿ ಅಧ್ಯಕ್ಷರಾದ ಎಸ್.ಬಿ.ದಾನಪ್ಪಗೌಡರ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದು, ನಮ್ಮ ಶಂಕರ ಪಾಟೀಲ ಮುನೇನಕೊಪ್ಪ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬದಲಾಗಿದ್ದು ನಮಗೆಲ್ಲರಿಗೂ ತಿಳಿದಿತ್ತು. ಆದರೆ ಅವರು ನಮಗೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ನಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನಾವು ನಾಮ ಫಲಕ ಬದಲಾಯಿಸುವಲ್ಲಿ ಮೈಮರೆತಿದ್ದೇವು. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದ ವಿಜಯಸಾಕ್ಷಿ ಪತ್ರಿಕೆಯವರು ನಮ್ಮ ಗಮನಕ್ಕೆ ತಂದ ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ ಫಲವಾಗಿ ಹೊಸದಾಗಿ ನಾಮಫಲಕವನ್ನು ಬದಲಾಯಿಸಲಾಗಿದೆ.
ತಪ್ಪು ಯಾರೇ ಮಾಡಿದರೂ ತಪ್ಪೇ, ಆದರೆ ಅದನ್ನು ಗಮನಕ್ಕೆ ತಂದ ವಿಜಯಸಾಕ್ಷಿ ಪತ್ರಿಕೆಯವರಿಗೆ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇವೆಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಲಕ್ಷ್ಮಣ ಚಂದ್ರಪ್ಪ ದೋನಿ ಎಂಬ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.30 ಸಾವಿರಗಳ ದಂಡವನ್ನು ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.
2020 ರ ಸೆಪ್ಟೆಂಬರ್ 11 ರಂದು ಲಕ್ಷö್ಮಣ ಚಂದ್ರಪ್ಪ ದೋನಿ ಎಂಬ ಆರೋಪಿಯು ಕಿಡದಾಳ ಗ್ರಾಮದಲ್ಲಿ ವಾಸಿಸುವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪವು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆ ಪಿಐ ಮೌನೇಶ್ವರ ಮಾಲಿಪಾಟೀಲ್ ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.30 ಸಾವಿರಗಳ ದಂಡವನ್ನು ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ರೂ.25000 ಗಳನ್ನು ಬಾಧಿತಳಿಗೆ ಪರಿಹಾರದ ರೂಪದಲ್ಲಿ ವಿತರಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.