Home Blog Page 3240

ಅಕ್ರಮ ಮದ್ಯ ಮಾರಾಟ; ಓರ್ವನ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿವೊಬ್ಬನನ್ನು ಬಂಧಿಸಿರುವ ಮುಳಗುಂದ ಪೊಲೀಸರು ಆತನಿಂದ ಸಾವಿರಕ್ಕೂ ಹೆಚ್ಚು ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ಸಮೀಪದ ಕಣವಿ ಕ್ರಾಸ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮುಳಗುಂದ ಪಟ್ಟಿಣದ ತಿಗಡಿಕೇರಿ ಓಣಿಯ ಮಹಾಂತೇಶ್ ಮಲ್ಲಪ್ಪ ಕಣವಿ ಎಂಬಾತನೇ ಬಂಧಿತ ಆರೋಪಿ.

ಈತ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಖಚಿತ ಮಾಹಿತಿ ಮೇರೆಗೆ ಮುಳಗುಂದ ಠಾಣೆಯ ಪಿಎಸ್ಐ ಸಚಿನ್ ಅಲಮೇಲಕರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಈ ಕುರಿತು ಪ್ರಕರಣ ದಾಖಲಾಗಿದೆ.

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ; ಅಂತಾರಾಜ್ಯ ಕಳ್ಳನ ಬಂಧನ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಗಳ ಜಾಡು ಹಿಡಿದು ಕಳ್ಳರ ಪತ್ತೆಗೆ ಜಾಲಬೀಸಿದ ಪೊಲೀಸರು ಗುರುವಾರ ಓರ್ವ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜು. 20 ಮತ್ತು ಜು. 25ರಂದು ಲಕ್ಷ್ಮೇಶ್ವರ ಪಟ್ಟಣದ ಹೊರವಲಯದ ರಂಭಾಪುರಿ ನಗರ ಮತ್ತು ಕೆಂಪಿಗೆರೆ ಪ್ರದೇಶದಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಜುಲೈ 20ರಂದು ರಾತ್ರಿ ಲಕ್ಷ್ಮೇಶ್ವರದ ರಂಭಾಪುರಿ ನಗರದ ಸುಲೇಮಾನ್ ಭಾಷಾಸಾಬ ಗತ್ತರಗಿ ಎಂಬುವವರ ಮನೆಯ ಬೀಗ ಮುರಿದು ಟ್ರಜರಿಯಲ್ಲಿಟ್ಟಿದ್ದ 15 ತೊಲ ಚಿನ್ನಾಭರಣ ಹಾಗೂ 25 ಸಾವಿರ ನಗದು ದೋಚಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ಜುಲೈ 25 ಹಾಗೂ 26ರ ನಡುವೆ ಲಕ್ಷ್ಮೇಶ್ವರದ ಕೆಂಪಗೇರಿಯ ನಿಂಗಪ್ಪ ಗೌಡನಾಯ್ಕರ ಅವರ ಮನೆಯ ಬೀಗ ಮುರಿದು 8 ಗ್ರಾಂ ತೂಕದ ಚಿನ್ನದ ಜುಮಕಿ ಬೊಂಡೋಲೆ ಹಾಗೂ 25 ಸಾವಿರ ನಗದು ದೋಚಲಾಗಿತ್ತು.

ಈ ಎರಡು ಪ್ರತ್ಯೇಕ ಪ್ರಕರಣಗಳು ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದವು.

ಪ್ರಕರಣದ ಜಾಡು ಹಿಡಿದ ಪಿಎಸ್‌ಐ ಪ್ರಕಾಶ ಡಿ. ನೇತೃತ್ವದ ಪೊಲೀಸ್ ತಂಡ, ಎಸ್‌ಪಿ ಯತೀಶ್ ಎನ್, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಸಿಪಿಐ ವಿಕಾಸ್ ಲಮಾಣಿ ಮಾರ್ಗದರ್ಶನದಲ್ಲಿ ಹಗಲೂ ರಾತ್ರಿ ಕಳ್ಳರ ಪತ್ತೆ ಕಾರ್ಯದಲ್ಲಿ ತೊಡಗಿತ್ತು.

ಕಳ್ಳತನ ಬಳಿಕ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ಅಶೋಕ ಅಲಿಯಾಸ್ ಶ್ರೀನಿವಾಸ/ಸೀನ ತಂದೆ ರಾಜು ಕಾಂಚಿಬೋಸಲೆ (25) ಎಂಬಾತನನ್ನು ಸೆ. 9ರಂದು ಬೆಳಗಿನ ಜಾವ ಹೊಸ ಬಸ್ ನಿಲ್ದಾಣದ ಬಳಿ ಬಂಧಿಸಿ, ಸತ್ಯ ಬಾಯಿ ಬಿಡಿಸಿದ್ದಾರೆ.

ಬಂಧಿತರಿಂದ 1.50 ಲಕ್ಷ ರೂ ಮೌಲ್ಯದ 33 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳೂ ಇಬ್ಬರು ಮನೆಗಳ್ಳರನ್ನು ಆಭರಣ ಸಮೇತ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

ಎಎಸ್‌ಐಗಳಾದ ವೈ.ಎಸ್. ಕೂಬಿಹಾಳ, ಎಸ್. ಎಚ್. ಬೆಟಗೇರಿ, ಸಿಬ್ಬಂದಿ ಜಿ.ಎಂ. ಬೂದಿಹಾಳ, ಎ.ಪಿ. ದೊಡ್ಡಮನಿ, ಎಂ.ಡಿ. ಲಮಾಣಿ, ಎಂ.ಬಿ. ವಡ್ಡಟ್ಟಿ, ಎನ್.ಡಿ. ಹುಬ್ಬಳ್ಳಿ, ಎಂ.ಎಸ್. ಬಳ್ಳಾರಿ, ಎಸ್.ಎಫ್. ತಡಸಿ, ಆರ್.ಎಚ್. ಮುಲ್ಲಾ, ಎನ್.ಎಚ್. ಮಠಪತಿ, ರಾಮು ನಾಯಕ, ಕೆ.ಬಿ. ಹುಲಗೂರ ಅವರನ್ನೊಳಗೊಂಡ ತಂಡ ಕಳ್ಳರ ಪತ್ತೆಯಲ್ಲಿ ಯಶಸ್ವಿಯಾಗಿದೆ.

ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಸೋಲಿಗೆ ಬಿಜೆಪಿ ವಿರುದ್ಧ ಮುಗಿಬಿದ್ದ ಶಿವಸೇನೆ

  • ಸಾಮಾಜಿಕ ತಾಣದಲ್ಲಿ ಸರಣಿ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ ಶಿವಸೇನೆ ಮುಖಂಡ ಸಂಜಯ ರಾವುತ್

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಬೆಳಗಾವಿಯಲ್ಲಿ ಎಂಇಎಸ್ ಸೋಲಿನಿಂದ ಕಂಗೆಟ್ಟಿರುವ ಶಿವಸೇನೆ ಮತ್ತೆ ತನ್ನ ನರಿಬುದ್ದಿ ಪ್ರದರ್ಶಿಸುತ್ತಿದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಸ್ವಾಗತಿಸಿದ ಮಹಾರಾಷ್ಟ್ರ ಬಿಜೆಪಿ ವಿರುದ್ಧ ಗರಂ ಆಗಿರುವ ಶಿವಸೇನೆ ಮುಖಂಡ ಸಂಜಯ್ ರಾವುತ್ ಮಹಾರಾಷ್ಟ್ರ ಬಿಜೆಪಿ ಘಟಕ ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಗೆದ್ದ ಬಿಜೆಪಿ ಮರಾಠಿ ಭಾಷಿಕ ಸದಸ್ಯರನ್ನು ಮುಂಬೈಗೆ ಕರೆತಂದು ಹುತಾತ್ಮ ಸ್ಮಾರಕ ಎದುರು ಶಿರಭಾಗಿ ಮರಾಠಿ ಅಸ್ಮಿತೆಯ ಪ್ರಮಾಣ ವಚನ ಬೋಧಿಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಎರಡು ಸಾಲಿನ ಠರಾವು ಪಾಸ್ ಮಾಡಿ, ಅಹಂಕಾರ ಬದಿಗೊತ್ತಿ ಇಷ್ಟು ಮಾಡಿ ಎಂದು ಸಂಜಯ್ ರಾವುತ್ ಬಿಜೆಪಿಗೆ ಸವಾಲ್ ಹಾಕಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಎಂಇಎಸ್ ಬೆಂಬಲಿಸಿತ್ತು. ಆದರೆ, ಪ್ರಜ್ಞಾವಂತ ಮರಾಠಿಗರು ಎಂಇಎಸ್ ವಿರುದ್ಧ ಮತಹಾಕಿ ಭಾಷಾ ರಾಜಕಾರಣಕ್ಕೆ ಅಂತ್ಯ ಹಾಡಿದ್ದರು.

58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕೇವಲ ಎರಡು ವಾರ್ಡ್ ಗಳಲ್ಲಿ ಗೆದ್ದು ಎಂಇಎಸ್ ಹೀನಾಯ ಸೋಲು ಅನುಭವಿಸಿತ್ತು.

ಎಂಇಎಸ್ ಸೋಲನ್ನು ಅರಗಿಸಿಕೊಳ್ಳಲಾಗದ ಶಿವಸೇನೆ ಪಾಲಿಕೆ ಸೋಲನ್ನು ಮರಾಠಿ ಭಾಷಿಕರ ಸೋಲು ಎಂದು ಬಿಂಬಿಸುವ ಮೂಲಕ ಮತ್ತೆ ಮರಾಠಿ ಭಾಷಿಕರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದೆ.

ಮುಖವಾಣಿ ಸಾಮ್ನಾದಲ್ಲೂ ಕಿಡಿ

ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲೂ ಬೆಳಗಾವಿ ಮಹಾನಗರ ಪಾಲಿಕೆ ಸೋಲಿನ ವಿಚಾರ ಪ್ರಸ್ತಾಪಿಸಲಾಗಿದೆ. ‘ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ!’ ಎಂಬ ಅಡಿ ಬರಹದಲ್ಲಿ ಸಂಪಾದಕೀಯ ಬರೆಯಲಾಗಿದ್ದು, ಆಗ್ರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಔರಂಗಜೇಬ್ ಬಂಧಿಸಿದ ಸುದ್ದಿ ಕೇಳಿ ಇಡೀ ಮಹಾರಾಷ್ಟ್ರ ಆತಂಕಕ್ಕೀಡಾಗಿತ್ತು.

ಆದರೆ, ಆ ವೇಳೆ ಛತ್ರಪತಿ ಶಿವಾಜಿ ಬಂಧನ ಸಂಭ್ರಮಿಸಿದ ಕೆಲ ಜ‌ನರು ಮಹಾರಾಷ್ಟ್ರದಲ್ಲೂ ಇದ್ದರು. ಅದೇ ಪ್ರವೃತ್ತಿ ಜ‌‌ನ ಬೆಳಗಾವಿಯಲ್ಲಿ ಮರಾಠಿ ಸೋಲನ್ನು ಸಂಭ್ರಮಿಸುತ್ತಿದ್ದಾರೆ.

ಗಡಿ ಹೋರಾಟದ ಹುತಾತ್ಮರ ಶಾಪ ಅವರಿಗೆ ತಟ್ಟುತ್ತದೆ. ಗಡಿ ಹೋರಾಟ ಮುಂದುವರಿಯಲಿದೆ. ಮರಾಠಿಗರು ಒಗ್ಗೂಡಿ ಮತ್ತೆ ಮುಂದೆ ಬರಲಿದ್ದಾರೆ. ಬೆಳಗಾವಿಯ ಪಾಲಿಕೆ ಸೋಲಿನಿಂದ ನಾವು ಪಾಠ ಕಲಿಯಬೇಕು. ಶತ್ರುಗಳು ಹಾಗೂ ಮಿತ್ರರು ನಮ್ಮ ಮನೆಯಲ್ಲೇ ಇದ್ದಾರೆ ಎಂದು ಉಲ್ಲೇಖಿಸಿದೆ.

ಗಣೇಶ ಹಬ್ಬಕ್ಕೆ ಹೂವು ಖರೀದಿ; ಫ್ಲಾವರ್ ಮಾರುಕಟ್ಟೆಗೆ ಮುಗಿಬಿದ್ದ ಜನರು

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಗಣೇಶ ಚತುರ್ಥಿ ಮುನ್ನಾ ದಿನವಾದ ಗುರುವಾರ ಜನರು, ವ್ಯಾಪಾರಸ್ಥರು ನಗರದ ಹೂವು ಮಾರುಕಟ್ಟೆಗೆ ಹೂವು ಖರೀದಿಗೆ ಮುಗಿಬಿದ್ದ ಪರಿಣಾಮ ಜನಜಂಗುಳಿ ಉಂಟಾಗಿತ್ತು.

ಬೆಳಗ್ಗೆ 6 ಗಂಟೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಮಾರುಕಟ್ಟೆಯತ್ತ ದೌಡಾಯಿಸಿದರು. ಮಧ್ಯಾಹ್ನ 12 ಗಂಟೆಯವರೆಗೂ ಖರೀದಿಯಲ್ಲಿ ತೊಡಗಿದ್ದರು. ಖರೀದಿಗೆ ಬಂದ ಜನರು, ರೈತರು ಹಾಗೂ ವ್ಯಾಪಾರಸ್ಥರು ರಸ್ತೆ ಬದಿಗೆ ವಾಹನಗಳನ್ನು ನಿಲ್ಲಿಸಿದ್ದರಿಂದ ಬೆಳಗ್ಗೆ 7 ರಿಂದ ಒಂದು ತಾಸು ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು.

ಹೂವು ಬೆಳಗಾರರಿಗೆ ಸಿಹಿ ಕಹಿ

ಕಳೆದ ಎರಡು ವರ್ಷಗಳಿಂದ ಹಬ್ಬದ ಸೀಸನ್ ನಲ್ಲಿ ಲಾಕ್ ಡೌನ್ ಪರಿಣಾಮ ವ್ಯಾಪಾರವಿಲ್ಲದೆ ಹೂವು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸಿದ್ದರು. ಆತಂಕದಲ್ಲೇ ಹೂವು ಕೃಷಿ ಮಾಡಿದ್ದ ರೈತರಿಗೆ ಈ ಬಾರಿ ಅದೃಷ್ಟ ಕೈಹಿಡಿದಿದೆ.

ಶ್ರಾವಣ ಮಾಸದ ಸರಣಿ ಹಬ್ಬದ ಸೀಸನ್ ನಲ್ಲಿ ಹೂಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.

ಚೆಂಡು ಹೂವು ಬೆಳೆಗಾರರಿಗೆ ಕಹಿ, ಗುಲಾಬಿ, ಸೇವಂತಿಗೆ ರೈತರಿಗೆ ಸಿಹಿ

ಎರಡು ವರ್ಷಗಳ ಬಳಿಕ ಹಬ್ಬಗಳ ಆಚರಣೆ ಆರಂಭವಾಗಿದ್ದರೂ ಚೆಂಡು ಹೂವು ಬೆಲೆಯಲ್ಲಿ ಏರಿಕೆ ಕಾಣದೇ ಬೆಳೆಗಾರರು ನಿರಾಸೆ ಹೊಂದಿದ್ದಾರೆ. ಕೆಜಿಗೆ ಚೆಂಡು ಹೂವು ಬೆಲೆ 50-60 ರೂ. ದಾಟುತ್ತಿಲ್ಲ. ಹೂವು ಬೆಳೆಗಾರರು ದರ ಕುಸಿತದಿಂದ ನಿರಾಸೆಗೆ ಒಳಗಾಗಿದ್ದಾರೆ.

ಇನ್ನು ಸೇವಂತಿಗೆ, ಗುಲಾಬಿ ಹೂವಿಗೆ ಉತ್ತಮ ಬೇಡಿಕೆ ಬಂದಿದ್ದು ರೈತರು ಖುಷ್ ಆಗಿದ್ದಾರೆ. ಗುಲಾಬಿ ಹೂವು ಕೆಜಿಗೆ 200-300, ಸೇವಂತಿಗೆ 80 ರಿಂದ 200 ರೂ.ವರೆಗೆ ಮಾರಾಟವಾಗುತ್ತಿವೆ.

ಕೊರೊನಾ ಮರೆತು ಮುಗಿಬಿದ್ದ ಜನ

ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಇದ್ದರೂ ಜನರು ಲೆಕ್ಕಿಸದೇ ಖರೀದಿಯಲ್ಲಿ ತೊಡಗಿದ್ದರು. ಮಾಸ್ಕ್, ಸಾಮಾಜಿಕ ಅಂತರ ಲೆಕ್ಕವೇ ಇರಲಿಲ್ಲ. ಜನಜಂಗುಳಿ ನಿರ್ಮಾಣವಾಗಿತ್ತು. ಜನರು ಕೊರೊನಾ ಇರುವುದನ್ನೆ ಮರೆತು ಹಬ್ಬದ ಹೂವು ಖರೀದಿಗೆ ಮುಗಿಬಿದ್ದಿದ್ದರು.

ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರ ದುರ್ಮರಣ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಿನ್ನೆ ತಡರಾತ್ರಿ ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.

ಬೆಳಗಾವಿ ನಗರದ ಚವ್ಹಾಟ್ ಗಲ್ಲಿಯ ಶ್ರೀನಾಥ ಚಿದಂಬರ ಚವ್ಹಾಣ (21), ರಚಿತ ರಂಜನ್ ಡುಮಾವತ್ (21) ಮೃತ ಯುವಕರು.
ಇಬ್ಬರೂ ಯುವಕರು ಬೆಳಗಾವಿ ಲಿಂಗಾರಾಜ ಕಾಲೇಜಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು.

ನಿನ್ನೆ ರಾತ್ರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬದಿಯ ಧಾಬಾವೊಂದರಲ್ಲಿ ಊಟ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ರಸ್ತೆ ಬದಿಗೆ ನಿಂತಿದ್ದ ಲಾರಿಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಮೂಲಿ ಕೊಡದ ಬಿಜೆಪಿ ಮುಖಂಡನ ಮೇಲೆ ಹಲ್ಲೆ

ವಿಜಯಸಾಕ್ಷಿ ಸುದ್ದಿ, ಗದಗ

ಕಪ್ಪತ್ತಗುಡ್ಡ ಜಾತ್ರೆಗೆ ದ್ವಿಚಕ್ರವಾಹನದ ಮೇಲೆ ಹೊರಟಿದ್ದಾಗ ಶಿರೋಳ ಕ್ರಾಸ್ ಹತ್ತಿರ ಮುಂಡರಗಿ ಪಟ್ಟಣದ ಲಕ್ಷ್ಮಣ ಭರಮಪ್ಪ ತಗಡಿನಮನಿ, ತಾಲೂಕಿನ ಗಂಗಾಪುರದ ಮಂಜಪ್ಪ ಫಕೀರಪ್ಪ ಹರಿಜನ ಎಂಬುವವರು ಬೈಕ್ ಅಡ್ಡಗಟ್ಟಿ ಕೆಡವಿ ಮಾಮೂಲಿ ಕೊಡುವಂತೆ ಒತ್ತಾಯಿಸಿ ತನ್ನ ಶರ್ಟ್ ಹಿಡಿದು ಎಳೆದಾಡಿ, ತಾಯಿಯ ಸೀರೆ ಹಾಗೂ ಜಡೆ ಹಿಡಿದು ಎಳೆದಾಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಪರಶುರಾಮ ಕರಡಿಕೊಳ್ಳ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೂ ಮುಂಚೆ ಆಗಸ್ಟ್ 28ರಂದು ಆರೋಪಿ ಲಕ್ಷ್ಮಣ ಭರಮಪ್ಪ ತಗಡಿನಮನಿ ಮುಂಡರಗಿ ಪಟ್ಟಣದ ಕೊಪ್ಪಳ ಕ್ರಾಸ್‌ನಲ್ಲಿ ಬಂದು ನಾನು ದಲಿತ ಸಂಘದ ರಾಜ್ಯ ಮಟ್ಟದ ಪದಾಧಿಕಾರಿ ಇದ್ದು, ವ್ಯಾಪಾರಸ್ಥರು, ನೌಕರರು ಮಾಮೂಲಿ ಕೊಡುತ್ತಾರೆ. ನಾನು ಹೇಳಿದ ಹಾಗೆ ಕೇಳದಿದ್ದರೆ ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಆವಾಜ್ ಹಾಕಿ ಹೋಗಿದ್ದನಂತೆ.

ಬಳಿಕ ಸೆಪ್ಟೆಂಬರ್ 2ರಂದು ಜಾತ್ರೆಗೆ ಹೋಗುವಾಗ ಎಳೆದಾಡಿ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ದೂರು ನೀಡುತ್ತಿರುವುದಾಗಿ ಪರಶುರಾಮ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಮುಂಡರಗಿ ಪೊಲೀಸರು ತನಿಖೆ ನಡೆಸಿದ್ದಾರೆ.

ಡ್ರಗ್ಸ್ ಕೇಸ್; ಯಾವುದೇ ಒತ್ತಡಕ್ಕೂ ಮಣಿಯಲ್ಲ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಡ್ರಗ್ಸ್ ಪ್ರಕರಣದಲ್ಲಿ ಒತ್ತಡಗಳು ಬರುತ್ತಿವೆ ಎಂಬುದು ಕೇವಲ ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರೇ ಆಗಲಿ ಭಾಗವಹಿಸಿದ್ದರೆ ಶಿಕ್ಷೆ ಅನುಭವಿಸುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಬೆಳಗಾವಿಯಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ನಟಿ, ನಿರೂಪಕಿ ಅನುಶ್ರೀ ಅವರಿಗೆ ರಾಜಕೀಯ ಬೆಂಬಲ ಇರುವ ಹಿನ್ನೆಲೆ ಡ್ರಗ್ಸ್ ಕೇಸ್‌ನಲ್ಲಿ ಸಾಫ್ಟ್ ಕಾರ್ನರ್ ತೋರಿಲಾಗುತ್ತಿದೆ ಎಂಬುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

ಪ್ರಕರಣದಲ್ಲಿ ಯಾರೂ ಒತ್ತಡ ಮಾಡುವುದಿಲ್ಲ. ಡ್ರಗ್ಸ ಕೇಸ್‌ನಲ್ಲಿ ಸರ್ಕಾರ ಬಹಳ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ.

ಎಷ್ಟೇ ಪ್ರಭಾವಿಗಳಾದರೂ ಖಂಡಿತವಾಗಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಚಾರ್ಜ ಶೀಟ್‌ನಲ್ಲಿ ಕೈಡಲಾಗಿದೆ ಎಂಬ ಪ್ರಶ್ನೆಗೆ ಬಿಡುವ ಪ್ರಶ್ನೆಯೇ ಇಲ್ಲ, ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ 100 ಪೊಲೀಸ್ ಠಾಣೆಗಳನ್ನು ನಿರ್ಮಿಲಾಗುವುದು. ಹೊಸ ಜೈಲುಗಳ ಕಟ್ಟಡ ನಿರ್ಮಾಣ ಆಗುತ್ತಿವೆ. ಈಗಿರುವ ಜೈಲುಗಳಿಗೆ ಹೊಸ ಹೊಸ ಬ್ಯಾರಕ್‌ಗಳನ್ನು ಕಟ್ಟಿ ವಸತಿ ವ್ಯವಸ್ಥೆ ಹೆಚ್ಚಿಸಲಾಗುತ್ತಿದೆ. ಕೈದಿಗಳಿಗೆ ಎಲ್ಲ ಸೌಲಭ್ಯ ಕೊಡುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.

ಯಮಕನಮರಡಿ ಪೊಲೀಸ್ ಠಾಣೆ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಸಂಬಂಧಪಟ್ಟoತೆ ತನಿಖೆ ನಡೆಯುತ್ತಿದೆ. ಅಪರಾಧಿಗಳನ್ನು ಬಂಧಿಸಿದ್ದೇವೆ. ತನಿಖಾ ಹಂತದಲ್ಲಿ ಏನನ್ನೂ ಹೇಳಲು ಬರುವುದಿಲ್ಲ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದೇನೆ.

ಎಷ್ಟೇ ದೊಡ್ಡ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಯಾವುದೇ ಒತ್ತಡವನ್ನೂ ಪರಿಗಣಿಸದೇ ಅದನ್ನು ಹೊರ ತೆಗೆಯುತ್ತೇವೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಜನರು ಹತ್ತು ಹದಿನೈದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಇದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಗೃಹ ಸಚಿವರು, ಬದಲಾವಣೆಗಳನ್ನು ಮಾಡುತ್ತಿದ್ದೇವೆ.

ಅನೇಕ ಠಾಣೆಗಳಲ್ಲಿ ಐದು ವರ್ಷ ಮೇಲ್ಪಟ್ಟವರನ್ನು ಬದಲಾವಣೆ ಮಾಡಿದ್ದೇವೆ. ಕಾನ್ಸಟೇಬಲ್‌ಗಳ ಬದಲಾವಣೆ ಎಸ್‌ಪಿ ಮಟ್ಟದಲ್ಲಿ ಆಗುತ್ತದೆ. ಎಸ್‌ಐಗಳ ಬದಲಾವಣೆ ಡಿಐಜಿ ಮಟ್ಟದಲ್ಲಿ ಆಗುತ್ತವೆ. ಇಂತಿಷ್ಟು ಶೇಕಡಾವಾರು ಬದಲಾವಣೆ ಮಾಡಬೇಕು ಎಂದು ಹೇಳಿದ್ದೇವೆ. ಎಲ್ಲ ಖಾಲಿ ಮಾಡಿ ಬದಲಾವಣೆ ಮಾಡಲು ಆಗುವುದಿಲ್ಲ. ಇದರ ಜೊತೆಗೆ ತುಂಬಾ ಅನುಭವಸ್ಥ ಜಾಗದ ಪರಿಚಯಸ್ಥರು ಇರುವುದು ಬಹಳ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್‌ನಿಂದ ಮೃತ ಪೊಲೀಸ್ ಕುಟುಂಬಗಳಿಗೆ ಎಲ್ಲ ರೀತಿಯ ಆರ್ಥಿಕ ನೆರವು ಕೊಡಲು ಈಗಾಗಲೇ ಯೋಜನೆ ಘೋಷಿಸಲಾಗಿದೆ. ಸುಮಾರು 30 ಲಕ್ಷ ರೂಪಾಯಿ ಸಿಗುತ್ತದೆ. ಕೆಎಸ್‌ಆರ್‌ಪಿಯಲ್ಲಿ ಬಹಳ ಜನರಿಗೆ ಸಿಕ್ಕಿದೆ. ಎಷ್ಟು ಬಾಕಿ ಇದೆ ಎಂಬ ಬಗ್ಗೆ ನನ್ನ ಬಳಿ ಅಂಕಿ ಸಂಖ್ಯೆ ಇಲ್ಲ ಎಂದು ತಿಳಿಸಿದರು.

ಮದುವೆ ಮಾಡದ ತಂದೆಯ ಕೊಲೆಗೆ ಯತ್ನಿಸಿದ ಮಗನಿಗೆ ಜೈಲು ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಮದುವೆ ಮಾಡದ್ದಕ್ಕೆ ಕೋಪಗೊಂಡು ತಂದೆಯ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಮಗನಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ರವಿ ಮಲ್ಲಪ್ಪ ಸುಣಗದ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಮದುವೆ ಮಾಡುವಂತೆ ರವಿ ತಂದೆಯೊಂದಿಗೆ ಮೇಲಿಂದ ಮೇಲೆ ಜಗಳವಾಡುತ್ತಿದ್ದ.

ಇದೇ ವಿಷಯಕ್ಕೆ 2020ರ ಮೇ 28ರಂದು ರಾತ್ರಿ 8 ಗಂಟೆಯ ಸುಮಾರಿಗೆ ತಕರಾರು ತೆಗೆದು, ಕೊಡಲಿಯಿಂದ ತಲೆ, ಕುತ್ತಿಗೆಯ ಹಿಂಭಾಗದಲ್ಲಿ ಕಡಿದು ಗಂಭೀರ ಗಾಯಗೊಳಿಸಿದ್ದ. ಈ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ತನಿಖೆ ನಡೆಸಿದ ಪಿಎಸ್ಐ ವಿನೋದ ಪೂಜಾರಿ, 24-8-2020ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3-9-2021ರಂದು ರವಿ ಸುಣಗದನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಸವಿತಾ ಶಿಗ್ಲಿ ವಾದ ಮಂಡಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪಿಎಸ್ಐ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಎಸ್ಪಿ ಯತೀಶ್ ಎನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಣೆಗೆ ಆಗ್ರಹ

0

-ಸೆಪ್ಟೆಂಬರ್ 8ರಂದು ಡಿಸಿ ಕಚೇರಿ ಎದುರು ಧರಣಿ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿದೆ . ರೈಲ್ವೆ , ರಸ್ತೆ , ವಿದ್ಯುನ್ಮಾನ ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿ , ಮಂಗಳನ ಅಂಗಳದ ವರೆಗೂ ತಲುಪಿದ್ದೇವೆ . ಆದರೆ , ಜೀವನಕ್ಕೆ ಅತ್ಯಾವಶ್ಯಕವಾಗಿ ಬೇಕಾದ ಆಹಾರವನ್ನು ಉತ್ಪಾದಿಸುವ ಕೃಷಿ ಕ್ಷೇತ್ರವು ಇಂದು ದುಸ್ಥಿತಿಯತ್ತ ಸಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನೀಡುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಗೌಡ ಕಡ್ಡಿಪುಡಿ ಆಗ್ರಹಿಸಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1990 ರ ದಶಕದಿಂದ 3.5 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ . ಪ್ರತಿ ವರ್ಷ ಕೃಷಿ ತ್ಯಜಿಸಿ , ನಗರದತ್ತ ಸಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ . ರೈತರು ತಾವು ಬೆಳೆದ ಬೆಳೆಗಳ ಒಳಸುರಿಗಳ ವೆಚ್ಚ ಅಧಿಕವಾಗಿ , ಪ್ರಕೃತಿ ವಿಕೋಪದಿಂದ ನಷ್ಟವುಂಟಾಗಿ ಮತ್ತು ಲಾಭದಾಯಕ ಬೆಲೆ ಸಿಗದೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ಆದರೆ ರೈತನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ . ಮತ್ಯಾರೊ ದರ ನಿಗದಿ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಕ್ಷೇತ್ರ ಅವನತಿಗೊಂಡು, ಆಹಾರದ ಅಭಾವ ಉಂಟಾಗುತ್ತದೆ. ಈ ವ್ಯವಸ್ಥೆ ಸರಿಯಾಗಬೇಕಾದರೆ, ರೈತರಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ “ ಲಾಭದಾಯಕ ಬೆಲೆ ” ದೊರೆಯುವಂತಾಗಬೇಕು. ರೈತರ ಆದಾಯ ದ್ವಿಗುಣಗೊಳ್ಳಬೇಕೆಂಬುದು ಸರ್ಕಾರದ ಒಳ್ಳೆಯ ಚಿಂತನೆಯೇ ಸರಿ . ಆದರೆ , ಸರ್ಕಾರ ಕೇವಲ ಕನಿಷ್ಠ ಬೆಂಬಲ ಬೆಲೆಯನ್ನು ( MISP ) ಘೋಷಿಸಿದರೆ ಸಾಲದು. ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ , ಖರೀದಿ ಗ್ಯಾರಂಟಿ ನೀಡಿ , ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಯಾಗಬಾರದು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹನುಮಂತಪ್ಪ ಗೊಂದಿ, ರಾಯಪ್ಪ ಹುಯಿಲಗೋಳ ಮತ್ತಿತರರು ಇದ್ದರು.

ಬೆಳಗಾವಿ ಮಹಾನಗರ ಪಾಲಿಕೆ ಗದ್ದುಗೆ ಗೆದ್ದು ಬೀಗಿದ ಬಿಜೆಪಿ

  • ಎಂಇಎಸ್, ಕಾಂಗ್ರೆಸ್ ಗೆ ಮುಖಭಂಗ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಇದೇ ಪ್ರಥಮ ಬಾರಿಗೆ ಪಕ್ಷಗಳ ಚಿಹ್ನೆಯಡಿ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿರುವ ಬಿಜೆಪಿ ಭರ್ಜರಿ ಜಯಗಳಿಸಿದ್ದು, ಸ್ಪಷ್ಟ ಬಹುಮತ ಪಡೆದುಕೊಂಡಿದೆ.

ಮಹಾನಗರ ಪಾಲಿಕೆ ರಚನೆ ಆದಾಗಿನಿಂದಲೂ ಕಿಂಗ್ ಆಗಿ ಮೆರೆದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಮಕಾಡೆ ಮಲಗಿದ್ದು, ಕೇವಲ ನಾಲ್ಕು ಕ್ಷೇತ್ರಕ್ಕೆ‌ ಸೀಮಿತಗೊಂಡಿದೆ. ಕಾಂಗ್ರೆಸ್ ಸಹ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದು, ಕೇವಲ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಎಂಐಎಂ ಮೊದಲ ಬಾರಿಗೆ ಖಾತೆ ತೆರೆದಿದ್ದು, ಪಕ್ಷೇತರ ಸದಸ್ಯರೇ ನಿರ್ಣಾಯಕರಾಗಲಿದ್ದಾರೆ ಎಂಬ ಲೆಕ್ಕಾಚಾರ ಉಲ್ಟಾ ಆಗಿ ಕೇವಲ 10 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.

ಬಿಜೆಪಿಯ ದಿಗ್ವಿಜಯದ ಎದುರು ಎಂಇಎಸ್, ಕಾಂಗ್ರೆಸ್ , ಪಕ್ಷೇತರ ಅಭ್ಯರ್ಥಿಗಳು ತರೆಗಲೆಗಳಂತೆ ಉದುರಿ ಹೋಗಿದ್ದಾರೆ.
ಅಭಯ ಪಾಟೀಲ ಪ್ರತಿನಿಧಿಸುವ ದಕ್ಷಿಣ ಮತಕ್ಷೇತ್ರದ ವಾರ್ಡನಲ್ಲಿ ಬಿಜೆಪಿ ಅಲೆಗೆ ಯಾವುದೇ ಪಕ್ಷಗಳು ನಿಲ್ಲಲು ಸಾಧ್ಯವಾಗಿಲ್ಲ.

ಬಿಜೆಪಿ ಅಧಿಕಾರ ಉರುಳಿಸಲು ಎಂ+ಎಂ (ಮರಾಠಾ+ಮುಸ್ಲಿಂ) ಸೂತ್ರ ಎಂಇಎಸ್ ಗೆ ತಿರುಗುಬಾಣವಾಗಿರುವುದು ಬಿಜೆಪಿ ಗೆಲುವಿಗೆ ನೆರವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಬಿಜೆಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ತನ್ನೆಲ್ಲ ಶಕ್ತಿ ಪಣಕ್ಕಿಟ್ಟಿತ್ತು.
ಪಕ್ಷದ ರಾಜ್ಯಾಧ್ಯಕ್ಷರಿಂದ ಹಿಡಿದು, ಆರೇಳು ಸಚಿವರು, ಶಾಸಕರು, ಪದಾಧಿಕಾರಿಗಳು ವಾರ್ಡಗಳಿಗೆ ದಾಂಗುಡಿ ಇಟ್ಟು ಪ್ರಚಾರದಲ್ಲಿ ತೊಡಗಿಸಿಕೊಂಡರು. ನಗರದ ಇಬ್ಬರೂ ಶಾಸಕರು ಹಗಲಿರುಳು ಕೆಲಸ ಮಾಡಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು, ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಒಟ್ಟಾರೆ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿ ಬಿಜೆಪಿ ಮೊದಲ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ.
ಪಕ್ಷಗಳ ಬಲಾಬಲ
ಬಿಜೆಪಿ 36
ಕಾಂಗ್ರೆಸ್ 9
ಎಂಇಎಸ್ 4
ಎಂಐಎಂ 1
ಪಕ್ಷೇತರ 10

error: Content is protected !!