ಹೈದರಾಬಾದ್, ಮೇ 26: ಜೂನ್ 4 ರಂದು ಬಿಡುಗಡೆಯಾಗಲಿರುವ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಇದೀಗ ಹೊಸ ಬೆಳವಣಿಗೆಯಿಂದ ಸುದ್ದಿಯಲ್ಲಿದೆ. ಭಾರತದ ಜೊತೆ ಜಪಾನ್‌ನಲ್ಲೂ ಏಕಕಾಲಕ್ಕೆ ತೆರೆಗೆ ಬರಬೇಕಿದ್ದ ಸಿನಿಮಾ, ಕೊನೆ ಕ್ಷಣದಲ್ಲಿ ಜಪಾನ್ ಬಿಡುಗಡೆ ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
‘ಆರ್‌ಆರ್‌ಆರ್’ ನಂತರ ಜಪಾನ್‌ನಲ್ಲಿ ರಾಮ್ ಚರಣ್‌ಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ‘ಪೆದ್ದಿ’ ಚಿತ್ರವನ್ನು ಜಪಾನ್ ಮಾರುಕಟ್ಟೆಯಲ್ಲೂ ಭರ್ಜರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಕೆಲವು ತಾಂತ್ರಿಕ ಹಾಗೂ ವಿತರಣಾ ಸಮಸ್ಯೆಗಳ ಹಿನ್ನೆಲೆ ಸದ್ಯಕ್ಕೆ ಜಪಾನ್ ಬಿಡುಗಡೆ ಸ್ಥಗಿತಗೊಂಡಿದೆ ಎನ್ನಲಾಗಿದೆ.
ಈ ನಿರ್ಧಾರ ಜಪಾನ್ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿದ್ದು, ಹೊಸ ಬಿಡುಗಡೆ ದಿನಾಂಕ ಯಾವಾಗ ಘೋಷಣೆಯಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇತ್ತ ಭಾರತೀಯ ಸಿನಿಪ್ರೇಮಿಗಳು ಕೂಡ ಜಾಗತಿಕ ರಿಲೀಸ್ ಆಗಿದ್ದರೆ ಸಿನಿಮಾ ಇನ್ನೂ ದೊಡ್ಡ ಮಟ್ಟದಲ್ಲಿ ದಾಖಲೆ ಬರೆಯಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
‘ಪೆದ್ದಿ’ ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಶಿವರಾಜ್‌ಕುಮಾರ್ ಪಾತ್ರ. ರಾಮ್ ಚರಣ್ ಮತ್ತು ಶಿವಣ್ಣ ಕಾಂಬಿನೇಷನ್ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಕನ್ನಡ-ತೆಲುಗು ಪ್ರೇಕ್ಷಕರಲ್ಲಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾಗೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು, ದಿವ್ಯೇಂದು ಶರ್ಮ ಹಾಗೂ ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.



