Home Blog Page 3244

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಇಂಡಿಯನ್ ಪ್ರಿಮೀಯರ್ ಲೀಗ್ ಆರಂಭಗೊಂಡಿದ್ದು, ಬೆಟ್ಟಿಂಗ್ ದಂಧೆ ಸದ್ದು ಮಾಡುತ್ತಿದೆ. ಜಿಲ್ಲೆಯ ಎಲ್ಲೆಂದರಲ್ಲಿ ಬೆಟ್ಟಿಂಗ್ ಮಾತುಗಳೇ ಕೇಳಿ ಬರುತ್ತಿವೆ. ಸುಲಭವಾಗಿ ಹಣ ಸಂಪಾದಿಸಲು ಜನ ಜೂಜಾಟಕ್ಕೆ ಇಳಿಯುತ್ತಿದ್ದಾರೆ. ಹೀಗೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದವರ ಮೇಲೆ ರೋಣ ಹಾಗೂ ಗಜೇಂದ್ರಗಡ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರೋಣ ತಾಲೂಕಿನ ಹೊಳೆಆಲೂರ ಕ್ರಾಸ್‌ನಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದ ಸೋಡಾ ವ್ಯಾಪಾರಿ ಹೊಳೆಆಲೂರ ಗ್ರಾಮದ ಹರೀಶ ತನುಷಾ ಪವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸನ್‌ರೈಜರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯಕ್ಕೆ ಕ್ರಿಕೆಟ್ ಬೆಟ್ಟಿಂಗ್ ವಿಧವಾದ ಒನ್ ಟು ಡಬಲ್ ರೇಟ್ 500 ರೂ. ಆಡಿದರೆ 1,000 ರೂ. ಹಣ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಳ್ಳುವ ವೇಳೆ ಹರೀಶ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಬೆಟ್ಟಿಂಗ್‌ಗೆ ಬಳಸಲಾಗಿದ್ದ 10 ಸಾವಿರ ರೂ. ಮೌಲ್ಯದ ಮೊಬೈಲ್, 2360 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದರಂತೆ, ಗಜೇಂದ್ರಗಡ ಪಟ್ಟಣದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮುಂದೆ ಸನ್‌ರೈಜರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ಆಡುವ ವೇಳೆ ಪೊಲೀಸರ ಬಲೆಗೆ ಬಿದ್ದ ಮೀನು ವ್ಯಾಪಾರಿ ಮಂಜುನಾಥ ಹಂಪಣ್ಣ ರಾಠೋಡ ಅವನಿಂದ 3,200 ರೂ. ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ. ಮಂಜುನಾಥ ರಾಥೋಡ 1,000ಕ್ಕೆ 1,200 ರೂ. ಕೊಡುವುದಾಗಿ ಕ್ರಿಕೆಟ್ ಬೆಟ್ಟಿಂಗ್‌ಗೆ ಜನರನ್ನು ಆಹ್ವಾನಿಸುವ ವೇಳೆ ತಗುಲು ಹಾಕಿಕೊಂಡಿದ್ದಾನೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೇರೆ ಯುವಕನೊಂದಿಗೆ ಮದುವೆ ಫಿಕ್ಸ್ ; ಪ್ರೇಮಿಗಳು ಆತ್ಮಹತ್ಯೆಗೆ ಶರಣು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಹದಿ ಹರೆಯದ ಹುಡುಗ ಹುಡುಗಿಯ ನಡುವೆ ಪ್ರೇಮಾಂಕುರವಾಗಿ ಇನ್ನೇನು ಮದುವೆ ಮಾಡಿಕೊಳ್ಳೊಣ ಎನ್ನುವಷ್ಟರಲ್ಲಿ ಹುಡುಗಿಯ ಮನೆಯವರು ಬೇರೊಬ್ಬ ಯುವಕನೊಂದಿಗೆ ಮದುವೆಗೆ ಮೂಹುರ್ತ ನಿಗದಿ ಮಾಡಿದ್ದನ್ನು ಸಹಿಸಿಕೊಳ್ಳಲಾಗದೇ ಪ್ರೇಮಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳವಾರ ನಡೆದಿದೆ.

ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಕುರುಬ ಜಾತಿಗೆ ಸೇರಿದ ಸಾವಿತ್ರಿ ಮುತ್ತಪ್ಪ ನರಗುಂದ (20) ಪರಿಶಿಷ್ಟ ಜಾತಿಗೆ ಸೇರಿದ ಯುವಕ ಮಲ್ಲಪ್ಪ ದುರ್ಗಪ್ಪ ಮಾದರ (23) ವಿಷ ಸೇವಿಸಿದ ಅನ್ಯಜಾತಿಯ ಪ್ರೇಮಿಗಳಾಗಿದ್ದಾರೆ.

ಸೋಮವಾರ ರಾತ್ರಿ ಇಬ್ಬರನ್ನು ಇಲ್ಲಿಯ ಸರ್ಕಾರಿ ಆಸ್ಪತೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸೋಮವಾರ ರಾತ್ರಿ ಮೃತಪಟ್ಟರೇ, ಯುವಕ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಗಂಡ ಹೆಂಡತಿ ಜಗಳ; ಗಂಡನ ಠಾಣೆಗೆ ಕರೆಯಿಸಿ ಹಿಗ್ಗಾಮುಗ್ಗಾ ಥಳಿಸಿದ ಗದಗ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ:

ಪತಿ ಕಿರುಕುಳ, ದೌರ್ಜನ್ಯ ನೀಡುತ್ತಿದ್ದಾನೆಂಬ ಪತ್ನಿಯ ಮೌಖಿಕ ದೂರಿನ ಮೇಲೆ ಗಂಡನನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗನಲ್ಲಿ ನಡೆದಿದೆ. ಇದರಿಂದಾಗಿ ಗದಗ ಪೊಲೀಸರ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ‌ ಬಂದಂತಾಗಿದೆ.

ದಾವಲಸಾಬ್ ಕುಮನೂರು ಎಂಬ ವ್ಯಕ್ತಿಯನ್ನು ಮಹಿಳಾ ಠಾಣೆಯ ಪಿಎಸ್ಐ ನೂರಾಜಾನ್ ಸಬರ್ ಸಮ್ಮುಖದಲ್ಲಿ ನಾಲ್ವರ ಪೊಲೀಸರು ಥಳಿಸಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ಥಳಿಸಿದ್ದರ ಪರಿಣಾಮ ಜಿಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ದಾವಲಸಾಬ್ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೊಲೀಸರ ಲಾಟಿ ಹಾಗೂ ಬೂಟೇಟಿನಿಂದ ದಾವಲಸಾಬ್ ಮೈ ಮೇಲೆ ಬಾಸುಂಡೆ ಬಂದಿವೆ. ದಾವಲಸಾಬ್ ಗೆ ಪೊಲೀಸರು ಹೊಡೆದಿರುವ ಪರಿಣಾಮ ಕುಂತರೆ ಕುಳಿತುಕೊಳ್ಳಲಾಗುವುದಿಲ್ಲ. ನಿಂತರೆ ನಿಲ್ಲಲು ಬರದ ಹಾಗೆ ಹೊಡೆದಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದಾನೆ. ಪೊಲೀಸರು ವಿಚಾರಣೆಯ ನೆಪದಲ್ಲಿ ಮಾನವೀಯತೆಯ ಮರೆತು ಮೃಗಗಳಂತೆ ವರ್ತಿಸಿದ್ದಾರೆ. ಅಲ್ಲದೆ, ದಾವಲಸಾಬ್ ಬಳಿ ಇದ್ದ ಹಣವನ್ನು ‌ಕಸಿದುಕೊಂಡು‌ ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರ ದಬ್ಬಾಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಅಲ್ಲದೆ, ನ್ಯಾಯ ಒದಗಿಸಿ ಕೊಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಐದು ತಿಂಗಳಲ್ಲಿ ನಾಲ್ಕೈದು ಬಾರಿ ಪೊಲೀಸ್ ಠಾಣೆ‌ ಮೆಟ್ಟಿಲೇರಿಸಿದ್ದಾಳೆ. ಸಂತೆಗೆ ಹೋದ ಮಗನನ್ನು ಕರೆಯಿಸಿ ನಮಗೆ ಗೊತ್ತಿರದ ಹಾಗೆ ಪೊಲೀಸರು ಬಡಿದಿದ್ದಾರೆ. ಸಮಯವಾದರೂ ಮನೆಗೆ ಬರದ ಮಗನ ಪೋನ್ ಗೆ ಕರೆ ಮಾಡಿದರೆ ರಿಸೀವ್ ಮಾಡಿಲ್ಲ. ಸಂಜೆ ಆರು ಗಂಟೆಗೆ ಮಗ ಫೋನ್ ಮಾಡಿ ಪೊಲೀಸರ ಹೊಡೆದ ವಿಚಾರ ತಿಳಿಸಿದ್ದಾ‌ನೆ. ಪೊಲೀಸರಿಗೆ ದುಡ್ಡು ಕೊಟ್ಟು ಹೊಡೆಸಿದ್ದಾರೆ. ಹೊಡೆದದ್ದಕ್ಕೆ ದೇಹದ ತುಂಬೆಲ್ಲಾ ಗಾಯಗಳಾಗಿವೆ. ಠಾಣೆಗೆ ಕರೆದು ಈ ರೀತಿಯಾಗಿ ಹೊಡೆದು ಏನಾದರೂ ಆಗಿ ಸತ್ತರೆ ಯಾರನ್ನು ಕೇಳಬೇಕು ಎಂದು ದಾವಲಸಾಬ್ ನ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಏನಿದು ಪ್ರಕರಣ?

ದಾವಲಸಾಬ್ ಇಬ್ಬರನ್ನು ಮದುವೆಯಾಗಿದ್ದ. ಇಬ್ಬರು ಹೆಂಡತಿಯರನ್ನು ಪ್ರತ್ಯೇಕವಾಗಿ ಇರಿಸಿದ್ದ. ಆದರೆ, ಮೊದಲ ಹೆಂಡತಿ ಬಸೀರಾಬೇಗಂ ಪತಿ ದಾವಲಸಾಬ್ ನನಗೆ ಕಿರುಕುಳ, ನನ್ನ ಮೇಲೆ ದೌರ್ಜನ್ಯ ನೀಡುತ್ತಿದ್ದಾನೆಂದು ಗದಗನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೌಖಿಕ ದೂರು ನೀಡಿದ್ದಳು. ಮೌಖಿಕ ದೂರನ್ನೇ ಬಂಡವಾಳ ಮಾಡಿಕೊಂಡ ಮಹಿಳಾ ಠಾಣೆಯ ಪೊಲೀಸರು ವಿಚಾರಣೆಗೆ ಬಸೀರಾಬೇಗಂಳ ಗಂಡ ದಾವಲಸಾಬ್ ನನ್ನು ಠಾಣೆಗೆ ಕರಿಸಿ ವಿಚಾರಣೆಯ ನೆಪದಲ್ಲಿ ಥಳಿಸಿದ್ದಾರೆ. ಓರ್ವ ಮಹಿಳಾ ಪೊಲೀಸ್ ಹಾಗೂ ಮೂರು ಜನ ಪುರಷ‌ ಪೊಲೀಸರು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಥಳಿಸಿದ್ದಲ್ಲದೆ, ಮಹಿಳಾ ಠಾಣೆಯ ಪಿಎಸ್ಐ ನೂರಾಜಾನ್ 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆಗ ದಾವಲಸಾಬ್ ನನ್ನ ಬಳಿ ಹಣವಿಲ್ಲ ಎಂದಿದ್ದಕ್ಕೆ ಕಿರಾಣಿ ಸಾಮಾನು ತರಲು ಇಟ್ಟುಕೊಂಡಿದ್ದ 40 ಸಾವಿರ ರೂ.ನಲ್ಲೇ ಐದು ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಒಟ್ಟಿನಲ್ಲಿ ಗದಗ‌ ನಗರದ ಹುಡ್ಕೋ ಕಾಲನಿಯ ನಿವಾಸಿ ದಿ.ಸಂತೋಷ ಕರ್ಕಿಕಟ್ಟಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಗದಗ ಪೊಲೀಸರ ದಬ್ಬಾಳಿಕೆಗೆ ಮತ್ತೊಂದು ಪ್ರಕರಣ ಸೇರ್ಪಡೆಯಾದಂತಾಗಿದೆ.

ಶಾಸಕ ಎಚ್.ಕೆ.ಪಾಟೀಲರಿಗೆ ಮಾತೃವಿಯೋಗ; ಅನಿಲ ಮೆಣಸಿನಕಾಯಿ ಸಂತಾಪ

ವಿಜಯಸಾಕ್ಷಿ ಸುದ್ದಿ, ಗದಗ:

ಸಹಕಾರ ರಂಗದ ಭೀಷ್ಮ ದಿ.ಕೆ.ಎಚ್.ಪಾಟೀಲರ ಧರ್ಮಪತ್ನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಎಚ್.ಕೆ.ಪಾಟೀಲರ ಮಾತೋಶ್ರೀಯವರಾದ ದಿ.ಪದ್ಮಾವತಿ ಕೆ. ಪಾಟೀಲರು ಸೋಮವಾರ ಸ್ವರ್ಗವಾಸಿಗಳಾಗಿದ್ದಾರೆ.

88 ವಸಂತಗಳ ತುಂಬುಜೀವನ ನಡೆಸಿದ ಪದ್ಮಾವತಿ ಅಮ್ಮನವರು ಕೆಲಕಾಲದಿಂದ ವಯೋಸಹಜ ತೊಂದರೆಗಳಿಂದ ಬಳಲುತ್ತಿದ್ದರು. ಮೃತರು ಪುತ್ರರಾದ ಎಚ್.ಕೆ.ಪಾಟೀಲ ಹಾಗೂ ಪಿ.ಕೆ.ಪಾಟೀಲ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಹುಲಕೋಟಿಯ ಮುಕ್ತಿಧಾಮದಲ್ಲಿ ಮಂಗಳವಾರ 2 ಗಂಟೆಗೆ ನೆರವೇರಲಿದೆ.

ಸಂತಾಪ: ಶಾಸಕ ಎಚ್.ಕೆ.ಪಾಟೀಲ್ ಅವರ ತಾಯಿ ಪದ್ಮಾವತಿ ಕೃಷ್ಣಗೌಡ ಪಾಟೀಲ ಅವರ ನಿಧನಕ್ಕೆ ಹಲವು ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದು, ತಾಯಿ ಪದ್ಮಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ದಯಪಾಲಿಸಲಿ ಎಂದಿದ್ದಾರೆ.

ಒತ್ತಡ ಸಹಿಸಲಾರದೆ ಪುರಸಭೆ ಉಪಾಧ್ಯಕ್ಷೆ ಖೈರುನಬಿ ರಾಜೀನಾಮೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಕಳೆದ  ಒಂದು ವಾರದಿಂದ ನಡೆಯುತ್ತಿದ್ದ ಸ್ಥಳೀಯ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಬಿಗಿಪಟ್ಟು ಹಿಡಿದಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಯು ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇರಲಿಲ್ಲ. ಆದರೆ ಬಿಜೆಪಿ ಸದಸ್ಯರ ಒತ್ತಡಕ್ಕೆ ಮಣಿದು ಹಾಗೂ ರಂಜಾನ ತಿಂಗಳಲ್ಲಿ ಜಗಳ ಬೆಡವೆಂದು ತುಂಬಾ ನೊಂದುಕೊಂಡಿದ್ದ ಅವರು ಸೋಮವಾರ ಸಂಜೆ ಧಾರವಾಡ ಜಿಲ್ಲೆಯ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. 

ಭಜರಂಗದಳದ ಕಾರ್ಯಕರ್ತರಿಂದ ನಿವೃತ್ತ ಯೋಧ ಬಸವನಗೌಡಗೆ ಅದ್ಧೂರಿ ಸ್ವಾಗತ

ವಿಜಯಸಾಕ್ಷಿ ಸುದ್ದಿ, ರಟ್ಟೀಹಳ್ಳಿ:

ಸುಧೀರ್ಘ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ತಾಲ್ಲೂಕಿನ ಚಿಕ್ಕಯಡಚಿ ಗ್ರಾಮದ ಬಸವನಗೌಡ ಗುಬ್ಬೇರ ಅವರನ್ನು ಪಟ್ಟಣದ ಭಜರಂಗದಳ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಮೇಳದ ಜೊತೆಗೆ ಪಟಾಕಿ ಸಿಡಿಸಿ ಹೂವಿನ ಸುರಿಮಳೆಗೈದು ನಿವೃತ್ತ ಯೋಧನ ಮೆರವಣಿಗೆ ಮಾಡಲಾಯಿತು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಮಾಜಿ ಶಾಸಕ ಯು. ಬಿ. ಬಣಕಾರ ಯೋಧನಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಭಜರಂಗದಳದ ಕಾರ್ಯಕರ್ತರಾದ ಮೃತ್ಯುಂಜಯ ಬೆಣ್ಣಿ, ಆಕಾಶ್ ಹುಲ್ಲತ್ತಿ, ರಾಜು ಕುಪ್ಪೆಲೂರ, ಸಿದ್ದು ಪಾಟೀಲ್, ನಾಗಪ್ಪ ದೊಡ್ಡಗೌಡ್ರ, ರಾಜು ಕೋಣ್ತಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಗೌಡ ಚನ್ನಗೌಡ್ರ, ರುದ್ರೇಶ್ ಬೆಣ್ಣಿ, ವೀರನಗೌಡ ಮಕರಿ, ಹನುಮಂತಪ್ಪ ಬಳಿಗಾರ, ಗೋಪಾಲ್ ಮಡಿವಾಳರ, ಶ್ರೀನಿವಾಸ್ ಭೈರೋಜಿಯವರ್, ದೇವರಾಜ್ ನಾಗಣ್ಣನವರ್ ಇದ್ದರು.

ಸಾಮಾನ್ಯ ಸಭೆ ನಡೆಸದಂತೆ ಬಿಜೆಪಿ ಬಿಗಿ ಪಟ್ಟು; ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಸ್ಥಳೀಯ ಪುರಸಭೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಅಡ್ಡಿ ಪಡಿಸಿ ಯಾವುದೇ ಕಾರಣಕ್ಕೂ ಸಾಮಾನ್ಯ ಸಭೆ ನಡೆಸುವಂತಿಲ್ಲ, ನಮ್ಮ ಬೆಂಬಲದಿಂದ ಚುನಾಯಿತರಾಗಿರುವ ಉಪಾಧ್ಯಕ್ಷರು ರಾಜೀನಾಮೆ ಕೊಡಬೇಕೆಂದು ಏರು ಧ್ವನಿಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಸೋಮವಾರ ನಡೆದಿದೆ.

ಅಧ್ಯಕ್ಷ ಮಂಜುನಾಥ ಜಾಧವ ಈಗಾಗಲೇ ರಾಜೀನಾಮೆ ನೀಡಿದ್ದು ಸಾಮಾನ್ಯ ಸಭೆ ನಡೆಸುವಂತಿಲ್ಲ. ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ ರಾಜೀನಾಮೆ ಕೊಡುವಂತೆ ಬಿಜೆಪಿ ಸದಸ್ಯರು ಬಿಗಿ ಪಟ್ಟು ಹಿಡಿದು ಖೈರುನಬಿ ವಿರುದ್ಧ ಹರಿಹಾಯ್ದರು.

ಸಿಟ್ಟಿಗೆದ್ದ ಖೈರುನಬಿ ನಾನು ಕಾಂಗ್ರೆಸ್ ಪಕ್ಷದಿಂದ ಉಪಾಧ್ಯಕ್ಷೆನಾಗಿದ್ದೇನೆ, ಬಿಜೆಪಿ ಸದಸ್ಯರ ಮಾತು ಕೇಳುವ ಅವಶ್ಯಕತೆಯಿಲ್ಲವೆಂದು ಬಿಜೆಪಿ ಸದಸ್ಯ ಮಹಾಂತೇಶ ಕಲಾಲ ವಿರುದ್ಧ ಏರು ಧ್ವನಿಯಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಸಮುಜಾಯಿಸಿದ ಹಂಗಾಮಿ ಅಧ್ಯಕ್ಷ ಮಂಜು ಜಾಧವ, ನಮ್ಮನ್ನು ಬೆಂಬಲಿಸುವಂತೆ ಯಾವುದೆ ಬಿಜೆಪಿ ಸದಸ್ಯರ ಮನೆಗಾಗಲಿ, ಆ ಪಕ್ಷದ ಹಿರಿಯರ ಮನೆಗಾಗಲಿ ಹೋಗಿರಲಿಲ್ಲ, ನಿಮಗೆ ಜೆಡಿಎಸ್ ಪಕ್ಷವನ್ನು ಹೊರಗಿಡಬೇಕೆಂಬ ಕಾರಣದಿಂದ ಬಾಹ್ಯ ಬೆಂಬಲ ಕೊಟ್ಟಿದ್ದೀರಿ, ನಾವೇನು ನಿಮಗೆ ನಮ್ಮ ಪರವಾಗಿ ಮತ ಚಲಾಯಿಸುವಂತೆ ಹೇಳಿರಲಿಲ್ಲ, ಒಳ ಒಪ್ಪಂದವನ್ನು ಮಾಡಿರಲಿಲ್ಲವೆಂದು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿ ಸಾಮಾನ್ಯ ಸಭೆ ನಡೆಸದಂತೆ ಬಿಗಿಪಟ್ಟು ಹಿಡಿದಿದ್ದಾರೆ.

17 ಸದಸ್ಯರ ಬೆಂಬಲವಿದ್ದು ಕೋರಂ ಭರ್ತಿಯಾಗಿದೆ. ನಾವು ಸಾಮಾನ್ಯ ಸಭೆಯನ್ನು ನಡೆಸಿಯೇ ತೀರುತ್ತೇವೆ, ಸಭೆಯಲ್ಲಿ ಗದ್ದಲ ಮಾಡುತ್ತಿರುವ ಬಿಜೆಪಿ ಸದಸ್ಯರನ್ನು ಹೋರಹಾಕುವಂತೆ ಕಾಂಗ್ರೆಸ್ ಸದಸ್ಯರು ಮುಖ್ಯಾಧಿಕಾರಿ ಈರಪ್ಪ ಹಸಬಿಯವರೊಂದಿಗೆ ವಾಗ್ವಾದ ಮುಂದುವರೆಸಿದ್ದಾರೆ.

ಸಾಮಾನ್ಯ ಸಭೆಯ ಹಾಜರಾತಿ ಪುಸ್ತಕಕ್ಕೆ ಬಿಜೆಪಿ ಸದಸ್ಯರು ಸಹಿ ಮಾಡದ ಕಾರಣ ಹೊರಹಾಕಬೇಕೆಂದು ಮಾತಿನ ಚಕಮಕಿಯೇ ನಡೆಯುತ್ತಿದ್ದು, ಪಟ್ಟಣದ ಅಭಿವೃದ್ಧಿ ಪರ ಚಿಂತನೆ ಮಾಡದ ಎರಡು ರಾಷ್ಟ್ರೀಯ ಪಕ್ಷದ ಸದಸ್ಯರು ಕುರಿಗಳ ಸಂತೆಯಂತೆ ಜಾತ್ರೆ ಮಾಡುತ್ತಿದ್ದಾರೆ, ಕಳೆದೊಂದು ತಿಂಗಳಿಂದ ಕಚ್ಚಾಟ ಮುಂದುವರೆಸಿರುವುದು ಸಾಮಾನ್ಯ ಪ್ರಜೆಗಳಿಗೆ ತಲೆಬಿಸಿ ಮಾಡಿದ್ದು, ಇಂತವರಿಗೆ ಮುಂದಿನ ದಿನದಲ್ಲಿ ತಕ್ಕಪಾಠ ಕಲಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ. 

ಶೋಭಾಯಾತ್ರೆಯಲ್ಲಿ ಜೈ ಭೀಮ್ ಬಾವುಟಕ್ಕೆ ಅವಮಾನ; ಕೇರ್ ಮಾಡದ ಸಚಿವ ಪಾಟೀಲ್, ಕಾರ್ಯಕರ್ತರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನವಲಗುಂದ: ಯುಗಾದಿ ಉತ್ಸವದ ಅಂಗವಾಗಿ  ನಡೆಯುತ್ತಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೈಭೀಮ್ ಸಂಘಟನೆಯವರ ನೀಲಿ ಭಾವುಟಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಯವರು  ಇಲ್ಲಿಯ ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಬೃಹತ್ ಶೋಭಾಯಾತ್ರೆಯಲ್ಲಿ ನಮ್ಮ ಸಂಘಟನೆಯವರು ನೀಲಿ ಭಾವುಟ ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡುದ್ದೇವು. ಹಿಂದೂಗಳು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮದಾಗಿತ್ತು. ಆದರೆ ಕೆಲವರಿಗೆ ಇದನ್ನು ಸಹಿಸಲಾಗದೇ ನೀಲಿ ಬಾವುಟವನ್ನು ಹರಿದು ಹಾಕಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದಾರೆ.

ಈ ಅವಮಾನವನ್ನು ಖಂಡಿಸಿ ನಾವು ಲಿಂಗರಾಜ ವೃತ್ತದ ಬಳಿ ಪ್ರತಿಭಟನೆ ಮಾಡುತ್ತಿದ್ದೇವೆ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಮ್ಮ ಮುಂದೆಯೇ ಹಾದು ಹೋದರು, ಆದರೆ ನಮಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಿಲ್ಲ.

ಶೋಭಾಯಾತ್ರೆಯ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ಪೊಲೀಸ್ ಇಲಾಖೆಯವರು ಮಾಡಿದ್ದಾರೆ. ಯಾರು ಬಾವುಟವನ್ನು ಹರಿದು ಹಾಕಿದ್ದಾರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಂತಹ ಕಿಡಗೇಡಿಗಳನ್ನು ತಕ್ಷಣವೇ ಬಂಧಿಸಿ ನ್ಯಾಯ ಒದಗಿಸಬೇಕು. ದಲಿತರ್ಯಾರು ಇಲ್ಲಿ ಕುರಿಗಳಲ್ಲ, ನಾವೆಲ್ಲರೂ ಹುಲಿಗಳಾಗಿದ್ದು ನ್ಯಾಯ ಸಿಗುವವರೆಗೂ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆಂದು ನೇತೃತ್ವ ವಹಿಸಿದ್ದ ನಿಂಗಪ್ಪ ಕೆಳಗೇರಿ ಎಚ್ಚರಿಕೆ ನೀಡಿದರು.

ಪರಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡ ಸಿಪಿಐ ಚಂದ್ರಶೇಖರ ಮಠಪತಿ, ಗ್ರೇಡ್ 2 ತಹಶೀಲ್ದಾರ್ ಎಂ.ಜೆ.ಹೊಕ್ರಾಣಿ, ಪಿಎಸ್‍ಐ ಕಲ್ಮೇಶ ಬೆನ್ನೂರ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ.

ಆದರೆ ಪ್ರತಿಭಟನಾಕಾರರು ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಕಿಡಗೇಡಿಗಳನ್ನು ಇಂದು ಬಂಧಿಸದಿದ್ದರೆ ಭಾನುವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದು, ಆಯಕಟ್ಟಿನ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಿದ್ದಾರೆ. 

ಮುಲ್ಲಾನ ಬದಲು ಅಲ್ಲಾನನ್ನು ನಂಬಿ; ಮುಲ್ಲಾಗಳು ಕಾಂಗ್ರೆಸ್ ಏಜೆಂಟರು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗನ ಹೃದಯ ಭಾಗದಲ್ಲಿರುವ ಜವಳಗಲ್ಲಿಯ ರಾಜ ಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿರುವ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸದ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಬೆಟಗೇರಿಯಲ್ಲಿ ನಗರಸಭೆ ಮೀಸಲಿಟ್ಟಿರುವ ಒಂದು ಎಕರೆ ಜಾಗಕ್ಕೆ ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಶೀಘ್ರವೇ ‌ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಒತ್ತಾಯಿಸಿದರು.

ಶನಿವಾರ ನಗರದ ರಾಯಲ್ ವಿಲ್ಲಾದಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಮಾಂಸ ಕತ್ತರಿಸುವುದರಿಂದ ರಕ್ತ, ರಾಜ ಕಾಲುವೆ ಸೇರುತ್ತದೆ. ಇದರಿಂದ ದುರ್ವಾಸನೆ ಬೀರುತ್ತದೆ. ಸಮೀಪದಲ್ಲಿ ಜೈನ ಮಂದಿರವಿದ್ದು, ಮಂದಿರಕ್ಕೆ ಬರುವ ಭಕ್ತರಿಗೆ ಇದರಿಂದ ತೊಂದರೆಯಾಗಲಿದೆ. ಅವರ ಭಾವನೆಗಳಿಗೆ ಧಕ್ಕೆಯಾಗಲಿದೆ. ಇನ್ನು ರಾಜಕಾಲುವೆ ಮೇಲೆ ಅನಧಿಕೃತ ಕಟ್ಟಡ ಕಟ್ಟಲು, ಮಾಂಸದ ಅಂಗಡಿ ನಿರ್ಮಿಸಲು ಬರುವುದಿಲ್ಲ. ಅಲ್ಲದೆ, ರಾಜಕಾಲುವೆ ಬಫರ್ ಜೋನ್ ನಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶವಿಲ್ಲ. ಹೀಗಾಗಿ ಬೆಟಗೇರಿ ಭಾಗದಲ್ಲಿ ಮೀಸಲಿರಿಸಿರುವ ಜಾಗಕ್ಕೆ ಸ್ಥಳಾಂತರಿಸಬೇಕು.

ಜವಳಗಲ್ಲಿ ಸುಮಾರು ಹದಿನಾರು ಎಕರೆ ವಿಸ್ತೀರ್ಣದಲ್ಲಿದ್ದು, ಆ ಜಾಗ ವೀರನಾರಾಯಣ ದೇವಸ್ಥಾನಕ್ಕೆ ಸೇರಿದೆ. ಈವೆರಲ್ಲ ಅನಧಿಕೃತವಾಗಿ ವಾಸವಾಗಿದ್ದು, ಇಲ್ಲಿ ಮುಸ್ಲಿ‌ಂ ಪುಡಾರಿಗಳ ದಬ್ಬಾಳಿಕೆ ಹಾಗೂ ಅವರ ಬೆಂಬಲವಿದೆ. ಜವಳಗಲ್ಲಿಯಲ್ಲಿ ಇರುವ ಜನರಿಗೆ ರೆಹಮತ್ ನಗರದಲ್ಲಿ ಮನೆ ಮಂಜೂರು ಆಗಿದ್ದರೂ ಅಲ್ಲಿರುವ ತಮ್ಮ ಮನೆಗಳನ್ನು ಬಾಡಿಗೆಗೆ ನೀಡಿ ಜವಳಗಲ್ಲಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ ವಾಸವಾಗಿರುವವರನ್ನು ಖಾಲಿ‌ ಮಾಡಿಸಬೇಕು. ಅಲ್ಲದೆ, ದೇವಸ್ಥಾನದ ಒಂದಿಂಚು ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ ಎಂದರು.

ರಾಜ್ಯದಲ್ಲಿ ಹಿಜಾಬ್ ಹಾಗೂ ಹಲಾಲ್ ವಿಚಾರ ಭಾರೀ ಚರ್ಚೆಯಲ್ಲಿದ್ದು, ಮುಸ್ಲಿಂರು ಅಲ್ಲಾನನ್ನು‌ ನಂಬಬೇಕೇ ಹೊರತು ಮುಲ್ಲಾನನ್ನು ಅಲ್ಲ. ಏಕೆಂದರೆ, ಮುಲ್ಲಾಗಳು ಕಾಂಗ್ರೆಸ್‌ ಚೇಲಾಗಳಂತೆ, ಏಜೆಂಟರ್ ಅಂತೆ ವರ್ತಿಸುತ್ತಿದ್ದಾರೆ. ಹಿಜಾಬ್, ಬುರ್ಕಾ ಧರಿಸುವುದಕ್ಕಿಂತ ಮುನ್ನ ವೈಜ್ಞಾನಿಕ ಕಾರಣ ತಿಳಿದುಕೊಳ್ಳಬೇಕು. ಅರಬ್ ರಾಷ್ಟ್ರಗಳಲ್ಲಿ ಬುರ್ಕಾ, ಹಿಜಾಬ್ ಧರಿಸಿದರೂ ಕಪ್ಪು ಬಣ್ಣದ್ದು ಬಳಸುವುದಿಲ್ಲ. ಬದಲಾಗಿ ಗ್ರೇ, ಗ್ರಿನ್ ಇನ್ನಿತರ ಬಣ್ಣಗಳದ್ದು ಧರಿಸುತ್ತಾರೆ. ಅರಬ್ ದೇಶಗಳಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಬಿಸಿಲು ಕಾಯ್ದರೆ ಬೋನ್ ಕ್ಯಾನ್ಸರ್ ಹಾಗೂ ಚರ್ಮ ರೊಗ ಬರುತ್ತದೆ ಎಂಬ ಕಾರಣಕ್ಕೆ ಧರಿಸುತ್ತಾರೆ. ಹೀಗಾಗಿ ನಮ್ಮಲ್ಲಿ ಬುರ್ಕಾ ಹಾಕುವ ಅವಶ್ಯಕತೆ ಇಲ್ಲ. ಹಿಜಾಬ್ ವಿಚಾರದಲ್ಲಿ ಸಂವಿಧಾನದ ಹಕ್ಕು, ಹೈಕೋರ್ಟ್ ಆದೇಶ ಧಿಕ್ಕರಿಸಿ ನಡೆಯುತ್ತಿರುವುದು ಸರಿಯಲ್ಲ ಎಂದು ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಕಾಂತಿಲಾಲ್ ಬನ್ಸಾಲಿ, ಸಂಗಮೇಶ ದುಂದೂರ, ಉಷಾ ದಾಸರ, ಸುನಂದಾ ಬಾಕಳೆ, ರಾಘವೇಂದ್ರ ಯಳವತ್ತಿ, ವಿಜಯಲಕ್ಷ್ಮಿ ಮಾನ್ವಿ, ವಿನಾಯಕ ಮಾನ್ವಿ, ಅನಿಲ್ ಅಬ್ಬಿಗೇರಿ, ಸಿದ್ದು ಪಲ್ಲೇದ ಸೇರಿದಂತೆ ಹಲವರಿದ್ದರು.

ಗದಗನ ರಾಯಲ್‌ ಎನ್’ಫೀಲ್ಡ್ ಶೋರೂಂನಲ್ಲಿ ಬೆಂಕಿ ಅವಘಡ

ವಿಜಯಸಾಕ್ಷಿ ಸುದ್ದಿ, ಗದಗ:

ಶಾರ್ಟ್ ಸರ್ಕ್ಯೂಟ್ ನಿಂದಾಗಿ ರಾಯಲ್ ಎಲ್ ಫೀಲ್ಡ್ ಬೈಕ್ ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗದಗನ ಮುಳಗುಂದ ನಾಕಾ ಬಳಿ ಇರುವ ಹುಬ್ಬಳ್ಳಿ ರಸ್ತೆಯಲ್ಲಿರುವ ವೀರೇಶ್ ಗುಗ್ಗರಿ ಎಂಬುವವರಿಗೆ ಸೇರಿದ ಬೈಕ್ ಶೋ ರೂಂನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳು ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಶನಿವಾರ ಯುಗಾದಿ‌ ಪಾಡ್ಯ ಇರುವುದರಿಂದ‌ ಸಾಕಷ್ಟು ಜನ ಹೊಸ ಬೈಕ್ ಬುಕ್ ಮಾಡಿದ್ದರು. ಪಾಡ್ಯ ದಿನದಂದು ಹಲವು ಬೈಕ್ ರಿಲೀಸ್ ಆಗಬೇಕಿತ್ತು. ಪಾಡ್ಯದ‌ ಮುನ್ನಾ ದಿನವೇ ಅಂದರೆ ಶುಕ್ರವಾರವೇ ಈ ದುರ್ಘಟನೆ ನಡೆದಿದ್ದು, ಬೈಕ್ ಬುಕ್ ಮಾಡಿರುವ ಜನರಿಗೆ ಭಾರೀ ನಿರಾಸೆ ಮೂಡಿಸಿದೆ.

ಮತ್ತೊಂದೆಡೆ ತಮ್ಮ‌ ಕನಸಿನ ಬೈಕ್ ಖರೀದಿಸಿ ಸರ್ವಿಸ್ ಗೆ ಬಿಟ್ಟಿದ್ದ ಬೈಕ್ ಗಳು ಸಹ ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರೀ ಪ್ರಮಾಣದ ನಷ್ಟವನ್ನು ತಪ್ಪಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!