Home Blog Page 3244

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿಯಾದ ವಿನಯ ಕುಲಕರ್ಣಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ವಿನಯ ಕುಲಕರ್ಣಿ ಯಾವುದೇ ತಪ್ಪು ಮಾಡಿಲ್ಲ, ಶೀಘ್ರವೇ ಅವರು ಕಾನೂನಿನ ಹೋರಾಟದಲ್ಲಿ ಜಯ ಗಳಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಶನಿವಾರ ಹಿಂಡಲಗಾ ಕಾರಾಗೃಹದಿಂದ ಜಾಮೀನಿನ ಮೇಲೆ ಹೊರಬಂದ ವಿನಯ ಕುಲಕರ್ಣಿ, ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಏನೇನು ಮಾತನಾಡಿದ್ದಾರೆ ಎಂದು ಹಳೆಯ ಕಡತ ತೆಗೆದು ನೋಡಿದರೆ ವಿನಯ ಕುಲಕರ್ಣಿ ಅವರ ಬಂಧನದ ಹಿಂದಿನ ಕಾರಣ ಸ್ಪಷ್ಟವಾಗಿ ತಿಳಿಯುತ್ತದೆ.

ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜೈಲಿನೊಳಗೆ ಮತ್ತು ಹೊರಗೆ ಅನುಭವಿಸಿದ ನೋವನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ಅದನ್ನೆಲ್ಲ ನಾನು ಬಹಿರಂಗವಾಗಿ ಹೇಳಲು ಹೋಗಲ್ಲ. ಅದು ಸದ್ಯಕ್ಕೆ ಅವರಲ್ಲೇ ಇರಲಿ.

ಮುಂದಿನ ದಿನಗಳಲ್ಲಿ ಅವರು ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಲಿದ್ದಾರೆ. ಪಕ್ಷ ಅವರ ಜೊತೆಯಲ್ಲಿ ನಿಲ್ಲಲಿದೆ ಎಂದು ಹೇಳಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹುಚ್ಚ ಎಂದು ಟೀಕಿಸಿದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಸುದ್ದಿಯಲ್ಲಿರಬೇಕೆಂಬ ಆಸೆಯಿಂದ ಆ ಹುಚ್ಚ ಮಾತನಾಡಿದ್ದಾನೆ. ಕೊರೊನಾ ಸಂದರ್ಭದಲ್ಲಿ ಜನ ಸಂಕಷ್ಟ ಅನುಭವಿಸಿದ್ದಾರೆ. ಬೆಲೆ ಏರಿಕೆಯಾಗಿದೆ, ನಿರುದ್ಯೋಗ ಹೆಚ್ಚಾಗಿದೆ. ಅದನ್ನೆಲ್ಲ ಮರೆ ಮಾಚಿ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.

ತಜ್ಞರ ಸಲಹೆ ಪಡೆದು 1-8 ತರಗತಿ ಆರಂಭಕ್ಕೆ ಚಿಂತನೆ: ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

1-8ನೇ ತರಗತಿ ಆರಂಭಿಸುವ ಬಗ್ಗೆಯೂ ತಜ್ಞರ ಸಲಹೆ ಕೇಳಿದ್ದೇವೆ. ಅವರ ಸಲಹೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

9-12ನೇ ತರಗತಿ ಶಾಲಾ- ಕಾಲೇಜು ಆರಂಭ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕಾಲೇಜಿಗೆ ಭೇಟಿ ನೀಡಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.

ವೇಳೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಸಿಎಂ ಆಫ್ ಲೈನ್ ಕ್ಲಾಸ್ ಬೇಕಾ ಅಥವಾ ಆನ್ ಲೈನ್ ಕ್ಲಾಸ್ ಉತ್ತಮವೇ ಎಂದು ಪ್ರಶ್ನಿಸಿದರು. ಆಫ್ ಲೈನ್ ಕ್ಲಾಸ್ ಬೇಕೆಂದಿರುವ ವಿದ್ಯಾರ್ಥಿಗಳು ಭೌತಿಕ ತರಗತಿಗಳು ಆರಂಭವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನಿಂದ ಶಾಲಾ-ಕಾಲೇಜುಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಕೋವಿಡ್ ಕಡಿಮೆಯಾದರೆ ಗಡಿ ಜಿಲ್ಲೆಗಳಲಲ್ಲೂ ಶಾಲೆ ಆರಂಭಿಸಲಾಗುವುದು. ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ದೇವರ ದರ್ಶನಕ್ಕೆ ಹೋಗಿದ್ದ ಗದಗನ ಮೂವರು ನೀರುಪಾಲು

ವಿಜಯಸಾಕ್ಷಿ ಸುದ್ದಿ, ಗದಗ

ದೇವರ ದರ್ಶನಕ್ಕೆಂದು ಹೋಗಿದ್ದ ಒಂದೇ ಕುಟುಂಬದ ಮೂವರು ಮಲಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಸಂಭವಿಸಿದೆ.

ವಿಶ್ವನಾಥ್ ಮಾವಿನಮರದ (40), ಅತ್ತಿಗೆ(ಸಹೋದರನ ಪತ್ನಿ) ಶ್ರೀದೇವಿ ಮಾವಿನಮರದ (32) ಹಾಗೂ ಶ್ರೀದೇವಿ ಮಗಳು ನಂದಿನಿ ಮಾವಿನಮರದ (12) ಮೃತ ದುರ್ದೈವಿಗಳು.

ಮೂಲತಃ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾದ ಮೃತರು ಸದ್ಯ ಗದಗ‌ ನಗರದ ಹಾಲಕೇರಿ ಮಠದ ಬಳಿ ವಾಸವಾಗಿದ್ದರು ಎನ್ನಲಾಗಿದೆ.

ರವಿವಾರ ಬೆಳಿಗ್ಗೆ 8 ಜನರು ಕುಟುಂಬ ಸಮೇತ ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದು ಬಳಿಕ ಸಮೀಪದ ಶಿವಯೋಗಮಂದಿರಕ್ಕೆ ತೆರಳಿದ್ದರು.

ಉಪಾಹಾರ ಸೇವಿಸಲು ಶಿವಯೋಗಮಂದಿರ ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದಾಗ ನಂದಿನಿ ಮಾವಿನಮರದ ಕೈ ತೊಳೆಯಲು ನದಿಯತ್ತ ಹೋಗಿದ್ದು, ಈ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಇದನ್ನು ಕಂಡ ತಂದೆ ವಿಶ್ವನಾಥ್, ದೊಡ್ಡಮ್ಮ ಶ್ರೀದೇವಿ ಸಹಾಯಕ್ಕೆ ಧಾವಿಸಿ ನದಿಗೆ ಹಾರಿದ್ದು, ಈಜು ಬಾರದೇ ಮೂವರೂ ನೀರುಪಾಲಾಗಿದ್ದಾರೆ.

ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿ ಶ್ರೀದೇವಿ ಮಾವಿನಮರದ ಹಾಗೂ ವಿಶ್ವನಾಥ ಮಾವಿನಮರದ ಅವರ ಮೃತದೇಹ ಹೊರಕ್ಕೆ ತೆಗೆದಿದ್ದು, ಬಾಲಕಿ ನಂದಿನಿ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ನುರಿತ ಈಜುಗಾರರ ಜೊತೆಗೆ ಅಗ್ನಿಶಾಮಕದಳದ ಸಿಬ್ಬಂದಿ ನಂದಿನಿ ಮೃತದೇಹ ಪತ್ತೆಗೆ ಶೋಧಕಾರ್ಯ ಮುಂದುವರೆಸಿದ್ದಾರೆ.

ಏ.14 ಕ್ಕೆ ಕೆಜಿಎಫ್-2 ರಿಲೀಜ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡಿಗರು ಅತ್ಯಂತ ಕಾತುರದಿಂದ ಕಾಯುತ್ತಿದ್ದ ಕೆಜಿಎಫ್-2 ಸಿನಿಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ.

ಈ ಕುರಿತು ಹೊಸ ಪೋಸ್ಟರ್ ಅಭಿಮಾನಿಗಳ ಜೊತೆ ಟ್ವಿಟರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್
ಮಾಹಿತಿ ಹಂಚಿಕೊಂಡಿದ್ದು,

2022ರ ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.

ಇಷ್ಟೊತ್ತಿಗಾಗಲೇ ಕೆಜಿಎಫ್-2 ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುತ್ತಲೇ ಇತ್ತು. ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದರು. ಕೊನೆಗೂ ಸಿನಿಪ್ರಿಯರ ಬಹುದಿನದ ಕಾತರಕ್ಕೆ ತೆರೆ ಬಿದ್ದಿದೆ.

ಗುಂಡು ಹಾರಿಸಿದರೂ ಗಣೇಶೋತ್ಸವ ಅದ್ದೂರಿ ಆಚರಣೆ ಮಾಡಿಯೇ ಮಾಡ್ತೀವಿ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಗಣೇಶೋತ್ಸವ ಅದ್ದೂರಿಯಾಗಿ ಆಚರಿಸುತ್ತೇವೆ. ಬಾಳ ಅಂದ್ರ ನನಗೆ ಗುಂಡು ಹಾಕಬಹುದು, ನಾ ಸತ್ತರೂ ಹೆಸರು ತಗೊಂಡ ಸಾಯಬೇಕು, ತೊಂದರೆ ಮಾಡಬ್ಯಾಡ್ರಿ ಅಂತ ಸಿಎಂಗೂ ಹೇಳಿದ್ದೇನೆ. ಇಂತಹ ಗೊಳ್ಳ ಕಾಯಿದೆಗಳಿಗೆ ನಾವೇನು ಕೇಳಲ್ಲ‌ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಹಬ್ಬಕ್ಕೆ ರಿಸ್ಟಿಂಕ್ಷನ್ ಹಾಕಿದ್ದಾರೆ, ಜನ ಇಷ್ಟೇ ಸೇರಬೇಕು, ಗಣಪತಿ ಕೂಡಿಸುವಾಗ ಇಷ್ಟೇ ಜನ ಇರಬೇಕು ಮುಂತಾದ ರೂಲ್ಸ್ ಮಾಡಿದ್ದಾರೆ. ಇದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳಲ್ಲ. ಎಸ್ ಪಿ ಹಾಗೂ ಡಿಸಿ ಬರೀ ಹಿಂದೂ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವೇನು ಕೇಳಲ್ಲ ಎಂದು ಹೇಳಿದರು.

ಗಣೆಶೋತ್ಸವಕ್ಕೆ 50 ಕಂಡಿಷನ್ ಹಾಕಿದ್ದಾರೆ. ಹತ್ತತ್ತು ಸಾವಿರ ಜನರನ್ನ ಸೇರಿಸಿ ಸಭೆ ಮಾಡುತ್ತಿದ್ದೀರಾ, ಗಣಪತಿ ಬಂದಾಗ ಮಾತ್ರ ಕೊರೊನಾ ನೆನಪಾಗತ್ತಾ. ಈ ಕುರಿತು ಸಿಎಂ ಅವರೊಂದಿಗೆ ಮಾತನಾಡಿರುವೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾರೂ ಅಂಜಬೇಡಿ ಎಂದು ಅಭಯ ನೀಡಿದರು.

ಈಗ ಪ್ರತಿದಿನ ಜಿಲ್ಲೆಯಲ್ಲಿ ಒಂದೇ ಪಾಸಿಟಿವ್ ಬರುತ್ತಿದೆ. ಆದರೂ ವೀಕೆಂಡ್ ಕರ್ಪೂ ಹಾಕಿದ್ದಾರೆ. ಕೊರೊನಾ ಏನು ಶನಿವಾರ, ರವಿವಾರ ಅಷ್ಟೇ ಬರುತ್ತಾ ಎಂದು ಪ್ರಶ್ನಿಸಿದ ಅವರು, ಎಕ್ಸಪರ್ಟ್ ಗಳು ಯಾವ ಆಧರಾದ ಮೇಲೆ ಮಾಹಿತಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ, ನಮ್ಮ ಜನ ಮಾಸ್ಕ್ ಹಾಕೊಳ್ಳದೇ ಓಡಾಡುತ್ತಾರೆ. ಏನೂ ಆಗ್ತಿಲ್ಲ ಎಂದರು.

ನಮ್ಮ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು, ವೈದ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲೇ ವಿಜಯಪುರ ನಗರ ವ್ಯಾಕ್ಸಿನೇಷನ್‌ ನಲ್ಲಿ ನಂಬರ್ ಒನ್ ಇದೆ, ಮೂರನೇ ಅಲೆಯ ಪರಿಣಾಮ ಜಿಲ್ಲೆಯ ಮೇಲೆ ಬೀರಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಾಟಕ ವಿಮರ್ಶೆ… ಧನದಾಹಿಯನ್ನ ದಾರಿಗೆ ತರುವ ದೇವತೆ

0

ಹೆಂಡತಿನ ಕೇಳಿ ಮದುವೆಯಾಗು ಎಂಬ ಫ್ಯಾಮಿಲಿ ಡ್ರಾಮಾ

ಸೀಟಿಗೆ ನಂಬರ್, ಸೀನ್‌ಗಳಿಗೆ ಟೆಕ್ನಿಕಲ್ ಟಚ್

-ಬಸವರಾಜ ಕರುಗಲ್.


ಕೊಪ್ಪಳದಲ್ಲಿ ನಾಟಕಗಳ ಕಲರವ ಹೊಸತೇನಲ್ಲ. ಆಗಾಗ ಕಂಪನಿ ನಾಟಕಗಳು ಬಿಡಾರ ಹೂಡುತ್ತಾ ಬಂದಿವೆ. ಈಗ ಬಂದಿರೊ ಕೆಬಿಆರ್ ನಾಟಕ ಕಂಪನಿ ಕೊಪ್ಪಳದ ಮಟ್ಟಿಗೆ ಹೊಸ ಪ್ರಯೋಗ ಮಾಡುತ್ತಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಇದುವರೆಗೂ ಕಂಪನಿಯಲ್ಲಿ ಆಸನಗಳಿಗೆ ನಂಬರ್ ವ್ಯವಸ್ಥೆ ಇರಲಿಲ್ಲ. ಈ ಕಂಪನಿ ಸೀಟುಗಳಿಗೆ ನಂಬರ್ ನೀಡಿರುವುದರಿಂದ, ಅಂತರ ಕಾಪಾಡಿರುವುದರಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಹಿಳಾ ಪ್ರೇಕ್ಷಕರಿಗೆ ಸಂತಸದ ಸಂಗತಿ. ಜೊತೆಗೆ ನಾಟಕದ ದೃಶ್ಯಗಳಲ್ಲಿ ಹೈಟೆಕ್ ಸ್ಪರ್ಶ ನೀಡಿದ್ದು ಎಲ್ಲ ವರ್ಗದವರಿಗೂ ಮುದ ನೀಡುತ್ತದೆ. ಪಾತ್ರಧಾರಿಗಳಿಗೆಲ್ಲ ಕಾಲರ್ ಮೈಕ್ ನೀಡಿದ್ದು ಹೊಸ ಅಲೆಯ ನಾಟಕಗಳ ಜೊತೆಗಿನ ಕಂಪನಿ ನಾಟಕಗಳ ಸ್ಪರ್ಧೆ‌ ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಕಂಡಿದೆ.

over to review…

“ನಿಮಗೆ ಸಂಪತ್ತು ಮುಖ್ಯ, ನನಗೆ ಸಂಬಂಧ ಮುಖ್ಯ” ಎನ್ನುವ ಕ್ಲೈಮ್ಯಾಕ್ಸ್ ಸೀನ್‌ನ ಡೈಲಾಗ್ ಇಡೀ ನಾಟಕ್ ತಿರುಳನ್ನು ಒತ್ತಿ ಹೇಳುತ್ತದೆ. ನಾಟಕದ ಟೈಟಲ್ “ಹೆಂಡತಿನ‌ ಕೇಳಿ ಮದುವೆಯಾಗು”- ಹೆಸರನ್ನು ಕೇಳಿದಾಕ್ಷಣ ಇದೊಂದು ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಅನಿಸುತ್ತದೆ. ಆದರೆ ಈ ನಾಟಕದಲ್ಲಿ ಕಾಮಿಡಿಯ ಜೊತೆಗೆ ಕೌಟುಂಬಿಕ ಸಂಗತಿಗಳಿಗೆ ಹೆಚ್ಚಿನ ಆದ್ಯತೆ.

3 ಗಂಟೆ 15 ನಿಮಿಷಗಳ ಇಡೀ ನಾಟಕದಲ್ಲಿ ಸುಮಾರು 16 ದೃಶ್ಯಗಳಿವೆ. ಕನಸಿನ ಮೂಲಕ ಆರಂಭಗೊಳ್ಳುವ ಮೊದಲ ದೃಶ್ಯವೇ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಜೊತೆಗೆ ಹೊಸ ಅನುಭವ ನೀಡುತ್ತದೆ.

ದುನಿಯಾದಲ್ಲಿ ದುಡ್ಡೇ ಮುಖ್ಯ ಎನ್ನುವ ಹೀರೋ ಕಮ್ ವಿಲನ್ ಅಮೃತ್ ಪರಿವರ್ತನೆಗೊಳ್ಳುವ ಚಿಂದೋಡಿ ವಿಜಯ್ ಅವರ ಕಥೆಗೆ ಪೂರಕವಾಗಿ ಶಿವಶಂಕರ್ ಬ್ಯಾಳಿ ಸಂಭಾಷಣೆ ಜೋಡಿಸಿದ್ದಾರೆ.‌ ವರದಕ್ಷಿಣೆ ಹೆಚ್ಚು ಸಿಗುವ ಹುಡುಗಿಯನ್ನೇ ಮದುವೆ ಆಗಬೇಕೆನ್ನುವ ಹಂಬಲದ ಯುವಕನಿಗೆ ಲಕ್ಷಾಧಿಪತಿಯ ಮಗಳು ಐಸಿರಿ ಜೊತೆಗೆ ಮದುವೆಯಾಗುತ್ತೆ. ಎಲ್ಲವೂ ಸರಿ ಇರುವಾಗ ಕೋಟ್ಯಧೀಶ್ವರಿ ಯುವತಿಗೆ ವರ ಬೇಕೆನ್ನುವ ವಿಚಾರ ತಿಳಿದ ಧನದಾಹಿ ಯುವಕ ಹೆಂಡತಿಗೆ ವಿಚ್ಛೇಧನ ಕೊಡಲು ಸಿದ್ಧನಾಗ್ತಾನೆ. ಕೋರ್ಟ್‌ನಲ್ಲೂ ಈ ಬಗ್ಗೆ ವಿಚಾರಣೆ ನಡೆಯುತ್ತೆ. ಕೊನೆಗೆ ಅಮೃತ್-ಐಸಿರಿ ಮದುವೆಗೆ ವಿಚ್ಛೇದನ ಸಿಗುತ್ತಾ? ವಿಚ್ಛೇದನಕ್ಕೆ ಒಪ್ಪುವ ಐಸಿರಿಯ ಕರಾರುಗಳೇನು? ಎಂಬುದನ್ನು ನಾಟಕ‌ ನೋಡಿಯೇ ಅನುಭವಿಸಬೇಕು.

ಅಬ್ದುಲ್-ಸುಂದ್ರಿ-ಗಡಿಗೆಪ್ಪ ಪಾತ್ರಧಾರಿಗಳ ಕಾಮಿಡಿ ಟ್ರ್ಯಾಕ್ ಪ್ರೇಕ್ಷಕರನ್ನು ಮತ್ತೊಂದು ಮಗ್ಗುಲಿಗೆ ಒಯ್ಯುತ್ತದೆ.

ಇಂಗ್ಲಿಷ್ ಸಂಭಾಷಣೆ ಹೇಳುವಾಗ ದೃಶ್ಯವೊಂದರಲ್ಲಿ ಅವಳನ್ನು ಮುಟ್ಟಬೇಡ ಎನ್ನಲು don’t touch me ಎಂದು ನಾಯಕಿ ಹೇಳ್ತಾಳೆ. ಅದು don’t touch her ಎಂದಾಗಬೇಕಿತ್ತು. ಜೊತೆಗೆ ಕಾಮಿಡಿ ಸೀನ್‌ಗಳಲ್ಲಿ ಒಂದೆರಡು ಕಡೆ ತಂಬಿಗೆ ಜೋಕ್ಸ್ ಒಂಚೂರು ಮುಜುಗರ ಅನ್ಸುತ್ತೆ. ಆದರೆ ತೀರಾ ಅಸಹ್ಯ ಏನಿಲ್ಲ.

ಇದು ರಾದ್ಧಾಂತ ಅಲ್ಲ, ಸಿದ್ಧಾಂತ, ಗಂಡ ಅಲ್ಲ, ಮಗು ಅಂತ ಭಾವಸ್ತಿನಿ, ಸಾವಿಗೂ ಮಂತ್ರ ಇದೆ, ವಿಚ್ಛೇದನಕ್ಕಿಲ್ಲ, ಜಗತ್ತು ಜಾಗೃತವಾಗಲಿ ಅಂತಾನೇ ಈ ಜಾಹೀರಾತು ಎಂಬಂಥ ಗಟ್ಟಿ ಮಾತುಗಳು ನಾಟಕದ ತೂಕ ಹೆಚ್ಚಿಸಿವೆ. ಒಟ್ಟಾರೆ ಇಡೀ ಫ್ಯಾಮಿಲಿ ಮುಜುಗರವಿಲ್ಲದೇ ನಾಟಕವನ್ನು ಸವಿಯಬಹುದು.

ಬೈಕ್ ಗೆ ಕಾರ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಟಾಯರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಡಂಬಳ ಬಳಿ ನಡೆದಿದೆ.

ಗದಗ-ಮುಂಡರಗಿ ರಸ್ತೆಯ ಡಂಬಳ ಕ್ರಾಸ್ ನಲ್ಲಿ ಈ ದುರ್ಘಟನೆ ನಡೆದಿದೆ.

ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ
ಗಂಗಾಧರಯ್ಯ ರುದ್ರಯ್ಯ ಗದಗಿನಮಠ (30) ಮೃತಪಟ್ಟ ದುರ್ದೈವಿ.

ಮುಂಡರಗಿಯಿಂದ ಗದಗ ಕಡೆ ಹೊರಟಿದ್ದ ಬೈಕ್ ಗೆ ಗದಗನಿಂದ ಮುಂಡರಗಿ ಕಡೆ ಹೊರಟಿದ್ದ ಕಾರ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್ ಗೆ ಡಿಕ್ಕಿ ಹೊಡೆದ ಕಾರು ಎರಡು ಬಾರಿ ಪಲ್ಟಿಯಾಗಿದೆ ಎನ್ನಲಾಗಿದೆ.

ಘಟನೆಯ ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು

ವಿಜಯಸಾಕ್ಷಿ ಸುದ್ದಿ, ಮಂಗಳೂರು

ನಗರದ ಹೊರವಲಯದ ಮಾಹಾಕಾಳಿ ಪಡ್ಪು ಎಂಬಲ್ಲಿ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಮಹಿಳೆಯರಿಬ್ಬರು ಮೃತಪಟ್ಟಿದ್ದಾರೆ.

ಮೃತ ಮಹಿಳೆಯರು ಬೀಡಿ ಬ್ರಾಂಚ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಮುಂಜಾನೆ ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಾಗ
ರೈಲು ಬರುತ್ತಿರುವುದು ಗೊತ್ತಾಗದೆ ಹಳಿ ದಾಟುವಾಗ, ಏಕಾಏಕಿ ರೈಲು ಬಂದು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ನಗರಪಾಲಿಕೆ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಖತಂ ?

  • ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಸುಳಿವು ನೀಡಿದ ಶಾಸಕ ಸಾ.ರಾ. ಮಹೇಶ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್- ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಭೇಟಿ ಬಳಿಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುರಿದುದ್ದು, ಬಿಜೆಪಿಗೆ ಮೇಯರ್ ಸ್ಥಾನ ಒಲಿಯುವ ಸಾಧ್ಯತೆಗಳು ಇದೆ.

ಮೇಯರ್ ಸ್ಥಾನದ ವಿಚಾರವಾಗಿ ಕೋರ್ಟ್ ಗೆ ಹೋಗುವ ತನಕ ಮಾತ್ರ ಕಾಂಗ್ರೆಸ್ ಜೊತೆಗೆ ಮೈತ್ರಿ ಇತ್ತು. ಆನಂತರ ನಾವು ಅವರ ಜೊತೆಗಿಲ್ಲ. ಅವರೊಂದಿಗೆ ಮೈತ್ರಿ ಆಗ್ತೇವೆ ಎಂದು ಎಲ್ಲೂ ಹೇಳಿಲ್ಲ.

ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ. ಹತ್ತು ವರ್ಷ ಮೇಯರ್ ಸ್ಥಾನದಲ್ಲಿ ನಾವೇ ಇದ್ದೆವು ಎಂದು ಸಚಿವ ಸೋಮಶೇಖರ ಭೇಟಿಯ ಬಳಿಕ ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ ಹೇಳಿದ್ದಾರೆ.

ಜೆಡಿಎಸ್ ಸಹಕಾರ ಕೋರಿದ ಸಹಕಾರ ಸಚಿವ..!

ನಿನ್ನೆ ತಡರಾತ್ರಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಕಚೇರಿಗೆ ಬಿಜೆಪಿ ಸಚಿವರ ನಿಯೋಗ ಭೇಟಿ ನೀಡಿ ಮಾತುಕತೆ ನಡೆಸಿತು. ಮೇಯರ್ ಸ್ಥಾನಕ್ಕೆ ಸಹಕಾರ ನೀಡುವಂತೆ ಸಚಿವರ ನಿಯೋಗ ಮನವಿ ಮಾಡಿತು.

ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ನಗರಾಧ್ಯಕ್ಷ ಶ್ರೀವತ್ಸ ಸಾಥ್ ನೀಡಿದರು.

ಸಾ.ರಾ. ಮಹೇಶ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಚ್.ಟಿ.ಸೋಮಶೇಖರ, ಸದ್ಯ ಸೌಹಾರ್ದಯುತವಾಗಿ ಶಾಸಕ ಸಾ.ರಾ ಮಹೇಶ್ ಅವರನ್ನ ಭೇಟಿ ಮಾಡಿದ್ದೇವೆ.

ಪಾಲಿಕೆಯಲ್ಲಿ ಬಿಜೆಪಿ ಬೆಂಬಲಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ. ಅವರು ಸಹ ನಮ್ಮಂತೆಯೇ ಸದಸ್ಯರ ಅಭಿಪ್ರಾಯ ಸಂಗ್ರಹಿಸಬೇಕು. ಬಳಿಕ ಅವರ ಪಕ್ಷದ ಹೈಕಮಾಂಡ್ ಬಳಿ ಚರ್ಚಿಸಬೇಕು.

ಅವರೊಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲ ಪ್ರಕ್ರಿಯೆಗಳು ನಡೆಯಬೇಕು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು-ಜೆಡಿಎಸ್ ರಾಜ್ಯಾಧ್ಯಕ್ಷರು ಮಾತುಕತೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಪೊಲೀಸ್ ಫಲಕವಿದ್ದ ವಾಹನ ಓಡಾಟ; ಸಾರ್ವಜನಿಕರಲ್ಲಿ ಗೊಂದಲ

ಸಿನೆಮಾ ಶೂಟಿಂಗ್‌ಗೆ ಬಳಸುತ್ತಿದ್ದ ವಾಹನದ ಚಾಲಕನಿಗೆ ಪೊಲೀಸರ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ನಗರದಲ್ಲಿ ನಕಲಿ ಪೊಲೀಸ್ ವಾಹನ ಓಡಾಟದಿಂದ ನಗರದ ಜನರು ಗೊಂದಲಕ್ಕೀಡಾಗಿದ ಘಟನೆ ನಡೆಯಿತು.

ಕಾಂಗ್ರೆಸ್ ಪಕ್ಷದ ಯುವ ಮುಖಂಡ ಯೂಸುಫ್ ಡಂಬಳ, ಪೊಲೀಸ್ ನಾಮಫಲಕ, ಎರಡೆರಡು ನಂಬರ್ ಇರುವುದನ್ನು ಗಮನಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಇವರಿಗೆ ಕ್ರಾಂತಿ ಸೇನಾ ಸಂಘಟನೆಯ ಸದಸ್ಯರು ಸಾಥ್‌ ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು.

ಬಳಿಕ ಸಿನಿಮಾ ಶೂಟಿಂಗ್‌ಗೆ ಬಳಸುತ್ತಿದ್ದ ವಾಹನ ಎಂದು ತಿಳಿದುಬಂದ ಕಾರಣ ಚಾಲಕನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ `ಕ್ಷೇತ್ರಪತಿ’ ಸಿನಿಮಾ ಶೂಟಿಂಗ್ ನಡೆದಿದ್ದು, ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬೊಲೆರೋ ವಾಹನ ಬಳಸಲಾಗಿತ್ತು. ವಾಹನದ ಹಿಂದೆ ಅಸಲಿ ನಂಬರ್ ಪ್ಲೇಟ್, ಮುಂಭಾಗ ನಕಲಿ ನಂಬರ್ ಪ್ಲೇಟ್ ಬಳಸಿ ಪೊಲೀಸ್ ಎಂದು ಬರೆದಿದ್ದು ಕಂಡು ಕೆಲಕಾಲ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದರು.

error: Content is protected !!