Home Blog Page 3250

ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿ ತಾನೇ ನೀರುಪಾಲಾದ ಯುವಕ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿದ ಮೀನುಗಾರ ತಾನೇ ನೀರು ಪಾಲಾದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಇಂದು ನಡೆದಿದೆ. ನೀರು ಪಾಲಾದ ಯುವಕನನ್ನು ಹುಕ್ಕೇರಿ ಪಟ್ಟಣದ ಶರೀಫ್ ಖಂದಾಜೆ (30) ಎಂದು ಗುರುತಿಸಲಾಗಿದೆ.

ಮಾಂಜರಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಓಂಕಾರ್ (12) ಮಾಯನ್ನವರ ಎಂಬ ಬಾಲಕ ಈಜಲೆಂದು ನದಿಗೆ ಇಳಿದಿದ್ದು, ಈಜು ಬಾರದೆ ಮುಳುಗಲಾರಂಭಿಸಿದ್ದಾನೆ. ಇದನ್ನು ಗಮನಿಸಿದ ಮೀನು ಹಿಡಿಯುತ್ತಿದ್ದ ಯುವಕ ಶರೀಫ್ ನದಿಗೆ ಹಾರಿ ಬಾಲಕನನ್ನು ರಕ್ಷಿಸಿದ್ದಾನೆ. ಆದರೆ ದಡ ಮುಟ್ಟಲು ಸಾಧ್ಯವಾಗದೇ ತಾನೇ ನೀರು ಪಾಲಾಗಿದ್ದಾನೆ.

ಮೃತ ಯುವಕನ ಶವ ಪತ್ತೆಗಾಗಿ ಎನ್ ಡಿ ಆರ್ ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸಿದೆ. ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗೋಕಾಕ ಸಾಹುಕಾರನಿಗೆ ಎದುರಾಯ್ತು ಮತ್ತೊಂದು ಸಂಕಷ್ಟ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಆದಷ್ಟು ಬೇಗ ಸಚಿವರಾಗುವ ಕನಸು ಕಾಣುತ್ತಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಮತ್ತೊಂದು ಸಂಕಟ ಎದುರಾಗಿದೆ.
ಸಹಕಾರಿ ಕ್ರೆಡಿಕ್ ಬ್ಯಾಂಕ್ ಹೂಡಿದ್ದ ಚೆಕ್ ಬೌನ್ಸ್ ಪ್ರಕರಣವನ್ನು ಮರು ವಿಚಾರಣೆಗೆ ಅಂಗೀಕರಿಸುವಂತೆ ಧಾರವಾಡದ ಹೈಕೋರ್ಟ್ ಪೀಠ ಚಿಕ್ಕೋಡಿ ನ್ಯಾಯಾಲಯಕ್ಕೆ ಮಂಗಳವಾರ ಸೂಚನೆ ನೀಡಿದೆ.

ಕೋ ಆಪ್‍ರೇಟಿವ್ ಕ್ರೆಡಿಟ್ ಬ್ಯಾಂಕ್‍ಗೆ ಶಾಸಕ ರಮೇಶ ಜಾರಕಿಹೊಳಿ ನೀಡಿದ್ದ 5.2 ಕೋಟಿ ರೂ.ಚೆಕ್ ಬೌನ್ಸ್ ಆಗಿದ್ದ ಕುರಿತು ಚಿಕ್ಕೋಡಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಆದರೆ ಸಂಬಂಧಿಸಿದ ಸಹಕಾರಿ ಕ್ರೆಡಿಟ್ ಬ್ಯಾಂಕಿನ ಪರ ವಕೀಲರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಚಿಕ್ಕೋಡಿ ನ್ಯಾಯಾಲಯ ಪ್ರಕರಣ ವಜಾಗೊಳಿಸಿತ್ತು. ಆದರೆ ಹೈಕೋರ್ಟ್ ಸಂಚಾರಿ ಪೀಠ, ಚಿಕ್ಕೋಡಿ ನ್ಯಾಯಾಲಯದ ಆದೇಶ ಕಾನೂನು ಚೌಕಟ್ಟಿನಲ್ಲಿ ಇಲ್ಲ ಎಂದು ವಜಾ ಆದೇಶವನ್ನು ಅನೂರ್ಜಿತಗೊಳಿಸಿ ಪ್ರಕರಣದ ಮರು ವಿಚಾರಣೆಗೆ ಮಾಡಿ ಸೂಕ್ತ ನ್ಯಾಯ ನಿರ್ಣಯ ನೀಡಬೇಕು ಎಂದು ನಿರ್ದೇಶನ ನೀಡಿದೆ.

ರಕ್ತದಾನ ಮಾಡಿ ಜೀವ ಉಳಿಸಿ; ಮುತ್ತು ರಾಯರಡ್ಡಿ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಕ್ತನಿಧಿ ಕೇಂದ್ರಗಳು ಬಂದ್ ಆಗಿ ರಕ್ತದ ಅಭಾವ ಸೃಷ್ಟಿಯಾಗಿದೆ. ರಕ್ತದಾನ ಮಾಡಿ ಆಪತ್ತಿನಲ್ಲಿರುವ ವ್ಯಕ್ತಿಯ ಜೀವ ಉಳಿಸಬಹುದು ಎಂದು ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯತಿ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,
ಹೆಚ್ಚುತ್ತಿರುವ ಅಪಘಾತ ಹಾಗೂ ಕೊರೊನಾ ಭೀತಿಯಿಂದ ರಕ್ತದ ಕೊರತೆ ಕಾಡುತ್ತಿದೆ. ಆರೋಗ್ಯವಂತ ನಾಗರಿಕರು ರಕ್ತದಾನ ಮಾಡುವುದರಿಂದ ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದರು.

ಡಾ.ಪ್ರಶಾಂತ ಮಲ್ಲಾಪೂರ ಮಾತನಾಡಿ, ಮನುಷ್ಯ ರಕ್ತ ನೀಡಿದರೆ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಹೋಗಬೇಕು. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಿದರು.

ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ, ಸದಸ್ಯ ಲಕ್ಷ್ಮಣ ಕಂಬಳಿ, ಪಿಡಿಓ ಶೈನಾಜ್ ಮುಜಾವರ್, ಪಂಚಾಯಿತಿ ಸಿಬ್ಬಂದಿ ಕೆಂಚಪ್ಪ ಮಾದರ, ಶಿವು ಯಲಿಗಾರ ಹಾಗೂ ಗ್ರಾಮದ ಯುವಕರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಬಾಪು ಹಿರೇಗೌಡ್ರ, ಶರಣಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ: ಭಕ್ತಿ, ಡಾ: ವಿಠ್ಠಲ, ಡಾ:ಮೋನಿತ್, ಡಾ: ಕೌಶಿಕ್, ಆಪ್ತ ಸಮಾಲೋಚಕ್ ಎಸ್ ಬಿ ಪಾಟೀಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ: ಪ್ರಶಾಂತ ಮಲ್ಲಾಪೂರ, ಸಿಬ್ಬಂದಿಗಳಾದ ಶರಾವತಿ, ಭಾಗ್ಯಜೋತಿ, ರೇಷ್ಮಾ, ಬಸಮ್ಮ, ಶಿಲ್ಪಾ, ರವಿ, ಸಂತೋಷ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಈರಣ್ಣ ಗಾಣಿಗೇರ ಕಾರ್ಯಕ್ರಮ ನಿರೂಪಣೆ ಮಾಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ಶೇ.99.9 ವಿದ್ಯಾರ್ಥಿಗಳು ಪಾಸ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಭೀತಿಯ ಮಧ್ಯೆಯೂ ಜುಲೈ 19 ಮತ್ತು 22ರಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು. ಶೇ.99.9ರಷ್ಟು ಫಲಿತಾಂಶ ದಾಖಲಾಗಿದೆ.

157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಫಲಿತಾಂಶ ಪ್ರಕಟಿಸಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೊರೊನಾ ಭೀತಿಯ ನಡುವೆಯೂ 8,76,581 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ.99.9ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಒಂದು ಮಗು ಮಾತ್ರ ತಾನು ಬರೆಯದೇ ಮತ್ತೊಬ್ಬರನ್ನು ಕಳಿಸಿದ್ದರಿಂದಾಗಿ ಶೇ.100ರಷ್ಟು ಫಲಿತಾಂಶ ತಪ್ಪಿದೆ ಎಂದು ತಿಳಿಸಿದರು.

ಈ ವರ್ಷ 1,28,931 ವಿದ್ಯಾರ್ಥಿಗಳು ಎ+ ಗ್ರೇಡ್, 2,50,317 ವಿದ್ಯಾರ್ಥಿಗಳು ಎ ಗ್ರೇಡ್, 2,87,684 ವಿದ್ಯಾರ್ಥಿಗಳು ಬಿ ಗ್ರೇಡ್, 1,13,610 ವಿದ್ಯಾರ್ಥಿಗಳು ಸಿ ಗ್ರೇಡ್ ಪಡೆದಿದ್ದಾರೆ.
8,76,581 ವಿದ್ಯಾರ್ಥಿಗಳಲ್ಲಿ 4,72,643 ವಿದ್ಯಾರ್ಥಿಗಳು ಹಾಗೂ 4,01,282 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ ಎಂದು ತಿಳಿಸಿದರು.

625ಕ್ಕೆ 625 ಅಂಕಗಳನ್ನು 157 ವಿದ್ಯಾರ್ಥಿಗಳು, 289 ವಿದ್ಯಾರ್ಥಿಗಳು 623, ಇಬ್ಬರು ವಿದ್ಯಾರ್ಥಿಗಳು 622 ಅಂಕ, 449 ವಿದ್ಯಾರ್ಥಿಗಳು 621 ಅಂಕ, 28 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ. ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡರೆ, ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ದ್ವಿತೀಯ ಸ್ಥಾನ, ರಾಮನಗರ ಜಿಲ್ಲೆ ತೃತೀಯ ಸ್ಥಾನ ಪಡೆದಿದೆ. ಬಳ್ಳಾರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ ಎಂದರು.

ಸಿಎಂ ಸ್ವಾಗತಕ್ಕೆ ಬಾರದ ಶಾಸಕ ರಾಮದಾಸ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಎಸ್.ಎ.ರಾಮದಾಸ್ ಸಿಎಂ ಜಿಲ್ಲೆಗೆ ಭೇಟಿ ನೀಡಿದರೂ ಭೇಟಿಯಾಗದೆ ಅಂತರ ಕಾಯ್ದುಕೊಂಡರು. ನಂತರ ನಡೆದ ಅಭಿನಂದನಾ ಸಮಾರಂಭ ಹಾಗೂ ಜಿಲ್ಲೆಯ ಕೋವಿಡ್ ನಿಯತ್ರಣ ಸಭೆಗೂ ಶಾಸಕ ರಾಮದಾಸ್ ಸುಳಿಯಲಿಲ್ಲ‌. ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮದಾಸ್ ಸಿಎಂ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಕುರಿತು‌ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ದಾಮದಾಸ್ ನನ್ನ ಹಳೆಯ ಸ್ನೇಹಿತ. ಸಚಿವ ಸ್ಥಾನ ಸಿಗದಿದಕ್ಕೆ ಅಸಮಾಧಾನವಾಗಿದೆ. ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ. ಶೀಘ್ರ ಎಲ್ಲ ಗೊಂದಲ ಬಗೆಹರಿಯಲಿದೆ ಎಂದರು.

ಮೇಕೆದಾಟು; ಶೀಘ್ರವೇ ದೆಹಲಿಗೆ ತೆರಳಿ ಮನವರಿಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ತಮಿಳುನಾಡಿನಲ್ಲಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತದೆ. ನೀರಿನ ರಾಜಕೀಯ ಮಾಡಿಯೇ ಹಲವರು ಅಧಿಕಾರಕ್ಕೆ ಬಂದಿದ್ದಾರೆ. ನದಿಯ ನೀರು ರೈತರಿಗೆ, ಜನರಿಗೆ ಅನುಕೂಲ ಆಗಬೇಕು. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕೆಲವು ಪ್ರಕ್ರಿಯೆ ಮುಗಿಯಬೇಕಿದೆ. ಡಿಪಿಆರ್ ಸಿದ್ಧಗೊಂಡಿದೆ. ಶೀಘ್ರದಲ್ಲೇ ವಕೀಲರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುತ್ತೇನೆ. ಮೇಕೆದಾಟು ಯೋಜನೆ ಜಾರಿಮಾಡುವುದು ಶತಸಿದ್ಧ ಎಂದರು.

ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫೂ ಬಗ್ಗೆ ಮಾಹಿತಿ ಪಡೆಯುತ್ತೇನೆ. ನಾನೇ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸುವೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ವಿಶೇಷ ಸಂದರ್ಭದಲ್ಲಿ ಸಂಪುಟ ರಚನೆಯಾಗಿದೆ. ಸಂಪುಟ ರಚನೆ ಆಗಿದೆ. ಈ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ರಾಮದಾಸ್ ನನ್ನ ಸ್ನೇಹಿತ ಕರೆದು ಮಾತನಾಡುತ್ತೇನೆ ಎಂದರು.

ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ ಬೊಮ್ಮಾಯಿ

  • ಮುಖ್ಯಮಂತ್ರಿಯಾದ ಬಳಿಕ ಮೈಸೂರಿಗೆ ಮೊದಲ ಭೇಟಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೆ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಮೈಸೂರಿಗೆ ಭೇಟಿ ನೀಡಿದರು. ಬೆಳಿಗ್ಗೆ ಮೈಸೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ‌ ಪಡೆದರು. ಚಾಮುಂಡಿ ಬೆಟ್ಟದಲ್ಲಿ ಸಿಎಂಗೆ ಪೂರ್ಣಕುಂಭ ಸ್ವಾಗತ ದೊರೆಯಿತು. ನಾಡದೇವತೆಗೆ ಪೂಜೆ ಸಲ್ಲಿಸಿದರು.

ಸಿಎಂಗೆ ಮೈಸೂರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಎಸ್.ಟಿ. ಸೋಮಶೇಖರ್, ಸಚಿವರಾದ ಭೈರತಿ ಬಸವರಾಜ್, ವಿ.ಸೋಮಣ್ಣ, ಮುರುಗೇಶ ನಿರಾಣಿ, ಡಾ.ಸುಧಾಕರ, ನಾರಾಯಣಗೌಡ, ಮುನಿರತ್ನ, ಗೋಪಾಲಗೌಡ ಸೇರಿ ಹಲವರು ಸಾಥ್ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಕುರಿತ ಮುಂಜಾಗ್ರತಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜೀನಾಮೆಗೆ ಮುಂದಾದ್ರಾ ಆನಂದಸಿಂಗ್ ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬೇಡಿಕೆ ಕುರಿತು ಸಿಎಂ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನನ್ನ ತೀರ್ಮಾನ ನಿಂತಿದೆ. ಆದರೆ ನಾನು ಹೆಚ್ಚು ದಿನ ಕಾಯಲ್ಲ, ಕುಟುಂಬದವರ ಜೊತೆ ಹಾಗೂ ಆಪ್ತರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಸಿಎಂ ಭೇಟಿಯ ನಂತರ
ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಯಡಿಯೂರಪ್ಪ ಸಿಎಂ ಆಗಿದ್ದರೆ ಏನೂ ಕೇಳುತ್ತಿರಲಿಲ್ಲ. ಆದರೆ ಈಗ ನಾಯಕತ್ವ ಬದಲಾಗಿದೆ. ಹಾಗಾಗಿ ನಾವೂ ಬದಲಾವಣೆ ಬಯಸುತ್ತಿದ್ದೇವೆ. ನನ್ನ ಬೇಡಿಕೆ, ಮುಂದಿನ ನಡೆಯ ಬಗ್ಗೆ ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ. ಬೇಡಿಕೆ ಏನೆಂದು ಬಹಿರಂಗ ಪಡಿಸಲಾಗದು ಎಂದು ಹೇಳಿದರು.

ಸಿಎಂ ಹುದ್ದೆ ಸುಲಭದ ಮಾತಲ್ಲ. ಮುಳ್ಳಿನ ಹಾಸಿಗೆ ಇದ್ದಂತೆ ಎಂಬುದು ನಂಗೂ ಗೊತ್ತು ಎಂದಿದ್ದಾರೆ. ಕೇಳಿದ ಖಾತೆ ನೀಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಮುಂದುವರೆಯುವುದಾಗಿ ಆನಂದ್ ಸಿಂಗ್ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ ಯಡಿಯೂರಪ್ಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ತಮಗೆ ನೀಡಿರುವ ಸಂಪುಟ ದರ್ಜೆಯ ಸ್ಥಾನಮಾನ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ನಿಕಟ ಪೂರ್ವ ಮುಖ್ಯಮಂತ್ರಿಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಮಾತ್ರ ನೀಡಬೇಕು ಹಾಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ವೈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!