Home Blog Page 3251

ಅಕ್ರಮ ಅನ್ನಭಾಗ್ಯ ಅಕ್ಕಿ ಸಂಗ್ರಹ; ಮಾಲೀಕ ತಿಮ್ಮಯ್ಯ ಕೊಂಗಾಟಿ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಸಮೀಪದ ನರಸಾಪೂರ ಕೆ.ಐ.ಡಿ.ಬಿ ಪ್ಲಾಟ್ ನ ಗುದಾಮವೊಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ ‌ಆರೋಪದಲ್ಲಿ ಬೆಟಗೇರಿಯ ತಿಮ್ಮಯ್ಯ ತಂದೆ ವೀರಣ್ಣ ಕೊಂಗಾಟಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಮನೆ ಮನೆಗೆ ತೆರಳಿ ಖರೀದಿಸಿ ಬೇರೆ ಬೇರೆ ಚೀಲಗಳಲ್ಲಿ ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಿ ಅಧಿಕ ಲಾಭ ಗಳಿಸುವ ಉದ್ದೇಶ ಆರೋಪಿ ತಿಮ್ಮಯ್ಯ ಹೊಂದಿದ್ದನು.

ಇದನ್ನೂ ಓದಿ ಪಾರ್ವತಿ ಪೆಟ್ರೋಲಿಯಂ ಮಾಲೀಕರ ಮೇಲೆ ಚೀಟಿಂಗ್ ಕೇಸ್ ; ತಪ್ಪಾಗಿ ಜಮಾ ಆದ ಹಣ ಮರಳಿಸದೇ ವಂಚನೆ ಆರೋಪ….

ಸುಮಾರು 2 ಲಕ್ಷ 64 ಸಾವಿರದ 316 ರೂಪಾಯಿಗಳ ಮೌಲ್ಯದ 77ಕ್ವಿಂಟಾಲ್ 74 ಕೆ.ಜಿ ಅಕ್ಕಿ ಜಪ್ತಿ ಮಾಡಲಾಗಿದೆ.

ಈ ಕುರಿತು ಆಹಾರ ಇಲಾಖೆಯ ಅಧಿಕಾರಿ ಸುವರ್ಣ ಮುಕ್ಕಣ್ಣ ಜಮ್ಮನಕಟ್ಟಿ ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, (ಅಗತ್ಯ ಸರಕುಗಳ ಕಾಯ್ದೆ) ESSENTIAL COMMODITIES ACT, 1955(U/s-7,3): PDS CONTROLLING ORDER , 1992 (U/s-18(2)) ಅಡಿಯಲ್ಲಿ
0049/2023ರಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾರ್ವತಿ ಪೆಟ್ರೋಲಿಯಂ ಮಾಲೀಕರ ಮೇಲೆ ಚೀಟಿಂಗ್ ಕೇಸ್ ; ತಪ್ಪಾಗಿ ಜಮಾ ಆದ ಹಣ ಮರಳಿಸದೇ ವಂಚನೆ ಆರೋಪ….

ಸಾರಿಗೆ ಸಂಸ್ಥೆಯ ಅಧಿಕಾರಿಯಿಂದ ಕೇಸ್…

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ರೋಣದ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು, ಇಂಧನ ಖರೀದಿಸಿದ ಇನ್ ವೈಸ್ ನಂ.14486 ದಿ. 02/05/2022 ಮೊತ್ತ 4.68.402.48ರೂ. ಹಾಗೂ ಇನ್ ವೈಸ್ ನಂ. 14507 ದಿ.04/05/2022 ಮೊತ್ತ 3.86.427.28ರೂ. ಗಳಿಗೆ ಸಂಬಂಧಿಸಿದಂತೆ ಬಿಲ್ ಪಾವತಿಸುವಂತೆ ದಿ.09/05/2022 ರಂದು ಗದಗ ಸಹಾಯಕ ಅಕೌಂಟೆಂಟ್ ಕಚೇರಿಗೆ ಕಳುಹಿಸಿದ್ದರು.

ಆ ಪ್ರಕಾರ ಸದರಿ ಬಿಲ್ ಗಳ ಮೊತ್ತವನ್ನು ಡಿಸ್ಕೌಂಟ್ ಮತ್ತು ಟಿ.ಡಿ.ಎಸ್ ಕಡಿತ ಮಾಡಿ ಅವುಗಳ ಒಟ್ಟು ಮೊತ್ತ 8.50.799=00 ರೂ. ಮೊತ್ತವನ್ನು ಚೆಕ್ ನಂ.[ಧನಾದೇಶ ಸಂಖ್ಯೆ] 22223 ಚೆಕ್ ಮೂಲಕ ನಜರ್ ಚೂಕಿನಿಂದ ಪಾರ್ವತಿ ಪೆಟ್ರೋಲಿಯಂ ಗದಗ ಇವರ ಖಾತೆ ಸಂಖ್ಯೆ : 30314766975 , ಐ.ಎಫ್ ಎಸ್.ಸಿ ಕೋಡ್ ; ಎಸ್.ಬಿ. ಐ.ಎನ್ 0000838ನೇದ್ದಕ್ಕೆ ಆರ್ ಟಿ ಜಿ ಎಸ್ ಮೂಲಕ ಜಮಾ ಮಾಡಲಾಗಿದೆ.

ಆದರೆ ತಪ್ಪಾಗಿ ಜಮಾ ಮಾಡಿದ ಹಣವನ್ನು ಮರು ಸಂದಾಯ ಮಾಡುವಂತೆ ಗದಗ ಪಾರ್ವತಿ ಪೆಟ್ರೋಲಿಯಂ ಮಾಲೀಕರಾದ ಈಶ್ವರಸಾ ಮೆಹರವಾಡೆ ಇವರನ್ನು ಹಲವು ಬಾರಿ ಕೇಳಿಕೊಂಡರು ಕೂಡ ಸಾರಿಗೆ ಇಲಾಖೆಗೆ ಮರು ಸಂದಾಯ ಮಾಡದೇ ವಂಚಿಸಿದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ
ಸಾರಿಗೆ ಇಲಾಖೆಯ ಅಧಿಕಾರಿ ನೂರ ಅಹ್ಮದ್ ದಾದಾಪೀರ್ ಗೋಲಾಂದಜ್ ಎಂಬುವರು ದೂರು ನೀಡಿದ್ದು, 0092/2023 ಐಪಿಸಿ 1860 (U/s-420) ಪ್ರಕರಣ ದಾಖಲಾಗಿದೆ.

ಗ್ಯಾರಂಟಿ ಯೋಜನೆಗಳು ರಾಷ್ಟ್ರದಲ್ಲೇ ಜನಮನ್ನಣೆ ಪಡೆದಿವೆ; ಸಚಿವ ಎಚ್.ಕೆ.ಪಾಟೀಲ

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು…..

ಯೋಜನೆ ಜಾರಿಯಲ್ಲಿ ವಿಳಂಬ…ಉದಾಸೀನ ತೋರಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮದ ಎಚ್ಚರಿಕೆ……

ವಿಜಯಸಾಕ್ಷಿ ಸುದ್ದಿ, ಗದಗ

ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಿಂದ ಬಡವರ ಬದುಕು ಚೇತರಿಕೆಯಾಗುತ್ತದೆ. ಇಂತಹ ಪ್ರಮುಖ ಗ್ಯಾರಂಟಿಗಳು ರಾಷ್ಟ್ರದಲ್ಲಿಯೇ ಜನಮನ್ನನೆಗೆ ಪಾತ್ರವಾಗಿವೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಡವರ ಕಲ್ಯಾಣ ಹಾಗೂ ಆರ್ಥಿಕ ಚೇತರಿಕೆಗಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಘೋಷಿಸಿದಂತೆ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳು ಕಾರ್ಯಪೃವತ್ತರಾಗುವಂತೆ ಅವರು ಹೇಳಿದರು.

ಈ ಐದು ಗ್ಯಾರಂಟಿಗಳ ಅನುಷ್ಠಾನದಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಸರಾಸರಿ ನಾಲ್ಕರಿಂದ ಐದು ಸಾವಿರ ಧನ ಸಹಾಯ ದೊರೆತಂತಾಗುತ್ತದೆ. ಈ ಯೋಜನೆಗಳು ಉಚಿತ ಯೋಜನೆಗಳೆಲ್ಲಾ ಬಡವರ ಕಲ್ಯಾಣ ಕಾರ್ಯಕ್ಕೆ ಅವಶ್ಯಕವಾದ ಯೋಜನೆಗಳಾಗಿವೆ. ಇವುಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಗದಗ ಜಿಲ್ಲೆ ಐದು ಗ್ಯಾರಂಟಿಗಳ ಅನುಷ್ಠಾನದ ಪ್ರಗತಿಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸಚಿವ ಎಚ್. ಕೆ. ಪಾಟೀಲ ಸೂಚಿಸಿದರು.

ಶಕ್ತಿ ಯೋಜನೆಯಡಿ ಜೂನ 11 ರಿಂದ 30ರ ವರೆಗೆ ಶೇ. 56 ರಷ್ಟು ಹಾಗೂ ಜುಲೈ 1ರಿಂದ 8 ರ ವರೆಗೆ ಮಹಿಳೆಯರು ಶೇ.೬೦ ರಷ್ಟು ಪುರುಷರು ಶೇ.40 ರಷ್ಟು ಪ್ರಯಾಣಿಸಿದ್ದಾರೆ. ಜೂನ್. 11 ರಿಂದ 30 ರ ವರೆಗೆ 8.10 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದರೇ, ಜುಲೈ 1 ರಿಂದ 8 ರ ವರೆಗೆ 3.64 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ ಎ.ಎ.ವಾಯ್ ಹಾಗೂ ಬಿ.ಪಿ.ಎಲ್. ಹೊಂದಿರುವ 2,56,500 ಕಾರ್ಡದಾರರಿದ್ದು ಇದರಲ್ಲಿ ಮಹಿಳೆ ಯಜಮಾನಿಯಾಗಿರುವ 2,35,633 ಕಾರ್ಡುಗಳು ಹಾಗೂ ಪುರುಷರು ಯಜಮಾನರಾಗಿರುವ 19,611 ಕಾರ್ಡುಗಳಿವೆ. ಮಹಿಳೆ ಹಾಗೂ ಪುರುಷರು ಇವರ್ಯಾರು ಯಜಮಾನನಲ್ಲದ 1,256 ಕಾರ್ಡುಗಳು ಇವೆ ಎಂದು ಗುರುತಿಸಲಾಗಿದೆ.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 2,89,207 ಸಂಪರ್ಕಗಳಿದ್ದು ಈ ಪೈಕಿ 1,80,954 ಸಂಪರ್ಕಗಳ ನೋಂದಣಿಯಾಗಿದೆ. ಶೀಘ್ರವೇ ಉಳಿದ ಸಂಪರ್ಕಗಳನ್ನು ನೋಂದಣಿ ಮಾಡಿಸಲಾಗುವದು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಫಲಾನುಭವಿಗಳನ್ನು ಗುರುತಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ನೋಂದಣಿ ಕಾರ್ಯ ಮಾಡಲಾಗುವುದು.

ಗೃಹಲಕ್ಷ್ಮೀ ಯೋಜನೆಯನ್ನು ಸಹ ಸರ್ಕಾರದ ಮಾರ್ಗಸೂಚಿಯಂತೆ ಶೀಘ್ರವಾಗಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸರ್ಕಾರದ ಈ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಅಧಿಕಾರಿಗಳಿಂದ ವಿಳಂಬ ನೀತಿ ಹಾಗೂ ಉದಾಸಿನತೆ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಗಂಭೀರವಾದ ಕ್ರಮಗಳನ್ನು ಜರುಗಿಸಲಾಗುವದು. ಗ್ಯಾರಂಟಿ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿರಬೇಕು. ಯಾವುದೇ ತರಹದ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕರಿಗೆ ಸರ್ಕಾರದ ಗ್ಯಾರಂಟಿಗಳ ಸೌಲಭ್ಯ ನಿಗದಿತ ಅವಧಿಯೊಳಗೆ ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗದಗ-ಬೆಟಗೇರಿ ನಗರಸಭೆಯಲ್ಲಿ ಫಾರಂ.ನಂ.3 ವಿರಣೆಯಲ್ಲಿ ವಿಳಂಭವಾಗುತ್ತಿರುವ ಕುರಿತು ಮಾಹಿತಿ ಪಡೆದು ಮಾತನಾಡಿ, ಒಂದು ವಾರದೊಳಗಾಗಿ ಬಾಕಿ ಇರುವ ಫಾರಂ. ನಂ. 3 ಅರ್ಜಿಗಳು ಇತ್ಯರ್ಥವಾಗಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವಾಯ್.ಶೆಟ್ಟಪ್ಪನವರ, ವಾ.ಕ.ರಾ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಕ ಶೀನಪ್ಪ, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಬಸವರಾಜ ಮಲ್ಲೂರ, ರವಿ ಗುಂಜಿಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಜು.12ರಂದು ಮಾರನಬಸರಿಯಲ್ಲಿ ಅಯ್ಯಾಚಾರ, ಸಿದ್ಧ ಶ್ರೀ ಆಲ್ಬಂ ಸಾಂಗ್ ಚಿತ್ರಿಕರಣ; ಸಿದ್ಧನಕೊಳ್ಳದ ಡಾ.ಶಿವಕುಮಾರ್ ಸ್ವಾಮೀಜಿ

ಮೂರು ದಿನಗಳ ಕಾಲ ಖ್ಯಾತ ಕಲಾವಿದರಿಂದ ನೃತ್ಯ, ರಸಮಂಜರಿ ಹಾಗೂ ಭರತನಾಟ್ಯ ನಡೆಯಲಿದೆ……

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಸಿದ್ಧನಕೊಳ್ಳದ ಸಿದ್ದಪ್ಪಜ್ಜನ ಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ್ ಮಹಾಸ್ವಾಮಿಗಳವರ ಸುಪುತ್ರರಾದ ರಾಜಶೇಖರಯ್ಯ ಮತ್ತು ಹರ್ಷ ಇವರ ಅಯ್ಯಾಚಾರ ಕಾರ್ಯಕ್ರಮ ಹಾಗೂ ಭಕ್ತಿಗೀತೆಯ ಆಲ್ಬಂ ಸಾಂಗ್ ಚಿತ್ರಿಕರಣ ಜು.12 ರಂದು ನೆರವೇರಲಿದೆ ಎಂದು ಡಾ.ಶಿವಕುಮಾರಸ್ವಾಮಿಗಳು ತಿಳಿಸಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಜಾತ್ರಾಮಹೋತ್ಸವದ ವಿಡಿಯೋ ಆಲ್ಬಂಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ದನಕೊಳ್ಳಮಠದ ಶ್ರೀಗಳ ಜನ್ಮಸ್ಥಳವಾದ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮವು ಸಿದ್ದಪ್ಪಜ್ಜ ಶ್ರೀಗಳು ನಡೆದಾಡಿದ ಪುಣ್ಯ ಸ್ಥಳವಾಗಿದೆ.

ಜು.12ರಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ನಿಡಗುಂದಿಕೊಪ್ಪದ ಪ.ಪೂ. ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ವಹಿಸುವುರು. ನೇತೃತ್ವವನ್ನು ಗುಳೆದಗುಡ್ಡದ ಮುರುಡಿಮಠದ ಪೂಜ್ಯಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿ.ಎಸ್.ಅರಳಲಿಮಠ ತಳಕಲ್ ಧಾರವಾಡ, ಉದ್ಘಾಟನೆ ರೋಣ ಶಾಸಕರಾದ ಜಿ.ಎಸ್.ಪಾಟೀಲ್ ಹಾಗೂ ದಂಪತಿಗಳು ನೆರವೇರಿಸುವರು. ಹುನಗುಂದದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಿ ಎಸ್ ನಾಡಗೌಡ, ಎನ್.ಎಚ್. ಕೋನರೆಡ್ಡಿ, ಭೀಮಸೇನ್ ಚಿಮ್ಮನಕಟ್ಟಿ, ದೊಡ್ಡನಗೌಡ ಪಾಟೀಲ್ ಇವರು ಜ್ಯೋತಿ ಬೆಳಗಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕಿಸಾನ್ ಸಮಿತಿ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಾದ ಡಾ.ಆರ್ ಎಸ್ ರಾಜು, ಡಾ.ಬಾಲಕೃಷ್ಣ ರೆಡ್ಡಿ, ನರೇಂದ್ರ ರೆಡ್ಡಿ, ಸುರೇಶ್ ಹಳೆಪೇಟೆ, ಮಲ್ಲು ವಿರಾಪುರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತೆಲುಗು ಚಿತ್ರನಟ ರಾಜೇಶ್ ಕುಮಾರ್ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಪ್ರಮೋದ್ ಡ್ಯಾನ್ಸ್ ಅಕಾಡೆಮಿ ಉಗಾರ್ ಸಾಂಗ್ಲಿ ಇವರಿಂದ ನೃತ್ಯ, ಕಲಾವಿದ ಮೆಲೋಡಿಸ್ ಐಹೊಳೆ ಇವರಿಂದ ರಸಮಂಜರಿ, ಚಿತ್ರನಟಿ ಕೃತಿಕಾ ದಯಾನಂದ್ ಬೆಂಗಳೂರು ಇವರಿಂದ ಭರತನಾಟ್ಯ ಜರುಗಲಿದೆ. ದಿ.೧೨ ರಿಂದ ದಿ.೧೪ರವರೆಗೆ ಭಕ್ತಿಗೀತೆಯ ಆಲ್ಬಂಸಾಂಗ್ ಚಿತ್ರಿಕರಣ ನಡೆಯಲಿದ್ದು, ಸಕಲ ಸದ್ಭಕ್ತರು ಆಗಮಿಸಬೇಕೆಂದು ಸಿದ್ದನಕೊಳ್ಳಮಠದ ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ್ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಚಲನಚಿತ್ರ ನಟ, ಕಲಾನಿರ್ದೇಶಕ ವೀರೇಶ್ ಪುರವಂತರ, ಚಲನಚಿತ್ರ ಛಾಯಾಗ್ರಾಹಕ ಶಿವಶರಣ ಸುಗ್ನಳ್ಳಿ , ಚಲನಚಿತ್ರ ಪಿಆರ್‌ಓ ಡಾ.ಪ್ರಭು ಗಂಜಿಹಾಳ, ಕಲಾವಿದರಾದ ಸಂಗನಗೌಡ್ರ ಕುರುಡಗಿ ಮೊದಲಾದವರು ಉಪಸ್ಥಿತರಿದ್ದರು.

ಅಮರನಾಥಗೆ ತೆರಳಿದ್ದ ಯಾತ್ರಿಕರು ಸುರಕ್ಷಿತ, ಸಂಜೆ ಶ್ರೀನಗರಕ್ಕೆ ಸ್ಥಳಾಂತರ: ಸಚಿವ ಎಚ್.ಕೆ ಪಾಟೀಲ

ರಾತ್ರಿಯಿಡೀ ಚಳಿಯಲ್ಲಿ ನಡುಗಿದ ಯಾತ್ರಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ನಗರದ 23 ಜನ ಯಾತ್ರಿಕರು ಸೇರಿದಂತೆ ರಾಜ್ಯದ 300 ಜನರು ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರೂ ಸುರಕ್ಷಿತ ಸ್ಥಳದಲ್ಲಿ ಇದ್ದು, ಸಂಜೆ ಶ್ರೀ ನಗರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ಗದಗ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾತ್ರಿಯಿಡೀ ಚಳಿಯಿಂದ ಯಾತ್ರಿಕರು ನಡುಗಿದ್ದು, ಯಾವುದೇ ಆರೋಗ್ಯ ಸಮಸ್ಯೆ ಆಗಿಲ್ಲ ಎಂದರು.

ಸೇನೆ ಅಮರನಾಥ ದೇವಸ್ಥಾನ ಆಡಳಿತ ಮಂಡಳಿ ಯಾತ್ರಿಗಳ ಬಗ್ಗೆ ಕಾಳಜಿ ವಹಿಸಿದೆ. ಪಂಚರ್ತನಿಯಲ್ಲಿ ಸದ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಈಗಾಗಲೇ ವಿಶಾಲ್ ಹಾಗೂ ವಿನೋದ ಎನ್ನುವರ ಜೊತೆಗೆ ಮಾತಾಡಿದ್ದೇನೆ. ಅವರ ಸಂಬಂಧಿಕರ ಜೊತೆಗೆ ಮಾತಾಡಿದ್ದೇನೆ ಎಂದು ಸಚಿವರು ಹೇಳಿದರು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಸಿಎಂ ಜೊತೆಗೆ ಮಾತಾಡಿದ್ದೇನೆ ಎಂದರು.

ಹಿರಿಯ ಅಧಿಕಾರಿಗಳ ತಂಡ ಯಾತ್ರಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ಇವತ್ತು ಹವಾಮಾನ ಸುಧಾರಣೆ ಆದ ನಂತರ ಹೆಲಿಕಾಪ್ಟರ್ ಮೂಲಕ ಪಂಚತರ್ನಿಯಿಂದ ನೀಲಗ್ರತ್ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭಯದ ವಾತಾವರಣದಿಂದ ಯಾತ್ರಿಗಳು ಹೊರಗೆ ಬಂದಿದ್ದು, ಸಂಜೆ ಸುರಕ್ಷಿತ ಸ್ಥಳಕ್ಕೆ ಬರಲಿದ್ದಾರೆ ಎಂದ ಅವರು, ಸಂಜೆ ಹೆಲಿಕಾಪ್ಟರ್ ಮೂಲಕ ಶ್ರೀ ನಗರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಗದಗ ಜಿಲ್ಲೆಯ ಯಾತ್ರಿಗಳ ಜೊತೆಗೆ ಜಿಲ್ಲಾಡಳಿತ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಬೆಂಗಳೂರು ಮೂಲದ ರಾಜೇಂದ್ರ ಎಂಬುವರಿಗೆ ಆರೋಗ್ಯದಲ್ಲಿ ಏರುಪೇರು ಆಗಿತ್ತು, ಅವರಿಗೆ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ: ಇಬ್ಬರು ಕಳ್ಳರ ಬಂಧನ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ಬಂಧಿತರು ಲಕ್ಷ್ಮೇಶ್ವರ ನಿವಾಸಿಗಳು….

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಗೇರಿ, ಪು. ಬಡ್ನಿಯಲ್ಲಿ ಮನೆ ಕಳ್ಳತನ ಮಾಡಿದ್ದ ಹನುಮಂತ ಕುಂಚಿಕೊರವರ, ಮಂಜುನಾಥ ಬಿಸಕಲ್ಲವಡ್ಡರ ಎಂಬುವರನ್ನು ಲಕ್ಷ್ಮೇಶ್ವರದ ಇಟ್ಟಿಕೆರೆಯ ದಂಡೆಯ ಗುಡಿಸಲ ಬಳಿ ಕಾರ್ಯಚರಣೆ ನಡೆಸಿ ಕಳ್ಳರನ್ನು ಬಂಧಿಸಲಾಗಿದೆ.

ಬಂಧಿತರಿಂದ ಬಂಗಾರದ ಕಿವಿ ಓಲೆ, ಬೆಳ್ಳಿ ಪೆಂಡೆದ ಗೆಜ್ಜೆ, ಬೆಳ್ಳಿ ಬ್ರಾಸಲೆಟ್, ಎರಡು ಜೊತೆ ಬೆಳ್ಳಿ ಕಾಲು ಚೈನ್, 15 ಗ್ರಾಮ್‌ನ ಬಂಗಾರದ ಚೈನ್, 12 ಗ್ರಾಮ್ ತೂಕದ ಬಂಗಾರದ ನೆಕ್ಲೆಸ್, 20 ಗ್ರಾಮ್‌ನ ಎರಡು ಬೆಳ್ಳಿ ಕಾಲು ಚೈನ್, 1 ಬೆಳ್ಳಿ ಗುಡಗಡಗಿ, ಬೆಳ್ಳಿಯ ಚೈನ್ ಹೀಗೆ ಒಟ್ಟು 35 ಗ್ರಾಮ್ ಬಂಗಾರದ ಆಭರಣಗಳ ಅಂದಾಜು ಮೊತ್ತ 1 ಲಕ್ಷ 6500 ರೂ ಹಾಗೂ 300 ಗ್ರಾಮ್ ತೂಕದ ಬೆಳ್ಳಿ ಆಭರಣಗಳ ಅಂದಾಜು ಕಿಮ್ಮತ್ತು 32,500 ರೂ ಸೇರಿದಂತೆ ಒಟ್ಟು 1.39 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಪೊಲೀಸರು ವಸಪಡಿಸಿಕೊಂಡಿದ್ದಾರೆ.

ಗದಗ ಜಿಲ್ಲಾ ಎಸ್‌ಪಿ, ಡಿಎಸ್‌ಪಿ ಹಾಗೂ ಸಿಪಿಐ ವಿಕಾಸ ಲಮಾಣಿ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಯೂಸೆಪ್ ಜಮೂಲಾ, ಕ್ರೈಮ್ ಪಿಎಸ್‌ಐ ವಿ. ಜಿ. ಪವಾರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಎಎಸ್‌ಐಗಳಾದ ಎನ್ ಎ ಮೌಲ್ವಿ, ಟಿ ಕೆ ರಾಠೋಡ್, ವೈ ಎಸ್ ಕುಬಿಹಾಳ, ಜಿ ಎಂ ಬೂದಿಹಾಳ, ಸಿಬ್ಬಂದಿಗಳಾದ ಎಂ ಎ ಶೇಖ್, ಎಂ ಡಿ ಲಮಾಣಿ, ಎಂ ಎಸ್ ಬಳ್ಳಾರಿ, ಸಿ ಎಸ್ ಮಠಪತಿ, ಡಿ ಎಸ್ ನದಾಫ್, ಜಿ ಆರ್ ಗ್ರಾಮ ಪುರೋಹಿತ್, ಎಚ್ ಐ ಕಲ್ಲಣ್ಣವರ, ಸಂಜೀವ ಕೊರಡೂರ, ಎಫ್ ಸಿ ತಡಿಸಿ, ಮಂಜು ಲಮಾಣಿ, ಎಂಎಸ್ ಅಂಗಡಿ, ಎಂ ಎಚ್ ಐಗಾರ, ಅಪ್ಪಣ್ಣ ರಾಠೋಡ್, ಹನುಮರೆಡ್ಡಿ ತಾರಿಕೊಪ್ಪ, ಕೆಬಿ ಹುಲಗೂರು ಪಾಲ್ಗೊಂಡಿದ್ದರು.

ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಗರಹಾವಿನಿಂದ ಕುಟುಂಬಸ್ಥರನ್ನು ರಕ್ಷಿಸಿದ ಬೆಕ್ಕುಗಳು; ಸೆರೆ ಸಿಕ್ಕ ನಾಗರಹಾವಿಗೆ ಪೂಜೆ ಸಲ್ಲಿಸಿದ ಮಹಿಳೆಯರು….

ಜೀವ ಉಳಿಸಿದ ಬೆಕ್ಕುಗಳನ್ನು ಮುದ್ದಾಡಿದ ಮಾಲೀಕರು……

ವಿಜಯಸಾಕ್ಷಿ ಸುದ್ದಿ, ಗದಗ

ಯಾರೂ ಇಲ್ಲದ ವೇಳೆ ಅಡುಗೆಮನೆ ಸೇರಿಕೊಂಡಿದ್ದ ವಿಷಕಾರಿ ನಾಗರಹಾವಿನಿಂದ ಜೋಡಿ ಬೆಕ್ಕುಗಳು ಇಡೀ ಕುಟುಂಬದ ಸದಸ್ಯರು ರಕ್ಷಿಸಿದ ಘಟನೆ ಜರುಗಿದೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿ ಲಕ್ಷ್ಮಣ್ ಎಂಬುವರಿಗೆ ಸೇರಿದ ಮನೆಯಲ್ಲಿ ಬುಧವಾರ ನಡೆದಿದ್ದು ಬೆಳಕಿಗೆ ಬಂದಿದೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಕಾರಿ ನಾಗರಹಾವು ಅಡುಗೆಮನೆಗೆ ಸೇರಿದೆ. ಹಾವು ಸೇರಿದ್ದನ್ನು ಮನೆಯಲ್ಲಿ ಇದ್ದ ಜೋಡಿ ಬೆಕ್ಕುಗಳು ನೋಡಿವೆ. ಮನೆ ಮಾಲೀಕರು ಆಗಮಿಸುತ್ತಿದ್ದಂತೆಯೇ ಅಡುಗೆ ಮನೆ ಬಳಿ ಎರಡು ಬೆಕ್ಕುಗಳು ನಿಂತು ಮೆಂವ್….ಮೆಂವ್…ಅಂತ ಅಂದಿವೆ. ಇದರಿಂದಾಗಿ ಮನೆ ಮಾಲೀಕರು ಬೆಕ್ಕುಗಳ ವರ್ತನೆಯಿಂದ ಗಾಬರಿಯಾಗಿ ಕಣ್ಣಾಡಿಸಿದಾಗ ಹಾವು ಇರುವುದು ಗೊತ್ತಾಗಿದೆ. ತಕ್ಷಣವೇ ಉರಗ ತಜ್ಞ ಸುರೇಬಾನ ಅವರನ್ನು ಕರೆಸಿ ನಾಗರಹಾವು ಹಿಡಿಸಿದ್ದಾರೆ.

ಅಡುಗೆ ಮನೆಯಲ್ಲಿ ಇದ್ದ ನಾಗರಹಾವು ಖಾಲಿ ಡಬ್ಬಾ ಸೇರುತ್ತಿದ್ದಂತೆಯೇ ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟರು. ಅಷ್ಟೇ ಅಲ್ಲ ಸೇರೆ ಸಿಕ್ಕ ನಾಗರಹಾವಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ನಂತರ ನಾಗರಹಾವು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

ನಂತರ ನಾಗರಹಾವಿನಿಂದ ರಕ್ಷಿಸಿದ ಬೆಕ್ಕುಗಳನ್ನು ಕುಟುಂಬ ಸದಸ್ಯರು ಮುದ್ದಾಡಿ ಸಂತಸಪಟ್ಟರು.

ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ; ನೊಂದ ಅಂಗನವಾಡಿ ಶಿಕ್ಷಕಿ ಆತ್ಮಹತ್ಯೆಗೆ ಶರಣು…..

ಸ್ಟೇರ್ ಕೇಸ್ ಮೆಟ್ಟಿಲುಗಳ ಪೈಪ್ ಗೆ ಸೀರೆಕಟ್ಟಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ತಾಯಿ…..

ವಿಜಯಸಾಕ್ಷಿ ಸುದ್ದಿ, ಗದಗ

ಪ್ರೀತಿಯಿಂದ ಸಾಕಿದ್ದ ಮಗಳು, ಅದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಹೋಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ನೊಂದಿದ್ದ ತಾಯಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬುಧವಾರ ಜರುಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಹದ್ಲಿ ರಸ್ತೆಯ ಬರೋಡ ಬ್ಯಾಂಕ್ ಬಳಿಯ ನಿವಾಸಿ, ಅಂಗನವಾಡಿ ಶಿಕ್ಷಕಿಯಾಗಿದ್ದ ಸುನೀತಾ ಕೋ ವೀರಣ್ಣ ನಾಯಕವಾಡಿ (48) ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ಕಳೆದ ನಾಲ್ಕು ತಿಂಗಳ ಹಿಂದೆ ಮಗಳು ಅದೇ ಏರಿಯಾದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಳು.

ಮಗಳು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಹೋಗಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ತಾಯಿ ಸುನೀತಾ ತನ್ನ ಸಹೋದರಿಯ ಮನೆ ಮುಂದಿರುವ (ಸ್ಟೇರ್ ಕೇಸ್) ಮಾಳಿಗೆ ಹತ್ತುವು ಮೆಟ್ಟಿಲುಗಳ ಪೈಪ್ ಗೆ ಸೀರೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುದ್ದಿ ತಿಳಿದು ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರಗುಂದ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

HSRP ಗೊಂದಲ; ಅಕ್ರಮಕ್ಕೆ ಅವಕಾಶ ನೀಡಲ್ಲ ಎಂದ ಸಾರಿಗೆ ಸಚಿವರಿಗೆ ಸಂಘಟನೆಗಳ ಅಭಿನಂದನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಯೋಜನೆ ಜಾರಿಗೆ ವಿಚಾರದಲ್ಲಿ ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆರಂಭಿಸಿರುವ ಹೋರಾಟಕ್ಕಷ್ಟೇ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ.

ಇದೇ ವೇಳೆ, ಹಿಂದಿನ ಸರ್ಕಾರದ ಅವಧಿಯಲ್ಲಿ ತಪ್ಪುಗಳು ಆಗಿದ್ದರೆ ಸರಿಪಡಿಸುವುದಾಗಿ ಭರವಸೆ ನೀಡಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರನ್ನು ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಹಾಗೂ ಸಮತಾ ಸೈನಿಕದಳ ವಿದ್ಯಾರ್ಥಿ ಒಕ್ಕೂಟ ಅಭಿನಂಧಿಸಿದೆ.

ಅಪರಾಧ ಕೃತ್ಯಗಳನ್ನು ತಡೆಯಲು ಹಾಗೂ, ಕಾನೂನು ಉಲ್ಲಂಘನೆಯಂತ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ HSRP ಅಳವಡಿಕೆ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ವಿಶಿಷ್ಟ ನಂಬರ್ ಪ್ಲೇಟ್’ಗಳನ್ನು ತಯಾರಿಸುವ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.

ಆದರೆ ಕರ್ನಾಟಕದಲ್ಲಿ ಕೆಲವು ಮಾಫಿಯಾಗಳ ಒತ್ತಡಕ್ಕೊಳಗಾಗಿ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸಾರಿಗೆ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಜನಸ್ನೇಹಿ ಕ್ರಮಕ್ಕೆ ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಲೋಕೇಶ್ ರಾಮ್ ಆಗ್ರಹಿಸಿದ್ದರು.

ಸಚಿವ ರಾಮಲಿಂಗ ರೆಡ್ಡಿಯವರ ಹೇಳಿಕೆ ಸ್ವಾಗತಾರ್ಹ

ಈ ಹೋರಾಟವನ್ನು ಬೆಂಬಲಿಸಿರುವ ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಾ.V.S.ವೆಂಕಟಾಚಲ ಹಾಗೂ ಸಮತಾ ಸೈನಿಕದಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜಿ.ಗೋಪಾಲ್ ಅವರು, ಈ ವಿಚಾರದಲ್ಲಿ ಸರ್ಕಾರ ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರ ಹೇಳಿಕೆ ಸ್ವಾಗತಾರ್ಹ ಎಂದಿದ್ದಾರೆ.

ಈ ವಿಚಾರದಲ್ಲಿ ಸಾರಿಗೆ ಸಚಿವರು ಜನಪರ ಕ್ರಮ ಅನುಸರಿಸುವ ಭರವಸೆಯನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಭರವಸೆ ನೀಡಿದ್ದಾರೆ. HSRP ಕುರಿತ ಕಡತ ಇನ್ನೂ ಸರ್ಕಾರದ ಬಳಿ ಬಂದಿಲ್ಲ, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಎಷ್ಟು ಕಂಪನಿಗಳಿವೆಯೋ ಅಷ್ಟಕ್ಕೂ ಅನುಮತಿ ಕೊಡುತ್ತೇವೆ.

ಈ ಬಗ್ಗೆ ಅಂತಿಮ‌ ಆದೇಶ ಬರುತ್ತಲ್ವಾ ಆಗ ನಿಮಗೇ ಗೊತ್ತಾಗುತ್ತದೆ’ ಎಂದು ಹೇಳುವ ಮೂಲಕ ಸಚಿವ ರಾಮಲಿಂಗರೆಡ್ಡಿ ಅವರು ತಮ್ಮ ಸರ್ಕಾರ ಜಾಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲೇ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿರುವ ಹೋರಾಟಗಾರರು, ಈ ವಿಚಾರದಲ್ಲಿ ಜನರ ಹಿತಾಸಕ್ತಿ ಗಮನಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಸಾರಿಗೆ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲೇ 2 ಕೋಟಿಗೂ ಹೆಚ್ಚು ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಈ ವಾಹನಗಳಿಗೆ HSRP ಪೂರೈಸಲು ಕೆಲವೇ ಕಂಪನಿಗಳಿಗೆ ಮಾತ್ರ ಅವಕಾಶ ನೀಡಿದಲ್ಲಿ ಕೆಲ ಮಧ್ಯವರ್ತಿ ನಿಯಂತ್ರಣಾ ಮಾಫಿಯಾ ಹುಟ್ಟಿಕೊಂಡು ಮಾರುಕಟ್ಟೆಯಲ್ಲಿ ಏಕಸ್ವಾಮ್ಯದ ಅಧಿಪತ್ಯ ಸ್ಥಾಪಿಸುತ್ತದೆ. ಇದರಿಂದ ಈ ಉದ್ಯಮವನ್ನೇ ನಂಬಿರುವ ಸುಮಾರು 20 ಸಾವಿರ ಕುಟುಂಬಗಳು ಬೀದಿಗೆ ಬೀಳಬಹುದು ಎಂದು ಡಾ.ವೆಂಕಟಾಚಲ ಹಾಗೂ ಜಿ.ಗೋಪಾಲ್ ಅವರು ಸಾರಿಗೆ ಸಚಿವರ ಗಮನ ಸೆಳೆದಿದ್ದಾರೆ.

ಗ್ಯಾರಂಟಿ ಯೋಜನೆಗಳ ನೋಂದಣಿ ಕಾರ್ಯದಲ್ಲಿ ಗದಗ ಜಿಲ್ಲೆ ಮುಂಜೂಣಿಯಲ್ಲಿದೆ; ಉಸ್ತುವಾರಿ ಸಚಿವ ಎಚ್. ಕೆ.ಪಾಟೀಲ್

ಜಿಲ್ಲಾಡಳಿತ ಕಾರ್ಯವೈಖರಿಗೆ ಉಸ್ತುವಾರಿ ಸಚಿವರ ಶ್ಲಾಘನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಬಡವರ ಕಲ್ಯಾಣಕ್ಕಾಗಿ ಘೋಷಿಸಲಾದ ಸರಕಾರದ ಪ್ರಮುಖ ಐದು ಗ್ಯಾರಂಟಿಗಳ ನೋಂದಣಿ ಕಾರ್ಯದಲ್ಲಿ ಗದಗ ಜಿಲ್ಲೆ ಮುಂಜೂಣಿಯಲ್ಲಿದ್ದು, ಇನ್ನೂ ಹತ್ತು ದಿನಗಳಲ್ಲಿ ನೋಂದಣಿ ಕಾರ್ಯ ಪೂರ್ಣಗೊಳ್ಳಲಿದೆ. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದ‌ ಪ್ರವಾಸಿ‌ ಮಂದಿರದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳು ಸಮಾಜದ ನಿರ್ಗತಿಕರ, ಕೆಳವರ್ಗದ ಕಲ್ಯಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಸರಕಾರದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳಿಗೆ ಗದಗ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದರು.

ಶಕ್ತಿ ಯೋಜನೆ: ಶಕ್ತಿ ಯೋಜನೆಯು ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಈ ಮೊದಲು 1.75 ಲಕ್ಷ ಪ್ರಯಾಣಿಕರು ದಿನಂಪ್ರತಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದಾಗಿನಿಂದ ದಿನಂಪ್ರತಿ ಸಂಚರಿಸುವವರ ಸಂಖ್ಯೆ 2.46 ಲಕ್ಷಕ್ಕೆ ಎರಿಕೆಯಾಗಿದೆ. ಲೋಡ್ ಫ್ಯಾಕ್ಟರ್ 76% ರಿಂದ 96% ಕ್ಕೆ ಏರಿಕೆಯಾಗಿದೆ. ಪ್ರತಿದಿನ 60 ಲಕ್ಷ ರೂ ಗಳಿಂದ 70 ಲಕ್ಷ ರೂ. ಸಂಗ್ರಹವಾಗುತ್ತಿದೆ. ಈ ಯೋಜನೆಯಿಂದ ಒಟ್ಟಾರೆ 2 ಕೋಟಿ ರೂ. ಆದಾಯ ಹೆಚ್ಚಳವಾಗಿದೆ ಎಂದರು.

ಗೃಹಜ್ಯೋತಿ: ಪ್ರತಿ ಮನೆಯ 200 ಯುನಿಟಗಳ ವರೆಗಿನ ಉಚಿತ ವಿಧ್ಯುತ ಒದಗಿಸುವ ಯೋಜನೆ ಇದಾಗಿದ್ದು, ಜೂನ್ 18 ರಿಂದ ನೊಂದಣಿ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 3,15,756 ಸಂಪರ್ಕಗಳಿದ್ದು ಈ ಪೈಕಿ 25,805 ಸಂಪರ್ಕಗಳು ಡಿಫಾಲ್ಟ ಹಾಗೂ ಕಡಿತಗೊಂಡಿವೆ, 696 ಸಂಪರ್ಕಗಳು ಅನರ್ಹವಾಗಿದ್ದು, 2,89,207 ಸಂಪರ್ಕಗಳು ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಗೊಳಪಡುತ್ತವೆ. ಶನಿವಾರ ಸಂಜೆಯವರೆಗೆ 1,62,954 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 1,26,080 ಗ್ರಾಹಕರು ನೋಂದಣಿ ಮಾಡಿಕೊಳ್ಳಬೇಕಿದೆ. ಈಗಾಗಲೇ ಶೇ. 56.30 ರಷ್ಟು ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 200 ಯುನಿಟಗಿಂತ ಅಧಿಕ ಬಳಕೆ‌ಮಾಡುತ್ತಿರುವವರ ಸಂಖ್ಯೆ 3,998 ಇದೆ. ಜೂನ 10ರೊಳಗಾಗಿ ನೊಂದಣಿ‌ಕಾರ್ಯ ಪೂರ್ಣಗೊಳಿಸಲು ಅಧಿಕಾರಿಗೆ ಸೂಚನೆ ನೀಡಲಾಗಿದೆ.

ಅನ್ನಭಾಗ್ಯ: ಅಂತ್ಯೋದಯ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಸದಸ್ಯರಿಗೆ ಪ್ರತಿ ಮಾಹೆ 10 ಕೆ.ಜಿ. ಉಚಿತ ಅಕ್ಕಿ ಪೂರೈಸುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ 28,586 ಅಂತ್ಯೋದಯ ಪಡಿತರ ಚೀಟಿದಾರರು ಹಾಗೂ 2,27,914 ಬಿ.ಪಿ.ಎಲ್ ಪಡಿತರ ಚೀಟಿದಾರರಿದ್ದಾರೆ. ಪ್ರತಿ ಸದಸ್ಯರಿಗೆ ಹೆಚ್ಚುವರಿ 5 ಕೆ.ಜಿ.ಅಕ್ಕಿಗೆ ತಗಲುವ ಮೊತ್ತ 170 ರೂ ಗಳನ್ನು ನೇರವಾಗಿ ಪಡಿತರದಾರರಿಗೆ ಡಿ.ಬಿ.ಓ.ಟಿ ಮೂಲಕ ಪಾವತಿಸಲಾಗುವದು. ಬಿ.ಪಿ.ಎಲ್ ಪಡಿತರದಾರರಿಗೆ 12,27,23,680 ರೂ ಗಳು ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ 1,89,71,830 ರೂ. ಮೊತ್ತವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಗೃಹಲಕ್ಷ್ಮೀ: ಜಿಲ್ಲೆಯ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂ. ನೇರ ವರ್ಗಾವಣೆ ಮಾಡುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ ಬಿ.ಪಿ.ಎಲ್ ಪಡಿತರದಾರರು 2.28 ಲಕ್ಷ ಕುಟುಂಗಳಿದ್ದು, ಅಂತ್ಯೋದಯ 28,623 ಪಡಿತರ ಚೀಟಿದಾರರು, ಎ.ಪಿ.ಎಲ್ 38,455 ಚೀಟಿದಾರರಿದ್ದು ಮನೆಯ ಯಜಮಾನಿಗೆ ಹಣ ವರ್ಗಾವಣೆ ಮಾಡಲು ಮಾಹಿತಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ.

ಯುವನಿಧಿ: ನಿರುದ್ಯೋಗಿ ಪದವೀದರರಿಗೆ 3000 ರೂ. ನಿರುದ್ಯೋಗಿ ಡಿಪ್ಲೋಮಾ ಪದವಿದರರಿಗೆ 1500 ರೂ.ಗಳನ್ನು ನೀಡುವ ಯೋಜನೆ ಯುವ ನಿಧಿಯಾಗಿದೆ. ಈ ಹೋಜನೆ ಅನುಷ್ಠಾನ ಹಾಗೂ ನೊಂದಣಿಗೆ ಪ್ರಕ್ರಿಯೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರಭು ಬುರಬುರೆ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಅದ್ಯಕ್ಷ ಅಶೋಕ ಮಂದಾಲಿ ಇದ್ದರು.

error: Content is protected !!