Home Blog Page 3253

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ: ಇಬ್ಬರು ಕಳ್ಳರ ಬಂಧನ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ಬಂಧಿತರು ಲಕ್ಷ್ಮೇಶ್ವರ ನಿವಾಸಿಗಳು….

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಗೇರಿ, ಪು. ಬಡ್ನಿಯಲ್ಲಿ ಮನೆ ಕಳ್ಳತನ ಮಾಡಿದ್ದ ಹನುಮಂತ ಕುಂಚಿಕೊರವರ, ಮಂಜುನಾಥ ಬಿಸಕಲ್ಲವಡ್ಡರ ಎಂಬುವರನ್ನು ಲಕ್ಷ್ಮೇಶ್ವರದ ಇಟ್ಟಿಕೆರೆಯ ದಂಡೆಯ ಗುಡಿಸಲ ಬಳಿ ಕಾರ್ಯಚರಣೆ ನಡೆಸಿ ಕಳ್ಳರನ್ನು ಬಂಧಿಸಲಾಗಿದೆ.

ಬಂಧಿತರಿಂದ ಬಂಗಾರದ ಕಿವಿ ಓಲೆ, ಬೆಳ್ಳಿ ಪೆಂಡೆದ ಗೆಜ್ಜೆ, ಬೆಳ್ಳಿ ಬ್ರಾಸಲೆಟ್, ಎರಡು ಜೊತೆ ಬೆಳ್ಳಿ ಕಾಲು ಚೈನ್, 15 ಗ್ರಾಮ್‌ನ ಬಂಗಾರದ ಚೈನ್, 12 ಗ್ರಾಮ್ ತೂಕದ ಬಂಗಾರದ ನೆಕ್ಲೆಸ್, 20 ಗ್ರಾಮ್‌ನ ಎರಡು ಬೆಳ್ಳಿ ಕಾಲು ಚೈನ್, 1 ಬೆಳ್ಳಿ ಗುಡಗಡಗಿ, ಬೆಳ್ಳಿಯ ಚೈನ್ ಹೀಗೆ ಒಟ್ಟು 35 ಗ್ರಾಮ್ ಬಂಗಾರದ ಆಭರಣಗಳ ಅಂದಾಜು ಮೊತ್ತ 1 ಲಕ್ಷ 6500 ರೂ ಹಾಗೂ 300 ಗ್ರಾಮ್ ತೂಕದ ಬೆಳ್ಳಿ ಆಭರಣಗಳ ಅಂದಾಜು ಕಿಮ್ಮತ್ತು 32,500 ರೂ ಸೇರಿದಂತೆ ಒಟ್ಟು 1.39 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಪೊಲೀಸರು ವಸಪಡಿಸಿಕೊಂಡಿದ್ದಾರೆ.

ಗದಗ ಜಿಲ್ಲಾ ಎಸ್‌ಪಿ, ಡಿಎಸ್‌ಪಿ ಹಾಗೂ ಸಿಪಿಐ ವಿಕಾಸ ಲಮಾಣಿ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಯೂಸೆಪ್ ಜಮೂಲಾ, ಕ್ರೈಮ್ ಪಿಎಸ್‌ಐ ವಿ. ಜಿ. ಪವಾರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಎಎಸ್‌ಐಗಳಾದ ಎನ್ ಎ ಮೌಲ್ವಿ, ಟಿ ಕೆ ರಾಠೋಡ್, ವೈ ಎಸ್ ಕುಬಿಹಾಳ, ಜಿ ಎಂ ಬೂದಿಹಾಳ, ಸಿಬ್ಬಂದಿಗಳಾದ ಎಂ ಎ ಶೇಖ್, ಎಂ ಡಿ ಲಮಾಣಿ, ಎಂ ಎಸ್ ಬಳ್ಳಾರಿ, ಸಿ ಎಸ್ ಮಠಪತಿ, ಡಿ ಎಸ್ ನದಾಫ್, ಜಿ ಆರ್ ಗ್ರಾಮ ಪುರೋಹಿತ್, ಎಚ್ ಐ ಕಲ್ಲಣ್ಣವರ, ಸಂಜೀವ ಕೊರಡೂರ, ಎಫ್ ಸಿ ತಡಿಸಿ, ಮಂಜು ಲಮಾಣಿ, ಎಂಎಸ್ ಅಂಗಡಿ, ಎಂ ಎಚ್ ಐಗಾರ, ಅಪ್ಪಣ್ಣ ರಾಠೋಡ್, ಹನುಮರೆಡ್ಡಿ ತಾರಿಕೊಪ್ಪ, ಕೆಬಿ ಹುಲಗೂರು ಪಾಲ್ಗೊಂಡಿದ್ದರು.

ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಗರಹಾವಿನಿಂದ ಕುಟುಂಬಸ್ಥರನ್ನು ರಕ್ಷಿಸಿದ ಬೆಕ್ಕುಗಳು; ಸೆರೆ ಸಿಕ್ಕ ನಾಗರಹಾವಿಗೆ ಪೂಜೆ ಸಲ್ಲಿಸಿದ ಮಹಿಳೆಯರು….

ಜೀವ ಉಳಿಸಿದ ಬೆಕ್ಕುಗಳನ್ನು ಮುದ್ದಾಡಿದ ಮಾಲೀಕರು……

ವಿಜಯಸಾಕ್ಷಿ ಸುದ್ದಿ, ಗದಗ

ಯಾರೂ ಇಲ್ಲದ ವೇಳೆ ಅಡುಗೆಮನೆ ಸೇರಿಕೊಂಡಿದ್ದ ವಿಷಕಾರಿ ನಾಗರಹಾವಿನಿಂದ ಜೋಡಿ ಬೆಕ್ಕುಗಳು ಇಡೀ ಕುಟುಂಬದ ಸದಸ್ಯರು ರಕ್ಷಿಸಿದ ಘಟನೆ ಜರುಗಿದೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿ ಲಕ್ಷ್ಮಣ್ ಎಂಬುವರಿಗೆ ಸೇರಿದ ಮನೆಯಲ್ಲಿ ಬುಧವಾರ ನಡೆದಿದ್ದು ಬೆಳಕಿಗೆ ಬಂದಿದೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಕಾರಿ ನಾಗರಹಾವು ಅಡುಗೆಮನೆಗೆ ಸೇರಿದೆ. ಹಾವು ಸೇರಿದ್ದನ್ನು ಮನೆಯಲ್ಲಿ ಇದ್ದ ಜೋಡಿ ಬೆಕ್ಕುಗಳು ನೋಡಿವೆ. ಮನೆ ಮಾಲೀಕರು ಆಗಮಿಸುತ್ತಿದ್ದಂತೆಯೇ ಅಡುಗೆ ಮನೆ ಬಳಿ ಎರಡು ಬೆಕ್ಕುಗಳು ನಿಂತು ಮೆಂವ್….ಮೆಂವ್…ಅಂತ ಅಂದಿವೆ. ಇದರಿಂದಾಗಿ ಮನೆ ಮಾಲೀಕರು ಬೆಕ್ಕುಗಳ ವರ್ತನೆಯಿಂದ ಗಾಬರಿಯಾಗಿ ಕಣ್ಣಾಡಿಸಿದಾಗ ಹಾವು ಇರುವುದು ಗೊತ್ತಾಗಿದೆ. ತಕ್ಷಣವೇ ಉರಗ ತಜ್ಞ ಸುರೇಬಾನ ಅವರನ್ನು ಕರೆಸಿ ನಾಗರಹಾವು ಹಿಡಿಸಿದ್ದಾರೆ.

ಅಡುಗೆ ಮನೆಯಲ್ಲಿ ಇದ್ದ ನಾಗರಹಾವು ಖಾಲಿ ಡಬ್ಬಾ ಸೇರುತ್ತಿದ್ದಂತೆಯೇ ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟರು. ಅಷ್ಟೇ ಅಲ್ಲ ಸೇರೆ ಸಿಕ್ಕ ನಾಗರಹಾವಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ನಂತರ ನಾಗರಹಾವು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

ನಂತರ ನಾಗರಹಾವಿನಿಂದ ರಕ್ಷಿಸಿದ ಬೆಕ್ಕುಗಳನ್ನು ಕುಟುಂಬ ಸದಸ್ಯರು ಮುದ್ದಾಡಿ ಸಂತಸಪಟ್ಟರು.

ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ; ನೊಂದ ಅಂಗನವಾಡಿ ಶಿಕ್ಷಕಿ ಆತ್ಮಹತ್ಯೆಗೆ ಶರಣು…..

ಸ್ಟೇರ್ ಕೇಸ್ ಮೆಟ್ಟಿಲುಗಳ ಪೈಪ್ ಗೆ ಸೀರೆಕಟ್ಟಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ತಾಯಿ…..

ವಿಜಯಸಾಕ್ಷಿ ಸುದ್ದಿ, ಗದಗ

ಪ್ರೀತಿಯಿಂದ ಸಾಕಿದ್ದ ಮಗಳು, ಅದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಹೋಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ನೊಂದಿದ್ದ ತಾಯಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬುಧವಾರ ಜರುಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಹದ್ಲಿ ರಸ್ತೆಯ ಬರೋಡ ಬ್ಯಾಂಕ್ ಬಳಿಯ ನಿವಾಸಿ, ಅಂಗನವಾಡಿ ಶಿಕ್ಷಕಿಯಾಗಿದ್ದ ಸುನೀತಾ ಕೋ ವೀರಣ್ಣ ನಾಯಕವಾಡಿ (48) ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ಕಳೆದ ನಾಲ್ಕು ತಿಂಗಳ ಹಿಂದೆ ಮಗಳು ಅದೇ ಏರಿಯಾದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಳು.

ಮಗಳು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಹೋಗಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ತಾಯಿ ಸುನೀತಾ ತನ್ನ ಸಹೋದರಿಯ ಮನೆ ಮುಂದಿರುವ (ಸ್ಟೇರ್ ಕೇಸ್) ಮಾಳಿಗೆ ಹತ್ತುವು ಮೆಟ್ಟಿಲುಗಳ ಪೈಪ್ ಗೆ ಸೀರೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುದ್ದಿ ತಿಳಿದು ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರಗುಂದ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

HSRP ಗೊಂದಲ; ಅಕ್ರಮಕ್ಕೆ ಅವಕಾಶ ನೀಡಲ್ಲ ಎಂದ ಸಾರಿಗೆ ಸಚಿವರಿಗೆ ಸಂಘಟನೆಗಳ ಅಭಿನಂದನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಯೋಜನೆ ಜಾರಿಗೆ ವಿಚಾರದಲ್ಲಿ ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆರಂಭಿಸಿರುವ ಹೋರಾಟಕ್ಕಷ್ಟೇ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ.

ಇದೇ ವೇಳೆ, ಹಿಂದಿನ ಸರ್ಕಾರದ ಅವಧಿಯಲ್ಲಿ ತಪ್ಪುಗಳು ಆಗಿದ್ದರೆ ಸರಿಪಡಿಸುವುದಾಗಿ ಭರವಸೆ ನೀಡಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರನ್ನು ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಹಾಗೂ ಸಮತಾ ಸೈನಿಕದಳ ವಿದ್ಯಾರ್ಥಿ ಒಕ್ಕೂಟ ಅಭಿನಂಧಿಸಿದೆ.

ಅಪರಾಧ ಕೃತ್ಯಗಳನ್ನು ತಡೆಯಲು ಹಾಗೂ, ಕಾನೂನು ಉಲ್ಲಂಘನೆಯಂತ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ HSRP ಅಳವಡಿಕೆ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ವಿಶಿಷ್ಟ ನಂಬರ್ ಪ್ಲೇಟ್’ಗಳನ್ನು ತಯಾರಿಸುವ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.

ಆದರೆ ಕರ್ನಾಟಕದಲ್ಲಿ ಕೆಲವು ಮಾಫಿಯಾಗಳ ಒತ್ತಡಕ್ಕೊಳಗಾಗಿ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸಾರಿಗೆ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಜನಸ್ನೇಹಿ ಕ್ರಮಕ್ಕೆ ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಲೋಕೇಶ್ ರಾಮ್ ಆಗ್ರಹಿಸಿದ್ದರು.

ಸಚಿವ ರಾಮಲಿಂಗ ರೆಡ್ಡಿಯವರ ಹೇಳಿಕೆ ಸ್ವಾಗತಾರ್ಹ

ಈ ಹೋರಾಟವನ್ನು ಬೆಂಬಲಿಸಿರುವ ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಾ.V.S.ವೆಂಕಟಾಚಲ ಹಾಗೂ ಸಮತಾ ಸೈನಿಕದಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜಿ.ಗೋಪಾಲ್ ಅವರು, ಈ ವಿಚಾರದಲ್ಲಿ ಸರ್ಕಾರ ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರ ಹೇಳಿಕೆ ಸ್ವಾಗತಾರ್ಹ ಎಂದಿದ್ದಾರೆ.

ಈ ವಿಚಾರದಲ್ಲಿ ಸಾರಿಗೆ ಸಚಿವರು ಜನಪರ ಕ್ರಮ ಅನುಸರಿಸುವ ಭರವಸೆಯನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಭರವಸೆ ನೀಡಿದ್ದಾರೆ. HSRP ಕುರಿತ ಕಡತ ಇನ್ನೂ ಸರ್ಕಾರದ ಬಳಿ ಬಂದಿಲ್ಲ, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಎಷ್ಟು ಕಂಪನಿಗಳಿವೆಯೋ ಅಷ್ಟಕ್ಕೂ ಅನುಮತಿ ಕೊಡುತ್ತೇವೆ.

ಈ ಬಗ್ಗೆ ಅಂತಿಮ‌ ಆದೇಶ ಬರುತ್ತಲ್ವಾ ಆಗ ನಿಮಗೇ ಗೊತ್ತಾಗುತ್ತದೆ’ ಎಂದು ಹೇಳುವ ಮೂಲಕ ಸಚಿವ ರಾಮಲಿಂಗರೆಡ್ಡಿ ಅವರು ತಮ್ಮ ಸರ್ಕಾರ ಜಾಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲೇ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿರುವ ಹೋರಾಟಗಾರರು, ಈ ವಿಚಾರದಲ್ಲಿ ಜನರ ಹಿತಾಸಕ್ತಿ ಗಮನಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಸಾರಿಗೆ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲೇ 2 ಕೋಟಿಗೂ ಹೆಚ್ಚು ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಈ ವಾಹನಗಳಿಗೆ HSRP ಪೂರೈಸಲು ಕೆಲವೇ ಕಂಪನಿಗಳಿಗೆ ಮಾತ್ರ ಅವಕಾಶ ನೀಡಿದಲ್ಲಿ ಕೆಲ ಮಧ್ಯವರ್ತಿ ನಿಯಂತ್ರಣಾ ಮಾಫಿಯಾ ಹುಟ್ಟಿಕೊಂಡು ಮಾರುಕಟ್ಟೆಯಲ್ಲಿ ಏಕಸ್ವಾಮ್ಯದ ಅಧಿಪತ್ಯ ಸ್ಥಾಪಿಸುತ್ತದೆ. ಇದರಿಂದ ಈ ಉದ್ಯಮವನ್ನೇ ನಂಬಿರುವ ಸುಮಾರು 20 ಸಾವಿರ ಕುಟುಂಬಗಳು ಬೀದಿಗೆ ಬೀಳಬಹುದು ಎಂದು ಡಾ.ವೆಂಕಟಾಚಲ ಹಾಗೂ ಜಿ.ಗೋಪಾಲ್ ಅವರು ಸಾರಿಗೆ ಸಚಿವರ ಗಮನ ಸೆಳೆದಿದ್ದಾರೆ.

ಗ್ಯಾರಂಟಿ ಯೋಜನೆಗಳ ನೋಂದಣಿ ಕಾರ್ಯದಲ್ಲಿ ಗದಗ ಜಿಲ್ಲೆ ಮುಂಜೂಣಿಯಲ್ಲಿದೆ; ಉಸ್ತುವಾರಿ ಸಚಿವ ಎಚ್. ಕೆ.ಪಾಟೀಲ್

ಜಿಲ್ಲಾಡಳಿತ ಕಾರ್ಯವೈಖರಿಗೆ ಉಸ್ತುವಾರಿ ಸಚಿವರ ಶ್ಲಾಘನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಬಡವರ ಕಲ್ಯಾಣಕ್ಕಾಗಿ ಘೋಷಿಸಲಾದ ಸರಕಾರದ ಪ್ರಮುಖ ಐದು ಗ್ಯಾರಂಟಿಗಳ ನೋಂದಣಿ ಕಾರ್ಯದಲ್ಲಿ ಗದಗ ಜಿಲ್ಲೆ ಮುಂಜೂಣಿಯಲ್ಲಿದ್ದು, ಇನ್ನೂ ಹತ್ತು ದಿನಗಳಲ್ಲಿ ನೋಂದಣಿ ಕಾರ್ಯ ಪೂರ್ಣಗೊಳ್ಳಲಿದೆ. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದ‌ ಪ್ರವಾಸಿ‌ ಮಂದಿರದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳು ಸಮಾಜದ ನಿರ್ಗತಿಕರ, ಕೆಳವರ್ಗದ ಕಲ್ಯಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಸರಕಾರದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳಿಗೆ ಗದಗ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದರು.

ಶಕ್ತಿ ಯೋಜನೆ: ಶಕ್ತಿ ಯೋಜನೆಯು ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಈ ಮೊದಲು 1.75 ಲಕ್ಷ ಪ್ರಯಾಣಿಕರು ದಿನಂಪ್ರತಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದಾಗಿನಿಂದ ದಿನಂಪ್ರತಿ ಸಂಚರಿಸುವವರ ಸಂಖ್ಯೆ 2.46 ಲಕ್ಷಕ್ಕೆ ಎರಿಕೆಯಾಗಿದೆ. ಲೋಡ್ ಫ್ಯಾಕ್ಟರ್ 76% ರಿಂದ 96% ಕ್ಕೆ ಏರಿಕೆಯಾಗಿದೆ. ಪ್ರತಿದಿನ 60 ಲಕ್ಷ ರೂ ಗಳಿಂದ 70 ಲಕ್ಷ ರೂ. ಸಂಗ್ರಹವಾಗುತ್ತಿದೆ. ಈ ಯೋಜನೆಯಿಂದ ಒಟ್ಟಾರೆ 2 ಕೋಟಿ ರೂ. ಆದಾಯ ಹೆಚ್ಚಳವಾಗಿದೆ ಎಂದರು.

ಗೃಹಜ್ಯೋತಿ: ಪ್ರತಿ ಮನೆಯ 200 ಯುನಿಟಗಳ ವರೆಗಿನ ಉಚಿತ ವಿಧ್ಯುತ ಒದಗಿಸುವ ಯೋಜನೆ ಇದಾಗಿದ್ದು, ಜೂನ್ 18 ರಿಂದ ನೊಂದಣಿ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 3,15,756 ಸಂಪರ್ಕಗಳಿದ್ದು ಈ ಪೈಕಿ 25,805 ಸಂಪರ್ಕಗಳು ಡಿಫಾಲ್ಟ ಹಾಗೂ ಕಡಿತಗೊಂಡಿವೆ, 696 ಸಂಪರ್ಕಗಳು ಅನರ್ಹವಾಗಿದ್ದು, 2,89,207 ಸಂಪರ್ಕಗಳು ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಗೊಳಪಡುತ್ತವೆ. ಶನಿವಾರ ಸಂಜೆಯವರೆಗೆ 1,62,954 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 1,26,080 ಗ್ರಾಹಕರು ನೋಂದಣಿ ಮಾಡಿಕೊಳ್ಳಬೇಕಿದೆ. ಈಗಾಗಲೇ ಶೇ. 56.30 ರಷ್ಟು ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 200 ಯುನಿಟಗಿಂತ ಅಧಿಕ ಬಳಕೆ‌ಮಾಡುತ್ತಿರುವವರ ಸಂಖ್ಯೆ 3,998 ಇದೆ. ಜೂನ 10ರೊಳಗಾಗಿ ನೊಂದಣಿ‌ಕಾರ್ಯ ಪೂರ್ಣಗೊಳಿಸಲು ಅಧಿಕಾರಿಗೆ ಸೂಚನೆ ನೀಡಲಾಗಿದೆ.

ಅನ್ನಭಾಗ್ಯ: ಅಂತ್ಯೋದಯ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಸದಸ್ಯರಿಗೆ ಪ್ರತಿ ಮಾಹೆ 10 ಕೆ.ಜಿ. ಉಚಿತ ಅಕ್ಕಿ ಪೂರೈಸುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ 28,586 ಅಂತ್ಯೋದಯ ಪಡಿತರ ಚೀಟಿದಾರರು ಹಾಗೂ 2,27,914 ಬಿ.ಪಿ.ಎಲ್ ಪಡಿತರ ಚೀಟಿದಾರರಿದ್ದಾರೆ. ಪ್ರತಿ ಸದಸ್ಯರಿಗೆ ಹೆಚ್ಚುವರಿ 5 ಕೆ.ಜಿ.ಅಕ್ಕಿಗೆ ತಗಲುವ ಮೊತ್ತ 170 ರೂ ಗಳನ್ನು ನೇರವಾಗಿ ಪಡಿತರದಾರರಿಗೆ ಡಿ.ಬಿ.ಓ.ಟಿ ಮೂಲಕ ಪಾವತಿಸಲಾಗುವದು. ಬಿ.ಪಿ.ಎಲ್ ಪಡಿತರದಾರರಿಗೆ 12,27,23,680 ರೂ ಗಳು ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ 1,89,71,830 ರೂ. ಮೊತ್ತವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಗೃಹಲಕ್ಷ್ಮೀ: ಜಿಲ್ಲೆಯ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂ. ನೇರ ವರ್ಗಾವಣೆ ಮಾಡುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ ಬಿ.ಪಿ.ಎಲ್ ಪಡಿತರದಾರರು 2.28 ಲಕ್ಷ ಕುಟುಂಗಳಿದ್ದು, ಅಂತ್ಯೋದಯ 28,623 ಪಡಿತರ ಚೀಟಿದಾರರು, ಎ.ಪಿ.ಎಲ್ 38,455 ಚೀಟಿದಾರರಿದ್ದು ಮನೆಯ ಯಜಮಾನಿಗೆ ಹಣ ವರ್ಗಾವಣೆ ಮಾಡಲು ಮಾಹಿತಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ.

ಯುವನಿಧಿ: ನಿರುದ್ಯೋಗಿ ಪದವೀದರರಿಗೆ 3000 ರೂ. ನಿರುದ್ಯೋಗಿ ಡಿಪ್ಲೋಮಾ ಪದವಿದರರಿಗೆ 1500 ರೂ.ಗಳನ್ನು ನೀಡುವ ಯೋಜನೆ ಯುವ ನಿಧಿಯಾಗಿದೆ. ಈ ಹೋಜನೆ ಅನುಷ್ಠಾನ ಹಾಗೂ ನೊಂದಣಿಗೆ ಪ್ರಕ್ರಿಯೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರಭು ಬುರಬುರೆ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಅದ್ಯಕ್ಷ ಅಶೋಕ ಮಂದಾಲಿ ಇದ್ದರು.

ನಾಳೆಯಿಂದ ಅವಳಿ ನಗರದಲ್ಲಿ ಟ್ಯಾಂಕರ್ ಮೂಲಕ ನೀರು, ಹೆಲ್ಪ್ ಲೈನ್ ನಂಬರ್‌ ಗೆ ಕಾಲ್ ಮಾಡಿದರೆ ಸಾಕು ನಿಮ್ಮ ಏರಿಯಾಕ್ಕೆ ನೀರು….

ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ತಾಕೀತು…….

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಹಲವು ತಿಂಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ನಿತ್ಯವೂ ಕುಡಿಯುವ ನೀರಿಗಾಗಿ ರಸ್ತೆಗೆ ಇಳಿದು ಹೋರಾಟ ಮಾಡಿದರೂ ನಗರಸಭೆ ಆಡಳಿತ ಸ್ಪಂದಿಸರಲಿಲ್ಲ.

ಆದರೆ ಇವತ್ತು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಕೆಡಿಪಿ ಸಭೆಯಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ನಗರಸಭೆ ಆಯುಕ್ತ ರಮೇಶ್ ಸುಣಗಾರ ಮಾಹಿತಿ ನೀಡಿದರು.

ಇದರಿಂದ ಆಕ್ರೋಶಗೊಂಡ ಸಂಕನೂರ, ಸಭೆಯಲ್ಲಿ ಸುಳ್ಳು ಮಾಹಿತಿ ನೀಡಬೇಡಿ, ಅವಳಿ ನಗರದಲ್ಲಿ ತಿಂಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು. ಅಷ್ಟೇ ಅಲ್ಲದೆ ಬಡ ಜನರ ಜೊತೆಗೆ ಚೆಲ್ಲಾಟವಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ನಗರಸಭೆ ಸದಸ್ಯರು, ವಾರ್ಡ್ ಗಳಲ್ಲಿ ಸುತ್ತಾಡೋದು ಕಷ್ಟ ಆಗಿದೆ, ನೀವು ಹುಡಗಾಟಿಕೆ ಮಾಡ್ತಾಯಿದ್ದೀರಾ ಎಂದು ಸಂಕನೂರ ಗರಂ ಆದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್, ತಕ್ಷಣವೇ ನಾಳೆಯಿಂದಲೇ ಅವಳಿ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಎಂದು ತಾಕೀತು ಮಾಡಿದರು.

ಎರಡು ಹೆಲ್ಪ್ ಲೈನ್ ನಂಬರ್ ಮಾಡಿ, ಯಾರಿಗೆ ನೀರು ಬೇಕಾಗಿರುತ್ತೋ ಅವರು ಪೋನ್ ಮಾಡಿದ ತಕ್ಷಣ ಆ‌ ವಾರ್ಡ್ ಗೆ ನೀರು ಪೂರೈಕೆ ಮಾಡಲು ಸಚಿವ ಎಚ್ ಕೆ ಪಾಟೀಲ್ ಸೂಚಿಸಿದರು.

ಹಾವು ಕಚ್ಚಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಸಿದ್ದಪ್ಪ ಹೋರಾಟ; ಸಾವನ್ನಪ್ಪಿದ ಎನ್ನುವಾಗಲೇ ಬದುಕಿಸಿದ ಗರುಡರೇಖೆ….!

ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಸ್ಥರು….ಸಂಬಂಧಿಕರು….

ವಿಜಯಸಾಕ್ಷಿ ಸುದ್ದಿ, ಗದಗ

ವಿಷಕಾರಿ ನಾಗರಹಾವೊಂದನ್ನು ಹಿಡಿದು ಅದರ ಜೊತೆಗೆ ಹುಚ್ಚಾಟ ಆಡಿದ ವ್ಯಕ್ತಿಗೆ ರೋಷಗೊಂಡ ವಿಷಕಾರಿ ಹಾವು ಆ ವ್ಯಕ್ತಿಗೆ ನಾಲ್ಕು ಬಾರಿ ಕಚ್ಚಿದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಅಪರೂಪದ ಘಟನೆ ಜರುಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಸಿದ್ದಪ್ಪ ಎಂಬ ವ್ಯಕ್ತಿಯೇ ನಾಗರಹಾವು ಕಚ್ಚಿದರೂ ಬದುಕುಳಿದಿದ್ದಾನೆ.

ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತೀರಿಕೊಂಡ ಸಂದರ್ಭದಲ್ಲಿ ಆ ಏರಿಯಾದಲ್ಲಿ ಒಂದು ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ. ತಕ್ಷಣವೇ ಸಿದ್ದಪ್ಪ ಬರಿಗೈಯಲ್ಲಿಯೇ ಹಾವು ಹಿಡಿದಿದ್ದಾನೆ. ಗ್ರಾಮಸ್ಥರು ಎಷ್ಟೇ ಹೇಳಿದರೂ ಕೇಳದ ಸಿದ್ದಪ್ಪ, ನನ್ನ ಕೈಮೇಲೆ ಗರುಡರೇಖೆ ಇದೆ,‌ ನನಗೇನೂ ಆಗಲ್ಲ ಎಂದು ಅದರೊಂದಿಗೆ ಆಟ ಆಡಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಹಾವು ನಾಲ್ಕು ಬಾರಿ ಕಚ್ಚಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣವೇ ನರಗುಂದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಷ್ಟರಲ್ಲೆಯೇ ಹಿರೇಕೊಪ್ಪ ಗ್ರಾಮದಲ್ಲಿ ಹಾವು ಕಚ್ಚಿದ ಸಿದ್ದಪ್ಪ ಮೃತಪಟ್ಟಿದ್ದಾನೆ ಎಂದು ವದಂತಿ ಹಬ್ಬಿದೆ. ಅಷ್ಟರೊಳಗೆ ಆಸ್ಪತ್ರೆಯ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಪ್ಪ ಎದ್ದು ಕುಳಿತಿದ್ದಾನೆ ಎನ್ನಲಾಗಿದೆ.

ಸದ್ಯಕ್ಕೆ ಸಿದ್ದಪ್ಪ ಸಾವಿನ ದವಡೆಯಿಂದ ಪಾರಾದ ಸುದ್ದಿ ಗ್ರಾಮದಲ್ಲಿ ಹಬ್ಬಿದ ನಂತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಅಂತೂ ಸಿದ್ದಪ್ಪ ನಂಬಿದ ಕೈ ಮೇಲಿನ ಗರುಡರೇಖೆ ಸಿದ್ದಪ್ಪನನ್ನು ಬದುಕಿಸಿದ್ದು ಒಂದು ಪವಾಡವೇ ಸರಿ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ; ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಸಚಿವ ಎಚ್ ಕೆ ಪಾಟೀಲ್ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ

ಜನರ ಮನಸ್ಸನ್ನು ಕೆಡಿಸಿ, ಗೊಂದಲ ಸೃಷ್ಟಿಸಿ, ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿದ ಬಿಜೆಪಿಯ ಪ್ರಯತ್ನ ವಿಫಲವಾಗಲಿದೆ. ಭ್ರಷ್ಟಾಚಾರಾದ ಮೂಲಕ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದರು, ಬಡವರ ಕಲ್ಯಾಣ ಕೆಲಸಗಳನ್ನು ನಿರ್ಲಕ್ಷಿಸಿದರು. ಇದೇ ಕಾರಣಕ್ಕೆ ಬಿಜೆಪಿ ಸೋಲನುಭವಿಸುವಂತಾಯಿತು ಎಂದು ಕಾನೂನು-ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಹೇಳಿದರು.

ಗದುಗಿನಲ್ಲಿ ಶುಕ್ರವಾರ `ಅಕ್ಕಿ ಹೊಂದಿಸಲು ಕೈಲಾಗದ ಸಿಎಂ’ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರ ಪಕ್ಷದವರೇ ಆ ಸೋಲೊಪ್ಪಿಕೊಂಡಿದ್ದಾರೆ. ಅಕ್ಕಿ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ಕೇಂದ್ರ ಸರ್ಕಾರ.

ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಿ, ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಬೇಡಿ ಎಂದು ಹುರಿದುಂಬಿಸಿದ್ದೇ ರಾಜ್ಯ ಬಿಜೆಪಿ. ನೈತಿಕವಾಗಿ, ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಇದು ಸರಿಯಾ? ಬಡವರ ಕಲ್ಯಾಣ ಕಾರ್ಯಕ್ರಮವನ್ನು ಬುಡಮೇಲು ಮಾಡುವ ನಿಮ್ಮ ಪ್ರಯತ್ನಕ್ಕೆ ಸರಿಯಾದ ಉತ್ತರ ನೀಡಬೇಕು ಎಂದರು.

ಇದರಿಂದ ಆರ್ಥಿಕ ಹೊರೆಯಾಗುತ್ತದೆ ಎಂಬುದು ಸತ್ಯವಾಗಿದ್ದರೂ, ನಾವು ಅದನ್ನು ನಿಭಾಯಿಸುತ್ತೇವೆ. ನಾವೇನೂ ಬಡವರಿಗೆ ದಾನ ಮಾಡುತ್ತಿಲ್ಲ. ಬಡವರಿಗೆ ಸಿಗಬೇಕಾಗಿರುವ ಹಕ್ಕದು. ನಮ್ಮ ದೇಶದಲ್ಲಿ ಬೆವರು ಸುರಿಸಿ ದುಡಿಯುವ ಜನಕ್ಕೆ ದಾನ ಮಾಡುವ ಶಕ್ತಿ ಯಾವ ಸರ್ಕಾರಕ್ಕೂ ಇಲ್ಲ. ನಾವು ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ.

ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿಗೆ ಗೊತ್ತಾಗಿದೆ. ಹೀಗಾಗಿ, ಅಕ್ಕಿ ಕೊಡುತ್ತೇವೆಂದರೆ, ಅಕ್ಕಿಯಲ್ಲೂ ಕಲ್ಲು ಹುಡುಕುತ್ತಾರೆ. ಅಕ್ಕಿ ಬದಲು 34 ರೂ. ಕೊಡುತ್ತೇವೆಂದರೆ, 60 ಕೊಡಿ ಎಂದು ಅಸ್ತವ್ಯಸ್ತವಾಗಿ ಮಾತಾಡಲು ಪ್ರಾರಂಭಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಅಕ್ಕಿಯ ಬದಲಾಗಿ ಹಣ ಕೊಡಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ. ಐದು ಕೆಜಿ ಅಕ್ಕಿ ಕೊಡುವ ಯೋಜನೆಯನ್ನು ರೈಟ್ ಟು ಫುಡ್ ಆ್ಯಕ್ಟ್ ಅಡಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದು. ಇದೇನು ಕೇಂದ್ರ ಸರ್ಕಾರದ ಹೊಸ ಯೋಜನೆಯಲ್ಲ. ಅನ್ನಭಾಗ್ಯ ಯೋಜನೆ ಮೋದಿ ಪ್ರಧಾನಿಯಾಗುವ ಮುಂಚೆಯೇ ಜಾರಿಗೆ ಬಂದಿದೆ. ನಾವು ದುಡ್ಡು ಕೊಡುತ್ತೇವೆಂದರೂ ಗೋದಾಮಿನಲ್ಲಿ ಸಂಗ್ರಹವಿರುವ ಅಕ್ಕಿ ಕೊಡಲು ಕೇಂದ್ರ ಮುಂದಾಗುತ್ತಿಲ್ಲ.

-ಎಚ್ ಕೆ ಪಾಟೀಲ್, ಸಚಿವರು.

    ಗದಗ ಜಿಲ್ಲೆಗೆ ಮತ್ತೊಂದು ಗರಿ, ಥರ್ಡ್- ಐ ಶೀಘ್ರ ಜಾರಿ; ಕಾನೂನು ಸಚಿವ ಎಚ್ ಕೆ ಪಾಟೀಲ್

    0

    ಬೆಂಗಳೂರು ನಂತರ ಗದಗನಲ್ಲಿ ಆರಂಭ….ಸಾರ್ವಜನಿಕರ ಪ್ರಶಂಸೆ………

    ವಿಜಯಸಾಕ್ಷಿ ಸುದ್ದಿ, ಗದಗ

    ಗದಗನಲ್ಲಿ ಕಾನೂನು ವ್ಯವಸ್ಥೆ ಅತ್ಯಂತ ಸುವ್ಯವಸ್ಥಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಥರ್ಡ್ ಐ ಎಂಬ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.

    ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರದಂದು ಸೆಗ್‌ವೇ ಇಲೆಕ್ಟ್ರಿಕ್ ಬೈಕ್‌ಗಳ ಪ್ರಾಯೋಗಿಕ ಚಾಲನೆ ವೀಕ್ಷಿಸಿ ಸಚಿವ ಎಚ್.ಕೆ.ಪಾಟೀಲ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

    ಥರ್ಡ್ ಐ ಯೋಜನೆಯಲ್ಲಿ ಸೆಗ್ ವೇ ಎಲೆಕ್ಟ್ರಿಕ್ ಬೈಕ್‌ಗಳು ಸಹ ಪೊಲೀಸ್ ಇಲಾಖೆಗೆ ಸಹಕಾರಿಯಾಗಿವೆ ಎಂದರು.

    ಕಲೆ, ಸಂಸ್ಸೃತಿ, ಇತಿಹಾಸ, ಪರಂಪರೆಗೆ ಹೆಸರುವಾಸಿಯಾದ ಗದಗ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ನೆಲ. ಈ ಸ್ಥಳದಲ್ಲಿ ಕಾನೂನು ವ್ಯವಸ್ಥೆ ಉನ್ನತಮಟ್ಟದಲ್ಲಿ ಇರಬೇಕೆಂಬ ಸದುದ್ದೇಶದಿಂದ ಹಾಗೂ ಜನಸಾಮಾನ್ಯರಿಗೆ ಅನುಕೂಲ ಹಾಗೂ ಸಂರಕ್ಷಣೆಗಾಗಿ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಥರ್ಡ್ ಐ ಯೋಜನೆ ಜಾರಿಗೊಳಿಸಲಾಗುತ್ತಿದೆ.

    ಶಾಂತಿಯುತ, ಸುರಕ್ಷಿತ ಗದಗಿಗಾಗಿ ಥರ್ಡ್ ಐ ಸ್ಮಾರ್ಟ್ ಪೊಲೀಸ್ ಫಾರ್ ಸೇಫ್ ಗದಗ ಬೆಟಗೇರಿ ಯೋಜನೆಯ ಕಾಮಗಾರಿ ಈಗಾಗಲೇ ಆರಂಭಿಸಲಾಗಿದ್ದು, ಹಂತ ಹಂತವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿ ಜಾರಿಗೊಳಿಸಲಾಗುತ್ತಿದೆ.

    ಈಗಾಗಲೇ ಪೊಲೀಸ್ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಕಮಾಂಡ್ ಸೆಂಟರ್, ಟ್ರಾಫಿಕ್ ಮ್ಯಾನ್ಭೆಜ್‌ಮೆಂಟ್, ಕ್ರೈಂ ಮುಂಜಾಗ್ರತೆಗಾಗಿ ಕ್ರ್ರಮವಹಿಸಿದೆ. ಗದಗ ಬೆಟಗೇರಿ ನಗರದ ಪ್ರಮುಖ ೪೪ ಸ್ಥಳಗಳಲ್ಲಿ ಬುಲೆಟ್ ಕ್ಯಾಮರಾ ಅಳವಡಿಸಿದೆ. ೪೦ ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸಿದ್ದು ೧೫ ಎಎಂಪಿಆರ್ ಸಿಸಿ ಟಿವಿ ಜೋಡಿಸಲಾಗಿದೆ. ಇದರಿಂದ ಒಟ್ಟಾರೆ ೪೫ ಸ್ಥಳಗಳನ್ನು ಕುಳಿತಲ್ಲಿಯೇ ನಿಗಾವಹಿಸಲಾಗುತ್ತಿದೆ. ಗದಗ ಬೆಟಗೇರಿ ನಗರಕ್ಕೆ ಬರುವ ಪ್ರತಿ ವಾಹನದ ಚಲನವಲನಗಳನ್ನು, ಮಾರ್ಗಗಳನ್ನು ವೀಕ್ಷಣೆ ಮಾಡಲು ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಇವುಗಳು ೩೬೦ ಡಿಗ್ರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಸೂಕ್ಷ್ಮ ಅತಿಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

    ನಗರೋತ್ಥಾನ, ಶಾಸಕರ ಅನುದಾನ, ಪ್ರವಾಸೋದ್ಯಮ ಇಲಾಖೆ, ನಗರಸಭೆಯಿಂದ ಅಗತ್ಯದ ಹಣಕಾಸಿನ ನೆರವು ಒದಗಿಸಲಾಗುವುದು. ಈಗಾಗಲೇ ಈ ಯೋಜನೆಗೆ ೧.೫೦ ಕೋಟಿ ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ೧.೫೦ ಕೋಟಿ ರೂ. ಅನುದಾನವನ್ನು ಶೀಘ್ರವೇ ನೀಡಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು. ಇದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ , ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದರು.

    ಥರ್ಡ್ ಐ ಯೋಜನೆಯನ್ನು ಬೆಂಗಳೂರು ಹೊರತುಪಡಿಸಿದರೆ ಗದಗನಲ್ಲಿಯೇ ಆರಂಭಿಸುತ್ತಿರುವುದು ವಿಶೇಷವಾಗಿದೆ. ಈ ಯೋಜನೆಯ ಅನುಷ್ಟಾನಗೊಳಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅವರ ಶ್ರಮ ಹಾಗೂ ಸಹಕಾರ ನಿರಂತರವಾಗಿದೆ ಎಂದರು.

    ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ವಾರ್ತಾಧಿಕಾರಿ ವಸಂತ ಬಿ ಮಡ್ಲೂರ ಉಪಸ್ಥಿತರಿದ್ದರು.

    ಆಸ್ತಿ ವಿವಾದ; ಒಡಹುಟ್ಟಿದ ತಮ್ಮನ್ನನ್ನೆ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಸಹೋದರ, ಕೊಡಲಿ ಸಮೇತ ಠಾಣೆಗೆ ಶರಣಾಗತಿ….?

    ಹುಬ್ಬಳ್ಳಿಯ ಬಿಆರ್ ಟಿಸಿಯಲ್ಲಿ ಡ್ರೈವರ್ ಆಗಿದ್ದ ಶೇಕಪ್ಪ………

    ವಿಜಯಸಾಕ್ಷಿ ಸುದ್ದಿ, ಗದಗ

    ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ತಮ್ಮನನ್ನೇ ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.

    ಗದಗ ಜಿಲ್ಲೆಯ ರೋಣ ಪಟ್ಟಣದ ಬಳಿಯ ಜಮೀನಿನಲ್ಲಿ ಇಂದು ಮಧ್ಯಾಹ್ನ ಜರುಗಿದ್ದು, ಶೇಕಪ್ಪ ನವಲಗುಂದ (36) ಎಂಬಾತನೇ ಕೊಲೆಗೀಡಾದ ವ್ಯಕ್ತಿ.

    ಮೃತ ಶೇಕಪ್ಪ ಹುಬ್ಬಳ್ಳಿಯ ಬಿ ಆರ್ ಟಿಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

    ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಕಲಹ ನಡೆದಿತ್ತು ಎನ್ನಲಾಗಿದ್ದು, ಇಂದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಕಂಡಿದೆ.

    ಕೊಲೆಗೈದ ಆರೋಪಿ ಕೊಡಲಿ ಸಮೇತ ಠಾಣೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸುದ್ದಿ ತಿಳಿದು ರೋಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

    error: Content is protected !!