Home Blog Page 3254

ಶಿರಹಟ್ಟಿ ಸಬ್ ರಜಿಸ್ಟಾರ್ ಕಚೇರಿ ದಲ್ಲಾಳಿಗಳ ಹಾಟ್‌ಸ್ಪಾಟ್…..?

0
  • ಶಿಸ್ತು ಕ್ರಮ ಜರುಗಿಸುವಂತೆ ಪ್ರಭಾರಿ ಸಬ್ ರಿಜಿಸ್ಟಾರ್‌ರಿಂದ ತಹಸೀಲ್ದಾರರಿಗೆ ಮನವಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಆಡಳಿತದಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆಯೊಂದಿಗೆ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ನೋಂದಣಿ ಪ್ರಕ್ರಿಯೆಗಳು ಮುಗಿದು ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಸರಕಾರ ಇತ್ತೀಚೆಗೆ ನೊಂದಣಿ ಇಲಾಖೆಯಲ್ಲಿ ಆನ್‌ಲೈನ್ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ.

ಆದರೆ ಶಿರಹಟ್ಟಿ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಇತ್ತೀಚಿನ ದಿನಗಳಲ್ಲಿ ದಲ್ಲಾಳಿಗಳ ಹಾಟ್‌ಸ್ಪಾಟ್ ಆಗಿ ಮಾರ್ಪಡುತ್ತಿರುವ ಬಗ್ಗೆ ಸ್ವತಃ ಪ್ರಭಾರಿ ಉಪನೋಂದಣಾಧಿಕಾರಿಗಳೇ ಇಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಹಸೀಲ್ದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

ಶಿರಹಟ್ಟಿ ಕಚೇರಿ ಅಧೀನದಲ್ಲಿ ಬರುವ ಜಿಲ್ಲಾ ದಸ್ತು ಬರಹಗಾರರ ಕೈ ಕೆಳಗೆ ಕೆಲಸ ಮಾಡುತ್ತಿರುವ ಖಾಸಗಿ ವ್ಯಕ್ತಿಗಳು ದಲ್ಲಾಳಿಗಳಂತೆ ಕೆಲಸ ಮಾಡುತ್ತಿದ್ದು, ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ. ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಿಂದ ಕಚೇರಿಯ ಹೆಸರಿಗೆ ಧಕ್ಕೆ ಉಂಟುಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ರೈತರಿಂದ ೫೦೦, ೧೦೦೦, ೧೫೦೦ ರೂ.ಗಳಂತೆ ಉಪ ನೋಂದಣಾಧಿಕಾರಿಗೆ ಕೊಡಬೇಕೆಂದು ಹೇಳಿ ಹಣ ವಸೂಲಿ ಮಾಡುತ್ತಿದ್ದಾರೆ.

ಮುದ್ರಾಂಕ ಕಾಯ್ದೆ ೧೯೫೭ರ ಪ್ರಕಾರ ಇವರ ಮೇಲೆ ಶಿಸ್ತು ಕ್ರಮ ಜಾರಿಗೊಳಿಸಿ ದಲ್ಲಾಳಿ ಹಾವಳಿ ತಪ್ಪಿಸಬೇಕೆಂದು ಮನವಿ ಮೂಲಕ ಶಿರಹಟ್ಟಿ ಪ್ರಭಾರಿ ಸಬ್ ರಜಿಸ್ಟಾರ್ ವಿನಂತಿಸಿದ್ದಾರೆ.

ಶಿರಹಟ್ಟಿ ಸಬ್ ರಜಿಸ್ಟಾರ್ ಕಚೇರಿಗೆ ನಿತ್ಯವೂ ಗ್ರಾಮೀಣ ಪ್ರದೇಶಗಳಿಂದ ಸಾರ್ವಜನಿಕರು ವಿವಿಧ ಕೆಲಸ-ಕಾರ್ಯಗಳಿಗೆ ಆಗಮಿಸುತ್ತಾರೆ. ಕಚೇರಿಯಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಜನತೆಯನ್ನು ನಂಬಿಸಿ ಅವರಿಂದ ಒಂದೊಂದು ಕಾಗದಕ್ಕೆ ಇಂತಿಷ್ಟು ಹಣ ಎಂದು ನಿಗದಿ ಮಾಡಿಕೊಂಡು ಸರಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದಾರೆ.

ಅಮಾಯಕರನ್ನು ಸತಾಯಿಸುವುದು ಮತ್ತು ಕಚೇರಿಯ ಸಿಬ್ಬಂದಿಗಳು ಸಹ ದಲ್ಲಾಳಿಗಳೊಂದಿಗೆ ಸಂಪರ್ಕ ಹೊಂದಿ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಬಗ್ಗೆ ಸಹ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಇಲ್ಲಿಯ ಆಡಳಿತ ವ್ಯವಸ್ಥೆಗೆ ಹಿಡಿಶಾಪವನ್ನು ಹಾಕುತ್ತಾ ದುಡ್ಡು ಕೊಟ್ಟಾದರೂ ಸರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕಚೇರಿಯ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶ ಸಾಧಿಸುತ್ತಿರುವ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಹಾಗೂ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಶಿರಹಟ್ಟಿಯ ಸಬ್ ರಜಿಸ್ಟಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ, ದಲ್ಲಾಳಿಗಳ ಬಗ್ಗೆ ಗಮನಹರಿಸಿ, ಸಾರ್ವಜನಿಕರಿಗೆ ಇಲ್ಲಿ ಪಾರದರ್ಶಕವಾಗಿ ಮತ್ತು ತ್ವರಿತಗತಿಯಲ್ಲಿ ಕೆಲಸ-ಕಾರ್ಯಗಳು ನಡೆಯುವಂತೆ ಕ್ರಮ ಕೈಕೊಳ್ಳಬೇಕೆಂಬ ಒತ್ತಾಯಗಳು ಕೇಳಿಬಂದಿವೆ.

ಲೈಸನ್ಸ್ ಹೋಲ್ಡರ್‌ಗಳಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗುವುದು. ತಪ್ಪು ಮಾಡಿದ್ದು ಕಂಡು ಬಂದಲ್ಲಿ ಅಂಥವರ ಲೈಸನ್ಸ್ ರದ್ದುಪಡಿಸಲು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.

-ಅನಿಲ ಬಡಿಗೇರ. ತಹಸೀಲ್ದಾರ. ಶಿರಹಟ್ಟಿ

ಅತ್ಯಾಚಾರದ ಆರೋಪಿಗೆ 25 ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ…..

ಅಪ್ರಾಪ್ತ ಬಾಲಕಿಯನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ ಆರೋಪ ಸಾಬೀತು

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆಯೋರ್ವಳನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿ, ಜೀವ ಬೆದರಿಕೆ ಹಾಕಿದ್ದ ಆರೋಪಿತನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಅಪರಾಧಿಗೆ ಶಿಕ್ಷೆ ವಿಧಿಸಿದೆ.

ಪ್ರಕರಣದ ಆರೋಪಿ, ಸವದತ್ತಿ ತಾಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ ಇಮಾಮಸಾಬ ದೊಡ್ಡಮನಿ ನೊಂದ ಬಾಲಕಿಯು ಅಪ್ರಾಪ್ತೆಯೆಂದು ತಿಳಿದಿತ್ತು.
ಹೀಗಿದ್ದರೂ, ಅವಳಿಗೆ ಪ್ರಾಣ ಬೆದರಿಕೆ ಹಾಕಿ, ಒತ್ತಾಯಪೂರ್ವಕವಾಗಿ ಸವದತ್ತಿ ತಾಲೂಕಿನ ಮುನವಳ್ಳಿಗೆ ಕರೆದುಕೊಂಡು ಹೋಗಿ, ಅಲ್ಲಿಂದ ಬೈಕ್‌ನಲ್ಲಿ ಹತ್ತಿಸಿಕೊಂಡು ನರಗುಂದ-ಮುನವಳ್ಳಿ ರಸ್ತೆಯ ಸಿಂದೋಗಿ ಕ್ರಾಸ್ ಬಳಿಯ ಮನೆಗೆ ಕರೆದುಕೊಂಡು ಹೋಗಿದ್ದ.

ಅಲ್ಲಿ ಅವಳನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಯಾರಿಗಾರದೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಅಪರಾಧ: 152/2018, ಕಲಂ 376(ಎಬಿ) ಐಪಿಸಿ ಕಲಂ 5(ಎಚ್) ಪೋಕ್ಸೋ ಕಾಯ್ದೆ 2012 ಪ್ರಕಾರ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಶ್ರೀನಿವಾಸ ಸಿ ಮೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 27.7.2018ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಸ್ತುತ ಅಪರಾಧವು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಕಲಂ 366ರಡಿ 5 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಕಲಂ 506ರ ಅಡಿ 3 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ರೂ ದಂಡ, ಕಲಂ 376(ಎಬಿ) ರೆ/ವಿ ಕಲಂ 5(ಎಚ್)(ಎಂ), ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಹಾಗೂ 50 ಸಾವಿರ ರೂ ದಂಡ ಕಟ್ಟಲು ಆದೇಶ ನೀಡಲಾಗಿದೆ.

ಒಂದು ವೇಳೆ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಎರಡು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿಯವರು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ಅವರು ವಾದ ಮಂಡಿಸಿದ್ದರು.

ಕನ್ಯಾ ಸಿಗದೇ ಮನನೊಂದ ರೈತ; ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

ಐದು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ರೈತ……

ವಿಜಯಸಾಕ್ಷಿ ಸುದ್ದಿ, ಹಾವೇರಿ

ಕಳೆದ ಮೂರು-ನಾಲ್ಕು ವರ್ಷಗಳ ಕಾಲ ಮದುವೆ ಆಗಲು ಕನ್ಯೆ ಸಿಗದೇ ಮನನೊಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಮಂಜು ತಂದೆ ರುದ್ರಪ್ಪ ನಾಗನೂರ (36) ಎಂಬಾತನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ರೈತ.

ಮೃತ ರೈತ ಮಂಜು ಎಂಬಾತ ಕಳೆದ 3-4 ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಕನ್ಯೆ ಹುಡುಕಾಟ ನಡೆಸಿದ್ದ. ಆದರೆ ಯಾವುದೇ ಕನ್ಯೆ ‌ಸಿಗದೇ ಇರುವುದರಿಂದ ಜೀವನದಲ್ಲಿ ತುಂಬಾ ನೊಂದುಕೊಂಡಿದ್ದ. ಅಷ್ಟೇ ಅಲ್ಲದೆ ತನ್ನ ತಂದೆ-ತಾಯಿಗೆ ಅಡುಗೆ ಮಾಡಲು ತೊಂದರೆ ಆಗುತ್ತಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಮಂಜು, ಜೂನ್ 15ರಂದು ಬೆಳಗಿನ ಜಾವ ಮನೆಯಲ್ಲಿ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ. ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಚಿಕಿತ್ಸೆಗಾಗಿ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಐದು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ರೈತ ಮಂಜು ಜೂನ್. 20 ರಂದು ಮಧ್ಯಾಹ್ನ ಮೃತಪಟ್ಟಿದ್ದಾನೆ.

ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವಾರವಷ್ಟೆ ಕನ್ಯೆ ಹುಡುಕಿ ಕೊಡಲು ಗ್ರಾಮ ಪಂಚಾಯತಿ ಪಿಡಿಒಗೆ‌ ಮನವಿ ಕೊಟ್ಟು ರಾಜ್ಯಾದ್ಯಂತ ಸುದ್ದಿ ಆಗಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕನ ಸುದ್ದಿ ಮಾಸವು ಮುನ್ನವೇ ಹಾವೇರಿ ಜಿಲ್ಲೆಯ ಯುವಕ ವಿಷ ಸೇವಿಸಿ ಮೃತಟ್ಟಿದ್ದು ದುರಂತವೇ ಸರಿ.

ಹಗಲಲ್ಲಿ ಕೆಇಬಿ ದಿನಗೂಲಿ ಕೆಲಸಗಾರರು, ರಾತ್ರಿ ವಿದ್ಯುತ್ ತಂತಿ ಕಳ್ಳರು!

ರೈತರ ಜಮೀನುಗಳಲ್ಲಿ ವಿದ್ಯುತ್ ತಂತಿ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ…

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ರೈತರ ಜಮೀನುಗಳಲ್ಲಿ ಲಕ್ಷಾಂತರ ರೂ ಮೌಲ್ಯದ ಅಲ್ಯೂಮಿನಿಯಂ ವಿದ್ಯುತ್ ತಂತಿ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸುವ ಮೂಲಕ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ರೈತರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ರೈತರ ಭೂಮಿಗಳಲ್ಲಿನ ಬೆಲೆಬಾಳುವ ಕೇಬಲ್, ವೈರ್‌ಗಳು ಕಳ್ಳತನವಾಗುತ್ತಿರುವ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಪಿಐ ಮಾರ್ಗದರ್ಶನದಲ್ಲಿ ಪಟ್ಟಣದ ಪಿಎಸ್‌ಐ ಯೊಸೆಫ್ ಜಮೂಲಾ, ವ್ಹಿ ಜಿ ಪವಾರ ನೇತೃತ್ವದ ಪೊಲೀಸರ ತಂಡ ಕಳ್ಳರ ಚಲನವಲನ ಪತ್ತೆ ಮಾಡಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಎಎಸ್‌ಐ ಎನ್ ಎ ಮೌಲ್ವಿ, ಸಿಬ್ಬಂದಿಗಳಾದ ಎಂ ಡಿ ಲಮಾಣಿ, ಡಿ ಎಸ್ ನಧಾಪ್, ಜಿ ಆರ್ ಗ್ರಾಮಪುರೋಹಿತ ಅವರು ಹೂವಿನಶಿಗ್ಲಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಮೂವರು ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 880 ಕೆಜಿ ತೂಕದ ಅಂದಾಜು 2ಲಕ್ಷ 47 ಸಾವಿರ ರೂ ಬೆಲೆಬಾಳುವ ಅಲ್ಯೂಮಿನಿಯಂ ತಂತಿ ಮತ್ತು ಕೃತ್ಯಕ್ಕೆ ಬಳಸಿದ ಸುಮಾರು ೨ ಲಕ್ಷ ೫೦ ಸಾವಿರ ರೂ ಕಿಮ್ಮತ್ತಿನ ಟಾಟಾ ಏಸ್ ವಾಹನ ಜಪ್ತ್ ಮಾಡಿದ್ದಾರೆ.

ಬಂಧಿತರಾದ ಮಂಜುನಾಥ ಶೆಟ್ಟೆಣ್ಣವರ(31), ಜಗದೀಶ ಹನಮಂತಪ್ಪ ಕನಕಮ್ಮನವರ(22), ತಿಪ್ಪಣ್ಣ ಮಲಕಪ್ಪ ಕಾಳೆ(30) ಮೂವರು ಹೂವಿನಶಿಗ್ಲಿ ಗ್ರಾಮದವರಾಗಿದ್ದು ಕೆಇಬಿಯಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇವರು ಸಮೀಪದ ನಾರಾಯಣಪೂರ, ಸುಗ್ನಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಈ ಕೃತ್ಯವನ್ನು ನಡೆಸಿದ್ದಾರೆ.

ಎಎಸ್‌ಐ ಟಿ ಕೆ ರಾಥೋಡ, ವಾಯ್ ಎಸ್ ಕೂಬಿಹಾಳ, ಜಿ ಎಂ ಬೂದಿಹಾಳ ಸಿಬ್ಬಂದಿಗಳ ಕಾರ್ಯಕ್ಕೆ ಮೇಲಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶಿರಹಟ್ಟಿ ಕ್ಷೇತ್ರದ ಸೋತ-ಗೆದ್ದವರ ನಡುವೆ ಜಟಾಪಟಿ; ರೂಮ್ ಗಾಗಿ ಶಾಸಕ-ಡಾ.ಚಂದ್ರು ಲಮಾಣಿ- ಕಾಂಗ್ರೆಸ್ ನಾಯಕಿ ಸುಜಾತ ದೊಡ್ಡಮನಿ ‌ಮಧ್ಯೆ ವಾಗ್ವಾದ….

ವಿಜಯಸಾಕ್ಷಿ ಸುದ್ದಿ, ಗದಗ

ಐಬಿ ರೂಮ್ ಗಾಗಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಸುಜಾತ ದೊಡ್ಡಮನಿ ಮಧ್ಯೆ ಜಟಾಪಟಿ ನಡೆದ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ.

ಮುಂಡರಗಿ ಪಟ್ಟಣದ ಪಿಡಬ್ಯ್ಲೂಡಿ ಇಲಾಖೆಗೆ ಸೇರಿದ ಐಬಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತ ದೊಡ್ಡಮನಿ, ತಮ್ಮ ಕಾರ್ಯಕರ್ತರ ಜೊತೆಗೆ ಸೇರಿದ್ದರು.

ಆಗ ಹಠಾತ್ ಎಂಟ್ರಿಯಾದ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಬಿಜೆಪಿ ಮುಖಂಡರು, ಇದು ನನಗೆ ಸೇರಿದ ರೂಮ್. ಇಲ್ಲಿಂದ ನೀವು ಹೊರಗೆ ಹೋಗಿ ಎಂದು ಹೇಳಿದ್ದಾರೆ. ಇದರಿಂದಾಗಿ ಕೆರಳಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸುಜಾತ ದೊಡ್ಡಮನಿ ಹಾಗೂ ಬೆಂಬಲಿಗರು ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಾತಿಗೆ ಮಾತು ಬೆಳೆದು ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಶಾಸಕ ಡಾ.ಚಂದ್ರು ಲಮಾಣಿ ನೀವು ವಸೂಲಿಗಾಗಿ ಬಂದಿದ್ದೀರಿ ಎಂದು ಜರಿದಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ಸುಜಾತ ದೊಡ್ಡಮನಿ ಹಾಗೂ ಬೆಂಬಲಿಗರು ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಜಟಾಪಟಿ ನಡೆದ ದೃಶ್ಯ ಇಲ್ಲಿದೆ ನೋಡಿ……

ಅಂದರ್-ಬಾಹರ್‌ ಜೂಜಾಟದಲ್ಲಿ ತೊಡಗಿದ್ದ ವರ್ತಕರು ಸೇರಿ ಎಂಟು ಜನರ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ತಮ್ಮ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್‌ ಜೂಜಾಟದಲ್ಲಿ ತೊಡಗಿದ್ದ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೂನ್ 1ರಂದು ಸಂಜೆ 6.45ರ ಸುಮಾರಿಗೆ ಗಂಗಿಮಡಿಯಿಂದ ಹಿರೇಹಂದಿಗೋಳ ಗ್ರಾಮದ ಕಡೆ ಮುಂದುವರೆದ ರಸ್ತೆಯ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದರು.

ನಗರದ ನೀಲಮ್ಮ ಗುಡಿ ಬಳಿಯ ನಿವಾಸಿ ಶ್ರೀಶೈಲಯ್ಯ ರಾಚಯ್ಯ ವಸ್ತ್ರದ, ಖಾನತೋಟದ ವಿನೋದ ಗ್ಯಾನೋಸಾ ಬದ್ದಿ, ಬಾಲಾಜಿ ನಗರದ ರಾಜು ಮೋಹನಸಾ ಬಾಕಳೆ, ಶ್ರೀನಿವಾಸ ರಾಮಣ್ಣ ಬಾಂಡಗೆ, ಜೋಡ ಮಾರುತಿ ದೇವಸ್ಥಾನ ಬಳಿಯ ಪರಶುರಾಮ ಭೋಜರಾಜಸಾ ದಲಭಂಜನ, ಕಳಸಾಪುರ ರಸ್ತೆ ಬಳಿಯ ಕುಬೇರಪ್ಪ ಪರಸಪ್ಪ ಚಳ್ಳಮರದ, ಶಾಲೆ ನಂ.1ರ ಬಳಿಯ ನಿವಾಸಿ ಅಕ್ಬರಸಾಬ್‌ ಗಫರಸಾಬ್‌ ನರೇಗಲ್‌ ಹಾಗೂ ಖಿಲ್ಲಾ ಓಣಿಯ ರವಿ ಕೌಸಕುಮಾರ ಚವ್ಹಾಣ ಈ 8 ಜನ ಆರೋಪಿಗಳು ಅಂದರ್-ಬಾಹರ್‌ ಆಟದಲ್ಲಿ ತೊಡಗಿದ್ದರು.

ಗದಗ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿದ್ದು, ಇವರಿಂದ ಆಟಕ್ಕೆ ಬಳಸಿದ ಇಸ್ಪೀಟ್‌ ಕಾರ್ಡ್‌ ಹಾಗೂ 10,500 ರೂ ನಗದು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಅಪರಾಧ:0147/2023, ಕೆಪಿ ಕಾಯ್ದೆ 1963ರ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು, 25 ಸಾವಿರ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಇಒ) 5 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಯ ಮುಂಡರಗಿಯ ಪಟ್ಟಣದಲ್ಲಿ 2020 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕ್ರಪ್ಪ ನಿಂಗಪ್ಪ ಹಳ್ಳಿಗುಡಿ ಶಿಕ್ಷೆಗೆ ಗುರಿಯಾದ ಅಧಿಕಾರಿ.

ಮುಂಡರಗಿಯಲ್ಲಿ ಬಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಮನೆ ಭೇಟಿ ಕಾರ್ಯಕ್ರಮದ ನೆಪದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ 29/2020 ಕಲಂ 354(ಎ) 8,10,12 ಐ.ಪಿ.ಸಿ ಕಲಂ ಪೋಕ್ಸೋ ಕಾಯ್ದೆ 2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ಎಂ ಬೆಂಕಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ, 21-3-2020ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ ಆರೋಪಿ ಅಂದಿನ ಬಿಇಒ ಶಂಕ್ರಪ್ಪ ನಿಂಗಪ್ಪ ಹಳ್ಳಿಗುಡಿ ಅವರು ಮಾಡಿದ ಅಪರಾಧವು ರುಜುವಾತಾಗಿದ್ದರಿಂದ ಸದರಿ ಆರೋಪಿಗೆ 5 ವರ್ಷ ಜೈಲು, 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಹಣ ಕೊಡಲುತಪ್ಪಿದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆ ವಿಧಿಸಿ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರ ಶೆಟ್ಟಿ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಅಮರೇಶ್ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.

ಹೊರಟ್ಟಿಯವರ `ನಿಸರ್ಗ ಫಾರ್ಮ್’ಗೆ ನಟ ರಿಷಬ್ ಶೆಟ್ಟಿ ಭೇಟಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಎಲ್ಲರೊಂದಿಗೂ ಒಂದಾಗುವ ವ್ಯಕ್ತಿತ್ವವುಳ್ಳ ಸಭಾಪತಿ ಬಸವರಾಜ ಹೊರಟ್ಟಿ ಅವರ ನೆಚ್ಚಿನ ನಿಸರ್ಗ ಫಾರ್ಮ್ ಗೆ ಕನ್ನಡದ ಚಿತ್ರರಂಗದ ಖ್ಯಾತ ನಾಯಕ ನಟ ರಿಷಬ್ ಶೆಟ್ಟಿ ಭೇಟಿ ನೀಡಿ, ಬಸವರಾಜ್ ಹೊರಟ್ಟಿ ಅವರ ಕೃಷಿ ಪ್ರೇಮದ ಕುರಿತು ಅಚ್ಚರಿ ವ್ಯಕ್ತಪಡಿಸಿದರು.

ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಮಾಜಮುಖಿ ಸೇವೆಯೊಂದಿಗೆ ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆ ತಂದಿರುವ ಹೊರಟ್ಟಿ ಅವರ ಕೃಷಿ ಚಟುವಟಿಕೆಗಳ ಬಗ್ಗೆ, ಹೈನುಗಾರಿಕೆ ಬಗ್ಗೆ, ದನ-ಕರಗಳ ಬಗ್ಗೆ, ಇನ್ನಿತರ ಪ್ರಾಣಿ-ಪಕ್ಷಿಗಳ ಕುರಿತ ಅವರ ಆಸಕ್ತಿಯ ಕುರಿತು ತಿಳಿದುಕೊಂಡು ಖುಷಿಪಟ್ಟ ರಿಷಬ್ ಶೆಟ್ಟಿ, ತಾವು ಕೃಷಿಯ ಬಗ್ಗೆ ಇರುವ ಪ್ರೀತಿ-ಆಸಕ್ತಿಯ ಬಗ್ಗೆಯೂ ಹೊರಟ್ಟಿ ಅವರೊಂದಿಗೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್, ಹೊರಟ್ಟಿ ಅವರ ನಾಲ್ಕು ದಶಕಗಳ ರಾಜಕಾರಣದ ಬಗ್ಗೆ, ಅವರ ಹೋರಾಟಗಳ ಬಗ್ಗೆ, ಶಿಕ್ಷಕರ ಪರ ಇರುವ ಅವರ ಕಾಳಜಿ ಕುರಿತು ರಿಷಬ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದರು.

ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಆಯ್ಕೆಯಾಗುವುದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹೇಗೆ ಸಾಧ್ಯ ಎಂದು ಅಚ್ಚರಿ ವಕ್ತಪಡಿಸಿದರು.

ಟಿಪ್ಪರ್ ಹಾವಳಿಗೆ ಬೇಸತ್ತ ಸಾರ್ವಜನಿಕರು; ಟಿಪ್ಪರ್ ಸಂಚಾರಕ್ಕೆ ತಡೆವೊಡ್ಡಿ ಪ್ರತಿಭಟನೆ

0

ಬೇರೆ ಮಾರ್ಗದಲ್ಲಿ ಸಂಚಾರಕ್ಕೆ ಒತ್ತಾಯ…….

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಪ್ರತಿನಿತ್ಯ ಸಂಚರಿಸುವ ಟಿಪ್ಪರ್‌ಗಳ ಹಾವಳಿಯಿಂದ ಬೇಸತ್ತ ಮಹಿಳೆಯರು ಸೋಮವಾರ ಟಿಪ್ಪರ್‌ಗಳನ್ನು ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಚನ್ನಮ್ಮ ಹೋರಿ, ರೇಶ್ಮಾ ನದಾಫ್, ಚನ್ನಪಟ್ಟಣ ರಸ್ತೆ ಮೂಲಕ ಗ್ರಾಮದ ಹೊರವಲಯದಿಂದ ಆಗಮಿಸುವ ನೂರಾರು ಟಿಪ್ಪರ್‌ಗಳು ಓಡಾಡುತ್ತಿರುವದರಿಂದ ಹಗಲು-ರಾತ್ರಿ ಜೀವಭಯದಲ್ಲಿ ಜೀವನವನ್ನು ನಡೆಸುತ್ತಿದ್ದೇವೆ.

ಇದೇ ರಸ್ತೆಯಲ್ಲಿ 3 ಅಂಗನವಾಡಿ ಕೇಂದ್ರಗಳಿದ್ದು, ಇಕ್ಕಟ್ಟಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿರುವ ಟಿಪ್ಪರ್‌ಗಳಿಂದ ತುಂಬಾ ತೊಂದರೆಯಾಗುತ್ತಿದೆ. ಚಿಕ್ಕಮಕ್ಕಳಿಗೆ ಧೂಳಿನಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಆದ್ದರಿಂದ ಈ ರಸ್ತೆಯಲ್ಲಿ ಟಿಪ್ಪರ್ ಸಂಚಾರ ಸ್ಥಗಿತಗೊಳಿಸಿ ಪರ್ಯಾಯ ರಸ್ತೆಯ ಮೂಲಕ ಸಂಚಾರ ಮಾಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಾ ಪಂ ಪಿಡಿಓ ಲಿಖಿತ ರೂಪದಲ್ಲಿ ಮನವಿ ನೀಡಿದರೆ, ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಇದೀಗ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಹೇಳಿದರು. ಇದಕ್ಕೆ ಮಹಿಳಾ ಪ್ರತಿಭಟನಾಕಾರರು, ಇದೀಗ ತಡೆದು ನಿಲ್ಲಿಸಿರುವ ಟಿಪ್ಪರ್‌ಗಳನ್ನು ಬಿಡುತ್ತೇವೆ. ತದನಂತರ ಬರುವ ಟಿಪ್ಪರ್‌ಗಳನ್ನು ಬಿಡುವದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಮೇಶ ಕೋಳಿವಾಡ, ಮಲ್ಲಮ್ಮ ಆಲೂರ, ಶರೀಫಮ್ಮ ನದಾಫ್, ಕೃಷ್ಣಮ್ಮ ದಾಸರ, ನೀಲಮ್ಮ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಗುಡುಗು-ಸಿಡಿಲಿನ ಮಳೆ; ಸಿಡಿಲಿಗೆ ಹೊತ್ತಿ ಉರಿದ ತೆಂಗಿನಮರ…!

0

ಇಳೆಗೆ ತಂಪೆರೆದ ಮಳೆ: ರೈತರ ಮೊಗದಲ್ಲಿ ಮಂದಹಾಸ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮುಂಗಾರಿನ ಮುಖ್ಯ ಮಳೆಗಳು ಸಂಪೂರ್ಣ ವಿಫಲವಾಗಿದ್ದರಿಂದ ಚಿಂತೆಗೀಡಾಗಿದ್ದ ರೈತ ಸಮುದಾಯಕ್ಕೆ ಸೋಮವಾರ ಸಂಜೆ ಗುಡುಗು-ಸಿಡಿಲಬ್ಬರದೊಂದಿಗೆ ಸುರಿದ ಹದವಾದ ಮಳೆ ಲಕ್ಷ್ಮೇಶ್ವರ ಸೇರಿ ಸುತ್ತಲಿನ ಗ್ರಾಮಗಳ ರೈತರಲ್ಲಿ ಸಂತಸ ಮೂಡಿಸಿದೆ.

ಗುಡುಗು-ಸಿಡಿಲಿನ ಅಬ್ಬರಕ್ಕೆ ಜನರು ಕೆಲಕಾಲ ಬೆಚ್ಚಿದರು. ಪಟ್ಟಣದ ಕೆಂಚಲಾಪುರ ಓಣಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಹೊತ್ತಿ ಉರಿದು ಆತಂಕ ಮೂಡಿಸಿತು. ಒಂದು ಗಂಟೆ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಹಳ ದಿನಗಳ ನಂತರ ಸುರಿದ ಮಳೆಯಿಂದ ಕೊಳಚೆ, ತ್ಯಾಜ್ಯದಿಂದ ಕೂಡಿದ್ದ ಚರಂಡಿ ನೀರು ಅನೇಕ ಕಡೆ ರಸ್ತೆಗೆ ಹರಿದು ಸಂಚಾರಕ್ಕೆ ಅಡಚಣೆಯಾಯಿತು.

ರೋಹಿಣಿ ಮಳೆ ಸಂಪೂರ್ಣ ಕೈಕೊಟ್ಟು, ಮುಂಗಾರಿನ ಬಹುತೇಕ ಬಿತ್ತನೆ ಕುಂಠಿತವಾಗಿದೆ. ಮೃಗಶಿರ ಮಳೆಗಾಗಿ ಗುರ್ಜಿ ಪೂಜೆ, ಬಿಂದಿಗೆ ಪೂಜೆ, ಜಲಾಭಿಷೇಕ, ಕಪ್ಪೆ, ಗೊಂಬೆ ಮದುವೆ ಇನ್ನಿತರ ಧಾರ್ಮಿಕ ಸಂಪ್ರದಾಯಗಳನ್ನು ಮಾಡುತ್ತ ಮುಗಿಲಿನತ್ತ ನೋಡುತ್ತಿದ್ದರು. ಸೋಮವಾರ ಸುರಿದ ಮಳೆ ರೈತ ಸಮುದಾಯಕ್ಕೆ ಖುಷಿ ತಂದಿದೆ.

ಸಂಜೆ 6ಕ್ಕೆ ಪ್ರಾರಂಭವಾದ ಮಳೆ 2 ಗಂಟೆಗಳ ಕಾಲ ಲಕ್ಷ್ಮೇಶ್ವರವೂ ಸೇರಿ ಆದ್ರಳ್ಳಿ, ಬಟ್ಟೂರ, ಬಡ್ನಿ, ಕುಂದ್ರಳ್ಳಿ, ಗೊಜನೂರ, ರಾಮಗೇರಿ, ಶಿಗ್ಲಿ, ಅಕ್ಕಿಗುಂದ, ಅಡರಕಟ್ಟಿ, ಮಂಜಲಾಪುರ ಮತ್ತಿತರರ ಕಡೆ ಹದವಾಗಿ ಸುರಿಯಿತು.

ಒಟ್ಟಿನಲ್ಲಿ ಮಳೆಗಾಗಿ ಮುಗಿಲಿನತ್ತ ಚಿತ್ತ ನೆಟ್ಟಿದ್ದ ಈ ಭಾಗದ ರೈತ ಸಮುದಾಯಕ್ಕೆ ಬಿತ್ತನೆಗೆ ಅನಕೂಲವಾಗುವಂತೆ ಮಳೆಯಾಗಿ ಕೊಂಚ ನೆಮ್ಮದಿಯನ್ನುಂಟು ಮಾಡಿದೆ. ಆದರೆ, ಮುಂಗಾರಿನ ಹೆಸರು, ಶೇಂಗಾ, ಹತ್ತಿ ಸೇರಿ ಪ್ರಮುಖ ಬೆಳೆಗಳ ಬಿತ್ತನೆ ಕಾಲಾವಧಿ ಮೀರಿದ್ದರಿಂದ ಏನನ್ನು ಬಿತ್ತವುದು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

error: Content is protected !!