Home Blog Page 3255

ಕೋಮು ರಾಜಕಾರಣಕ್ಕೆ ಬಲಿಯಾಗಿದ್ದ ನರಗುಂದದ ಸಮೀರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

0

ಒಟ್ಟು ಆರು ಕುಟುಂಬಗಳಿಗೆ ಪರಿಹಾರ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ……

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮತೀಯ ದ್ವೇಷದಿಂದ ಹತ್ಯೆಗೀಡಾದ ರಾಜ್ಯದ ಆರು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್ ನ ಮುಹಮ್ಮದ್ ಫಾಝಿಲ್, ಅಬ್ದುಲ್ ಜಲೀಲ್ , ದೀಪಕ್ ರಾವ್ , ಮಂಡ್ಯದ ಇದ್ರೀಸ್ ಪಾಶಾ, ನರಗುಂದದ ಸಮೀರ್ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ವಿತರಿಸಲಾಯಿತು.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಯುವಕ ಕೋಮು ದ್ವೇಷಕ್ಕೆ ಬಲಿಯಾಗಿದ್ದ ಸಮೀರ್ ಸುಬಾನಸಾಬ ಶಾಹಪೂರ ಕುಟುಂಬದ ಸದಸ್ಯರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 25 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,
ಸರ್ಕಾರ ಸರ್ವರಿಗೂ ಸೇರಿದ್ದು, ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯ.
ಬಿಜೆಪಿಯ ದ್ವೇಷ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ ಎಂದ ಸಿದ್ದರಾಮಯ್ಯ,

ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತ್ತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಸರ್ಕಾರ ಮಾಡಿದ್ದ ತಾರತಮ್ಯವನ್ನು ನಾವು ಈಗ ಸರಿಪಡಿಸಿದ್ದೇವೆ ಎಂದರು.

ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನರಗುಂದ ಮಾಜಿ ಶಾಸಕ ಬಿ.ಆರ್ ಯಾವಗಲ್, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ವಿವೇಕ್ ಯಾವಗಲ್, ನ್ಯಾಯವಾದಿ ಎಮ್.ಎ ಮೌಲ್ವಿ, ಹಾಗೂ ಕುಟುಂಬ ವರ್ಗದವರು ಇದ್ದರು.

ಜೀವನದಲ್ಲಿ ಜಿಗುಪ್ಸೆ; ಸರಕಾರಿ ‌ನೌಕರ ಬಾವಿಗೆ ಹಾರಿ ಆತ್ಮಹತ್ಯೆ

ವಿಜಯಸಾಕ್ಷಿ ಸುದ್ದಿ, ರೋಣ

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಚಿದಾನಂದಯ್ಯ ಬರದೂರಮಠ (45) ಎಂಬುವವರೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು.

ಮೂಲತಃ ಗದಗ ತಾಲೂಕಿನ ಹುಯಿಲಗೋಳ ಗ್ರಾಮದವರಾದ ಕುಮಾರಸ್ವಾಮಿ, ರೋಣ ಪಟ್ಟಣದಲ್ಲಿ ವಾಸವಾಗಿದ್ದರು. ನಿತ್ಯವೂ ನಿಡಗುಂದಿ ಗ್ರಾಮಕ್ಕೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಕುಮಾರಸ್ವಾಮಿ, ಮೊನ್ನೆ ಜೂ.16ರಂದು ಗದಗನಲ್ಲಿ ಮೀಟಿಂಗ್ ಇದೆ ಎಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಫೋನ್ ಮಾಡಿದರೂ ಮೊಬೈಲ್ ಸ್ವಿಚ್ಆಪ್ ಆಗಿತ್ತು.

ಹೀಗಾಗಿ ಕುಮಾರಸ್ವಾಮಿ ಪತ್ನಿ ಶಶಿಕಲಾ ಅವರು, ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ನಿನ್ನೆ ಮತ್ತೆ ಕುಮಾರಸ್ವಾಮಿ ಅವರನ್ನು ಹುಡುಕಾಡಲು ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಆನಂದ ಜವಾರಿ ಹಾಗೂ ಇತರರು ಅವರ ಜಮೀನಿನ ಬಾವಿಯ ಬಳಿ ನೋಡಿದಾಗ ಚಪ್ಪಲಿ ಇದ್ದದ್ದು ಕಂಡು, ಬಾವಿಯೊಳಗೆ ಇಣಕಿದಾಗ ಕುಮಾರಸ್ವಾಮಿ ಅವರ ಶವ ತೇಲುತ್ತಿತ್ತು ಎನ್ನಲಾಗಿದೆ. ತಕ್ಷಣವೇ ಅವರ ಮನೆಯವರಿಗೆ ತಿಳಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ನಂತರ ಶವ ಹೊರತೆಗೆದು ಶವಗಾರಕ್ಕೆ ಸಾಗಾಟ ಮಾಡಲಾಗಿದೆ.

ಕುಮಾರಸ್ವಾಮಿ ಅವರು ಪಾರ್ಶ್ವವಾಯುನಿಂದ ಬಳಲುತ್ತಿದ್ದರು ಎಂದು ಅವರ ಪತ್ನಿ ಶಶಿಕಲಾ ಅವರು ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.

ಪ್ರವಾಸೋದ್ಯಮ ಸಚಿವರ ಬರುವಿಕೆಗಾಗಿ ಕಾಯುತ್ತಿರುವ ಶೆಟ್ಟಿಕೆರೆ….!

0

ಸಸ್ಯಕಾಶಿ-ಪಕ್ಷಿಧಾಮ, ವನ್ಯಜೀವಿಗಳ ತಾಣ ನಯನಮನೋಹರ ಶೆಟ್ಟಿಕೆರೆ…….

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಗದಗ ಜಿಲ್ಲೆಯ ಅತ್ಯಂತ ಪ್ರಭಾವಿ ಮತ್ತು ಜಿಲ್ಲೆಯ ಅಭಿವೃದ್ಧಿ ಕನಸು ಹೊತ್ತಿರುವ ಹೆಚ್.ಕೆ ಪಾಟೀಲರು ಪ್ರವಾಸೋಧ್ಯಮ ಸಚಿವ ಸ್ಥಾನದ ಜತೆಗೆ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ನಿಗಮ, ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವುದು ಜಿಲ್ಲೆಯ ಜನರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಅಲ್ಲದೇ ಸೋಮವಾರ ಸಚಿವರೊಂದಿಗೆ ಹಿರಿಯ ಐಎಎಸ್ ಅಧಿಕಾರಿ ಮನೋಜ ಕುಮಾರ ಅವರು ಜಿಲ್ಲೆಯ ವಿವಿಧ ಪ್ರವಾಸಿ, ಪ್ರೇಕ್ಷಣೀಯ ತಾಣಗಳಿಗೆ ಬೇಟಿ ನೀಡಿ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೊಳ್ಳಲಿದ್ದಾರೆ.

ಮಾಗಡಿ ಪಕ್ಷಿಧಾಮಕ್ಕೆ ಬೇಟಿ ನೀಡಿದ ವೇಳೆ ಶೆಟ್ಟಿಕೆರೆ ಪಕ್ಷಿಧಾಮಕ್ಕೂ ಬೇಟಿ ನೀಡಿ ಈ ಕ್ಷೇತ್ರದ ಅಭಿವೃದ್ಧಿಗೂ ಮುಂದಾಗಬೇಕು. ಎಂಬುದು ಗ್ರಾಪಂ ಅಧ್ಯಕ್ಷ ಜಗದೀಶಗೌಡ ಪಾಟೀಲ, ಮಂಜುನಾಥ ಗೌರಿ, ದೀಪಕ ಲಮಾಣಿ, ಹನಮಂತಪ್ಪ ಹರಿಜನ, ಶಿವಾನಂದ ಬನ್ನಿಮಟ್ಟಿ ಆಗ್ರಹಿಸಿದ್ದಾರೆ.

2 ವರ್ಷಗಳ ಹಿಂದೆ ಬಿಜೆಪಿ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರು ಇಲ್ಲಿಗೆ ಬೇಟಿ ನೀಡಿದ ವೇಳೆ ಅಭಿವೃದ್ಧಿಗೆ ಭರವಸೆ ನೀಡಿದ್ದರು.
ಶೆಟ್ಟಿಕೇರಿ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯತಿಯ ಶೆಟ್ಟಿಕೆರೆ ಸಸ್ಯ, ಪ್ರಾಣಿ, ಜಲ, ಖನಿಜ ಸಂಪತ್ತಿನ ಸುಂದರ ಪರಿಸರದ ಮಲೆನಾಡಿನ ಭಾವನೆ ಮೂಡಿಸುತ್ತದೆ.

ಸೌರಾಷ್ಟ್ರದಿಂದ ಪುಲಿಗೆರೆ(ಲಕ್ಷ್ಮೇಶ್ವರ)ಗೆ ಶ್ರೀ ಸೋಮೇಶ್ವರನನ್ನು ತಂದು ಪ್ರತಿಷ್ಠಾಪಿಸಿದ ಶಿವಶರಣ ಆದಯ್ಯನೇ ಶೆಟ್ಟಿಕೇರಿ ಕೆರೆಯನ್ನು ಕಟ್ಟಿಸಿದ್ದಾನೆ ಎಂಬುದು ಪ್ರತೀತಿ.

ಕೈಬೀಸಿ ಕರೆಯುವ ಸಸ್ಯಕಾಶಿ

ಲಕ್ಷ್ಮೇಶ್ವರದಿಂದ 10ಕಿ.ಮೀ ದೂರದ ಶೆಟ್ಟಿಕೇರಿ 224 ಎಕರೆ ವಿಶಾಲವಾಗಿದ್ದು ವ್ಯಾಪ್ತಿಯಲ್ಲಿ 500 ಎಕರೆ ಅರಣ್ಯ ಪ್ರದೇಶವಿದೆ. ಹೊಂದಿಕೊಂಡು 40 ಎಕರೆಯಲ್ಲಿ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರ ವಿವಿಧ ಸಸ್ಯಗಳಿಂದ ಸದಾ ಹಸಿರಾಗಿದ್ದು ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತದೆ.

ಶೆಟ್ಟಿಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ

ಉತ್ತರ ಕರ್ಣಾಟಕದ ರಂಗನತಿಟ್ಟು ಎನ್ನುವ ಸಮೀಪದ ಮಾಗಡಿ ಕೆರೆಗೆ ಚಳಿಗಾಲದಲ್ಲಿ ಹಾರಿ ಬರುವ ವಿದೇಶಿ ಪಕ್ಷಿಗಳು ಸಮೀಪದ ಶೆಟ್ಟಿಕೆರಿಯಲ್ಲೂ ಬಿಡಾರ ಹೂಡುತ್ತವೆ. ಮಾಗಡಿ ಕೆರೆಗಿಂತಲೂ ಶೆಟ್ಟಿಕೆರೆ ಎರಡು ಪಟ್ಟು ಅಂದರೆ 224 ಎಕರೆ ವಿಸ್ತಾರವಾಗಿದೆ. ಗುಡ್ಡಗಳ ನಡುವೆ ಇರುವ ವಿಶಾಲವಾದ ಕೆರೆಯ ಸುತ್ತಲೂ ಅರಣ್ಯ, ಪ್ರಶಾಂತ ವಾತಾವರಣದಿಂದ ವಿದೇಶಿ ಹಕ್ಕಿಗಳ ವಾಸ್ತವ್ಯ, ಸಂತಾನೋತ್ಪತ್ತಿ, ಕಲರವಕ್ಕೆ ನೈಸರ್ಗಿಕವಾಗಿ ರೂಪಿತವಾದ ಪ್ರದೇಶವಾಗಿದೆ. ಪ್ರತಿವರ್ಷ ಇಲ್ಲಿಗೆ ಮಂಗೋಲಿಯಾ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ಭೂತಾನ್ ಮತ್ತು ಜಮ್ಮು-ಕಾಶ್ಮೀರದ ಲಡಾಕ್‌ನಿಂದ ಸುಮಾರು 16 ಜಾತಿಯ ಸಾವಿರಾರು ವಿದೇಶಿ ಪಕ್ಷಿಗಳು ಬಿಡಾರ ಹೂಡುತ್ತವೆ. ಶೆಟ್ಟಿಕೆರೆಯಲ್ಲಿನ ಪಕ್ಷಿಗಳ ಚಲ್ಲಾಟ, ನೀರಿನಲ್ಲಿ ಬಣ್ಣಗಳ ರಂಗೋಲಿ ಚಿತ್ತಾರ, ಬಾನಿನಲ್ಲಿ ರಾಕೆಟ್, ಕ್ಷಿಪಣಿಗಳ ರೀತಿಯ ಹಾರಾಟದ ವಿಸ್ಮಯದ ದೃಶ್ಯ, ನೀರಿನಿಂದ ಮೇಲೆ ಹಾರುವ, ಕೆಳಗಿಳಿಯುವ, ತೇಲುವ ಪಕ್ಷಿಗಳ ಲೋಕದ ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಜನ ಬರುತ್ತಾರೆ.

ವನ್ಯ ಪ್ರಾಣಿಗಳ ಆಶ್ರಯ ತಾಣ

ಶೆಟ್ಟಿಕೇರಿಯಲ್ಲಿ ಮೀನುಗಾರಿಕೆಯೂ ನಡೆಯುತ್ತದೆ ಮತ್ತು ಕೆರೆಯಲ್ಲಿ ಅಪರೂಪದ ಮೃದು ಚರ್ಮದ ನೀರು ನಾಯಿಗಳೂ ವಾಸಿಸುತ್ತಿವೆ. ಇಲ್ಲಿನ 500 ಎಕರೆ ವಿಸ್ತಾರದ ಅರಣ್ಯ ಪ್ರದೇಶದಲ್ಲಿ ಪುನುಗು ಬೆಕ್ಕು, ಕತ್ತೆ ಕಿರುಬ, ಜಿಂಕೆ, ನಕ್ಷತ್ರ ಆಮೆ, ಉಡಾ, ಹೆಬ್ಬಾವು, ನರಿ, ತೋಳ, ನವಿಲು, ಕಾಡು ಕುರಿ ಸೇರಿ ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಕಲ್ಪಿಸಿದೆ.

ಶೆಟ್ಟಿಕೆರೆಗೆ ಮಾರ್ಗ

ಲಕ್ಷ್ಮೇಶ್ವರದಿಂದ ಬಟ್ಟೂರ ಮಾರ್ಗವಾಗಿ ಶೆಟ್ಟಿಕೆರೆ 10 ಕಿ.ಮೀ ಅಂತರದಲ್ಲಿದೆ. ಶಿರಹಟ್ಟಿಯಿಂದ 8.ಕಿ.ಮೀ ಅಂತರದಲ್ಲಿದೆ. ಸುತ್ತಲೂ ಅರಣ್ಯ, ಗುಡ್ಡದ ಪ್ರದೇಶ ಪ್ರಶಾಂತ ವಾತಾವರಣವಿದೆ. ಪಕ್ಷಿ ಪ್ರೇಮಿಗಳು, ಶಾಲಾ ಮಕ್ಕಳು, ನೌಕರ ವರ್ಗದವರು ಒಂದು ದಿನದ ಬಿಡುವಿನ ವೇಳೆಯಲ್ಲಿ ಶೆಟ್ಟಿಕೇರಿಯಲ್ಲಿ ಪಕ್ಷಿ ವೀಕ್ಷಣೆ ಮಾಡಬಹುದು.

ಹತ್ತಿರದಲ್ಲಿಯೇ ಹೊಳಲಮ್ಮನಗುಡ್ಡ, ಅರಣ್ಯ ಇಲಾಖೆಯ ನರ್ಸರಿ, ಶಿರಹಟ್ಟಿ ಫಕ್ಕೀರೇಶ್ವರಮಠ, ವರವಿ ಮೌನೇಶ್ವರ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರದ ದರ್ಶನ ಪಡೆಯಬಹುದು.

ಸಚಿವರೇ ಶೆಟ್ಟಿಕೆರೆಗೊಮ್ಮೆ ಭೇಟಿ ಕೊಡಿ

ಅರಣ್ಯ ಸಂಪತ್ತು ವೀಕ್ಷಿಸಲು ವಾಚಿಂಗ್ ಟಾವರ್, ಬೈನಾಕೂಲರ್, ಕಾವಲು ಸಿಬ್ಬಂದಿ ಇತರೇ ಅವಶ್ಯಕ ಸೌಲತ್ತುಗಳನ್ನು ಕಲ್ಪಿಸಬೇಕು. ಸುತ್ತಲೂ ಗುಡ್ಡ, ಅರಣ್ಯ, ಕೆರೆ, ನರ್ಸರಿಯನ್ನೊಳಗೊಂಡ ನಯನಮನೋಹರ ಪ್ರದೇಶವಿದಾಗಿದೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಕೆರೆಗೆ ನದಿ ನೀರು ಹರಿಸುವ ಯೋಜನೆ ಪ್ರಗತಿ ಹಂತದಲ್ಲಿದೆ. ಕೆರೆಯಲ್ಲಿನ ಹೂಳು, ಕಸ, ಗಿಡ ಗಂಟೆಗಳಿಂದ ಕೂಡಿರುವ ಕೆರೆಯ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಗಮನ ಸೆಳೆದು ಬೋಟಿಂಗ್ ವ್ಯವಸ್ಥೆ, ಪಿಕನಿಕ್ ಸ್ಪಾಟ್ ಮಾಡಬಹುದಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ, 50ಸಾವಿರ ದಂಡ

ಎಂಟು ವರ್ಷಗಳ ಹಿಂದೆ ಸಿಕ್ಕಿಬಿದ್ದಿದ್ದ ಆರೋಪಿಗಳು…..

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ‌ ಆದೇಶ ಹೊರಡಿಸಿದೆ.

ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎಸ್.ಎಂ. ಕೃಷ್ಣ ನಗರಕ್ಕೆ ಹೋಗುವ ರಸ್ತೆ ಬಳಿಯ ಸೇತುವೆ ಕಟ್ಟೆಯ ಮೇಲೆ 27.2.2015ರ ಸಂಜೆ 4.30ರ ಹೊತ್ತಿಗೆ ಅಕ್ರಮವಾಗಿ 2ಕೆಜಿಯಷ್ಟು ಗಾಂಜಾವನ್ನು ತಮ್ಮ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಲ್ಲಿದ್ದಾಗ ಆರೋಪಿಗಳಾದ ರಮೇಶ ರತ್ನಪ್ಪ ಕಾಳೆ ಹಾಗೂ ರತ್ನಪ್ಪ ಮೋನಪ್ಪ ಕಾಳೆ ಸಿಕ್ಕಿಬಿದ್ದಿದ್ದು, ಆರೋಪಿತರ ವಿರುದ್ಧ ಗದಗ ಉಪವಿಭಾಗದ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ತನಿಖೆ ಪೂರೈಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಎಸ್ ಶೆಟ್ಟಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಬ್ಬರಿಗೂ ಜೂ.13 ರಂದು ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(2)(ಬಿ) ಅಡಿಯಲ್ಲಿ 5 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದೆ ಎಂದು ಕೆವೈಸಿ ಅಪ್‌ಡೇಟ್‌ ಮಾಡುವ ನೆಪದಲ್ಲಿ ನಿವೃತ್ತ ನೌಕರನಿಗೆ ಲಕ್ಷಾಂತರ ರೂ. ದೋಖಾ

0

ಗದಗ-ಬೆಟಗೇರಿಯ ರಾಜೀವಗಾಂಧಿ ನಗರದ ನಿವಾಸಿ ಮೋಸ……

ವಿಜಯಸಾಕ್ಷಿ ಸುದ್ದಿ, ಗದಗ

ಬ್ಯಾಂಕ್‌ ಅಕೌಂಟ್ ಬ್ಲಾಕ್‌ ಆಗಿದೆಯೆಂದು ಹೇಳಿ, ಕೆವೈಸಿ ಅಪ್ಡೇಟ್‌ ಮಾಡುವ ನೆಪದಲ್ಲಿ ಬ್ಯಾಂಕ್‌‌ ಖಾತೆಯ ಮಾಹಿತಿಗಳನ್ನು ಪಡೆದು, ಖಾತೆಯಿಂದ ಲಕ್ಷಾಂತರ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸವೆಸಗಿದ ಅಪರಾಧದ ಬಗ್ಗೆ ಗದಗ ಸಿಇಎನ್‌ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ಮೇ.9ರಂದು ಸಂಜೆ 4 ಗಂಟೆಯ ಸುಮಾರಿಗೆ ದೂರುದಾರ ರಾಜೀವಗಾಂಧಿ ನಗರದ ನಿವೃತ್ತ ನೌಕರ ಇಮಾಮಸಾಬ್‌ ಫಕ್ರುಸಾಬ್‌ ದೊಡ್ಡಮನಿ ಎಂಬುವರಿಗೆ ಯಾರೋ ಅಪರಿಚಿತರು ಮೆಸೇಜ್‌ ಕಳುಹಿಸಿದ್ದರು.

ಅದರಲ್ಲಿ, ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದ್ದು, ಕೆವೈಸಿ ಅಪ್‌ಡೇಟ್‌ ಮಾಡಬೇಕಿದೆ ಎಂದು ಅವರ ಡೆಬಿಟ್‌ ಕಾರ್ಡ್‌ ನಂಬರ್‌ ಹಾಗೂ ಒಟಿಪಿ ನಂಬರ್‌ ಪಡೆದುಕೊಂಡಿದ್ದರು.

ನಂತರ, ದೂರುದಾರರ ಕೆನರಾ ಬ್ಯಾಂಕ್‌ ಖಾತೆಯಿಂದ ಹಂತಹಂತವಾಗಿ ಒಟ್ಟೂ 1,27,600 ರೂ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ.

ಈ ಕುರಿತು ಅಪರಾಧ 0041/2023, ಐಟಿ ಕಾಯ್ದೆ 2008ರ ಕಲಂ 66ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲಗಾಮಿಲ್ಲದೇ ಸಾಗುತ್ತಿರುವ ಅಕ್ರಮ ಮರಳುಗಾರಿಕೆ, ಚಿವುಟಿದಷ್ಟೂ ಚಿಗುರುತ್ತಿರುವ ದಂಧೆ; ನಲುಗಿದ ತುಂಗಭದ್ರೆಯ ಒಡಲು…..!

0

ವಿಜಯಸಾಕ್ಷಿ ಸುದ್ದಿ, ಗದಗ

ಆ ಸ್ಥಳಗಳಲ್ಲಿ ಹಗಲು-ರಾತ್ರಿಯೆನ್ನದೆ ಜೆಸಿಬಿ ಯಂತ್ರಗಳ ಭೋರ್ಗರೆತದ ಸದ್ದು ನಿರಂತರ ಕೇಳುತ್ತಲೇ ಇದೆ. ಭೂಮಿಯ ಒಡಲನ್ನು ಎಷ್ಟೇ ಬಗೆದರೂ ಅವರಿಗೆ ಸಂತೃಪ್ತಿಯೆಂಬುದಿಲ್ಲ. ಆಡಳಿತದ ನಿಯಮಗಳು, ಎಚ್ಚರಿಕೆಗಳ ಹಂಗೂ ಇವರಿಗಿಲ್ಲ.

ಏನೇ ಆದರೂ, ತಮ್ಮ ಧನದಾಹ ತೀರಿಸಿಕೊಳ್ಳಬೇಕೆಂಬುದಷ್ಟೇ ಈ ದುರಾಸೆಯ ಮನುಷ್ಯರ ಅಂತಿಮ ಗುರಿ. ಇದರ ಫಲವಾಗಿ, ಸಮೃದ್ಧವಾಗಿದ್ದ ತುಂಗಭದ್ರೆ ದಿನದಿಂದ ದಿನಕ್ಕೆ ಸೊರಗುತ್ತಲೇ ಇದೆ ಮತ್ತು, ಆ ಆರ್ತನಾದ ಯಾರಿಗೂ ಕೇಳಿಸುತ್ತಿಲ್ಲ.

ಸರ್ಕಾರದ ಆದೇಶಗಳನ್ನೂ ಧಿಕ್ಕರಿಸಿ, ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದರಿಂದ ತುಂಗಭದ್ರೆಯ ಚಿತ್ರಣವೇ ಬದಲಾಗುತ್ತಿದೆ. ಜೆಸಿಬಿ ಯಂತ್ರಗಳ ಮೂಲಕ ತುಂಗಭದ್ರೆಯನ್ನು ವಿರೂಪಗೊಳಿಸಿ, ಇಕ್ಕೆಲದ ಜಮೀನುಗಳಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳು ಸಂಗ್ರಹಿಸಲಾಗುತ್ತಿದೆ.

ಜಿಲ್ಲಾಡಳಿತ, ಗಣಿ, ಪೊಲೀಸ್, ಕಂದಾಯ ಇಲಾಖೆ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಈ ಅಕ್ರಮ, ಅನಧಿಕೃತ ಮರಳುಗಾರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ಎಲ್ಲಾ ದೃಶ್ಯಗಳು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಕಂಡುಬರುತ್ತಿದೆ.

ಮುಂಡರಗಿ ತಾಲೂಕಿನ ಕಕ್ಕೂರ, ಸಿಂಗಟಾಲೂರು, ಕೊರ್ಲಹಳ್ಳಿ, ಶೀರನಹಳ್ಳಿ, ಗಂಗಾಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಿರಂತರವಾಗಿ ಸಾಗಿದೆ. ಸಕ್ರಮದ ದಾರಿ ಒಂದೇ ಆಗಿದ್ದರೆ, ಅಕ್ರಮದ ದಾರಿ ನೂರಾರು.

ಮುಂಗಾರು ಆರಂಭವಾಗಿರುವುದರಿಂದ ಜೂನ್ ೫ರಿಂದ ನದಿಯಲ್ಲಿ ಮರಳು ತೆಗೆಯದಂತೆ ಗಣಿ ಇಲಾಖೆ ಸ್ಪಷ್ಟ ಕಾನೂನು ರಚಿಸಿದೆ. ಆದರೆ, ಗಣಿ ಇಲಾಖೆಯ ಯಾವ ನಿಯಮಗಳಿಗೂ ಇಲ್ಲಿ ಕವಡೆ ಕಾಸಿನ ಬೆಲೆಯಿಲ್ಲ. ಆಡಳಿತದ ಅಧಿಕಾರಿಗಳು ಈ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದಷ್ಟೂ ದಂಧೆಕೋರರು ರಂಗೋಲಿಯ ಕೆಳಗೂ ನುಸುಳುವಷ್ಟು ಹೆಚ್ಚಿದ್ದಾರೆ.

ಗದಗ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜೂನ್ ೧೨ರಂದು ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಲಗಾಮು ಹಾಕಿದ್ದರು. ನಂತರದ ದಿನಗಳಲ್ಲಿ ಮತ್ತೆ ಮೊದಲಿನಂತೆಯೇ ಯಾರ ಗಮನಕ್ಕೂ ಬಾರದಂತೆ ಮರಳು ಲೂಟಿ ಮುಂದುವರೆದಿದೆ.


ಹೀಗೆ ಅಕ್ರಮ ಮರಳುಗಾರಿಕೆಯಿಂದ ನದಿಯ ಚಿತ್ರಣ ಬದಲಾಗುತ್ತಿದ್ದು, ಸರ್ಕಾರಕ್ಕೆ ಸೇರಬೇಕಿದ್ದ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಯಾರದೋ ಖಾತೆ ಸೇರುತ್ತಿದೆ. ಕಾನೂನು ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ನದಿ ಪಾತ್ರದಲ್ಲಿ ಹಾಗೂ ಅಕ್ಕಪಕ್ಕದ ಖಾಸಗಿ ಜಮೀನುಗಳಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಅಕ್ರಮ ಮರಳು ಸಂಗ್ರಹವನ್ನು ವಶಕ್ಕೆ ಪಡೆದು, ದಂಧೆಕೋರರ ಅಟಾಟೋಪಗಳಿಗೆ ಬ್ರೇಕ್ ಹಾಕಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಕಳೆದ ಬೇಸಿಗೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಈ ಅಕ್ರಮವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೆವು. ಮರಳು ಸಾಗಾಟಕ್ಕೆ ಬಳಸಿದ ಹಲವು ವಾಹನಗಳನ್ನು ವಶಕ್ಕೆ ಪಡೆದು ಗರಿಷ್ಠ ದಂಡ ವಿಧಿಸಿದ್ದರಿಂದ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಮತ್ತೆ ಖಾಸಗಿ ಜಾಗಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ದೂರುಗಳು ಬರತೊಡಗಿವೆ. ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ರಾತ್ರಿ ಸಮಯದಲ್ಲೇ ಈ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

-ವೈಶಾಲಿ ಎಂ ಎಲ್. ಜಿಲ್ಲಾಧಿಕಾರಿಗಳು, ಗದಗ


ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಅಕ್ರಮ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದೆವು. ಆ ಸಮಯದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಈ ಅಕ್ರಮ ದಂಧೆ ಇದೀಗ ಮತ್ತೆ ಪ್ರಾರಂಭವಾದ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ಅಧಿಕಾರಿ/ಸಿಬ್ಬಂದಿಗಳೂ ಶಾಮೀಲಾಗಿದ್ದಾರೆ ಎಂಬ ಆರೋಪಗಳಿವೆ. ಅದು ಸತ್ಯವೇ ಆಗಿದ್ದರೆ, ಅಂಥವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.

-ಬಿ ಎಸ್ ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.

    ಎಂಟು ವರ್ಷಗಳಿಂದ ಹುಡುಗಿ ಹುಡುಕಿ ನೊಂದ ಯುವಕನಿಂದ ಮನವಿ; ‘ನನಗೊಂದು ಕನ್ಯಾ ಹುಡುಕಿಕೊಡ್ರೀ….`!

    0

    ಕನ್ಯಾಭಾಗ್ಯ ಕರುಣಿಸಲು ಗ್ರಾ.ಪಂ.ಗೆ ಮನವಿ ಮಾಡಿಕೊಂಡ ಯುವಕ…..!?

    ವಿಜಯಸಾಕ್ಷಿ ಸುದ್ದಿ, ಗದಗ

    ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ ಇತ್ಯಾದಿಗಳಿಗಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು ಸಾಮಾನ್ಯವೇ. ಆಗೀಗ ಚಿತ್ರ-ವಿಚಿತ್ರ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸುದ್ದಿಗಳನ್ನೂ ಓದುತ್ತಲೇ ಇರುತ್ತೇವೆ. ಆದರೆ ಇಲ್ಲೊಬ್ಬ ಯುವಕ ಮದುವೆ ಮಾಡಿಕೊಳ್ಳಲು ವಧು ಸಿಗುತ್ತಿಲ್ಲ, ನನಗೆ ಮದುವೆಯಾಗಲು ಕನ್ಯೆಯನ್ನು ಹುಡುಕಿಕೊಡಿ ಎಂದು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿ ಸುದ್ದಿಯಾಗಿದ್ದಾನೆ.

    ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಮುತ್ತು ಹೂಗಾರ ಎಂಬ ೨೮ ವರ್ಷದ ಯುವಕ, ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಿಕೊಂಡು ತಿಂಗಳಿಗೆ ೫೦ ಸಾವಿರ ಹಣ ಸಂಪಾದನೆ ಮಾಡುತ್ತಿದ್ದರೂ, ಮದುವೆ ಮಾಡಿಕೊಳ್ಳಲು ಕನ್ಯೆ ಸಿಗದೇ ಕಂಗಾಲಾಗಿ ಗ್ರಾಮ ಪಂಚಾಯತಿ ಪಿಡಿಒಗೆ ಮನವಿ ಸಲ್ಲಿಸಿದ್ದಾನೆ.

    ಈ ಯುವಕನ ಅಭಿಪ್ರಾಯದಂತೆ, ಕನ್ಯೆ ಸಿಗದೇ ಇರುವುದಕ್ಕೆ ಮುಖ್ಯ ಕಾರಣ, ಸರಕಾರಿ ನೌಕರಿ ಇಲ್ಲದಿರುವುದು. ಸುಮಾರು ಹುಡುಗಿಯರನ್ನು ನೋಡಿದರೂ `ಕೆಲಸ ಏನು ಮಾಡ್ತೀರಿ?’ ಎಂದು ಕೇಳುತ್ತಾರೆ. ಗುತ್ತಿಗೆದಾರ ಎಂದ ತಕ್ಷಣವೇ ಸರಕಾರಿ ನೌಕರಿ ಇದ್ರೆ ಮಾತ್ರವೇ ಮಗಳನ್ನು ಕೊಡುತ್ತೇವೆ ಎನ್ನುತ್ತಿದ್ದಾರಂತೆ.

    ಯಾವುದೇ ಜಾತಿಯ ಕನ್ಯೆ ಆದರೂ ಚಿಂತೆಯಿಲ್ಲ. ಒಟ್ಟಿನಲ್ಲಿ ಹುಡುಗಿ ಹುಡುಕಿಕೊಡಿ ಎಂಬುದಷ್ಟೇ ಮುತ್ತು ಹೂಗಾರನ ಮನವಿ. ಕಳೆದ ಎಂಟು ವರ್ಷಗಳಿಂದ ಕನ್ಯೆ ಹುಡುಕಿ ಹುಡುಕಿ ಬಳಲಿ ಬಸವಳಿದ ಮುತ್ತು ಈಗ ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯತ ಪಿಡಿಒಗೆ ಮನವಿ ಸಲ್ಲಿಸುವ ಮೂಲಕ ಕನ್ಯೆ ಭಾಗ್ಯ ನೀಡುವಂತೆ ಸರ್ಕಾರಕ್ಕೂ ಒತ್ತಾಯಿಸಿದ್ದಾನೆ.

    ಇದನ್ನೂ ಓದಿ ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಯ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಪಾನ್ ಶಾಪ್ ಅಂಗಡಿ ಮಾಲೀಕನ ವಿರುದ್ಧ ಕೇಸ್

    ಮನವಿ ಪತ್ರ ಸ್ವೀಕರಿಸಿರುವ ಪಿಡಿಒ ಅನಿಲಗೌಡ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಮುತ್ತುವಿನ ಆಸೆ ಗ್ರಾಮ ಪಂಚಾಯತದ ವತಿಯಿಂದಾದರೂ ಈಡೇರಿ, ಸಮಸ್ಯೆ ಬಗೆಹರಿಯಲಿದೆಯಾ ಎಂಬುದು ಪ್ರಶ್ನೆಯಾಗಿದೆ. ಸರ್ಕಾರಿ ನೌಕರಿ ಇಲ್ಲದಿದ್ದರೂ ತೊಂದರೆಯಿಲ್ಲ, ಯೋಗ್ಯ ವರನಾಗಿದ್ದರೆ ಕನ್ಯಾ ಕೊಡ್ತೀವಿ ಎಂಬ ಮನೋಭಾವನೆ ಹೆಣ್ಣು ಹೆತ್ತವರಲ್ಲಿಯೂ ಮೂಡಲಿ.

    ನನಗೆ ಅಣ್ಣ-ತಮ್ಮ, ಅಕ್ಕ-ತಂಗಿ ಯಾರೂ ಇಲ್ಲ. ತಂದೆ-ತಾಯಿ ಇದ್ದಾರೆ. ಇದುವರೆಗೂ ಕನ್ಯಾನ್ವೇಷಣೆಗೆ ಹೋದಲ್ಲೆಲ್ಲಾ ಸಾಂಪ್ರದಾಯಿಕ ಉಪಚಾರದ ಬಳಿಕ, ಸರ್ಕಾರಿ ನೌಕರಿ ಇದ್ದವರಿಗೆ ಮಗಳನ್ನು ಕೊಡ್ತೀನಿ ಎಂದು ಮುಖ ತಿರುಗಿಸುತ್ತಾರೆ. ಹಳ್ಳಿ ಹಳ್ಳಿ ಸುತ್ತಿ ಕನ್ಯೆ ನೋಡಿ, ಈಗ ಜೀವನದಲ್ಲಿ ಜಿಗುಪ್ಸೆ ಬರುವಂತಾಗಿದೆ. ಯಾವುದೇ ಜಾತಿಯ ಕನ್ಯೆ ಇದ್ದರೂ ಪರವಾಗಿಲ್ಲ. ಒಳ್ಳೆಯ ಹುಡುಗಿಯಾಗಿದ್ದು, ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವಂತಿದ್ದರೆ ಸಾಕು.

    ಮುತ್ತು ಹೂಗಾರ. ನೊಂದ ಯುವಕ

    ನಕಲಿ ಅಪ್ಲಿಕೇಶನ್ ಬಳಸಿ ಮೋಸಹೋಗಬೇಡಿ`ಪಿಂಕ್ ವಾಟ್ಸಪ್’ ಬಗ್ಗೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಜಾಗೃತಿ……..

    0

    ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

    ಪ್ರಸ್ತುತ ಅಂತರ್ಜಾಲ ಪ್ರಪಂಚದಲ್ಲಿ ತಾವು ಕುಳಿತ ಸ್ಥಳದಿಂದಲೇ ಎಲ್ಲ ಕೆಲಸಗಳನ್ನೂ ನಿಭಾಯಿಸುವ ಮಟ್ಟಕ್ಕೆ ಬಂದು ತಲುಪಿದ್ದು, ಸುಲಭವಾಗಿ ಅನಿಯಮಿತ ಡಾಟಾ ಸಿಗುವುದರಿಂದ ಬಹುತೇಕರು ಆನ್‌ಲೈನ್‌ನಲ್ಲೇ ಎಲ್ಲ ವ್ಯಾಪಾರ-ವಹಿವಾಟುಗಳನ್ನು ಮಾಡುತ್ತಿದ್ದಾರೆ.

    ಇದು ಅನೇಕರಿಗೆ ವರವಾದರೆ, ಇನ್ನೂ ಕೆಲವರು ಅಕೌಂಟ್‌ಗಳನ್ನು ಹ್ಯಾಕ್ ಮಾಡಿ ಜನಸಾಮಾನ್ಯರಿಗೆ ವಂಚನೆ ಮಾಡುವುದನ್ನು ಸಹ ದಂಧೆಯನ್ನಾಗಿಸಿಕೊಂಡಿದ್ದಾರೆ.

    ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಾಲಕಾಲಕ್ಕೆ ಜನಸಾಮಾನ್ಯರಿಗೆ ಅನೇಕ ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ `ಪಿಂಕ್ ವಾಟ್ಸಾಪ್’ ಬಗ್ಗೆಯೂ ಸಹ ಜನತೆ ಎಚ್ಚರಿಕೆ ವಹಿಸುವುದು ಅವಶ್ಯವಿದೆ.

    ಏನಿದು ಪಿಂಕ್ ವಾಟ್ಸಾಪ್?

    ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಬೇರೆ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವ ಸಂದರ್ಭದಲ್ಲಿ ಪಿಂಕ್ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಳ್ಳುವುದಕ್ಕೆ ಲಿಂಕ್‌ಗಳು ಗೋಚರಿಸುತ್ತವೆ.

    ಅಂತಹ ಸಂದರ್ಭದಲ್ಲಿ ಈ ಲಿಂಕ್ ಬಳಸಿ ಅಪ್ಲಿಕೇಶನ್ ಒಂದು ವೇಳೆ ಇನ್‌ಸ್ಟಾಲ್ ಮಾಡಿಕೊಂಡರೆ ಹ್ಯಾಕರ್ಸ್ಗಳು ನಿಮ್ಮ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳಾದ ಫೋಟೋಗಳು, ಕಾಂಟಾಕ್ಟ್ ಗಳು, ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್, ಎಸ್‌ಎಂಎಸ್‌ಗಳನ್ನು ಸುಲಭವಾಗಿ ಕದಿಯುವ ಸಾಧ್ಯತೆ ಇದೆ.

    ಆದ್ದರಿಂದ ಇದೊಂದು ಫೇಕ್ ಅಪ್ಲಿಕೇಶನ್ ಆಗಿದ್ದು, ಇದನ್ನು ಬಳಕೆದಾರರು ತಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡದಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.

    ಈಗಾಗಲೇ ಯಾರಾದರೂ ಪಿಂಕ್ ವಾಟ್ಸಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ತಕ್ಷಣವೇ ಅನ್ ಇನ್‌ಸ್ಟಾಲ್ ಮಾಡಿಕೊಳ್ಳಿ, ಜೊತೆಗೆ ಎಲ್ಲಾ ವಾಟ್ಸಾಪ್ ವೆಬ್ ಸಾಧನಗಳನ್ನು ಅನ್‌ಲಿಂಕ್ ಮಾಡಿ, ಸೆಟ್ಟಿಂಗ್‌ಗಳಿಂದ ಬ್ರೌಸರ್ ಸಂಗ್ರಹವನ್ನು ತೆರವುಗೊಳಿಸಿ, ಎಲ್ಲಾ ಅಪ್ಲಿಕೇಶನ್‌ಗಳಿಗೆ ಅನುಮತಿಯನ್ನು ಪರಿಶೀಲಿಸಿ. ಇಲ್ಲವಾದಲ್ಲಿ ಹ್ಯಾಕರ್‌ಗಳು ಸುಲಭವಾಗಿ ನಮ್ಮ ಮೊಬೈಲ್‌ನಲ್ಲಿರುವ ಹಲವು ಮಾಹಿತಿಗಳನ್ನು ಬಳಸಿಕೊಂಡು ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

    ಗದಗ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಸಾರ್ವಜನಿಕರಿಗೆ ವಂಚನೆ ಎಸಗುವ ಅನೇಕ ಅಪ್ಲಿಕೇಶನ್‌ಗಳ ಬಗ್ಗೆ ಜಾಗೃತಿ, ಕಳೆದುಹೋದ ಮೊಬೈಲ್ ಮರಳಿ ಪಡೆದುಕೊಳ್ಳುವುದಕ್ಕೆ ತಂತ್ರಾಂಶವೂ ಸೇರಿದಂತೆ ಜನಸ್ನೇಹಿ ಪೊಲೀಸ್ ಸೇವೆಯನ್ನು ನೀಡುವುದಕ್ಕೆ ಮುಂದಾಗಿದ್ದು, ಕಚೇರಿಯ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಕಾಲಕಾಲಕ್ಕೆ ಸಾರ್ವಜನಿಕರಿಗೆ ಅನೇಕ ಉಪಯುಕ್ತತೆಗಳ ಮಾಹಿತಿಯನ್ನು ನೀಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.

    `ಪಿಂಕ್ ವಾಟ್ಸಪ್’ ಇದೊಂದು ನಕಲಿ ಆ್ಯಪ್ ಆಗಿದ್ದು, ಯಾರೂ ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ಒಂದು ವೇಳೆ ಮಾಡಿಕೊಂಡಿದ್ದರೆ, ತಕ್ಷಣ ಅನ್‌ಇನ್‌ಸ್ಟಾಲ್ ಮಾಡಬೇಕು. ಬೇರೆ ಅಪ್ಲಿಕೇಶನ್ ವೀಕ್ಷಿಸುತ್ತಿರುವಾಗಲೂ ಸಹ ಈ ಆ್ಯಪ್‌ಗೆ ಸಂಬಂಧಿಸಿದಂತೆ ಬರುವ ಲಿಂಕ್‌ಗಳನ್ನು ಬಳಸಬಾರದು. ಇದರಿಂದ ಮೊಬೈಲ್ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನಲ್ಲಿಯ ಮಾಹಿತಿ ಕದಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಬೇಕು.

    ಬಿ.ಎಸ್.ನೇಮಗೌಡ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಗದಗ

    ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಯ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಪಾನ್ ಶಾಪ್ ಅಂಗಡಿ ಮಾಲೀಕನ ವಿರುದ್ಧ ಕೇಸ್

    ಸಮುದಾಯಗಳ ಮಧ್ಯ ಎತ್ತಿ ಕಟ್ಟುವ ಬರಹ…..

    ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

    ಸರ್ಕಾರದ ಯೋಜನೆಗಳನ್ನು ಹೀಯಾಳಿಸಿದ್ದಲ್ಲದೆ, ಒಂದು ಸಮುದಾಯದ ಜನರ ಮತೀಯ ಭಾವನೆಗಳಿಗೆ ಭಂಗವನ್ನುಂಟುಮಾಡಿ, ಸಮಾಜದಲ್ಲಿ ದ್ವೇಷ ಭಾವನೆಯನ್ನು ಮೂಡಿಸುವ ಬರಹಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಗಜೇಂದ್ರಗಡದ ಗೊಲ್ಲರ ಓಣಿಯ ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

    ಶಹರದ ಗೊಲ್ಲರ ಓಣಿಯ ನಿವಾಸಿ, ಪಾನ್ ಶಾಪ್ ಅಂಗಡಿಯ ಮುತ್ತಣ್ಣ ಯಮನಪ್ಪ ಮ್ಯಾಗೇರಿ ಜೂನ್‌ 11ರಂದು ಮುತ್ತು ಮ್ಯಾಗೇರಿ ಎನ್ನುವ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಕುರಿತು ʻಷರತ್ತಿನ ಮೇಲೆ ಷರತ್ತು ಹಾಕಿ ಕೊನೆಗೆ ಅವರ ಬಾಂಧವರಿಗಷ್ಟೇ ಯೋಜನೆ ತಲುಪಿಸುವುದು ಗ್ಯಾರಂಟಿಯ ಉದ್ದೇಶʼ ಎಂದು ಪೋಸ್ಟ್‌ ಮಾಡಿದ್ದರು.

    ʻಇಂದಿನಿಂದ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ವ್ಯಾನಿಟಿ ಬ್ಯಾಗಿಗೆ ಖಚಿತ ಇದು ಮುಲ್ಲಾ ಖಾನ್‌ ಆದೇಶʼ. ʻಸೀತಾಮಾತೆ ಲಂಕಾದಲ್ಲಿ ಇದ್ದ 11 ತಿಂಗಳು, 14 ದಿನವೂ ಸುರಕ್ಷಿತವಾಗಿದ್ದರು. ಯಾಕೆಂದರೆ, ರಾವಣ ವೇದ-ಪುರಾಣಗಳನ್ನು ಓದಿದ್ದನೇ ಹೊರತು ಕುರಾನ್‌ ಅಲ್ಲʼ ಎಂದೂ ಪೋಸ್ಟ್‌ ಮಾಡಿದ್ದರು.

    ರಾಜ್ಯದ ಮುಖ್ಯಂಂತ್ರಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದಲ್ಲದೆ, ಒಂದು ಸಮುದಾಯದ ಜನರ ಮತೀಯ ಭಾವನೆಗಳನ್ನು ಕೆರಳಿಸಿ, ಸಮುದಾಯಗಳ ನಡುವೆ ಎತ್ತಿ ಕಟ್ಟುವ ಪೋಸ್ಟ್‌ ಹಂಚಿಕೊಂಡಿದ್ದಾರೆಂದು ಆರೋಪಿಸಿ, ಅರ್ಜುನ್‌ ಹನಮಂತಪ್ಪ ರಾಥೋಡ್‌ ಎಂಬುವರು ದೂರು ನೀಡಿದ್ದರು.

    ಸದರಿ ದೂರನ್ನು ಸ್ವೀಕರಿಸಿರುವ ಗಜೇಂದ್ರಗಡ ಪೊಲೀಸರು ಅಪರಾಧ 0087/2023, ಐಪಿಸಿ ಸೆಕ್ಷನ್‌̇1860ರ ಕಲಂ 295A, 505(1)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೈತನ ಬನಿಯನ್‌ ಕಿಸೆ ಕತ್ತರಿಸಿ 50 ಸಾವಿರ ರೂ. ಹಣ ಲಪಟಾಯಿಸಿದ ಕಳ್ಳರು

    ವಿಜಯಸಾಕ್ಷಿ ಸುದ್ದಿ, ಮುಂಡರಗಿ

    ಎಪಿಎಂಸಿಯಲ್ಲಿ ಗೋವಿನ ಜೋಳ ವಿಕ್ರಿ ಮಾಡಿ, ಅದರ ಹಣ ಪಡೆದು ತನ್ನೂರಿಗೆ ಹೊರಡಲು ಬಸ್‌ ಏರಿದ ರೈತರೊಬ್ಬರ ಬನಿಯನ್‌ನ ಕಿಸೆಯನ್ನು ಕತ್ತರಿಸಿದ ಯಾರೋ ಕಳ್ಳರು 50 ಸಾವಿರ ರೂ. ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಫಿರ್ಯಾದಿದಾರರಾದ ಕಲಕೇರಿಯ ತಿಮ್ಮಪ್ಪ ನಿಂಗಪ್ಪ ಬರದೂರ ಹಣ ಕಳೆದುಕೊಂಡವರಾಗಿದ್ದಾರೆ.
    ಇವರು ಜೂನ್‌ 5ರಂದು ಬೆಳಿಗ್ಗೆ ತಮ್ಮ ಊರಿನಿಂದ ಮುಂಡರಗಿಯ ಎಪಿಎಂಸಿಗೆ ತೆರಳಿದ್ದರು. ಅಲ್ಲಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಟ್ರೇಡಿಂಗ್‌ ಕಂಪನಿಯಲ್ಲಿ ಈ ಒಳಗಾಗಿ ಇರುವ ಗೋವಿನ ಜೋಳದ ಪಟ್ಟಿಯಾದ 50 ಸಾವಿರ ರೂ ಪಡೆದುಕೊಂಡಿದ್ದರು.

    ನಂತರ ವಾಪಸ್‌ ಊರಿಗೆ ಹೋಗುವ ಉದ್ದೇಶದಿಂದ ಮುಂಡರಗಿ ಬಸ್‌ ನಿಲ್ದಾಣಕ್ಕೆ ಬಂದು, ಮಧ್ಯಾಹ್ನ 2.30ರ ಸುಮಾರಿಗೆ ತಮ್ಮೂರಿನ ಬಸ್‌ ಹಿಡಿದು ಕುಳಿತಿದ್ದರು.
    ಜೊತೆಯಾಗಿ ಬಂದಿದ್ದ ಅವರದೇ ಊರಿನ ನಿಂಗರಡ್ಡೆಪ್ಪ ಮೇಟಿ ಮತ್ತು ಗುಡದೀರಪ್ಪ ಬಳಿಗೇರ ಇವರೊಂದಿಗೆ ಬಸ್‌ನಲ್ಲಿ ಕುಳಿತಿದ್ದಾಗ, ಕಿಸೆಯಲ್ಲಿದ್ದ ಹಣವನ್ನು ನೋಡಿದಾಗ, ಬಸ್‌ ಏರುವಾಗ ಯಾರೋ ಕಳ್ಳರು ಬನಿಯನ್‌ನ ಕಿಸೆಯನ್ನೇ ಕತ್ತರಿಸಿ 50 ಸಾವಿರ ರೂ ಹಣವನ್ನು ಲಪಟಾಯಿಸಿರುವುದು ಅರಿವಿಗೆ ಬಂದಿದೆ ಎಂದು ದೂರು ನೀಡಿದ್ದಾರೆ.

    ಈ ಬಗ್ಗೆ ಅಪರಾಧ 0085/2023, ಐಪಿಸಿ ಸೆಕ್ಷನ್‌ 1860ರ ಕಲಂ 379ರ ಅಡಿ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    error: Content is protected !!