Home Blog Page 3256

ಎಂಟು ವರ್ಷಗಳಿಂದ ಹುಡುಗಿ ಹುಡುಕಿ ನೊಂದ ಯುವಕನಿಂದ ಮನವಿ; ‘ನನಗೊಂದು ಕನ್ಯಾ ಹುಡುಕಿಕೊಡ್ರೀ….`!

0

ಕನ್ಯಾಭಾಗ್ಯ ಕರುಣಿಸಲು ಗ್ರಾ.ಪಂ.ಗೆ ಮನವಿ ಮಾಡಿಕೊಂಡ ಯುವಕ…..!?

ವಿಜಯಸಾಕ್ಷಿ ಸುದ್ದಿ, ಗದಗ

ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ ಇತ್ಯಾದಿಗಳಿಗಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು ಸಾಮಾನ್ಯವೇ. ಆಗೀಗ ಚಿತ್ರ-ವಿಚಿತ್ರ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸುದ್ದಿಗಳನ್ನೂ ಓದುತ್ತಲೇ ಇರುತ್ತೇವೆ. ಆದರೆ ಇಲ್ಲೊಬ್ಬ ಯುವಕ ಮದುವೆ ಮಾಡಿಕೊಳ್ಳಲು ವಧು ಸಿಗುತ್ತಿಲ್ಲ, ನನಗೆ ಮದುವೆಯಾಗಲು ಕನ್ಯೆಯನ್ನು ಹುಡುಕಿಕೊಡಿ ಎಂದು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿ ಸುದ್ದಿಯಾಗಿದ್ದಾನೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಮುತ್ತು ಹೂಗಾರ ಎಂಬ ೨೮ ವರ್ಷದ ಯುವಕ, ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಿಕೊಂಡು ತಿಂಗಳಿಗೆ ೫೦ ಸಾವಿರ ಹಣ ಸಂಪಾದನೆ ಮಾಡುತ್ತಿದ್ದರೂ, ಮದುವೆ ಮಾಡಿಕೊಳ್ಳಲು ಕನ್ಯೆ ಸಿಗದೇ ಕಂಗಾಲಾಗಿ ಗ್ರಾಮ ಪಂಚಾಯತಿ ಪಿಡಿಒಗೆ ಮನವಿ ಸಲ್ಲಿಸಿದ್ದಾನೆ.

ಈ ಯುವಕನ ಅಭಿಪ್ರಾಯದಂತೆ, ಕನ್ಯೆ ಸಿಗದೇ ಇರುವುದಕ್ಕೆ ಮುಖ್ಯ ಕಾರಣ, ಸರಕಾರಿ ನೌಕರಿ ಇಲ್ಲದಿರುವುದು. ಸುಮಾರು ಹುಡುಗಿಯರನ್ನು ನೋಡಿದರೂ `ಕೆಲಸ ಏನು ಮಾಡ್ತೀರಿ?’ ಎಂದು ಕೇಳುತ್ತಾರೆ. ಗುತ್ತಿಗೆದಾರ ಎಂದ ತಕ್ಷಣವೇ ಸರಕಾರಿ ನೌಕರಿ ಇದ್ರೆ ಮಾತ್ರವೇ ಮಗಳನ್ನು ಕೊಡುತ್ತೇವೆ ಎನ್ನುತ್ತಿದ್ದಾರಂತೆ.

ಯಾವುದೇ ಜಾತಿಯ ಕನ್ಯೆ ಆದರೂ ಚಿಂತೆಯಿಲ್ಲ. ಒಟ್ಟಿನಲ್ಲಿ ಹುಡುಗಿ ಹುಡುಕಿಕೊಡಿ ಎಂಬುದಷ್ಟೇ ಮುತ್ತು ಹೂಗಾರನ ಮನವಿ. ಕಳೆದ ಎಂಟು ವರ್ಷಗಳಿಂದ ಕನ್ಯೆ ಹುಡುಕಿ ಹುಡುಕಿ ಬಳಲಿ ಬಸವಳಿದ ಮುತ್ತು ಈಗ ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯತ ಪಿಡಿಒಗೆ ಮನವಿ ಸಲ್ಲಿಸುವ ಮೂಲಕ ಕನ್ಯೆ ಭಾಗ್ಯ ನೀಡುವಂತೆ ಸರ್ಕಾರಕ್ಕೂ ಒತ್ತಾಯಿಸಿದ್ದಾನೆ.

ಇದನ್ನೂ ಓದಿ ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಯ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಪಾನ್ ಶಾಪ್ ಅಂಗಡಿ ಮಾಲೀಕನ ವಿರುದ್ಧ ಕೇಸ್

ಮನವಿ ಪತ್ರ ಸ್ವೀಕರಿಸಿರುವ ಪಿಡಿಒ ಅನಿಲಗೌಡ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಮುತ್ತುವಿನ ಆಸೆ ಗ್ರಾಮ ಪಂಚಾಯತದ ವತಿಯಿಂದಾದರೂ ಈಡೇರಿ, ಸಮಸ್ಯೆ ಬಗೆಹರಿಯಲಿದೆಯಾ ಎಂಬುದು ಪ್ರಶ್ನೆಯಾಗಿದೆ. ಸರ್ಕಾರಿ ನೌಕರಿ ಇಲ್ಲದಿದ್ದರೂ ತೊಂದರೆಯಿಲ್ಲ, ಯೋಗ್ಯ ವರನಾಗಿದ್ದರೆ ಕನ್ಯಾ ಕೊಡ್ತೀವಿ ಎಂಬ ಮನೋಭಾವನೆ ಹೆಣ್ಣು ಹೆತ್ತವರಲ್ಲಿಯೂ ಮೂಡಲಿ.

ನನಗೆ ಅಣ್ಣ-ತಮ್ಮ, ಅಕ್ಕ-ತಂಗಿ ಯಾರೂ ಇಲ್ಲ. ತಂದೆ-ತಾಯಿ ಇದ್ದಾರೆ. ಇದುವರೆಗೂ ಕನ್ಯಾನ್ವೇಷಣೆಗೆ ಹೋದಲ್ಲೆಲ್ಲಾ ಸಾಂಪ್ರದಾಯಿಕ ಉಪಚಾರದ ಬಳಿಕ, ಸರ್ಕಾರಿ ನೌಕರಿ ಇದ್ದವರಿಗೆ ಮಗಳನ್ನು ಕೊಡ್ತೀನಿ ಎಂದು ಮುಖ ತಿರುಗಿಸುತ್ತಾರೆ. ಹಳ್ಳಿ ಹಳ್ಳಿ ಸುತ್ತಿ ಕನ್ಯೆ ನೋಡಿ, ಈಗ ಜೀವನದಲ್ಲಿ ಜಿಗುಪ್ಸೆ ಬರುವಂತಾಗಿದೆ. ಯಾವುದೇ ಜಾತಿಯ ಕನ್ಯೆ ಇದ್ದರೂ ಪರವಾಗಿಲ್ಲ. ಒಳ್ಳೆಯ ಹುಡುಗಿಯಾಗಿದ್ದು, ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವಂತಿದ್ದರೆ ಸಾಕು.

ಮುತ್ತು ಹೂಗಾರ. ನೊಂದ ಯುವಕ

ನಕಲಿ ಅಪ್ಲಿಕೇಶನ್ ಬಳಸಿ ಮೋಸಹೋಗಬೇಡಿ`ಪಿಂಕ್ ವಾಟ್ಸಪ್’ ಬಗ್ಗೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಜಾಗೃತಿ……..

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪ್ರಸ್ತುತ ಅಂತರ್ಜಾಲ ಪ್ರಪಂಚದಲ್ಲಿ ತಾವು ಕುಳಿತ ಸ್ಥಳದಿಂದಲೇ ಎಲ್ಲ ಕೆಲಸಗಳನ್ನೂ ನಿಭಾಯಿಸುವ ಮಟ್ಟಕ್ಕೆ ಬಂದು ತಲುಪಿದ್ದು, ಸುಲಭವಾಗಿ ಅನಿಯಮಿತ ಡಾಟಾ ಸಿಗುವುದರಿಂದ ಬಹುತೇಕರು ಆನ್‌ಲೈನ್‌ನಲ್ಲೇ ಎಲ್ಲ ವ್ಯಾಪಾರ-ವಹಿವಾಟುಗಳನ್ನು ಮಾಡುತ್ತಿದ್ದಾರೆ.

ಇದು ಅನೇಕರಿಗೆ ವರವಾದರೆ, ಇನ್ನೂ ಕೆಲವರು ಅಕೌಂಟ್‌ಗಳನ್ನು ಹ್ಯಾಕ್ ಮಾಡಿ ಜನಸಾಮಾನ್ಯರಿಗೆ ವಂಚನೆ ಮಾಡುವುದನ್ನು ಸಹ ದಂಧೆಯನ್ನಾಗಿಸಿಕೊಂಡಿದ್ದಾರೆ.

ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಾಲಕಾಲಕ್ಕೆ ಜನಸಾಮಾನ್ಯರಿಗೆ ಅನೇಕ ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ `ಪಿಂಕ್ ವಾಟ್ಸಾಪ್’ ಬಗ್ಗೆಯೂ ಸಹ ಜನತೆ ಎಚ್ಚರಿಕೆ ವಹಿಸುವುದು ಅವಶ್ಯವಿದೆ.

ಏನಿದು ಪಿಂಕ್ ವಾಟ್ಸಾಪ್?

ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಬೇರೆ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವ ಸಂದರ್ಭದಲ್ಲಿ ಪಿಂಕ್ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಳ್ಳುವುದಕ್ಕೆ ಲಿಂಕ್‌ಗಳು ಗೋಚರಿಸುತ್ತವೆ.

ಅಂತಹ ಸಂದರ್ಭದಲ್ಲಿ ಈ ಲಿಂಕ್ ಬಳಸಿ ಅಪ್ಲಿಕೇಶನ್ ಒಂದು ವೇಳೆ ಇನ್‌ಸ್ಟಾಲ್ ಮಾಡಿಕೊಂಡರೆ ಹ್ಯಾಕರ್ಸ್ಗಳು ನಿಮ್ಮ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳಾದ ಫೋಟೋಗಳು, ಕಾಂಟಾಕ್ಟ್ ಗಳು, ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್, ಎಸ್‌ಎಂಎಸ್‌ಗಳನ್ನು ಸುಲಭವಾಗಿ ಕದಿಯುವ ಸಾಧ್ಯತೆ ಇದೆ.

ಆದ್ದರಿಂದ ಇದೊಂದು ಫೇಕ್ ಅಪ್ಲಿಕೇಶನ್ ಆಗಿದ್ದು, ಇದನ್ನು ಬಳಕೆದಾರರು ತಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡದಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.

ಈಗಾಗಲೇ ಯಾರಾದರೂ ಪಿಂಕ್ ವಾಟ್ಸಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ತಕ್ಷಣವೇ ಅನ್ ಇನ್‌ಸ್ಟಾಲ್ ಮಾಡಿಕೊಳ್ಳಿ, ಜೊತೆಗೆ ಎಲ್ಲಾ ವಾಟ್ಸಾಪ್ ವೆಬ್ ಸಾಧನಗಳನ್ನು ಅನ್‌ಲಿಂಕ್ ಮಾಡಿ, ಸೆಟ್ಟಿಂಗ್‌ಗಳಿಂದ ಬ್ರೌಸರ್ ಸಂಗ್ರಹವನ್ನು ತೆರವುಗೊಳಿಸಿ, ಎಲ್ಲಾ ಅಪ್ಲಿಕೇಶನ್‌ಗಳಿಗೆ ಅನುಮತಿಯನ್ನು ಪರಿಶೀಲಿಸಿ. ಇಲ್ಲವಾದಲ್ಲಿ ಹ್ಯಾಕರ್‌ಗಳು ಸುಲಭವಾಗಿ ನಮ್ಮ ಮೊಬೈಲ್‌ನಲ್ಲಿರುವ ಹಲವು ಮಾಹಿತಿಗಳನ್ನು ಬಳಸಿಕೊಂಡು ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಗದಗ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಸಾರ್ವಜನಿಕರಿಗೆ ವಂಚನೆ ಎಸಗುವ ಅನೇಕ ಅಪ್ಲಿಕೇಶನ್‌ಗಳ ಬಗ್ಗೆ ಜಾಗೃತಿ, ಕಳೆದುಹೋದ ಮೊಬೈಲ್ ಮರಳಿ ಪಡೆದುಕೊಳ್ಳುವುದಕ್ಕೆ ತಂತ್ರಾಂಶವೂ ಸೇರಿದಂತೆ ಜನಸ್ನೇಹಿ ಪೊಲೀಸ್ ಸೇವೆಯನ್ನು ನೀಡುವುದಕ್ಕೆ ಮುಂದಾಗಿದ್ದು, ಕಚೇರಿಯ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಕಾಲಕಾಲಕ್ಕೆ ಸಾರ್ವಜನಿಕರಿಗೆ ಅನೇಕ ಉಪಯುಕ್ತತೆಗಳ ಮಾಹಿತಿಯನ್ನು ನೀಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.

`ಪಿಂಕ್ ವಾಟ್ಸಪ್’ ಇದೊಂದು ನಕಲಿ ಆ್ಯಪ್ ಆಗಿದ್ದು, ಯಾರೂ ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ಒಂದು ವೇಳೆ ಮಾಡಿಕೊಂಡಿದ್ದರೆ, ತಕ್ಷಣ ಅನ್‌ಇನ್‌ಸ್ಟಾಲ್ ಮಾಡಬೇಕು. ಬೇರೆ ಅಪ್ಲಿಕೇಶನ್ ವೀಕ್ಷಿಸುತ್ತಿರುವಾಗಲೂ ಸಹ ಈ ಆ್ಯಪ್‌ಗೆ ಸಂಬಂಧಿಸಿದಂತೆ ಬರುವ ಲಿಂಕ್‌ಗಳನ್ನು ಬಳಸಬಾರದು. ಇದರಿಂದ ಮೊಬೈಲ್ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನಲ್ಲಿಯ ಮಾಹಿತಿ ಕದಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಬೇಕು.

ಬಿ.ಎಸ್.ನೇಮಗೌಡ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಗದಗ

ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಯ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಪಾನ್ ಶಾಪ್ ಅಂಗಡಿ ಮಾಲೀಕನ ವಿರುದ್ಧ ಕೇಸ್

ಸಮುದಾಯಗಳ ಮಧ್ಯ ಎತ್ತಿ ಕಟ್ಟುವ ಬರಹ…..

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಸರ್ಕಾರದ ಯೋಜನೆಗಳನ್ನು ಹೀಯಾಳಿಸಿದ್ದಲ್ಲದೆ, ಒಂದು ಸಮುದಾಯದ ಜನರ ಮತೀಯ ಭಾವನೆಗಳಿಗೆ ಭಂಗವನ್ನುಂಟುಮಾಡಿ, ಸಮಾಜದಲ್ಲಿ ದ್ವೇಷ ಭಾವನೆಯನ್ನು ಮೂಡಿಸುವ ಬರಹಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಗಜೇಂದ್ರಗಡದ ಗೊಲ್ಲರ ಓಣಿಯ ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ಶಹರದ ಗೊಲ್ಲರ ಓಣಿಯ ನಿವಾಸಿ, ಪಾನ್ ಶಾಪ್ ಅಂಗಡಿಯ ಮುತ್ತಣ್ಣ ಯಮನಪ್ಪ ಮ್ಯಾಗೇರಿ ಜೂನ್‌ 11ರಂದು ಮುತ್ತು ಮ್ಯಾಗೇರಿ ಎನ್ನುವ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಕುರಿತು ʻಷರತ್ತಿನ ಮೇಲೆ ಷರತ್ತು ಹಾಕಿ ಕೊನೆಗೆ ಅವರ ಬಾಂಧವರಿಗಷ್ಟೇ ಯೋಜನೆ ತಲುಪಿಸುವುದು ಗ್ಯಾರಂಟಿಯ ಉದ್ದೇಶʼ ಎಂದು ಪೋಸ್ಟ್‌ ಮಾಡಿದ್ದರು.

ʻಇಂದಿನಿಂದ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ವ್ಯಾನಿಟಿ ಬ್ಯಾಗಿಗೆ ಖಚಿತ ಇದು ಮುಲ್ಲಾ ಖಾನ್‌ ಆದೇಶʼ. ʻಸೀತಾಮಾತೆ ಲಂಕಾದಲ್ಲಿ ಇದ್ದ 11 ತಿಂಗಳು, 14 ದಿನವೂ ಸುರಕ್ಷಿತವಾಗಿದ್ದರು. ಯಾಕೆಂದರೆ, ರಾವಣ ವೇದ-ಪುರಾಣಗಳನ್ನು ಓದಿದ್ದನೇ ಹೊರತು ಕುರಾನ್‌ ಅಲ್ಲʼ ಎಂದೂ ಪೋಸ್ಟ್‌ ಮಾಡಿದ್ದರು.

ರಾಜ್ಯದ ಮುಖ್ಯಂಂತ್ರಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದಲ್ಲದೆ, ಒಂದು ಸಮುದಾಯದ ಜನರ ಮತೀಯ ಭಾವನೆಗಳನ್ನು ಕೆರಳಿಸಿ, ಸಮುದಾಯಗಳ ನಡುವೆ ಎತ್ತಿ ಕಟ್ಟುವ ಪೋಸ್ಟ್‌ ಹಂಚಿಕೊಂಡಿದ್ದಾರೆಂದು ಆರೋಪಿಸಿ, ಅರ್ಜುನ್‌ ಹನಮಂತಪ್ಪ ರಾಥೋಡ್‌ ಎಂಬುವರು ದೂರು ನೀಡಿದ್ದರು.

ಸದರಿ ದೂರನ್ನು ಸ್ವೀಕರಿಸಿರುವ ಗಜೇಂದ್ರಗಡ ಪೊಲೀಸರು ಅಪರಾಧ 0087/2023, ಐಪಿಸಿ ಸೆಕ್ಷನ್‌̇1860ರ ಕಲಂ 295A, 505(1)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈತನ ಬನಿಯನ್‌ ಕಿಸೆ ಕತ್ತರಿಸಿ 50 ಸಾವಿರ ರೂ. ಹಣ ಲಪಟಾಯಿಸಿದ ಕಳ್ಳರು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಎಪಿಎಂಸಿಯಲ್ಲಿ ಗೋವಿನ ಜೋಳ ವಿಕ್ರಿ ಮಾಡಿ, ಅದರ ಹಣ ಪಡೆದು ತನ್ನೂರಿಗೆ ಹೊರಡಲು ಬಸ್‌ ಏರಿದ ರೈತರೊಬ್ಬರ ಬನಿಯನ್‌ನ ಕಿಸೆಯನ್ನು ಕತ್ತರಿಸಿದ ಯಾರೋ ಕಳ್ಳರು 50 ಸಾವಿರ ರೂ. ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಿರ್ಯಾದಿದಾರರಾದ ಕಲಕೇರಿಯ ತಿಮ್ಮಪ್ಪ ನಿಂಗಪ್ಪ ಬರದೂರ ಹಣ ಕಳೆದುಕೊಂಡವರಾಗಿದ್ದಾರೆ.
ಇವರು ಜೂನ್‌ 5ರಂದು ಬೆಳಿಗ್ಗೆ ತಮ್ಮ ಊರಿನಿಂದ ಮುಂಡರಗಿಯ ಎಪಿಎಂಸಿಗೆ ತೆರಳಿದ್ದರು. ಅಲ್ಲಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಟ್ರೇಡಿಂಗ್‌ ಕಂಪನಿಯಲ್ಲಿ ಈ ಒಳಗಾಗಿ ಇರುವ ಗೋವಿನ ಜೋಳದ ಪಟ್ಟಿಯಾದ 50 ಸಾವಿರ ರೂ ಪಡೆದುಕೊಂಡಿದ್ದರು.

ನಂತರ ವಾಪಸ್‌ ಊರಿಗೆ ಹೋಗುವ ಉದ್ದೇಶದಿಂದ ಮುಂಡರಗಿ ಬಸ್‌ ನಿಲ್ದಾಣಕ್ಕೆ ಬಂದು, ಮಧ್ಯಾಹ್ನ 2.30ರ ಸುಮಾರಿಗೆ ತಮ್ಮೂರಿನ ಬಸ್‌ ಹಿಡಿದು ಕುಳಿತಿದ್ದರು.
ಜೊತೆಯಾಗಿ ಬಂದಿದ್ದ ಅವರದೇ ಊರಿನ ನಿಂಗರಡ್ಡೆಪ್ಪ ಮೇಟಿ ಮತ್ತು ಗುಡದೀರಪ್ಪ ಬಳಿಗೇರ ಇವರೊಂದಿಗೆ ಬಸ್‌ನಲ್ಲಿ ಕುಳಿತಿದ್ದಾಗ, ಕಿಸೆಯಲ್ಲಿದ್ದ ಹಣವನ್ನು ನೋಡಿದಾಗ, ಬಸ್‌ ಏರುವಾಗ ಯಾರೋ ಕಳ್ಳರು ಬನಿಯನ್‌ನ ಕಿಸೆಯನ್ನೇ ಕತ್ತರಿಸಿ 50 ಸಾವಿರ ರೂ ಹಣವನ್ನು ಲಪಟಾಯಿಸಿರುವುದು ಅರಿವಿಗೆ ಬಂದಿದೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಅಪರಾಧ 0085/2023, ಐಪಿಸಿ ಸೆಕ್ಷನ್‌ 1860ರ ಕಲಂ 379ರ ಅಡಿ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು; ಕುಟುಂಬಸ್ಥರ, ಸ್ಥಳೀಯರಿಂದ ರಸ್ತೆತಡೆ, ತಹಸೀಲ್ದಾರ ಆಗಮನಕ್ಕೆ ಪಟ್ಟು

ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ…. ಬಿಗುವಿನ ವಾತಾವರಣ…..

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟ ದುರ್ಘಟನೆ ಸೋಮವಾರ ರಾತ್ರಿ ನಡೆದಿದೆ.

ಇಲ್ಲಿನ ಜನತಾ ಪ್ಲಾಟ್ ನಲ್ಲಿ ಘಟನೆ ನಡೆದಿದ್ದು, ಹನ್ನೆರಡು ವರ್ಷದ ಪಂಕಜ್ ಎಂಬ ಬಾಲಕ ಆಟವಾಡುತ್ತಿದ್ದಾಗ ಹೆದ್ದಾರಿ ಪಕ್ಕದಲ್ಲಿನ ಕಂಬ ಮುಟ್ಟಿದಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ.

ಇದರಿಂದಾಗಿ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು, ಗಜೇಂದ್ರಗಡ ಯಲಬುರ್ಗಾ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರ ಆಗಮನಕ್ಕೆ ಪಟ್ಟು ಹಿಡಿದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರತಿಭಟನಾಕಾರರ ಮನವೊಲಿಸಲು ಮುಂದಾಗಿದ್ದಾರೆ.

ಆದರೆ ಪ್ರತಿಭಟನಾಕಾರರು ತಹಸೀಲ್ದಾರ ಆಗಮನಕ್ಕೆ ಪಟ್ಟು ಹಿಡಿದಿದ್ದು, ಸ್ಥಳದಲ್ಲೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲೇ ಇದ್ದು, ಸೂಕ್ತ ಬಂದೂಬಸ್ತ್ ಒದಗಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಪ್ರತಿಭಟನೆ ಇನ್ನೂ ಮುಂದುವರೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಅಂದರ್-ಬಾಹರ್‌ ಆಟದಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಪ್ರಕರಣ

ಮೂವರ ಬಂಧನ…. ಮತ್ತೊಬ್ಬ ಪರಾರಿ……

ವಿಜಯಸಾಕ್ಷಿ ಸುದ್ದಿ, ಗದಗ

ತಮ್ಮ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕ ರಸ್ತೆಯ ಮೇಲೆ ಅಂದರ್-ಬಾಹರ್‌ ಜೂಜಾಟದಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳದಡಿ ಗ್ರಾಮದ ಶ್ರೀರಾಮದೇವರ ಕಲ್ಯಾಣ ಮಂಟಪದ ಮುಂದಿನ ರಸ್ತೆಯಲ್ಲಿ ಬೆಳದಡಿಯ ಹನಮಪ್ಪ ನೀಲಪ್ಪ ಮಾಳಣ್ಣವರ, ಬೆಳದಡಿ ತಾಂಡಾದ ರಮೇಶ ಲಕ್ಷ್ಮಣ ತಂಬೂರಿ, ಬೆಳದಡಿಯ ಕೃಷ್ಣ ರಾಮಪ್ಪ ಭಜಂತ್ರಿ ಹಾಗೂ ದೇವರಾಜ ರಾಮಣ್ಣ ಮುಕ್ಕೋಜಿ ಇಸ್ಪೀಟ್‌ ಆಟದಲ್ಲಿ ತೊಡಗಿದ್ದರು.

ಈ ವೇಳೆ ಗದಗ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದಾಗ ಮೊದಲ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದು, ನಾಲ್ಕನೇ ಆರೋಪಿ ದೇವರಾಜ ರಾಮಣ್ಣ ಮುಕ್ಕೋಜಿ ಓಡಿಹೋಗಿದ್ದಾನೆ.

ಆರೋಪಿಗಳಿಂದ ಆಟಕ್ಕೆ ಬಳಸಿದ್ದ ಇಸ್ಪೀಟ್‌ ಎಲೆ ಹಾಗೂ 1630 ರೂ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಅಪರಾಧ:0149/2023, ಕೆಪಿ ಕಾಯ್ದೆ 1963ರ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಸ್‌ಬಿಐ ಬ್ಯಾಂಕ್‌ನ ಸಿಬ್ಬಂದಿ ಹೆಸರಲ್ಲಿ ಗ್ರಾಹಕನ ಲಕ್ಷಾಂತರ ರೂ. ಹಣ ವರ್ಗಾವಣೆ;

ಪೇಟಿಎಮ್‌ನಲ್ಲಿ ಆಯಕ್ಷಿಸ್‌ ಮ್ಯೂಚುವಲ್‌ ಫಂಡ್‌ನಿಂದ 49,100 ರೂ ಹಣ ಬರಬೇಕಿದೆ ಎಂದಿದ್ದ ಗ್ರಾಹಕರು……..

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಎಸ್‌ಬಿಐ ಬ್ಯಾಂಕ್‌ನ ಸಿಬ್ಬಂದಿಯೆಂದು ಹೇಳಿ, ಬ್ಯಾಂಕ್‌ನ ಕಡೆಯಿಂದ ಏನಾದರೂ ಸಮಸ್ಯೆಯಾಗಿದ್ದರೆ ಪರಿಹರಿಸುತ್ತೇವೆಂದು ನಂಬಿಕೆ ಹುಟ್ಟಿಸಿ, ಸಮಸ್ಯೆ ಬಗೆಹರಿಸುವ ನೆಪದಲ್ಲಿ ಯಾಮಾರಿಸಿ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಲಕ್ಷಾಂತರ ರೂ ಹಣವನ್ನು ದೋಚಿದ ಪ್ರಕರಣವೊಂದು ಗಜೇಂದ್ರಗಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣದ ದೂರುದಾರ ಗಜೇಂದ್ರಗಡದ ಕಡ್ಡಿಯವರ ಪ್ಲಾಟ್‌ನ ಕಲ್ಲಪ್ಪ ಸಿದ್ದಪ್ಪ ರಾಜೂರರಿಗೆ ಕರೆಮಾಡಿದ ಅಪರಿಚಿತನೊಬ್ಬ ತಾನು ಎಸ್‌ಬಿಐ ಬ್ಯಾಂಕ್‌ ವತಿಯಿಂದ ಕರೆ ಮಾಡುತ್ತಿದ್ದೇನೆಂದು ತಿಳಿಸಿದ್ದರು.

ನಿಮಗೇನಾದರೂ ಮಾಹಿತಿಯ ಅಗತ್ಯವಿದೆಯೇ ಎಂದು ಕೇಳಿದಾಗ, ದೂರುದಾರರು, ಇವರು ನಿಜವಾಗಿಯೂ ಬ್ಯಾಂಕ್‌ ಕಡೆಯವರು ಎಂದು ತಿಳಿದು, ಪೇಟಿಎಮ್‌ನಲ್ಲಿ ಆಯಕ್ಷಿಸ್‌ ಮ್ಯೂಚುವಲ್‌ ಫಂಡ್‌ನಿಂದ 49,100 ರೂ ಹಣ ಬರಬೇಕಿದೆ ಎಂದು ತಿಳಿಸಿದ್ದರು.

ಆಗ ಕರೆ ಮಾಡಿದ್ದ ಆರೋಪಿಯು ತಾನು ಹೇಳಿದ ಹಾಗೆ ಮೊಬೈಲ್‌ನಲ್ಲಿ ಟೈಪ್‌ ಮಾಡಿದರೆ ಹಣ ಸಿಗುತ್ತದೆ. ಮೊಬೈಲ್‌ಗೆ ಬರುವ ಪಾಸ್‌ವರ್ಡ್‌ಗಳನ್ನು ಹೇಳುತ್ತ ಹೋಗಿ ಎಂದಿದ್ದರು.

ಆರೋಪಿ ಹೇಳಿದಂತೆಯೇ ಮಾಡಿದಾಗ, ದೂರುದಾರರ ಬ್ಯಾಂಕ್‌ ಖಾತೆಯಿಂದ 49 ಸಾವಿರ ರೂ ಹಣ ಕಟ್‌ ಆಗಿತ್ತು.

ಈ ಬಗ್ಗೆ ಆರೋಪಿಗೆ ತಿಳಿಸಿದಾಗ, ಹಿಂದೆ ಬರಬೇಕಿದ್ದ ಹಾಗೂ ಈಗ ಕಟ್‌ ಆಗಿರುವ ಹಣವೂ ಸೇರಿ ಒಟ್ಟಿಗೇ ಖಾತೆಗೆ ಜಮಾ ಆಗುತ್ತದೆ ಎಂದು ನಂಬಿಸಿದ್ದರು.
ನಂತರ ಜೂ.8ರ ಮಧ್ಯಾಹ್ನ 12-30ರವರೆಗೆ ಹಂತ ಹಂತವಾಗಿ ಒಟ್ಟೂ 2,03,111 ರೂ ಹಣವನ್ನು ಬ್ಯಾಂಕ್‌ ಖಾತೆಯಿಂದ ಅಪರಿಚಿತ ಆರೋಪಿ ಕಳೆದಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ, ಅಪರಾಧ: 0085/2023, ಐಟಿ ಕಾಯ್ದೆ-2008ರ ಕಲಂ 66(ಡಿ) ಅಡಿಯಲ್ಲಿ ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ 61,500 ರೂ ಮೌಲ್ಯದ ನೆಕ್ಲೆಸ್‌ ಕಳ್ಳತನ

ಠಾಣೆಗೆ ದೂರು ನೀಡಿದ ಪಿಡಿಒ…..

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಏರುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 61,500 ರೂ ಬೆಲೆಬಾಳುವ ಬಂಗಾರದ ನೆಕ್ಲೆಸ್‌ನ್ನು ಕಳ್ಳತನ ಮಾಡಿರುವ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ ಬಡ್ನಿ ಗ್ರಾಮದ ಸುಮಾ ರವಿ ಕೊರಕನವರ ಪರವಾಗಿ ಅವರ ಪತಿ ಪಿಡಿಒ ರವಿ ಸಿದ್ದಪ್ಪ ಕೊರಕನವರ ದೂರು ನೀಡಿದ್ದಾರೆ.

ಮೇ.31ರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಲಕ್ಷ್ಮೇಶ್ವರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಹಾವೇರಿ ಕಡೆಗೆ ಹೋಗುವ ಬಸ್‌ ಹತ್ತುತ್ತಿದ್ದರು.
ಈ ಸಮಯದಲ್ಲಿ ಸುಮಾ ಅವರ ಬ್ಯಾಗಿನ ಜಿಪ್‌ ತೆರೆದು, ಅದರಲ್ಲಿದ್ದ 14 ಗ್ರಾಂ 390 ಮಿಲಿಗ್ರಾಂ ತೂಕದ 61,500 ರೂ ಬೆಲೆಬಾಳುವ ಬಂಗಾರದ ನೆಕ್ಲೆಸನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆಂದು ತಿಳಿಸಿದ್ದಾರೆ.

ಅಪರಾಧ 0071/2023, ಐಪಿಸಿ 1860ರ ಕಲಂ 379ರ ಅಡಿಯಲ್ಲಿ ಲಕ್ಷ್ಮೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ನಮ್ಮ ಜೊತೆಗಿರುವ ಸ್ನೇಹಿತರಿಂದಲೇ ಸೋತಿದ್ದೇವೆ’; ಕೃತಜ್ಞತಾ ಸಭೆಯಲ್ಲಿ ಬಿ‌.ಆರ್ ಯಾವಗಲ್ ಬೇಸರ

ಎದುರಾಳಿಗೆ ನಾವು ಸಮಬಲರಲ್ಲ..ಅವರಿಗೆ ಇರುವ ಹಣಬಲ…ಸಮಾಜದ ಬಲ ನಮಗೆ ಇಲ್ಲ….

ವಿಜಯಸಾಕ್ಷಿ ಸುದ್ದಿ, ನರಗುಂದ

ನಾವು ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದೇವೆ. ಸುಮಾರು 71000ಕ್ಕೂ ಅಧಿಕ ಜನರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅಂತಿಮವಾಗಿ ಸೋಲನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಎದುರಾಳಿಯ ಅಭ್ಯರ್ಥಿಗೆ ಕೆಲವು ವಿಷಯಗಳಲ್ಲಿ ನಾವು ಸರಿಸಮರಾಗಲು ಸಾಧ್ಯವಿಲ್ಲ. ಅವರಿಗಿದ್ದ ಹಣಬಲ, ಸಮಾಜದ ಬಲ ನಮಗೆ ಇರಲಿಲ್ಲ ಎಂದು ನರಗುಂದ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಬಿ ಆರ್ ಯಾವಗಲ್ ಬೇಸರ ವ್ಯಕ್ತಪಡಿಸಿದರು.

ನರಗುಂದ ಪಟ್ಟಣದ ಮಲಪ್ರಭಾ ಆಯಿಲ್ ಮಿಲ್‌ನಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಬಿ ಆರ್ ಯಾವಗಲ್, ಇದುವರೆಗೂ ಯಾವುದು ನಮ್ಮ ಕ್ಷೇತ್ರದಲ್ಲಿ ನಡೆಯಬಾರದು ಅಂದುಕೊಂಡಿದ್ದೆವೋ ಅದು ಈ ಚುನಾವಣೆಯಲ್ಲಿ ನಡೆದು ಹೋಯಿತು. ಆದರೆ, ನನ್ನ ನಂಬಿಕೆಯಂತೆ ಸಾಕಷ್ಟು ಜನರು ಹಣದ ಆಮಿಷಕ್ಕೆ, ಒತ್ತಡಕ್ಕೆ, ಪ್ರಭಾವಕ್ಕೆ ಬಲಿಯಾಗದೆ ಮತಚಲಾಯಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ನಾವು ನಮ್ಮ ಎದುರಾಳಿಯಿಂದ ಸೋತಿಲ್ಲ. ನಮ್ಮ ಜೊತೆಗಿರುವ ನಮ್ಮ ಸ್ನೇಹಿತರಿಂದಲೇ ಸೋತಿದ್ದೇವೆ. ಈ ಪ್ರವೃತ್ತಿ 2018ರಿಂದಲೂ ಕ್ಷೇತ್ರದಲ್ಲಿ ಬೇರೂರಿದೆ. ಇದು ಬದಲಾಗಬೇಕು. 8 ಸುತ್ತಿನವರೆಗೂ ನಾವು ಮುಂದೆಯೇ ಇದ್ದೆವು. ಮುಂದಿನ ಸುತ್ತುಗಳಲ್ಲಿ ಸ್ವಲ್ಪ ಹಿನ್ನೆಡೆ ಅನುಭವಿಸಿದ್ದೇವೆ. ಪಕ್ಷದ ಸೋಲಿಗೆ ಕಾರಣವಾದವರನ್ನು ಪಕ್ಷದಿಂದ ಉಚ್ಛಾಟಿಸಿ ಎಂಬ ಕಾರ್ಯಕರ್ತರ ಒತ್ತಾಯವನ್ನು ಅಲ್ಲಿಗೇ ಬಿಟ್ಟು, ಅವರನ್ನು ನಿರ್ಲಕ್ಷಿಸೋಣ ಎಂದರು.

ಈ ಸಂದರ್ಭದಲ್ಲಿ ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿವೇಕ್ ಯಾವಗಲ್, ಮಾಧ್ಯಮ ವಕ್ತಾರ ರಾಜು ಕಲಾಲ, ರಾಜೂಗೌಡ ಕೆಂಚನಗೌಡರ, ಬಾಬು ಹಿರೆಹೊಳಿ, ಶಂಕ್ರಣ್ಣ ಪೈಲ್ವಾನ್, ಅಪ್ಪಣ್ಣ ನಾಯಕರ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಒಂದು ಸಿದ್ಧಾಂತ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇದೆ. 130 ವರ್ಷದ ಇತಿಹಾಸವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. ದಲಿತರು, ಅಲ್ಪಸಂಖ್ಯಾತರು, ಎಲ್ಲರನ್ನೂ ಒಟ್ಟುಗೂಡಿಸಿ ಮುಂದೆ ಸಾಗೋಣ. ಪಕ್ಷವನ್ನು ಪುನಃ ಸಂಘಟಿಸೋಣ. ನಮ್ಮವರೇ ಆದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರವಿದೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದ ಪರವಾಗಿ, ನನಗೆ ಬೆಂಗಾವಲಾಗಿ ನಿಂತ ನಿಮ್ಮೆಲ್ಲರಿಗೂ ಧನ್ಯವಾದಗಳು.

-ಬಿ ಆರ್ ಯಾವಗಲ್. ಪರಾಜಿತ ಕಾಂಗ್ರೆಸ್ ಅಭ್ಯರ್ಥಿ.

ಅಪಾಯಕಾರಿ ಮಾಂಜಾದಾರಕ್ಕೆ ಸಿಲುಕಿ ಯುವಕ ಬಲಿ: ‘ಈ ಸಾವು ನ್ಯಾಯವೇ..?`

ಬಾರವೊಂದರಲ್ಲಿ ಸಪ್ಲಾಯರ್ ಆಗಿದ್ದ ಯುವಕ….

ವಧು ಹುಡುಕಿ ಮದುವೆ ಮಾಡುವ ಹೆತ್ತವರು ಕನಸು ನುಚ್ಚು ನೂರು…..

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಡಂಬಳ ನಾಕಾ ಬಳಿ ಗಾಳಿಪಟದ ಮಾಂಜಾ ದಾರ ಕತ್ತಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಪಿ ರವಿ ಚಿಕಿತ್ಸೆ ಫಲಕಾರಿಯಾಗದೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ನರಳಾಡಿದ ಯುವಕ ಶುಕ್ರವಾರ ಅಸುನೀಗಿದ್ದಾರೆ.


ತನ್ನ ಕುಟುಂಬದ ಆಧಾರ ಸ್ತಂಭವಾಗಿ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರಕೆರೆ ಮೂಲದ ರವಿಯ ದುಡಿಮೆಯಿಂದಲೇ ಕುಟುಂಬ ಸಾಗಬೇಕಿತ್ತು. ಹೀಗಾಗಿ ಆತ ಗದಗ ನಗರಕ್ಕೆ ಕೆಲಸವನ್ನರಸಿ ಬಂದು, ಜೀವನ ಸಾಗಿಸುತ್ತಿದ್ದ.

ಕಾರ ಹುಣ್ಣುಮೆ ಅಂಗವಾಗಿ ಗಾಳಿಪಟವನ್ನು ಹಾರಿಸುವ ಮಕ್ಕಳು, ಯುವಕರು ಬಳಸಿದ ನಿಷೇಧಿತ ಮಾಂಜಾದಾರ ಅಮಾಯಕ ರವಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ.

ಗದಗ ನಗರದ ಡಂಬಳ ನಾಕಾ ಬಳಿ, ಕಳೆದ ಭಾನುವಾರ ಬೈಕ್ ಮೇಲೆ ಹೋಗುತ್ತಿದ್ದ ಪಿ ರವಿ ಇಂಥದೇ ದಾರಕ್ಕೆ ಸಿಕ್ಕು, ಕತ್ತು ಸೀಳಿತ್ತು. ಕೂಡಲೇ ಆತನನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಆರು ದಿನಗಳ ಕಾಲ ಜೀವನ್ಮರಣದ ನಡುವೆ ನರಳಿ, ಶುಕ್ರವಾರ ಸಾವನ್ನಪ್ಪಿದ್ದಾನೆ.

ಗದಗನಲ್ಲಿ ಬಾರ್ ಒಂದರಲ್ಲಿ ಕೆಲಸವ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮೃತ ಯುವಕನಿಗೆ ಮದುವೆ ಮಾಡಬೇಕೆಂದು ಹೆತ್ತವರು ಕನಸು ಕಾಣುತ್ತಿದ್ದರು. ಇನ್ನೇನು ವಧುವನ್ನು ಹುಡುಕಿ ಮದುವೆ ಮಾಡಬೇಕು ಎನ್ನುವ ತಯಾರಿಯಲ್ಲಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಖುಷಿಗಾಗಿ ಹಾರಿಸುವ ಗಾಳಿಪಟ ಯುವಕನ ಜೀವ ತೆಗೆದಿದೆ. ಈಗಾಲೇ ಆರೇಳು ಜನರಿಗೆ ಕೈ, ಕಾಲು, ಕತ್ತು ಸೇರಿದಂತೆ ಅನೇಕ ಕಡೆ ಈ ಅಪಾಯಕಾರಿ ಮಾಂಜಾದಾರ ಗಾಯ ಮಾಡಿದೆ.

ಜೀವಕ್ಕೆ ಕುತ್ತು ತರುವ ಮಾಂಜಾದಾರವನ್ನು ನಿಷೇಧ ಮಾಡಿದರೂ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂತಹ ಅಪಾಯಕಾರಿ ಮಾಂಜಾದಾರವನ್ನು ನಿಷೇಧ ಮಾಡಬೇಕೆಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳು ಹಾಗೂ ನಗರಸಭೆಗೆ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಅಮಾಯಕ ಯುವಕನ ಸಾವಿಗೆ ಕಾರಣವಾದ ಗಾಳಿಪಟದ ಮಾಂಜಾದಾರವನ್ನು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಿಷೇಧಿಸಬೇಕು. ಈ ಯುವಕನ ಸಾವಿಗೆ ನೇರವಾಗಿ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಮುಂದೆ ಬರುವ ಕಾರ ಹುಣ್ಣಿಮೆಗೆ ಯಾವುದೇ ಕಾರಣಕ್ಕೂ ಮಾಂಜಾದಾರ ಮಾರಾಟ ಮಾಡದಂತೆ ಅಂಗಡಿಕಾರರಿಗೆ ಎಚ್ಚರಿಕೆ ನೀಡಬೇಕು. ಈ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಕ್ರಾಂತಿ ಸೇನಾ ಸಂಘಟನೆ, ಪ್ರಜಾ ಪರಿವರ್ತನ ವೇದಿಕೆ ಮುಂತಾದ ಸಂಘಟನೆಗಳ ನೇತೃತ್ವದಲಿ ಉಗ್ರವಾದ ಹೋರಾಟ ಮಾಡುತ್ತೇವೆ. ಸಂಘಟನೆಕಾರರು ಸ್ವಯಂ ಪ್ರೇರಿತವಾಗಿ ಮಾಂಜಾದಾರ ಮಾರುವ ಅಂಗಡಿಗಳ ಮೇಲೆ ದಾಳಿ ಮಾಡುತ್ತೇವೆ. ಆಗ ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ.

-ಬಾಬು ಬಾಕಳೆ, ಕ್ರಾಂತಿ ಸೇನಾ ಸಂಘಟನೆಯ ಮುಖಂಡ

    ಇದೇ ರೀತಿ ನಗರದಲ್ಲಿ ಸಾಕಷ್ಟು ಅವಘಡಗಳಾಗಿವೆ. ತೋಂಟದಾರ್ಯ ಮಠದ ಹತ್ತಿರ ಪಾರಿವಾಳವೊಂದು ದಾರಕ್ಕೆ ಸಿಲುಕಿ ಸತ್ತಿದೆ. ನನ್ನ ಮಗಳ ಕೈಗೆ ಸಹ ಬಿರುಸಾದ ಗಾಯ ಆಗಿದೆ. ಪಿ ರವಿ ಅವರ ಸಾವು ನೋವಿನ ವಿಷಯ. ಸಚಿವರಾದ ಹೆಚ್ ಕೆ ಪಾಟೀಲರು ಮೃತ ರವಿಯ ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿ, ಸೂಕ್ತ ಪರಿಹಾರ ನೀಡಬೇಕು.

    -ವಿಶ್ವನಾಥ್ ಖಾನಾಪೂರ, ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷರು.
      error: Content is protected !!