Home Blog Page 3257

ಗ್ರಾಪಂ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ

ವಿಜಯಸಾಕ್ಷಿ ಸುದ್ದಿ, ನರಗುಂದ

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಮೈಸೂರು, ಜಿಲ್ಲಾ ಪಂಚಾಯತಿ ಗದಗ, ತಾಲೂಕು ಪಂಚಾಯತಿ ನರಗುಂದ ಇವರ ಸಹಯೋಗದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ತಾಲೂಕು ಪಂಚಾಯತ ಸಭಾಭವನದಲ್ಲಿ ಜರುಗಿತು.

ಚಿಕ್ಕನರಗುಂದ, ವಾಸನ, ಶಿರೋಳ ಗ್ರಾಮ ಪಂಚಾಯತಿಗಳ ಸದಸ್ಯರು ಭಾಗವಹಿಸಿದ್ದರು.
ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ತರಬೇತಿ ಕೆಂದ್ರದಲ್ಲಿ ಸೈನಿಕರ ಶೌರ್ಯ, ಪರಾಕ್ರಮದ ದಿನ ಆಚರಿಸಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕನರಗುಂದ ಗ್ರಾಮ ಪಂಚಾಯತ ಅಧ್ಯಕ್ಷ ಮುತ್ತು ರಾಯರೆಡ್ಡಿ, ಉಪಾಧ್ಯಕ್ಷೆ ಮಲ್ಲಮ್ಮ ಮರಿಯನ್ನವರ, ವಾಸನ ಗ್ರಾಮ ಪಂಚಾಯತ ಅಧ್ಯಕ್ಷೆ ಕೆ.ಟಿ. ನೀಲರೆಡ್ಡಿ, ಉಪಾಧ್ಯಕ್ಷೆ ಆರ್.ಟಿ. ತಳವಾರ, ಶಿರೋಳ ಗ್ರಾಮ ಪಂಚಾಯತ ಅಧ್ಯಕ್ಷ ಎಸ್ ಎಸ್ ಗೂಡ್ಲೂರು ಹಾಗೂ ಮೂರು ಗ್ರಾಪಂಗಳ ಸದಸ್ಯರು ಈ ತರಬೇತಿಯಲ್ಲಿ ಭಾಗವಹಿಸಿದ್ದರು.

ಐದು ದಿನಗಳ ತರಬೇತಿ ಸಂಯೋಜಕರಾಗಿ ಎಸ್ ಐಆರ್ ಡಿ ಸಂಸ್ಥೆಯ ಮಂಜುನಾಥ ಮುಧೋಳ, ಗಂಗಮ್ಮ ನಾಯಕ ಕಾರ್ಯ‌ನಿರ್ವಹಿಸಿದರು. ವಿಷಯ ನಿರ್ವಾಹಕರಾದ ಉಪಾಸಿ ಹಾಗೂ ತಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಜನರ ಸಂಕಷ್ಟ ಮರೆತು ಬಿಜೆಪಿಯಲ್ಲಿ ಕುರ್ಚಿಗೆ ಕಿತ್ತಾಟ

  • ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಅತಿವೃಷ್ಟಿ, ನೆರೆಯಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ಬಿಜೆಪಿಯವರು ಸಿಎಂ ಸ್ಥಾನ ಉಳಿಸಿಕೊಳ್ಳುವುದು ಹಾಗೂ ಬದಲಾವಣೆ ಮಾಡುವಲ್ಲಿ ಬ್ಯೂಸಿ ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯದ್ದೇ ನೆರೆ ಹಾನಿ ಪರಿಹಾರ ಇನ್ನೂ ಕೊಟ್ಟಿಲ್ಲ. ಕನಿಷ್ಠ ಈ ಬಾರಿಯಾದರೂ ಪರಿಹಾರ ನೀಡಲಿ. ನೆರೆಹಾನಿ ಸಮೀಕ್ಷೆ ಮಾಡಿ ತಕ್ಷಣವೇ ಪರಿಹಾರ ಘೋಷಣೆ ಮಾಡಬೇಕು. ಇದುವರೆಗೆ 9 ಜನರ ಜೀವ ಹಾನಿಯಾಗಿದೆ. ಸಾವಿರಾರು ಮನೆಗಳು ಕುಸಿದು ಬಿದ್ದಿವೆ, ಬೆಳಹಾನಿಯಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ‌ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಬಿಎಸವೈ ಅಧಿಕಾರದ ಬಗ್ಗೆ ಜೆಪಿ ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿದ ಅವರು, ಹೆತ್ತವರಿಗೆ ಹೆಗ್ಗಣ ಮುದ್ದು- ಜೆಪಿ ನಡ್ಡಾ ಅವರಿಂದ ಇದನ್ನು ಬಿಟ್ಟು ಏನನ್ನು ನಿರೀಕ್ಷಿಸಲು ಸಾಧ್ಯ.. ಎಂದು ಪ್ರತಿಕ್ರಿಯಿಸಿದರು.

ಬಿಎಸ್ ವೈ ರಾಜೀನಾಮೆಯಿಂದ ರಾಜ್ಯಕ್ಕೆ ನಷ್ಟವಿಲ್ಲ

  • ಯಡಿಯೂರಪ್ಪ ರಾಜ್ಯ ಕಂಡ ಕಡುಭ್ರಷ್ಟ ಸಿಎಂ
  • ಗದಗನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ವಿಜಯಸಾಕ್ಷಿ ಸುದ್ದಿ, ಗದಗ

ಯಡಿಯೂರಪ್ಪ ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರೋದ್ರಿಂದ ರಾಜ್ಯಕ್ಕೆ ಒಳ್ಳೆದಾಗೋದಿಲ್ಲ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಗದಗನಲ್ಲಿ ಯಡಿಯೂರಪ್ಪ ಸಿಎಂ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಬಿಜೆಪಿಯೇ ಒಂದು ಭ್ರಷ್ಟ ಪಕ್ಷ, ಬಿಜೆಪಿ ತೊಲಗದೇ ಹೋದರೆ ಈ ರಾಜ್ಯಕ್ಕೆ ಮುಕ್ತಿಯಿಲ್ಲ ಎಂದು ಹರಿಹಾಯ್ದರು.

ಯಡಿಯೂರಪ್ಪ ಕರ್ನಾಟಕ ಕಂಡ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿಯೇ ಆಗಿರ್ತಾರೆ ಎಂದು ಟೀಕಿಸಿದರು. ಮುಂದಿನ ಸಿಎಂ ಯಾರಾಗಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನೇನು ಬಿಜೆಪಿ ಅಧ್ಯಕ್ಷನೆ..? ಅದು ಅವರ ಪಕ್ಷದ ವಿಚಾರ ಎಂದು ಉತ್ತರಿಸಿದರು.

ಯಡಿಯೂರಪ್ಪ ಪರ ಸ್ವಾಮೀಜಿಗಳು ನಿಂತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರೋದು ಒಳ್ಳೆಯದು, ಧರ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತ ಇರಬೇಕು ಎಂದು ಹೇಳಿದರು.

ರಾಜ್ಯಕ್ಕೆ ಹೊಸ ಸಿಎಂ ಬಂದರೂ ಸರಕಾರದ ಭ್ರಷ್ಟಾಚಾರ ಬಯಲು ಮಾಡಲು ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಕಾಂಗ್ರೆಸ್ ವಲಸಿಗರ ಪರಿಸ್ಥಿತಿ ನನಗೆ ಗೊತ್ತಿಲ್ಲ. ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋದವರಿಗೆ ಜನ ಪಾಠ ಕಲಿಸ್ತಾರೆ ಎಂದು ಗುಡುಗಿದರು.

ಸಿದ್ದರಾಮಯ್ಯ ಸ್ವಕ್ಷೇತ್ರ ಪ್ರವಾಸಕ್ಕೆ ಮಲಪ್ರಭಾ ಅಡ್ಡಿ

  • ಕೊಣ್ಣೂರು ಸೇತುವೆ ಸಂಪೂರ್ಣ ಜಲಾವೃತ

ವಿಜಯಸಾಕ್ಷಿ ಸುದ್ದಿ, ಗದಗ

ಸ್ವಕ್ಕೇತ್ರ ಬಾದಾಮಿ ಕ್ಷೇತ್ರದ
ಪ್ರವಾಹ ಪರಿಶೀಲನೆಗೆ ತೆರಳಬೇಕಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಲಪ್ರಭಾ ಪ್ರವಾಹ ಅಡ್ಡಿಪಡಿಸಿದೆ. ಹುಬ್ಬಳ್ಳಿ- ವಿಜಯಪುರ ಮಾರ್ಗವಾಗಿ ತೆರಳಬೇಕಿತ್ತು. ಆದರೆ, ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಬಳಿ ಮಲಪ್ರಭಾ ನದಿಯ ನೀರಿನಿಂದ
ಸೇತುವೆ ಹಾಗೂ ರಸ್ತೆ ಮುಳುಗಡೆಯಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಹೀಗಾಗಿ ಅವರು ಬೇರೆ ಮಾರ್ಗದಲ್ಲಿ ಬಾಗಲಕೋಟೆ ಪ್ರವಾಸ ಬೆಳೆಸುವ ಸಾಧ್ಯತೆ ಇದೆ. ಎನ್ನಲಾಗುತ್ತದೆ.

ನಾಳೆ ರಾಜ್ಯಪಾಲರ ಭೇಟಿಗೆ ಟೈಮ್ ಫಿಕ್ಸ್

  • ವರಿಷ್ಠರಿಂದ ಇನ್ನೂ ಬಾರದ ಸಂದೇಶ
  • ರೋಚಕತೆ ಘಟ್ಟಕ್ಕೆ ತಲುಪಿದ ಸಿಎಂ ಬದಲಾವಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಿಎಂ ಬದಲಾವಣೆ ವಿಷಯ ಸಿನಿಮಾ ಕ್ಲೈಮಾಕ್ಸ್ ರೀತಿ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಂಜೆಯೊಳಗೆ ವರಿಷ್ಠರ ಸಂದೇಶ ಬರುತ್ತೆ ಬಂದ ಬಳಿಕ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ರಾತ್ರಿ 9 ಗಂಟೆಯಾದರೂ ವರಿಷ್ಠರ ಸಂದೇಶ ಬಂದಿರುವ ಬಗ್ಗೆ ಖಚಿತವಾಗಿಲ್ಲ. ಸಂಜೆ ಬೆಂಗಳೂರಿಗೆ ವಾಪಸ್ ಬಂದ ಸಿಎಂ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಸಂದೇಶ ಬರಬಹುದು ಎನ್ನುತ್ತಲೇ ನಾಳೆ ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲರ ಭೇಟಿಗೆ ಸಮಯ ಪಡೆದಿರುವುದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಆದರೆ, ಯಾವುದಕ್ಕಾಗಿ ರಾಜ್ಯಪಾಲರ ಭೇಟಿ ಎಂಬ ಗುಟ್ಟನ್ನು ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ.

ರಾಜೀನಾಮೆ ಸಲ್ಲಿಸಲು ರಾಜ್ಯಪಾಲರ ಬಳಿ ಸಮಯ ತೆಗೆದುಕೊಂಡಿದ್ದಾರಾ ಅಥವಾ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಳೆಗೆ ಎರಡು ವರ್ಷ ತುಂಬಲಿರುವ ಹಿನ್ನಲೆ ಭೇಟಿ ಆಗಲಿದ್ದಾರೆಯೇ ಎಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.
ಈ ಮಧ್ಯೆ ಗೋವಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕರ್ನಾಟಕದಲ್ಲಿ ಯಾವುದೇ ಸಮಸ್ಯೆ, ರಾಜಕೀಯ ಅರಾಜಕತೆ ಸೃಷ್ಟಿಯಾಗಿಲ್ಲ. ಯಡಿಯೂರಲ್ಲ ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದು ಶಹಬ್ಬಾಶ್ ಗಿರಿ ಕೊಟ್ಟಿರುವುದು ವಿಷಯ ಮತ್ತೊಂದು ತಿರುವು ಪಡೆದುಕೊಂಡಿದೆ.

ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಷಾ, ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಸಭೆ ನಡೆಸಿ ರಾಜ್ಯ ರಾಜಕೀಯ ಬೆಳವಣಿಗೆಗೆ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿತ್ತು. ಆದರೆ, ರಾತ್ರಿ 10 ಗಂಟೆಯಾದರೂ ದೆಹಲಿಯಲ್ಲಿ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಇದನ್ನೆಲ್ಲ ಗಮನಿಸಿದರೆ ಸದ್ಯದ ಮಟ್ಟಿಗೆ ಬಿಎಸ್ ವೈ ರಾಜೀನಾಮೆ ತೂಗುಗತ್ತಿಯಿಂದ ಪಾರಾದರಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಒಟ್ಟಾರೆ ಇಂದು ಫಿಕ್ಸ್ ಆಗಿದ್ದ ಸಿಎಂ ಬದಲಾವಣೆಯ ಕ್ಲೈಮಾಕ್ಸ್ ನಾಳೆಗೆ ಮುಂದೂಡಿಕೆಯಾಗಿದೆ. ಬಿಎಸ್ ವೈ ರಾಜೀನಾಮೆ ನೀಡ್ತಾರಾ ಇಲ್ಲ ಅಥವಾ ಇನ್ನು ಕೆಲ ದಿನಗಳ ಮಟ್ಟಿಗೆ ಸೇಫ್ ಆಗಲಿದ್ದಾರೆಯೇ ಎಂಬುದು ನಾಳೆ ಸ್ಪಷ್ಟವಾಗಲಿದೆ.

ಬಾಗಿಲು ಮುರಿದು ಭಾರಿ ಕಳ್ಳತನ; ನಗದು, ಸೇರಿ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಕಳ್ಳರು ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿಂದ ಯಾವುದೇ ಕಳ್ಳತನ ಪ್ರಕರಣಗಳು ನಡೆದಿರಲಿಲ್ಲ. ಆದರೆ ಕಳೆದ ಹದಿನೈದು ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಈಗ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಮೊನ್ನೆ ಗದಗ ನಗರದಲ್ಲಿ ದೊಡ್ಡಮಟ್ಟದಲ್ಲಿ ಮನೆಗಳ್ಳತನ ಪ್ರಕರಣ ನಡೆದಿದೆ. ಗದಗನ ಕೇಶವನಗರದಲ್ಲಿನ ಸಜ್ಜನ ಕಾಲೋನಿಯ ನಿವಾಸಿ, ಮನೆ ಕಟ್ಟಿ ಮಾರಾಟ ಮಾಡುವ ವೆಂಕಟೇಶ ಮುಂಬಾರಡ್ಡಿ ಎಂಬುವವರ ಮನೆ ಕಳ್ಳತನವಾಗಿದ್ದು, ಬಡಾವಣೆಯ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದೆ.

ಹಾಡುಹಗಲೇ ಮನೆಯ ಹಿಂಬಾಗಿಲನ್ನು ಮುರಿದು ಒಳಹೊಕ್ಕ ಕಳ್ಳರು, ಅಲ್ಮೇರಾದಲ್ಲಿನ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿದ್ದಾರೆ. ಶುಕ್ರವಾರ ಕಾರ್ಯನಿಮಿತ್ತ ಕುಟುಂಬ ಸಮೇತ ಬೇರೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

4ಲಕ್ಷ 55 ಸಾವಿರ ರೂ. ಮೌಲ್ಯದ 91 ಗ್ರಾ. ಚಿನ್ನಾಭರಣ, ನಗದು 1ಲಕ್ಷ 70 ಸಾವಿರ ರೂ ಖದೀಮರು ದೋಚಿ ಪರಾರಿಯಾಗಿದ್ದಾರೆ.

ಶುಕ್ರವಾರ ಸಂಜೆ ಮನೆಗೆ ಬಂದು ನೋಡಿದ ಮುಂಬಾರಡ್ಡಿ ಅವರಿಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರವಾಹ ಬಾಧಿತ ಪ್ರದೇಶಗಳ ಭೇಟಿ; ಸಂತ್ರರಸ್ತರ ಅಳಲು ಆಲಿಸಿದ ಸಿಎಂ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ನಾಳೆಯೊಳಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳ ಮಧ್ಯೆಯೇ ಸಿಎಂ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿ ಪ್ರವಾಹದಿಂದ ಬಾಧಿತಗೊಂಡಿರುವ ಹಿರಣ್ಯಕೇಶಿ ನದಿಪಾತ್ರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಪ್ರವಾಹದಿಂದ ಬಾಧಿತರಾಗಿರುವ ಸಂತ್ರಸ್ತರ ಅಹವಾಲು ಆಲಿಸಿದರು.
ಹಿರಣ್ಯಕೇಶಿ ನದಿತೀರದಲ್ಲಿರುವ ಸಂಕೇಶ್ವರ ಪಟ್ಟಣದ ಮಠಗಲ್ಲಿ, ಕುಂಬಾರ ಓಣಿ ಹಾಗೂ ನದಿಗಲ್ಲಿಯ ಬಳಿಯ ಮುಳುಗಡೆ ಪ್ರದೇಶಗಳನ್ನು ಸಿಎಂ ವೀಕ್ಷಿಸಿದರು.

ಬಳಿಕ ಶಂಕರಲಿಂಗ ಕಾರ್ಯಾಲಯದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂತ್ರಸ್ತರ ಜತೆ ಮಾತನಾಡಿದ ಅವರು, ಸಂಕೇಶ್ವರ ಪಟ್ಟಣದಲ್ಲಿ ಪ್ರತಿವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಮನೆಗಳ ಶಾಶ್ವತ ಸ್ಥಳಾಂತರಕ್ಕೆ ಐವತ್ತು ಎಕರೆ ಭೂಮಿ‌ ಲಭ್ಯವಿದೆ. ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ.

ಸಂತ್ರಸ್ತರು ಸಹಕರಿಸಿದರೆ ಐವತ್ತು ಎಕರೆ ಜಾಗೆಯಲ್ಲಿ ಮನೆಗಳನ್ನು ಒದಗಿಸಲಾಗುತ್ತದೆ. ಅತಿವೃಷ್ಟಿಯಿಂದ ಸಂಕಷ್ಟಕ್ಕೆ
ಒಳಗಾದ ಜನರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು. ಮಳೆ ನಿಂತ ಬಳಿಕ ಮನೆ ಮನೆ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ನೀಡಲಾಗುವುದು.

ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಊಟೋಪಹಾರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ, ಸರ್ಕಾರ ನಿಮ್ಮ ಜತೆಗಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ಬಳಿಕ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿ ಅತಿವೃಷ್ಟಿಯಿಂದ ಮುಳುಗಡೆಯಾಗಿರುವ ರಾಷ್ಟ್ರೀಯ ಹೆದ್ದಾರಿ-4 ಅನ್ನು ಸಿಎಂ ಪರಿಶೀಲಿಸಿದರು.

ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್. ಅಶೋಕ, ಹುಕ್ಕೇರಿ ಮತಕ್ಷೇತ್ರದ ಶಾಸಕ, ಸಚಿವ ಉಮೇಶ್ ಕತ್ತಿ ಮತ್ತಿತರರು ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅವಾಂತರ

  • ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ಕುಸಿದ ಮೇಲ್ಛಾವಣಿ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದರೂ ನಂತರದ ಅವಾಂತರಗಳು ಮುಂದುವರಿದಿವೆ. ನರಗುಂದ ತಾಲೂಕಿ‌ನ ವಾಸನ ಗ್ರಾಮದಲ್ಲಿ ರಾತ್ರಿ ಮನೆಯ ಮೇಲ್ಛಾವಣಿ ಕುಸಿದಿದ್ದು, ಅದೃಷ್ಡವಶಾತ್ ತಾಯಿ-ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದೆಡೆ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಬೆಣ್ಣೆಹಳ್ಳ ದಾಟುವ ವೇಳೆ ನೀರಿನ ರಭಸಕ್ಕೆ ಲಾರಿಯೊಂದು ಜರಿದು ಹಳ್ಳದತ್ತ ವಾಲಿದೆ. ಪ್ರಾಣಹಾನಿ ಸಂಭವಿಸಿಲ್ಲ.

ಸತತವಾಗಿ ಸುರಿದ ಮಳೆಯಿಂದ ರಾತ್ರಿ ವೇಳೆ ಮನೆಯ ಮೇಲ್ಛಾವಣಿ ಕುಸಿದಿದೆ. ಮನೆಯೊಳಗೆ ನಿದ್ರಿಸುತ್ತಿದ್ದ ತಾಯಿ-ಮಗಳು ಅದೃಷ್ಟವಶಾತ್ ಸುರಕ್ಷಿತವಾಗಿದ್ದಾರೆ.

ಕಳೆದ ವರ್ಷ ಪ್ರವಾಹಕ್ಕೆ ವಾಸನ ಗ್ರಾಮ ತುತ್ತಾಗಿತ್ತು. ಮನೆ ಹಾನಿಗೆ ಸೂಕ್ತವಾದ ಪರಿಹಾರ ನೀಡುವಂತೆ ಸ್ಥಳೀಯರು ಮನವಿ‌ ಮಾಡಿದ್ದಾರೆ.

ಬೆಣ್ಣೆಹಳ್ಳದಲ್ಲಿ ವಾಲಿದ ಲಾರಿ

ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಬೆಣ್ಣೆಹಳ್ಳ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಲಾರಿ ಹಳ್ಳಕ್ಕೆ ವಾಲಿದೆ.
ಲಾರಿಯು ನರಗುಂದ ದಿಂದ ರೋಣ ಪಟ್ಟಣಕ್ಕೆ ಹೊರಟಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಿಎಂ ಪ್ರವಾಹ ಪರಿಶೀಲನೆಗೆ ಜಾರಕಿಹೊಳಿ ಬ್ರದರ್ಸ್ ಗೈರು

  • ಚರ್ಚೆಗೆ ಗ್ರಾಸವಾದ ಸ್ಥಳೀಯ ಶಾಸಕರ ಗೈರು

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಸಿಎಂ ಬಿಎಸ್ ವೈ ಬೆಳಗಾವಿಗೆ ಆಗಮಿಸಿದರೂ ಜಾರಕಿಹೊಳಿ ಬ್ರದರ್ಸ್ ಸುಳಿವೇ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ. ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಶಾಸಕ ರಮೇಶ ಜಾರಕಿಹೊಳಿ ಕ್ಷೇತ್ರದಲ್ಲೇ ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ ಜನತೆ ತೊಂದರೆಗೆ ಸಿಲುಕಿದ್ದಾರೆ.

ಸ್ವತಃ ಸಿಎಂ ಪರಿಶೀಲನೆಗೆ ಬಂದರೂ ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ ಗೈರು ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸಿಎಂ ಬಿಎಸ್ ವೈ ಅವರಿಂದ ಅಂತರ ಕಾಯ್ದುಕೊಂಡ ಜಾರಕಿಹೊಳಿ ಬ್ರದರ್ಸ್ ನಡೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರ ರಚನೆ ಆದಾಗಿನಿಂದಲೂ ರಮೇಶ ಜಾರಕಿಹೊಳಿ ಸಿಎಂ ಜೊತೆಗೆ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ಕೊಟ್ಟ ಮಾತಿನಂತೆ ಡಿಸಿಎಂ ಮಾಡದಿರುವುದು, ತಮ್ಮ ಖಾತೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪ ರಮೇಶ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಒಂದು ಹಂತದಲ್ಲಿ ಬಿಎಸ್ ವೈ ಕೆಳಗಿಳಿಸಲು ಜಾರಕಿಹೊಳಿ ಬ್ರದರ್ಸ್ ಬಂಡಾಯ ಶಾಸಕರ ಒಗ್ಗೂಡಿಸುವ ಕಾರ್ಯವನ್ನೂ ಆರಂಭಿಸಿದ್ದರು.
ಈ ಹಂತದಲ್ಲಿ ರಮೇಶ ಜಾರಕಿಹೊಳಿ ವಿರುದ್ಧ ಸೀಡಿ ಬಾಂಬ್ ಸಿಡಿದು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಇದರ ಹಿಂದೆ ಡಿಕೆಶಿ ಜೊತೆಗೆ ವಿಜಯೇಂದ್ರ ಕೈವಾಡವೂ ಇರಬಹುದು ಎಂಬ ಗುಮಾನಿ ಜಾರಕಿಹೊಳಿ ಬ್ರದರ್ಸ್ ಮನದಲ್ಲಿ ಬೇರೂರಿದೆ.

ಮತ್ತೊಂದೆಡೆ ಆದಷ್ಟು ಬೇಗ ಸೀಡಿ ಕೇಸ್ ವಿಚಾರಣೆ ಮುಕ್ತಾಯಗೊಳಿಸಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ರಮೇಶ ಜಾರಕಿಹೊಳಿ ದುಂಬಾಲು ಬಿದ್ದಿದ್ದರು. ಆದರೆ, ಈ ಕೋರಿಕೆಗೆ ಸಿಎಂ ಸೊಪ್ಪು ಹಾಕಿರಲಿಲ್ಲ. ಸಚಿವ ಸ್ಥಾನ ಕಳೆದುಕೊಂಡು ಕುದಿಯುತ್ತಿರುವ ರಮೇಶ ಜಾರಕಿಹೊಳಿ, ಸೀಡಿ ಕೇಸ್ ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಖುದ್ದು ಹೋಗಿದ್ದಾರೆ. ಇದೇ ಅಸಮಾನದಿಂದಲೇ ಇಂದಿನ ಸಿಎಂ ಪ್ರವಾಹ ಪರಿಶೀಲನೆಗೆ ಗೈರಾಗಿದ್ದರು ಎಂಬ ಮಾತು ಕೇಳಿಬರುತ್ತಿದೆ.

ದಿಢೀರ್ ಬೆಂಗಳೂರಿಗೆ ಹಾರಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ

  • ಹುಬ್ಬಳ್ಳಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸಿಎಂ ಯಡಿಯೂರಪ್ಪ ಪದತ್ಯಾಗ‌ ಕುರಿತಂತೆ ಇಂದು ಸಂಜೆ ದೆಹಲಿ ವರಿಷ್ಠರಿಂದ ಬರುವ ಸಂದೇಶಕ್ಕಾಗಿ ರಾಜ್ಯದ ಜನತೆ ಕಾತರರಾಗಿದ್ದು, ಈ ಮಧ್ಯೆ ಸಿಎಂ ಸ್ಥಾನದ ರೇಸ್ ನಲ್ಲಿ ಮೊದಲ ಸಾಲಿನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ದಿಢೀರ್ ರಾಜಧಾನಿ ಬೆಂಗಳೂರಿಗೆ ಹಾರಿದ್ದಾರೆ.

ಇಂದು ಬಿಎಸ್ ವೈ ಪದತ್ಯಾಗ ನಿಟ್ಟಿನಲ್ಲಿ ಹೈಕಮಾಂಡ್ ಸಂದೇಶ ಬರಲಿದ್ದು, ಈ ಹಿನ್ನಲೆ
ಹುಬ್ಬಳ್ಳಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ. ನಿನ್ನೆ ರಾತ್ರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದೇ ವೇಳೆ ಸಚಿವ ಜಗದೀಶ್ ಶೆಟ್ಟರ್ ಕೂಡ ಆರ್.ಎಸ್.ಎಸ್. ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಜೋಶಿ ಬೆಂಗಳೂರಿಗೆ ಹೋಗಿದ್ದು, ಆರ್.ಎಸ್.ಎಸ್ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಎನ್ನಲಾಗುತ್ತಿದ್ದರೂ ಸಂಜೆ ನಡೆಯುವ ಮಹತ್ವದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜಧಾನಿಗೆ ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

error: Content is protected !!