ಬೆಂಗಳೂರು: ರಾಜ್ಯದಲ್ಲಿ ಮೊದಲೇ ನಿಷ್ಕ್ರಿಯವಾಗಿದ್ದ ಸರ್ಕಾರದ ಆಡಳಿತ ಯಂತ್ರ ಇದೀಗ ದೆಹಲಿಗೆ ಶಿಫ್ಟ್ ಆಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ನಡುವೆಯೂ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಈ ಸರ್ಕಾರ ಆರಂಭದಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸ್ಪಂದನೆ ನೀಡಿದ್ದರೆ ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರಲಿಲ್ಲ. ಜನರ ನೋವು ಕೇಳುವ ಮನಸ್ಸೇ ಈ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು.
ಅಧಿಕಾರಕ್ಕೆ ಬರುವಾಗ ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್, ಇದೀಗ ‘60 ಪರ್ಸೆಂಟ್ ಸರ್ಕಾರ’ವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದ ಅವರು, ಯಾವ ಇಲಾಖೆಯಲ್ಲಿ ಲಂಚವಿಲ್ಲ ಎನ್ನುವ ಸ್ಥಿತಿ ಇದೆ? ಯಾವ ಸಚಿವರು ನಾನು ಲಂಚ ಪಡೆಯುವುದಿಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿದ್ದಾರೆ? ಎಂದು ಪ್ರಶ್ನಿಸಿದರು.
ರಾಜ್ಯದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ಸಂಬಂಧಪಟ್ಟ ಸಚಿವರು ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡುವುದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಜನರ ಸಮಸ್ಯೆಗಳನ್ನು ಕೇಳಿಕೊಳ್ಳಲು ವಿಧಾನಸೌಧಕ್ಕೆ ಬರುವವರು ಇದೀಗ ದೆಹಲಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ ಅವರು, ನನ್ನ ಸ್ಥಾನ ಉಳಿಯುತ್ತದೆಯೇ? ಯಾವ ಖಾತೆ ಸಿಗುತ್ತದೆಯೇ? ಎಂಬ ಚರ್ಚೆಯಲ್ಲೇ ನಾಯಕರು ತೊಡಗಿದ್ದಾರೆ. ಜನರ ಸಮಸ್ಯೆ ಕೇಳಲು ಇವರಿಗೆ ಸಮಯವೇ ಇಲ್ಲ ಎಂದರು.



