Home Blog Page 3262

ಎಸಿಬಿ ಬಲೆಗೆ ಬಿದ್ದ ಪಿಡಿಓ ಮತ್ತು ಕಾರ್ಯದರ್ಶಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಫಾರಂ 11ಬಿ ಮಾಡಿಸಲು 6000 ರೂಪಾಯಿ ಬೇಡಿಕೆ ಇಟ್ಟಿದ್ದ ಪಿಡಿಓ ಹಾಗೂ ಕಾರ್ಯದರ್ಶಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾ.ಪಂ.ನಲ್ಲಿ ಗುರುವಾರ ನಡೆದಿದೆ.

ಬಂಡಿಬಸಪ್ಪ ಕ್ಯಾಂಪ್ ನಿವಾಸಿ ವಿಜಯ ಕುಮಾರ್ ಅವರಿಂದ ಹಣ ಪಡೆಯುವ ವೇಳೆ ಎಸಿಬಿ ರೈಡ್ ನಡೆದಿದ್ದು, ಕೊಪ್ಪಳ ಎಸಿಬಿ ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನ ಹಾಗೂ ಶಿವಕುಮಾರ್ ನೇತೃತ್ವದಲ್ಲಿ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ ಶೇಖಸಾಬ್ ಹಾಗೂ ಕಾರ್ಯದರ್ಶಿ ನೂರ್ ಉಲ್ಲಕ್ ಅವರ
ಭ್ರಷ್ಟಾಚಾರ ಕುರಿತು ಎಸಿಬಿ ಅಧಿಕಾರಿಗಳು ತನಿಖೆ ನೆಡಸುತ್ತಿದ್ದಾರೆ.

ಕೊಪ್ಪಳದ ಅಜ್ಜನ‌ ಜಾತ್ರೆ ರದ್ದು!!

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ:
ಶತಮಾನಗಳಿಂದ ನಡೆದುಕೊಂಡು ಬಂದ ಕೊಪ್ಪಳ ಗವಿಮಠ ಜಾತ್ರೆ ರದ್ದಾಗಿದೆ.
ದಕ್ಷಿಣ ಭಾರತದ ಮಹಾಕುಂಭ ಮೇಳ, ಉತ್ತರದ ಸಿದ್ಧಗಂಗೆ ಎಂಬ ಖ್ಯಾತಿಯ ಗವಿಮಠ ಜಾತ್ರೆ
ಕೊರೊನಾ ಹಾಗೂ ಓಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ
ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದು
ಮಾಡಿರುವುದಾಗಿ ಗವಿಮಠದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ಪ್ರತಿ ವರ್ಷ ಜಾತ್ರೆಯಲ್ಲಿ 5-6 ಲಕ್ಷ ಜನ ಸೇರುತ್ತಿದ್ದರು.
15 ದಿನಗಳ ನಡೆಯುತ್ತಿದ್ದ ಜಾತ್ರೆ ಈ ವರ್ಷ ಜನವರಿ 19 ರಂದು ನಡೆಯಬೇಕಿದ್ದ ಮಹಾರಥೋತ್ಸವವೂ ರದ್ದಾಗಿದೆ. ಆದರೆ
ಸಂಪ್ರದಾಯಬದ್ದವಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಈಗ ಗವಿಸಿದ್ದೇಶ್ವರ ಕರ್ತೃ ಗದ್ದುಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ಕೊರೊನಾ ಸೋಂಕು ಹೆಚ್ಚಾದರೆ ಶ್ರೀಮಠದ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುವುದು ಎಂದು
ಗವಿಮಠದ ಪ್ರಕಟಣೆ ತಿಳಿಸಿದೆ.

ಮುಜರಾಯಿ ಇಲಾಖೆಯಿಂದ ಅಂಜನಾದ್ರಿ ಪರ್ವತ ಕಬ್ಜಾ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಮೂರು ವರ್ಷಗಳಿಂದ ಅಂಜನಾದ್ರಿಯನ್ನ ಮುಜರಾಯಿ ಇಲಾಖೆ ಕಬ್ಜಾ ಮಾಡಿಕೊಂಡಿದೆ. ಕೊರೊನಾ ಸಂದರ್ಭದಲ್ಲಿ ಬೀಗ ಹಾಕುತ್ತಾ, ಪೂಜೆ-ಪುನಸ್ಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೂ ವಿರಾಮ ನೀಡಲಾಗಿದೆ ಎಂದು ಶ್ರೀ ರಾಮಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮುರಡಿ ದೂರಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಅಂಜನಾದ್ರಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಅರ್ಚಕ ವಿದ್ಯಾದಾಸ್ ಬಾಬಾ ಅವರನ್ನು ಷಡ್ಯಂತ್ರ ಮಾಡಿ ಹೊರ ಹಾಕಲಾಯಿತು. ಈಗ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಿದ್ಯಾದಾಸ್ ಬಾಬಾ ಅವರು ಅಂಜನಾದ್ರಿ ಪರ್ವತದಲ್ಲಿ ಪೂಜೆ, ಹೋಮ-ಹವನ ನಡೆಸಲು ಕೋರ್ಟ್ ಆದೇಶ ಆಗಿದೆ. ಆದರೂ ಮುಜರಾಯಿ ಇಲಾಖೆ ಹಾಗೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ಶಬರಿ ಮಲೈ ದೇವಸ್ಥಾನದ ಪ್ರಸಾದದ ಗುತ್ತಿಗೆ ಹಲಾಲ‌ ಕಮಿಟಿಗೆ ನೀಡಲು ಹುನ್ನಾರ ನಡೆದಿದೆ. ಹಿಂದೂಗಳ ದೇವಸ್ಥಾನದ ಪ್ರಸಾದ ವಿತರಣೆಯ ಗುತ್ತಿಗೆ‌ ನೆಪದಲ್ಲಿ ಅನ್ಯ ಧರ್ಮದ ಕಮಿಟಿಗೆ ಕೊಡಲು ಮುಂದಾಗಿರುವುದು ಹಿಂದೂ ಧರ್ಮದ ವಿರುದ್ಧ ನಡೆಸುತ್ತಿರುವ ಸಂಚು ಎಂದು ಅವರು ಶಂಕೆ ವ್ಯಕ್ತಪಡಿಸಿದರು.

ಅಂಜನಾದ್ರಿ ಪರ್ವತದಲ್ಲಿ ಪೂಜೆ, ಅಖಂಡ ರಾಮಾಯಣ ಪಠಣ, ಹನುಮಾನ್ ಚಾಲೀಸಾ ಮತ್ತು ಸಂಸ್ಕೃತ ಪಾಠಶಾಲಾ ನಡೆಸಿಕೊಂಡು ಬಂದಿದ್ದ ವಿದ್ಯಾದಾಸ್ ಬಾಬಾರವರನ್ನು ಹೊರಗಡೆ ಹಾಕಿದ ಮುಜರಾಯಿ ಇಲಾಖೆ ಅಧಿಕಾರಿಗಳು, ಸದ್ಯ ಈ ಎಲ್ಲ ಧಾರ್ಮಿಕ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ. ಅಧಿಕಾರಿಗಳು ಹಣದ ಸಂಪನ್ಮೂಲ ಎಲ್ಲಿ ಬರುತ್ತದೆಯೋ ಅಲ್ಲಿ ಓಡಿ ಹೋಗುತ್ತಾರೆ. ಬಾಬಾರವರನ್ನು ದೇವಸ್ಥಾನದಿಂದ ಹೊರ ಹಾಕುವಾಗ ಅಧಿಕಾರಿಗಳು ದೇವಸ್ಥಾನದ ನಗದು, ಬೆಳ್ಳಿ ಸಲಕರಣೆಗಳನ್ನು ದೋಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟ್ ಆದೇಶದಂತೆ ವಿದ್ಯಾದಾಸ್ ಬಾಬಾ ಅವರನ್ನು ಮರಳಿ ದೇವಸ್ಥಾನದ ಮೂಲ ಅರ್ಚಕರೆಂದು ಮತ್ತು ಅಲ್ಲಿ ನಡೆಯುವ ಕಾರ್ಯಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ ಅವರು, ಇಲ್ಲದಿದ್ದರೆ ಶ್ರೀ ರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅರ್ಚಕ ವಿದ್ಯಾದಾಸ ಬಾಬಾ,
ಮಲ್ಲಾಪುರ ಗ್ರಾಮದ ಜೆ.ಪಿ.ನಾರಾಯಣಗೌಡ್ರ ಮತ್ತಿತರರು ಇದ್ದರು.

ರಾಜೇಶ್ವರಿ ಶಾಲೆಯ ಮೂವರು ಶಿಕ್ಷಕರು, ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು; ಜ.19ರವರೆಗೆ ಶಾಲೆ ಬಂದ್!

ವಿಜಯಸಾಕ್ಷಿ ಸುದ್ದಿ, ಗದಗ:

ತಾಲ್ಲೂಕಿನ ಹುಲಕೋಟಿ ಗ್ರಾಮದ ಪ್ರತಿಷ್ಠಿತ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯ ಓರ್ವ ಶಿಕ್ಷಕ, ಇಬ್ಬರು ಶಿಕ್ಷಕಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಜ.19 ರವರೆಗೆ ಶಾಲೆ ಬಂದ್ ಮಾಡಲಾಗಿದೆ ಎಂದು ಡಿಡಿಪಿಐ ಜಿ.ಎಂ.ಬಸವಲಿಂಗಪ್ಪ ಹೇಳಿದರು.

ಶಾಲೆಯ ಕ್ವಾರ್ಟರ್ಸ್ ನಲ್ಲಿ ವಾಸವಿರುವ ಓರ್ವ ಶಿಕ್ಷಕ ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವರ ಮಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಬುಧವಾರ 57 ರ‌್ಯಾಪಿಡ್ ಟೆಸ್ಟ್ ಹಾಗೂ 97 ವಿದ್ಯಾರ್ಥಿಗಳಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ವಸತಿ ನಿಲಯದಲ್ಲಿರುವ ಎಲ್ಲ ಮಕ್ಕಳಿಗೂ ಕೋವಿಡ್ ಪರೀಕ್ಷೆ ಮಾಡಲಾಗುವುದು. ಅಲ್ಲದೇ, ಕೊರೊನಾ ಬಂದಿರುವ ಮಕ್ಕಳು ಹಾಗೂ ಶಿಕ್ಷಕರಿಗೆ ಹೋಂ ಐಸೋಲೇಶನ್ ಮಾಡಲಾಗಿದೆ ಎಂದು ತಿಳಿಸಿದರು.

ಹುಲಕೋಟಿಯ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ‌ ಭಾಗಗಳ ಒಟ್ಟು 1900 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 68 ಮಕ್ಕಳು ವಸತಿ‌ ನಿಯಮದಲ್ಲಿದ್ದು, 10ನೇ ತರಗತಿಯಲ್ಲಿ ಒಟ್ಟು 150 ಮಕ್ಕಳು ಇದ್ದಾರೆ ಎಂದು ಡಿಡಿಪಿಐ ಬಸವಲಿಂಗಪ್ಪ ತಿಳಿಸಿದರು.

ಪೌರಾಯುಕ್ತರ ಹೆಸರು ಹೇಳಿಕೊಂಡು ಬಂದ ಮಧ್ಯವರ್ತಿಯೊಬ್ಬ 20 ಲಕ್ಷ ರೂಪಾಯಿ ಕೇಳಿದ!

0

ಖಾತಾ ಮಾಡಿಕೊಡಲು ಲಂಚ ಬೇಕಂತೆ!?

-ಯಶಸ್ವಿ ಟೌನ್ಶಿಪ್ನ ಕಾನೂನು ಸಲಹೆಗಾರರ ಗಂಭೀರ ಆರೋಪ
-ಕೊಪ್ಪಳ ನಗರಸಭೆಯಿಂದ ವಿನಾಕಾರಣ ವಿಳಂಬ ಧೋರಣೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊಪ್ಪಳ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ಇಲ್ಲದಿದ್ದರೆ ಅಲೆದಾಟ ತಪ್ಪಿದ್ದಲ್ಲ ಎಂದು ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ನ ಕಾನೂನು ಸಲಹೆಗಾರರಾದ ಶ್ರೀಮತಿ ಸಿ.ಸುನಂದಾ ಆರೋಪಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರದೇಶಗಳಲ್ಲಿ ಕಾನೂನಿನಡಿ ನಾವು ಯಶಸ್ವಿ ಟೌನ್ಶಿಪ್ಗಳು ಅಬಿವೃದ್ಧಿಯಾಗಿವೆ. ವೇಗವಾಗಿ ಬೆಳೆಯುತ್ತಿರುವ ಕೊಪ್ಪಳದಲ್ಲಿ ಮಾದರಿ ಬಡಾವಣೆ ನಿರ್ಮಿಸಬೇಕೆಂಬ ಉದ್ದೇಶದಿಂದ ನಾವು ಯಶಸ್ವಿ ಪವನಸ್ಕರ್ ನಗರವನ್ನು ಅಭಿವೃದ್ಧಿಪಡಿಸಿದ್ದೇವೆ. ಸರಕಾರದ ಎಲ್ಲ ನಿಯಮಾವಳಿಗಳನ್ನು ಪಾಲನೆ ಮಾಡಿ ಕೊಪ್ಪಳದಲ್ಲಿ ಸುಂದರ ಸುಸಜ್ಜಿತ ಬಡಾವಣೆ ನಿರ್ಮಿಸಿದ್ದೇವೆ. ಆದರೆ ನಗರಸಭೆಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ವಿಳಂಬ ಧೋರಣೆಯಿಂದಾಗಿ ನಮ್ಮ ಗ್ರಾಹಕರಿಗೆ ನಿವೇಶನಗಳ ಖಾತಾ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ನಗರಸಭೆಯ ಆಯುಕ್ತರು ಈ ವಿಷಯದಲ್ಲಿ ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ನಮಗೆ ಈ ರೀತಿ ಮಾಡುತ್ತಿದ್ದಾರೆ ಎಂದು ವಿಚಾರಿಸಿದಾಗ ಅವರ ಬೇಡಿಕೆಗಳನ್ನು ನಾವು ಈಡೇರಿಸಿಲ್ಲ ಎಂಬ ಉತ್ತರ ಅವರ ಬ್ರೋಕರ್ಗಳ ಮೂಲಕ ಬರುತ್ತಿದೆ. ನಿವೇಶನಗಳ ಖಾತಾ ಮಾಡಿಕೊಡುವಂತೆ ನಾವು ನಗರಸಭೆಗೆ ಹಲವು ಬಾರಿ ಅರ್ಜಿ ಕೊಟ್ಟಿದ್ದೇವೆ. ವೈಯಕ್ತಿಕವಾಗಿ ಮನವಿ ಮಾಡಿದ್ದೇವೆ. ಆದರೂ ನಗರಸಭೆ ಸ್ಪಂದಿಸಿಲ್ಲ ಎಂದು ಅವರು ತಿಳಿಸಿದರು.
ಕೆಲವು ದಿನಗಳ ಹಿಂದೆ ಪೌರಾಯುಕ್ತರ ಹೆಸರು ಹೇಳಿಕೊಂಡು ಬಂದ ಅರಗಂಜಿ ಹೆಸರಿನ ಮಧ್ಯವರ್ತಿಯೊಬ್ಬ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಅದೂ ತಮ್ಮ ಪಾಲಿನ ಹಣ. ಪೌರಾಯುಕ್ತರ ಪಾಲಿನದ್ದನ್ನು ಅವರ ಜೊತೆ ಮಾತನಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ನಾವು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಲಂಚ ಕೊಡುವುದು, ತೆಗೆದುಕೊಳ್ಳುವುದು ಅಪರಾಧ ಎಂಬ ಭಾವನೆ ಹೊಂದಿದವರೆಂದು ನೇರವಾಗಿ ಹೇಳಿ ಕಳಿಸಿದ್ದೇವೆ. ಈ ಕುರಿತು ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು.
ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ ಅವರ ಬಗ್ಗೆ ನಮಗೆ ಪೂರ್ವಗ್ರಹವಿಲ್ಲ. ಅವರ ಹೆಸರು ಹೇಳಿಕೊಂಡು ಬಂದ ಮಧ್ಯವರ್ತಿಯನ್ನ ಅವರೇ ಕಳಿಸಿದ್ದಾ? ಇಲ್ಲವಾ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಒಂದೊಮ್ಮೆ ಅವರು ಪ್ರಾಮಾಣಿಕವಾಗಿದ್ದರೆ ಸರಕಾರದ ನಿಯಮನುಸಾರ ನಿಗದಿತ ಅವಧಿಯೊಳಗೆ ಖಾತಾ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಮನವಿಯ ಹಲವು ಪ್ರಯತ್ನಗಳು ವಿಫಲವಾದ ಬಳಿಕ ನಗರಸಭೆಯ ಭ್ರಷ್ಟಾಚಾರದ ವಿರುದ್ಧ ಡಿಸಿಯವರಿಗೆ ಹಾಗೂ ಎಸ್ಪಿಯವರಿಗೆ ದೂರು ನೀಡಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ನಾವು ಕೈ ಬಿಡುವುದಿಲ್ಲ. ನಗರಸಭೆಯ ಆಡಳಿತದ ವಿರುದ್ಧ ನ್ಯಾಯಾಂಗ ಹೋರಾಟಕ್ಕೂ ಸಿದ್ಧವಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ ಪ್ರೈ. ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಮತ್ತಿತರರು ಇದ್ದರು.

ವಿಳಂಬ ನಗರಸಭೆ ಕಾರಣವಲ್ಲ:
ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ನ ನಿವೇಶನಗಳ ಖಾತಾ ಮಾಡಿಕೊಡಲು ತಡವಾಗುತ್ತಿರುವುದಕ್ಕೆ ಅವರ ಲೇಔಟ್ನ ನ್ಯೂನ್ಯತೆಗಳೇ ಕಾರಣವೇ ಹೊರತು ನಗರಸಭೆಯಲ್ಲ. ಉದ್ಯಾನವನದಲ್ಲಿ ಯುಜಿಡಿಯ ಸೆಪ್ಟಿಕ್ ಟ್ಯಾಂಕ್ ಕಟ್ಟಿದ್ದು ಒಂದು ಕಾರಣವಾದರೆ, ರೇರಾ ಅನುಮೋದನೆ ಪಡೆಯದಿರುವುದು, ಫ್ಲೋರೆಟಾ ಶುಲ್ಕ ಕಟ್ಟದಿರುವುದು ಸೇರಿದಂತೆ ನಾನಾ ಕಾರಣಗಳಿವೆ. ಅವುಗಳಿಗೆಲ್ಲ ಪರಿಶೀಲನೆ ಹಂತದಲ್ಲಿವೆ. ವೃಥಾ ಆರೋಪ ಸರಿಯಲ್ಲ.
ಲತಾ ಗವಿಸಿದ್ಧಪ್ಪ ಚಿನ್ನೂರು, ಅಧ್ಯಕ್ಷೆ, ನಗರಸಭೆ, ಕೊಪ್ಪಳ.

ಪರಿಶೀಲನೆ ಕಾರ್ಯ ಮುಗಿದಿಲ್ಲ; ತಕ್ಷಣವೇ ಬೇಕಂದ್ರೆ ಹೇಗೆ?:
ಈ ಬಗ್ಗೆ ಈಚೆಗಷ್ಟೇ ನಗರಸಭೆಯ ಸದಸ್ಯರ ಸಭೆಯಲ್ಲಿ ಚರ್ಚಿಸಲಾಗಿದೆ. ಇದಕ್ಕಾಗಿ ಸಮಿತಿ ರಚಿಸಲಾಗಿದ್ದು, ಪರಿಶೀಲನೆ ಕಾರ್ಯ ನಡೆಯುತ್ತಿದೆ. ಸಮಿತಿಯ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು. ತಕ್ಷಣವೇ ಖಾತಾ ಮಾಡಿ ಕೊಡಿ ಎಂದರೆ ಹೇಗೆ? ಕಾನೂನು, ನಿಯಮಗಳನ್ನು ಮೀರಿ ಕೆಲಸ ಮಾಡಲಾಗಲ್ಲ. ಯಶಸ್ವಿ ಟೌನ್ಶಿಪ್ನವರು ಮಾಡಿರುವ ಎಲ್ಲ ಆರೋಪಗಳು ಶುದ್ಧ ಸುಳ್ಳು.
ರಮೇಶ್ ಬಡಿಗೇರ, ಪೌರಾಯುಕ್ತರು, ನಗರಸಭೆ, ಕೊಪ್ಪಳ.


ಕುಂಟು ನೆಪ ಹೇಳುತ್ತಿದ್ದಾರಷ್ಟೇ:
ಸೆಪ್ಟಿಕ್ ಟ್ಯಾಂಕ್ ಕಟ್ಟಿರುವುದು ನಿಜ. ಯುಜಿಡಿಯ ನೀರನ್ನು ಶುದ್ಧೀಕರಿಸಿ ಉದ್ಯಾನವನಕ್ಕೆ ಬಳಸುವ ಮುಂದಾಲೋಚನೆಯಿಂದ ಕಟ್ಟಲಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಪ್ರಾಧಿಕಾರ ಕ್ಲಿಯರೆನ್ಸ್ ನೀಡಿದೆ. ರೇರಾ ಅನುಮೋದನೆ ಪಡೆದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಪ್ರೋರೆಂಟಾ ಶುಲ್ಕವನ್ನು ನಗರಸಭೆಗೆ ಯಾಕೆ ಕಟ್ಟಬೇಕು? ಇವೆಲ್ಲ ಕುಂಟುನೆಪಗಳಷ್ಟೇ.
-ಸಿ.ಸುನಂದಾ, ಕಾನೂನು ಸಲಹೆಗಾರರು, ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ ಪ್ರೈ.ಲಿ.

ಬುಧವಾರ ಒಂದೇ ದಿನ 43 ಜನರಿಗೆ ಸೋಂಕು; ಶತಕ ದಾಟಿದ ಸೋಂಕಿತರು, ಸಂಪೂರ್ಣ ಅಪ್ಡೇಟ್

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಾದ್ಯಂತ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ 1.22%ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಮವಾರ 16, ಮಂಗಳವಾರ 21, ಇವತ್ತು ಬುಧವಾರ 43 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದಂತಾಗಿದೆ. ಮಂಗಳವಾರದವರೆಗೆ 84 ರಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ, 121ಕ್ಕೆ ಏರಿಕೆಯಾಗಿದೆ.

ಗದಗ ನಗರದ 27ನೇ ವಾರ್ಡಿನ ಎಸ್.ಬಿ.ಸಂಕನಗೌಡ ಬಡಾವಣೆ, ಮುಳಗುಂದ ರೋಡ, 13ನೇ ವಾರ್ಡಿನ ಹಳೆಯ ಸಾಯಿಬಾಬಾ ದೇವಸ್ಥಾನ, 5ನೇ ವಾರ್ಡಿನ ಬುದ್ಧಿಮಾಂದ್ಯ ಮಕ್ಕಳ ಶಾಲೆ ಹತ್ತಿರ, 6ನೇ ವಾರ್ಡಿನ ಕನ್ಯಾಳ ಅಗಸಿ, 11ನೇ ವಾರ್ಡಿನ ಗಾಂಧಿ ವೃತ್ತದ ಹತ್ತಿರ, 23ನೇ ವಾರ್ಡಿನ ಒಕ್ಕಲಗೇರಿ, ಕುರಹಟ್ಟಿಪೇಟೆ, 29ನೇ ವಾರ್ಡಿನ ರಾಜೀವ್‌ಗಾಂಧಿ ನಗರ, ಜಿಮ್ಸ್ ಗದಗ, ಎಸ್‌ಬಿ ನಗರ, 1ನೇ ವಾರ್ಡಿನ ಎಸ್.ಎಂ.ಕೃಷ್ಣ ನಗರ, ಇಮಾಮ್ ಹುಸೇನ್ ಕಾಲನಿ, 32ನೇ ವಾರ್ಡಿನ ಕಿಲ್ಲಾ ಚಂದ್ರಸಾಲಿ ಓಣಿ, 35ನೇ ವಾರ್ಡಿನ ಕಳಸಾಪುರ ರಸ್ತೆಯ ನಿವಾಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಅದರಂತೆ, ಗದಗ ತಾಲ್ಲೂಕಿನ ನಾಗಾವಿ, ನಾಗಸಮುದ್ರ, ಮಲ್ಲಸಮುದ್ರ, ಕೋಟುಮಚಗಿ, ಹರ್ತಿ, ಹುಲಕೋಟಿ ಗ್ರಾಮದ ಸಾಯಿನಗರ, ನಾಗಾವಿ ತಾಂಡಾ, ಮುಂಡರಗಿ ತಾಲ್ಲೂಕಾಸ್ಪತ್ರೆ, ಮಸೂತಿ ಓಣಿ, ಹುಡ್ಕೋ ಕಾಲನಿ, ಕೋಟೆಭಾಗ, ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಕೆಜಿಬಿವ್ಹಿ ಹಾಸ್ಟೆಲ್, ನರಗುಂದ ತಾಲ್ಲೂಕಿನ ಬೈರನಹಟ್ಟಿ, ಗಜೇಂದ್ರಗಡ, ರೋಣ ತಾಲ್ಲೂಕಿನ ಹೊಳೆಆಲೂರ, ಶಿರಹಟ್ಟಿಯ ಕೋಟೆ ಓಣಿ, ಪೊಲೀಸ್ ಠಾಣೆ ಹತ್ತಿರ, ಶಿರಹಟ್ಟಿ ತಾಲ್ಲೂಕಿನ ಮಾಚೇನಹಳ್ಳಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ನಿವಾಸಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಬುಧವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 6,98,549 ಮಾದರಿ ಸಂಗ್ರಹಿಸಿದ್ದು, 6,72,345 ನಕಾರಾತ್ಮಕವಾಗಿವೆ. ಬುಧವಾರದ 43 ಪ್ರಕರಣ ಸೇರಿ ಒಟ್ಟು 26,207 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 6 ಸೇರಿ ಒಟ್ಟು 25,767 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 121 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಒಟ್ಟು 121 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 81, ಮುಂಡರಗಿ 23, ನರಗುಂದ 02, ರೋಣ 08 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 07 ಪ್ರಕರಣಗಳಿವೆ.

ಗದಗ ಜಿಲ್ಲೆಯಾದ್ಯಾಂತ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಸ್ತರಣೆ; ಡಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ:

ಕೋವಿಡ್ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜ.19ರವರೆಗೆ ಜಾರಿಯಲ್ಲಿದ್ದ ನೈಟ್ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಪ್ಯೂನ ಅವದಿಯನ್ನು ಜ.31ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಎಂದಿನಂತೆ ಜನೇವರಿ 31ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದೆ. ಅದರಂತೆ, ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗಿನ 5ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.

ವೈಕುಂಠ ಏಕಾದಶಿ ಹಾಗೂ ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿಸಿದ್ದಾರೆ. ವೈಕುಂಠ ಏಕಾದಶಿ ದಿನದಂದು ಈಗಾಗಲೇ ನಿಗದಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್ ಲಸಿಕೆ ಪಡೆದ 50ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದಾರೆ.

ಈ ವೇಳೆ ಯಾವುದೇ ಇನ್ನಿತರ ಸೇವೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಹಬ್ಬಗಳ ಆಚರಣೆಯ ವೇಳೆ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕುದರಿಮೋತಿ ಗ್ರಾಪಂ ಅಧ್ಯಕ್ಷೆಪಿಡಿಒ ಅಮಾನತಿಗೆ ಆಗ್ರಹ

0

//ಬೋಗಸ್ ಬಿಲ್//

-ಲಕ್ಷಾಂತರ ರೂಪಾಯಿ ಗುಳುಂಸ್ವಾಹಾ ಮಾಡಿರುವ ಆರೋಪ
-ಸರಕಾರದ 11.50 ಲಕ್ಷ ರೂಪಾಯಿ ದುರ್ಬಳಕೆಗೆ ಸದಸ್ಯೆಯ ಕಿಡಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯಿತಿಯಲ್ಲಿ ಪ್ರಬಾರಿ ಪಿಡಿಓ ಆಗಿದ್ದ ದೊಡ್ಡಬಸಮ್ಮ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುರ್ಗವ್ವ ದೂಪಂ ಸೇರಿಕೊಂಡು ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಸರಕಾರದ 11.50 ಲಕ್ಷ ರೂಪಾಯಿ ಗುಳುಂ ಸ್ವಾಹಾ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯೆ ಲಕ್ಷ್ಮೀ ದಾಸರ್ ಹಾಗೂ ಅವರ ಪತಿ ವಿಜಯಕುಮಾರ್ ದಾಸರ್ ಆರೋಪಿಸಿದರು.

ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದರಿಮೋತಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಹಾಗೂ ನರೇಗಾ ಯೋಜನೆಯಡಿ ಬೋಗಸ್ ಬಿಲ್ ಸೃಷ್ಟಿಸಿ, ಸುಮಾರು 11.50 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಕೂಡಲೇ ಪಿಡಿಒ ದೊಡ್ಡಬಸಮ್ಮ ಅವರನ್ನು ಅಮಾನತುಗೊಳಿಸಿ ಗ್ರಾಪಂ ಅಧ್ಯಕ್ಷೆ ದುರ್ಗವ್ವ ಇವರನ್ನು ಅಧ್ಯಕ್ಷೆ ಸ್ಥಾನದಿಂದ ಅನರ್ಹಗೊಳಿಸುವಂತೆ ಅವರು ಒತ್ತಾಯಿಸಿದರು.

ಪ್ರಭಾರಿ ಪಿಡಿಓ ಆಗಿದ್ದ ದೊಡ್ಡಬಸಮ್ಮ ಸದ್ಯ ತಮ್ಮ ನಿಯೋಜಿತ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ಕುದರಿಮೋತಿ ಗ್ರಾಪಂಗೆ ಬೇರೊಬ್ಬ ಪಿಡಿಓ ಬಂದಿದ್ದಾರೆ. ಸದ್ಯದ ಪಿಡಿಓ ದಾಖಲಾತಿಗಳನ್ನು ಪರಿಶೀಲಿಸಿ ಖೊಟ್ಟಿ ದಾಖಲೆ ಸೃಷ್ಟಿಸಿರುವುದಾಗಿ ತಿಳಿಸಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಗ್ರಾಪಂಗೆ ಯಾವುದೇ ಸಲಕರಣೆ ಖರೀದಿಸಿಲ್ಲ ಎಂದು ಲಿಖಿತವಾಗಿ ಪತ್ರ ನೀಡಿದ್ದಾರೆ. ಕುಡಿಯುವ ನೀರಿಗಾಗಿ ಮೋಟಾರ್ ಹಾಗೂ ಪಂಪ್ ಖರೀದಿಸಲಾಗಿದೆ ಎಂದು ಹಿಂದಿನ ಪಿಡಿಒ 2 ಲಕ್ಷ ರೂಪಾಯಿ ಖರ್ಚು ಹಾಕಿದ್ದಾರೆ. ಒಂದೇ ಒಂದು ಸಲಕರಣೆಯನ್ನು ಅವರು ಖರೀದಿಸಿಲ್ಲ ಎಂದು ವಿಜಯಕುಮಾರ್ ತಿಳಿಸಿದರು.

ನರೇಗಾ ಯೋಜನೆಯಡಿ ಬದು ನಿರ್ಮಾಣ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ಫೋಟೋಸಮೇತ ವರದಿಯಲ್ಲಿ ತಿಳಿಸಿದ್ದಾರೆ. ಹಿಂದೆ ನಿರ್ಮಾಣ ಮಾಡಿದ್ದ ಬದುವನ್ನೇ ಈಗ ಮಾಡಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಕೃಷಿ ಹೊಂಡ ನಿರ್ಮಾಣ, ಕೆರೆ ಹೂಳೆತ್ತುವ ಕಾಮಗಾರಿಗಳಲ್ಲೂ ನರೇಗಾ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಅವರು ಕಿಡಿ ಕಾರಿದರು.

ಈ ಬಗ್ಗೆ ಉಳಿದ ಸದಸ್ಯರು ಪ್ರಶ್ನಿಸುತ್ತಿಲ್ಲ. ಸುಮ್ಮನೆ ಯಾಕೆ ವಿರೋಧ ಕಟ್ಟಿಕೊಳ್ಳಬೇಕು ಎಂಬ ಧೋರಣೆಯಲ್ಲಿ ಕಾಲ ತಳ್ಳುತ್ತಿದ್ದಾರೆ. ಸಾರ್ವಜನಿಕರ ಹಣ ದುರ್ಬಳಕೆಯಾಗಬಾರದು ಎಂಬ ಸದುದ್ದೇಶದಿಂದ ಕುದರಿಮೋತಿ ಗ್ರಾಪಂ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಮುಂದಾಗಿರುವುದಾಗಿ ತಿಳಿಸಿದ ಅವರು, ಈಗಾಗಲೇ ತಾಪಂ ಇಓ ಅವರಿಗೂ ದೂರು ಸಲ್ಲಿಸಲಾಗಿದ್ದು, ಅವರೂ ಸಹ ಉದಾಸೀನ ತೋರಿದ್ದಾರೆ ಎಂದು ದೂರಿದರು.

ಕೋವಿಡ್ ಹೆಚ್ಚಳ; ಸಂಕ್ರಾಂತಿಗೆ ಬಿಂಕದಕಟ್ಟಿ ZOO ಬಂದ್

0

ಮೂರು ದಿನ ಬಿಂಕದಕಟ್ಟಿ ಮೃಗಾಲಯ, ಉದ್ಯಾನವನ ಬಂದ್

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜ.14 ರಿಂದ 16ರವರೆಗೆ ಗದಗ ತಾಲ್ಲೂಕಿನ ಬಿಂಕದಕಟ್ಟಿಯ ಮೃಗಾಲಯ ಹಾಗೂ ಸಾಲು ಮರದ ತಿಮ್ಮಕ್ಕ ಉದ್ಯಾನವನ ಬಂದ್ ಆಗಿರಲಿವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೆ ಅವರು ತಿಳಿಸಿದ್ದಾರೆ.

ಶುಕ್ರವಾರ ಮಕರ ಸಂಕ್ರಮಣ ಇರುವ ಹಿನ್ನೆಲೆಯಲ್ಲಿ ಅಧಿಕ ಪ್ರಮಾಣದಲ್ಲಿ ‌ಜಿಲ್ಲೆಯ ಇವೆರಡೂ ಪ್ರೇಕ್ಷಣೀಯ ಸ್ಥಳಗಳಿಗೆ ವಿವಿಧ ಭಾಗಗಳಿಂದ ಸುಮಾರು 5-6 ಸಾವಿರ ಪ್ರವಾಸಿಗರು ಭೇಟಿ‌ ನೀಡುವ ಸಾಧ್ಯತೆ ಇದೆ. ಹೀಗಾಗಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ಮೃಗಾಲಯ ಹಾಗೂ ಉದ್ಯಾನವನ ಬಂದ್ ಇರಲಿದ್ದು, ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ.

ಗದಗ ಜಿಲ್ಲೆಯಲ್ಲೂ ಶಾಲೆ ಬಂದ್ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಿ; ಎಚ್ ಕೆ ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ:

‘ಜಿಲ್ಲೆಯಾದ್ಯಂತ ಶಾಲೆಗಳ ಬಂದ್ ಬಗ್ಗೆ ಜಿಲ್ಲಾಡಳಿತದವರು ತಜ್ಞರನ್ನು ಕರೆದು ತಜ್ಞರ ವರದಿ, ಶಿಫಾರಸ್ಸಿನಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಬಾರದು’ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.

ಗದಗ ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದು ಓಮಿಕ್ರಾನ್ ಸಂಭವನೀಯ ಪ್ರಕರಣದ ಸುದ್ದಿ ಇದ್ದು, ಹದಿನೈದು ದಿನಗಳು ಕಳೆಯುತ್ತಾ ಬಂದರೂ ಖಚಿತವಾಗಿಲ್ಲ. ಅದ್ಯಾಕೆ ಆಗ್ತಿಲ್ಲ ಅಂತಾ ಗೊತ್ತಿಲ್ಲ. ಆದರೆ, ಜಿಲ್ಲಾಡಳಿತ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದೆ, ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. 450 ಹಾಸಿಗೆಗಳ ಆಸ್ಪತ್ರೆ ಮುಕ್ತಾಯಗೊಳ್ಳಲು ಬಂದಿದೆ. ಆಸ್ಪತ್ರೆಯ ಕಟ್ಟಡಕ್ಕೆ ಬಣ್ಣ ಹಚ್ಚುವ ಕಾರ್ಯ ಪ್ರಾರಂಭವಾಗಿದ್ದು, ಶೀಘ್ರವೇ ಆಸ್ಪತ್ರೆ ಜನಸೇವೆಗೆ ಲೋಕಾರ್ಪಣೆಗೊಳ್ಳಬೇಕು. ಇನ್ನೂ ಬಹಳಷ್ಟು ಕೆಲಸ ಬಾಕಿ ಇದ್ದು, ಮೂರನೇ ಅಲೆಯ ವೇಳೆ ಹೆಚ್ಚಿನ ಸೌಲಭ್ಯ ಬಳಸಿಕೊಳ್ಳಲು ಸರ್ಕಾರ ಆಸ್ಪತ್ರೆಯ ಸ್ವಲ್ಪ ಭಾಗವನ್ನಾದರೂ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಲಾಕ್ ಡೌನ್ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ರಾಷ್ಟ್ರ ಮಟ್ಟದಲ್ಲಿಯೂ ಲಾಕ್ ಡೌನ್ ಚಿಂತನೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದರಿಂದ ಬಡವರ ಬದುಕು ಅಸಹನೀಯವಾಗುತ್ತದೆ. ಈ ವೇಳೆ ಬಡವರಿಗೆ ಅನುಕೂಲವಾಗುವಂತೆ ಲಾಕ್ ಡೌನ್ ಜೊತೆಗೆ ಪರಿಹಾರದ ಬಗ್ಗೆಯೂ ಮಾಡಬೇಕು ಎಂದರು.

ಮೇಕೆದಾಟು ಪಾದಯಾತ್ರೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ಮೇಕೆದಾಟು ಪಾದಯಾತ್ರೆ ಇವತ್ತು, ನಿನ್ನೆಯ ನಿರ್ಣಯ ಅಲ್ಲ. ತಿಂಗಳ ಹಿಂದೆಯೇ ನಿರ್ಧರಸಿತ್ತು. ಈ ವೇಳೆ ಸರ್ವ ಪಕ್ಷಗಳ ಸಭೆ ಕರೆಯಲಿಲ್ಲ. ಕೇಂದ್ರ ಸರ್ಕಾರ ಬಳಿ ನಿಯೋಗ ತೆಗೆದುಕೊಂಡು ಹೋಗಲಿಲ್ಲ. ಕೆಲಸ ಪ್ರಾರಂಭಿಸಲಿಲ್ಲ. ಏನಾಗಿದೆ ಎಂಬ ಬಗ್ಗೆ ಪಾರದರ್ಶಕವಾಗಿ ಹೇಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಾದಯಾತ್ರೆ ಮಾಡಲಾಗುತ್ತಿದೆ.

ಇವತ್ತಿನವರೆಗೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಾದಯಾತ್ರೆ ವೇಳೆ ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತಿದ್ದಾರೆ. ಹೀಗಿದ್ದಾಗ್ಯೂ ಪ್ರಕರಣ ದಾಖಲಿಸಿದ್ದು, ಕಾನೂನು ಹೋರಾಟ ನಡೆಸಲಾಗುವುದು’ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.

error: Content is protected !!