Home Blog Page 3263

ಮಂಗಳವಾರ ಕೊರೊನಾ ಸ್ಫೋಟ; ಎರಡೇ ದಿನದಲ್ಲಿ 37 ಜನರಿಗೆ ಕೋವಿಡ್ ಸೋಂಕು

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎರಡೇ ದಿನದಲ್ಲಿ ಬರೋಬ್ಬರಿ 37 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಮಂಗಳವಾರ ಒಂದೇ ದಿನ 21 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 84 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಪತ್ತೆಯಾಗಿರುವ 84 ಸೋಂಕಿನ ಪ್ರಕರಣಗಳಲ್ಲಿ ಗದಗ ತಾಲ್ಲೂಕು ಒಂದರಲ್ಲೇ 51 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಮುಂಡರಗಿಯಲ್ಲಿ 21, ನರಗುಂದದಲ್ಲಿ 01, ರೋಣದಲ್ಲಿ 06, ಶಿರಹಟ್ಟಿಯಲ್ಲಿ 04 ಪ್ರಕರಣಗಳು ಪತ್ತೆಯಾಗಿವೆ.

ಗದಗನ ವಿಎನ್‌ಟಿ ರೋಡ್, ಗಾಂಧಿನಗರ(ಸೆಟ್ಲಮೆಂಟ್), ಸಂಕಣ್ಣವರ ಬಡಾವಣೆ, ಇಮಾಮ್‌ಹುಸೇನ್ ಕಾಲನಿ, ಗದಗ ತಾಲ್ಲೂಕಿನ ಅಡವಿಸೋಮಾಪುರ ದೊಡ್ಡತಾಂಡಾ, ಮಲ್ಲಸಮುದ್ರ, ನೀರಲಗಿ, ಮುಂಡರಗಿಯ ಸ್ವಾಮಿ ವಿವೇಕಾನಂದ ನಗರ, ಕೋಟೆಭಾಗ, ಮಂಜುನಾಥ ನಗರ, ಮುಂಡರಗಿ ತಾಲ್ಲೂಕಿನ ಕೋರ್ಲಹಳ್ಳಿ, ಬೀಡನಾಳ, ಬಸಾಪುರ, ನರಗುಂದದ ಟಿಎಲ್‌ಎಚ್ ಕಚೇರಿ, ರೋಣ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸವಡಿ, ರಾಂಪೂರ ಗ್ರಾಮದ ನಿವಾಸಿಗಳು ಸೇರಿದಂತೆ 21 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಮಂಗಳವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 6,97,019 ಮಾದರಿ ಸಂಗ್ರಹಿಸಿದ್ದು, 6,70,857 ನಕಾರಾತ್ಮಕವಾಗಿವೆ. ಮಂಗಳವಾರದ 21 ಪ್ರಕರಣ ಸೇರಿ ಒಟ್ಟು 26,164 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ ಮೂವರು ಸೇರಿ ಒಟ್ಟು 25,761 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 84 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಜ.13ಕ್ಕೆ ಮೋದಿ ಮಹತ್ವದ ಸಭೆ; ದೇಶದಲ್ಲಿ ‌ಮತ್ತೆ ಟಫ್ ರೂಲ್ಸ್ ಜಾರಿ ಆಗುತ್ತಾ?

ವಿಜಯಸಾಕ್ಷಿ ಸುದ್ದಿ, ನವದೆಹಲಿ:

ದೇಶದಾದ್ಯಂತ ಕೊರೊನಾ ರೂಪಾಂತರಿ ಡೆಲ್ಟಾ ಹಾಗೂ ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ
ಜ.13 ರಂದು ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಸಭೆ ನಡೆಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಸಭೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಎಷ್ಟಿದೆ?, ರಾಜ್ಯಗಳಲ್ಲಿ ಸೋಂಕು ತಡೆಯಲು ಕೈಗೊಂಡಿರುವ ಕ್ರಮಗಳೇನು?, ರಾಜ್ಯದಲ್ಲಿನ ಪಾಸಿಟಿವಿಟಿ ರೇಟ್, ಡೆತ್ ರೇಟ್ ಹೇಗಿದೆ? ಸೋಂಕು ತಡೆಯಲು ಮುಂದೆ ಕೈಗೊಳ್ಳಬೇಕಾದ ಕ್ರಮಗಳು ಏನೇನು? ಹಾಗೂ ಕೋವಿಡ್ ಲಸಿಕೆ ಹೆಚ್ಚಿಸಲು ಏನು ಮಾಡಬೇಕು? ಎಂಬ ಬಗ್ಗೆ ಸಿಎಂಗಳ ಜೊತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಲ್ಲದೇ, ಅಂತರರಾಜ್ಯ ಸಾರಿಗೆ ಸಂಪರ್ಕ ವ್ಯವಸ್ಥೆ ದೃಷ್ಟಿಯಲ್ಲಿ ಏನು ಮಾಡಬೇಕು ಎಂಬ ವಿಷಯದ ಕುರಿತು ಅಂದಿನ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿಕ್ಷಣ ಸಂಸ್ಥೆಯ ಬೆಳ್ಳಿಮಹೋತ್ಸವ; ಲಾಂಛನ ಅನಾವರಣ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನಗರದ ಅಲಯನ್ಸ್ ಶಿಕ್ಷಣ ಸಂಸ್ಥೆ 25 ವರ್ಷ ಪೂರೈಸಿ, ಬೆಳ್ಳಿ ಮಹೋತ್ಸವದ ಹೊಸ್ತಿಲಲ್ಲಿರುವ ಅಂಗವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ಈಚೆಗೆ ಲಾಂಛನ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ಮುಂದುವರಿಸಿದ್ದು, ಸವಾಲುಗಳನ್ನು ನಿವಾರಿಸಿ ಸಮಾಜದ ಎಲ್ಲ ವರ್ಗಗಳಿಗೂ ತಲುಪಿರುವುದು ಶ್ಲಾಘನೀಯ ಎಂದರು.

ಸಾಕ್ಷರತೆ, ವಿಮರ್ಶಾತ್ಮಕ ಚಿಂತನೆ, ಮಾನವೀಯ ಮತ್ತು ವೈಜ್ಞಾನಿಕ ವಿಚಾರಣೆ, ನಾಯಕತ್ವ ಮತ್ತು ಲೋಕೋಪಕಾರ ಮತ್ತು ನಿರಂತರ ಕಲಿಕೆಯ ಚಕ್ರವನ್ನು ಸಂಕೇತಿಸುವ ಅಲಯನ್ಸ್ ಶಿಕ್ಷಣದ 25 ವರ್ಷಗಳ ಲೋಗೋವನ್ನು ಅನಾವರಣಗೊಳಿಸಿದರು.

ವಿದ್ಯಾರ್ಥಿಗಳ ವೈವಿಧ್ಯತೆಯನ್ನು ಹೆಚ್ಚಿಸಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರವು ಖಾಸಗಿ ವಿಶ್ವವಿದ್ಯಾಲಯಗಳಿಗೆ ಬೆಂಬಲವನ್ನು ಮುಂದುವರಿಸುತ್ತದೆ ಎಂದು ಅವರು ಭರವಸೆ ನೀಡಿದರು.

ಅಲಯನ್ಸ್ ವಿಶ್ವವಿದ್ಯಾನಿಲಯವು ರಾಜ್ಯ ಮತ್ತು ದೇಶದೊಳಗೆ ನಿರಂತರ ಸುಧಾರಣೆಯತ್ತ ಗಮನಹರಿಸುವುದರೊಂದಿಗೆ ಹೆಚ್ಚಿನ ಮೈಲಿಗಲ್ಲುಗಳನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಕಿ ಕಳ್ಳದಂಧೆ ಸಾರ್ವಜನಿಕರಿಂದ ಬಯಲಿಗೆ! ಇಬ್ಬರ ಬಂಧನ, ಲಾರಿ ವಶ: ಚಾಲಾಕಿ ದಂಧೆಕೋರ ವೀರೇಶ್ ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ:

ವೀರೇಶ್ ಬಡಿಗೇರ

ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಖರೀದಿಸಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವ ಜಾಲವೊಂದನ್ನು ಸಾರ್ವಜನಿಕರೇ ಬಯಲಿಗೆ ಎಳೆದಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಸಾರ್ವಜನಿಕರ ಈ ಕಾರ್ಯಾಚರಣೆ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ ಎಂದು ಎನ್ನಲಾಗುತ್ತದೆ.

ಸಂಗ್ರಹಿಸಿದ್ದ ಗೋದಾಮಿನಿಂದ ಅಕ್ಕಿ ಲೋಡ್ ಮಾಡಿಕೊಂಡು ಹೊರಟಾಗ ಕೆಲವು ಸಾರ್ವಜನಿಕರು ಲಾರಿಗೆ ತಡೆಯೊಡ್ಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಾಲವಾಡಗಿ ರಸ್ತೆಯ ಸೃಷ್ಟಿ ಫಾರ್ಮ್ ಹೌಸ್‌ ಬಳಿ ಈ ಘಟನೆ ನಡೆದಿತ್ತು. ಆಗ ಚಾಲಕ ಹೊನ್ನಿನಾಯಕಹಳ್ಳಿಯ ನಿಂಗಪ್ಪ ಭರಮಪ್ಪ ಗೌಡ್ರ, ಲಕ್ಷ್ಮೇಶ್ವರ ಬಳಿಯ ಸೋಗಿಹಾಳದ ಶರಣಪ್ಪ ನಿಂಗಪ್ಪ ಜಾಡರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಮುಖ ಆರೋಪಿ, ದಂಧೆಕೋರ, ಚಾಲಾಕಿ ವೀರೇಶ್ ಬಡಿಗೇರ ಮಾತ್ರ ಪರಾರಿಯಾಗಿದ್ದಾನೆ.

ಹಲವು ತಿಂಗಳಿನಿಂದಲೂ ಜಿಲ್ಲೆಯ ಮುಂಡರಗಿಯಲ್ಲಿ ಈ ದಂಧೆ ಎಗ್ಗಿಲ್ಲದೆ ಸಾಗಿದೆ. ಆದರೂ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಸೋಜಿಗದ ಸಂಗತಿಯಾಗಿದೆ.

ಎರಡು ತಿಂಗಳ ಹಿಂದೆ ಮುಂಡರಗಿ ಪಟ್ಟಣದಿಂದ ಸಾಗಾಟವಾಗುತ್ತಿದ್ದ ಅನ್ನಭಾಗ್ಯ ಅಕ್ಕಿ ತುಂಬಿದ ಲಾರಿಯನ್ನು ವಿಜಯನಗರ ಜಿಲ್ಲೆಯ ಕೊಟ್ಟೂರು ಬಳಿ ಅಲ್ಲಿನ ಪೊಲೀಸರು ತಡೆದು ಅಪಾರ ಪ್ರಮಾಣದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದರು. ಚಾಲಕನನ್ನು ಮಾತ್ರ ಬಂಧಿಸಿದ್ದರು.

ರೂವಾರಿ ಮುಂಡರಗಿ ಪಟ್ಟಣದ ವೀರೇಶ್ ಬಡಿಗೇರ ತಲೆಮರೆಸಿಕೊಂಡು, ಜಾಮೀನು ಪಡೆದಿದ್ದ. ಕೆಲವೇ ದಿನಗಳಲ್ಲಿ ಮತ್ತೆ ದಂಧೆ ಚಾಲೂ ಮಾಡಿದ್ದ. ಈಗ ಸಾರ್ವಜನಿಕರ ಪ್ರಯತ್ನದಿಂದ ಸಿಕ್ಕಿಬಿದ್ದಿದ್ದರೂ ಮತ್ತೆ ಪರಾರಿಯಾಗಿದ್ದಾರೆ.

ಇದನ್ನೂ ಓದಿ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ; ದಂಧೆಕೋರ ವೀರೇಶ್ ಬಡಿಗೇರನಿಗೆ ಬಿಸಿ!

ಲಾರಿ ಸಂಖ್ಯೆ ಕೆಎ 28 ಎ/7625ರಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ 210 ಕ್ವಿಂಟಲ್ ಪಡಿತರ ಅಕ್ಕಿ‌ ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೆಲ್ಲ ಆದ ಮೇಲೆ ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ಶಿವರಾಜ್ ಕೊಟ್ರಪ್ಪ ಆಲೂರು ಮುಂಡರಗಿ ಠಾಣೆಗೆ ಮೂರು ಜನರ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಯುತ್ತದೆ.

ಮತ್ತೆ ಜಿಮ್ಸ್‌ನ ನಾಲ್ವರು ವಿದ್ಯಾರ್ಥಿಗಳಿಗೆ ಸೋಂಕು; ಗಜೇಂದ್ರಗಡ, ಮುಂಡರಗಿ ಸೇರಿ 16 ಜನರಿಗೆ ಕೊರೊನಾ

0

ವಿಜಯಸಾಕ್ಷಿ ಸುದ್ದಿ, ಗದಗ:

ಇಲ್ಲಿನ ಜಿಮ್ಸ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಸೋಮವಾರ 16 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ನಗರ ಪ್ರದೇಶದಲ್ಲಷ್ಟೇ ಪತ್ತೆಯಾಗುತ್ತಿದ್ದ ಕೋವಿಡ್ ಇದೀಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಗದಗನ ಎಸ್.ಎಂ.ಕೃಷ್ಣ ನಗರ, ಪಂಚಾಕ್ಷರಿ ನಗರ, ಕಳಸಾಪುರ ರಸ್ತೆ, ಮುಂಡರಗಿ ತಾಲ್ಲೂಕಿನ ಬಾಗೇವಾಡಿ, ಗಜೇಂದ್ರಗಡದ ನಿವಾಸಿಗಳು ಸೇರಿದಂತೆ 16 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಸೋಮವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 695220 ಮಾದರಿ ಸಂಗ್ರಹಿಸಿದ್ದು, 669079 ಮಾದರಿಗಳು ನಕಾರಾತ್ಮಕವಾಗಿವೆ.

ಸೋಮವಾರದ 16 ಪ್ರಕರಣ ಸೇರಿ ಒಟ್ಟು 26,143 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ ಮೂವರು ಸೇರಿ ಒಟ್ಟು 25,758 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 66 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜ್ಜನ ಜಾತ್ರೆಗೆ ದವಸ ಧಾನ್ಯ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜನೇವರಿ 19ರಂದು ಕೊಪ್ಪಳದ ಅಜ್ಜನ ಜಾತ್ರೆಗೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಆದರೆ ಈ ಬಾರಿಯೂ ಸರಳ ಜಾತ್ರೆ ಆಚರಿಸಲು ನಿರ್ಧರಿಸಲಾಗಿದ್ದು, ಮಠದ ಭಕ್ತರು ದಾಸೋಹಕ್ಕಾಗಿ ದವಸ ಧಾನ್ಯ ನೀಡಲು ಆರಂಭಿಸಿದ್ದಾರೆ.‌ ಸೋಮವಾರ ಕಾಸನಕಂಡಿ‌ ಗ್ರಾಮಸ್ಥರು 200 ಚೀಲ ದವಸ ಧಾನ್ಯಗಳನ್ನು ಭಜನೆ ಸಮೇತ ಗವಿಮಠಕ್ಕೆ ಆಗಮಿಸಿ ಅರ್ಪಿಸಿದರು.

“ಡೊಂಬರಾಟ” ಕಾಂಗ್ರೆಸ್‌ಗೆ ಹೊಸದೇನಲ್ಲ: ಆಚಾರ್

0

//ಕೈ ಪಾದಯಾತ್ರೆಗೆ ಸಚಿವರ ವಾಗ್ದಾಳಿ//

ಜನ ರಾತ್ರಿ‌ ಕಂಡ ಬಾವಿಗೆ ಹಗಲು ಬೀಳುವುದಿಲ್ಲ

ಈ ಹಿಂದೆ ಕೂಡಲಸಂಗಮಕ್ಕೆ ಪಾದಯಾತ್ರೆ ಮಾಡಿ ನೀಡಿದ್ದ ಭರವಸೆ ಏನಾಯ್ತು?

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾಂಗ್ರೆಸ್‌ಗೆ ಡೊಂಬರಾಟ ಹೊಸದೇನಲ್ಲ. ಕಾಂಗ್ರೆಸ್‌ನವರು ಚುನಾವಣೆ ಸಮೀಪಿಸುತ್ತಿದ್ದಂತೆ ಪಾದಯಾತ್ರೆಯಂಥ ಡೊಂಬರಾಟ ಶುರು ಮಾಡ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ನಿಷೇಧಿತ ಪದ ಬಳಸಿ ವಿವಾದ ಎಳೆದುಕೊಂಡಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರನಢ ಲಸಿಕಾಕರಣ ಕುರಿತು ಸುದ್ದಿಗೋಷ್ಠಿ ನಡೆಸುವ ವೇಳೆ ಸಚಿವರು, ಕಾಂಗ್ರೆಸ್ ನಡೆ ಟೀಕಿಸುವ ಭರದಲ್ಲಿ “ಡೊಂಬರಾಟ” ಎಂಬ ನಿಷೇಧಿತ ಪದವನ್ನು ಬಳಸಿದರು.

ಜನರ ಜೀವದ ಬಗ್ಗೆ ಕಾಳಜಿ ಇಲ್ಲದೇ ಕೋವಿಡ್ ನಿಯಮ‌ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌ನವರು ರಾಜಕಾರಣ ಹಾಗೂ ಕೆಲಸವನ್ನು ಜನರಿಗಾಗಿ ಮಾಡುವುದನ್ನು ಬಿಟ್ಟು ರಾಜಕೀಯಕ್ಕಾಗಿ, ಅಧಿಕಾರದ ಲಾಲಸೆಗಾಗಿ ಮಾಡುತ್ತಿದ್ದಾರೆ ಎಂದು ಹರಿ ಹಾಯ್ದರು.

ಇನ್ನೂ ಚುನಾವಣೆ ಮುಂದೆ ಇದೆ. ಮೇಕೆದಾಟು ಯೋಜನೆ ಜಾರಿ ಬಗ್ಗೆ ಸಿಎಂ ಬೊಮ್ಮಾಯಿಯವರು ಕೆಲಸ ಮಾಡುತ್ತಿದ್ದಾರೆ. ಕಳೆದ ಸಲ ಪಾದಯಾತ್ರೆ ಮಾಡಿದಾಗ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಮುಖಂಡರು ಇನ್ನೂ ಅದೇ ಭ್ರಮೆಯಲ್ಲೇ ಇದ್ದಾರೆ‌. ಕೂಡಲ ಸಂಗಮಕ್ಕೆ ಪಾದಯಾತ್ರೆ ನಡೆಸಿ ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿ ಅನುದಾನ ಕೊಡುವುದಾಗಿ ನೀಡಿದ್ದ ಭರವಸೆ ಏನಾಯ್ತು ಎಂಬುದು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದರು.

ದೇವರ ಮೇಲೆ ಪ್ರಮಾಣ ಮಾಡಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ಗೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿಪಿಆರ್ ಮಾಡಿಸಲೂ ಆಗಲಿಲ್ಲ. ಸಮ್ಮಿಶ್ರ ಸರಕಾರ ಇದ್ದಾಗ ಡಿಪಿಆರ್ ಆಗಿದೆ. ಕಾಂಗ್ರೆಸ್‌ಗೆ ಮೇಕೆದಾಟು ಯೋಜನೆ ಬಗ್ಗೆ ಪ್ರಾಮಾಣಿಕ ಕಳಕಳಿ ಇಲ್ಲ. ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ಮಾಡಲು ನಿಂತಿದೆ ಎಂದು ಸಚಿವ ಆಚಾರ್ ಆರೋಪಿಸಿದರು.

ಜನರು ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ. ಕಾಂಗ್ರೆಸ್‌ನವರ ನಾಟಕವನ್ನು ಜನರು ಒಪ್ಪುವುದಿಲ್ಲ. ಜನರ ದಾರಿ ತಪ್ಪಿಸುವುದು ಕಾಂಗ್ರೆಸ್‌ಗೆ ಮೊದಲಿನಿಂದಲೂ ಇರುವ ಗುಣ. ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

‘ದಂಡುಪಾಳ್ಯ’ ಸ್ಟೈಲ್ ನಲ್ಲಿ ಸುಲಿಗೆ; ಭಯಭೀತಗೊಂಡ ಅವಳಿ ನಗರದ ಜನ!

ವಿಜಯಸಾಕ್ಷಿ ಸುದ್ದಿ, ಗದಗ:

ಹುಡ್ಕೋ 2ನೇ ಕ್ರಾಸ್ ನಲ್ಲಿ ಶುಕ್ರವಾರ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಘಟನೆ ಗೊತ್ತೇ ಇದೆ. ಆದರೆ, ಇದಕ್ಕೂ ಮೊದಲು ಖದೀಮರು‌ ನಡೆಸಿದ ಸಿದ್ಧತೆ ಅವಳಿ‌ ನಗರದ ಜನರನ್ನು ಬೆಚ್ಚಿಬೀಳಿಸಿದೆ.

ಹೌದು, ಶುಕ್ರವಾರ ಘಟನೆ ನಡೆಯುವ ಮುನ್ನ ಅಂದರೆ ಹದಿನೈದು ದಿನಗಳ ಮೊದಲೇ ಖದೀಮರು ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದರೆ ಎಂಬ ಅನುಮಾನ ಇದೀಗ ಶುರುವಾಗಿದೆ. ಇನ್ನು ‘ದಂಡುಪಾಳ್ಯ’ ಸಿನಿಮಾದಲ್ಲಿ ಮಹಿಳೆಯೊಬ್ಬಳು‌ ಕುಡಿಯಲು ನೀರು ಕೇಳುವುದು, ತಿನ್ನಲು ಏನದಾರೂ ಕೊಡಿ ಅಂತಾ ಕೇಳುವ ನೆಪದಲ್ಲಿ ಮನೆಯಲ್ಲಿ ಯಾರ್ಯಾರು ಇರುತ್ತಾರೆ, ಎಷ್ಟು ಜನ ಇರುತ್ತಾರೆ ಎಂಬುದನ್ನು ತಿಳಿದುಕೊಂಡು ತನ್ನ ಗ್ಯಾಂಗ್ ನವರಿಗೆ ಹೇಳುತ್ತಾಳೆ. ಬಳಿಕ ಅವರೆಲ್ಲರೂ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಕನ್ನ ಹಾಕುವುದನ್ನು ನೋಡಿದ್ದೇವೆ. ಅಂತಹದೇ ಘಟನೆ ಗದಗನಲ್ಲೂ ನಡೆಯಿತೇ ಎಂಬ ಶಂಕೆ ಶುರುವಾಗಿದೆ.

ಹುಡ್ಕೋ ಕಾಲನಿಯಲ್ಲಿ ಸರಗಳ್ಳತನದ ಕೃತ್ಯ ನಡೆಯುವ ಹದಿನೈದು ದಿನಗಳ ಹಿಂದೆ ಪುಷ್ಪಾ ಎಂಬುವವರ ಮನೆಗೆ ಅಪರಿಚಿತ ಮಹಿಳೆಯೊಬ್ಬರು‌ ನೀರು ಕೇಳಿಕೊಂಡು ಮನೆಗೆ ಬಂದಿದ್ದರು. ಆಶ್ಚರ್ಯವೆಂದರೆ, ಮನೆಯ ಗೇಟ್ ತಗೆದು ಡೋರ್ ಕ್ಲೋಸ್‌ ಇದ್ದಾಗಲೂ ಕಾಲಿಂಗ್ ಬೆಲ್ಲ ಒತ್ತಿ ಮಹಿಳೆ ಹೊರಬರುವವರೆಗೂ ಬಿಡದೇ ನೀರು ಕೇಳಿದ್ದಾಳೆ ಅಂತೆ. ಇದೇ ಮಹಿಳೆ ಅಂದು ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆಯಲ್ಲಿ ಯಾರು ಇರುತ್ತಾರೆ, ಎಷ್ಟು ಜನ ಇದ್ದಾರೆ ಎಂಬುವುದನ್ನು ತಿಳಿದುಕೊಂಡು ಹೋಗಿದ್ದಳೆ ಎಂಬ ಅನುಮಾನ ಕುಟಂಬದ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ

ನಗರದ ಹುಡ್ಕೋ ಕಾಲನಿಯ ನಿವಾಸಿ ಪುಷ್ಪಾ ಎಂಬುವವರು ಶುಕ್ರವಾರ ಸಂಜೆ 7 ಗಂಟೆಗೆ ಮನೆಯಲ್ಲಿ ಮಂಗಳಗೌರಿ ಧಾರಾವಾಹಿ ವೀಕ್ಷಿಸುತ್ತಿದ್ದರಂತೆ. ಈ ವೇಳೆ ಗೇಟ್ ಸೌಂಡ್ ಬಂದಿದೆ. ಯಾರು ಎಂದು ಕೂಗಿದಾಗಲೂ ಮಾತನಾಡದ ಮಾಸ್ಕ್ ಹಾಕಿದ ಯುವಕನೊಬ್ಬ ಮನೆಯೊಳಗೆ ನುಗ್ಗಿದ್ದಾನೆ. ಪುಷ್ಪಾ ಅವರು, ಯಾರ ನೀ…ಯಾರೂ ಅಂತಾ ಕೇಳುವಷ್ಟರಲ್ಲೇ ಅವರ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯದ ಸರಕ್ಕೆ ಕೈಹಾಕಿದ್ದಾನೆ. ಈ ವೇಳೆ ತೀವ್ರ ಪ್ರತಿರೋಧ ಒಡ್ಡಿದರೂ ಬಿಡದ ಸುಲಿಗೆಕೋರ ಕಪಾಳಕ್ಕೆ ಹೊಡೆದಿದ್ದಾನೆ. ಅಷ್ಟರಲ್ಲೇ ಇನ್ನೊಂದು ಕೋಣೆಯಲ್ಲಿ ಇದ್ದ ಮಹಿಳೆಯ ಪತಿ ಹಾಲ್ ಗೆ ಬರೋದೊರಳಗೆ ಅರ್ಧ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಅಷ್ಟಕ್ಕೂ ತೀರಾ ಸಮೀಪದಲ್ಲಿ ಹಿಟ್ಟಿನ ಗಿರಣಿ ಇದೆ. ಅಲ್ಲಿ ಜನಜಂಗುಳಿ ಇದ್ದರೂ ಆ ಯುವಕ ಮನೆಯೊಳಗೆ ಹೊಕ್ಕು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡಿದ್ದೇ ಸೋಜಿಗವೆನಿಸುತ್ತೆ. ಘಟನೆಯ ನಂತರ ಅಕ್ಕಪಕ್ಕದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಶಹರ ಠಾಣೆಯ ಪೊಲೀಸರು ಖದೀಮ ಕಳ್ಳನನ್ನು ಬಂಧಿಸಲು ಜಾಲ ಬೀಸಿದ್ದಾರೆ.

ಜಿಮ್ಸ್ ನ ವೈದ್ಯಕೀಯ ವಿದ್ಯಾರ್ಥಿಗಳು, ಶಿಕ್ಷಕಿಯರು, ಅಡುಗೆ ಸಿಬ್ಬಂದಿಗೆ ಕೊರೊನಾ ಸೋಂಕು; ಆತಂಕದಲ್ಲಿ ವಿದ್ಯಾರ್ಥಿಗಳು!

0

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಎರಡಂಕಿ ತಲುಪಿರುವ ಕೊರೊನಾ ಸೋಂಕು ಶತಕದತ್ತ ಮುನ್ನುಗ್ಗುತ್ತಿದೆ. ಶನಿವಾರ ಒಂದೇ ದಿನ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿತ್ತು.‌

ಭಾನುವಾರವೂ ಜಿಮ್ಸ್ ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವಸತಿ ನಿಲಯದಲ್ಲಿ ಐಸೋಲೇಶನ್ ಮಾಡಲಾಗಿದೆ.

ಅದರಂತೆ, ಅವಳಿ ನಗರದ ಎಸ್.ಎಂ.ಕೃಷ್ಣ ನಗರದ ಬಡಾವಣೆ ಪ್ರಾಥಮಿಕ ಶಾಲೆ ನಂ.12ರಲ್ಲಿ ಇಬ್ಬರು ಶಿಕ್ಷಕರಿಯರು ಹಾಗೂ ಓರ್ವ ಅಡುಗೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ವಿದ್ಯಾರ್ಥಿಗಳಲ್ಲೂ ಸೋಂಕಿನ ಭೀತಿ ಕಾಡುತ್ತಿದೆ.

ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಎಸ್.ಎಂ.ಕೃಷ್ಣ ಶಾಲೆಯ ಮೂವರು ಸೇರಿ ಭಾನುವಾರ ಜಿಲ್ಲೆಯಲ್ಲಿ ಏಳು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಗದಗ ತಾಲೂಕಿನ ನಾಲ್ವರು, ಮುಂಡರಗಿ ವ್ಯಾಪ್ತಿಯ ಮೂವರಿಗೆ ಸೋಂಕು ಖಚಿತಪಟ್ಟಿದೆ.

ಭಾನುವಾರದವರೆಗೆ (ಜ.9) ಜಿಲ್ಲೆಯಲ್ಲಿ 6,44,329
ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ 6,94,360 ಮಾದರಿ ಸಂಗ್ರಹಿಸಿದ್ದು, 6,68,235
ನಕಾರಾತ್ಮಕವಾಗಿವೆ. ಭಾನುವಾರದ 07 ಪ್ರಕರಣ ಸೇರಿ ಒಟ್ಟು 26,127 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಈವರೆಗೆ 319 ಜನ ಮೃತಪಟ್ಟಿದ್ದು, ಒಟ್ಟು 25,755 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 53 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ಮಂಗಳಗೌರಿ’ ನೋಡುತ್ತಿದ್ದ ಮಹಿಳೆಯ ಮಾಂಗಲ್ಯ ಅಪಹರಣ

ವಿಜಯಸಾಕ್ಷಿ ಸುದ್ದಿ, ಗದಗ:

ಇತ್ತೀಚೆಗೆ ಜನರಲ್ಲಿ ಧಾರಾವಾಹಿ ವೀಕ್ಷಿಸುವ ಗೀಳು ಹೆಚ್ಚಾಗಿದೆ. ಪ್ರತಿಯೊಂದು ಮನೆಯಲ್ಲೂ ಸಂಜೆ ಆಗುತ್ತಲೇ ಅರ್ಧ ಗಂಟೆಗೊಂದರಂತೆ ಪ್ರಸಾರವಾಗುವ ಧಾರಾವಾಹಿಗಳಿಗಾಗಿ ಗಡಿಬಿಡಿಯಿಂದ ಮನೆಯ ಎಲ್ಲ ಕೆಲಸ ಮುಗಿಸಿ, ಟಿವಿ ಮುಂದೆ ರಿಮೋಟ್ ಹಿಡಿದು ಕುಳಿತುಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ.

ಚಿಕ್ಕ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನ ಅಜ್ಜಿಯರ ಮನ ಸೆಳೆದಿರುವ ಧಾರಾವಾಹಿಗಳನ್ನು ವೀಕ್ಷಿಸುವಾಗ ಅಕ್ಕ-ಪಕ್ಕ ಏನೇ ಆದರೂ ತಿಳಿಯದಷ್ಟು ತಲ್ಲೀನರಾಗಿರುತ್ತಾರೆ.

ಹೀಗೆ ಮನೆಯಲ್ಲಿ ಧಾರಾವಾಹಿ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಕಳ್ಳನೊಬ್ಬ ಒಳನುಗ್ಗಿ, ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯವನ್ನೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ಸಂಜೆ ನಗರದಲ್ಲಿ ನಡೆದಿದೆ.

ನಗರದ ಹುಡ್ಕೋ ಕಾಲನಿಯ ಎರಡನೇ ಕ್ರಾಸ್ ನಿವಾಸಿ ಪುಷ್ಪಾ (63) ಎಂಬ ಮಹಿಳೆ ಶುಕ್ರವಾರ ಸಂಜೆ 7 ಗಂಟೆಯಿಂದ `ಮಂಗಳಗೌರಿ’ ಧಾರಾವಾಹಿ ವೀಕ್ಷಿಸುವುದರಲ್ಲಿ ಮಗ್ನರಾಗಿದ್ದರು. ಈ ವೇಳೆ ಕಳ್ಳ ಒಳನುಗ್ಗಿದ್ದೇ ತಿಳಿಯಲಿಲ್ಲ. ಕೊರಳಿಗೆ ಕೈಹಾಕಿ ಮಾಂಗಲ್ಯ ಕಿತ್ತುಕೊಂಡಾಗಲೇ ಅರಿವಿಗೆ ಬಂದಿದ್ದು.

25-30 ವಯಸ್ಸಿನ ಮುಖಕ್ಕೆ ಮಾಸ್ಕ್ ಹಾಕಿದ್ದ ಯುವಕ ಮಾಂಗಲ್ಯಕ್ಕೆ ಕೈ ಹಾಕಿದಾಗ ಮಹಿಳೆ ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಆದರೆ ಯುವಕ ಆಕೆಯ ಕಪಾಳಕ್ಕೆ ಬಾರಿಸಿ, ಸುಮಾರು 70 ಸಾವಿರ ರೂ. ಮೌಲ್ಯದ ತಾಳಿಯನ್ನು ಕದ್ದೊಯ್ದಿದ್ದಾನೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!