Home Blog Page 3266

ಗಾಂಜಾ ಮಾರಾಟದ ಆರೋಪಿ ಸೆಟ್ಲಮೆಂಟ್‌ನ ಮಂಜುನಾಥ ಮಾರುತಿ ಹಲಕುರ್ಕಿ ಅಲಿಯಾಸ್ ಡಿಸ್ಕವರಿ ಮಂಜ್ಯಾನಿಗೆ 7 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಸ್ವಂತ ಲಾಭಕ್ಕೋಸ್ಕರ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿತನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ದಿ. 1.3.2017ರಂದು 12.40ರ ಸುಮಾರಿಗೆ ಬೆಟಗೇರಿ ದಂಡಿನ ದುರ್ಗಮ್ಮ ಗುಡಿಯ ಹತ್ತಿರ ಮನ್ಸುಪ್‌ಲಾಲ್ ಪುಣೇಕರ್ ಅವರ ಹೊಲದಲ್ಲಿರುವ ಹಳೆಯ ಗೋಡೌನ್ ಹತ್ತಿರ ಆರೋಪಿತನಾದ ಬೆಟಗೇರಿ ಸೆಟ್ಲಮೆಂಟ್‌ನ ಮಂಜುನಾಥ ಮಾರುತಿ ಹಲಕುರ್ಕಿ@ ಡಿಸ್ಕವರಿ ಮಂಜ್ಯಾನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.

ಆರೋಪಿ ಮಂಜುನಾಥ ಈತ ಒಟ್ಟೂ 1 ಕೆಜಿ 20 ಗ್ರಾಂ. ತೂಕದ, 10 ಸಾವಿರ ರೂ. ಕಿಮ್ಮತ್ತಿನ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಾಗ, ಆರಕ್ಷಕ ಅಧೀಕ್ಷಕರು ಗದಗ ಹಾಗೂ ಆರಕ್ಷಕ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಅಂದಿನ ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಡಿ.ಮಡ್ಡಿರವರು ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು.

ಈ ಬಗ್ಗೆ ಎನ್‌ಡಿಪಿಎಸ್ ಆ್ಯಕ್ಟ್ ಪ್ರಕರಣವನ್ನು ಮಹಿಳಾ ಪಿಎಸ್‌ಐ ಎಸ್.ಎಸ್.ಸೊರಟೂರ ದಾಖಲಿಸಿಕೊಂಡು, ಬೆಟಗೇರಿ ಸಿಪಿಐ ವಿ.ಕೆ.ಯಡಹಳ್ಳಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸದರಿ ಪ್ರಕರಣದಲ್ಲಿ ಮಲ್ಲಿಕಾರ್ಜುನಗೌಡ.ಬಿ. ದೊಡ್ಡಗೌಡರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಏ.19ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ರಾಜೇಶ್ವರ ಎಸ್.ಶೆಟ್ಟಿ ಇವರು ಆರೋಪಿತನಿಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಉತ್ತಮ ತನಿಖೆ ನಡೆಸಿ, ಆರೋಪಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ ಪ್ರಕರಣದ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ. ಎಸ್ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪಕ್ಷದ ಪರ ಪ್ರಚಾರ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್…….

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಎಚ್.ಕೆ.ಪಾಟೀಲ ಇವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಚುನಾವಣಾಧಿಕಾರಿಗಳಿಂದ ಪರವಾನಗಿ ಪಡೆದುಕೊಳ್ಳದೇ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ, ಗಾಂಧಿನಗರ ಸೆಟ್ಲಮೆಂಟ್‌ನ ಸಲೀಮ್‌ ಬುಡ್ನೇಸಾಬ ಕೊಣ್ಣೂರ ಇವರು ಏ.17ರಂದು ಮಧ್ಯಾಹ್ನ 12-30ರಿಂದ 3 ಗಂಟೆಯವರೆಗಿನ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಚಿಹ್ನೆಯಿರುವ ನಿಲುವಂಗಿಯನ್ನು ಧರಿಸಿ ಪ್ರಚಾರ ನಡೆಸಿದ್ದರು.

ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿಯವರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಕೆಎ.26, ಇಬಿ.2013 ಮೋಟಾರ್‌ ಸೈಕಲ್‌ ಸವಾರ, ಕೆಎ.26-8714 ಪ್ಯಾಸೆಂಜರ್‌ ಆಟೋ ರಿಕ್ಷಾ ಚಾಲಕ ಹಾಗೂ ಪ್ಯಾಸೆಂಜರ್‌ ಆಟೋ ರಿಕ್ಷಾ ಕೆಎ.26, ಬಿ.0255 ವಾಹನಗಳ ಚಾಲಕರು ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ.

ಹಾಗಿದ್ದರೂ, ತಮ್ಮ ವಾಹನಗಳಿಗೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಏ.18ರ ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.

ಇದು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಸದರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗದಗ ಶಹರ ವಿಧಾನಸಭಾ ಕ್ಷೇತ್ರದ ಎಫ್‌ಎಸ್‌ಟಿ ಅಧಿಕಾರಿ ಚನ್ನಕೇಶವ ಹನುಮಂತಪ್ಪ ಮುದಗಲ್‌ ಗದಗ ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅಧಿಕಾರಿಗಳ ದೂರನ್ನು ಸ್ವೀಕರಿಸಿರುವ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ-2023; ಗದಗ ಜಿಲ್ಲೆಯಲ್ಲಿ ಕೊನೆಯ ದಿನ ಗುರುವಾರದಂದು 49 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ(ಎ.20) ರಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 44 ಅಭ್ಯರ್ಥಿಗಳಿಂದ 49 ನಾಮಪತ್ರಗಳು ಸಲ್ಲಿಕೆಯಾಗಿವೆ.

ಏಪ್ರಿಲ್ 13 ರಿಂದ ಏಪ್ರಿಲ್ 20 ರವರೆಗೆ ಜಿಲ್ಲೆಯಲ್ಲಿ ಒಟ್ಟು 122 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 15 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರರಾಗಿ ಸಮಿತ್ರಾ ಹನುಮಂತಪ್ಪ ನಾಯಕ-1, ರಾಮಕೃಷ್ಣ ಶಿದ್ಲಂಗಪ್ಪ ದೊಡ್ಡಮನಿ-1, ಮಂಜುನಾಥ ಯಲ್ಲಪ್ಪ ಮುಶಪ್ಪನವರ-1, ದೊಡ್ಡಪ್ಪ ಭದ್ರಪ್ಪಾ ಲಮಾಣಿ-1, ಚನ್ನಪ್ಪ ಪಾಂಡಪ್ಪ ಬಹ್ಮನಪಾಡ-1, ಕರಿಯಪ್ಪ ನೀಲಪ್ಪ ಶಿರಹಟ್ಟಿ-1, ದುರ್ಗಪ್ಪ ಶೇಖಪ್ಪ ಬಿಂಜಡಗಿ-1, ಭೀಮಸಿಂಗ ನಾರಾಯಣಪ್ಪ ರಾಠೋಡ-1,

ಚಂದ್ರು ಕುಬೇರಪ್ಪ ಲಮಾಣಿ-1, ಶೇಖಪ್ಪ ಭೋಜಪ್ಪ ಲಮಾಣಿ-1, ರಾಮಪ್ಪ ಸೋಬೆಪ್ಪ ಲಮಾಣಿ-1, ಭಾರತೀಯ ಜನತಾ ಪಾರ್ಟಿಯಿಂದ ಚಂದ್ರು ಕುಬೇರಪ್ಪ ಲಮಾಣಿ-1, ಭೀಮಸಿಂಗ್ ನಾರಾಯಣಪ್ಪ ರಾಠೋಡ-1, ರಾಮಪ್ಪ ಸೋಬೆಪ್ಪ ಲಮಾಣಿ-1, ಜನತಾದಳ(ಸೆಕ್ಯೂಲರ್)ಪಾರ್ಟಿಯಿಂದ ಹನುಮಂತಪ್ಪ ಮಂಗಳೆಪ್ಪ ನಾಯಕ-1, ನಾಮಪತ್ರ ಸಲ್ಲಿಸಿರುತ್ತಾರೆ.

66-ಗದಗ ವಿಧಾನ ಸಭಾ ಮತಕ್ಷೇತ್ರದಿಂದ 17 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರರಾಗಿ ವಿಶ್ವನಾಥ ಗಂಗಾಧರ ಶಿರಿ-1, ಬಸವನಗೌಡ ಎಂ ಪಾಟೀಲ-1, ವೀರಭದ್ರಪ್ಪ ವೀರಪ್ಪ ಕಬ್ಬಿಣದ-1, ರುದ್ರಪ್ಪ ಬಸಪ್ಪ ಕುಂಬಾರ-1, ಬಸವರಾಜ ಷಣ್ಮುಕಪ್ಪ ಮಾಳೋದೆ-1, ವಿಶ್ವನಾಥ ಅಂದಾನಪ್ಪ ಖಾನಾಪುರ-1, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸಚೀನಕುಮಾರ ಮಂಜುನಾಥ ಕರ್ಜೆಕಣ್ಣವರ-1, ಭಾರತೀಯ ಜನತಾ ಪಾರ್ಟಿಯಿಂದ ನಾಗೇಶ್ವರ ತಿರುಕಪ್ಪ ಹುಬ್ಬಳ್ಳಿ-1, ಇಂಡಿಯನ್ ಮೂವಮೆಂಟ ಪಾರ್ಟಿಯಿಂದ ಪೂಜಾ ಮಲ್ಲಪ್ಪ ಬೇವೂರ-1,

ಜನತಾದಳ (ಸೆಕ್ಯೂಲ್‍ರ) ಪಾರ್ಟಿಯಿಂದ ಗೋವಿಂದಗೌಡ ರಂಗನಗೌಡ ವೆಂಕನಗೌಡ-1, ರಾಣಿ ಚನ್ನಮ್ಮ ಪಾರ್ಟಿಯಿಂದ ಚಂದ್ರಶೇಖರ ಮಲ್ಲಿಕಾರ್ಜುನ ದೇಸಾಯಿ-1, ಭಾರತೀಯ ಜನತಾ ಪಾರ್ಟಿಯಿಂದ ಅನೀಲ ಪಿ ಮೆನಸಿನಕಾಯಿ-2, ರಿಪಬ್ಲಿಕ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಕವಿತಾ ಪಾಂಡುರಂಗ ಬಡಿಗೇರ-1, ಜನತಾದಳ (ಯುನೈಟೆಡ್) ಪಾರ್ಟಿಯಿಂದ ಮಲ್ಲಿಕಾರ್ಜುನ ಶಂಕರಗೌಡ ಪರ್ವತಗೌಡ್ರ-1, ಟಿಪ್ಪು ಸುಲ್ತಾನ ಪಾರ್ಟಿಯಿಂದ ಶಮಸುದ್ಧಿನ ರಮಜಾನಸಾಬ ಅಣ್ಣಿಗೇರಿ-1, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿಯಿಂದ ಆನಂದ ಬಸವರಾಜ ಹಂಡಿ-1 ನಾಮಪತ್ರ ಸಲ್ಲಿಸಿರುತ್ತಾರೆ.

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರರಾಗಿ ಅಬ್ದುಲಖಾದರ ಮುಸ್ತುಸಾಬ ಎ-1, ದೇವೆಂದ್ರಪ್ಪ ಬಾಲಪ್ಪ ಓಲೇಕಾರ-1, ಬೇಬಿಜಾನ ರಾಜೇಸಾಬ ದರಗಾರ-1, ಜನತಾದಳ (ಸೆಕ್ಯೂಲರ್ ) ಪಾರ್ಟಿಯಿಂದ ಮುಕ್ತುಮಸಾಬ ಯಮನೂರಸಾಬ ಮುದೋಳ-1, ಭಾರತೀಯ ಜನತಾ ಪಾರ್ಟಿಯಿಂದ ಕಳಕಪ್ಪ ಗುರುಶಾಂತಪ್ಪ ಬಂಡಿ-1, ಶಿವಸೇನಾ ಪಾರ್ಟಿಯಿಂದ ಕುಮಾರ ಅಂದಪ್ಪ ಹಕಾರಿ-1, ಆಮ್ ಆದ್ಮಿ ಪಾರ್ಟಿಯಿಂದ ದೊಡ್ಡಯ್ಯ ಎಂ-1 ನಾಮಪತ್ರ ಸಲ್ಲಿಸಿರುತ್ತಾರೆ.

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 10 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರರಾಗಿ ದುರ್ಗಪ್ಪ ಪಾರಪ್ಪ ಜಮಖಂಡಿ-1, ಮಲ್ಲಿಕಾರ್ಜುನ ಯಲ್ಲಪ್ಪ ನಾಯಕ-1, ವಾಸನಗೌಡ ನಿಂಗನಗೌಡ ಬಂಡಿ-1, ಉಮೇಶ ಫಕೀರಪ್ಪ ತಳವಾರ-1, ಕರ್ನಾಟಕ ಮಕ್ಕಳ ಪಕ್ಷದಿಂದ ಸಿದ್ದನಗೌಡ ಮಲ್ಲನಗೌಡ ಮರಿಗೌಡ್ರ-1, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ರುದ್ರಯ್ಯ ಗದಿಗೆಯ್ಯ ಸುರೇಬಾನ-1, ಬಹುಜನ ಸಮಾಜ ಪಾರ್ಟಿಯಿಂದ ಹನುಮಂತ ಯಲ್ಲಪ್ಪ ಮಾದರ-1, ಆಮ್ ಆದ್ಮಿ ಪಾರ್ಟಿಯಿಂದ ರಾಮಪ್ಪ ದ್ಯಾಮಪ್ಪ ಹೂವಣ್ಣವರ-1, ಜನತಾದಳ (ಸೆಕ್ಯೂಲರ್) ಪಾರ್ಟಿಯಿಂದ ರುದ್ರಗೌಡ ನಿಂಗನಗೌಡ ಪಾಟೀಲ-2 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿರುತ್ತಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಬಿಜೆಪಿಯ ಐವರು, ‌ಕಾಂಗ್ರೆಸ್ ಪಕ್ಷದ ಇಬ್ಬರ ವಿರುದ್ಧ ಕೇಸ್

ಪೂರ್ವಾನುಮತಿಯಿಲ್ಲದೇ ವಾಹನಕ್ಕೆ ಬಿಜೆಪಿ ಧ್ವಜ ಅಳವಡಿಸಿಕೊಂಡು ಪ್ರಚಾರ ನಡೆಸಿದ ಐವರ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣಾ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಪಕ್ಷದ ಧ್ವಜ ಅಳವಡಿಸಿಕೊಂಡ ಬಿಜೆಪಿಯ ಐವರು, ಕಾಂಗ್ರೆಸ್ ಪಕ್ಷದ ಇಬ್ಬರು ತಮ್ಮ ವಾಹನಗಳಿಗೆ ಪಕ್ಷದ ಬ್ಯಾನರ್, ಧ್ವಜ ಹಾಗೂ ಫ್ಲೆಕ್ಸ್ ಗಳನ್ನು ಅಳವಡಿಸಿಕೊಂಡು ಪ್ರಚಾರ ನಡೆಸಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.

ಕಾಂಗ್ರೆಸ್‌ ಪಕ್ಷದ ನಿಯೋಜಿತ ಅಭ್ಯರ್ಥಿ ಎಚ್.ಕೆ.ಪಾಟೀಲರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಾಹನಕ್ಕೆ ಪಕ್ಷದ ಧ್ವಜವನ್ನು ಅಳವಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.

ಎ. 17ರ ಮುಂಜಾನೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗಿನ ಅವಧಿಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಿಂದ ಪ್ರಾರಂಭಗೊಂಡು ಶಹರದ ಎ.ಸಿ. ಕಚೇರಿಯ ಚುನಾವಣಾಧಿಕಾರಿಗಳ ಕಾರ್ಯಾಲಯದವರೆಗೆ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಸಾಗಿತ್ತು.

ಈ ಸಮಯದಲ್ಲಿ ಶಾಸಕರು ತೆರಳುತ್ತಿದ್ದ ಅಲಂಕೃತಗೊಂಡ ಗೂಡ್ಸ್‌ ವಾಹನಕ್ಕೆ 2 ಬ್ಯಾನರ್‌, 6 ಕಾಂಗ್ರೆಸ್‌ ಧ್ವಜಗಳು, 2 ಸ್ಪೀಕರ್‌, 250 ಕಾಂಗ್ರೆಸ್‌ ಧ್ವಜಗಳು ಹಾಗೂ 250 ಕಾಂಗ್ರೆಸ್‌ ಪಕ್ಷದ ಶಾಲುಗಳು, ಇನ್ನೊಂದು ಆಟೋ ರಿಕ್ಷಾಕ್ಕೆ 100 ವ್ಯಾಟ್‌ ಆಂಪ್ಲಿಫೈರ್‌, ಲೌಡ್‌ಸ್ಪೀಕರ್‌ ಅಳವಡಿಸಲು ಏ.15ರಂದು ಅನುಮತಿ ಪಡೆಯಲಾಗಿತ್ತು.

ಅದರಂತೆ ಎ.17ರಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್.ಕೆ.ಪಾಟೀಲರು ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಆದರೆ, ಒಬ್ಬ ಟಿವಿಎಸ್‌ ಬೈಕ್‌ ಸವಾರ ಹಾಗೂ ಒಂದು ಪ್ಯಾಸೇಂಜರ್‌ ರಿಕ್ಷಾ ಚಾಲಕ ಕಾಂಗ್ರೆಸ್‌ ಪಕ್ಷದ ಧ್ವಜವನ್ನು ಚುನಾವಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ತಮ್ಮ ವಾಹನಗಳಿಗೆ ಅಳವಡಿಸಿಕೊಂಡು ಏ.17ರ ಮಧ್ಯಾಹ್ನ 12-30ರಿಂದ 3 ಗಂಟೆಯವರೆಗೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.

ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸದರಿ ಆರೋಪಿತರ ಮೇಲೆ ಕಲಂ.3, ಕರ್ನಾಟಕ ಓಪನ್‌ ಡಿಸ್ಪಿಗರ್ಮೆಂಟ್‌ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಎಫ್‌ಎಸ್‌ಟಿ ಅಧಿಕಾರಿ ಗುರುನಾಥ ಮಾಣೆಕಪ್ಪ ದಸಪಳ್ಳಿ ಇವರು ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ನೀಡಿರುವ ಮಾಹಿತಿಯನ್ವಯ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಪಕ್ಷದ ಗದಗ ಮತಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿಯವರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಾಹನಕ್ಕೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಐವರ ವಿರುದ್ಧ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.

ಅನಿಲ ಮೆಣಸಿನಕಾಯಿ ಅವರು ಮೆರವಣಿಗೆಯಲ್ಲಿ ತೆರಳುವ ತೆರೆದ ವಾಹನಗಳಿಗೆ ಬಿಜೆಪಿಯ ಧ್ವಜ, ಬ್ಯಾನರ್‌, ಫ್ಲೆಕ್ಸ್‌ಗಳನ್ನು ಅಳವಡಿಸಿಕೊಳ್ಳಲು ಪಕ್ಷದ ಜಿಲ್ಲಾಧ್ಯಕ್ಷರು ಎ.16ರಂದು ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡಿದ್ದು, ಅದರಂತೆ ಅನಿಲ ಮೆಣಸಿನಕಾಯಿ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಎ.18ರಂದು ತೆರಳಿದ್ದರು.

ಆದರೆ, ಐದು ಗೂಡ್ಸ್‌ ವಾಹನಗಳ ಚಾಲಕರು ಚುನಾವಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ತಮ್ಮ ವಾಹನಗಳಿಗೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಎ.18ರ ಮಧ್ಯಾಹ್ನ 12-30ರಿಂದ 3 ಗಂಟೆಯವರೆಗೆ ಶಹರದ ಎ.ಸಿ. ಕಚೇರಿಯ ಮುಂದೆ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.

ಇದು ಮಾದರಿ ನೀತಿ ಸಂಹಿತೆಯ  ಉಲ್ಲಂಘನೆಯಾಗಿದ್ದು, ಸದರಿ ಆರೋಪಿತರ ಮೇಲೆ ಕಲಂ.3, ಕರ್ನಾಟಕ ಓಪನ್‌ ಡಿಸ್ಪಿಗರ್ಮೆಂಟ್‌ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಎಫ್‌ಎಸ್‌ಟಿ ಅಧಿಕಾರಿ ಗುರುನಾಥ ಮಾಣೆಕಪ್ಪ ದಸಪಳ್ಳಿ ಇವರು ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ನೀಡಿರುವ ಮಾಹಿತಿಯನ್ವಯ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ-2023; ಗದಗ ಜಿಲ್ಲೆಯಲ್ಲಿ ಬುಧವಾರ 28 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು_ ಜಿಲ್ಲೆಯಲ್ಲಿ ಬುಧವಾರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 22 ಅಭ್ಯರ್ಥಿಗಳಿಂದ 28 ನಾಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 73 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 12 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಅಶೋಕ ಹೇಮಪ್ಪ ಲಮಾಣಿ-1, ಪಕ್ಷೇತರ ಅಭ್ಯರ್ಥಿಯಾಗಿ ಸುನೀಲಕುಮಾರ ಪಾಂಡಪ್ಪ ಬಹಮನಪದ-1, ಆಮ್ ಆದ್ಮಿ ಪಾರ್ಟಿಯಿಂದ ಮಲ್ಲಿಕಾರ್ಜುನ ಯಲ್ಲಪ್ಪ ದೊಡ್ಡಮನಿ-2, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಸುಜಾತಾ ನಿಂಗಪ್ಪ ದೊಡಮನಿ-3,

ಜನತಾ ದಳ(ಸೆಕ್ಯೂಲರ) ದಿಂದ ಹನುಮಂತಪ್ಪ ನಾಯಕ-1, ಪಕ್ಷೇತರ ಅಭ್ಯರ್ಥಿಗಳಾಗಿ ಸಂತೋಷ ಗೌರವ್ವ ಹಿರೇಮನಿ-1, ಹನುಮಂತಪ್ಪ ಪೀರಪ್ಪ ಕೋರವರ-1, ಗುರುನಾಥ ಕಲ್ಲಪ್ಪ ದಾನಪ್ಪನವರ ಭಾರತೀಯ ಜನತಾ ಪಾರ್ಟಿಯಿಂದ-1, ಗುರುನಾಥ ಕಲ್ಲಪ್ಪ ದಾನಪ್ಪನವರ ಪಕ್ಷೇತರರಾಗಿ-1 ನಾಮಪತ್ರ ಸಲ್ಲಿಸಿರುತ್ತಾರೆ.

66-ಗದಗ ವಿಧಾನಸಭಾ ಮತಕ್ಷೇತ್ರದಿಂದ 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ಪೂಜಾ ಮಲ್ಲಪ್ಪ ಬೇವೂರ-1, ಆಮ್ ಆದ್ಮಿ ಪಾರ್ಟಿಯಿಂದ ಪೀರಸಾಬ ಶೇಖ-2, ಜನತಾ ದಳ(ಸೆಕ್ಯೂಲರ)ಪಾರ್ಟಿಯಿಂದ ಗೋವಿಂದಗೌಡ ವೆಂಕನಗೌಡ-1, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸಚಿನಕುಮಾರ ಕರ್ಜೆಣ್ಣವರ-1, ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಶಂಕರಗೌಡ ಪರ್ವತಗೌಡ್ರ-1, ಪಕ್ಷೇತರರಾಗಿ ಬಸವರಾಜ ಷಣ್ಮುಖಪ್ಪ ಮಾಳೋದ-1 ನಾಮಪತ್ರ ಸಲ್ಲಿಸಿರುತ್ತಾರೆ.

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 3 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಭಾರತೀಯ ಜನತಾ ಪಾರ್ಟಿಯಿಂದ ಕಳಕಪ್ಪ ಬಂಡಿ-1, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಿಂದ ಗುರುಪಾದಗೌಡ ಸಂಗನಗೌಡ ಪಾಟೀಲ-2 ನಾಮಪತ್ರ ಸಲ್ಲಿಸಿರುತ್ತಾರೆ.

ಬಿಜೆಪಿಯಿಂದ ಕಳಕಪ್ಪ ಬಂಡಿ ನಾಮಪತ್ರ ಸಲ್ಲಿಸಿದ್ದಾರೆ
ಕಾಂಗ್ರೆಸ್ ಪಕ್ಷದಿಂದ ಜಿ ಎಸ್ ಪಾಟೀಲ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು.

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ವೀರೇಶ ಸೊಬರದಮಠ-1, ಜನತಾದಳ (ಸೆಕ್ಯೂಲರ)ದಿಂದ ರುದ್ರಗೌಡ ನಿಂಗನಗೌಡ ಪಾಟೀಲ-1, ಪಕ್ಷೇತರ ಅಭ್ಯರ್ಥಿಯಾಗಿ ರಾಮಪ್ಪ ಹುಜರತ್ತಿ-1, ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಶಿದ್ದಪ್ಪ ಮಾಯಣ್ಣವರ-1, ಭಾರತೀಯ ಜನತಾ ಪಾರ್ಟಿಯಿಂದ ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ-2 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರಗುಂದ-ಬಿಜೆಪಿ ಅಭ್ಯರ್ಥಿ ಚಂದ್ರಕಾಂತಗೌಡ‌ ಪಾಟೀಲ ನಾಮಪತ್ರ ಸಲ್ಲಿಸುವ ಮೊದಲು ಮೆರವಣಿಗೆ ನಡೆಸಿದರು.

ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಾಣಾಧೀನ ಖೈದಿ ಸಾವು

ಮಹಿಳೆ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ ಆರೋಪಿ

ವಿಜಯಸಾಕ್ಷಿ ಸುದ್ದಿ, ಗದಗ

ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಚಾರಣಾಧೀನ ಖೈದಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಬಸಪ್ಪ ನಾಗಪ್ಪ ಚಂದ್ರ (50) ಮೃತಪಟ್ಟ ವಿಚಾರಣಾಧೀನ ಖೈದಿ.

ಏಪ್ರಿಲ್ 17ರಂದು ಮುಂಜಾನೆ ಬೆಟಗೇರಿಯ ಸಬ್ ಜೈಲಿನ ಬಾತರೂಮ್ ನಲ್ಲಿ ಬ್ಲೇಡ್ ನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ತಕ್ಷಣವೇ ಜೈಲು ಸಿಬ್ಬಂದಿ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಬಸಪ್ಪ ಮೃತಪಟ್ಟಿದ್ದಾನೆ.

2022ರ ಡಿಸೆಂಬರ್ 18ರಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದಲ್ಲಿ ಮಹಿಳೆಯನ್ನು ಕೊಲೆಗೈದು ಜೈಲು ಸೇರಿದ್ದ.

ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಪೋಸ್ಟ್: ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ರೋಣ

ಚುನಾವಣಾಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್‌ ಹಾಕಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ರೋಣ ತಾಲೂಕಿನ ಮೆಣಸಗಿ ಗ್ರಾಮದ ಕೇದಾರಗೌಡ ಎಂಬುವರು ಏ.8ರಂದು ಮುಂಜಾನೆ 10 ಗಂಟೆಯ ಸಮಯಕ್ಕೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೆಲವೊಂದು ಗ್ಯಾರಂಟಿ ಭಾಗ್ಯಗಳನ್ನು ಘೋಷಿಸಿದೆ. ಆದರೆ, ಘೋಷಣೆ ಮಾಡದ ಗ್ಯಾರಂಟಿಗಳು ಎಂದು ಪೋಸ್ಟ್‌ ಮಾಡಿದ್ದರು.

ನರಗುಂದ ಮತಕ್ಷೇತ್ರದ ಹೊಳೆಆಲೂರು ಸರ್ಕಲ್‌ ಹಾಗೂ ಗ್ರಾಮೀಣ ವಲಯದ ಫ್ಲೈಯಿಂಗ್‌ ಸ್ಕ್ವಾಡ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಹಶಮ್‌ಸಾಹೇಬ ಮಹಮ್ಮದ್‌ಗೌಸ್‌ ಖುದಾವಂದ್‌ ಇವರು ಏ.13ರಂದು ರೋಣದ ಕಾರ್ಯನಿರ್ವಾಹಕ ಅಭಿಯಂತರು ನೀಡಿದ ಮಾಹಿತಿಯ ಮೇರೆಗೆ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ಕಲಂ:125 ಆರ್.ಪಿ ಕಾಯ್ದೆ-1951 ಮತ್ತು ಐಪಿಸಿ ಕಲಂ:171(ಬಿ) ಅಡಿಯಲ್ಲಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ವಿರುದ್ಧ ಬಿ.ಬಿ. ಅಸೂಟಿ ವಾಗ್ದಾಳಿ; ಇನ್ಮುಂದೆ ನಿಮ್ಮ ಆಟ, ನಾಟಕ ನಡೆಯುವುದಿಲ್ಲ

ನಿಮ್ಮೆಲ್ಲಾ ನಾಟಕಗಳು ಮೇ.10ರಂದು ಕೊನೆಯಾಗಲಿದೆ. ಮತ್ತೆ ಬೆಂಗಳೂರಿಗೆ ಹೋಗಿ. ಐದು ವರ್ಷ ಅಲ್ಲೇ ಇರುವಂತೆ ಗದಗ ಜನರು ದಾರಿ ತೋರಿಸುತ್ತಾರೆ…….

ವಿಜಯಸಾಕ್ಷಿ ಸುದ್ದಿ, ಗದಗ

ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ, ಬಿಜೆಪಿಯ ಅನಿಲ್‌ ಮೆಣಸಿನಕಾಯಿ ಅವರು ನಾಪಪತ್ರ ಸಲ್ಲಿಕೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿಲ್ಲ. ಎಚ್.ಕೆ. ಪಾಟೀಲರ ಹೆಸರಿಗೆ ಕಳಂಕ ತರಬೇಕೆಂಬುದೇ ಅವರ ಉದ್ದೇಶವಾಗಿತ್ತು ಎಂದು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ  ಬಿ.ಬಿ. ಅಸೂಟಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗದುಗಿನ ಸಾತ್ವಿಕ ರಾಜಕೀಯಕ್ಕೆ ಅನಿಲ್ ಮೆಣಸಿನಕಾಯಿ ತಿಲಾಂಜಲಿಯಿಡುತ್ತಿದ್ದಾರೆ. ಸೋಮವಾರ ಶಾಸಕ ಎಚ್.ಕೆ. ಪಾಟೀಲ್ ಅಪಾರ ಬೆಂಬಲಿರೊಂದಿಗೆ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರು.

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಲ್ಲಿಗೇ ಅಗಮಿಸಿ, ಗಲಾಟೆ ಪ್ರಾರಂಭವಾಗಲು ಪ್ರಚೋದನೆ ನೀಡಿ, ಗೂಂಡಾ ವರ್ತನೆ ತೋರಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದ ಅನಿಲ್‌, ಉದ್ದೇಶಪೂರ್ವಕವಾಗಿ ಸೋಮವಾರವೇ ನಾಮಪತ್ರ ಸಲ್ಲಿಸಲು ಬಂದಿದ್ದಾರೆ ಎಂದು ಆರೋಪಿಸಿದರು.

ಜಗದೀಶ್ ಶೆಟ್ಟರ್ ಪರ ಘೋಷಣೆ ಕೂಗಿದಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಅವರೇ ತಮ್ಮ ಕಾರ್ ಮೇಲೆ ಏರಿ ಬಾನೆಟ್‌ಗೆ ಹಾನಿ ಮಾಡಿದ್ದಾರೆ. ಅವರೇ ಕಾರಿನ ಗ್ಲಾಸ್ ಒಡೆದು ನಾಟಕ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಗಲಾಟೆ ಮಾಡೋದು ಚಾಳಿಯಾಗಿದೆ ಎಂದು ಬಿ.ಬಿ ಅಸೂಟಿ ಹೇಳಿದರು.

ಮುಂದೆಯೂ ಇದೇ ರೀತಿ ಗದ್ದಲ, ಗಲಾಟೆ ಮಾಡುತ್ತಾರೆ. ಅನಿಲ್ ಮೆಣಸಿನಕಾಯಿಯವರೇ, ನಿಮ್ಮೆಲ್ಲಾ ನಾಟಕಗಳು ಮೇ.10ರಂದು ಕೊನೆಯಾಗಲಿದೆ. ಮತ್ತೆ ಬೆಂಗಳೂರಿಗೆ ಹೋಗಿ. ಐದು ವರ್ಷ ಅಲ್ಲೇ ಇರುವಂತೆ ಗದಗ ಜನರು ದಾರಿ ತೋರಿಸುತ್ತಾರೆ. ಮೆಣಸಿನಕಾಯಿಯವರೇ, ಇನ್ನುಮುಂದೆ ನಿಮ್ಮ ಆಟ, ನಾಟಕ‌ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

2018ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದ ಕಾರ್ಯಕರ್ತ ಮಂಜುನಾಥ ಮುಳಗುಂದ ಜನೆವರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತ, ಹುಲಕೋಟಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅತ್ಯಂತ ಶಾಂತ ರೀತಿಯಿಂದ ನಮ್ಮನ್ನೆಲ್ಲ ಬರಮಾಡಿಕೊಂಡು, ಬೀಳ್ಕೊಟ್ಟಿದ್ದರು.

ವಾಪಸ್‌ ಗದಗಕ್ಕೆ ಬಂದಾಗ, ಜೊತೆಗಿದ್ದ ಪಕ್ಷದ ಕಾರ್ಯಕರ್ತರು ತನ್ನ ಮೇಲೆ ಕಲ್ಲೆಸೆಯಬೇಕಿತ್ತು. ಆಗ ನಾವು ಅದನ್ನೇ ದೊಡ್ಡ ಪ್ರತಿಭಟನೆಯ ಅಸ್ತ್ರವಾಗಿಸಿಕೊಳ್ಳಬಹುದಿತ್ತು ಎಂದಿದ್ದರಂತೆ.

ಅವರ ಆ ಉದ್ದೇಶ, ಮಾತು ಈಗ ನಿಜವಾಗಿದೆ. ಬಿಜೆಪಿಯ ಸ್ನೇಹಿತರೇ ನೀಡಿರುವ ಮಾಹಿತಿಯಂತೆ, ಹುಲಕೋಟಿಯನ್ನೇ ಗುರಿಯಾಗಿಸಿಕೊಂಡು, ಗದ್ದಲವೆಬ್ಬಿಸಿ, ಅನುಕಂಪ ಪಡೆದು ನಂತರ ಗದಗಕ್ಕೆ ಬಂದು ಮತಯಾಚನೆ ಮಾಡುವ ಉದ್ದೇಶವಿದೆ ಎಂದು ಮಂಜುನಾಥ ಮುಳಗುಂದ ತಿಳಿಸಿದ್ದಾರೆ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ವಿದ್ಯಾಧರ ದೊಡ್ಡಮನಿ, ಬಸವರಾಜ್ ಕಡೆಮನಿ, ಅಶೋಕ ಮಂದಾಲಿ, ಬಸವರಾಜ್ ಮನಗುಂಡಿ, ರಮೇಶ್ ಹೊನ್ನಿನಾಯ್ಕರ್ ಇದ್ದರು.

ವಿಧಾನಸಭೆ ಚುನಾವಣೆ ; ಗದಗ ಜಿಲ್ಲೆಯಲ್ಲಿಂದು 16 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಗದಗ-ಅನಿಲ‌ ಮೆಣಸಿನಕಾಯಿ, ರೋಣ-ಜಿ ಎಸ್ ಪಾಟೀಲ್, ನರಗುಂದ-ಬಿ ಆರ್ ಯಾವಗಲ್, ಆನೇಕಲ್ ದೊಡ್ಡಯ್ಯ ಸೇರಿದಂತೆ 16 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 16 ಅಭ್ಯರ್ಥಿಗಳಿಂದ 18 ನಾಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಆಮ್ ಆದ್ಮಿ ಪಾರ್ಟಿಯಿಂದ ಮಲ್ಲಿಕಾರ್ಜುನ ಯ ದೊಡ್ಡಮನಿ-2, ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶ ಭ ಗುಗ್ಗರಿ-1, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸುಷ್ಮಾ ಸರ್ವೆದೆ-1 ನಾಮ ಪತ್ರ ಸಲ್ಲಿಸಿರುತ್ತಾರೆ.

66-ಗದಗ ವಿಧಾನಸಭಾ ಮತಕ್ಷೇತ್ರದಿಂದ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ಪೂಜಾ ಮಲ್ಲಪ್ಪ ಬೇವೂರ-1, ಪಕ್ಷೇತರ ಅಭ್ಯರ್ಥಿಯಾಗಿ ಬಸನಗೌಡ ಮಲ್ಲನಗೌಡ ಪಾಟೀಲ-1, ಭಾರತೀಯ ಜನತಾ ಪಾರ್ಟಿಯಿಂದ ಅನೀಲ ಪಿ ಮೆಣಸಿನಕಾಯಿ-1, ಪಕ್ಷೇತರ ಅಭ್ಯರ್ಥಿಯಾಗಿ ವಿಶ್ವನಾಥ ಗಂಗಾಧರ ಶೀರಿ-1,

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕುಮಾರ ಅಂದಪ್ಪ ಹಕಾರಿ-1, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಂಜುನಾಥ ಮಹಾದೇವಪ್ಪ ಗುರಿಕಾರ-1, ಆಮ್ ಆದ್ಮಿ ಪಾರ್ಟಿಯಿಂದ ದೊಡ್ಡಯ್ಯ ಎಂ-1, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಗುರುಪಾದಗೌಡ ಸಂಗನಗೌಡ ಪಾಟೀಲ-1,

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ರುದ್ರಯ್ಯ ಗದಿಗಯ್ಯ ಸುರೇಬಾನ-1, ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಶಿದ್ದಪ್ಪ ಮಾಯನ್ನವರ-1, ಪಕ್ಷೇತರ ಅಭ್ಯರ್ಥಿಯಾಗಿ ರಾಮಪ್ಪ ಲಕ್ಷ್ಮಪ್ಪ ಹುಜರತ್ತಿ-1, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಬಸವರಡ್ಡಿ ರಂಗರಡ್ಡಿ ಯಾವಗಲ್-2, ಪಕ್ಷೇತರ ಅಭ್ಯರ್ಥಿಯಾಗಿ ದುರ್ಗಪ್ಪ ಪರಪ್ಪ ಜಮಖಂಡಿ-1 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ ಪ್ರಕರಣ; ಕಾಂಗ್ರೆಸ್‌ನ 9 ಜನ, ಬಿಜೆಪಿಯ ನಗರಸಭೆ ಸದಸ್ಯರು ಸೇರಿ 12 ಜನರ ಮೇಲೆ ಕೇಸ್

ದೂರು.. ಪ್ರತಿದೂರು ದಾಖಲು……

ವಿಜಯಸಾಕ್ಷಿ ಸುದ್ದಿ, ಗದಗ

ನಿನ್ನೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಆಂಡ್ ಕೌಂಟರ್ ಕೇಸ್ ದಾಖಲಾಗಿದೆ.

ಶಹರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಂಬತ್ತು ಜನರ ಮೇಲೆ ಹಾಗೂ ಬಿಜೆಪಿಯ 12 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ವಿದ್ಯಾಧರ ದೊಡ್ಡಮನಿ, ಬಸವರಾಜ್ ಬೆಳದಡಿ, ಅನೀಲ ಸಿದ್ದಮ್ಮನಹಳ್ಳಿ, ಶಿವಪ್ಪ ಬಳ್ಳಾರಿ, ಪಾಟೀಲ್‌ ಸಿ.ಕೆ, ಬಾಬಾಜಾನ್ ಬೇಲೇರಿ, ಚಂದ್ರು ಕರಿರಾಯನಗೌಡ್ರ, ಆಂಜನೇಯ ಕಟಗಿ, ಪ್ರಭು ಬುರುಬುರೆ ಇವರೆಲ್ಲರೂ ಸೇರಿ ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಅನಿಲ ಮೆಣಸಿನಕಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬಗ್ಗೆ ದೂರು ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರು ತಮ್ಮ ನಾಮಪತ್ರ ಸಲ್ಲಿಸಿ ಕಾರು ಹತ್ತುವು ಸಂದರ್ಭದಲ್ಲಿ ಈ ಒಂಬತ್ತು ಜನ ಕಾಂಗ್ರೆಸ್ ಕಾರ್ಯಕರ್ತರು, ಅನಿಲ ಮೆಣಸಿನಕಾಯಿ ಅವರ ಕಾರಿನ ಗ್ಲಾಸ್ ಒಡೆದು, ಮಜ್ಜಿಗೆ ಪಾಕೆಟ್ ತೂರಾಡಿ, ಬಾಯಿಂದ ಉಗುಳಿ ಚಪ್ಪಲಿ ಒಗೆದು ಅವಮಾನ ಪಡಿಸಿ, ಬಾಬಾಜಾನ ಬೇಲೇರಿ ಎಂಬುವರು, ಶರಣಪ್ಪ ಬಸಪ್ಪ ಕಮಡೊಳ್ಳಿ ಹಾಗೂ ಉಮೇಶ್ ಮಲ್ಲಪ್ಪ ಹಡಪದ ಇವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪರಮೇಶ್ ಚನ್ನಪ್ಪ ನಾಯಕ ಇವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

0041/2023 ಕಲಂ IPC 1860 (U/s-143,147, 148, 323, 324, 427, 355, 504, 506, 149) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಶಿವಪ್ಪ ಬಳ್ಳಾರಿ ಎಂಬುವರು ಇಬ್ಬರು ನಗರಸಭೆ ಸದಸ್ಯರು ಸೇರಿದಂತೆ 12 ಜನರ ಮೇಲೆ ದೂರು ಕೊಟ್ಟಿದ್ದಾರೆ.

ಶಿವಪ್ಪ ಮುಳಗುಂದ, ವೆಂಕಟೇಶ ಮೆಹರವಾಡೆ, ಸೋಹೆಲ್ ಕೊಟ್ಟೂರು, ಉಡಚಪ್ಪ ಹಳ್ಳಿಕೇರಿ, ಕುಮಾರ್ ಮಾರನಬಸರಿ, ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನಿಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಹಾಗೂ ಹಲವು ಜನರ ಮೇಲೆ ದೂರು ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ಕೆ ಪಾಟೀಲ್ ಇವರು, ನಾಮಪತ್ರ ಸಲ್ಲಿಸಲು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಇರುವಾಗ, ಆ ಸಂದರ್ಭದಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹಾಗೂ ಅವರ ಹಿಂಬಾಲಕರು, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಹೊರಗಡೆ ಬಂದಿದ್ದು, ಆ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನೋಡಿ,

ಸಿಟ್ಟಿನಿಂದ ನೋಡುತ್ತಾ ಕಾರು ಹತ್ತಲು ಪ್ರಯತ್ನಿಸುತ್ತಿದ್ದಾಗ ಅವರ ಕಾರ್ಯಕರ್ತರಾದ ಶಿವಪ್ಪ ಮುಳಗುಂದ, ನಮ್ಮೇನ್ನೆಲ್ಲಾ ನೋಡಿ, ಮೀಸೆ ತಿರುವಿ, ಶೆಡ್ ಹೊಡೆದು ಈ ಸಲ ಮಕ್ಕಳ ನಿಮ್ಮೆಲ್ಲರನ್ನೂ ಒಂದು ಕೈ ನೋಡುತ್ತೇವೆ ಅನ್ನುತ್ತಾ, ಶಿವಪ್ಪ ಬಳ್ಳಾರಿಗೆ ಅವಾಚ್ಯ ಶಬ್ದಗಳನ್ನು ಬಳಸಿ, ನೋಡಿಕೊಂಡು ಬಿಡೋಣ ಅಂದಾಕ್ಷಣ ವೆಂಕಟೇಶ ಮೆಹರವಾಡೆ ಇವರು, ಏಕಾಏಕಿ ಅಸುಂಡಿ ಗ್ರಾಮದ ವೆಂಕರಡ್ಡಿ ಹನಮರಡ್ಡಿ ರಾಮೇನಹಳ್ಳಿ ಇವರಿಗೆ ಮುಷ್ಠಿಯಿಂದ ಹೊಡೆಯಲು ಹತ್ತಿದಾಗ,

ಬಿಡಿಸಲು ಹೋದ ಶಶಿಧರಗೌಡ ಲೆಂಕನಗೌಡರ ಇವರಿಗೂ ಅವಾಚ್ಯ ಶಬ್ದಗಳಿಂದ ನಿಂಧಿಸಿ ತಳ್ಳಿದಾಗ, ಮತ್ತೊಬ್ಬ ಸೋಹೆಲ್ ಕೊಟ್ಟೂರು ಕೂಡ ಶಿವಪ್ಪ ಬಳ್ಳಾರಿ ಅವರಿಗೆ ಆವಾಚ್ಯ ಶಬ್ದಗಳಿಂದ ಬೈದು, ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದಾಗ,

ವೆಂಕಟೇಶ ಮೆಹರವಾಡೆ ಇವಂದು ಬಾಳ ಆಗೈತಿ ಸಾಯಿಸಿ ಬಿಡಬೇಕು ಎಂದು ಆವಾಚ್ಯ ಶಬ್ದಗಳಿಂದ ನಿಂಧಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಉಡಚಪ್ಪ ಹಳ್ಳಿಕೇರಿ ಎಂಬುವರು ಎಲೆಕ್ಷನ್ ಅದು ಹೇಗೆ ಮಾಡ್ತೀರೀ ನೋಡ್ತೀವಿ ಎಂದು ಹೊಡೆದನು. ಕುಮಾರ್ ಮಾರನಬಸರಿ, ಕಲ್ಲಿನಿಂದ ಕಾಲಿಗೆ ಒಗೆದನು ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೆ ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನೀಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ, ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಸೇರಿದಂತೆ ಇನ್ನೂ ಅನೇಕರು ಶಿವಪ್ಪ ಬಳ್ಳಾರಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಶಹರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮಾಹಿತಿ ‌ನೀಡಿದ್ದಾರೆ.

0042/2023 ಕಲಂ IPC 1860 (U/s-143, 147, 148, 323, 324, 504, 506, 149) ಅಡಿಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!