Home Blog Page 3267

ವಿಧಾನಸಭೆ ಚುನಾವಣೆ ; ಗದಗ ಜಿಲ್ಲೆಯಲ್ಲಿಂದು 16 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಗದಗ-ಅನಿಲ‌ ಮೆಣಸಿನಕಾಯಿ, ರೋಣ-ಜಿ ಎಸ್ ಪಾಟೀಲ್, ನರಗುಂದ-ಬಿ ಆರ್ ಯಾವಗಲ್, ಆನೇಕಲ್ ದೊಡ್ಡಯ್ಯ ಸೇರಿದಂತೆ 16 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 16 ಅಭ್ಯರ್ಥಿಗಳಿಂದ 18 ನಾಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಆಮ್ ಆದ್ಮಿ ಪಾರ್ಟಿಯಿಂದ ಮಲ್ಲಿಕಾರ್ಜುನ ಯ ದೊಡ್ಡಮನಿ-2, ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶ ಭ ಗುಗ್ಗರಿ-1, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸುಷ್ಮಾ ಸರ್ವೆದೆ-1 ನಾಮ ಪತ್ರ ಸಲ್ಲಿಸಿರುತ್ತಾರೆ.

66-ಗದಗ ವಿಧಾನಸಭಾ ಮತಕ್ಷೇತ್ರದಿಂದ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ಪೂಜಾ ಮಲ್ಲಪ್ಪ ಬೇವೂರ-1, ಪಕ್ಷೇತರ ಅಭ್ಯರ್ಥಿಯಾಗಿ ಬಸನಗೌಡ ಮಲ್ಲನಗೌಡ ಪಾಟೀಲ-1, ಭಾರತೀಯ ಜನತಾ ಪಾರ್ಟಿಯಿಂದ ಅನೀಲ ಪಿ ಮೆಣಸಿನಕಾಯಿ-1, ಪಕ್ಷೇತರ ಅಭ್ಯರ್ಥಿಯಾಗಿ ವಿಶ್ವನಾಥ ಗಂಗಾಧರ ಶೀರಿ-1,

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕುಮಾರ ಅಂದಪ್ಪ ಹಕಾರಿ-1, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಂಜುನಾಥ ಮಹಾದೇವಪ್ಪ ಗುರಿಕಾರ-1, ಆಮ್ ಆದ್ಮಿ ಪಾರ್ಟಿಯಿಂದ ದೊಡ್ಡಯ್ಯ ಎಂ-1, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಗುರುಪಾದಗೌಡ ಸಂಗನಗೌಡ ಪಾಟೀಲ-1,

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ರುದ್ರಯ್ಯ ಗದಿಗಯ್ಯ ಸುರೇಬಾನ-1, ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಶಿದ್ದಪ್ಪ ಮಾಯನ್ನವರ-1, ಪಕ್ಷೇತರ ಅಭ್ಯರ್ಥಿಯಾಗಿ ರಾಮಪ್ಪ ಲಕ್ಷ್ಮಪ್ಪ ಹುಜರತ್ತಿ-1, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಬಸವರಡ್ಡಿ ರಂಗರಡ್ಡಿ ಯಾವಗಲ್-2, ಪಕ್ಷೇತರ ಅಭ್ಯರ್ಥಿಯಾಗಿ ದುರ್ಗಪ್ಪ ಪರಪ್ಪ ಜಮಖಂಡಿ-1 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ ಪ್ರಕರಣ; ಕಾಂಗ್ರೆಸ್‌ನ 9 ಜನ, ಬಿಜೆಪಿಯ ನಗರಸಭೆ ಸದಸ್ಯರು ಸೇರಿ 12 ಜನರ ಮೇಲೆ ಕೇಸ್

ದೂರು.. ಪ್ರತಿದೂರು ದಾಖಲು……

ವಿಜಯಸಾಕ್ಷಿ ಸುದ್ದಿ, ಗದಗ

ನಿನ್ನೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಆಂಡ್ ಕೌಂಟರ್ ಕೇಸ್ ದಾಖಲಾಗಿದೆ.

ಶಹರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಂಬತ್ತು ಜನರ ಮೇಲೆ ಹಾಗೂ ಬಿಜೆಪಿಯ 12 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ವಿದ್ಯಾಧರ ದೊಡ್ಡಮನಿ, ಬಸವರಾಜ್ ಬೆಳದಡಿ, ಅನೀಲ ಸಿದ್ದಮ್ಮನಹಳ್ಳಿ, ಶಿವಪ್ಪ ಬಳ್ಳಾರಿ, ಪಾಟೀಲ್‌ ಸಿ.ಕೆ, ಬಾಬಾಜಾನ್ ಬೇಲೇರಿ, ಚಂದ್ರು ಕರಿರಾಯನಗೌಡ್ರ, ಆಂಜನೇಯ ಕಟಗಿ, ಪ್ರಭು ಬುರುಬುರೆ ಇವರೆಲ್ಲರೂ ಸೇರಿ ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಅನಿಲ ಮೆಣಸಿನಕಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬಗ್ಗೆ ದೂರು ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರು ತಮ್ಮ ನಾಮಪತ್ರ ಸಲ್ಲಿಸಿ ಕಾರು ಹತ್ತುವು ಸಂದರ್ಭದಲ್ಲಿ ಈ ಒಂಬತ್ತು ಜನ ಕಾಂಗ್ರೆಸ್ ಕಾರ್ಯಕರ್ತರು, ಅನಿಲ ಮೆಣಸಿನಕಾಯಿ ಅವರ ಕಾರಿನ ಗ್ಲಾಸ್ ಒಡೆದು, ಮಜ್ಜಿಗೆ ಪಾಕೆಟ್ ತೂರಾಡಿ, ಬಾಯಿಂದ ಉಗುಳಿ ಚಪ್ಪಲಿ ಒಗೆದು ಅವಮಾನ ಪಡಿಸಿ, ಬಾಬಾಜಾನ ಬೇಲೇರಿ ಎಂಬುವರು, ಶರಣಪ್ಪ ಬಸಪ್ಪ ಕಮಡೊಳ್ಳಿ ಹಾಗೂ ಉಮೇಶ್ ಮಲ್ಲಪ್ಪ ಹಡಪದ ಇವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪರಮೇಶ್ ಚನ್ನಪ್ಪ ನಾಯಕ ಇವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

0041/2023 ಕಲಂ IPC 1860 (U/s-143,147, 148, 323, 324, 427, 355, 504, 506, 149) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಶಿವಪ್ಪ ಬಳ್ಳಾರಿ ಎಂಬುವರು ಇಬ್ಬರು ನಗರಸಭೆ ಸದಸ್ಯರು ಸೇರಿದಂತೆ 12 ಜನರ ಮೇಲೆ ದೂರು ಕೊಟ್ಟಿದ್ದಾರೆ.

ಶಿವಪ್ಪ ಮುಳಗುಂದ, ವೆಂಕಟೇಶ ಮೆಹರವಾಡೆ, ಸೋಹೆಲ್ ಕೊಟ್ಟೂರು, ಉಡಚಪ್ಪ ಹಳ್ಳಿಕೇರಿ, ಕುಮಾರ್ ಮಾರನಬಸರಿ, ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನಿಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಹಾಗೂ ಹಲವು ಜನರ ಮೇಲೆ ದೂರು ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ಕೆ ಪಾಟೀಲ್ ಇವರು, ನಾಮಪತ್ರ ಸಲ್ಲಿಸಲು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಇರುವಾಗ, ಆ ಸಂದರ್ಭದಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹಾಗೂ ಅವರ ಹಿಂಬಾಲಕರು, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಹೊರಗಡೆ ಬಂದಿದ್ದು, ಆ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನೋಡಿ,

ಸಿಟ್ಟಿನಿಂದ ನೋಡುತ್ತಾ ಕಾರು ಹತ್ತಲು ಪ್ರಯತ್ನಿಸುತ್ತಿದ್ದಾಗ ಅವರ ಕಾರ್ಯಕರ್ತರಾದ ಶಿವಪ್ಪ ಮುಳಗುಂದ, ನಮ್ಮೇನ್ನೆಲ್ಲಾ ನೋಡಿ, ಮೀಸೆ ತಿರುವಿ, ಶೆಡ್ ಹೊಡೆದು ಈ ಸಲ ಮಕ್ಕಳ ನಿಮ್ಮೆಲ್ಲರನ್ನೂ ಒಂದು ಕೈ ನೋಡುತ್ತೇವೆ ಅನ್ನುತ್ತಾ, ಶಿವಪ್ಪ ಬಳ್ಳಾರಿಗೆ ಅವಾಚ್ಯ ಶಬ್ದಗಳನ್ನು ಬಳಸಿ, ನೋಡಿಕೊಂಡು ಬಿಡೋಣ ಅಂದಾಕ್ಷಣ ವೆಂಕಟೇಶ ಮೆಹರವಾಡೆ ಇವರು, ಏಕಾಏಕಿ ಅಸುಂಡಿ ಗ್ರಾಮದ ವೆಂಕರಡ್ಡಿ ಹನಮರಡ್ಡಿ ರಾಮೇನಹಳ್ಳಿ ಇವರಿಗೆ ಮುಷ್ಠಿಯಿಂದ ಹೊಡೆಯಲು ಹತ್ತಿದಾಗ,

ಬಿಡಿಸಲು ಹೋದ ಶಶಿಧರಗೌಡ ಲೆಂಕನಗೌಡರ ಇವರಿಗೂ ಅವಾಚ್ಯ ಶಬ್ದಗಳಿಂದ ನಿಂಧಿಸಿ ತಳ್ಳಿದಾಗ, ಮತ್ತೊಬ್ಬ ಸೋಹೆಲ್ ಕೊಟ್ಟೂರು ಕೂಡ ಶಿವಪ್ಪ ಬಳ್ಳಾರಿ ಅವರಿಗೆ ಆವಾಚ್ಯ ಶಬ್ದಗಳಿಂದ ಬೈದು, ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದಾಗ,

ವೆಂಕಟೇಶ ಮೆಹರವಾಡೆ ಇವಂದು ಬಾಳ ಆಗೈತಿ ಸಾಯಿಸಿ ಬಿಡಬೇಕು ಎಂದು ಆವಾಚ್ಯ ಶಬ್ದಗಳಿಂದ ನಿಂಧಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಉಡಚಪ್ಪ ಹಳ್ಳಿಕೇರಿ ಎಂಬುವರು ಎಲೆಕ್ಷನ್ ಅದು ಹೇಗೆ ಮಾಡ್ತೀರೀ ನೋಡ್ತೀವಿ ಎಂದು ಹೊಡೆದನು. ಕುಮಾರ್ ಮಾರನಬಸರಿ, ಕಲ್ಲಿನಿಂದ ಕಾಲಿಗೆ ಒಗೆದನು ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೆ ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನೀಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ, ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಸೇರಿದಂತೆ ಇನ್ನೂ ಅನೇಕರು ಶಿವಪ್ಪ ಬಳ್ಳಾರಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಶಹರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮಾಹಿತಿ ‌ನೀಡಿದ್ದಾರೆ.

0042/2023 ಕಲಂ IPC 1860 (U/s-143, 147, 148, 323, 324, 504, 506, 149) ಅಡಿಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧಾನಸಭೆ ಚುನಾವಣೆ; ಗದಗ ಜಿಲ್ಲೆಯಲ್ಲಿಂದು 18 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ನಾಲ್ಕು ವಿಧಾನ lಸಭಾ ಕ್ಷೇತ್ರಗಳಲ್ಲಿ ಸೋಮವಾರ 14 ಅಭ್ಯರ್ಥಿಗಳಿಂದ 18 ನಾಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿಯಾಗಿ ಮುತ್ತು ಎಸ್-1, ಅನಿಲ ನಾಗಪ್ಪ ಮುಳಗುಂದ ಭಾರತೀಯ ಜನತಾ ಪಾರ್ಟಿ-1, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಸುಜಾತಾ ನಿಂಗಪ್ಪ ದೊಡ್ಡಮನಿ-1, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಂಜುನಾಥ ಅಸಂಗೆಪ್ಪ ಆಸಂಗಿ-1, ಪಕ್ಷೇತರ ಅಭ್ಯರ್ಥಿಯಾಗಿ ಅನಿಲ ನಾಗಪ್ಪ ಮುಳಗುಂದ-1, ಪಕ್ಷೇತರ ಅಭ್ಯರ್ಥಿಯಾಗಿ ರಾಮಕೃಷ್ಣ್ ಸಿದ್ದಲಿಂಗಪ್ಪ ದೊಡ್ಡಮನಿ-1,

66-ಗದಗ ವಿಧಾನಸಭಾ ಮತಕ್ಷೇತ್ರದಿಂದ 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆನಂದ ಬಸವರಾಜ ಹಂಡಿ-1, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಹನುಮಂತಗೌಡ ಕೃಷ್ಣಗೌಡ ಪಾಟೀಲ-4, ಆಮ್ ಆದ್ಮಿ ಪಾರ್ಟಿಯಿಂದ ಪೀರಸಾಬ ಅಬ್ದುಲಸಾಬ ಶೇಖ-1, ಭಾರತೀಯ ಜನತಾ ಪಾರ್ಟಿಯಿಂದ ಅನಿಲ ಪಿ ಮೆಣಸಿನಕಾಯಿ-1,

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಗಳಾಗಿ ಶಿವಾನಂದ ಶಂಕ್ರಪ್ಪ ರಾಠೋಡ-1, ಅಶೋಕ ವಿರುಪಾಕ್ಷಪ್ಪ ಬೇವಿನಕಟ್ಟಿ-1

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವೀರನಗೌಡ ಶಿವನಗೌಡ ಮೂಗನೂರ-1, ಆಮ್ ಆದ್ಮಿ ಪಾರ್ಟಿಯಿಂದ ರಾಮಪ್ಪ ದ್ಯಾಮಪ್ಪ ಹೂವಣ್ಣವರ-1, ಪಕ್ಷೇತರ ಅಭ್ಯರ್ಥಿಯಾಗಿ ಮುತ್ತು ಎಸ್-1 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಕಾರಿಗೆ ಕಲ್ಲು, ಗಾಜು ಜಖಂ, ಮಾತಿನ ಚಕಮಕಿ

ನಾಮಪತ್ರ ಸಲ್ಲಿಸಿ ವಾಪಾಸು ಹೋಗುವಾಗ ನಡೆದ ಘಟನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು, ಕಾರಿನ ಗ್ಲಾಸ್ ಜಖಂಗೊಂಡ ಘಟನೆ ನಡೆದಿದೆ.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಈ ಘಟನೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿ ವಾಪಾಸು ಆಗುವಾಗ ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಕೆ ಪಾಟೀಲ್ ಅವರು ನಾಮಪತ್ರ ಸಲ್ಲಿಸುವ ಕಾರ್ಯ ನಿಗದಿಯಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು.

ಇದರಿಂದಾಗಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು, ಪ್ರತಿಭಟನೆಗೆ ಮುಂದಾಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಪೊಲೀಸರು ಹಾಗೂ ಅರೆಸೇನಾ ಪಡೆಯು, ಸೇರಿದ್ದ ಕಾರ್ಯಕರ್ತರನ್ನು ಚದುರಿಸಿದರು.

ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಸಬ್ ಜೈಲಿನಲ್ಲಿ ಬ್ಲೇಡನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಚಾರಣಾಧೀನ ಖೈದಿ; ಸ್ಥಿತಿ ಗಂಭೀರ

ಮಹಿಳೆಯೊಬ್ಬಳ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ……..

ವಿಜಯಸಾಕ್ಷಿ ಸುದ್ದಿ, ಗದಗ

ವಿಚಾರಣಾಧೀನ ಖೈದಿಯೊಬ್ಬ ಸಬ್ ಜೈಲಿನಲ್ಲಿ ಬ್ಲೇಡ್ನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪದ ಬಸಪ್ಪ ನಾಗಪ್ಪ ಚಂದ್ರ (50) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವಿಚಾರಣಾಧೀನ ಖೈದಿ.

ಬೆಟಗೇರಿಯ ಸಬ್ ಜೈಲಿನಲ್ಲಿ ಈ ಘಟನೆ ನಡೆದಿದ್ದು, ವಿಚಾರಣಾಧೀನ ಖೈದಿಗಳನ್ನು ಉಪಹಾರಕ್ಕೆ ಕರೆದಿದ್ದ ವೇಳೆ ಬಾತ್ ರೂಮ್ ನಲ್ಲಿ ಹೋಗಿ ಬ್ಲೇಡ್ ನಿಂದ ಕತ್ತು ಕೊಯ್ದಕೊಂಡಿದ್ದಾನೆ. ಉಪಹಾರ ಸೇವಿಸಲು ಬಸಪ್ಪ ಬಾರದಿದ್ದಾಗ ಜೈಲು ಸಿಬ್ಬಂದಿ ಸ್ಥಳಕ್ಕೆ ಹೋಗಿ ‌ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ತಕ್ಷಣವೇ ಜೈಲು ಸಿಬ್ಬಂದಿ ಬಸಪ್ಪನನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಜಿಮ್ಸ್ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ ಮಹಿಳೆ ಭೀಕರ ಕೊಲೆ; ಕೊಲೆಗೈದು ಕುಡುಗೋಲು ಸಮೇತ ಠಾಣೆಗೆ ಶರಣಾದ ಆರೋಪಿ!

2022ರ ಡಿಸೆಂಬರ್ 18ರಂದು ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದಲ್ಲಿ ನಡೆದಿದ್ದ ಮಹಿಳೆಯೊಬ್ಬಳ‌ ಕೊಲೆ ಆರೋಪದಲ್ಲಿ ಬಸಪ್ಪ ಜೈಲು ಪಾಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಚಿರತೆ ಪತ್ತೆಗೆ ಡ್ರೋಣ ಕ್ಯಾಮೆರಾ; ಪತ್ತೆಯಾಗದ ಚಿರತೆ……….

ನಿನ್ನೆ ರಾತ್ರಿ ಪತ್ತೆಯಾಗಿದ್ದ ಚಿರತೆ…….

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರ ರಾತ್ರಿ ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಆರಾಮದಾಯಕವಾಗಿ ವಿಶ್ರಾಂತಿ ಸ್ಥಿತಿಯಲ್ಲಿ ಕಂಡಿದ್ದ ಚಿರತೆ ಇನ್ನೂ ಪತ್ತೆಯಾಗಿಲ್ಲ.

ನಿನ್ನೆ ರಾತ್ರಿಯಿಂದ ಬಿಂಕದಕಟ್ಟಿ, ಅಸುಂಡಿ ಗ್ರಾಮದ ಜನರ ನಿದ್ದೆಗೆಡಿಸಿರುವ ಚಿರತೆ, ಅರಣ್ಯ ಇಲಾಖೆಯ ಅಧಿಕಾರಿಗಳ ರಾತ್ರಿಯಿಡೀ ಶೋಧ ನಡೆಸಿದರು ಚಿರತೆ ಇರುವಿಕೆ ಪತ್ತೆಯಾಗಿಲ್ಲ.

ಇದನ್ನೂ ಓದಿ ಗದಗ ಸಮೀಪ ಚಿರತೆ ಪ್ರತ್ಯಕ್ಷ; ಸಾರ್ವಜನಿಕರ, ಪ್ರಯಾಣಿಕರ ಆತಂಕ, ಅರಣ್ಯ ಇಲಾಖೆ ಅಧಿಕಾರಿಗಳ ಶೋಧ ಕಾರ್ಯಾಚರಣೆ 

ಮತ್ತೆ ಬೆಳ್ಳಂಬೆಳಿಗ್ಗೆ ಡ್ರೋಣ ಕ್ಯಾಮೆರಾ ಮೂಲಕ ಬಿಂಕದಕಟ್ಟಿ, ಅಸುಂಡಿ ಹಾಗೂ ಗದಗ ರಸ್ತೆಯಲ್ಲಿ, ಪ್ರಾಣಿ ಸಂಗ್ರಹಾಲಯದ ಸುತ್ತಮುತ್ತ ಕಣ್ಣಾಡಿಸಿದರೂ ಚಿರತೆ ಪತ್ತೆಯಾಗಿಲ್ಲ. ನಿನ್ನೆ ರಾತ್ರಿ ಬಿಂಕದಕಟ್ಟಿ ಹಾಗೂ ಅಸುಂಡಿ, ಟೀಚರ್ಸ್ ಕಾಲೋನಿಯಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ.

ಡ್ರೋಣ ಕ್ಯಾಮೆರಾ ಕಣ್ಣಿಗೂ ಕಾಣದ ಚಿರತೆ ಟೀಚರ್ಸ್ ಕಾಲೋನಿ ಮೂಲಕ ಕಳಸಾಪೂರ, ನಾಗಾವಿ ಕಡೆ ಹೋಗಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ, ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತದೆ.

ಗದಗ ಸಮೀಪ ಚಿರತೆ ಪ್ರತ್ಯಕ್ಷ; ಸಾರ್ವಜನಿಕರ, ಪ್ರಯಾಣಿಕರ ಆತಂಕ, ಅರಣ್ಯ ಇಲಾಖೆ ಅಧಿಕಾರಿಗಳ ಶೋಧ ಕಾರ್ಯಾಚರಣೆ

ಇನ್ನೂ ಪತ್ತೆಯಾಗದ ಚಿರತೆ……

ವಿಜಯಸಾಕ್ಷಿ ಸುದ್ದಿ, ಗದಗ

ಸಮೀಪದ ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವೀಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ತೀವ್ರ ಆತಂಕ ಮೂಡಿಸಿದೆ.

ಭಾನುವಾರ ರಾತ್ರಿ 10:30ರ ಸುಮಾರು ಈ ಚಿರತೆ ಆರಾಮದಾಯಕವಾಗಿ ವಿಶ್ರಾಂತಿ ರೀತಿಯಲ್ಲಿ ಕಂಡು ಬಂದಿದ್ದು, ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ವಿಡಿಯೋ ಮಾಡಿದ್ದು, ಕ್ಷಣ ಮಾತ್ರದಲ್ಲಿ ವೈರಲ್ ಆಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಚಿರತೆ ಸಮೀಪವೇ ಬಸ್ ಹೋದರೆ , ಬೈಕ್ ಸವಾರರು ಪ್ರಯಾಣಿಸಿದ್ದು ಸ್ವಲ್ಪದರಲ್ಲೇ ಪಾರಾದರು.

ಈ ವಿಡಿಯೋ ವೈರಲ್ ಆಗಿದ್ದೇ ತಡ ಜನರು ಕುತೂಹಲದಿಂದ ಬೈಪಾಸ್ ಬಳಿ ಜಮಾಯಿಸಿದ್ದಾರೆ.

ಇನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಬೀಡಾರ ಹೂಡಿದ್ದಾರೆ.

ಬಿಂಕದಕಟ್ಟಿ, ಅಸುಂಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರು ಮನೆಯಿಂದ ಹೊರಗೆ ಬರದಂತೆ ಮೈಕನಲ್ಲಿ ಎಚ್ಚರಿಕೆ ನೀಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬೆಳಗಿನ ಜಾವ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಎಮ್ ಆರ್ ಮೇಗಲಮನಿ ಹಾಗೂ ರಾಮಪ್ಪ ಪೂಜಾರ, ಸಿಬ್ಬಂದಿಗಳಾದ ಆರ, ವೈ, ಕಂಬಳಿ, ಬಿ. ಜಿ ಅಂಗಡಿ ಸೇರಿದಂತೆ ಅನೇಕರು ಇದ್ದರು.

ಅಕ್ರಮ ಮದ್ಯ ಸಾಗಾಟ, 34 ಸಾವಿರ ರೂ. ಮೌಲ್ಯದ ಮದ್ಯ ಜಪ್ತಿ, ಇಬ್ಬರು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಜರುಗಿದ ದಾಳಿಯಲ್ಲಿ ಅಂದಾಜು 34,689 ರೂ ಮೌಲ್ಯದ ದಾಖಲೆ ರಹಿತ ಮದ್ಯ ವಶಕ್ಕೆ ಪಡೆಯಲಾಗಿದೆ.

ಗದಗ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಏ.15 ರಂದು ರಾತ್ರಿ 8.30 ಗಂಟೆಗೆ ಕುರ್ತಕೋಟಿ ಗ್ರಾಮದ ನಿವಾಸಿಗಳಾದ ಮಂಜುನಾಥ ಫ ಗಣಾಚಾರಿ ಹಾಗೂ ಮಂಜುನಾಥ ನಿಂಬಣ್ಣ ನೀಲಗುಂದ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಮುಳಗುಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುರ್ತಕೋಟಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಬಡ್ನಿಯವರ ಆಯಿಲ್ ಮಿಲ್ ಹತ್ತಿರ ಗಸ್ತು ಕಾರ್ಯನಿರ್ವಹಿಸುತ್ತಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಅಕ್ರಮವಾಗಿ ಸಾಗುತ್ತಿದ್ದ 34,869 ರೂ. ಮೌಲ್ಯದ 88.200 ಲೀ ಮದ್ಯ, ಅಂದಾಜು 5 ಲಕ್ಷ ರೂ. ಮೌಲ್ಯದ ವಾಹನ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್; ಒಬ್ಬ ವಶಕ್ಕೆ, ಇನ್ನೊಬ್ಬ ಪರಾರಿ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾಗ ಬೆಟಗೇರಿ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಆರೋಪಿತರಾದ ಬೆಟಗೇರಿಯ ಗಣೇಶನಗರದ ಸಚಿನ್‌ ಪರಶುರಾಮ ಭಜಂತ್ರಿ ಹಾಗೂ ಶಿವು ಶೀಲವಂತ ಇವರಿಬ್ಬರೂ ಏ.8ರ ರಾತ್ರಿ 8.30ರ ಸುಮಾರಿಗೆ ಬೆಟಗೇರಿಯ ಶರಣ ಬಸವೇಶ್ವರ ನಗರದ ಶಾಲೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಚೆನ್ನೈ ಸುಪರ್‌ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ನಡುವಿನ ಐಪಿಎಲ್‌ 20-20 ಪಂದ್ಯದ ಸ್ಕೋರ್‌ ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬೆಟಗೇರಿ ಪೊಲೀಸ್‌ ಠಾಣೆಯ ಪಿಎಸ್‌ಐ ವಿಠಲ ಹಾವನ್ನವರ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ, ಮೊದಲನೇ ಆರೋಪಿ ಸಚಿನ್‌ ಭಜಂತ್ರಿ ಸಿಕ್ಕಿಬಿದ್ದಿದ್ದು, 2ನೇ ಆರೋಪಿ ಶಿವು ಶೀಲವಂತ ಪರಾರಿಯಾಗಿದ್ದಾನೆ.

ಆರೋಪಿತನಿಂದ 3 ಸಾವಿರ ರೂ. ನಗದು ಹಾಗೂ ಬೆಟ್ಟಿಂಗ್‌ ಬರೆದ ನೋಟ್‌ಬುಕ್‌ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ವಿರುದ್ಧ ಕಲಂ 78(3) ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿಗೆ ಮತ ಹಾಕದಂತೆ ಆಣೆ- ಪ್ರಮಾಣ ಮಾಡಿಸಿದ ಆರೋಪ; ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ…..

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ


ತಾಲೂಕಿನ ಆದ್ರಳ್ಳಿಯ ಲಂಬಾಣಿ ಸಮುದಾಯದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿ ಅವರ ಮೇಲೆ ಪ್ರಕರಣ ದಾಖಲಿಕೊಂಡ ಘಟನೆ ಗುರುವಾರ ನಡೆದಿದೆ.

ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಒಳ ಮೀಸಲಾತಿಯಿಂದ ಸಮಾಜಕ್ಕೆ ಅನ್ಯಾಯವಾಗಿದ್ದು ಮುಂಬರುವ ಚುನಾವಣೆಯಲ್ಲಿ ಲಂಬಾಣಿ ಸಮಾಜದ ಯಾರೊಬ್ಬರೂ ಬಿಜೆಪಿಗೆ ಮತ ಹಾಕದಂತೆ ಸ್ವಾಮೀಜಿಯವರು ಬಹಿರಂಗ ಸಭೆಯಲ್ಲಿ ಲಂಬಾಣಿ ಸಮಾಜ ಬಾಂಧವರಿಂದ ಆಣೆ-ಪ್ರಮಾಣ ಮಾಡಿಸಿದ ಆರೋಪ ಅವರ ಮೇಲಿದೆ.

ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಒಳ ಮೀಸಲಾತಿಯಿಂದ ಹತ್ತಿರುವ ಕಿಚ್ಚಿಗೆ ತುಪ್ಪ ಸವರಿದಂತಾಗಿದೆ. ಒಳಮೀಸಲಾತಿ ಆದೇಶ ವಿರೋಧಿಸಿ ಶಿರಹಟ್ಟಿ ಮತಕ್ಷೇತ್ರದ ಲಂಬಾಣಿ, ಕೊರಚ, ಕೊರಮ, ಜತೆಗೆ ಮುಸ್ಲಿಂ ಜನಾಂಗದವರನ್ನೊಳಗೊಂಡು ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಮಾಜದ ನಿರ್ಧಾರವನ್ನು ಜನಾಂಗದವರಿಗೆ ತಿಳಿಸುವ ವೇಳೆ ಸ್ವಾಮೀಜಿ ಈ ರೀತಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಫ್ಲೈಯಿಂಗ್ ಸ್ಕ್ವಾಡ್ ಆಗಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಾರುತಿ ರಾಠೋಡ್ ಅವರು, ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, 0048/2023-ಕಲಂ-295, 171-ಸಿ, ಐ ಪಿ ಸಿ ಮತ್ತು representation of people act-1951 u/s-125(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!