‘ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬುನಾದಿಯಾಗಿದ್ದು, ಇದು ಬಲಶಾಲಿಯಾಗಬೇಕು. ಇಲ್ಲಿಯ ಸಾಮಾನ್ಯ ಪ್ರಜೆಯೇ ವ್ಯವಸ್ಥೆಯ ಪ್ರಭು. ಈ ಪ್ರಭುವಿನ ಬದುಕು ಸುಂದರಗೊಳಿಸುವುದೇ ಪ್ರತಿನಿಧಿಯ ಕರ್ತವ್ಯವೆಂದು ನಂಬಿ ಅದನ್ನು ಸಾಕಾರಗೊಳಿಸುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ್ ಹೇಳಿದ್ದಾರೆ.
ಭಾನುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನಪರ ಕೆಲಸಗಳನ್ನು ಮಾಡುವ ಪರಂಪರೆ ಬೆಳೆಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ರಾಜ್ಯದಲ್ಲಿಯೇ ಒಂದು ಆದರ್ಶ ವಸತಿ ವ್ಯವಸ್ಥೆ ಮಾಡಲಾಗಿದೆ. 60 ಕಿ.ಮೀ. ದೂರದಿಂದ ನದಿ ನೀರು ತಂದು ವಿತರಣೆ ಮಾಡಲಾಗುತ್ತಿದೆ. ಅವಳಿ ನಗರವನ್ನು ಕ್ರೀಡಾನಗರವನ್ನಾಗಿ ಮಾಡಲು ಬೇಕಾದ ಎಲ್ಲ ಅನುಕೂಲತೆಗಳನ್ನು ಸೃಷ್ಟಿಸಲಾಗಿದೆ.
ನಗರದ ಸಂಗೀತ, ಕಲೆ, ಸಾಹಿತ್ಯಿಕ, ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಲು ಎಲ್ಲ ಅನುಕೂಲತೆ ಮಾಡಿದೆ. ಸಾರ್ವಜನಿಕ ನೈರ್ಮಲ್ಯ ಕಾಪಾಡುತ್ತ ಗೌರವ ಘಟಕಗಳನ್ನು ಸ್ಥಾಪಿಸಿ ದೇಶದಲ್ಲಿಯೇ ಖ್ಯಾತಿ ಗಳಿಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
ಅವಳಿ ನಗರದ ಎಲ್ಲ 35 ವಾರ್ಡಗಳಲ್ಲಿ ಚಾರಿತ್ರ್ಯವಂತ ಕ್ರೀಯಾಶೀಲ ಸೇವಾ ಮನೋಭಾವವುಳ್ಳವರನ್ನು ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಿದ್ದು, ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಮತ ನೀಡುವ ಮೂಲಕ ಆಯ್ಕೆ ಮಾಡುವಂತೆ ಮಾಜಿ ಶಾಸಕ ಡಿ.ಆರ್.ಪಾಟೀಲ್ ಮನವಿ ಮಾಡಿದ್ದಾರೆ.
ಗದಗ ಬೆಟಗೇರಿ ನಗರಸಭೆ ಚುನಾವಣೆಗೆ 20ನೇ ವಾರ್ಡ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಗವ್ವ ರುದ್ರಪ್ಪ ಬನ್ನಿಮರದ ಶ್ರೀರಾಮ ಸೇನೆಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸ್ನೇಹಲತಾ ಮುತ್ತುರಾಜ ಕುರ್ತಕೋಟಿ ಅವರನ್ನು ಬೆಂಬಲಿಸಿ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ.
ಇಲ್ಲಿಯ ಒಕ್ಕಲಗೇರಿಯಲ್ಲಿ ಜರುಗಿದ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ರುದ್ರಪ್ಪ ಬೇವಿನಮರದ ಅವರನ್ನು ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಹೂ ಮಾಲೆ ಹಾಕುವ ಮೂಲಕ ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗಂಗವ್ವ ರುದ್ರಪ್ಪ ಬನ್ನಿಮರದ ಮಾತನಾಡಿ, ‘ತಾವು ಮೂಲತ: ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು ತಮ್ಮ ಸ್ಪರ್ಧೆಯಿಂದ ಶ್ರೀರಾಮ ಸೇನೆಯ ಬೆಂಬಲಿತ ಅಭ್ಯರ್ಥಿ ಸ್ನೇಹಲತಾ ಕುರ್ತಕೋಟಿ ಅವರ ಜಯದ ಮೇಲೆ ಪರಿಣಾಮ ಬೀರಲಿದೆ. ಈ ದಿಸೆಯಲ್ಲಿ ತಾವು ಸ್ನೇಹಲತಾ ಕುರ್ತಕೋಟಿ ಅವರನ್ನು ಬೆಂಬಲಿಸಿ ಚುನಾವಣೆಯಿಂದ ನಿವೃತ್ತಿಯಾಗಿರುವದಾಗಿ ಘೋಷಿಸಿದರು.
ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಮಾತನಾಡಿ, ‘20ನೇ ವಿಭಾಗದಲ್ಲಿ ಶ್ರೀರಾಮ ಸೇನೆಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸ್ನೇಹಲತಾ ಬೇವಿನಮರದ ಆಯ್ಕೆಯಾಗುವ ಎಲ್ಲ ಸ್ಪಷ್ಟ ಲಕ್ಷಣಗಳಿವೆ. ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಗಂಗವ್ವ ರುದ್ರಪ್ಪ ಬನ್ನಿಮರದ ಸ್ಪರ್ಧೆಯಿಂದ ಹಿಂದು ಪರ ಮತಗಳು ಇಬ್ಬಾಗವಾಗುವ ಲಕ್ಷಣಗಳಿದ್ದವು. ಈ ಸಂಗತಿಯನ್ನು ಮನಗಂಡು ಓಣಿಯ ಹಿರಿಯರ ಅಭಿಲಾಸೆಯಂತೆ ಪಕ್ಷೇತರ ಅಭ್ಯರ್ಥಿ ಗಂಗವ್ವ ರುದ್ರಪ್ಪ ಬನ್ನಿಮರದ ಚುನಾವಣಾ ಕಣದಿಂದ ನಿವೃತ್ತರಾಗಿ ಸ್ನೇಹಲತಾ ಕುರ್ತಕೋಟಿ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ಮಹೇಶ ರೋಖಡೆ, ಗಣೇಶ ಸತ್ಯಪ್ಪನವರ, ಶಿವಯೋಗಿ ಹಿರೇಮಠ, ಸೋಮಲಿಂಗ ಆಲೂರ, ಹುಲಿಗೆಪ್ಪ ವಾಲ್ಮೀಕಿ, ಚೇತನ ಇರಕಲ್, ಕುಮಾರ ಬನ್ನಿದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅವಳಿ ನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಬಿಗ್ ಫೈಟ್ ನಡೆದಿದ್ದು, ಉಭಯ ಪಕ್ಷಗಳ ನಾಯಕರು ಕೊನೆ ಘಳಿಗೆಯ ವರೆಗೂ ಮತದಾರರ ಮನವೊಲಿಸಲು ಹರಸಾಹಸ ಪಟ್ಟರು.
ಇತ್ತ ರಾಷ್ಟ್ರೀಯ ಪಕ್ಷಗಳ ಸ್ಪರ್ಧಾಳುಗಳಿಗಿಂತ ನಾವೇನೂ ಕಮ್ಮಿಯಿಲ್ಲ ಎಂಬಂತೆ ಕೆಲವು ವಾರ್ಡ್‌ಗಳಲ್ಲಿ ಬಂಡಾಯವೆದ್ದು ಸೆಡ್ಡು ಹೊಡೆದಿರುವ ಪಕ್ಷೇತರ ಅಭ್ಯರ್ಥಿಗಳು ಮತದಾನದ ಹಿಂದಿನ ದಿನವಾದ ಭಾನುವಾರ ಕೊನೆ ಹಂತದ ಕಸರತ್ತು ನಡೆಸಿದರು.
ಅದರಂತೆ, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿಯೇ ಬೀಡು ಬಿಟ್ಟಿರುವ ಸಚಿವ ಸಿ.ಸಿ. ಪಾಟೀಲ್, ಶಾಸಕ ಕಳಕಪ್ಪ ಬಂಡಿ,ಯುವ ನಾಯಕ ಅನಿಲ ಮೆಣಸಿನಕಾಯಿ ಹಾಗೂ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್, ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಅವಳಿ ನಗರದ ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.
ಹಣ, ಸೀರೆ, ಶರ್ಟ್ ಹಂಚಿಕೆ?:
ಬಹಿರಂಗ ಪ್ರಚಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಮತ ಕೋರಿದರು. ಮತ ಯಾಚಿಸುವ ನೆಪದಲ್ಲಿ ಕರಪತ್ರಗಳಲ್ಲಿ ಮುಚ್ಚಿ ಹಣ ಕೊಟ್ಟರೆ, ಇನ್ನು ಕೆಲವರು ಶರ್ಟ್, ಸೀರೆ ಹಂಚಿದ್ದಾರೆ ಎನ್ನಲಾಗಿದೆ. ಒಂದು ವಾರ್ಡ್‌ನಲ್ಲಿ ಅಭ್ಯರ್ಥಿಯೊಬ್ಬರು ಸೀರೆ ಹಂಚಿದರೆ, ಮತ್ತೊಂದು ವಾರ್ಡ್‌ನಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೇ ಮನೆ ಮನೆಗೆ ಶರ್ಟ್ ಪೀಸ್ ಹಂಚಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಇನ್ನು ಅವಳಿ ನಗರದ 35 ವಾರ್ಡ್‌ಗಳಲ್ಲೂ ಪ್ರತಿ ಮತಕ್ಕೆ ಸುಮಾರು 1,000 ರೂ. ನಿಗದಿಪಡಿಸಿದ್ದಾರೆ, ಕೆಲವೆಡೆ ಕುಟಂಬವೊಂದಕ್ಕೆ ಕನಿಷ್ಠ 5,000 ರೂ. ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಅವಳಿ ನಗರದಲ್ಲಿ ಸದ್ದು ಮಾಡುತ್ತಿವೆ.
ಆಮಿಷವೊಡ್ಡಿ ಮತಭಿಕ್ಷೆ?
ಮತದಾನದ ಮುನ್ನಾ ದಿನ ಗ್ರಾಮೀಣ ಭಾಗಗಳಲ್ಲಿ ‘ಕತ್ತಲ ರಾತ್ರಿ’ ಅಂತಲೇ ಬಿಂಬಿಸಿಕೊಂಡಿದ್ದು, ಈ ದಿನ ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ, ಮತದಾನಕ್ಕೂ ಮುನ್ನ ಹಣ, ಹೆಂಡ ಹಂಚದಿದ್ದರೆ ಗೆಲ್ಲುವ ಮನೋಭಾವ ಅಭ್ಯರ್ಥಿಗಳಲ್ಲಿ, ಜನರಲ್ಲಿ ಬಲವಾಗಿ ಬೇರೂರಿದೆ. ಹೀಗಾಗಿ ಭಾನುವಾರ (ಡಿ. 26) ಕೆಲವು ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡುವ ಮೂಲಕ ಮತ ಯಾಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲಾಡಳಿತ ಸಕಲ ಸಿದ್ಧತೆ
ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಅವಳಿ ನಗರ ವ್ಯಾಪ್ತಿಯಲ್ಲಿ 136 ಮತಗಟ್ಟೆಗಳನ್ನು ತೆರೆಯಲಾಗಿದೆ. 69,839 ಪುರುಷರು, 71,703 ಮಹಿಳೆಯರು ಸೇರಿ ಒಟ್ಟು 1,41,542 ಮತದಾರರಿದ್ದಾರೆ.
ಗದಗ-ಬೆಟಗೇರಿ ಎಲ್ಲ ಮತಗಟ್ಟೆ ಸೇರಿಸಿ 150 ಪೋಲಿಂಗ್ ಪಾರ್ಟಿಸ್ ಮಾಡಿದ್ದು, 600 ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಲಾಗಿದೆ. 136ರಲ್ಲಿ 40 ಸೂಕ್ಷ್ಮ, 96 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 40 ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇನ್ನು ಮೇಲ್ವಿಚಾರಣೆಗಾಗಿ ಪ್ರತಿ 5-6 ವಾರ್ಡ್‌ಗಳಿಗೆ 6 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಮಸ್ಟರಿಂಗ್ ಕೇಂದ್ರಕ್ಕೆ ಡಿಸಿ ಭೇಟಿ
ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ (ಡಿ. 26)ದಂದು ನಗರದ ಗುರುಬಸವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ಜರುಗಿತು. ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಭೇಟಿ ನೀಡಿ ವೀಕ್ಷಿಸಿದರು. ಈ ವೇಳೆ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಕಿಶನ್ ಕಲಾಲ್ ಉಪಸ್ಥಿತರಿದ್ದರು.
‘ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ವರದಿ ಆಧರಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಡಿ.28ರಿಂದ ಹತ್ತು ದಿನಗಳವರೆಗೆ ರಾತ್ರಿ ಕರ್ಪ್ಯೂ ವಿಧಿಸಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಭಾನುವಾರ ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿ, ‘ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್ ಗಳಲ್ಲಿ ಜನಜಂಗುಳಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಸ್ಥಳವಕಾಶ ನೀಡಿ ಆದೇಶಿಸಿದ್ದಾರೆ. ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯನ್ನಿಟ್ಟುಕೊಂಡು ಇಂತಹ ರಾಜ್ಯ ಸರ್ಕಾರ ಇಂತಹ ನಿರ್ಧಾರೆ ತೆಗದುಕೊಂಡಿದೆ’ ಎಂದರು.
‘ಕೋವಿಡ್ ಒಂದು ಮತ್ತು ಎರಡನೇ ಅಲೆಗಳಲ್ಲಿ ಸ್ನೇಹಿತರು, ಹಿತೈಷಿಗಳು, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರನ್ನು ಕಳೆದುಕೊಂಡ ದುಃಖದ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇವೆ. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು. ಹೀಗಾಗಿ ಮುಖ್ಯಮಂತ್ರಿಗಳು ಜಾರಿ ಮಾಡಿರುವ ಆದೇಶವನ್ನು ನಾವೆಲ್ಲರೂ ತಪ್ಪದೇ ಪಾಲಿಸಿ ಜನರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸೋಣ. ಜನ ಜೀವನಕ್ಕೆ ಹಾನಿಯಾಗದಂತೆ ಮೂರನೇ ಅಲೆ ನಿಯಂತ್ರಿಸುವಲ್ಲಿ ಯಶಸ್ವಿಯಾಗೋಣ’ ಎಂದು ಸಚಿವರು ಮನವಿ ಮಾಡಿದರು.
ಗದಗ-ಬೆಟಗೇರಿ ಚುನಾವಣೆಯ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 29ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ದೇವಿಂದ್ರಪ್ಪ ಚಂದಾವರಿ ಹಾಗೂ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯ ಚುನಾವಣಾ ಆಯೋಗ ಬಹಿರಂಗ ಪ್ರಚಾರ ಮಾಡಬಾರದೆಂದು ಸೂಚಿಸಿದ್ದರು, ಬೆಂಬಲಿಗರೊಂದಿಗೆ ರಾಜೀವ್ ಗಾಂಧಿ ನಗರದಲ್ಲಿ ಬಹಿರಂಗವಾಗಿ ಮತಯಾಚಿಸಿದ್ದರು. ಈ ಬಗ್ಗೆ ‘ವಿಜಯಸಾಕ್ಷಿ’ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಅಭ್ಯರ್ಥಿ ಸೇರಿದಂತೆ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಆರ್ ಒ ಎನ್.ಟಿ. ನೆಗಳೂರು ಅವರು ಪ್ರಕರಣ ದಾಖಲಿಸಿದ್ದಾರೆ.
ಇನ್ನು ಮಾದರಿ ನೀತಿ ಸಂಹಿತೆ ಹಾಗೂ ಜನಪ್ರಾತಿನಿಧಿಕ ಕಾಯ್ದೆ(ಆರ್ ಪಿ ಆ್ಯಕ್ಟ್)ಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಚಾರಕ್ಕೆ ಬಳಸಲಾದ ಆಟೋ (ಕೆಎ 24 ಎ-1643) ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ 58 ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಅವಧಿ ಮುಕ್ತಾಯವಾದ ಮತ್ತು ಖಾಲಿ ಇರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಡಿ.27 ಸೋಮವಾರ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ರಜೆ ಘೋಷಿಸಿದೆ.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಸಾರ್ವತ್ರಿಕ, ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದೆ.
ಅದರಂತೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕಾರ್ಖಾನೆಗಳು, ಉಳಿದ ಕೈಗಾರಿಕಾ ಕಾರ್ಖಾನೆಗಳು, ಸಹಕಾರ ರಂಗದ ಸಂಸ್ಥೆಗಳಲ್ಲಿ ಎಲ್ಲ ವ್ಯವಹಾರಿಕ ಸಂಸ್ಥೆಗಳಲ್ಲಿ ಔಧ್ಯಮಿಕ ಸಂಸ್ಥೆಗಳಲ್ಲಿ, ಖಾಯಂ ಆಗಿ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ಡಿ.27ರಂದು ವೇತನ ಸಹಿತ ರಜೆ ಘೋಷಿಸಿ ಆದೇಶಿಸಿದೆ.
ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು, ಈ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ತಿಳಿಸಿದೆ.
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಎರಡು ದಿನ ಬಾಕಿ ಇರುವಾಗಲೇ ಪಕ್ಷೇತರ ಅಭ್ಯರ್ಥಿಯೊಬ್ಬರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.
ಹೌದು, ಅವಳಿ ನಗರದ 32ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಆಶಾಬಿ ಉಳ್ಳಾಗಡ್ಡಿ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಯಿಂದ ತೀವ್ರ ಪೈಪೋಟಿ ಎದುರಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸುಮನ್ ಜಿತೂರಿಗೆ ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿದೆ.
ಶಾಸಕ ಎಚ್.ಕೆ.ಪಾಟೀಲ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪ್ರಭು ಬುರಬರೆ, ವಿನೋದ ಶಿದ್ಲಿಂಗ, ರಮೇಶ ಮುಳಗುಂದ ಉಪಸ್ಥಿತರಿದ್ದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಸೋಮವಾರ 7 ಗಂಟೆಗೆ ಮತದಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 7 ಗಂಟೆಗೆ ಬಹಿರಂ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ವೇಳೆ ಯಾವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಬಹಿರಂಗ ಪ್ರಚಾರ ಮಾಡಬಾರದು ಎಂದು ಚುನಾವಣಾ ಆಯೋಗ ಸೂಚಿಸಿದ್ದರು. ಅಭ್ಯರ್ಥಿಗಳು ಮಾತ್ರ ಯಾರ ಭಯವಿಲ್ಲದೇ ಅವಳಿ ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಈ ಕುರಿತು ಚುನಾವಣೆ ಅಧಿಕಾರಿಗಳಿಗೆ ಪತ್ರ ಬರೆದು ದೂರು ನೀಡಿರುವ 29ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸುಧಾಕರ ವೀರಾಪೂರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ನಡೆಸಿದ್ದಾರೆ. ತಕ್ಷಣ ಬಹಿರಂಗ ಪ್ರಚಾರ ನಿಲ್ಲಸದೇ ಹೋದರೆ, ನಾವು ಬಹಿರಂಗ ಪ್ರಚಾರ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು,ಎಂಸಿಸಿ ಅಧಿಕಾರಿಗಳಾದ ಬಿ.ಕಲ್ಲೇಶ್ ಅವರು ಪ್ರತಿಕ್ರಿಯಿಸಿ ‘ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಹೀಗಾಗಿ ಯಾರೂ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಅವಳಿ ನಗರದ ವಾರ್ಡ್ ನಂ.೨೯ಗೆ ಸಂಬಂಧಿಸಿದ ಆರ್ ಒ ಎನ್.ಟಿ.ನೆಗಳೂರು ಅವರಿಗೆ ಸೂಚಿಸಿಲಾಗಿದೆ. ಅಲ್ಲದೇ, ಸಿಪಿಐ ಅವರ ಗಮನಕ್ಕೂ ತಂದಿದ್ದು ಅವರು ಅಲ್ಲಿಗೆ ಹೋಗಿದ್ದಾರೆ’ ಎಂದು ತಿಳಿಸಿದರು.
’29ನೇ ವಾರ್ಡ್ ನಲ್ಲಿ ಬಹಿರಂಗ ಪ್ರಚಾರ ಮಾಡುತ್ತಿದ್ದಾರೆ ಎಂಬುವುದು ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತನೆ’ ಎಂದು ಬಡಾವಣೆ ಪೊಲೀಸರು ತಿಳಿಸಿದರು.
ನಗರಸಭೆಯ ಚುನಾವಣೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಅವಳಿ ನಗರದ ವಾರ್ಡ್‌ವೊಂದರಲ್ಲಿ ಕಾಂಗ್ರೆಸ್ ಪಕ್ಷ ಪಕ್ಷೇತರ ಅಭ್ಯರ್ಥಿಗೆ ಬಾಹ್ಯ ಬೆಂಬಲ ಘೋಷಿಸಿದೆ ಎಂಬ ಊಹಾಪೋಹಗಳು ಶುಕ್ರವಾರ ಬೆಳಗ್ಗೆಯಿಂದ ಗದಗ-ಬೆಟಗೇರಿ ನಗರದಾದದ್ಯಂತ ಕೇಳಿ ಬರುತ್ತಿವೆ.
ಹಿಂದುಳಿದ ‘ಎ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.28ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದಂತಹ ವಾತಾವರಣ ಇರಲಿಲ್ಲ. ಈ ಕಾರಣಕ್ಕಾಗಿಯೇ ಅಭ್ಯರ್ಥಿ ಘೋಷಿಸುವಲ್ಲಿ ತಡವಾಗಿತ್ತು. ಬಿಜೆಪಿಯ ಭದ್ರಕೋಟೆಯಾಗಿರುವ ಈ ವಾರ್ಡ್‌ನಲ್ಲಿ ಬಿಜೆಪಿಯ ಕಾರ್ಯಕರ್ತ ಬದ್ರಿ ಅಲಿಯಾಸ್ ವೀರಭದ್ರಪ್ಪ ಡಂಬಳ ಅವರ ಪತ್ನಿ ಮಹಾಲಕ್ಷ್ಮೀಗೆ ಟಿಕೆಟ್ ಕೇಳಿದ್ದ. ಆದರೆ, ಮಹಾಲಕ್ಷ್ಮೀಗೆ ಟಿಕೆಟ್ ಸಿಕ್ಕಿರಲಿಲ್ಲ. ಮಾಜಿ ಸದಸ್ಯ ಅನಿಲ್ ಅಬ್ಬಿಗೇರಿಗೆ ಟಿಕಟ್ ನೀಡಿತ್ತು. ಇದರಿಂದಾಗಿ ಆಕ್ರೋಶಗೊಂಡ ಬದ್ರಿ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾನೆ. ಇದರಿಂದ ಪಕ್ಷದ ಮುಖಂಡರಿಗೆ ಇರುಸು ಮುರುಸಾಗಿ ನಾಮಪತ್ರ ವಾಪಸ್ ಪಡೆಯುಲು ಸಾಕಷ್ಟು ಒತ್ತಡ ಹಾಕಿದ್ದರೂ, ಹಿಂಪಡೆಯದೇ ಅಂತಿಮವಾಗಿ ಕಣದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದಾನೆ.
ಆದರೆ, ಆರಂಭದಲ್ಲಿ ಅಷ್ಟೇನೂ ಪ್ರಭಾವಿಯಾಗಿ ಕಾಣಿಸಿಕೊಳ್ಳದ ಪಕ್ಷೇತರ ಅಭ್ಯರ್ಥಿ ಮಹಾಲಕ್ಷ್ಮೀ ಇದೀಗ ಮತದಾರರನ್ನು ಸೆಳೆಯುವಲ್ಲಿ ಮುಂದಾಗಿದ್ದು, ಇವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ಬೆಂಬಲಿಸಿ ಕೈ ಸುಟ್ಟುಕೊಳ್ಳುವಂತಾಗಿದೆ.
ಕಾಂಗ್ರೆಸ್‌ನವರು ಹಣ ಕೊಟ್ಟರೇ?
ಶುಕ್ರವಾರ ಮುಂಜಾನೆಯಿಂದಲೂ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯ ಪತಿ ಹಣ ಪಡೆದಿದ್ದೇ ಸುದ್ದಿ. ಇಂತಹ ಒಂದು ಸುದ್ದಿ ಮೊದಲು ಎಲ್ಲಿ ಉದಯಿಸಿತೋ ಗೊತ್ತಿಲ್ಲ. ಆದರೆ, ವಾರ್ಡ್ ಸೇರಿ ಇಡೀ ಅವಳಿ ನಗರದೆಲ್ಲೆಡೆ 28ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್‌ನವರು ಹಣ ಕೊಟ್ಟಿದ್ದಾರೆ ಮತ್ತು ಬಾಹ್ಯ ಬೆಂಬಲ ನೀಡಿದ್ದಾರೆ ಎನ್ನುವ ವದಂತಿ ಹಬ್ಬಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾಲಕ್ಷ್ಮೀ ವೀರಭದ್ರಪ್ಪ ಡಂಬಳ ಅವರು, ‘ಇದು ಕೇವಲ ಗಾಳಿ ಸುದ್ದಿ, ಯಾರು ಭೇಟಿಯೂ ಆಗಿಲ್ಲ. ಯಾರು ಬೆಂಬಲವನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
‘ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ನಾವು ಯಾವುದೇ ಬೆಂಬಲ ಕೊಟ್ಟಿಲ್ಲ. ಯಾರಿಗೂ ಬಾಹ್ಯ ಬೆಂಬಲ ನೀಡಿಲ್ಲ. ಈ ಆರೋಪವೆಲ್ಲ ಸತ್ಯಕ್ಕೆ ದೂರವಾಗಿದ್ದು, ಎರಡೂ ಪಕ್ಷಗಳ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪ ತಳ್ಳಿ ಹಾಕಿದರು.
–ಬಸವರಾಜ ಕರುಗಲ್. ಬಡವರ ಮಕ್ಕಳನ್ನ ಹೀರೋ ಆಗೋಕೆ ಎಲ್ರಪ್ಪಾ ಬಿಡ್ತಿರಾ? ಹಿಂದೆಯಿಂದಾನೇ ಹೊಡೆದು ಬಿಡ್ತಿರಲ್ಲ ಎನ್ನುವ ಜಬರ್‌ದಸ್ತ್ ಡೈಲಾಗ್, ಫೈಟ್ ಜೊತೆ ಎಂಟ್ರಿ ಕೊಡೊ ನಟ ರಾಕ್ಷಸ, ಡಾಲಿ ಧನಂಜಯ್ ಇಡೀ ಸಿನಿಮಾದುದ್ದಕ್ಕೂ ನಗಸ್ತಾರೆ, ಅಳಸ್ತಾರೆ. ಬಡವ ರಾಸ್ಕಲ್ ಮಧ್ಯಮ ವರ್ಗದ ಹುಡುಗನ ಪ್ರೀತಿಯ ಕಥೆ ಮತ್ತು ವ್ಯಥೆ.
ಕಚಗುಳಿ, ಸೆಂಟೆಮೆಂಟ್ ಇರದಿದ್ದರೆ ಈ ಸಿನಿಮಾ ಕಥೆ ಮಾಮೂಲಿ ಲವ್ ಸ್ಟೋರಿ ಥರಾ ಆಗಿ ಬಿಡುವ ಅಪಾಯ ಇತ್ತು. ನಿರ್ದೇಶಕ ಶಂಕರ್ ಗುರು ಸಿನಿಮಾನ ಅಪಾಯದ ಅಂಚಿನಿಂದ ಮೇಲೆತ್ತಿ, ಮಧ್ಯಮ ವರ್ಗದ ಮನೆಯಲ್ಲಿ ನಿತ್ಯ ನಡೆಯುವ ಎಳೆಯನ್ನ ಹೆಣೆದು ಉಪಾಯದಿಂದ ಪ್ರೇಕ್ಷಕರನ್ನು ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಇಲ್ಲಿ ಸೀಟಿನಂಚಿಗೆ ಕುಳಿತು ನೋಡುವ ದೃಶ್ಯಗಳಿಲ್ಲ, ಆದರೆ ಸೀಟಿಗೊರಗಿ ನಕ್ಕು ನಲಿಯುವ ದೃಶ್ಯಗಳಿಗಂತು ಕೊರತೆ ಇಲ್ಲ.
ಶ್ರೀಮಂತ ಮನೆತನದ ಹುಡುಗಿಗೂ ಆಟೋ ಡ್ರೈವರ್ ಮಗನಿಗೂ ಲವ್ವು. ಒಂದು ಸಣ್ಣ ಕಾರಣಕ್ಕೆ ಬ್ರೇಕಪ್ಪು. ಕಾರಣ ತಿಳ್ಕೊಬೇಕಂದ್ರೆ ಬಡವ ರಾಸ್ಕಲ್‌ನನ್ನ ಥೇಟರ್‌ನಲ್ಲೇ ನೋಡಬೇಕು. ಕ್ಲೈಮಾಕ್ಸ್ ಹೊರತುಪಡಿಸಿ ಇಡೀ ಸಿನಿಮಾ ಫ್ಲ್ಯಾಶ್‌ಬ್ಯಾಕ್‌ನಲ್ಲಿದ್ದು, ಟ್ವಿಸ್ಟ್ ಕೊಡುವ, ನಗಿಸುವ, ಅಳಿಸುವ ಫ್ಲ್ಯಾಶ್‌ಬ್ಯಾಕ್‌ನಲ್ಲೇ ಕಥೆನ ಹೇಳ್ತಾ ಹೋಗಿರೋದು ಕನ್ನಡದ ಪ್ರೇಕ್ಷಕರಿಗೆ ಹೊಸತೇನಲ್ಲವಾದರೂ, ಸವಕಲು ಅನ್ನಿಸದ ಹಾಗೆ ಬಡವ ರಾಸ್ಕಲ್ ನೋಡಿಸ್ಕೊಂಡು ಹೋಗ್ತಾನೆ.
ಸಾಯಿಕುಮಾರ್ ಅಂತ ಹೆಸರು ಇಟ್ಕೊಂಡು ಒಂದೇ ಒಂದು ಡೈಲಾಗ್ ಇಲ್ವಲ್ಲೊ..!, ನರಕಕ್ಕೆ ಕಳಿಸಿದ್ರೂ ವಂಡರ್‌ಲಾ ಮಾಡ್ಕೊಂಡ್ ಬಿಡ್ತಾರೆ..ಹೀಗೆ ಇಂಥ ಗಟ್ಟಿಯಾದ, ಕಚಗುಳಿ ಇಡುವ ಮಾತುಗಳು, ಮಾಸ್, ಅಲ್ಲಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಚಿತ್ರದ ಓಟಕ್ಕೆ ಪೂರಕವಾಗಿವೆ. ವಾಸುಕಿ ವೈಭವ್ ಸಂಗೀತದಲ್ಲಿ ಮೂಡಿ ಬಂದಿರೊ “ಉಡುಪಿ ಹೋಟಲು, ಮೂಲೆ ಟೇಬಲು” ರೋಮ್ಯಾಂಟಿಕ್ ಆಗಿಯೂ ಇಷ್ಟ ಆಗುತ್ತದೆ. ಉಳಿದ ಹಾಡುಗಳಿಗೂ ಗುನುಗುನಿಸುವ ಗುಣ ಇದೆ. ಛಾಯಾಗ್ರಾಹಕ ಪ್ರೀತ್ ಜಯರಾಮನ್ ಸಿನಿಮಾ ರಿಚ್ ಆಗಿ ಮೂಡಿ ಬರುವಂತೆ ಶ್ರಮಿಸಿದ್ದು ಎದ್ದು ಕಾಣುತ್ತದೆ. ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಲೇ ಸಿನಿಮಾ ನಿರ್ದೇಶಿಸುವ ಕನಸು ಕಂಡಿದ್ದ ಶಂಕರ ಗುರು ಮೊದಲ ಪ್ರಯತ್ನದಲ್ಲೇ ಸಿಕ್ಸರ್ ಹೊಡೆದಿದ್ದಾರೆ. ಆದರೆ ಈ ಸಿಕ್ಸರ್ ಚಿತ್ರತಂಡಕ್ಕೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತೆ ಕಾದು ನೋಡಬೇಕು.
ರಂಗಾಯಣ ರಘು ಮತ್ತು ತಾರಾ ಮಧ್ಯಮ ವರ್ಗದ ದಂಪತಿಯಾಗಿ ಅಭಿನಯದಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ. ಬಡವ ರಾಸ್ಕಲ್ ಮೂಲಕ ನಟ ರಾಕ್ಷಸನಾಗಿರೊ ಡಾಲಿ ಧನಂಜಯ್ ಪಾತ್ರಕ್ಕೆ ಜೀವ ತುಂಬಿದ್ದು, ಉಳಿದ ಕಲಾವಿದರು ಸ್ಕ್ರೀನ್‌ನಲ್ಲಿ ಸ್ಪೇಸ್ ಕೊಟ್ಟಿದ್ದಾರೆ. ನಟರಾಗಿ ಸರ್ಕಸ್ ಮಾಡಿರೊ ಡಾಲಿ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸ್ಪರ್ಶ ರೇಖಾ ಮೊದಲ ಬಾರಿಗೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಕ್ಕಟ್‌ನ ನಾಗಭೂಷಣ್ ನಾಯಕನ ಗೆಳೆಯನಾಗಿ ಕಚಗುಳಿ ಇಡುತ್ತಲೇ ಇಷ್ಟವಾಗುತ್ತಾರೆ. ಕಾಮಿಡಿ ಆ್ಯಕ್ಟರ್ ಚೇರ್‌ಗೆ ಟವಲ್ ಹಾಕಿ ಮೀಸಲಿರಿಸಿದ್ದಾರೆ.
ಈ ವಾರ ಕನ್ನಡದಲ್ಲೇ ಮೂರ್ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ಅವುಗಳಲ್ಲಿ ಬಡವ ರಾಸ್ಕಲ್ ಸಿನಿಮಾ ನೋಡಿದರೆ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅನ್ನಬಹುದು, ಆದರೆ ಪೈಸಾ ವಸೂಲ್ ಸಿನಿಮಾ ಅಂತ ಹೇಳೋದು ಕೊಂಚ ಕಷ್ಟಾನೇ..!