Home Blog Page 3268

ಇಂಜಿನಿಯರಿಂಗ್ ಕಾಲೇಜ್ ಗೆ ಗುಡ್ ಬೈ; ಸಾವಯವ ತರಕಾರಿ ಬೆಳೆದು ಗ್ರಾಹಕರ ಬಾಗಿಲಿಗೆ ತಲುಪಿಸುತ್ತಿರುವ ದಂಪತಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸಾವಯವ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ತಮ್ಮ ಪತ್ನಿಯ ಉತ್ಸಾಹದಿಂದ ಪ್ರೇರೆಪಣೆ ಪಡೆದ ಇಂಜಿನಿಯರಿಂಗ್ ಕಾಲೇಜಿನ  ಪ್ರಾಂಶುಪಾಲರೊಬ್ಬರು, ತಮ್ಮ  ಹುದ್ದೆಯನ್ನು ತ್ಯಜಿಸಿ ಶುದ್ಧ ಮತ್ತು ಗುಣಮಟ್ಟದ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ  ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ
   

ಈ ಹಿಂದೆ ಹುಬ್ಬಳ್ಳಿಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಗದುಗಿನ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ‌ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪ್ರಕಾಶ ಹುಬ್ಬಳ್ಳಿ ಅವರು, ತಮ್ಮ ಪತ್ನಿ ಕುಸುಮಾ ಹುಬ್ಬಳ್ಳಿ ಅವರು ಸಾವಯವ ಕೃಷಿಯಲ್ಲಿ ಹೊಂದಿದ ಆಸಕ್ತಿಯಿಂದ ಪ್ರಭಾವಿತರಾಗಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಹುದ್ದೆ ಬಿಟ್ಟು ದಂಪತಿಗಳಿಬ್ಬರೂ ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದ  ಒಟ್ಟು 4 ಎಕರೆ ಜಮೀನಿನಲ್ಲಿ  ತರಕಾರಿ ಬೆಳೆಯುವ ಮೂಲಕ ಸಾವಯವ ಬೇಸಾಯ ಪ್ರಾರಂಭಿಸಿದರು.

ಈಗ ತಮ್ಮ ಉತ್ಪನ್ನಗಳಿಗೆ  ಹುಬ್ಬಳ್ಳಿ  ನಗರದ ನಿವಾಸಿಗಳಿಂದ ಆನ್‌ಲೈನ್ ಮತ್ತು ವಾಟ್ಸ್ ಅಪ್ ಮೂಲಕ ಆರ್ಡರ್ ಪಡೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡುವ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಪ್ರಸ್ತುತ ಒಟ್ಟು 55 ವಿವಿಧ ರೀತಿಯ ತರಕಾರಿ ಬೆಳೆ ಬೆಳೆಯುತ್ತಿರುವ ಇವರು,ಅದರಲ್ಲಿ 40 ಬಗೆಯ ದೇಶಿ ತರಕಾರಿ ಹಾಗೂ 15 ಬಗೆಯ ವಿದೇಶಿ ( Exotic ) ತರಕಾರಿಗಳನ್ನು ಜಮೀನಿನಲ್ಲಿ ನಾಟಿ  ಮಾಡುವುದರಿಂದ ಹಿಡಿದು ಕಟಾವು ಮಾಡುವವರೆಗೆ ಬೆಳೆಯ ಪೋಷಣೆ ಮತ್ತು ಸಂರಕ್ಷಣೆಯನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ನಿರ್ವಹಿಸುತ್ತಿದ್ದಾರೆ.

ಎರೆಹುಳು ಗೊಬ್ಬರ , ಬೇವಿನ ಹಿಂಡಿ,ಬೇವಿನ ಎಣ್ಣೆ, ಬೇವಿನ ಅಸ್ತ್ರ, ಅಗ್ನಿ ಅಸ್ತ್ರ, ಹುಳಿ ಮಜ್ಜಿಗೆ, ಕೀಟಗಳ ನಿರ್ವಹಣೆಗೆ ಸ್ಟಿಕಿ ಟ್ರ್ಯಾಪ್, ಲೈಟ್ ಟ್ರಾಪ್, ಚೆಂಡೂ ಹೂವು  ಬೆಳೆದು  ಹುಬ್ಬಳ್ಳಿ ನಗರದ ಗ್ರಾಹಕರ ಮನೆ ಬಾಗಿಲಿಗೆ ಗುಣಮಟ್ಟದ ತರಕಾರಿಗಳನ್ನು ತಮ್ಮ  “ನೇಚರ್ ಫಸ್ಟ್ ಫಾರ್ಮ್” ಮೂಲಕ  ಸರಬರಾಜು ಮಾಡುತ್ತಿದ್ದಾರೆ. ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರುನವರ , ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹಾಂತೇಶ ಪಟ್ಟಣಶೆಟ್ಟಿ ,  ಸಹಾಯಕ ತೋಟಗಾರಿಕೆ ಅಧಿಕಾರಿ ಕೆ.ವಿ ಅಂಗಡಿ ಅವರ  ಮಾರ್ಗದರ್ಶನದಲ್ಲಿ ,  ತೋಟಗಾರಿಕೆ ಇಲಾಖೆ ಯೋಜನೆಗಳಾದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊದಿಕೆ ಮತ್ತು ಐಐಹೆಚ್‌ಆರ್ ತರಕಾರಿ ಸ್ಪೆಷಲ್ ಸೌಲಭ್ಯಗಳನ್ನು ಪಡೆದಿದ್ದಾರೆ.

ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಈ ಮಾಹಿತಿ ಯುಗದ ಸಾಧನಗಳನ್ನು ಬಳಸಿಕೊಂಡು, ನೈಸರ್ಗಿಕ ಸಾವಯವ ವಿಧಾನಗಳಲ್ಲಿ ಬೆಳೆದ ತರಕಾರಿಗಳನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಿರುವ, ವರ್ಷವಿಡೀ ಆದಾಯ ಪಡೆಯುತ್ತಿರುವ ದಂಪತಿಗಳ ಕಾರ್ಯ ಇತರರಿಗೆ ಮಾದರಿಯಾಗಿದೆ.

ಕೊಪ್ಪಳ ಜಿಪಂ, ತಾಪಂ‌ ಕ್ಷೇತ್ರಗಳ ಮೀಸಲಾತಿ ಪ್ರಕಟ

ವಿಜಯಸಾಕ್ಷಿ ಸುದ್ದಿ ಕೊಪ್ಪಳ:


ರಾಜ್ಯ ಚುನಾವಣಾ ಆಯೋಗವು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನ ಹಾಗೂ ಮೀಸಲಾತಿ ಪಟ್ಟಿಯನ್ನು ಜುಲೈ 1ರಂದು ಪ್ರಕಟಿಸಿ ಕರಡು ಅಧಿಸೂಚನೆ ಹೊರಡಿಸಿದ್ದು, ಜುಲೈ 8ರೊಳಗಾಗಿ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆ ಸಮೇತ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಹೆಚ್ಚಿನ ವಿವರಗಳಿಗೆ‌ ಚುನಾವಣಾ ಆಯೋಗ ಪ್ರಕಟಿಸಿದ ಕೋಷ್ಟಕ ಇಲ್ಲಿದೆ..

ನಟ ಚೇತನ್ ಫೌಂಡೇಷನ್‌ನಿಂದ ಕಲಾವಿದರಿಗೆ ಹಾಗೂ ಬಡವರಿಗೆ ಆಹಾರದ ಕಿಟ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೋವಿಡ್ 19 ಎರಡನೇ ಅಲೆಯಿಂದ ಸಂಕಷ್ಟದಲ್ಲಿರುವ ಕೊಪ್ಪಳ ಜಿಲ್ಲೆಯ ಕಲಾವಿದರಿಗೆ ಹಾಗೂ ಕಡು ಬಡವರಿಗೆ ಚೇತನ್ ಫೌಂಡೇಶನ್ (ರಿ) ಬೆಂಗಳೂರು ಇವರ ವತಿಯಿಂದ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ 50 ಕುಟುಂಬಗಳಿಗೆ ಆಹಾರ ಕಿಟ್‍ಗಳ ವಿತರಣೆ ಮಾಡಲಾಯಿತು.

ಚೇತನ್ ರವರು ನಟರಷ್ಟೇ ಅಲ್ಲದೆ ಸಾಮಾಜಿಕ ಹೋರಾಟಗಾರರು,ಬಡವರಿಗೆ,ದೀನ ದಲಿತರಿಗೆ, ನೊಂದ ಜನರಿಗೆ, ನಿರ್ಗತಿಕರಿಗೆ ಸಹಾಯಮಾಡುತ್ತ ತಮ್ಮ ನಿಜವಾದ ವ್ಯಕ್ತಿತ್ವವನ್ನು ಮೆರೆದಿದ್ದಾರೆ.

ಕೊಪ್ಪಳ ಜಿಲ್ಲೆಗೆ ಅಷ್ಟೇ ಅಲ್ಲದೆ ಇಡೀ ಕರ್ನಾಟಕದಾದ್ಯಂತ ಉಚಿತ ಊಟ ಮಾಸ್ಕ್ ಸ್ಯಾನಿಟೈಸರ್ ಆಹಾರ ಕಿಟ್ ನೀಡುವುದರ ಮೂಲಕ ಬಡವರ ಹಸಿವನ್ನ ನೀಗಿಸಿದ್ದಾರೆ.

ಅದೆಷ್ಟೋ ಸಿನಿಮಾ ಸ್ಟಾರ್ ನಟರೆಲ್ಲ ಕೋಟಿಗಟ್ಟಲೆ ಸಂಪಾದಿಸಿದರೂ ಕೂಡ ಇಂತಹ ಒಳ್ಳೆಯ ಕೆಲಸಮಾಡಲು ಮುಂದೆ ಬರುವುದಿಲ್ಲ ಇಂಥವರ ಮಧ್ಯೆ ಸಾಮಾಜಿಕ ಕಳಕಳಿ ಇರುವವರು ನಮಗೆ ಕಾಣಸಿಗುವುದು ಬೆರಳೆಣಿಕೆಯಷ್ಟು ಮಾತ್ರ.

ಚೇತನ್ ರವರಿಗೆ ಅವರ ಒಳ್ಳೆಯ ವ್ಯಕ್ತಿತ್ವಕ್ಕೆ ಸಾಮಾಜಿಕ ಕಾರ್ಯಕ್ಕೆ ಚೇತನ್ ಫೌಂಡೇಶನ್‍ಗೆ ಕೊಪ್ಪಳ ಜಿಲ್ಲೆಯ ಪರವಾಗಿ, ಎಲ್ಲಾ ಕಲಾವಿದರ ಪರವಾಗಿ, ಬಡವರ ಪರವಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತಾ, ಇಂತಹ ಒಳ್ಳೆಯ ಕೆಲಸ ಮಾಡಲು ಆ ದೇವರು ಇನ್ನಷ್ಟು ಶಕ್ತಿ ಕೊಡಲೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದು ಗ್ರಾಮದ ಫಲಾನುಭವಿಗಳು ಹಾರೈಸಿದ್ದಾರೆ.

ಕೊರೊನಾ; ಸೋಂಕು ಮತ್ತಷ್ಟು ಇಳಿಮುಖ, ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಇಂದು 15 ಜನರಿಗೆ ಸೋಂಕು ಕಾಣಿಸಿಕೊಂಡಿದೆ.ಗುರುವಾರವೂ ಸಾವಿನ ಸರಣಿ ಮುಂದುವರೆದಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 15 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25829ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -09, ಮುಂಡರಗಿ-01, ನರಗುಂದ-00, ರೋಣ-03, ಶಿರಹಟ್ಟಿ-01, ಹೊರಜಿಲ್ಲೆಯ-01, ಸೇರಿದಂತೆ 15 ಪ್ರಕರಣಗಳು ದೃಢಪಟ್ಟಿವೆ.

ಗುರುವಾರವೂ ಕೋವಿಡ್ ನಿಂದ ಇಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 306 ಜನರು ಮೃತಪಟ್ಟಂತಾಗಿದೆ.

ಜಿಲ್ಲೆಯ ರೋಣ ತಾಲೂಕಿನ ಸರ್ಜಾಪೂರ ನಿವಾಸಿ 60 ವರ್ಷದ ವ್ಯಕ್ತಿ ಮೇ-30 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜೂನ್ 27 ರಂದು ಮೃತಪಟ್ಟಿದ್ದಾರೆ.

ಗದಗ ನಗರದ ನಿವಾಸಿ 65 ವರ್ಷದ ಮಹಿಳೆ ಮೇ-01 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 29 ರಂದು ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 25 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25312 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 211 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಉದ್ಯಮಿ ಕೆ.ಎಂ.ಸೈಯದ್ ಜನ್ಮ ದಿನ ಆಚರಣೆ

0

ಕೊಪ್ಪಳ :  ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರ 40ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ಹೊಸಪೇಟೆ ರಸ್ತೆಯ ಕೆಎಂಎಸ್ ಕಚೇರಿಯಲ್ಲಿ ಕೆ.ಎಂ.ಸೈಯದ್ ಅಭಿಮಾನಿ ಬಳಗ ಸರಳ ಜನ್ಮ ದಿನ ಆಚರಿಸಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರು, ಈ ನಿಮ್ಮ ಅಭಿಮಾನ ಪ್ರೀತಿ ನನಗೆ ಸಂತಸ ತಂದಿದೆ ಎಂದರು.

ನಂತರ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್  ಹಾಗೂ  ಅನಾಥ ಆಶ್ರಮದ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಜಾಫರಸಾಬ ಸಂಗಟಿ, ಕೆ.ಎಂ.ಸೈಯದ್ ಅಭಿಮಾನಿ ಬಳಗದ ಎಫ್.ಎ.ನೂರುಬಾಷ, ಯುವ ಮುಖಂಡ ಸಲೀಂ ಅಳವಂಡಿ, ಸಾದೀಕ್ ಕುದರಿಮೋತಿ, ಇಬ್ರಾಹಿಂ, ವಸಿಂ, ಸಂತೋಷ ಬೂದಿಹಾಳ ಮತ್ತಿತರರು ಪಾಲ್ಗೊಂಡಿದ್ದರು.

     

ಇಂದಿರಾ ಕ್ಯಾಂಟೀನ್‌ ಮೂಲಕ ಸಾವಿರಾರು ಮಂದಿಯ ಹಸಿವು ನೀಗಿಸುತ್ತಿರುವ ಕಂಪನಿಗೆ ರಾಷ್ಟ್ರೀಯ ಪ್ರಶಸ್ತಿ

ಪ್ರತಿಷ್ಠಿತ ‘ಶೆಫ್‌ಟಾಕ್’ ಸಂಸ್ಥೆಗೆ ರಾಷ್ಟ್ರೀಯ ಪುರಸ್ಕಾರ..

140ಕ್ಕೂ ಹೆಚ್ಚು ಕಂಪನಿಗಳಿಗೆ ಚೈತನ್ಯ ತುಂಬುತ್ತಿರುವ ಗೋವಿಂದ ಬಾಬು ಪೂಜಾರಿ ಸಾಧನೆಯ ಜೊತೆಗೆ ರಾಷ್ಟ್ರೀಯ ಪ್ರಶಸ್ತಿಯ ಆಕರ್ಷಣೆ..

ವಿಜಯಸಾಕ್ಷಿ ಸುದ್ದಿ, ದೆಹಲಿ

ದಕ್ಷಿಣ ಭಾರತದ ಪ್ರತಿಷ್ಠಿತ ‘ಶೆಫ್‌ಟಾಕ್’ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗರಿ ಆಕರ್ಷಣೆ ತಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರುನಾಡಿನ ‘ಕಾರ್ಮಿಕರತ್ನ’ ಖ್ಯಾತಿಯ ಉದ್ಯಮಿ, ChefTalk’ ಕಂಪನಿಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟಕ್ಕಾಗಿ ಅವಾರ್ಡ್ ಇದಾಗಿದೆ. ಪ್ರತೀ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಕೆರಳಿಸುವ ‘ಕ್ವಾಲಿಟಿ ಫುಡ್ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಅವಾರ್ಡ್’ ಈ ಬಾರಿ ಈ ಬೆಂಗಳೂರು ಪಾಲಾಗಿದೆ.

ಇಂಟರ್‌ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ ಮೂಲಕ ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಈ ವರ್ಷ ಈ ಪ್ರತಿಷ್ಠಿತ ಪುುರಸ್ಕಾರಕ್ಕೆ ಬೆಂಗಳೂರಿನ ಸಂಸ್ಥೆ ‘ಶೆಫ್‌ಟಾಕ್’ (Cheftalk Food And Hospitality Services Pvt.Ltd) ಪಾತ್ರವಾಗಿದೆ.

ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿ ನೇತೃತ್ವದ ಈ ‘ಶೆಫ್‌ಟಾಕ್’ ಕಂಪನಿ ಬೆಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿದ್ದು, ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್, ಆಂದ್ರಪ್ರದೇಶ, ತೆಲಂಗಾಣ ಸಹಿತ ವಿವಿಧ ರಾಜ್ಯಗಳ ಆಹಾರೋದ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಮೆರೆದಿದೆ.

ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ಜೊತೆ ವ್ಯಾವಹಾರಿಕ ನಂಟು ಮೂಲಕ ಉತ್ಕೃಷ್ಟ ಗುಣಮಟ್ಟದ ಆಹಾರೋತ್ಪನ್ನ ಪೂರೈಕೆ ಮಾಡುತ್ತಾ ದೇಶದಲ್ಲೇ ಅಪ್ರತಿಮ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಇಂಟರ್‌ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ ಅಭಿಪ್ರಾಯಪಟ್ಟಿದೆ.

*ಕರ್ನಾಟಕ ಸರ್ಕಾರಕ್ಕೂ ಹೆಮ್ಮೆ*

ಬೆಂಗಳೂರು ಮೂಲದ ‘ಶೆಫ್‌ಟಾಕ್’ ಕಂಪನಿಗೆ ಈ ಪುರಸ್ಕಾರ ಸಂದಿರುವುದು ರಾಜ್ಯ ಸರ್ಕಾರಕ್ಕೂ ಹೆಮ್ಮೆಯ ಸಂಗತಿ. ಮಾಹಿತಿ ತಂತ್ರಜ್ಞಾನ, ಉತ್ಪಾದನಾ ವಲಯ, ಹಾಸ್ಪಿಟಲ್ಸ್ ಹೀಗೆ ಹಲವಾರು ವಲಯಗಳಲ್ಲಿ ಉದ್ದಿಮೆಯ ವಿಸ್ತಾರ ಹೊಂದಿರುವ ಶೆಫ್‌ಟಾಕ್ ಮಾಲೀಕರರಾದ 140ಕ್ಕೂ ಹೆಚ್ಚು ಕಂಪನಿಗಳಿಗೆ ಮುಂಚೂಣಿ ಸೇವೆ ಕಲ್ಪಿಸುತ್ತಿದ್ದಾರೆ.

ಅಷ್ಟೇ ಅಲ್ಲ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ಮೂಲಕ ಆಹಾರ ಪೂರೈಸುತ್ತಿರುವ ‘ಶೆಫ್‌ಟಾಕ್’ (Cheftalk Food And Hospitality Services Pvt.Ltd) ಸಂಸ್ಥೆ, ನಿತ್ಯವೂ ಸಾವಿರಾರು ಮಂದಿಯ ಹಸಿವು ನೀಗುತ್ತಿದೆ. ಅದರಲ್ಲೂ ಅಗ್ಗ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಸರ್ಕಾರದ ಪ್ರಯತ್ನವನ್ನು ಈ ರಾಷ್ಟ್ರೀಯ ಮಟ್ಟದ ಪುರಸ್ಕಾರ ಪ್ರಮಾಣೀಕರಿಸಿದೆ ಎಂಬ ಮೆಚ್ಚುಗೆ ಅಧಿಕಾರಿಗಳಿಂದ ವ್ಯಕ್ತವಾಗಿದೆ.

ದೆಹಲಿಯ ‘ಇಂಟರ್‌ನ್ಯಾಷನಲ್ ಅಚಿವರ್ಸ್ ಕಾನ್ಫರೆನ್ಸ್’ ಸಮಾರಂಭದಲ್ಲಿ ಈ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ‘ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಈ ಪುರಸ್ಕಾರವನ್ನು ಪ್ರದಾನ ಮಾಡಬೇಕಿತ್ತು. ಆದರೆ ಕೋವಿಡ್ ಪರಿಸ್ಥಿತಿ ಹಿನ್ನೆಲೆ ಕಾರ್ಯಕ್ರಮದ ಸ್ವರೂಪ ಬದಲಾಗಿತ್ತು.

ಪ್ರಶಸ್ತಿ ಸ್ವೀಕರಿಸಿರುವ ‘ಶೆಫ್‌ಟಾಕ್’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿಯವರು, ಇದು ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ 6000 ಸಿಬ್ಬಂದಿಯ ಪ್ರಯತ್ನಕ್ಕೆ ಸಂದ ಪುರಸ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ.

ಹಿರಿಯ ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಬಾಲಿವುಡ್ ನ ಹಿರಿಯ ನಟ ನಾಸೀರುದ್ದೀನ್ ಶಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಸೀರುದ್ದೀನ್ ಅವರನ್ನು ಜೂ. 29ರಂದು ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. ಆದರೆ, ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ನ್ಯೂಮೋನಿಯಾ ಆಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಎರಡ್ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ನಾಸೀರುದ್ದೀನ್ ಶಾ ಅವರ ಮ್ಯಾನೇಜರ್ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ನಾಸೀರುದ್ದೀನ್ ಜೊತೆ ಪತ್ನಿ ರತ್ನಾ ಪಾಠಕ್ ಹಾಗೂ ಮಕ್ಕಳು ಇದ್ದಾರೆ. ನಾಸೀರುದ್ದೀನ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತ್ರೀದೇವ್, ಸರ್ಫೋರೋಶ್, ಮಕಬೂಲ್, ಇಕ್ಬಾಲ್, ಬನಾರಸ್, ಪರ್ಜಾನಿಯಾ, ಇಶ್ಕಿಯಾ, ದಿ ಡರ್ಟಿ ಪಿಕ್ಚರ್, ಜಾನ್ ಡೇ, ಬೇಗಂ ಜಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸಿದ್ದಾರೆ. ಪತ್ನಿ ರತ್ನಾ ಪಾಠಕ್ ಸಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಕೊಲೆ!

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ನಗರದ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ. ಪತಿಯೇ ನೀರಿನ ಸಂಪ್ ಗೆ ಮುಳುಗಿಸಿ ಪತ್ನಿ ಸಿಮ್ರಾನ್ (22) ಕೊಲೆ ಮಾಡಿದ್ದಾನೆ. ಸಿಮ್ರಾನ್ ಪತಿ ಫೈರೋಜ್ ವಿರುದ್ಧ ಕೊಲೆಯ ಆರೋಪ ಕೇಳಿ ಬಂದಿದೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸಿಮ್ರಾನ್-ಫೈರೋಜ್ ವಿವಾಹ ನಡೆದಿತ್ತು. ಮೂರೇ ತಿಂಗಳಲ್ಲಿ ನವ ವಧು ಸಾವನ್ನಪ್ಪಿದ್ದಕ್ಕೆ ಹಲವು ಅನುಮಾನಗಳು ಮೂಡುತ್ತಿವೆ. ಸದ್ಯ ಪೊಲೀಸರು ಸಿಮ್ರಾನ್ ಪತಿ ಫೈರೋಜ್, ಅತ್ತೆ, ಮಾವರನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊರೊನಾ; ಜಿಲ್ಲೆಯಲ್ಲಿ ಬುಧವಾರ ಸೋಂಕು ಇಳಿಮುಖ, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಇಂದು 18 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇಂದೂ ಸಾವಿನ ಸರಣಿ ಮುಂದುವರೆದಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 18 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25814 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -07, ಮುಂಡರಗಿ-00, ನರಗುಂದ-03, ರೋಣ-03, ಶಿರಹಟ್ಟಿ-04, ಹೊರಜಿಲ್ಲೆಯ-01, ಸೇರಿದಂತೆ 18 ಪ್ರಕರಣಗಳು ದೃಢಪಟ್ಟಿವೆ.

ಬುಧವಾರ ಕೋವಿಡ್ ನಿಂದ ಇಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 304 ಜನರು ಮೃತಪಟ್ಟಂತಾಗಿದೆ.

ಜಿಲ್ಲೆಯ ನರಗುಂದ ತಾಲೂಕಿನ ದಂಡಾಪೂರ ನಿವಾಸಿ 65 ವರ್ಷದ ವ್ಯಕ್ತಿ ಜೂನ್ 27 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜೂನ್ 28 ರಂದು ಮೃತಪಟ್ಟಿದ್ದಾರೆ.

ಗದಗ ನಗರದ ನಿವಾಸಿ 60 ವರ್ಷದ ಮಹಿಳೆ ಜೂನ್ 25 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 26 ರಂದು ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 18 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25287 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 223 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರೈತನ ಮೇಲೆ ಹಲ್ಲೆ ನಡೆಸಿದ ಪೊಲೀಸರು!

ವಿಜಯಸಾಕ್ಷಿ ಸುದ್ದಿ, ಹಾವೇರಿ

ತಹಸೀಲ್ದಾರ್ ಎದುರೇ ರೈತರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ ರಸ್ತೆ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಪರಮೇಶ್ವರ ಕಂಬಳಿ ಎಂಬ ರೈತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಪೊಲೀಸರೊಂದಿಗೆ ಏಕವಚನದಲ್ಲಿ ಮಾತನಾಡುತ್ತಿಯಾ ಎಂದು ಪೊಲೀಸರು ರೈತನನ್ನು ಥಳಿಸಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸ್ ಕಾನಸ್ಟೇಬಲ್ ಹರೀಶ ಹಾಲಭಾವಿ ಹಾಗೂ ಮೋಹನ್ ಮೇಲಗೇರಿ ಎಂಬುವವರೇ ಹಲ್ಲೆ ನಡೆಸಿದ್ದಾರೆ.

ಕಲ್ಲು ಕ್ವಾರಿ ಹಾಗೂ ಅದರ ಅಕ್ಕಪಕ್ಕದ ಕೆಲವು ರೈತರ ಜಮೀನಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಕೆಲವರು ಮುಂದಾಗಿದ್ದರು. ಈ ಸಂದರ್ಭದಲ್ಲಿ ರಸ್ತೆ‌ ನಿರ್ಮಾಣಕ್ಕೆ ಪರಮೇಶ್ವರ ಸೇರಿದಂತೆ ಇಬ್ಬರು ರೈತರು ವಿರೋಧ ವ್ಯಕ್ತಪಡಿಸಿದ್ದರು‌.
ಜಮೀನಿನಲ್ಲಿ ರಸ್ತೆ ಇಲ್ಲದಿದ್ದರೂ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ಆರೋಪಿಸಿ ರಸ್ತೆ ನಿರ್ಮಾಣಕ್ಕೆ ರೈತರು ವಿರೋಧಿಸಿದ್ದರು. ರಸ್ತೆ ನಿರ್ಮಾಣಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಸಹೋದರ ಡಾಕೇಶ ಲಮಾಣಿ ಹಾಗೂ ಕೆಲವು ರೈತರು ಮುಂದಾಗಿದ್ದರು.

ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ ಶಂಕರ.ಜಿ.ಎಸ್ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ರೈತ ಪರಮೇಶ್ವರ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ರೈತನನ್ನು ಠಾಣೆಗೆ ಹಾಕ್ಕೊಂಡು ಹೋಗೋಣ್ವಾ? ಎಂದು ಪೊಲೀಸ್ ಸಿಬ್ಬಂದಿ ಅವಾಜ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಾಕ್ಕೊಂಡು ಹೋಗು ಬಾ ಅಂದಿದ್ದಕ್ಕೆ ಕೋಪಗೊಂಡು, ರೈತನ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

error: Content is protected !!