Home Blog Page 3269

ಅಕ್ರಮ ಮದ್ಯ ಸಾಗಾಟ, 34 ಸಾವಿರ ರೂ. ಮೌಲ್ಯದ ಮದ್ಯ ಜಪ್ತಿ, ಇಬ್ಬರು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಜರುಗಿದ ದಾಳಿಯಲ್ಲಿ ಅಂದಾಜು 34,689 ರೂ ಮೌಲ್ಯದ ದಾಖಲೆ ರಹಿತ ಮದ್ಯ ವಶಕ್ಕೆ ಪಡೆಯಲಾಗಿದೆ.

ಗದಗ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಏ.15 ರಂದು ರಾತ್ರಿ 8.30 ಗಂಟೆಗೆ ಕುರ್ತಕೋಟಿ ಗ್ರಾಮದ ನಿವಾಸಿಗಳಾದ ಮಂಜುನಾಥ ಫ ಗಣಾಚಾರಿ ಹಾಗೂ ಮಂಜುನಾಥ ನಿಂಬಣ್ಣ ನೀಲಗುಂದ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಮುಳಗುಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುರ್ತಕೋಟಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಬಡ್ನಿಯವರ ಆಯಿಲ್ ಮಿಲ್ ಹತ್ತಿರ ಗಸ್ತು ಕಾರ್ಯನಿರ್ವಹಿಸುತ್ತಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಅಕ್ರಮವಾಗಿ ಸಾಗುತ್ತಿದ್ದ 34,869 ರೂ. ಮೌಲ್ಯದ 88.200 ಲೀ ಮದ್ಯ, ಅಂದಾಜು 5 ಲಕ್ಷ ರೂ. ಮೌಲ್ಯದ ವಾಹನ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್; ಒಬ್ಬ ವಶಕ್ಕೆ, ಇನ್ನೊಬ್ಬ ಪರಾರಿ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾಗ ಬೆಟಗೇರಿ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಆರೋಪಿತರಾದ ಬೆಟಗೇರಿಯ ಗಣೇಶನಗರದ ಸಚಿನ್‌ ಪರಶುರಾಮ ಭಜಂತ್ರಿ ಹಾಗೂ ಶಿವು ಶೀಲವಂತ ಇವರಿಬ್ಬರೂ ಏ.8ರ ರಾತ್ರಿ 8.30ರ ಸುಮಾರಿಗೆ ಬೆಟಗೇರಿಯ ಶರಣ ಬಸವೇಶ್ವರ ನಗರದ ಶಾಲೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಚೆನ್ನೈ ಸುಪರ್‌ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ನಡುವಿನ ಐಪಿಎಲ್‌ 20-20 ಪಂದ್ಯದ ಸ್ಕೋರ್‌ ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬೆಟಗೇರಿ ಪೊಲೀಸ್‌ ಠಾಣೆಯ ಪಿಎಸ್‌ಐ ವಿಠಲ ಹಾವನ್ನವರ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ, ಮೊದಲನೇ ಆರೋಪಿ ಸಚಿನ್‌ ಭಜಂತ್ರಿ ಸಿಕ್ಕಿಬಿದ್ದಿದ್ದು, 2ನೇ ಆರೋಪಿ ಶಿವು ಶೀಲವಂತ ಪರಾರಿಯಾಗಿದ್ದಾನೆ.

ಆರೋಪಿತನಿಂದ 3 ಸಾವಿರ ರೂ. ನಗದು ಹಾಗೂ ಬೆಟ್ಟಿಂಗ್‌ ಬರೆದ ನೋಟ್‌ಬುಕ್‌ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ವಿರುದ್ಧ ಕಲಂ 78(3) ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿಗೆ ಮತ ಹಾಕದಂತೆ ಆಣೆ- ಪ್ರಮಾಣ ಮಾಡಿಸಿದ ಆರೋಪ; ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ…..

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ


ತಾಲೂಕಿನ ಆದ್ರಳ್ಳಿಯ ಲಂಬಾಣಿ ಸಮುದಾಯದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿ ಅವರ ಮೇಲೆ ಪ್ರಕರಣ ದಾಖಲಿಕೊಂಡ ಘಟನೆ ಗುರುವಾರ ನಡೆದಿದೆ.

ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಒಳ ಮೀಸಲಾತಿಯಿಂದ ಸಮಾಜಕ್ಕೆ ಅನ್ಯಾಯವಾಗಿದ್ದು ಮುಂಬರುವ ಚುನಾವಣೆಯಲ್ಲಿ ಲಂಬಾಣಿ ಸಮಾಜದ ಯಾರೊಬ್ಬರೂ ಬಿಜೆಪಿಗೆ ಮತ ಹಾಕದಂತೆ ಸ್ವಾಮೀಜಿಯವರು ಬಹಿರಂಗ ಸಭೆಯಲ್ಲಿ ಲಂಬಾಣಿ ಸಮಾಜ ಬಾಂಧವರಿಂದ ಆಣೆ-ಪ್ರಮಾಣ ಮಾಡಿಸಿದ ಆರೋಪ ಅವರ ಮೇಲಿದೆ.

ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಒಳ ಮೀಸಲಾತಿಯಿಂದ ಹತ್ತಿರುವ ಕಿಚ್ಚಿಗೆ ತುಪ್ಪ ಸವರಿದಂತಾಗಿದೆ. ಒಳಮೀಸಲಾತಿ ಆದೇಶ ವಿರೋಧಿಸಿ ಶಿರಹಟ್ಟಿ ಮತಕ್ಷೇತ್ರದ ಲಂಬಾಣಿ, ಕೊರಚ, ಕೊರಮ, ಜತೆಗೆ ಮುಸ್ಲಿಂ ಜನಾಂಗದವರನ್ನೊಳಗೊಂಡು ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಮಾಜದ ನಿರ್ಧಾರವನ್ನು ಜನಾಂಗದವರಿಗೆ ತಿಳಿಸುವ ವೇಳೆ ಸ್ವಾಮೀಜಿ ಈ ರೀತಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಫ್ಲೈಯಿಂಗ್ ಸ್ಕ್ವಾಡ್ ಆಗಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಾರುತಿ ರಾಠೋಡ್ ಅವರು, ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, 0048/2023-ಕಲಂ-295, 171-ಸಿ, ಐ ಪಿ ಸಿ ಮತ್ತು representation of people act-1951 u/s-125(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಜಿಲ್ಲೆಯಲ್ಲಿ ಮೊದಲ ದಿನ 6 ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಏ.13 ರಂದು ನರಗುಂದ ವಿಧಾನ ಸಭಾ ಮತಕ್ಷೇತ್ರದಿಂದ 6 ನಾಮಪತ್ರಗಳು ಸಲ್ಲಿಕೆಯಾಗಿವೆ.

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಬಸವರಡ್ಡಿ ರಂಗರಡ್ಡಿ ಯಾವಗಲ್-2, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವೀರನಗೌಡ ಶಿವನಗೌಡ ಮೂಗನೂರ-1,

ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ-2, ಪಕ್ಷೇತರ ಅಭ್ಯರ್ಥಿಯಾಗಿ ವೀರೇಶ ಚಂದ್ರಶೇಖರಯ್ಯ ಸೊಬರದಮಠ-1 ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಒಟ್ಟಾರೆಯಾಗಿ 6 ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರ, 66-ಗದಗ ವಿಧಾನಸಭಾ ಕ್ಷೇತ್ರ ಹಾಗೂ 67-ರೋಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ದಾಖಲೆ ಇಲ್ಲದೆ ಹಣ ಸಾಗಾಟ; 9 ಲಕ್ಷಕ್ಕೂ ಹೆಚ್ಚು ಹಣ ಸೀಜ್

ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಪತ್ತೆಯಾದ ಕಂತೆ ಕಂತೆ ಹಣ…….

ವಿಜಯಸಾಕ್ಷಿ ಸುದ್ದಿ, ಗದಗ

ಗುರುವಾರ ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ.

ವಿಧಾನ ಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲಾಡಳಿತ ಜಿಲ್ಲೆಯ ವಿವಿಧೆಡೆ ಹಲವು ಚೆಕ್ ಪೋಸ್ಟ್ ನಿರ್ಮಿಸಿ ಹದ್ದಿನ ಕಣ್ಣು ಇಟ್ಟಿದೆ.

ನಲವಡಿ ಗ್ರಾಮದಿಂದ ಗದಗ ನಗರಕ್ಕೆ ಕಾರಿನಲ್ಲಿ ಬರುವಾಗ ಗದಗ ತಾಲೂಕಿನ ದುಂದೂರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ಯಾವುದೇ ದಾಖಲೆ ಇಲ್ಲದೆ 8 ಲಕ್ಷ ರೂ.ಗಳನ್ನು ಸೀಜ್ ಮಾಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬಿಂಕದಕಟ್ಟಿ ಚೆಕ್ ಪೋಸ್ಟ್ ನಲ್ಲಿ 1ಲಕ್ಷ 12 ಸಾವಿರ ಹಣ ಪತ್ತೆಯಾಗಿದೆ. ಈ ಹಣ ಗದಗನಿಂದ ಹುಬ್ಬಳ್ಳಿಗೆ ಹೊರಟಿದ್ದ ಕಾರಿನಲ್ಲಿ ಪತ್ತೆಯಾಗಿದೆ. ಈ ಹಣಕ್ಕೆ ಯಾವುದೇ ದಾಖಲೆ ಇಲ್ಲದೆ ಇರುವುದರಿಂದ ಸೀಜ್ ಮಾಡಲಾಗಿದೆ.

ಎರಡೂ ಪ್ರಕರಣಗಳು ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ ಎಂದು ಗದಗ ಎಸ್ಪಿ ಬಿ.ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

ಅಬಕಾರಿ ಉಪ ಆಯುಕ್ತರ ದಾಳಿ; 8.27 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ದಾಸ್ತಾನು ಜಪ್ತಿ

ಕಬಾಡಿ ವೈನ್ ಲ್ಯಾಂಡ್‍ ಮೇಲೆ ದಾಳಿ……

ಗದಗ : ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಜರುಗಿದ ದಾಳಿಯಲ್ಲಿ 8.27 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ದಾಸ್ತಾನು ವಶಕ್ಕೆ ಪಡೆಯಲಾಗಿದೆ.

ಗದಗ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಗದಗ ನಗರದ ತಿಲಕ ಪಾರ್ಕ್ ರಸ್ತೆಯಲ್ಲಿರುವ ಕಬಾಡಿ ವೈನ್ ಲ್ಯಾಂಡ್‍ಗೆ ಅನೀರಿಕ್ಷಿತ ದಾಳಿ ವೇಳೆ ಜರುಗಿದ ತಪಾಸಣೆ ಸಮಯದಲ್ಲಿ ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮದ್ಯ ದಾಸ್ತಾನು ಮಾಡಿರುವುದು ಕಂಡು ವಶಕ್ಕೆ ಪಡೆಯಲಾಗಿದೆ.

ತಪಾಸಣೆ ಸಮಯದಲ್ಲಿ ವಿವಿಧ ಬ್ರ್ಯಾಂಡನ್ 1,53,931 ರೂ. ಮೌಲ್ಯದ 796 ಲೀ. ಬೀಯರ್ ಭೌತಿಕ ದಾಸ್ತಾನು ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ಹಾಗೂ ರೂ. 6,73,102 ರೂ. ಮೌಲ್ಯದ 1139 ಲೀ. ಮದ್ಯ. ಒಟ್ಟಾರೆ 8.27 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ಹಾಗೂ ಬಿಯರ ದಾಸ್ತಾನನ್ನು ವಶಕ್ಕೆ ಪಡೆದು ಸಂಬಂಧಿಸಿದವರ ಮೇಲೆ ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.

ದಾಳಿ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತ ಭರತೇಶ, ಅಬಕಾರಿ ಇನ್ಸ್‌ಪೆಕ್ಟರ್ ಶೈನಾಜ್ ಬೇಗಂ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಫೇಸ್‌ಬುಕ್‌ ತಾಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್: ಪ್ರಕರಣ ದಾಖಲು

ಅಭಿವೃದ್ಧಿ ಆಗದೇ ಇದ್ದರೂ ಪರವಾಗಿಲ್ಲ…….ನಮಗೆ ಧರ್ಮ ರಕ್ಷಣೆ ಮುಖ್ಯ, ಧರ್ಮ ಉಳಿಯಬೇಕಾದರೆ ಬರಬೇಕು ಬಿಜೆಪಿ……

ವಿಜಯಸಾಕ್ಷಿ ಸುದ್ದಿ, ರೋಣ

ಚುನಾವಣಾ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ವ್ಯಕ್ತಿಯೊಬ್ಬರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪಕ್ಷವೊಂದರ ಪರವಾದ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್.8ರಂದು ಆರೋಪಿ ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದ ಹನಮಪ್ಪ ಹಟ್ಟಿಮನಿ ಈತನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ಅಭಿವೃದ್ಧಿ ಆಗಿದೆ ಇದ್ದರೂ ಪರವಾಗಿಲ್ಲ, ನಮಗೆ ಧರ್ಮ ರಕ್ಷಣೆ ಮುಖ್ಯ. ಧರ್ಮ ಉಳಿಯೋಕೆ ಬರಬೇಕು ಬಿಜೆಪಿʼ ಎಂದು ಪೋಸ್ಟ್‌ ಮಾಡಿದ್ದರು.

ಈ ಬಗ್ಗೆ ಫ್ಲೈಯಿಂಗ್‌ ಸ್ಕ್ವಾಡ್‌ ಆಗಿ ಕಾರ್ಯನಿವಹಿಸುತ್ತಿರುವ ಮಂಜುನಾಥ ಮೇಟಿ ಇವರು ಸದರಿಯವರ ಮೇಲೆ ಕ್ರಮ ಜರುಗಿಸುವಂತೆ ತಿಳಿಸಿದ್ದು, ರೋಣ ಪೊಲೀಸರು ಕಲಂ: 125, ಆರ್.ಪಿ. ಕಾಯ್ದೆ 1951ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಂಡಾಯ ಅಭ್ಯರ್ಥಿಯಾಗಿ ರಾಮಣ್ಣ ಲಮಾಣಿ ಕಣಕ್ಕೆ; ಹಾಲಿ-ಮಾಜಿ ಒಂದಾಗಲಿದ್ದಾರೆಯೇ ?

ಟಿಕೆಟ್ ವಂಚಿತರ ನಿಗೂಢ ನಡೆ……?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಹಾಲಿ ಶಾಸಕ ರಾಮಣ್ಣ ಲಮಾಣಿ ಬಹುತೇಕ ಬಂಡಾಯವಾಗಿ ಕಣ್ಣಕ್ಕಿಳಿಯುವ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಬುಧವಾರ ಶಾಸಕ ರಾಮಣ್ಣ ಲಮಾಣಿ ಅವರ ಮನೆಯ ಮುಂದೆ ಜಮಾಯಿಸಿದ ಅವರ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರು, ಶಾಸಕ ರಾಮಣ್ಣ ಲಮಾಣಿಯವರಿಗೆ ಟಿಕೆಟ್ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಶಾಸಕರು ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವುದು ಬೇಡ, ಕಾರ್ಯಕರ್ತರು ಮತದಾರರು ನಿಮ್ಮೊಂದಿಗಿದ್ದೇವೆ. ನೀವು ಕಣಕ್ಕಿಳಿಯಿರಿ ಬಹುಮತದಿಂದ ಆಯ್ಕೆ ಮಾಡುತ್ತೇವೆ ಎಂದು ಘೋಷಣೆ ಕೂಗಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಾಮಣ್ಣ ಲಮಾಣಿ, ಪಕ್ಷಕ್ಕಾಗಿ ತನುಮನಧನ ಸಮರ್ಪಿಸಿದ್ದೇನೆ. ಪಕ್ಷದ ಎಲ್ಲ ಹಿರಿಯ ನಾಯಕರೂ ನನಗೆ ಟಿಕೆಟ್ ಕೊಡುತ್ತೇನೆ ಎಂಬ ಬಲವಾದ ಭರವಸೆ ನೀಡಿದ್ದರಿಂದ ಇತ್ತೀಚಿನ ದಿನಗಳಲ್ಲಿ ಪಕ್ಷದ ಎಲ್ಲ ಕಾರ್ಯಕ್ರಮಗಳ ಖರ್ಚುವೆಚ್ಚ ನಿಭಾಯಿಸಿದ್ದೇನೆ. ಆದರೆ ನನ್ನ ಮತ್ತು ಕ್ಷೇತ್ರದ ಇತರೆಲ್ಲ ಆಕಾಂಕ್ಷಿಗಳನ್ನು ಹೊರತುಪಡಿಸಿ ಬೇರೆ ತಾಲೂಕಿನ ಆಕಾಂಕ್ಷಿಗೆ ಮಣೆ ಹಾಕಿರುವುದು ಬಹಳಷ್ಟು ನೋವಾಗಿದೆ. ಈ ನಿಟ್ಟಿನಲ್ಲಿ ಟಿಕೆಟ್ ವಂಚಿತ ಎಲ್ಲ ಆಕಾಂಕ್ಷಿಗಳು, ಅಭಿಮಾನಿ/ಕಾರ್ಯಕರ್ತರ ಸಭೆ ಮಾಡಿ ಒಮ್ಮತದ ಪಕ್ಷೇತರ ಅಥವಾ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಟಿಕೆಟ್ ವಂಚಿತರ ನಿಗೂಢ ನಡೆ!

ಟಿಕೆಟ್ ಘೋಷಣೆಯಾಗುವ ಮೊದಲು ಲಕ್ಷ್ಮೇಶ್ವರದ ದೇವಸ್ಥಾನ(ದೇವರ ಸನ್ನಿಧಿ)ದಲ್ಲಿ ಬಿಜೆಪಿ ಪಕ್ಷದ ಎಲ್ಲ ಆಕಾಂಕ್ಷಿಗಳು ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಮ್ಮತದಿಂದ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಪರಸ್ಪರ ಕಂಕಣಕಟ್ಟಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಇದೀಗ ಅದೆಲ್ಲ ಗಾಳಿಗೆ ತೂರಿ ವರ್ತಿಸುತ್ತಿರುವುದು ರಾಜಕೀಯದಲ್ಲಿ ಆಣೆ-ಪ್ರಮಾಣಕ್ಕೆ ಬೆಲೆ ಇಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಟಿಕೆಟ್ ವಂಚಿತ ಆಕಾಂಕ್ಷಿಗಳೆಲ್ಲರೂ ಸಭೆ ಸೇರಿ ನಿರ್ಣಯವೊಂದನ್ನು ಕೈಗೊಳ್ಳುತ್ತಾರೆ ಎಂಬ ಮಾತುಗಳು ತೀವ್ರ ಕತೂಹಲ ಮೂಡಿಸಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ರಾಮಣ್ಣ ಲಮಾಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಭೀಮಸಿಂಗ್ ರಾಥೋಡ, ಗುರುನಾಥ ದಾನಪ್ಪನವರ, ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ, ಸಣ್ಣೀರಪ್ಪ ಹಳೆಪ್ಪನವರ ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರು ಗುರುವಾರ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರ ಪ್ರಕಟಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ರಾಮಣ್ಣ-ರಾಮಕೃಷ್ಣ ಒಂದಾಗಲಿದ್ದಾರೆಯೇ ?

ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ-ಶತ್ರುಗಳೂ ಅಲ್ಲ ಎಂಬ ಮಾತಿನಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಇಬ್ಬರೂ ಸೇರಿ ಇತರೇ ಟಿಕೆಟ್ ವಂಚಿತ ಆಕಾಂಕ್ಷಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತೃಪ್ತ/ಆಕ್ಷಾಂಕ್ಷಿಗಳ ದೊಡ್ಡ ಕೂಟವನ್ನೇ ರಚಿಸಿ ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ಕೊಡುವ ಬಗ್ಗೆ ಒಂದು ಸುತ್ತಿನ ಮಾತುಕತೆಯೂ ನಡೆದಿರುವ ಬಗ್ಗೆ ಕೇಳಿ ಬರುತ್ತಿರುವುದು ಕುತೂಹಲ ಮೂಡಿಸಿದೆ.

ವಾಟ್ಸಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್:‌ ಇಬ್ಬರ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ತಮ್ಮ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ ವಾಟ್ಸಪ್‌ ಮೂಲಕ ಐಪಿಎಲ್‌ ಟಿ-20 ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಇಬ್ಬರು ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಗದಗ ಜವುಳಗಲ್ಲಿಯ ಅಮಿತ ಪರಶುರಾಮ ಪೂಜಾರಿ ಹಾಗೂ ಮಹೇಂದ್ರಕರ್‌ ಸರ್ಕಲ್‌ ಬಳಿಯ ಪ್ರಸನ್ನ ಶ್ರೀರಂಗಸಾ ಕಬಾಡಿ ಇವರು ಕೃಷ್ಣಾ ಟಾಕೀಸ್‌ ಹತ್ತಿರದ ರಾಹುಲ್‌ ಕ್ರಿಯೇಶನ್‌ ರೆಡಿಮೇಡ್‌ ಬಟ್ಟೆ ಅಂಗಡಿಯ ಬಳಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಆರ್‌ಸಿಬಿ-ಕೆಕೆಆರ್‌ ತಂಡಗಳ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯದ ಫಲಿತಾಂಶದ ಮೇಲೆ ಸಾರ್ವಜನಿಕರಿಂದ ವಾಟ್ಸಪ್‌ ಮೂಲಕ ತಂಡಗಳ ಹೆಸರು ಪಡೆದು ಫೋನ್‌ಪೇ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿತರಿಂದ ಮೊಬೈಲ್‌ ಹಾಗೂ 14,500 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಗದಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಕೆಪಿ ಯಾಕ್ಟ್- 2021 (u/s-78 (1)(a) (vi) ) 0024/2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಚುನಾವಣಾ ಕರ್ತವ್ಯ ಲೋಪ; ಜೆ.ಇ. ಮಹೇಶ ರಮಾವತ್ ಅಮಾನತು

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಲ್ಲಾಪುರ ಉಪವಿಭಾಗದ ಎಂ.ಆರ್.ಬಿ.ಸಿ. ಜೆ.ಇ. ಮಹೇಶ ರಮಾವತ ಅವರು ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರಿ, ಕರ್ತವ್ಯಲೋಪ ಮಾಡಿರುವ ಹಿನ್ನಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಆದೇಶ ಹೊರಡಿಸಿದ್ದಾರೆ.

ಮಹೇಶ ರಮಾವತ ಅವರನ್ನು 67-ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ-ರೋಣ ರಸ್ತೆ, ಪುರ್ತಗೇರಿ ಕ್ರಾಸ್ ಚೆಕ್ ಪೋಸ್ಟನಲ್ಲಿ ತನಿಖಾ ಕಾರ್ಯವನ್ನು ನಿರ್ವಹಿಸಲು ಆದೇಶಿಸಲಾಗಿತ್ತು.

ಸದರಿಯವರು ನಿಗದಿತ ಆದೇಶದಂತೆ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗಿ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿಸಿದರ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134ರ ಉಲ್ಲಂಘನೆ ಮಾಡಿದ ಮಹೇಶ ರಮಾವತ ಅವರನ್ನು ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಅಮಾನತ್ತು ಅವಧಿಯಲ್ಲಿ ತಮ್ಮ ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್ ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!