Home Blog Page 3271

ಬಿಜೆಪಿ ಅಭ್ಯರ್ಥಿ ಪರ ಉಪನ್ಯಾಸಕರ ಪ್ರಚಾರ; ಕಣ್ಮಚ್ಚಿ ಕುಳಿತ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದಾದ್ಯಂತ ವ್ಯಾಪಕ ಪ್ರಚಾರ ನಡೆದಿದೆ. ಆದರೆ, ಚುನಾವಣಾ ಕಾರ್ಯಕ್ಕೆ ಕಾಲೇಜು ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ‌ ಬಂದಿದೆ.

ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕರು ರಾಷ್ಟ್ರೀಯ ಪಕ್ಷದ ಕಾರ್ಯಕರ್ತರಂತೆ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಅವಳಿ ನಗರದ 11ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಶ್ವೇತಾ ರವಿ ದಂಡಿನ ಅವರ ಪರವಾಗಿ ಹಗಲು ರಾತ್ರಿ ಎನ್ನದೇ ಮುಖಂಡ ರವಿ ದಂಡಿನ‌ ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರ ಜೊತೆಗೆ ಪ್ರಚಾರದಲ್ಲಿ ತೊಡಗಿದ್ದಾರೆ.

ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಕೆಲವು ಉಪನ್ಯಾಸಕರನ್ನು ಒತ್ತಡದ ಮೂಲಕ ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಇವರೆಲ್ಲರೂ ನಾಮಪತ್ರ ಸಲ್ಲಿಸುವ ವೇಳೆಯೂ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಯುಜಿಸಿ ಸಂಬಳ ಪಡೆಯುತ್ತಿರುವ ಉಪನ್ಯಾಸಕರು ಕೂಡ ಬಿಜೆಪಿ ಕಾರ್ಯಕರ್ತರಂತೆ ಓಡಾಡೋದು ಪ್ರಜ್ಞಾವಂತರಲ್ಲಿ ಆಕ್ರೋಶ ತರಸಿದೆ. ಇಂತಹ
ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ‌.

ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ
ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಚಿಕ್ಕನರಗುಂದದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಯಲ್ಲಿ ಸೋಮವಾರ ಸಾಮಾಜಿಕ ಲೆಕ್ಕಪರಿಶೋಧನಾ ಸಭೆ ನಡೆಯಿತು.

೨೦೨೧-೨೨ನೇ ಸಾಲಿನ ೧ ಮತ್ತು ೨ನೇ ಹಂತದ ಮಹಾತ್ಮಾ ಗಾಂಧಿ ರಾಷ್ತ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ೨೦೨೦-೨೧ರ ೧೪ ಮತ್ತು ೧೫ನೇ ಹಣಕಾಸು ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಜರುಗಿತು. ನೋಡಲ್ ಅಧಿಕಾರಿಗಳಾಗಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ಎಸ್.ಎಸ್.ವಾಲಿ ಆಗಮಿಸಿದ್ದರು.

ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ, ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಬಾಪು ಹಿರೇಗೌಡ್ರ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶಂಕ್ರಮ್ಮ ಚಲವಾದಿ, ಪಿಡಿಒ ಶೈನಾಜ್ ಮುಜಾವರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜಕ ಜಿ.ಎನ್.ಅಬ್ದುಲ್‌ಪುರ್, ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ.ಆಶೇಖಾನ್, ಎಂ.ಆರ್.ಖನ್ನೂರ, ಎಸ್.ಬಿ.ದೇಸಾಯಿ, ಜೆ.ಜೆ.ಬಡಿಗೇರ, ಎಸ್.ವಿ.ಕೆಂಚನಗೌಡ್ರ, ಎಸ್.ಪಿ.ಬಡಿಗೇರ ಸೇರಿದಂತೆ ಗ್ರಾಮಸ್ಥರು ಇದ್ದರು.

ಸ್ನೇಹ-ಸಂಬಂಧಗಳ ಮಧ್ಯೆ ಜಂಗಿ ಕುಸ್ತಿ; ಚಹಾ ಮಾರುವವನಿಗೆ ಬಿಜೆಪಿ ಟಿಕೆಟ್

ಗದಗ-ಬೆಟಗೇರಿ ನಗರಸಭೆ ಚುನಾವಣೆ ವಿಶೇಷ

ವಿಜಯಸಾಕ್ಷಿ ವಿಶೇಷ, ಗದಗ


ಗದಗ-ಬೆಟಗೇರಿ ನಗರಸಭೆ ಚುನಾವಣೆ ಅವಳಿ ನಗರದ ಜನರಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ಹಲವು ವೈಶಿಷ್ಟ್ಯಗಳನ್ನು ಕಂಡಿದೆ. ಕೆಲವು ಅಭ್ಯರ್ಥಿಗಳಿಗೆ ಊಹೆಗೂ ಮೀರಿ ಟಿಕೆಟ್ ಸಿಕ್ಕಿದೆ. ಇನ್ನು ಕೆಲವರು ನಿರೀಕ್ಷಿಸದೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಹಲವರ ಮಧ್ಯೆ ನಿರೀಕ್ಷಿಸದಷ್ಟು ಸ್ಪರ್ಧೆ ಏರ್ಪಟ್ಟಿದೆ.

ಅವಳಿ ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯ ಕಣದಲ್ಲಿ ಸಂಬಂಧಿಗಳು, ಸ್ನೇಹಿತರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಎದುರು ಬದುರಾಗಿದ್ದಾರೆ. ಚುನಾವಣೆಗೂ ಮುನ್ನ ಸ್ನೇಹಿತರು, ಸಂಬಂಧಿಗಳಾಗಿದ್ದವರು ಇದೀಗ ಎದುರಾಳಿಗಳಾಗಿ ಚುನಾವಣೆಗೆ ಅಣಿಯಾಗಿದ್ದಾರೆ.

ಒಬ್ಬ ಸಾಮಾನ್ಯ ಚಹಾವಾಲಾ ಸಹಿತ ಈ ದೇಶದ ಪ್ರಧಾನಿಯಾಗಬಲ್ಲ ಎಂಬ ಜನ ಸಂದೇಶ ಸಾರಿರುವ ಬಿಜೆಪಿ, ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಚಹಾ ಮಾರಾಟ ಮಾಡುವ ವ್ಯಕ್ತಿಗೆ ಟಿಕೆಟ್ ನೀಡಿದೆ.

ಸ್ನೇಹಿತರ ಸವಾಲ್

ನಗರದ ವಾರ್ಡ್ ನಂ.19ರಲ್ಲಿ ಕಾಂಗ್ರೆಸ್‌ನ ಸಂಗಮೇಶ ಕವಳಿಕಾಯಿ ಹಾಗೂ ಬಿಜೆಪಿಯ ಮಹಾಂತೇಶ ನಲವಡಿ, ವಾರ್ಡ್ ನಂ. 7ರಲ್ಲಿ ಬಿಜೆಪಿಯ ರಾಘವೇಂದ್ರ ಯಳವತ್ತಿ ಹಾಗೂ ಕಾಂಗ್ರೆಸ್‌ನ ನಾಗಲಿಂಗ ಐಲಿ ಆತ್ಮೀಯ ಸ್ನೇಹಿತರಾಗಿದ್ದಾರೆ. ರಾಘವೇಂದ್ರ ಹಾಗೂ ನಾಗಲಿಂಗ 2013ರ ನಗರಸಭೆ ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ಇಬ್ಬರ ನಡುವೆ ಸ್ನೇಹ ಗಾಢವಾಗಿ ಬೆಳೆದಿತ್ತು. ಈ ಸ್ನೇಹಕ್ಕೆ ಎಂಟು ವರ್ಷಗಳಾಗಿವೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಹಿಂದುಳಿದ ವರ್ಗ ‘ಎ’ ಮೀಸಲಾತಿ ಬಂದಿರುವ ಕಾರಣ ಇಬ್ಬರು ಒಂದೇ ಪಕ್ಷದಲ್ಲಿದ್ದುಕೊಂಡೇ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದರು.

ಆದರೆ, ಟಿಕೆಟ್ ಸಿಗುವುದು ಅನುಮಾನ ಎಂಬುದನ್ನು ಅರಿತ ಐಲಿ ಅವರು ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ನೇಹಿತನ ಎದುರಾಳಿಯಾಗಿ ಪರಸ್ಪರ ಸವಾಲೊಡ್ಡಿದ್ದು, ಅವಳಿ ನಗರದಲ್ಲಿ ಭಾರೀ ಸಂಚಲನ ಮೂಡಿಸಿದೆ.

ದೂರದ ಸಂಬಂಧಿಗಳ ತ್ರಿಕೋನ ಸ್ಪರ್ಧೆ

ಗದಗ-ಬೆಟಗೇರಿಯ ವಾರ್ಡ್ ನಂ. 2ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಮೂವರು ದೂರದ ಸಂಬಂಧಿಗಳ ಮಧ್ಯೆ ಜಟಾಪಟಿ ನಡೆದಿದೆ. ಕಾಂಗ್ರೆಸ್‌ನ ಅಭ್ಯರ್ಥಿ ಸುರೇಶ ಕಟ್ಟಿಮನಿ, ಜೆಡಿಎಸ್‌ನ ರಮೇಶ ಗಡಾದ ಹಾಗೂ ಪಕ್ಷೇತರ ಅಭ್ಯರ್ಥಿ ಮೋಹನ್ ಕಟ್ಟಿಮನಿ ಕಣದಲ್ಲಿದ್ದಾರೆ. ಮೋಹನ್ ಕಟ್ಟಿಮನಿ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷದ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದು, ದೂರದ ಸಂಬಂಧಿ ಸುರೇಶ ಕಟ್ಟಿಮನಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ನಗರಸಭೆಯ ಅಧಿಕಾರದ ಮೆಟ್ಟಿಲೇರಿರುವ ಸುರೇಶ ಕಟ್ಟಿಮನಿ ಪುನಃ ಆಯ್ಕೆಯಾಗುವ ವಿಶ್ವಾಸದಲ್ಲಿಯೇ ವಾರ್ಡ್ ತುಂಬೆಲ್ಲ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇತ್ತ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಂಡಾಯ ಅಭ್ಯರ್ಥಿ ಮೋಹನ್ ಕಟ್ಟಿಮನಿ ಹಾಗೂ ರಮೇಶ ಗಡಾದ ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಮತದಾರರಿಂದಲೇ ಹಣ ಪಡೆದು ಮತಭಿಕ್ಷೆ

ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಸೆ, ಆಮಿಷಗಳನ್ನೊಡ್ಡಿ ಮತ ಪಡೆಯುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಅವಳಿ ನಗರದ ಪಕ್ಷೇತರ ಅಭ್ಯರ್ಥಿಗಳಾದ ವಾರ್ಡ್ 15ರ ವಿಶ್ವನಾಥ ಶೀರಿ ಹಾಗೂ ವಾರ್ಡ್ 21ರ ಮಂಜುನಾಥ ಬಿ.ಮುಳಗುಂದ ಚುನಾವಣಾ ಖರ್ಚಿಗಾಗಿ ಮತದಾರರಿಂದಲೇ ಹಣ ಪಡೆದು ಮತ ನೀಡುವಂತೆ ವಿಭಿನ್ನವಾಗಿ ಪ್ರಚಾರ ನಡೆಸಿದ್ದಾರೆ. ಮತದಾರರಿಗೆ ಹಣ ಹಂಚಿ, ಚುನಾವಣೆ ಗೆಲ್ಲುವ ಅಭ್ಯರ್ಥಿಗಳ ನಡುವೆ ವಿಶ್ವನಾಥ ಅವರ ವಿನೂತನ ಪ್ರಚಾರ ಶೈಲಿಗೆ ಅವಳಿ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚಹಾವಾಲಾಗೆ ಬಿಜೆಪಿ ಟಿಕೆಟ್!

ದೇಶದ ಪ್ರಧಾನಿ ನರೇಂದ್ರ ಮೋದಿ ರೈಲು ನಿಲ್ದಾಣವೊಂದರಲ್ಲಿ ಚಹಾ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ಕೇಳಿದ್ದೇವೆ. ಸದ್ಯ ಅವರೀಗ ದೇಶದ ಉನ್ನತ ಹುದ್ದೆ ಅಲಂಕರಿಸಿರುವುದು ಇತಿಹಾಸ. ಅದರಂತೆ, ಗದಗ ಬೆಟಗೇರಿಯ ವಾರ್ಡ್ ನಂ. 23ರ ಬಿಜೆಪಿ ಟಿಕೆಟ್ ಅನ್ನು ಚೆನ್ನಪ್ಪ ದ್ಯಾಂಪುರ ಅವರಿಗೆ ನೀಡಿದೆ. ಬಿಜೆಪಿಯಲ್ಲಿ ಸಕ್ರಿಯರಾಗಿರುವ ಅವರು, ನಗರದ ರಾಚೋಟೇಶ್ವರ ದೇವಸ್ಥಾನದ ಎದುರುಗಡೆ ಚಹಾ ಅಂಗಡಿ ನಡೆಸುತ್ತಿದ್ದಾರೆ. ಗದಗ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಹಾವಾಲಾನನ್ನು ಗೆಲ್ಲಿಸುವ ಮೂಲಕ ಇತಿಹಾಸ ಮರುಕಳಿಸಲು ಬಿಜೆಪಿ ಯತ್ನಿಸುತ್ತಿದೆ. ಅಲ್ಲದೇ, ಪಕ್ಷವು ಸಾಮಾನ್ಯ ಕಾರ್ಯಕರ್ತನನ್ನೂ ಗುರುತಿಸಿ ಟಿಕೆಟ್ ನೀಡುತ್ತಿದೆ ಎಂಬ ಸಂದೇಶ ಸಾರುತ್ತಿದೆ. ಆದರೆ, ಬಿಜೆಪಿ ತಂತ್ರ ಫಲಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳ್ಳವರೇ ಚುನಾವಣೆಗೆ ಸ್ಪರ್ಧಿಸಬೇಕೆಂಬ ಮನೋಭಾವನೆ ಬಂದಿದೆ. ಆದರೆ, ಹಣವಿಲ್ಲದಿದ್ದರೂ ಸ್ಪರ್ಧಿಸಬಹುದು ಎಂಬ ಸಂದೇಶ ಸಾರುವ ಸಲುವಾಗಿ ಮತದಾರರಿಂದಲೇ ಹಣ ಪಡೆದು ಮತಭಿಕ್ಷೆ ಕೇಳಲಾಗುತ್ತಿದೆ. ವಾರ್ಡ್‌ನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಜನಸಾಮಾನ್ಯನೂ ಆಸೆ, ಆಮಿಷವೊಡ್ಡದೆ ಗೆಲ್ಲಬಹುದು ಎಂಬ ವಿಶ್ವಾಸ ಮೂಡಿಸಿದೆ.

ವಿಶ್ವನಾಥ ಶೀರಿ, ಪಕ್ಷೇತರರ ಅಭ್ಯರ್ಥಿ

ನಗರಸಭೆ ಚುನಾವಣೆಯಲ್ಲಿ ಒಂದು ಪಕ್ಷವನ್ನು ಪ್ರತಿನಿಧಿಸುತ್ತಿರುವ ಕಾರಣ ಒಬ್ಬರಿಗೊಬ್ಬರು ಎದುರಾಳಿಗಳಾಗಿದ್ದು, ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರಾಗಿದ್ದೇವೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಆ ಬಾಂಧವ್ಯ ಮುಂದುವರೆಯಲಿದೆ.

ಹೆಸರು ಹೇಳಲಿಚ್ಚಿಸದ ಅಭ್ಯರ್ಥಿ

ಚುನಾವಣೆಯಲ್ಲಿ ಗೆಲ್ಲಿಸಿ: ಕಣವಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಡಿಸೆಂಬರ್ 24ರಂದು‌ ನಡೆಯಲಿರುವ ಜಿಲ್ಲಾ ನ್ಯಾಯವಾದಿಗಳ ಸಂಘದ ಚುನಾವಣೆಯಲ್ಲಿ ನಮ್ಮ ಪ್ಯಾನಲ್‌ನ ನ್ಯಾಯವಾದಿಗಳನ್ನು ಸಂಘದ ಮತದಾರ ಬಂಧುಗಳು ಚುನಾಯಿಸಬೇಕೆಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎ.ವಿ.ಕಣವಿ ಮನವಿ ಮಾಡಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳ ಸಂಕೀರ್ಣ ಸ್ಥಾಪನೆಗೆ ಪ್ರಥಮ ಪ್ರಾಶಸ್ತ್ಯವನ್ನು ನಮ್ಮ ತಂಡ ನೀಡಲಿದೆ. ಯುವ ವಕೀಲರ ಸುಸಜ್ಜಿತ ಬದುಕು ನಿರ್ಮಾಣಕ್ಕಾಗಿ ಕಾರ್ಯಾಗಾರ, ಸಹಕಾರ ಸಂಘ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಕೊಪ್ಪಳ ಜಿಲ್ಲಾ ನ್ಯಾಯವಾದಿಗಳ ಸಂಘದ ಇದುವರೆಗಿನ ಸದಸ್ಯರ ಸಂಖ್ಯೆ 486ರಷ್ಟಿದ್ದು ರೆಗ್ಯುಲರ್ ಆಗಿ ಪ್ರ್ಯಾಕ್ಟೀಸ್ ಮಾಡುತ್ತಿರುವ 338 ಜನ ಸದಸ್ಯರು ಮಾತ್ರ ಮತದಾನ ಮಾಡಲಿದ್ದು, ಈ ಚುನಾವಣೆಯಲ್ಲಿ ನಮ್ಮ ಪ್ಯಾನಲ್ ಗೆಲುವು ಕಾಣುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಎ.ವಿ.ಕಣವಿ, ಉಪಾಧ್ಯಕ್ಷ ಸ್ಥಾನಕ್ಕೆ ದಿವಾಕರ ಬಾಗಲಕೋಟೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರವಿ.ಎಸ್.ಬೆಟಗೇರಿ, ಜಂಟಿ‌ ಕಾರ್ಯದರ್ಶಿ ಸ್ಥಾನಕ್ಕೆ ಗ್ಯಾನಪ್ಪ ಚಿಲಕಮುಖಿ, ಖಜಾಂಚಿ ಸ್ಥಾನಕ್ಕೆ ಚಿದಾನಂದಗೌಡ ಪೊಲೀಸ್‌ಪಾಟೀಲ ಸ್ಪರ್ಧಿಸಿದ್ದು ಇವರಿಗೆ ಮತದಾರ ಬಂಧುಗಳು ಮತ ನೀಡಬೇಕೆಂದು ಕೋರಿದರು.

ತಲ್ವಾರ್ ಝಳಪಿಸಿದ ಕಾಂಗ್ರೆಸ್ ಅಭ್ಯರ್ಥಿ! ಕ್ಯಾಬರೆ ನೃತ್ಯಗಾರರೂ ನಾಚುವಂತೆ ಸಖತ್ ಸ್ಟೆಪ್ಸ್

ವಿಜಯಸಾಕ್ಷಿ ಸುದ್ದಿ, ಗದಗ:

ಇತ್ತೀಚೆಗೆ ಮದುವೆ, ಇತರ ಶುಭ ಸಮಾರಂಭಗಳಲ್ಲಿ ಕತ್ತಿ (ತಲ್ವಾರ್) ಝಳಪಿಸುವುದು, ತಲ್ವಾರ್‌ನಿಂದ ಬರ್ತಡೇ ಕೇಕ್ ಕಟ್ ಮಾಡುವುದು ಫ್ಯಾಶನ್ ಆಗಿ ಬಿಟ್ಟಿದೆ. ತಿಳಿದೋ ತಿಳಿಯದೆಯೋ ಸಮಾಜದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳೇ ಈ ರೀತಿ ಕತ್ತಿ ಝಳಪಿಸುತ್ತಿರುವುದು ದುರಂತ. ಕಾಂಗ್ರೆಸ್ ಅಭ್ಯರ್ಥಿಯೇ ಗದಗ ನಗರದಲ್ಲಿ ಕತ್ತಿ ಝಳಪಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಗದಗ-ಬೆಟಗೇರಿ ನಗರಸಭೆ ಚುನಾವಣೆಯ 18ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಜೂನ್‌ಸಾಬ ಉರ್ಫ್ ಜೈನುಲಾಬ್ದೀನ್ ರಹಿಮಾನಸಾಬ ನಮಾಜಿ ಎಂಬ ವ್ಯಕ್ತಿ ಗದಗನ ಜವಳ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಕತ್ತಿ ಝಳಪಿಸಿರುವ ವಿಡಿಯೋ ವೈರಲ್ ಆಗಿದ್ದು, ಅವಳಿ ನಗರದಲ್ಲಿ ಭೀತಿ ಹುಟ್ಟಿಸಿದೆ.

ಟಿಪ್ಪು ಜಯಂತಿಯ ಸಂದರ್ಭದಲ್ಲಿ ಈ ತಲ್ವಾರ್ ಡ್ಯಾನ್ಸ್ ನಡೆದಿದೆ ಎನ್ನಲಾಗುತ್ತಿದೆ. ರಾತ್ರಿಹೊತ್ತು ಡಿಜೆ ಹಾಡಿಗೆ ಹೆಜ್ಜೆ ಹಾಕಿರುವ ಜೂನ್‌ಸಾಬ ಕ್ಯಾಬರೆ ಡಾನ್ಸರ್‌ಗಳು ನಾಚುವಂತೆ ಕತ್ತಿ ಝಳಪಳಿಸುತ್ತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಜೂನ್‌ಸಾಬ ನೃತ್ಯ ಮಾಡಿರುವ ವಿಡಿಯೋವನ್ನು ಅಲ್ಲಿನ ಯುವಕನೋರ್ವ ವಾಟ್ಸ್ ಆಪ್‌ನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದು, ಬಳಿಕ ಅವಳಿ ನಗರದೆಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಗರಸಭೆಯ ಮಾಜಿ ಉಪಾಧ್ಯಕ್ಷೆಯ ಪತಿಯಾಗಿರುವ ಜೂನ್‌ಸಾಬ ನಮಾಜಿ ಹಾಗೂ ಆತನ ಹಿಂಬಾಲಕರು ಕೈಯಲ್ಲಿ ಕತ್ತಿ ಹಿಡಿದು ಕುಣಿದಿದ್ದಾರೆ. ಇದರಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು, ಜನಪ್ರನಿಧಿಯಾಗಲು ಹೊರಟಿರುವವರು ಇವರೇನಾ ಎಂದು ಬಾಯಿ ಮೇಲೆ ಬೆರಳಿಡುವಂತಾಗಿದೆ.

ಈ ಬಗ್ಗೆ ‘ವಿಜಯಸಾಕ್ಷಿ‘ ಸಂಪರ್ಕಿಸಿದಾಗ, ‘ಕತ್ತಿ ಝಳಪಳಿಸಿರುವ ವಿಡಿಯೋ ಆರು ವರ್ಷಗಳ ಹಿಂದೆ ರಕ್ತ ಮಾರೆಮ್ಮದೇವಿ ದೇವಸ್ಥಾನದ ಹಿಂದೆ ಕುಣಿದಿರುವುದಾಗಿದೆ. ಆ ಮೇಲೆ ಈದ್ ಮಿಲಾದ್‌ನಲ್ಲಿ ಕುಣಿದಿರುವುದು. ಆದರೆ, ಕೆಲವರು ಮದುವೆ ಇದ್ದಾಗ, ಕ್ರಿಕೆಟ್‌ನಲ್ಲಿ ಸೋತಾಗ ಕುಣಿದಿರುವ ವಿಡಿಯೋ ಅಂತಾ ಹೇಳಿದ್ರು. ನಾನು ಎಂತಹ ದೇಶಭಕ್ತ ಎಂಬುದನ್ನು ಅವರಿಗೆ ಹೇಳಿದ್ದೇನೆ.

ನಾನು ಕುಣಿಯುವ ವೇಳೆ ಹಿಂದೂ, ಎಸ್‌ಸಿ, ಎಸ್‌ಟಿ, ಲಿಂಗಾಯತ, ಬ್ರಾಹ್ಮಣರೂ ಇದ್ದರು. ಅಲ್ಲಿ ಯಾರ್ಯಾರು ಇದ್ದರು ಎಂಬ ಬಗ್ಗೆ ಸ್ಟೇಷನ್‌ನಲ್ಲಿ ಮಾಹಿತಿ ಕೊಟ್ಟಿದ್ದೀನಿ. ನಾನು ಎಲೆಕ್ಷನ್‌ಗೆ ಬಂದಾಗ ಒಂದು ಸಾರಿ ಈ ರೀತಿ ವಿಡಿಯೋ ವೈರಲ್ ಮಾಡ್ತಾರೆ. ನಾನು ಹೇಗಿದ್ದೇನೆ ಎಂಬುದನ್ನು ನಮ್ಮ ಏರಿಯಾದಲ್ಲಿ ಬಂದು ಕೇಳಿ. ವಿಪಕ್ಷದವರು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ನಮ್ಮ ಪಕ್ಷದವರೂ ಸೇರಿ ಹೀಗೆ ಮಾಡುತ್ತಿದ್ದಾರೆ. ಆದರೂ ಚುನಾವಣೆಯಲ್ಲಿ ನಾನೇ ಗೆಲ್ಲುತ್ತೇನೆ ಎಂದು ಜೂನ್‌ಸಾಬ ಸ್ಪಷ್ಟನೆ ನೀಡಿದರು.

ಪ್ರಕರಣ ದಾಖಲು

ಮೂರು ವರ್ಷಗಳ ಹಿಂದಿನ ವಿಡಿಯೋ ಅದು. ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ ಅಂತಾ ಅವಾಗಲೇ ದೂರು ಕೊಟ್ಟು ಎಫ್‌ಐಆರ್ ಆಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು.

ಸಾರಿಗೆ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಶ್ರೀರಾಮುಲು: ವಜಾಗೊಂಡ ಸಿಬ್ಬಂದಿಗಳು ನಾಲ್ಕು ವಾರದಲ್ಲಿ ಮರು ನಿಯುಕ್ತಿ

ವಿಜಯಸಾಕ್ಷಿ ಸುದ್ದಿ, ಗದಗ:

‘ಕಳೆದ ಎಪ್ರಿಲ್‌ನಲ್ಲಿ ಬೇಡಿಕೆ ಈಡೇರಿಸುವಂತೆ ನಡೆಸಿದ ಮುಷ್ಕರದಲ್ಲಿ ಪಾಲ್ಗೊಂಡು ವಜಾಗೊಂಡಿದ್ದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಮರು ನಿಯುಕ್ತಿ ಮಾಡಿಕೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದರು.

ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ‘ಕಳೆದ ಎಂಟು ತಿಂಗಳ ಹಿಂದೆ ಬೇಡಿಕೆ ಈಡೇರಿಸುವಂತೆ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿತ್ತು. ಆದರೆ, ಇದೀಗ ಮಾನವೀಯತೆ ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ ವಜಾಗೊಂಡಿರುವ ಸಿಬ್ಬಂದಿಗಳನ್ನು ನಾಲ್ಕು ವಾರಗಳ ಒಳಗೆ ಸೇವೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ’ ಎಂದರು.

ಮರು ನಿಯುಕ್ತಿ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕು ಸಾರಿಗೆ ಸಂಸ್ಥೆಯ ಎಂಡಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ವಜಾಗೊಂಡಿರುವ ಸಿಬ್ಬಂದಿಗಳು ಕೋರ್ಟ್ ಮೆಟ್ಟಿಲೇರಿರುವ ಕಾರಣ ಕೆಲ ಕಾನೂನಿನ ತೊಡಕಾಗಿದೆ. ಹೀಗಾಗಿ ಲೋಕ ಅದಾಲತ್ ಮೂಲಕ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದ ಅವರು, ಖಾಲಿ ಕುಳಿತಿರುವ ರಾಜಕಾರಣಿಗಳು ತಪ್ಪು ದಾರಿಗೆ ಎಳೆದು ತರುತ್ತಾರೆ. ಹೀಗಾಗಿ ಇಂತಹ ಹೋರಾಟಗಳಲ್ಲಿ ಪಾಲ್ಗೊಳ್ಳಬಾರದು. ಕಾನೂನು ಕೈಗೆ ತೆಗೆದುಕೊಳ್ಳಬಾರದು’ ಎಂದು ಸಚಿವ ಶ್ರೀರಾಮುಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರವಿ ದಂಡಿನ, ಎಸ್.ಎಚ್. ಶಿವನಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇಂದು ರಾಜ್ಯ ಸರ್ಕಾರದಿಂದ ಐತಿಹಾಸಿಕ ವಿಧೇಯಕ ಮಂಡನೆ : ಸಚಿವ ಶ್ರೀರಾಮುಲು

  • ಉಭಯ ಸದನಗಳಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ

ವಿಜಯಸಾಕ್ಷಿ ಸುದ್ದಿ, ಗದಗ:

‘ಇಂದು ಮುಖ್ಯಮಂತ್ರಿಗಳು, ಕಾನೂನು ಸಚಿವರು ಉಭಯ ಸದನಗಳಲ್ಲಿ ಐತಿಹಾಸಿಕ ಮತಾಂತರ ನಿಷೇಧ ವಿಧೇಯಕ ಮಂಡಿಸಲಿದ್ದಾರೆ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಂಗಳವಾರ ಗದಗನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಆಸೆ, ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡಬಾರದು ಎಂಬ ಕಾರಣದಿಂದ ಕಾಯ್ದೆ ಜಾರಿಯಾಗಲಿದೆ. ಯಾರೇ ಆಗಿದ್ದರೂ ಉಡುಗೊರೆ, ಉದ್ಯೋಗ, ಹಣ, ಇನ್ನಿತರ ಭರವಸೆಗಳನ್ನು ನೀಡಿ ಕಾನೂನು ಬಾಹಿರ ಕೆಲಸ ಮಾಡುವವರಿಗೆ ಜನರು ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುವುದು. ಒಂದು ವೇಳೆ ಬಲವಂತವಾಗಿ ಮತಾಂತರ ಮಾಡಿದಲ್ಲಿ 3 ರಿಂದ 10 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ಕಾನೂನಿನಲ್ಲಿ ಪ್ರಸ್ತಾಪವಿದೆ’ ಎಂದು ತಿಳಿಸಿದರು.

‘ಎಂಇಎಸ್ ಮಹಾ ಎಡವಟ್ಟು ಸಂಘವಾಗಿದ್ದು,
ಅವರ ಪುಂಡಾಟಕ್ಕೆ ಹೇಡಿ ಕೃತ್ಯಗಳಿಗೆ, ಆಟಗಳಿಗೆ ರಾಜ್ಯ ಸರ್ಕಾರ ಗೂಂಡಾ ಕಾಯ್ದೆ ಹಾಕುವ ನಿರ್ಧಾರ ತೆಗೆದುಕೊಂಡಿದೆ. ಎಂಇಎಸ್ ನವರದ್ದು ಇದೇ ಮೊದಲಲ್ಲ, ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂತಹ ಹೇಡಿ ಕೃತ್ಯ ಎಸಗುತ್ತಿದ್ದು, ಕೃತ್ಯ ಎಸಗಿದವರ ವಿರುದ್ಧ ಗೂಂಡಾ ಕಾಯ್ದೆ ಮೂಲಕ ಸರ್ಕಾರ ಪ್ರತ್ಯುತ್ತರ ನೀಡುತ್ತಿದೆ. ಅಲ್ಲದೇ, ಎಂಇಎಸ್ ಬ್ಯಾನ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ತಜ್ಞರ ಜೊತೆ ಪರಾಮರ್ಶಿಸುತ್ತಿದ್ದು, ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಕನ್ನಡ ನಾಡು-ನುಡಿ ಜಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಂಗೊಳ್ಳಿ ರಾಯಣ್ಣ ಅವರ ವಿಗ್ರಹವನ್ನು ಧ್ವಂಸಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಎಂಇಎಸ್ ಈ ರೀತಿ ಮಾಡಲು ಬಿಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಕೆಸರೆರಚಾಟ ನಡೆಸುವ ಬದಲು ಪ್ರತಿಯೊಬ್ಬರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಸಚಿವ ಶ್ರೀರಾಮುಲು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರವಿ ದಂಡಿನ, ಎಸ್.ಎಚ್.ಶಿವನಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆಕಾಶದಲ್ಲಿ ಕೌತುಕ; ರೈಲು ಬೋಗಿಯಂತೆ ಸಾಗಿದ ನಕ್ಷತ್ರಗಳು, ಗಾಬರಿಬಿದ್ದ ಜನರು

ವಿಜಯಸಾಕ್ಷಿ ಸುದ್ದಿ, ಗದಗ:

ಆಗಾಗ ಆಕಾಶದಲ್ಲಿ ಕೌತಕ ನಡೆಯುತ್ತಲೇ ಇರುತ್ತವೆ. ಜನರನ್ನು ನಿಬ್ಬೆರಾಗಿಸುತ್ತಲೇ ಇರುತ್ತವೆ. ಕೆಲವೊಂದು ಕೌತುಕ ಖಗೋಳ ತಜ್ಞರಿಗೆ ಸವಾಲೊಡ್ಡಿದರೆ, ಇನ್ನೂ ಕೆಲವು ಕೌತುಕದ ಹಿಂದಿನ ರಹಸ್ಯ ಬಲು ಬೇಗನೇ ತಿಳಿಯುತ್ತದೆ. ಅಂತಹದ್ದೇ ಒಂದು ಕೌತುಕ ಸೋಮವಾರ ರಾತ್ರಿ ನಡೆದಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಒಂದರ ಹಿಂದೆ ಒಂದು ಎಂಬಂತೆ ಸಾಲು ಸಾಲಾಗಿ ಸಾಗುತ್ತಿರುವ ಬೆಳ್ಳಿ ನಕ್ಷತ್ರಗಳು ಗೋಚರಗೊಂಡಿವೆ. ಅದರಂತೆ, ಗದಗ ಜಿಲ್ಲೆಯ ಕೆಲ ಭಾಗಗಳಲ್ಲಿಯೂ ಕಾಣಿಸಿಕೊಂಡಿದ್ದು, ಜನರನ್ನು ನಿಬ್ಬೆರಗುಗೊಳಿಸಿವೆ.

ಇಂತಹ ಕೌತುಕ ಕಪ್ಪತಗುಡ್ಡ ಹಾಗೂ ಗದಗ ನಗರದಲ್ಲಿ ಗೋಚರಗೊಂಡಿದ್ದು, ಜನರು ಮೂಕ ವಿಸ್ಮಿತರಾಗಿ ವೀಕ್ಷಿಸಿದರು.40ಕ್ಕೂ ಅಧಿಕ ನಕ್ಷತ್ರಗಳು ಸಾಲಾಗಿ ಸಾಗುತ್ತಿರುವುದನ್ನು ಕಂಡು ಏನಿರಬಹುದು ಎಂದು ಜನ ಕೆಲ ಕಾಲ ಗಾಬರಿಬಿದ್ದರು.

ಆಗಸದಲ್ಲಿ ಕಂಡ ಕೌತುಕದ ಬಗ್ಗೆ ಖಗೋಳ ತಜ್ಞರೇ ಸಾಲಾಗಿ ಸಾಗಿದ್ದು ನಕ್ಷತ್ರಗಳೋ ಅಥವಾ ಕೃತಕ ಉಪಗ್ರಹಗಳೋ ಎಂಬುವುದನ್ನು ಸ್ಪಷ್ಟಪಡಿಸಬೇಕಿದೆ.

ಸಾರಿಗೆ ಸಚಿವರ ‘ಕರ್ಮ’ಭೂಮಿಯಲ್ಲೇ ಇಲ್ಲ ಬಸ್ ಸೌಲಭ್ಯ! ವಿದ್ಯಾರ್ಥಿಗಳ ಪರದಾಟ

ಬಸ್‌ಗಾಗಿ ಕಾಯುವುದೇ ಸಾಹಸ; ಗೋಳು ತಪ್ಪಿಸುವರೇ ಸಚಿವ ಬಿ. ಶ್ರೀರಾಮುಲು?

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಕರ್ಮಭೂಮಿ ಗದಗ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಬಸ್‌ಗಾಗಿ ಒಂಟಿಗಾಲಲ್ಲಿ ನಿಲ್ಲಬೇಕಾದ ದುಸ್ಥಿತಿ ಇದೆ. ಶಾಲೆ-ಕಾಲೇಜುಗಳ ಸಮಯಕ್ಕೆ ಬಸ್‌ಗಳು ಬಾರದೆ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಶಾಲೆ, ಕಾಲೇಜಿನಿಂದ ಮರಳಿ ಮನೆಗೆ ಬರಲೂ ಸಮಸ್ಯೆ ಎದುರಿಸುತ್ತಿದ್ದಾರೆ.

ಹೌದು, ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಹಾಗೂ ಅಂಜುಮನ್ ಕಾಲೇಜು ಸೇರಿ ಬಹುತೇಕ ಕಾಲೇಜು ವಿದ್ಯಾರ್ಥಿಗಳ ದಿನನಿತ್ಯದ ಗೋಳಾಟವಿದು. ಈ ಎರಡು ಕಾಲೇಜುಗಳು ಗದಗ-ಮುಳಗುಂದ ರಸ್ತೆಯ ಪಕ್ಕದಲ್ಲಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಇಲ್ಲಿಗೆ ವ್ಯಾಸಂಗ ಮಾಡಲು ಬರುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಹೊರೆಗಿಂತ ಬಸ್ ಏರಿ ಕಾಲೇಜಿಗೆ ಬಂದು ಹೋಗುವುದೇ ಬಹುದೊಡ್ಡ ಸಾಹಸವಾಗಿದೆ.

ಗ್ರಾಮೀಣ ಪ್ರದೇಶಗಳಿಂದ ನಗರದ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ಸೂಕ್ತ ಬಸ್‌ಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿದಿನ ಬಸ್‌ಪಾಸ್ ಇರುವ ವಿದ್ಯಾರ್ಥಿಗಳು ಕಂಡರೆ ಸಾಕು ಸಾರಿಗೆ ಸಂಸ್ಥೆಯ ಬಸ್‌ನ ಚಾಲಕರು ಹಾಗೂ ನಿರ್ವಾಹಕರು ಬಸ್ ನಿಲ್ಲಿಸದೆ ಶರವೇಗದಲ್ಲಿ ಚಲಿಸುತ್ತಿದ್ದಾರೆ. ಅಪ್ಪಿತಪ್ಪಿ ಬಸ್ ನಿಲ್ಲಿಸಿದರೆ ಅದು ಖಾಲಿ ಇರಲಿ, ತುಂಬಿರಲಿ ಸಂಪ್ರದಾಯಕ್ಕೆ ಎಂಬಂತೆ ಒಬ್ಬಿಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಹತ್ತಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಹಣ ಕೊಟ್ಟು ಸಂಚರಿಸುವ ಪ್ರಯಾಣಿಕರು ಇದ್ದರೆ ಬಸ್ ತುಂಬಿ ತುಳುಕುತ್ತಿದ್ದರೂ, ಉಸಿರುಗಟ್ಟುವ ರೀತಿಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದಾರೆ.

ಗೋಳಾಟಕ್ಕೆ ಕೊನೆ ಇಲ್ಲವೇ?

ನಗರದ ಹೊರವಲಯದಲ್ಲಿರುವ ಕಾಲೇಜುಗಳ ಮುಂದೆ ಕೆಎಸ್‌ಆರ್‌ಟಿಸಿಯೇ ಕೋರಿಕೆಯ ಬಸ್ ನಿಲುಗಡೆ ನಾಮಫಲಕ ಹಾಕಿದ್ದರೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಸ್ ನಿಲ್ಲಿಸುತ್ತಿಲ್ಲ. ನಿಲ್ಲಿಸಿದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಬಸ್‌ಗಾಗಿ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು? ಕಾಲೇಜು ಮುಂದಿರುವ ಕೋರಿಕೆಯ ನಿಲುಗಡೆಯ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸಿ ಅನುಕೂಲ ಮಾಡಿಕೊಡುವಂತೆ ವಿದ್ಯಾರ್ಥಿಗಳು ಅಂಗಲಾಚುತ್ತಿದ್ದಾರೆ.

ಸತ್ತರೆ ಹೊಣೆ ಯಾರು?

ಗದಗ-ಹೊನ್ನಾಳ್ಳಿ ರಸ್ತೆ ಸುಧಾರಣಾ ಕಾಮಗಾರಿ ನಡೆಯುತ್ತಿದ್ದು, ನಾಗಾವಿ ಕ್ರಾಸ್‌ವರೆಗೆ ರಸ್ತೆ ಅಗಲೀಕರಣವಾಗಿದೆ. ಇದರಿಂದ ಕೋರಿಕೆಯ ನಿಲುಗಡೆ ನಾಮಫಲಕ ಇಲ್ಲವಾಗಿದೆ. ಹೀಗಾಗಿ ಸರ್ಕಾರಿ ಹಾಗೂ ಅಂಜುಮನ್ ಕಾಲೇಜು ಬಿಟ್ಟ ಬಳಿಕ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಾ ರಸ್ತೆಯ ಮೇಲೆ, ಪಕ್ಕವೇ ನಿಂತುಕೊಳ್ಳುತ್ತಿದ್ದಾರೆ. ಇದರಿಂದ ರಸ್ತೆ ಇಕ್ಕಾಟ್ಟಾಗುತ್ತಿದೆ. ಮುಳಗುಂದ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಿದ್ದು, ಶರವೇಗದಲ್ಲಿ ಬರುವ ವಾಹನಗಳಿಂದ ಅವಘಡ ಸಂಭವಿಸಿದರೆ ಯಾರು ಹೊಣೆ? ಕೂಡಲೇ ಇವೆರಡೂ ಕಾಲೇಜುಗಳ ಹತ್ತಿರ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳ ಜೀವ ಉಳಿಸಬೇಕು.

ಈ ಮಾರ್ಗದಲ್ಲಿ ಬರುವ ಪ್ರತಿ ಬಸ್‌ಗಳನ್ನು ನಿಲ್ಲಿಸುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು. ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ಅವರು ತಮ್ಮ ಕರ್ಮಭೂಮಿಯಾಗಿರುವ ಗದಗ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ನೇರ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಪ್ರತಿನಿತ್ಯ ಕಾಲೇಜು ಬಿಟ್ಟ ಬಳಿಕ ವಿದ್ಯಾರ್ಥಿಗಳು ಬಸ್ ನಿಲ್ದಾಣ ಹಾಗೂ ಊರುಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತಾ ರಸ್ತೆಯ ಮೇಲೆ ನಿಂತುಕೊಳ್ಳುತ್ತಿದ್ದಾರೆ. ಬಸ್ ನಿಲ್ಲಿಸುವಂತೆ ವಿದ್ಯಾರ್ಥಿಗಳು ಕೈ ಮಾಡಿದರೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಸ್ ನಿಲ್ಲಿಸದ ಕಾರಣ ಕೆಲವು ವಿದ್ಯಾರ್ಥಿಗಳು ನಡೆದುಕೊಂಡೇ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾರೆ. ದಯವಿಟ್ಟು ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಿ.

ಪೂರ್ಣಿಮಾ ಹೊಸಮನಿ, ಪ್ರಚಾರ್ಯರು

ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ. ಸೂಕ್ತ ಬಸ್ ಸೌಕರ್ಯ ಒದಗಿಸುವಂತೆ ಅನೇಕ ಬಾರಿ ಹೋರಾಟಗಳನ್ನು ಮಾಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಪ್ರತಿ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು.

ಗಿರೀಶ್ ನರಗುಂದಕರ್, ಎಬಿವಿಪಿ ಧಾರವಾಡ ವಿಭಾಗದ ಪ್ರಮುಖ್

ಮಿಷನ್ ಅಂತ್ಯೋದಯ ತರಬೇತಿ ಕಾರ್ಯಕ್ರಮಕ್ಕೆ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸೋಮವಾರ ನಡೆದ ಗ್ರಾಮೀಣ ಬಡತನ ನಿವಾರಣಾ ಯೋಜನೆ ಮಿಷನ್ ಅಂತ್ಯೋದಯ ಮತ್ತು ಜನರ ಅಭಿವೃದ್ಧಿ ಯೋಜನೆಗಳ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶರಣಬಸಪ್ಪ ಹಳೇಮನಿ, ಬಾಪು ಹಿರೇಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಒ ಶೈನಾಜ್ ಮುಜಾವರ್, ಸಂಪನ್ಮೂಲ ವ್ಯಕ್ತಿ ಗಂಗಮ್ಮ ನಾಯಕ್ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

error: Content is protected !!