Home Blog Page 3273

ಮಿಷನ್ ಅಂತ್ಯೋದಯ ತರಬೇತಿ ಕಾರ್ಯಕ್ರಮಕ್ಕೆ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸೋಮವಾರ ನಡೆದ ಗ್ರಾಮೀಣ ಬಡತನ ನಿವಾರಣಾ ಯೋಜನೆ ಮಿಷನ್ ಅಂತ್ಯೋದಯ ಮತ್ತು ಜನರ ಅಭಿವೃದ್ಧಿ ಯೋಜನೆಗಳ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶರಣಬಸಪ್ಪ ಹಳೇಮನಿ, ಬಾಪು ಹಿರೇಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಒ ಶೈನಾಜ್ ಮುಜಾವರ್, ಸಂಪನ್ಮೂಲ ವ್ಯಕ್ತಿ ಗಂಗಮ್ಮ ನಾಯಕ್ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

ಬೆಳಗಾವಿಯಲ್ಲಿ ಗಲಾಟೆ ಮಾಡಿದವರೆಲ್ಲ ಕಾಂಗ್ರೆಸಿಗರು!

ವಿಜಯಸಾಕ್ಷಿ ಸುದ್ದಿ, ಗದಗ:

ಬೆಳಗಾವಿಯಲ್ಲಿ ಗಲಾಟೆ ಮಾಡಿದವರೆಲ್ಲ ಕಾಂಗ್ರೆಸಿಗರು. ಗಲಭೆ ಮಾಡಿದವರಲ್ಲಿ ಕೆಲವರು ಕಿಡಿಗೇಡಿಗಳು, ಕಾಂಗ್ರೆಸ್ ಪಕ್ಷದ ಚೇಲಾಗಳಿದ್ದಾರೆ. ಹೀಗಾಗಿ ಎಮ್ಇಎಸ್ ಯಾವುದೇ ಪಕ್ಷದಲ್ಲಿದ್ರೂ ಅರೆಸ್ಟ್ ಮಾಡುವ ಕೆಲಸ ಆಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದರು.

ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರ ಮೇಲೆ ದಾಳಿಗಳಾಗಿವೆ. ನನಗೆ ಗೊತ್ತಿರುವಂತೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಕರ್ನಾಟಕದಲ್ಲಿ ಇರುವ ಕೆಲವು ಪುಂಡರು ಕುಮ್ಮಕ್ಕು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್, ಎಮ್ಇಎಸ್ ಯಾರೇ ಇದ್ದರೂ ಕ್ಷಮಿಸುವ ಪ್ರಶ್ನೆ ಇಲ್ಲ’ ಎಂದರು.

‘‌ಬೆಳಗಾವಿಯಲ್ಲಿ ಶಿವಾಜಿ, ರಾಯಣ್ಣ ನಮಗಾಗಿ ಪ್ರಾಣತ್ಯಾಗ ಮಾಡಿದ್ದು, ಯಾವುದೇ ವ್ಯಕ್ತಿ, ಸಂಘಟನೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳತ್ತೇವೆ.
ಮಹಾನ್ ನಾಯಕರಿಗೆ ಅಗೌರವ ತೋರಿದವರನ್ನು ಅರೆಸ್ಟ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ದುಷ್ಕೃತ್ಯಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು

ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಗಲಾಟೆ ಮಾಡುವ ಸಂಪ್ರದಾಯವನ್ನು ಎಂಇಎಸ್ ಮೈಗೂಡಿಸಿಕೊಂಡಿದೆ.
ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸದನ ನಡೆಯುತ್ತಿದ್ದು, ಗಲಾಟೆ ಸಂಪ್ರದಾಯ ಕನ್ನಡಿಗರು ಸಹಿಸಲ್ಲ.

ಕಾಂಗ್ರೆಸ್ ರ‌್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಅಧಿವೇಶನ ನಡೆಯಲು ಕಾಂಗ್ರೆಸ್ ನಾಯಕರು ಬಿಡುತ್ತಿಲ್ಲ. ರಾಜಕಾರಣದಲ್ಲಿ ಕಾಂಗ್ರೆಸ್ ನಾಟಕ ಜೋರಾಗಿದೆ.
ಅಧಿವೇಶನ ನಡೆಸಲು ಕಾಂಗ್ರೆಸ್ ನಾಯಕರು ಅನುವು ಮಾಡಿಕೊಡಬೇಕು. ಉತ್ತರ ಕರ್ನಾಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಜನರಿಗೆ ತೋರಿಸುವ ಸಲುವಾಗಿ ಟ್ರ್ಯಾಕ್ಟರ್, ಎತ್ತಿನ ಬಂಡಿ ತರುವ ನಾಟಕ ಮಾಡುತ್ತಿದ್ದೀರಿ’ ಎಂದು ಟಾಂಗ್ ನೀಡಿದರು.

ಎಂಇಎಸ್ ಬ್ಯಾನ್ ಗೆ ಕನ್ನಡ ಪರ ಸಂಘಟನೆಗಳು ಆಗ್ರಹ ವಿಚಾರದ ಕುರಿತು ಮಾತನಾಡಿ ‘ಎಂಇಎಸ್ ಬ್ಯಾನ್ ಮಾಡುವ ವಿಚಾರಕ್ಕೆ ಸಂಪೂರ್ಣ ಬೆಂಬಲವಿದೆ.
ಬ್ಯಾನ್ ಮಾಡುವುದರಿಂದ ಅನುಕೂಲ ಆಗುತ್ತದೆ.
ಈ ಬಗ್ಗೆ ಕೇಂದ್ರಕ್ಕೆ ಸಾಕಷ್ಟು ವರದಿಯನ್ನೂ ನೀಡಿದ್ದೇವೆ ಎಂದು ಹೇಳಿದರು.

‘ಸಿಎಂ ಬದಲಾವಣೆ ವಿಚಾರವನ್ನು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾವುದೇ ಬದಲಾವಣೆ ಇಲ್ಲ. ಕೇವಲ ಊಹಾಪೋಹ. ಯಾರೋ ಮಾತಾಡ್ತಾರೆ. ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆಯಲ್ಲಿ ನಡೆಯಲಿದೆ ಎಂದು ನಮ್ಮ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್‌ ಮೆಣಸಿನಕಾಯಿ ಇದ್ದರು.

ಸಚಿವ ಶ್ರೀರಾಮುಲು ಭರ್ಜರಿ ಪ್ರಚಾರ, ಅನಿಲ್ ಸಾಥ್

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದ 35ನೇ ವಾರ್ಡ್ ನ ಕಳಸಾಪುರ ರಸ್ತೆಯ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಉಷಾ‌ ಮಹೇಶ್ ದಾಸರ ಪರವಾಗಿ ಸೋಮವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಭರ್ಜರಿ ಪ್ರಚಾರ ನಡೆಸಿದರು. ಪಾಂಡುರಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ನಾನು ಹಾಗೂ ಸಿ.ಸಿಪಾಟೀಲರು ಗದಗ ಜಿಲ್ಲಾ ಉಸ್ತುವಾರಿ ಸಚಿರವಾಗಿದ್ದಾಗ ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. 2008-09ರಲ್ಲಿನ ಗದಗ ಜಿಲ್ಲೆಯ ಪರಿಸ್ಥಿತಿ ಹಾಗೂ ಈಗಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿ ಎಂದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ. ಆದರೆ, ಇಲ್ಲಿನ ನಗರಸಭೆಯಲ್ಲಿ ಮಾತ್ರ ಸೋಲುತ್ತಿದ್ದೇವೆ‌. ಹೀಗಾಗಿ 35ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಯಾಗಿರುವ ಉಷಾ ದಾಸರ ಅವರನ್ನು ಗೆಲ್ಲಿಸಿಕೊಡಬೇಕು. ಅಲ್ಲದೇ, ನಗರಸಭೆ ಚುನಾವಣೆಯಲ್ಲಿ ನೀಡುವ ಮತ 2023ರಲ್ಲಿ ಅನಿಲ್‌ ಮೆಣಸಿನಕಾಯಿ ಎಂಎಲ್ಎ ಆಗಲಿದ್ದಾರೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.

ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ಕಾಂಗ್ರೆಸ್ ನವರಿಂದ ನಗರಸಭೆಯಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಂದ ಆಯ್ಕೆಯಾಗಿ ಹೋದ ಕಾಂಗ್ರೆಸ್ ಸದಸ್ಯರು ಜನರ ಕೈಗೆ ಸಿಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬೇರೆ ವಾರ್ಡ್ ಗೆ ಹೋಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅವಳಿ ನಗರದಲ್ಲಿ ಬದಲಾವಣೆ ಆಗಬೇಕಿದೆ. ಚುನಾವಣೆ ಸಂದರ್ಭದಲ್ಲಿ ಅಲೆದಾಡುವ ಪಾಟೀಲರನ್ನು ದೂರ ಇಡುವ ಮೂಲಕ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಕಲಿಸಬೇಕು. ಅಲ್ಲದೇ, ಸಚಿವರಾದ ಶ್ರೀರಾಮುಲು, ಸಿ.ಸಿ.ಪಾಟೀಲರು ಪ್ರಚಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನವರಿಗೆ ಲೈಟ್ ಹತ್ತಿವೆ ಎಂದು ಕಿಡಿಕಾರಿದರು.

ಸಚಿವ ಶ್ರೀರಾಮುಲು ಅವರಿಗೆ ಬಿಜೆಪಿ ಅಭ್ಯರ್ಥಿ ಉಷಾ ದಾಸರ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ರಾಜು ಕುರುಡಗಿ, ಎಂ.ಎಸ್.ಕರಿಗೌಡ್ರ, ಸಿದ್ದು ಪಲ್ಲೇದ, ಮಹೇಶ್ ದಾಸರ, ಅಮರೇಶ್ ಬೆಟಗೇರಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗದಗನ ಜನತೆ ಇಬ್ಬರು ಪಾಟೀಲರನ್ನಷ್ಟೇ ನೋಡಿದ್ದಾರೆ

13ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದ 13ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಗೂಳಪ್ಪ (ಮುತ್ತು) ಹನುಮಂತಪ್ಪ ಮುಶಿಗೇರಿ ಅವರ ಪರವಾಗಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.

ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ಅನಿಲ್ ಅವರು, 13ನೇ ವಾರ್ಡ್ ನಲ್ಲಿರುವ ಸಮಸ್ಯೆಗಳನ್ನು ಮತದಾರರಿಂದ ಆಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಅವರು ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ಅವಳಿ ನಗರದಲ್ಲಿ ಕಾಂಗ್ರೆಸ್ಸಿಗರ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೀರು, ಚರಂಡಿ, ರಸ್ತೆ, ವಿದ್ಯುತ್ ಸಮಸ್ಯೆ ತಪ್ಪುತ್ತಿಲ್ಲ. ಈ ಹಿಂದೆ ನಗರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಅಲ್ಲದೇ, ಅವಳಿ ನಗರದ ಜನ ಇಬ್ಬರು ಪಾಟೀಲರನ್ನಷ್ಟೇ ನೋಡಿದ್ದಾರೆ.

ಆದರೆ ನಮ್ಮ ಸಿ ಸಿ ಪಾಟೀಲರು ಹಾಗಲ್ಲ, ಅಭಿವೃದ್ಧಿ ಪರ ಪಾಟೀಲರು. ಜನರ ಬಳಿಯೇ ಬಂದು ಜನರ ಸಮಸ್ಯೆ ಹಾಗೂ ಸಲಹೆ ಪಡೆದು ಯಾವ ರೀತಿ ಅವಳಿ ನಗರವನ್ನು ಅಭಿವೃದ್ಧಿ ಮಾಡಬಹುದು ಎಂಬ ನೀಲ ನಕ್ಷೆ ರೆಡಿ ಮಾಡಿ ಮಾದರಿ ನಗರವನ್ನಾಗಿ ಮಾಡಲು ಶ್ರಮಿಸುವ ಪಾಟೀಲರು ‌ಆಗಿದ್ದಾರೆ ಎಂದ ಅನಿಲ‌ ಮೆಣಸಿನಕಾಯಿ, ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಬಂದು ಮತ ಕೇಳುವ ಅಭ್ಯರ್ಥಿಗಳಿಗೆ ಮತ ನೀಡಬೇಡಿ. ಅವಳಿ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎನ್ನುವ ಬಿಜೆಪಿ ಅಭ್ಯರ್ಥಿಗಳಿಗೆ ಮತ‌ ನೀಡಬೇಕು’ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಪತಿ ಉಡುಪಿ, ಪರಮೇಶ ಲಮಾಣಿ, ಕೋಟ್ನಿಕಲ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲಿಯೇ ಸಾವು

0

ವಿಜಯಸಾಕ್ಷಿ ಸುದ್ದಿ, ಶಲವಡಿ;

ದ್ವಿ ಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ‌-ನರಗುಂದ ರಸ್ತೆಯ ಶಲವಡಿ ಸಮೀಪ ನಡೆದಿದೆ.

ಗುರುಶಾಂತ್ ನಾವಳ್ಳಿ (26) ಮೃತ ದುರ್ದೈವಿಯಾಗಿದ್ದಾನೆ. ಈರಣ್ಣ ಷಣ್ಮುಖಪ್ಪ ನಾಯ್ಕರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸ್ಥಳೀಯರು ಹೇಳುವ ಪ್ರಕಾರ ಮೃತ ವ್ಯಕ್ತಿ ಗುರುಶಾಂತ್ ಶಲವಡಿಯಿಂದ ಜಮೀನಿಗೆ ಮೆಣಸಿನಕಾಯಿ ಕಾಯಲು ನರಗುಂದ ಕಡೆ ಹೋಗುತ್ತಿದ್ದನಂತೆ. ಇನ್ನೊಬ್ಬ ಬೈಕ್ ಸವಾರ ಜಮೀನು ಕೆಲಸ ಮುಗಿಸಿಕೊಂಡು ಊರಿಗೆ ಬರುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಅಕ್ತಂಗಿಯರಿಗೆ ತೊಂದ್ರೆ ಆಗ್ಬಾರ್ದು ಅಂತಾ ಮತಾಂತರ ಕಾಯ್ದೆ ತರ್ತಿದ್ದೇವೆ ; ಈಶ್ವರಪ್ಪ

ವಿಜಯಸಾಕ್ಷಿ ಸುದ್ದಿ, ಗದಗ:

‘ನಮ್ಮ ಸ್ವಂತ ಅಕ್ಕ ತಂಗಿಯರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದಲೇ ಬಿಗಿ ಮತಾಂತರ ಕಾಯ್ದೆ ತರಲಾಗುತ್ತದೆ. ಹಿಂದೂ ಸಮಾಜಕ್ಕೆ ತೊಂದರೆ ಆಗಬಾರದು ಎಂದು ಕಾಯ್ದೆ ಮಾಡುತ್ತಿದ್ದರೆ; ಬೆರೆಕೆಯವರು ಮಾತ್ರ ವಿರೋಧ ಮಾಡುತ್ತಿದ್ದಾರೆ’
ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

ಶನಿವಾರ ರಾತ್ರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಪೂರ್ಣ ಬಲವಂತದ ಮತಾಂತರವೋ, ಆಸೆ ಆಮಿಷದ ಮತಾಂತರವೋ, ಲವ್‌ ಜೆಹಾದಿಯೋ
ಮತಾಂತರ ಕಾಯ್ದೆ ವಿರೋಧ ಮಾಡುತ್ತಿರುವವರ ಕುಟುಂಬದಲ್ಲಿ ಆದಾಗ ಮಾತ್ರ ಅದರ ತೀವ್ರತೆ ಎಷ್ಟೆಂಬುದು ಅವರಿಗೆ ಗೊತ್ತಾಗುತ್ತದೆ’ ತಿರುಗೇಟು ನೀಡಿದರು.

ಅಧಿಕಾರಕ್ಕೆ ಬಂದರೆ ಕಾಯ್ದೆ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಧೂಳೀಪಟ ಆಗಲಿದೆ. ಅವರ ಸರ್ಕಾರ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ಮುಸಲ್ಮಾನರನ್ನು ತೃಪ್ತಿಪಡಿಸುವ ಯೋಜನೆಯಲ್ಲಿರುವ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೂ ಇಲ್ಲ. ಸಿದ್ದರಾಮಯ್ಯ ಅವರ ಸಿಎಂ ಕನಸು ನನಸಾಗುವುದಿಲ್ಲ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಗದಗ ಗ್ರಾಮೀಣ ಹಿಂದುಳಿದ ವರ್ಗಗಳ ತಾಲೂಕಾಧ್ಯಕ್ಷ ರವಿ ವಗ್ಗನವರ,ರವಿ ಶಿದ್ಲಿಂಗ್ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.

ರಿಕ್ಷಾಗೆ ಕಾರು ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ವಿಜಯಸಾಕ್ಷಿ ಸುದ್ದಿ, ಗದಗ:

ಗೂಡ್ಸ್ ರಿಕ್ಷಾಗೆ ಇನೋವಾ ಕಾರು ಡಿಕ್ಕಿ ಹೊಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಗದಗ-ಕಳಸಾಪೂರ ರಸ್ತೆಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ದುರ್ಘಟನೆಯಲ್ಲಿ ಮೃತಪಟ್ಟಿರುವ ರವಿ‌ ಶಿಂಧೆ (30) ಹಾಗೂ ಗಾಯಗೊಂಡಿರುವ ನಿಖಿಲ್ ರಾಯಭಾಗಿ ಇಬ್ಬರೂ ಗದಗ ಶಹರ ನಿವಾಸಿಯಾಗಿದ್ದಾರೆ.

ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಹೊರಟಿದ್ದ ಕಾರು, ಕಳಸಾಪೂರದಿಂದ ಗದಗ ಕಡೆ ಬರುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಗಾಯಗೊಂಡಿರುವ ನಿಖಿಲ್ ನನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದು ಅರ್ಧ ಗಂಟೆ ಆದರೂ 112 ಹಾಗೂ 108 ವಾಹನಗಳು ಬಂದಿಲ್ಲ ಎಂದು ಸ್ಥಳದಲ್ಲಿದ್ದ‌ವರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣೆಯಲ್ಲಿ ಯುವಕನ ಸಾವಿಗೆ ಹೊಸ ಟ್ವಿಸ್ಟ್: ‘ಸಂತೋಷ’ ಕಳೆದುಕೊಂಡ ಕುಟುಂಬದ ಬೆನ್ನಿಗೆ ನಿಂತ ಡಿ.ಆರ್. ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ:

ಸಂತೋಷ ಕರಕಿಕಟ್ಟಿ

ದೀಪಾವಳಿ ಅಮಾವಾಸ್ಯೆಯಂದು‌ ಶಹರ ಠಾಣೆಯಲ್ಲಿ ಸಂತೋಷ್ ಕರಕಿಕಟ್ಟಿ ಎನ್ನುವ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಆತ ಹೃದಯಾಘಾತದಿಂದ ಸತ್ತಿದ್ದಾನೆ ಎಂದು ಪೊಲೀಸರು ಹೇಳಿದರೆ, ಯುವಕನಿಗೆ ಪಿಟ್ಸ್ ಬಂದಿತ್ತೆಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದರು.

ಆದರೆ, ಪೊಲೀಸರ ಹೊಡೆತದಿಂದಲೇ ಸಂತೋಷ ಕೊನೆಯುಸಿರೆಳೆದಿದ್ದಾನೆ ಎನ್ನುವ ಅನುಮಾನ ಗದಗ-ಬೆಟಗೇರಿ ಜನರನ್ನು ಬಲವಾಗಿ ಕಾಡಿತ್ತು. ಇದಕ್ಕೆ ಪೂರಕವಾಗಿ ಪೊಲೀಸರ ಹೊಡೆತದಿಂದ ನೋವು ತಡೆಯಲಾಗುತ್ತಿಲ್ಲ ಎಂದು ಹೇಳಿರುವ ಸಂತೋಷನದು ಎನ್ನಲಾದ ಆಡಿಯೋ ಒಂದು ಹರಿದಾಡಿ ಮತ್ತಷ್ಟು ಆತಂಕ ಮೂಡಿಸಿತ್ತು. ಅದೂ ಸಾಲದೆಂಬಂತೆ, ಆಸ್ಪತ್ರೆಯಲ್ಲಿ ಮಗನ ಶವದ ಮುಂದೆಯೇ ಅನಸಮ್ಮನವರಿಗೆ ಪೊಲೀಸರು ಗದರಿಸಿ ಹೊರಗೆ ಕಳುಹಿಸಿದ ವೀಡಿಯೋ ಕೂಡ ಬಹಿರಂಗವಾಗಿತ್ತು.

ಆತ ಪಿಟ್ಸ್ ಅಥವಾ ಹೃದಯಾಘಾತದಿಂದ ಸತ್ತಿದ್ದರೆ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಬೇಕಿತ್ತು? ಹೂಳಬೇಕಿದ್ದ ಶವವನ್ನು ತರಾತುರಿಯಲ್ಲಿ ಸುಟ್ಟಿದ್ದೇಕೆ ಎನ್ನುವ ಪ್ರಶ್ನೆಗಳಿಗೂ ಪೊಲೀಸರ ಬಳಿ ಉತ್ತರವಿಲ್ಲ. ಸಾಕ್ಷ್ಯನಾಶಕ್ಕಾಗಿ ಇಷ್ಟನ್ನೆಲ್ಲ ಮಾಡಿದರೇ? ಗೊತ್ತಿಲ್ಲ.
ಇಡೀ ಪ್ರಕರಣದ ತನಿಖೆಯಲ್ಲಿ ಪೊಲೀಸರ ಅಸಹಕಾರ ಎದ್ದು ಕಾಣುತ್ತಿದೆ. ಸಂತೋಷ ಠಾಣೆಯಲ್ಲೇ ಮೃತಪಟ್ಟಿದ್ದಾನೆ ಎಂದು ಆತನ ತಾಯಿ ಅನಸಮ್ಮ ಎಸ್ಪಿ ಅವರ ಮುಂದೆಯೇ ಹೇಳಿದ್ದರೂ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.

ಹೀಗಾಗಿ, ನೊಂದ ಮಹಿಳೆ ನಿರ್ವಾಹವಿಲ್ಲದೆ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರಲ್ಲಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ನಗರಸಭೆ ಚುನಾವಣೆಯ ಭರಾಟೆಯಲ್ಲೂ‌ ನೊಂದ ಕುಟುಂಬಕ್ಕೆ ‌ನ್ಯಾಯ ದೊರಕಿಸಿಕೊಡಲು ಮುಂದಾಗಿರುವ ಡಿ.ಆರ್. ಪಾಟೀಲರು, ಎಸ್ಪಿ ಅವರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಲು ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಕಬ್ಜಾದಾರರಿಗೆ ಕಿರುಕುಳ ಕೊಟ್ಟ ಆರೋಪದಲ್ಲಿ ಆದರ್ಶನಗರದ ಸಂತೋಷ ಕರಕಿಕಟ್ಟಿಯನ್ನು ಶಹರ ಠಾಣೆಯ ಪೊಲೀಸರು ಕರೆ ಮಾಡಿ ಠಾಣೆಗೆ ಕರೆಸಿಕೊಂಡಿದ್ದರು. ಆಗ ಕರ್ತವ್ಯದಲ್ಲಿದ್ದ ಒಂದಿಬ್ಬರು ಪೊಲೀಸರು ಸಂತೋಷನನ್ನು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಮೇಲೆ ಠಾಣೆಯ ಹೊರಗಡೆ ಕಟ್ಟೆಯ ಮೇಲೆ ಕುಳಿತಿದ್ದಾಗ ತನ್ನ ಆಪ್ತನಿಗೆ ಕರೆ ಮಾಡಿದ್ದ ಸಂತೋಷ, ಪೊಲೀಸರು ಥಳಿಸಿದ ಬಗ್ಗೆ ವಿವರ ಕೊಟ್ಟಿದ್ದ. ನೋವು ತಡೆಯಲಾಗುತ್ತಿಲ್ಲ, ಬಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದ್ದ. ಆ ಆಡಿಯೋ ಕೂಡ ವೈರಲ್ ಆಗಿತ್ತು.

ಆಮೇಲೆ ಮೃತ ಸಂತೋಷನ ತಾಯಿಗೆ ಕರೆ ಮಾಡಿದ ಪೊಲೀಸರು ಅರ್ಜೆಂಟ್ ಜಿಲ್ಲಾ ಆಸ್ಪತ್ರೆಗೆ ಬನ್ನಿ ಅಂತ ಹೇಳಿ ಕರೆ ಕಟ್ ಮಾಡಿದ್ದರು. ತಾಯಿ ಅನಸಮ್ಮ ಹಾಗೂ ಸಹೋದರ ಶಿವಕುಮಾರ್ ಆಸ್ಪತ್ರೆಗೆ ಹೋದಾಗ ಅಲ್ಲಿ‌, ತಾಯಿ‌ ಅನಸಮ್ಮನನ್ನು ಪೊಲೀಸರ ತಡೆದು, ಸಂತೋಷನ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡಾಗ, ಯಾಕ್ರೀ ಯಪ್ಪಾ ಏನಾಗೈತೀ‌ ನನ್ನ ಮಗ್ಗ ಅಂದಾಗ‌, ಅಂವ ಸತ್ತಾನ‌ ಅಂತ ಪೊಲೀಸರು ಕಿವಿಗಪ್ಪಳಿಸುವಂತೆ, ಎದೆಯೇ ಒಡೆದು ಹೋಗುವಂತೆ ಕರ್ಕಶವಾಗಿ ಹೇಳಿದ್ದಾರೆ. ಗಾಬರಿಬಿದ್ದ ತಾಯಿ ಶವಾಗಾರದಲ್ಲಿದ್ದ ಮೃತದೇಹ ನೋಡಿದ್ದಾಳೆ. ತಾಯಿಗೆ ದುಃಖ ಉಮ್ಮಳಿಸಿ‌ ಬಂದಾಗ, ಪೊಲೀಸನೊಬ್ಬ ಆಕೆಯನ್ನು ಗದರಿಸಿ, ಹೊರಗೆ ಹೋಗುವಂತೆ ಕೈಸನ್ನೆ ಮಾಡಿದ್ದ. ಆ ವಿಡಿಯೋ ಕೂಡ ಬಹಿರಂಗವಾಗಿ ಪೊಲೀಸರ ವಿರುದ್ಧವೇ ಎಲ್ಲರ ದೃಷ್ಟಿ ತಿರುಗುವಂತೆ ಮಾಡಿತ್ತು.

ವಿಜಯಸಾಕ್ಷಿ ಕೂಡ ಆ ಕುಟುಂಬಕ್ಕೆ ಆದ ಅನ್ಯಾಯದ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ಎಚ್ಚೆತ್ತುಕೊಳ್ತಾರಾ ಪೊಲೀಸರು?

ಪೊಲೀಸರಿಗೆ ಪಾಪಪ್ರಜ್ಞೆಯೇ ಇದ್ದಂತಿಲ್ಲ. ಜನ ಏನು ಭಾವಿಸುತ್ತಾರೋ ಎಂಬ ಬಗ್ಗೆಯೂ ಕಾಳಜಿಯಿಲ್ಲ. ಥಳಿಸಿದ ಪೊಲೀಸರ ವಿರುದ್ಧ ಒಂದು ಸಣ್ಣ ಇಲಾಖಾ ತನಿಖೆಗೂ ಆದೇಶಿಸದೆ, ಏನೂ ಆಗೇ ಇಲ್ಲ ಎಂಬಂತೆ ಪೊಲೀಸ್ ಇಲಾಖೆ ಪ್ರಕರಣಕ್ಕೆ ಎಳ್ಳು-ನೀರು ಬಿಟ್ಟಿದೆ. ಸಂತೋಷನನ್ನು ಥಳಿಸಿದ ಪೊಲೀಸರನ್ನು ರಕ್ಷಣೆ ಮಾಡಲು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಸಂತೋಷನ ತಾಯಿ ಕೂಡ ಮಗನ ಸಾವಿಗೆ ಕಾರಣವಾದ ಪೊಲೀಸರಿಗೆ ಹಿಡಿಶಾಪ ಹಾಕಿದ್ದಳು.
ಈಗ ಸ್ವತಃ ಮಾಜಿ ಶಾಸಕ ಡಿ ಆರ್ ಪಾಟೀಲ ಅವರೇ ನೊಂದ ಕುಟುಂಬಕ್ಕೆ ‌ನ್ಯಾಯ ಕೊಡಿಸಲು ಮುಂದಾಗಿದ್ದು, ಪೊಲೀಸ್ ಇಲಾಖೆಗೆ ದಿಗಿಲು ಮೂಡಿಸಿದೆ. ಮುಚ್ಚಿ ಹೋಗಲಿದ್ದ ಪ್ರಕರಣಕ್ಕೆ ಜೀವ ಬಂದಿದೆ.

ಈಗಲಾದರೂ ಸಿಬ್ಬಂದಿ ರಕ್ಷಣೆಯ ಹೊಣೆಗಾರಿಕೆ ಅಷ್ಟೇ ಅಲ್ಲ, ಸಾರ್ವಜನಿಕರ ಅದರಲ್ಲೂ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹೊಣೆಗಾರಿಕೆಯೂ ಜಿಲ್ಲಾ ಪೊಲೀಸ್ ಇಲಾಖೆಯ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ. ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಸ್ತಾರಾ ಎಂಬುದನ್ನು ಕಾದು‌ ನೋಡಬೇಕಿದೆ.

ನಾಮಪತ್ರ ಹಿಂಪಡೆದ 19 ಅಭ್ಯರ್ಥಿಗಳು: 146 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದದ್ದರಿಂದ 19 ಮಂದಿ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 146 ಜನ ಕಣದಲ್ಲಿ ಉಳಿದಿದ್ದಾರೆ.

ವಾರ್ಡ್ ನಂ.25ನ ಬಿಜೆಪಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದ ರವಿ ಸಿದ್ದಲಿಂಗ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ರವಿ ಸಿದ್ಧಲಿಂಗ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಹಾಗೆಯೇ ಬಹುತೇಕ ವಾರ್ಡ್’ಗಳಲ್ಲಿ ಕಾಂಗ್ರೆಸ್‌ನ ಗೆಲುವಿಗೆ ಅಡ್ಡಿಯಾಗಿದ್ದ ಪಕ್ಷೇತರರ ಮನವೊಲಿಸಲು ಮುಖಂಡರು ಯಶಸ್ವಿಯಾಗಿದ್ದಾರೆ. ಆದರೂ ಕಾಂಗ್ರೆಸ್‌ನ ಕೆಲ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಪಕ್ಷದ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದ್ದಾರೆ.

ನಾಮಪತ್ರ ಹಿಂಪಡೆದವರ ವಿವರ:

ವಾರ್ಡ್ ನಂ.2 ಗೋಕಾವಿ ಪ್ರಶಾಂತ್ ಪರಶುರಾಮ,
ವಾರ್ಡ್ ನಂ.3 ಅಶೋಕ ಹೇಮಣ್ಣಮುಳಗುಂದ , ವಾರ್ಡ್ ನಂ.6 ನಂದಿನಿ ಮಂಜುನಾಥ ಮುಳಗುಂದ ಹಾಗೂ ಓಂಕಾರೇಶ್ವರಿ ಗೋಕಾಕ,
ವಾರ್ಡ್ ನಂ.7 ತಿಮ್ಮಯ್ಯ ರಂಗಯ್ಯ ಕೊಂಗತಿ,
ವಾರ್ಡ್ ನಂ.10 ಇಮ್ತಿಯಾಜ್ಅಹ್ಮದ್ ರಜಾಕಸಾಬ ಮಾನ್ವಿ ಹಾಗೂ ಮಹೇಶ ಗದುಗಿನ, ವಾರ್ಡ್ ನಂ.13 ಶ್ರೀಕಾಂತ್ ಶ್ರೀನಿವಾಸ್ ನಾಯರ, ವಾರ್ಡ್ ನಂ.16 ರಾಘವೇಂದ್ರ ಪರಾಪುರ ಹಾಗೂ ಲಕ್ಷ್ಮಣ ಹಳ್ಳಿಕೇರಿ ವಾರ್ಡ್ ನಂ.18 ಕಮಾನಗಾರ ಅಬ್ದುಲ್ ಖಾದರ್ ಜೈಲಾನಿ ಮಹ್ಮದ್ ಇಸ್ಮಾಯಿಲ್,

ವಾರ್ಡ್ ನಂ.21 ಶಿವಲಿಂಗಪ್ಪ ಮಗ್ಗಪ್ಪ ತುರಖಾನಿ,
ವಾರ್ಡ್ ನಂ.22 ಫಾರುಕ್ ಮುಲ್ಲಾ,
ವಾರ್ಡ್ ನಂ.23 ಮುಲ್ಲಾ ಮಹ್ಮದ್ ಶಾಹಿದ್, ವಾರ್ಡ್ ನಂ.24 ರಂಗಪ್ಪ ಯರಗುಡಿ,

ವಾರ್ಡ್ ನಂ.25 ರವಿ ಸಿದ್ದಲಿಂಗ ಹಾಗೂ ಪ್ರಫುಲ್ ದಾಸ್ ಪುಣೇಕರ್, ವಾರ್ಡ್ ನಂ.27 ಮಾಲನಬಿ ಫಕ್ರುದ್ದೀನ್ ಹೊಸಳ್ಳಿ, ವಾರ್ಡ್ ನಂ.34 ಸೀತಲ್ ಸೋಮಪ್ಪ ಲಮಾಣಿ

ಎಂಇಎಸ್, ಶಿವಸೇನೆ ಪುಂಡಾಟ; ಮರಾಠರಿಗೆ ಸಚಿವ ಪಾಟೀಲ್ ಖಡಕ್ ಎಚ್ಚರಿಕೆ

ವಿಕೋಪಕ್ಕೆ ಹೋದ್ರೆ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತೆ: ಸಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ:

‘ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಕರ್ನಾಟಕದ ಇಬ್ಬರು ಹೆಮ್ಮೆಯ ವ್ಯಕ್ತಿಗಳ ಮೂರ್ತಿಗಳನ್ನು ವಿಕಾರಗೊಳಿಸುವ ಎಂಇಎಸ್ ಪುಂಡರಿಗೆ ನಮ್ಮ ಸರ್ಕಾರ ಸರಿಯಾದ ಪಾಠ ಕಲಿಸುತ್ತದೆ. ಮರಾಠಿಗರು ಇನ್ನಾದರೂ ಇಂತಹ ಪುಂಡಾಟಿಕೆ ಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ಶನಿವಾರ ಗದಗನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಪ್ರತಿವರ್ಷ ಬೆಳಗಾವಿ ಅಧಿವೇಶನ ನಡೆಯುವ ವೇಳೆ ಎಂಇಎಸ್ ನವರು ಇಂತಹ ಕಿತಾಪತಿ ಮಾಡುತ್ತಲೇ ಬರುತ್ತಿದ್ದು, ಈ ವರ್ಷ ಆ ಚಾಳಿಯನ್ನು ಮುಂದುವರೆಸಿದ್ದಾರೆ’ ಎಂದರು.

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೇಕೆಂದವರಿಗೆ ಬಿಟ್ಟು ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಬೆಳಗಾವಿ ಅಧಿವೇಶನ ಅತ್ಯಂತ ಯಶಸ್ವಿಯಾದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತೆ ಎಂಬ ಕಾರಣಕ್ಕೆ ಎಂಇಎಸ್ ನವರು ಈ ರೀತಿ ಮಾಡುತ್ತಿದ್ದಾರೆ. ಎಂಇಎಸ್ ನವರು ಉದ್ದೇಶ ಪೂರ್ವಕವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದು, ಅವರು ಅರ್ಥ ಮಾಡಿಕೊಳ್ಳಬೇಕು. ಆದರೆ, ಕರ್ನಾಟಕದವರು ಶಾಂತಿಪ್ರಿಯರು ಅವರಂತೆ ನಾವು ಮಾಡಬಾರದು’ ಎಂದು ಮನವಿ ಮಾಡಿಕೊಂಡರು.

ಶಿವಸೇನಾ ಕಾರ್ಯಕರ್ತರ ಕಲ್ಲು ತೂರಾಟದ ಕುರಿತು ಪ್ರತಿಕ್ರಿಯಿಸಿದ ಅವರು ‘ಕರ್ನಾಟಕದ ಕಾರುಗಳು ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರದ ಕಾರುಗಳು ಕರ್ನಾಟಕದಲ್ಲಿ ಓಡಾಡುತ್ತವೆ. ಓಡಾಡುತ್ತವೆ. ಅವರು ಅಲ್ಲಿ ತೊಂದರೆ ಮಾಡಿದರೆ, ಇಲ್ಲಿಯ ಅವರ ಜನಕ್ಕೆ ತೊಂದರೆ ಆಗುತ್ತದೆ ಎಂಬ ಪರಿಕಲ್ಪನೆ ಇರಬೇಕು. ಅಲ್ಲಿ ಅವರು ಕಲ್ಲು ತೂರಿದ್ದಾರೆಂದು ನಮ್ಮವರು ಕಲ್ಲು ತೂರಿ ಅಂತಾ ಹೇಳುವುದಿಲ್ಲ. ವಿಕೋಪಕ್ಕೆ ಹೋದಾಗ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತದೆ. ಮರಾಠಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಉಪಸ್ಥಿತರಿದ್ದರು.

error: Content is protected !!