ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದ 13ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಗೂಳಪ್ಪ (ಮುತ್ತು) ಹನುಮಂತಪ್ಪ ಮುಶಿಗೇರಿ ಅವರ ಪರವಾಗಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.
ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ಅನಿಲ್ ಅವರು, 13ನೇ ವಾರ್ಡ್ ನಲ್ಲಿರುವ ಸಮಸ್ಯೆಗಳನ್ನು ಮತದಾರರಿಂದ ಆಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಅವರು ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ಅವಳಿ ನಗರದಲ್ಲಿ ಕಾಂಗ್ರೆಸ್ಸಿಗರ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೀರು, ಚರಂಡಿ, ರಸ್ತೆ, ವಿದ್ಯುತ್ ಸಮಸ್ಯೆ ತಪ್ಪುತ್ತಿಲ್ಲ. ಈ ಹಿಂದೆ ನಗರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಅಲ್ಲದೇ, ಅವಳಿ ನಗರದ ಜನ ಇಬ್ಬರು ಪಾಟೀಲರನ್ನಷ್ಟೇ ನೋಡಿದ್ದಾರೆ.
ಆದರೆ ನಮ್ಮ ಸಿ ಸಿ ಪಾಟೀಲರು ಹಾಗಲ್ಲ, ಅಭಿವೃದ್ಧಿ ಪರ ಪಾಟೀಲರು. ಜನರ ಬಳಿಯೇ ಬಂದು ಜನರ ಸಮಸ್ಯೆ ಹಾಗೂ ಸಲಹೆ ಪಡೆದು ಯಾವ ರೀತಿ ಅವಳಿ ನಗರವನ್ನು ಅಭಿವೃದ್ಧಿ ಮಾಡಬಹುದು ಎಂಬ ನೀಲ ನಕ್ಷೆ ರೆಡಿ ಮಾಡಿ ಮಾದರಿ ನಗರವನ್ನಾಗಿ ಮಾಡಲು ಶ್ರಮಿಸುವ ಪಾಟೀಲರು ಆಗಿದ್ದಾರೆ ಎಂದ ಅನಿಲ ಮೆಣಸಿನಕಾಯಿ, ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಬಂದು ಮತ ಕೇಳುವ ಅಭ್ಯರ್ಥಿಗಳಿಗೆ ಮತ ನೀಡಬೇಡಿ. ಅವಳಿ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎನ್ನುವ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು’ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಪತಿ ಉಡುಪಿ, ಪರಮೇಶ ಲಮಾಣಿ, ಕೋಟ್ನಿಕಲ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಸ್ಥಳೀಯರು ಹೇಳುವ ಪ್ರಕಾರ ಮೃತ ವ್ಯಕ್ತಿ ಗುರುಶಾಂತ್ ಶಲವಡಿಯಿಂದ ಜಮೀನಿಗೆ ಮೆಣಸಿನಕಾಯಿ ಕಾಯಲು ನರಗುಂದ ಕಡೆ ಹೋಗುತ್ತಿದ್ದನಂತೆ. ಇನ್ನೊಬ್ಬ ಬೈಕ್ ಸವಾರ ಜಮೀನು ಕೆಲಸ ಮುಗಿಸಿಕೊಂಡು ಊರಿಗೆ ಬರುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಮ್ಮ ಸ್ವಂತ ಅಕ್ಕ ತಂಗಿಯರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದಲೇ ಬಿಗಿ ಮತಾಂತರ ಕಾಯ್ದೆ ತರಲಾಗುತ್ತದೆ. ಹಿಂದೂ ಸಮಾಜಕ್ಕೆ ತೊಂದರೆ ಆಗಬಾರದು ಎಂದು ಕಾಯ್ದೆ ಮಾಡುತ್ತಿದ್ದರೆ; ಬೆರೆಕೆಯವರು ಮಾತ್ರ ವಿರೋಧ ಮಾಡುತ್ತಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಶನಿವಾರ ರಾತ್ರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಪೂರ್ಣ ಬಲವಂತದ ಮತಾಂತರವೋ, ಆಸೆ ಆಮಿಷದ ಮತಾಂತರವೋ, ಲವ್ ಜೆಹಾದಿಯೋ ಮತಾಂತರ ಕಾಯ್ದೆ ವಿರೋಧ ಮಾಡುತ್ತಿರುವವರ ಕುಟುಂಬದಲ್ಲಿ ಆದಾಗ ಮಾತ್ರ ಅದರ ತೀವ್ರತೆ ಎಷ್ಟೆಂಬುದು ಅವರಿಗೆ ಗೊತ್ತಾಗುತ್ತದೆ’ ತಿರುಗೇಟು ನೀಡಿದರು.
ಅಧಿಕಾರಕ್ಕೆ ಬಂದರೆ ಕಾಯ್ದೆ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಧೂಳೀಪಟ ಆಗಲಿದೆ. ಅವರ ಸರ್ಕಾರ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ಮುಸಲ್ಮಾನರನ್ನು ತೃಪ್ತಿಪಡಿಸುವ ಯೋಜನೆಯಲ್ಲಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ. ಸಿದ್ದರಾಮಯ್ಯ ಅವರ ಸಿಎಂ ಕನಸು ನನಸಾಗುವುದಿಲ್ಲ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಗದಗ ಗ್ರಾಮೀಣ ಹಿಂದುಳಿದ ವರ್ಗಗಳ ತಾಲೂಕಾಧ್ಯಕ್ಷ ರವಿ ವಗ್ಗನವರ,ರವಿ ಶಿದ್ಲಿಂಗ್ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.
ಗೂಡ್ಸ್ ರಿಕ್ಷಾಗೆ ಇನೋವಾ ಕಾರು ಡಿಕ್ಕಿ ಹೊಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಗದಗ-ಕಳಸಾಪೂರ ರಸ್ತೆಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ದುರ್ಘಟನೆಯಲ್ಲಿ ಮೃತಪಟ್ಟಿರುವ ರವಿ ಶಿಂಧೆ (30) ಹಾಗೂ ಗಾಯಗೊಂಡಿರುವ ನಿಖಿಲ್ ರಾಯಭಾಗಿ ಇಬ್ಬರೂ ಗದಗ ಶಹರ ನಿವಾಸಿಯಾಗಿದ್ದಾರೆ.
ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಹೊರಟಿದ್ದ ಕಾರು, ಕಳಸಾಪೂರದಿಂದ ಗದಗ ಕಡೆ ಬರುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಗಾಯಗೊಂಡಿರುವ ನಿಖಿಲ್ ನನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ನಡೆದು ಅರ್ಧ ಗಂಟೆ ಆದರೂ 112 ಹಾಗೂ 108 ವಾಹನಗಳು ಬಂದಿಲ್ಲ ಎಂದು ಸ್ಥಳದಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀಪಾವಳಿ ಅಮಾವಾಸ್ಯೆಯಂದು ಶಹರ ಠಾಣೆಯಲ್ಲಿ ಸಂತೋಷ್ ಕರಕಿಕಟ್ಟಿ ಎನ್ನುವ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆತ ಹೃದಯಾಘಾತದಿಂದ ಸತ್ತಿದ್ದಾನೆ ಎಂದು ಪೊಲೀಸರು ಹೇಳಿದರೆ, ಯುವಕನಿಗೆ ಪಿಟ್ಸ್ ಬಂದಿತ್ತೆಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದರು.
ಆದರೆ, ಪೊಲೀಸರ ಹೊಡೆತದಿಂದಲೇ ಸಂತೋಷ ಕೊನೆಯುಸಿರೆಳೆದಿದ್ದಾನೆ ಎನ್ನುವ ಅನುಮಾನ ಗದಗ-ಬೆಟಗೇರಿ ಜನರನ್ನು ಬಲವಾಗಿ ಕಾಡಿತ್ತು. ಇದಕ್ಕೆ ಪೂರಕವಾಗಿ ಪೊಲೀಸರ ಹೊಡೆತದಿಂದ ನೋವು ತಡೆಯಲಾಗುತ್ತಿಲ್ಲ ಎಂದು ಹೇಳಿರುವ ಸಂತೋಷನದು ಎನ್ನಲಾದ ಆಡಿಯೋ ಒಂದು ಹರಿದಾಡಿ ಮತ್ತಷ್ಟು ಆತಂಕ ಮೂಡಿಸಿತ್ತು. ಅದೂ ಸಾಲದೆಂಬಂತೆ, ಆಸ್ಪತ್ರೆಯಲ್ಲಿ ಮಗನ ಶವದ ಮುಂದೆಯೇ ಅನಸಮ್ಮನವರಿಗೆ ಪೊಲೀಸರು ಗದರಿಸಿ ಹೊರಗೆ ಕಳುಹಿಸಿದ ವೀಡಿಯೋ ಕೂಡ ಬಹಿರಂಗವಾಗಿತ್ತು.
ಆತ ಪಿಟ್ಸ್ ಅಥವಾ ಹೃದಯಾಘಾತದಿಂದ ಸತ್ತಿದ್ದರೆ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಬೇಕಿತ್ತು? ಹೂಳಬೇಕಿದ್ದ ಶವವನ್ನು ತರಾತುರಿಯಲ್ಲಿ ಸುಟ್ಟಿದ್ದೇಕೆ ಎನ್ನುವ ಪ್ರಶ್ನೆಗಳಿಗೂ ಪೊಲೀಸರ ಬಳಿ ಉತ್ತರವಿಲ್ಲ. ಸಾಕ್ಷ್ಯನಾಶಕ್ಕಾಗಿ ಇಷ್ಟನ್ನೆಲ್ಲ ಮಾಡಿದರೇ? ಗೊತ್ತಿಲ್ಲ. ಇಡೀ ಪ್ರಕರಣದ ತನಿಖೆಯಲ್ಲಿ ಪೊಲೀಸರ ಅಸಹಕಾರ ಎದ್ದು ಕಾಣುತ್ತಿದೆ. ಸಂತೋಷ ಠಾಣೆಯಲ್ಲೇ ಮೃತಪಟ್ಟಿದ್ದಾನೆ ಎಂದು ಆತನ ತಾಯಿ ಅನಸಮ್ಮ ಎಸ್ಪಿ ಅವರ ಮುಂದೆಯೇ ಹೇಳಿದ್ದರೂ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.
ಹೀಗಾಗಿ, ನೊಂದ ಮಹಿಳೆ ನಿರ್ವಾಹವಿಲ್ಲದೆ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರಲ್ಲಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ನಗರಸಭೆ ಚುನಾವಣೆಯ ಭರಾಟೆಯಲ್ಲೂ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಿರುವ ಡಿ.ಆರ್. ಪಾಟೀಲರು, ಎಸ್ಪಿ ಅವರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಲು ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ
ಕಬ್ಜಾದಾರರಿಗೆ ಕಿರುಕುಳ ಕೊಟ್ಟ ಆರೋಪದಲ್ಲಿ ಆದರ್ಶನಗರದ ಸಂತೋಷ ಕರಕಿಕಟ್ಟಿಯನ್ನು ಶಹರ ಠಾಣೆಯ ಪೊಲೀಸರು ಕರೆ ಮಾಡಿ ಠಾಣೆಗೆ ಕರೆಸಿಕೊಂಡಿದ್ದರು. ಆಗ ಕರ್ತವ್ಯದಲ್ಲಿದ್ದ ಒಂದಿಬ್ಬರು ಪೊಲೀಸರು ಸಂತೋಷನನ್ನು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಮೇಲೆ ಠಾಣೆಯ ಹೊರಗಡೆ ಕಟ್ಟೆಯ ಮೇಲೆ ಕುಳಿತಿದ್ದಾಗ ತನ್ನ ಆಪ್ತನಿಗೆ ಕರೆ ಮಾಡಿದ್ದ ಸಂತೋಷ, ಪೊಲೀಸರು ಥಳಿಸಿದ ಬಗ್ಗೆ ವಿವರ ಕೊಟ್ಟಿದ್ದ. ನೋವು ತಡೆಯಲಾಗುತ್ತಿಲ್ಲ, ಬಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದ್ದ. ಆ ಆಡಿಯೋ ಕೂಡ ವೈರಲ್ ಆಗಿತ್ತು.
ಆಮೇಲೆ ಮೃತ ಸಂತೋಷನ ತಾಯಿಗೆ ಕರೆ ಮಾಡಿದ ಪೊಲೀಸರು ಅರ್ಜೆಂಟ್ ಜಿಲ್ಲಾ ಆಸ್ಪತ್ರೆಗೆ ಬನ್ನಿ ಅಂತ ಹೇಳಿ ಕರೆ ಕಟ್ ಮಾಡಿದ್ದರು. ತಾಯಿ ಅನಸಮ್ಮ ಹಾಗೂ ಸಹೋದರ ಶಿವಕುಮಾರ್ ಆಸ್ಪತ್ರೆಗೆ ಹೋದಾಗ ಅಲ್ಲಿ, ತಾಯಿ ಅನಸಮ್ಮನನ್ನು ಪೊಲೀಸರ ತಡೆದು, ಸಂತೋಷನ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡಾಗ, ಯಾಕ್ರೀ ಯಪ್ಪಾ ಏನಾಗೈತೀ ನನ್ನ ಮಗ್ಗ ಅಂದಾಗ, ಅಂವ ಸತ್ತಾನ ಅಂತ ಪೊಲೀಸರು ಕಿವಿಗಪ್ಪಳಿಸುವಂತೆ, ಎದೆಯೇ ಒಡೆದು ಹೋಗುವಂತೆ ಕರ್ಕಶವಾಗಿ ಹೇಳಿದ್ದಾರೆ. ಗಾಬರಿಬಿದ್ದ ತಾಯಿ ಶವಾಗಾರದಲ್ಲಿದ್ದ ಮೃತದೇಹ ನೋಡಿದ್ದಾಳೆ. ತಾಯಿಗೆ ದುಃಖ ಉಮ್ಮಳಿಸಿ ಬಂದಾಗ, ಪೊಲೀಸನೊಬ್ಬ ಆಕೆಯನ್ನು ಗದರಿಸಿ, ಹೊರಗೆ ಹೋಗುವಂತೆ ಕೈಸನ್ನೆ ಮಾಡಿದ್ದ. ಆ ವಿಡಿಯೋ ಕೂಡ ಬಹಿರಂಗವಾಗಿ ಪೊಲೀಸರ ವಿರುದ್ಧವೇ ಎಲ್ಲರ ದೃಷ್ಟಿ ತಿರುಗುವಂತೆ ಮಾಡಿತ್ತು.
ವಿಜಯಸಾಕ್ಷಿ ಕೂಡ ಆ ಕುಟುಂಬಕ್ಕೆ ಆದ ಅನ್ಯಾಯದ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಎಚ್ಚೆತ್ತುಕೊಳ್ತಾರಾ ಪೊಲೀಸರು?
ಪೊಲೀಸರಿಗೆ ಪಾಪಪ್ರಜ್ಞೆಯೇ ಇದ್ದಂತಿಲ್ಲ. ಜನ ಏನು ಭಾವಿಸುತ್ತಾರೋ ಎಂಬ ಬಗ್ಗೆಯೂ ಕಾಳಜಿಯಿಲ್ಲ. ಥಳಿಸಿದ ಪೊಲೀಸರ ವಿರುದ್ಧ ಒಂದು ಸಣ್ಣ ಇಲಾಖಾ ತನಿಖೆಗೂ ಆದೇಶಿಸದೆ, ಏನೂ ಆಗೇ ಇಲ್ಲ ಎಂಬಂತೆ ಪೊಲೀಸ್ ಇಲಾಖೆ ಪ್ರಕರಣಕ್ಕೆ ಎಳ್ಳು-ನೀರು ಬಿಟ್ಟಿದೆ. ಸಂತೋಷನನ್ನು ಥಳಿಸಿದ ಪೊಲೀಸರನ್ನು ರಕ್ಷಣೆ ಮಾಡಲು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಸಂತೋಷನ ತಾಯಿ ಕೂಡ ಮಗನ ಸಾವಿಗೆ ಕಾರಣವಾದ ಪೊಲೀಸರಿಗೆ ಹಿಡಿಶಾಪ ಹಾಕಿದ್ದಳು. ಈಗ ಸ್ವತಃ ಮಾಜಿ ಶಾಸಕ ಡಿ ಆರ್ ಪಾಟೀಲ ಅವರೇ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದು, ಪೊಲೀಸ್ ಇಲಾಖೆಗೆ ದಿಗಿಲು ಮೂಡಿಸಿದೆ. ಮುಚ್ಚಿ ಹೋಗಲಿದ್ದ ಪ್ರಕರಣಕ್ಕೆ ಜೀವ ಬಂದಿದೆ.
ಈಗಲಾದರೂ ಸಿಬ್ಬಂದಿ ರಕ್ಷಣೆಯ ಹೊಣೆಗಾರಿಕೆ ಅಷ್ಟೇ ಅಲ್ಲ, ಸಾರ್ವಜನಿಕರ ಅದರಲ್ಲೂ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹೊಣೆಗಾರಿಕೆಯೂ ಜಿಲ್ಲಾ ಪೊಲೀಸ್ ಇಲಾಖೆಯ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ. ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದದ್ದರಿಂದ 19 ಮಂದಿ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 146 ಜನ ಕಣದಲ್ಲಿ ಉಳಿದಿದ್ದಾರೆ.
ವಾರ್ಡ್ ನಂ.25ನ ಬಿಜೆಪಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದ ರವಿ ಸಿದ್ದಲಿಂಗ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ರವಿ ಸಿದ್ಧಲಿಂಗ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಹಾಗೆಯೇ ಬಹುತೇಕ ವಾರ್ಡ್’ಗಳಲ್ಲಿ ಕಾಂಗ್ರೆಸ್‌ನ ಗೆಲುವಿಗೆ ಅಡ್ಡಿಯಾಗಿದ್ದ ಪಕ್ಷೇತರರ ಮನವೊಲಿಸಲು ಮುಖಂಡರು ಯಶಸ್ವಿಯಾಗಿದ್ದಾರೆ. ಆದರೂ ಕಾಂಗ್ರೆಸ್‌ನ ಕೆಲ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಪಕ್ಷದ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದ್ದಾರೆ.
ವಿಕೋಪಕ್ಕೆ ಹೋದ್ರೆ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತೆ: ಸಿ.ಸಿ.ಪಾಟೀಲ್
ವಿಜಯಸಾಕ್ಷಿ ಸುದ್ದಿ, ಗದಗ:
‘ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಕರ್ನಾಟಕದ ಇಬ್ಬರು ಹೆಮ್ಮೆಯ ವ್ಯಕ್ತಿಗಳ ಮೂರ್ತಿಗಳನ್ನು ವಿಕಾರಗೊಳಿಸುವ ಎಂಇಎಸ್ ಪುಂಡರಿಗೆ ನಮ್ಮ ಸರ್ಕಾರ ಸರಿಯಾದ ಪಾಠ ಕಲಿಸುತ್ತದೆ. ಮರಾಠಿಗರು ಇನ್ನಾದರೂ ಇಂತಹ ಪುಂಡಾಟಿಕೆ ಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.
ಶನಿವಾರ ಗದಗನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಪ್ರತಿವರ್ಷ ಬೆಳಗಾವಿ ಅಧಿವೇಶನ ನಡೆಯುವ ವೇಳೆ ಎಂಇಎಸ್ ನವರು ಇಂತಹ ಕಿತಾಪತಿ ಮಾಡುತ್ತಲೇ ಬರುತ್ತಿದ್ದು, ಈ ವರ್ಷ ಆ ಚಾಳಿಯನ್ನು ಮುಂದುವರೆಸಿದ್ದಾರೆ’ ಎಂದರು.
‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೇಕೆಂದವರಿಗೆ ಬಿಟ್ಟು ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಬೆಳಗಾವಿ ಅಧಿವೇಶನ ಅತ್ಯಂತ ಯಶಸ್ವಿಯಾದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತೆ ಎಂಬ ಕಾರಣಕ್ಕೆ ಎಂಇಎಸ್ ನವರು ಈ ರೀತಿ ಮಾಡುತ್ತಿದ್ದಾರೆ. ಎಂಇಎಸ್ ನವರು ಉದ್ದೇಶ ಪೂರ್ವಕವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದು, ಅವರು ಅರ್ಥ ಮಾಡಿಕೊಳ್ಳಬೇಕು. ಆದರೆ, ಕರ್ನಾಟಕದವರು ಶಾಂತಿಪ್ರಿಯರು ಅವರಂತೆ ನಾವು ಮಾಡಬಾರದು’ ಎಂದು ಮನವಿ ಮಾಡಿಕೊಂಡರು.
ಶಿವಸೇನಾ ಕಾರ್ಯಕರ್ತರ ಕಲ್ಲು ತೂರಾಟದ ಕುರಿತು ಪ್ರತಿಕ್ರಿಯಿಸಿದ ಅವರು ‘ಕರ್ನಾಟಕದ ಕಾರುಗಳು ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರದ ಕಾರುಗಳು ಕರ್ನಾಟಕದಲ್ಲಿ ಓಡಾಡುತ್ತವೆ. ಓಡಾಡುತ್ತವೆ. ಅವರು ಅಲ್ಲಿ ತೊಂದರೆ ಮಾಡಿದರೆ, ಇಲ್ಲಿಯ ಅವರ ಜನಕ್ಕೆ ತೊಂದರೆ ಆಗುತ್ತದೆ ಎಂಬ ಪರಿಕಲ್ಪನೆ ಇರಬೇಕು. ಅಲ್ಲಿ ಅವರು ಕಲ್ಲು ತೂರಿದ್ದಾರೆಂದು ನಮ್ಮವರು ಕಲ್ಲು ತೂರಿ ಅಂತಾ ಹೇಳುವುದಿಲ್ಲ. ವಿಕೋಪಕ್ಕೆ ಹೋದಾಗ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತದೆ. ಮರಾಠಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಉಪಸ್ಥಿತರಿದ್ದರು.
ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಸೆ, ಆಮಿಷಗಳನ್ನೊಡ್ಡಿ ಮತ ಪಡೆಯುವುದನ್ನು ಕೇಳಿದ್ದೇವೆ.. ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಮತದಾರರಿಂದಲೇ ಹಣ ಹಾಕಿಸಿಕೊಳ್ಳುವ ಮೂಲಕ ಮತ ನೀಡಿ ಎಂದು ಇನ್ನುಳಿದ ಅಭ್ಯರ್ಥಿಗಳಿಗಿಂತ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ.
ಹೌದು, ಡಿಸೆಂಬರ್ 27 ರಂದು ನಡೆಯುವ ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ 15ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಶ್ವನಾಥ ಶೀರಿ ಅವರ ಪ್ರಚಾರ ವೈಖರಿ ಇದು. ಚುನಾವಣೆ ಗೆಲ್ಲಲ್ಲು ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿ ಮತ ಪಡೆಯುತ್ತಿರುವ ಹೊತ್ತಲ್ಲಿ ವಿಶ್ವನಾಥ ಅವರ ವಿನೂತನ ಪ್ರಚಾರಕ್ಕಿಳಿದಿದ್ದಾರೆ. ಇವರ ಪ್ರಚಾರ ಶೈಲಿಗೆ ಅವಳಿ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಕರಪತ್ರ ಹಂಚುತ್ತಿರುವ ವಿಶ್ವನಾಥ ಅವರು ‘ನಾನು ಮತದಾರರಿಗೆ ಹಣ ಕೊಟ್ಟು ಮತ ಪಡೆಯುವುದಿಲ್ಲ. ಚುನಾವಣಾ ವೆಚ್ಚಕ್ಕಾಗಿ ಮತದಾರರಿಂದಲೇ ಹಣದ ಜೊತೆಗೆ ಮತವನ್ನು ದಾನವಾಗಿ ಪಡೆಯಲು ಇಚ್ಛಿಸಿದ್ದೇನೆ. ಇದಕ್ಕಾಗಿ ಬ್ಯಾಂಕ್ ಖಾತೆ ವಿವರ ಹಾಗೂ ಡಿಜಿಟಲ್ ಮಾಧ್ಯಮದ ವಿವರ ನೀಡಿ, ಹಣ ಪಾವತಿಸಿದ ನಂತರ ಆ ವಿವರವನ್ನು ಗೂಗಲ್ ಫಾರ್ಮ್ ನಲ್ಲಿ ಅದನ್ನು ನಮೂದಿಸಿಲು ವಿನಂತಿಸಿದ್ದಾರೆ.
ಎಂಇಎಸ್‌ನ ಕೆಲವರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವುದು ಖಂಡನೀಯ. ಶೀಘ್ರವೇ ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಸಯ್ಯದ್ ಖಾಲಿದ್ ಕೊಪ್ಪಳ ಆಗ್ರಹಿಸಿದ್ದಾರೆ.
ಬಹುಭಾಷಾ ಸಾಮರಸ್ಯ ಹೊಂದಿರುವುದು ಕನ್ನಡಿಗರ ದೌರ್ಬಲ್ಯವಲ್ಲ, ಇದು ಕನ್ನಡಿಗರ ಔದಾರ್ಯವಾಗಿದೆ. ಕೂಡಲೇ ಕನ್ನಡ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೊಪ್ಪಳ ಒತ್ತಾಯಿಸಿದ್ದಾರೆ.