ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಗದಗ ಸಿಇಎನ್ ಠಾಣೆಯ ಪೊಲೀಸರು, ಅನಧಿಕೃತವಾಗಿ ಬಸ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿ, 8 ಕೆಜಿ 285 ಗ್ರಾಂ. ಗಾಂಜಾ ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 26ರಂದು ಮಧ್ಯಾಹ್ನ 4 ಗಂಟೆಯ ಸುಮಾರಿಗೆ ಆರೋಪಿತರು ತಮ್ಮ ಸ್ವಂತ ಲಾಭದ ಉದ್ದೇಶದಿಂದ ಅನಧಿಕೃತವಾಗಿ 8,28,500 ರೂ. ಬೆಲೆಬಾಳುವ 8 ಕೆಜಿ 285 ಗ್ರಾಂ. ಒಣಗಿದ ಎಲೆ, ಕಾಂಡ, ಬೀಜಗಳಿರುವ ಗಾಂಜಾವನ್ನು ಟ್ರಾವೆಲ್ ಬ್ಯಾಗ್‌ನಲ್ಲಿಟ್ಟುಕೊಂಡು ಬಳ್ಳಾರಿ-ಗದಗ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಈ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಅಪರಾಧ 0032/2023, Narcotic Drugs and Psychotropic Substances Act-1985 ಕಾಯ್ದೆ, ಕಲಂ 20(ಬಿ)(2)(ಬಿ) ಅನ್ವಯ ಪ್ರಕರಣ ದಾಖಲಾಗಿದೆ.
ತಾನು ಲೋಕಾಯುಕ್ತ ಡಿವೈಎಸ್‌ಪಿ ಆಗಿದ್ದು, ಕೇಳಿದ ಹಣ ನೀಡದಿದ್ದರೆ ನಿಮ್ಮ ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸುತ್ತೇವೆ ಎಂದು ಫೋನ್ ಕರೆಯ ಮೂಲಕ ಬೆದರಿಕೆಯೊಡ್ಡಿ, ಹಣ ನೀಡುವಂತೆ ಒತ್ತಾಯಿಸಿದ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಪ್ರಕರಣದ ಮೊದಲನೇ ಆರೋಪಿಯಾಗಿರುವ ಅಪರಿಚಿತನೊಬ್ಬ ಏಪ್ರಿಲ್ 25ರ ಮಧ್ಯಾಹ್ನ 3.53ರಿಂದ ರಾತ್ರಿ 8.32ರ ನಡುವಿನ ಅವಧಿಯಲ್ಲಿ ಗದಗ ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ-ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಬಳ್ಳಾರಿ ಮೂಲದ ಚಂದ್ರಶೇಖರ ಬಸಪ್ಪ ನಾಗಶೆಟ್ಟಿಯವರ ಮೊಬೈಲ್ ಸಂಖ್ಯೆಗೆ 26 ಬಾರಿ ಕರೆ ಮಾಡಿದ್ದರು.
ತಾನು ಲೋಕಾಯುಕ್ತದಲ್ಲಿ ಡಿವೈಎಸ್‌ಪಿ ಆಗಿದ್ದು, ಆನ್‌ಲೈನ್ ಮೂಲಕ 80 ಸಾವಿರ ರೂ. ಹಣವನ್ನು ಕೊಡಿ, ಇಲ್ಲವಾದರೆ ನಿಮ್ಮ ಕಚೇರಿ ಹಾಗೂ ಮನೆಯ ಮೇಲೆ ದಾಳಿ ಮಾಡುತ್ತೇವೆ ಎಂದು 2ನೇ ಆರೋಪಿ ರಾಜಕುಮಾರ್ ಪ್ರಸಾದ ಹಾಗೂ 3ನೇ ಆರೋಪಿ ರಾಮರಾಮ್ ಪಾಟೀಲ ಎಂಬುವರ ಮೊಬೈಲ್ ನಂಬರ್ ನೀಡಿದ್ದರು.
ಇವರ ಮೊಬೈಲ್ ನಂಬರ್‌ಗೆ ಹಣವನ್ನು ಫೋನ್‌ಪೇ ಮಾಡಿ ಎಂದಿದ್ದಲ್ಲದೆ, ಗದಗ ಶಹರ ಪೊಲೀಸ್ ಠಾಣೆಯ ಎಸ್‌ಐ ಆಗಿರುವ 4ನೇ ಆರೋಪಿ ಸಿಂಧೆ ಅವರ ಮೊಬೈಲ್ ನಂಬರ್ ಕೂಡ ನೀಡಿದ್ದರು.
ಎಸ್‌ಐ ಸಿಂಧೆ ಅವರ ನಂಬರ್‌ಗೆ ಸಂಪರ್ಕಿಸಿದಾಗ, ಹಣವನ್ನು ತನ್ನ ಬಳಿ ನೀಡಿ, ತಾನು ಫೋನ್ ಮಾಡಿದವರಿಗೆ ಹಣ ತಲುಪಿಸುತ್ತೇನೆ ಎಂದು ಒತ್ತಾಯದಿಂದ ಹಣ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರಿಗೆ ಸಂಬಂಧಿಸಿ, 0055/2023, ಐಪಿಸಿ ಸೆಕ್ಷನ್ 1860, ಕಲಂ 384,511ರ ಪ್ರಕಾರ ದೂರು ದಾಖಲಿಸಿಕೊಂಡಿರುವ ಶಹರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಯುವ ಕಾಂಗ್ರೆಸ್ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ಅವರ ನೇತೃತ್ವದಲ್ಲಿ ನಗರದ 33ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ಕೆ ಪಾಟೀಲ್ ಪರವಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೈಯದ್ ಖಾಲಿದ್ ಕೊಪ್ಪಳ, ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಗದಗ ಕ್ಷೇತ್ರದ ಅಭಿವೃದ್ಧಿ ಕೇವಲ ಎಚ್ ಕೆ ಪಾಟೀಲ್ ಅವರಿಂದ ಮಾತ್ರ ಸಾಧ್ಯ ಎಂದರು.
ಕ್ಷೇತ್ರದ ಜನರು ಈ ಬಾರಿ ಬೃಹತ್ ಮತಗಳ ಅಂತರದಿಂದ ಅವರನ್ನು ಗೆಲ್ಲಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಎಂ. ಸಿ ಶೇಖ, ಯುವ ಕಾಂಗ್ರೆಸ್ ಮುಖಂಡ ದೀಪುಗೌಡ, ನೂರಬ್ಬನವರ್, ಮುಂಬರೆಡ್ಡಿ, ತೌಶಿಫ್ ಶಿರಹಟ್ಟಿ, ಜಮೀರ್ ಮಟ್ಟಿ, ಸಮೀರ್, ಅಝರ್, ನಿಯಾಜ್ ಸೇರಿದಂತೆ ಯುವಕರು ಇದ್ದರು ಎಂದು ಪ್ರಕಟಣೆ ತಿಳಿಸಿದೆ.
ನಕಲಿ ಬಂಗಾರವನ್ನು ಅಡವಿಟ್ಟು ಬ್ಯಾಂಕೊಂದರಿಂದ ಲಕ್ಷಾಂತರ ರೂ. ಸಾಲ ಪಡೆದು ಮೋಸವೆಸಗಿದ ಬಗ್ಗೆ ದಾಸರಗಲ್ಲಿಯ ದತ್ತಾತ್ರೇಯ ಬಾಕಳೆ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
2022ರ ಏ.25 ಹಾಗೂ 26ರಂದು ಆರೋಪಿತರಾದ ದತ್ತಾತ್ರೇಯ ಬಾಕಳೆ, ಸುಷ್ಮಾ ದತ್ತಾತ್ರೇಯ ಬಾಕಳೆ ಇವರು ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಗೋಲ್ಡ್ ಲೋನ್ ಪಡೆಯುವ ಉದ್ದೇಶದಿಂದ ಗದಗ ನಗರದ ಪಟೇಲ್ ರೋಡ್, ತಿಲಕ್ ಪಾರ್ಕ್‌ನ ಬೇವಿನ ಪ್ಲಾಜಾದಲ್ಲಿರುವ ಐಡಿಎಫ್‌ಸಿ ಬ್ಯಾಂಕ್‌ಗೆ ತೆರಳಿದ್ದರು.
3 ಹಾಗೂ 4ನೇ ಆರೋಪಿತರಾದ ಬ್ಯಾಂಕ್‌ನ ಆಭರಣ ಪರೀಕ್ಷಕರಾದ ಗದುಗಿನ ಮೋಹನ ಶೇಷಪ್ಪ ಪ್ಯಾಟಿ, ಅರುಣ ವೆರ್ಣೇಕರ ಇವರನ್ನು ಆಭರಣ ಪರೀಕ್ಷೆಗಾಗಿ ಬ್ಯಾಂಕ್‌ಗೆ ಕರೆಯಿಸಿದಾಗ 1 ಹಾಗೂ 2ನೇ ಆರೋಪಿಗಳೊಂದಿಗೆ ಶಾಮೀಲಾಗಿ, ಸದರಿ ಆಭರಣಗಳು 20/21 ಕ್ಯಾರಟ್‌ನ ಬಂಗಾರದ ಆಭರಣಗಳೆಂದು ಸುಳ್ಳು ಪ್ರಮಾಣಪತ್ರ ನೀಡಿದ್ದರು.
ಹೀಗೆ ಒಟ್ಟೂ 408 ಗ್ರಾಂ. ನಕಲಿ ಬಂಗಾರದ ಆಭರಣಗಳನ್ನು ಅಡವಿಟ್ಟು ಬ್ಯಾಂಕಿನಿಂದ ಒಟ್ಟೂ 14,07,600 ರೂ. ಗೋಲ್ಡ್ ಲೋನ್ ಪಡೆದು ಬ್ಯಾಂಕ್‌ಗೆ ಮೋಸವೆಸಗಿದ್ದಾರೆ ಎಂದು ಬ್ಯಾಂಕ್‌ನ ಮ್ಯಾನೇಜರ್, ಬೆಟಗೇರಿಯ ಶಿವಾನಂದ ಗವಿಸಿದ್ದಪ್ಪ ಹಂದ್ರಾಳ ಮೇಲಧಿಕಾರಿಗಳ ಆದೇಶದಂತೆ ದೂರು ನೀಡಿದ್ದಾರೆ.
0051/2023, IPC 1860ರ ಕಲಂ 120ಬಿ, 197,198,420,34,36 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಾರ್ಡ ನಂ.17 ಮತ್ತು 18ರ ಬಿಜೆಪಿ ಯುವ ಧುರೀಣ ಸುನೀಲ ಬಾರಕೇರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಪಕ್ಷದ ಕಾರ್ಯಾಲಯದಲ್ಲಿ ಶಾಸಕ ಎಚ್ ಕೆ ಪಾಟೀಲರು ಸುನೀಲ ಅವರಿಗೆ ಮಾಲೆ ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. ಗದಗ ಬೆಟಗೇರಿ ಶಹರ ಕಾಂಗ್ರೆಸ್ ಅಧ್ಯಕ್ಷ ಬಿ ಬಿ ಅಸೂಟಿ, ನಗರಸಭೆ ಸದಸ್ಯರಾದ ಜೂನಸಾಬ ಆರ್ ನಮಾಜಿ, ಮುನ್ನಾ ರೇಶ್ಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚುನಾವಣೆಯ ನಿಮಿತ್ತ ಹೊರಡಿಸಿರುವ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಿಂದಿಯೋರ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಗದುಗಿನ ಪಂಚಾಕ್ಷರಿ ವೀರಶಟ್ಟರ ವಿರುದ್ಧ ದೂರು ದಾಖಲಿಸಲಾಗಿದೆ.
ಮಾರ್ಚ್.30ರಂದು ವಾಟ್ಸಪ್‌ನಲ್ಲಿ ಬಿಜೆಪಿ ಪಕ್ಷದ ಪರವಾಗಿ 600 ತಾಸಿನಲ್ಲಿ ತೋರಿಸುತ್ತೇವೆ ಬಿಜೆಪಿ ಶಕ್ತಿಯನ್ನು ಎಂಬ ಸಂದೇಶವನ್ನು ಅವರು ರವಾನಿಸಿದ್ದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಹೊರಡಿಸಿರುವ ಮಾದರಿ ನೀತಿ ಸಂಹಿತೆಯನ್ನು ಪಾಲಿಸದೇ, ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮೊಬೈಲ್‌ನಿಂದ ವಾಟ್ಸಪ್‌ನಲ್ಲಿ ಸಂದೇಶ ಕಳಿಸಿ, ತಮ್ಮ ಕರ್ತವ್ಯವನ್ನು ಹೊರತುಪಡಿಸಿ ಚುನಾವಣಾ ಪ್ರಚಾರ ಕೈಗೊಂಡಿದ್ದರು.
0098/2023 ಕಲಂ-171-(ಸಿ),(ಎಫ್)ಐಪಿಸಿ ಹಾಗೂ 123(2) ಆರ್.ಪಿ ಕಾಯ್ದೆಯ ಕಲಂಗಳಡಿ ಅಗತ್ಯ ಕ್ರಮ ಜರುಗಿಸುವಂತೆ ಚುನಾವಣಾ ಕರ್ತವ್ಯನಿರತ ಅಧಿಕಾರಿ ಮಂಜುನಾಥ ಪರಶುರಾಮ ಗುಳೇದ ದೂರು ನೀಡಿದ್ದರು.
ತತ್ಸಂಬಂಧ ಗದಗ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಹಂದಿಗೋಳ ಗ್ರಾಮದಲ್ಲಿ ಬಿಜೆಪಿ ಸೇರಿದ್ದ ನೂರಾರು ಕಾರ್ಯಕರ್ತರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್‌ನ ಯುವ ನಾಯಕ ಸಂತೋಷ ಯಾವಗಲ್ ನೇತೃತ್ವದಲ್ಲಿ ಮಂಗಳವಾರ ಸಂಜೆ ಚಿಕ್ಕಹಂದಿಗೋಳ ಗ್ರಾಮದ ನಿಂಗಪ್ಪ ಹೆಬಸೂರು, ರವಿ ಕಲ್ಲಾಪೂರ, ಕನಕಪ್ಪ ಪೂಜಾರ ಸೇರಿದಂತೆ ಅನೇಕ ಯುವಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ ದ್ಯಾವನೂರು, ದಾದಾಪೀರ ಅಣ್ಣಿಗೇರಿ ಹಾಗೂ ರವಿ ಮೆಟಗುಡ್ಡ ಸೇರಿದಂತೆ ಗ್ರಾಮದ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
ರೋಣ ವಿಧಾನಸಭಾ ಮತಕ್ಷೇತ್ರಕ್ಕೆ ಕೆಆರ್‌ಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಮಂಜುನಾಥ ಗುರಿಕಾರ ತಮ್ಮ ನಾಮಪತ್ರವನ್ನು ಹಿಂಪಡೆದು, ತಮ್ಮ ಬೆಂಬಲಿಗರೊಂದಿಗೆ ಸೋಮವಾರ ಸಂಜೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್. ಪಾಟೀಲ, ಮಂಜುನಾಥ ಗುರಿಕಾರರವರು ತಮ್ಮ ನಾಮಪತ್ರವನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು ಸ್ಮರಣೀಯವಾಗಿದೆ.
ಗುರಿಕಾರವರ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ಸದ್ಬಳಕೆ ಮಾಡಿಕೊಳ್ಳುತ್ತದೆ. ಅವರ ಅಭಿಮಾನಿಗಳೂ ಈಗಿನಿಂದಲೇ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಐ.ಎಸ್. ಪಾಟೀಲ, ಸಂಗನಗೌಡ ಪಾಟೀಲ, ಬಸವರಾಜ ನವಲಗುಂದ, ಪರಶುರಾಮ ಅಳಗವಾಡಿ, ಯೂಸುಪ್ ಇಟಗಿ, ಆನಂದ ಚಂಗಳಿ, ಪ್ರಭು ಮೇಟಿ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದೇ ಪೋಸ್ಟ್ ಮಾಡಿದ ಆರೋಪ…..
ವಿಜಯಸಾಕ್ಷಿ ಸುದ್ದಿ, ರೋಣ
ಚುನಾವಣಾಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್ ಹಾಕಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ರೋಣ ತಾಲೂಕಿನ ಬೆನಹಾಳ ಗ್ರಾಮದ ಶರಣು ಬಾಳಪ್ಪ ಚಲವಾದಿ ಎಂಬುವರು ಏ.8ರಂದು ಮುಂಜಾನೆ 10 ಗಂಟೆಯ ಸಮಯಕ್ಕೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ʻಮುಸ್ಲಿಮರು ಒಂದಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡ್ತಾರಂತೆ, ಹಿಂದೂಗಳೇ ನಾವೆಲ್ಲ ಒಂದಾಗಿ ಬಿಜೆಪಿಗೆ ಮತ ನೀಡೋಣʼ ಎಂದು ಪೋಸ್ಟ್ ಮಾಡಿದ್ದರು.
ನರಗುಂದ ಮತಕ್ಷೇತ್ರದ ಹೊಳೆ ಆಲೂರು ಸರ್ಕಲ್ ಹಾಗೂ ಗ್ರಾಮೀಣ ವಲಯದ ಫ್ಲೈಯಿಂಗ್ ಸ್ಕ್ವಾಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಹಶಮ್‌ಸಾಹೇಬ ಮಹಮ್ಮದ್‌ಗೌಸ್ ಖುದಾವಂದ್ ಇವರು ಏ.13ರಂದು ರೋಣದ ಕಾರ್ಯನಿರ್ವಾಹಕ ಅಭಿಯಂತರು ನೀಡಿದ ಮಾಹಿತಿಯ ಮೇರೆಗೆ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ಕಲಂ:125 ಆರ್.ಪಿ ಕಾಯ್ದೆ-1951 ಮತ್ತು ಐಪಿಸಿ ಕಲಂ:171(ಬಿ)ರಂತೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಏ.24 ಕೊನೆಯ ದಿನವಾಗಿತ್ತು. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 51 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.
68-ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿರುತ್ತಾರೆ. ಚಂದ್ರಕಾಂತಗೌಡ ಪಾಟೀಲ (ಬಿಜೆಪಿ), ಬಸವರಡ್ಡಿ ಯಾವಗಲ್ (ಆಯ್.ಎನ್.ಸಿ), ರಾಮಪ್ಪ ಹೂವಣ್ಣವರ (ಎಎಪಿ), ರುದ್ರಗೌಡ ನಿಂಗನಗೌಡ ಪಾಟೀಲ (ಜೆಡಿಎಸ್), ಹನುಮಂತ ಯಲ್ಲಪ್ಪ ಮಾದರ (ಬಿ.ಎಸ್.ಪಿ), ರುದ್ರಯ್ಯ ಗದಿಗಯ್ಯ ಸುರೇಬಾನ (ಇಂಡಿಯನ್ ಮೂವಮೆಂಟ ಪಾರ್ಟಿ), ವೀರನಗೌಡ ಶಿವನಗೌಡ ಮೂಗನೂರ (ಕೆ.ಆರ್.ಎಸ್.), ಉಮೇಶ ಫಕಿರಪ್ಪ ತಳವಾರ (ಪಕ್ಷೇತರ), ಮಲ್ಲಿಕಾರ್ಜುನ ನಾಯಕ (ಪಕ್ಷೇತರ), ಮುತ್ತು ಎಸ್.(ಪಕ್ಷೇತರ), ರಾಮಪ್ಪ ಹುಜರತ್ತಿ (ಪಕ್ಷೇತರ), ವಾಸನಗೌಡ ಬಂಡಿ (ಪಕ್ಷೇತರ), ವೀರೇಶ ಸೊಬರದಮಠ (ಪಕ್ಷೇತರ), ಶಿವಾನಂದ ಶಿದ್ದಪ್ಪ ಮಾಯಣ್ಣನವರ (ಪಕ್ಷೇತರ) ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆದವರ ಕ್ಷೇತ್ರವಾರು ವಿವರ:
ಉಮೇದುವಾರಿಕೆಯನ್ನು ಹಿಂಪಡೆಯಲು ನಿಗದಿಪಡಿಸಲಾದ ಏಪ್ರಿಲ 24 ರಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 16 ಜನ ಉಮೇದುವಾರಿಕೆಯನ್ನು ಹಿಂಪಡೆದಿದ್ದು ಕ್ಷೇತ್ರವಾರು ವಿವರ ಇಂತಿದೆ.
65-ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾದ ಅನೀಲಕುಮಾರ ನಾಗಪ್ಪ ಮುಳಗುಂದ, ಅಶೋಕ ಲಮಾಣಿ, ಗುರುನಾಥ ಕಲ್ಲಪ್ಪ ದಾನಪ್ಪನವರ, ಪ್ರೋ.ಸಿ.ಪಿ.ಬಹ್ಮನಪಾಡ, ಭೀಮಸಿಂಗ್ ನಾ ರಾಠೋಡ, ಮಂಜುನಾಥ ಮುಶೇಪ್ಪನವರ, ರಾಮಪ್ಪ ಸೋಬೆಪ್ಪ ಲಮಾಣಿ, ಬಹ್ಮನಪಾಡ ಸುನಿಲಕುಮಾರ, ಸುಮಿತ್ರಾ ಹ ನಾಯಕ, ನಂದೆಣ್ಣವರ ಸುರೇಶ ಮಲ್ಲೇಶಪ್ಪ, 66-ಗದಗ ವಿಧಾನಸಭಾ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾದ ವಿಶ್ವನಾಥ ಶಿರಿ ಹಾಗೂ ಈರಣ್ಣ ಕೆ ಬಾಳಿಕಾಯಿ, 67-ರೋಣ ವಿಧಾನ ಸಭಾ ಮತಕ್ಷೇತ್ರದಿಂದ ಮಂಜುನಾಥ ಮಹಾದೇವಪ್ಪ ಗುರಿಕಾರ ಹಾಗೂ ಅಶೋಕ ಬೇವಿನಕಟ್ಟಿ ವಿರುಪಾಕ್ಷ, 68-ನರಗುಂದ ವಿಧಾನ ಸಭಾ ಮತಕ್ಷೇತ್ರದಿಂದ ಶಿದ್ದನಗೌಡ ಮರಿಗೌಡ ಮರಿಗೌಡ್ರ ಹಾಗೂ ದುರಗಪ್ಪ ಪಾರಪ್ಪ ಜಮಖಂಡಿ ಅವರುಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.