ಬಿಜೆಪಿ ಪಕ್ಷದ ಪರವಾಗಿ ಒಂಟೆಯನ್ನು ಬಳಸಿ ಪ್ರಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ಪಕ್ಷದ ಅಧ್ಯಕ್ಷ ಶಿದ್ದಲಿಂಗಪ್ಪ(ಅನಿಲ್) ಅಬ್ಬಿಗೇರಿ ವಿರುದ್ಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.18ರಂದು ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ನಂತರ ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಗದಗ ರಾಚೋಟೇಶ್ವರ ಗುಡಿಯಿಂದ ಜಗದೀಶ ಶಿರೋಳರ ಬಯಲು ಜಾಗದವರೆಗೆ ಒಂಟೆಯನ್ನು ಬಳಸಿಕೊಂಡು, ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಪ್ರಚಾರ ನಡೆಸಲಾಗಿತ್ತು.
ಪ್ರಾಣಿಯೊಂದಕ್ಕೆ ಹಿಂಸೆ ನೀಡಿದ್ದಲ್ಲದೆ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಆರೋಪಿತರ ವಿರುದ್ಧ 0049/2023, ಕರ್ನಾಟಕ ಓಪನ್ ಪ್ಲೇಸ್ ಡಿಸ್‌ಫಿಗರ್ಮೆಂಟ್ ಕಾಯ್ದೆ ಮತ್ತು ಕಲಂ-11, ದಿ. ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಟು ಅನಿಮಲ್ಸ್ ಕಾಯ್ದೆ-1960ರ ಅಡಿ ದೂರು ದಾಖಲಾಗಿದೆ.
ಸಧ್ಯ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂತೋಷ ನೀಲಕಂಠ ಹಂದಿಗನೂರು ನೀಡಿರುವ ದೂರನ್ನು ಸ್ವೀಕರಿಸಿರುವ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ಯಾಂಟರ್ ವಾಹನವೊಂದರಲ್ಲಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾಗ ಗಜೇಂದ್ರಗಡ ಇಳಕಲ್ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು 140 ಕ್ವಿಂಟಲ್ ಅಕ್ಕಿಯೊಂದಿಗೆ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಏ.20ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಗಜೇಂದ್ರಗಡ ರಸ್ತೆಯ ಇಳಕಲ್ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ಕ್ಯಾಂಟರ್ ವಾಹದಲ್ಲಿ 280 ಪ್ಲಾಸ್ಟಿಲ್ ಚೀಲಗಳಲ್ಲಿ ತುಂಬಿದ ಅಂದಾಜು 3.22 ಲಕ್ಷ ರೂ. ಬೆಲೆಬಾಳುವ 140 ಕ್ವಿಂಟಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು.
ಚೆಕ್‌ಪೋಸ್ಟ್‌ನ ಅಧಿಕಾರಿಗಳು ವಾಹನದ ಪರಿಶೀಲನೆ ನಡೆಸಿ, ವಾಹನದ ಚಾಲಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ದೇವನೂರಿನ ಕುಮಾರ್ ವೆಂಕಟೇಶನನ್ನು ಅಕ್ಕಿಯ ದಾಖಲೆಗಳನ್ನು ಕೇಳಿದಾಗ ಸಮರ್ಪಕ ಉತ್ತರ ನೀಡಲಿಲ್ಲ.
ಸದರಿ ಪಡಿತರ ಅಕ್ಕಿಯನ್ನು ಅನಧಿಕೃತವಾಗಿ, ಸ್ವಂತ ಲಾಭದ ಉದ್ದೇಶದಿಂದ ಹೆಚ್ಚಿನ ಬೆಲೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಗಜೇಂದ್ರಗಡ ತಾಲೂಕಾ ಆಹಾರ ನಿರೀಕ್ಷಕರಾದ ಪವಾಡಗೌಡ ಬಸನಗೌಡ ಮಾಲಿಪಾಟೀಲರು ಸಲ್ಲಿಸಿದ ದೂರಿನನ್ವಯ ಇ.ಸಿ ಕಾಯ್ದೆ-1955, ಪಿಡಿಎಸ್ ಆರ್ಡರ್-2016ರ ಪ್ರಕಾರ ಗಜೇಂದ್ರಗಡ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬಸ್ ನಿಲ್ದಾಣದಲ್ಲಿ ಬಸ್ ಏರುವ ಗಡಿಬಿಡಿಯಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲನ್ನು ತೆಗೆದುಕೊಂಡ ಅಪರಿಚಿತರು, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಬ್ಯಾಂಕ್ ಖಾತೆಯ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆ ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಣ ತಾಲೂಕಿನ ಯರೆಬೆಲೇರಿಯ ಶೇಖರಯ್ಯ ವೀರಭದ್ರಯ್ಯ ಬೀಕ್ಷಾವತಿಮಠ ಇವರು ಮಾರ್ಚ್ 18ರ ಮುಂಜಾನೆ 10 ಗಂಟೆಯ ಸುಮಾರಿಗೆ ಮುಂಡರಗಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದರು.
ಈ ಗದ್ದಲದ ಸಮಯದಲ್ಲಿ ಯಾರೋ ಅಪರಿಚಿತರು ಫಿರ್ಯಾದಿಯ ಮೊಬೈಲನ್ನು ತೆಗೆದುಕೊಂಡು, ಅದರಲ್ಲಿಯ ಫೋನ್‌ಪೇ ಹಾಗೂ ಯುಪಿಐ ಪಿನ್ ನಂಬರ್‌ಗಳನ್ನು ಊಹಿಸಿ ಅಪ್ಲಿಕೇಶನ್ ತೆರೆದಿದ್ದಾರೆ.
ನಂತರ, ಗದಗ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ಅವರ ಖಾತೆಯಿಂದ ಒಟ್ಟೂ 1.20 ಲಕ್ಷ ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಫಿರ್ಯಾದಿಯು ನೀಡಿರುವ ದೂರಿನನ್ವಯ Information Technology Act 2008ರಂತೆ ಪ್ರಕರಣ ದಾಖಲಿಸಿಕೊಂಡಿರುವ ಗದಗ ಸಿಇಎನ್ ಪೊಲೀಸರು ತನಿಖೆ ನಡೆಸಿದ್ದಾರೆ.
ಶಾಸಕ ಎಚ್. ಕೆ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಬಿಜೆಪಿ ಮುಖಂಡ……..
ವಿಜಯಸಾಕ್ಷಿ ಸುದ್ದಿ, ಗದಗ
ಬಿಜೆಪಿ ಟಿಕೆಟ್ ಸಿಗದೇ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದ ಬಿಜೆಪಿ ಮುಖಂಡ ಅರವಿಂದ ಹುಲ್ಲೂರ ಅವರಿಗೆ ಕೊನೆಗೂ ಕಾಂಗ್ರೆಸ್ ಪಕ್ಷ ಗಾಳ ಹಾಕಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಶನಿವಾರ ಸಂಜೆ ಬೆಟಗೇರಿಯ ಅರವಿಂದ ಹುಲ್ಲೂರ ಅವರ ನಿವಾಸದಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಶಾಸಕ ಎಚ್ ಕೆ ಪಾತ್ರವನ್ನು, ಮಾಜಿ ಶಾಸಕ ಡಿ.ಆರ್ ಪಾಟೀಲ್ ಅವರ ನೇತೃತ್ವದಲ್ಲಿ, ಕಾಂಗ್ರೆಸ್ ಮುಖಂಡರು ಸಿಹಿ ತಿನಿಸಿ, ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಬಿ ಅಸೂಟಿ, ಮಾಜಿ ಅಧ್ಯಕ್ಷರಾದ ಗುರಣ್ಣಾ ಬಳಗಾನೂರ, ನಗರಸಭೆ ಸದಸ್ಯ ಚಂದ್ರ ಕರಿಸೋಮನಗೌಡ, ಹಾಗೂ ಮುಖಂಡರಾದ ಪ್ರಭು ಬುರಬುರೆ, ಮಹ್ಮದ ಶಾಲಗಾರ, ಶ್ರೀರಾಮ ಶಿಂಧೆ, ಮೇಘಾ ಮುದಗಲ್ಲ, ನಾಗಲಿಂಗ ಐಲಿ, ಪ್ರಕಾಶ್ ಖೋಡೆ, ರಫೀಕ ಅಣ್ಣಿಗೇರಿ, ಕಿಶೋರ್ ಮುದಗಲ್ಲ ರಾಜು ಬಗಲಿ ಸೇರಿದಂತೆ ಅನೇಕರಿದ್ದರು.
ದೇವಸ್ಥಾನಗಳಲ್ಲಿ ಚುನಾವಣೆಗೆ ಸಂಬಂಧಿಸಿ ಯಾವುದೇ ಚಟುವಟಿಕೆಗಳನ್ನು ನಡೆಸಬಾರದೆಂದ ಕಾನೂನಿದ್ದರೂ ಮಠವೊಂದರ ಒಳಾವರಣದಲ್ಲಿ ಬಿಜೆಪಿ ಪಕ್ಷದ ಧ್ವಜ ಹಿಡಿದು ಅಭ್ಯರ್ಥಿಯ ಪರ ಘೋಷಣೆ ಕೂಗಿದ ಆರೋಪದಡಿ ಚಂದ್ರು ಲಮಾಣಿ ವಿರುದ್ಧ ಪ್ರಕರಣ ದಾಖಲಾಗಿದೆ.
ಏ.20ರಂದು ಮಧ್ಯಾಹ್ನ 11.50ರಿಂದ 1 ಗಂಟೆಯ ನಡುವಿನ ಅವಧಿಯಲ್ಲಿ ಶಿರಹಟ್ಟಿ ಫಕ್ಕೀರೇಶ್ವರ ಮಠದ ಒಳಗಿನ ಆವರಣದಲ್ಲಿ ಚಂದ್ರು ಲಮಾಣಿ ಹಾಗೂ ಅವರ ಬೆಂಬಲಿಗರು ಕೂಡಿಕೊಂಡು ಬಿಜೆಪಿ ಪಕ್ಷದ ಧ್ವಜಗಳನ್ನು ಹಿಡಿದು ಪಕ್ಷದ ಪರವಾಗಿ ಘೋಷಣೆ ಕೂಗಿ, ಪ್ರಚಾರ ನಡೆಸಿದ್ದರು.
ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, Religious Institution(Prevention of Misuse) Act-1988ರ ಕಲಂ 7ರ ಅಡಿ ಕ್ರಮ ಜರುಗಿಸುವಂತೆ ಶಿರಹಟ್ಟಿ ಸರ್ಕಲ್‌ನ ಫ್ಲೈಯಿಂಗ್ ಸ್ಕ್ವಾಡ್ ಸಿದ್ದರಾಯ ಕಟ್ಟಿಮನಿ ಸರಕಾರದ ಪರವಾಗಿ ದೂರು ನೀಡಿದ್ದರು. ಪ್ರಸ್ತುತ ದೂರು ಸ್ವೀಕರಿಸಿರುವ ಶಿರಹಟ್ಟಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಜಾತಿಗಳ ಮಧ್ಯೆ ದ್ವೇಷ ಮೂಡಿಸುವ ಪೋಸ್ಟ್
ವಿಜಯಸಾಕ್ಷಿ ಸುದ್ದಿ, ರೋಣ
ವಾಟ್ಸಪ್ ಗ್ರೂಪ್ ಒಂದರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಜಾತಿಗಳ ಮಧ್ಯೆ ದ್ವೇಷ ಮೂಡಿಸುವ ಪ್ರಚೋದನಕಾರಿ ಸಂದೇಶ ಕಳುಹಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿತ ರೋಣ ತಾಲೂಕಿನ ಕೌಜಗೇರಿಯ ಶಿವರಾಜ ವಣ್ಣೂರ ಈತ ಏ.16ರ ಮಧ್ಯಾಹ್ನ 3.09ರ ಸುಮಾರಿಗೆ ಹಾಲುಮತ ಸಭಾ ಎಂಬ ವಾಟ್ಸಪ್ ಗುಂಪಿನಲ್ಲಿ ಗದಗ, ರೋಣ, ನರಗುಂದ, ನವಲಗುಂದ, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುರುಬರನ್ನು ಉದ್ದೇಶಿಸಿ ಸಂದೇಶ ಕಳಿಸಿದ್ದರು.
ಅದರಲ್ಲಿ, ನಾವು ಕುರುಬರು ಹಾಲುಮತದಲ್ಲಿ ಹುಟ್ಟಿದ್ದೇ ನಿಜವಾದರೆ, ನಮ್ಮ ಸಮಾಜದ ವ್ಯಕ್ತಿ ಯಾವ ಕಡೆ ನಿಲ್ಲುತ್ತಾರೋ, ಅವರನ್ನೇ ಬೆಂಬಲಿಸಬೇಕು. ಕುರುಬ ರೆಡ್ಡಿಗಳಿಗೆ ಹುಟ್ಟಿದ್ದಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು.
ರೆಡ್ಡಿ ಸಮುದಾಯದ ನಾಯಕರು ನಮ್ಮಲ್ಲಿ ಎರಡು ಬಣ ಮಾಡಿ ಕುರುಬರನ್ನು ಒಡೆಯುತ್ತಿದ್ದಾರೆ. ಇವರಿಗೆ ನಾವು ಬುದ್ಧಿ ಕಲಿಸದಿದ್ದರೆ ಕುರುಬ ಸಮಾಜಕ್ಕೆ ಅನಾಹುತ ಕಾದಿದೆ ಎಂಬರ್ಥದ ಸಂದೇಶ ರವಾನಿಸಿದ್ದರು.
ರೋಣದ ಸಾಧುಮಠದ ಈಶಪ್ಪ ಸಿದ್ದಪ್ಪ ಜಗ್ಗಲಿ ಈ ಸಂದೇಶದಿಂದ ಮನನೊಂದು, ಇದರಲ್ಲಿ ಆರೋಪಿತನಾದ ಶಿವರಾಜ ವಣ್ಣೂರ ಚುನಾವಣಾ ಆಯೋಗದ ಆದೇಶಗಳನ್ನು ಮೀರಿ ವರ್ತಿಸಿದ್ದು, ಸದರಿಯವನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.
ದೂರು ಸ್ವೀಕರಿಸಿದ ರೋಣ ಠಾಣೆಯ ಪೊಲೀಸರು ಕಲಂ: 125, ಆರ್.ಪಿ ಕಾಯ್ದೆ-1951 ಮತ್ತು ಐಪಿಸಿ ಕಲಂ 505(2) ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ವಂತ ಲಾಭಕ್ಕೋಸ್ಕರ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿತನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ದಿ. 1.3.2017ರಂದು 12.40ರ ಸುಮಾರಿಗೆ ಬೆಟಗೇರಿ ದಂಡಿನ ದುರ್ಗಮ್ಮ ಗುಡಿಯ ಹತ್ತಿರ ಮನ್ಸುಪ್‌ಲಾಲ್ ಪುಣೇಕರ್ ಅವರ ಹೊಲದಲ್ಲಿರುವ ಹಳೆಯ ಗೋಡೌನ್ ಹತ್ತಿರ ಆರೋಪಿತನಾದ ಬೆಟಗೇರಿ ಸೆಟ್ಲಮೆಂಟ್‌ನ ಮಂಜುನಾಥ ಮಾರುತಿ ಹಲಕುರ್ಕಿ@ ಡಿಸ್ಕವರಿ ಮಂಜ್ಯಾನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಆರೋಪಿ ಮಂಜುನಾಥ ಈತ ಒಟ್ಟೂ 1 ಕೆಜಿ 20 ಗ್ರಾಂ. ತೂಕದ, 10 ಸಾವಿರ ರೂ. ಕಿಮ್ಮತ್ತಿನ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಾಗ, ಆರಕ್ಷಕ ಅಧೀಕ್ಷಕರು ಗದಗ ಹಾಗೂ ಆರಕ್ಷಕ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಅಂದಿನ ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಡಿ.ಮಡ್ಡಿರವರು ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಈ ಬಗ್ಗೆ ಎನ್‌ಡಿಪಿಎಸ್ ಆ್ಯಕ್ಟ್ ಪ್ರಕರಣವನ್ನು ಮಹಿಳಾ ಪಿಎಸ್‌ಐ ಎಸ್.ಎಸ್.ಸೊರಟೂರ ದಾಖಲಿಸಿಕೊಂಡು, ಬೆಟಗೇರಿ ಸಿಪಿಐ ವಿ.ಕೆ.ಯಡಹಳ್ಳಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಮಲ್ಲಿಕಾರ್ಜುನಗೌಡ.ಬಿ. ದೊಡ್ಡಗೌಡರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಏ.19ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ರಾಜೇಶ್ವರ ಎಸ್.ಶೆಟ್ಟಿ ಇವರು ಆರೋಪಿತನಿಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಉತ್ತಮ ತನಿಖೆ ನಡೆಸಿ, ಆರೋಪಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ ಪ್ರಕರಣದ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ. ಎಸ್ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲ ಇವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಚುನಾವಣಾಧಿಕಾರಿಗಳಿಂದ ಪರವಾನಗಿ ಪಡೆದುಕೊಳ್ಳದೇ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಗಾಂಧಿನಗರ ಸೆಟ್ಲಮೆಂಟ್‌ನ ಸಲೀಮ್ ಬುಡ್ನೇಸಾಬ ಕೊಣ್ಣೂರ ಇವರು ಏ.17ರಂದು ಮಧ್ಯಾಹ್ನ 12-30ರಿಂದ 3 ಗಂಟೆಯವರೆಗಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯಿರುವ ನಿಲುವಂಗಿಯನ್ನು ಧರಿಸಿ ಪ್ರಚಾರ ನಡೆಸಿದ್ದರು.
ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿಯವರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಕೆಎ.26, ಇಬಿ.2013 ಮೋಟಾರ್ ಸೈಕಲ್ ಸವಾರ, ಕೆಎ.26-8714 ಪ್ಯಾಸೆಂಜರ್ ಆಟೋ ರಿಕ್ಷಾ ಚಾಲಕ ಹಾಗೂ ಪ್ಯಾಸೆಂಜರ್ ಆಟೋ ರಿಕ್ಷಾ ಕೆಎ.26, ಬಿ.0255 ವಾಹನಗಳ ಚಾಲಕರು ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ.
ಹಾಗಿದ್ದರೂ, ತಮ್ಮ ವಾಹನಗಳಿಗೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಏ.18ರ ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.
ಇದು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಸದರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗದಗ ಶಹರ ವಿಧಾನಸಭಾ ಕ್ಷೇತ್ರದ ಎಫ್‌ಎಸ್‌ಟಿ ಅಧಿಕಾರಿ ಚನ್ನಕೇಶವ ಹನುಮಂತಪ್ಪ ಮುದಗಲ್ ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಧಿಕಾರಿಗಳ ದೂರನ್ನು ಸ್ವೀಕರಿಸಿರುವ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ(ಎ.20) ರಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 44 ಅಭ್ಯರ್ಥಿಗಳಿಂದ 49 ನಾಮಪತ್ರಗಳು ಸಲ್ಲಿಕೆಯಾಗಿವೆ.
ಏಪ್ರಿಲ್ 13 ರಿಂದ ಏಪ್ರಿಲ್ 20 ರವರೆಗೆ ಜಿಲ್ಲೆಯಲ್ಲಿ ಒಟ್ಟು 122 ನಾಮಪತ್ರಗಳು ಸಲ್ಲಿಕೆಯಾಗಿವೆ.
66-ಗದಗ ವಿಧಾನ ಸಭಾ ಮತಕ್ಷೇತ್ರದಿಂದ 17 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರರಾಗಿ ವಿಶ್ವನಾಥ ಗಂಗಾಧರ ಶಿರಿ-1, ಬಸವನಗೌಡ ಎಂ ಪಾಟೀಲ-1, ವೀರಭದ್ರಪ್ಪ ವೀರಪ್ಪ ಕಬ್ಬಿಣದ-1, ರುದ್ರಪ್ಪ ಬಸಪ್ಪ ಕುಂಬಾರ-1, ಬಸವರಾಜ ಷಣ್ಮುಕಪ್ಪ ಮಾಳೋದೆ-1, ವಿಶ್ವನಾಥ ಅಂದಾನಪ್ಪ ಖಾನಾಪುರ-1, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸಚೀನಕುಮಾರ ಮಂಜುನಾಥ ಕರ್ಜೆಕಣ್ಣವರ-1, ಭಾರತೀಯ ಜನತಾ ಪಾರ್ಟಿಯಿಂದ ನಾಗೇಶ್ವರ ತಿರುಕಪ್ಪ ಹುಬ್ಬಳ್ಳಿ-1, ಇಂಡಿಯನ್ ಮೂವಮೆಂಟ ಪಾರ್ಟಿಯಿಂದ ಪೂಜಾ ಮಲ್ಲಪ್ಪ ಬೇವೂರ-1,
ಜನತಾದಳ (ಸೆಕ್ಯೂಲ್‍ರ) ಪಾರ್ಟಿಯಿಂದ ಗೋವಿಂದಗೌಡ ರಂಗನಗೌಡ ವೆಂಕನಗೌಡ-1, ರಾಣಿ ಚನ್ನಮ್ಮ ಪಾರ್ಟಿಯಿಂದ ಚಂದ್ರಶೇಖರ ಮಲ್ಲಿಕಾರ್ಜುನ ದೇಸಾಯಿ-1, ಭಾರತೀಯ ಜನತಾ ಪಾರ್ಟಿಯಿಂದ ಅನೀಲ ಪಿ ಮೆನಸಿನಕಾಯಿ-2, ರಿಪಬ್ಲಿಕ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಕವಿತಾ ಪಾಂಡುರಂಗ ಬಡಿಗೇರ-1, ಜನತಾದಳ (ಯುನೈಟೆಡ್) ಪಾರ್ಟಿಯಿಂದ ಮಲ್ಲಿಕಾರ್ಜುನ ಶಂಕರಗೌಡ ಪರ್ವತಗೌಡ್ರ-1, ಟಿಪ್ಪು ಸುಲ್ತಾನ ಪಾರ್ಟಿಯಿಂದ ಶಮಸುದ್ಧಿನ ರಮಜಾನಸಾಬ ಅಣ್ಣಿಗೇರಿ-1, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿಯಿಂದ ಆನಂದ ಬಸವರಾಜ ಹಂಡಿ-1 ನಾಮಪತ್ರ ಸಲ್ಲಿಸಿರುತ್ತಾರೆ.
ಪೂರ್ವಾನುಮತಿಯಿಲ್ಲದೇ ವಾಹನಕ್ಕೆ ಬಿಜೆಪಿ ಧ್ವಜ ಅಳವಡಿಸಿಕೊಂಡು ಪ್ರಚಾರ ನಡೆಸಿದ ಐವರ ವಿರುದ್ಧ ಪ್ರಕರಣ
ವಿಜಯಸಾಕ್ಷಿ ಸುದ್ದಿ, ಗದಗ
ಚುನಾವಣಾ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಪಕ್ಷದ ಧ್ವಜ ಅಳವಡಿಸಿಕೊಂಡ ಬಿಜೆಪಿಯ ಐವರು, ಕಾಂಗ್ರೆಸ್ ಪಕ್ಷದ ಇಬ್ಬರು ತಮ್ಮ ವಾಹನಗಳಿಗೆ ಪಕ್ಷದ ಬ್ಯಾನರ್, ಧ್ವಜ ಹಾಗೂ ಫ್ಲೆಕ್ಸ್ ಗಳನ್ನು ಅಳವಡಿಸಿಕೊಂಡು ಪ್ರಚಾರ ನಡೆಸಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.
ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಎಚ್.ಕೆ.ಪಾಟೀಲರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಾಹನಕ್ಕೆ ಪಕ್ಷದ ಧ್ವಜವನ್ನು ಅಳವಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.
ಎ. 17ರ ಮುಂಜಾನೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗಿನ ಅವಧಿಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಪ್ರಾರಂಭಗೊಂಡು ಶಹರದ ಎ.ಸಿ. ಕಚೇರಿಯ ಚುನಾವಣಾಧಿಕಾರಿಗಳ ಕಾರ್ಯಾಲಯದವರೆಗೆ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಸಾಗಿತ್ತು.
ಈ ಸಮಯದಲ್ಲಿ ಶಾಸಕರು ತೆರಳುತ್ತಿದ್ದ ಅಲಂಕೃತಗೊಂಡ ಗೂಡ್ಸ್ ವಾಹನಕ್ಕೆ 2 ಬ್ಯಾನರ್, 6 ಕಾಂಗ್ರೆಸ್ ಧ್ವಜಗಳು, 2 ಸ್ಪೀಕರ್, 250 ಕಾಂಗ್ರೆಸ್ ಧ್ವಜಗಳು ಹಾಗೂ 250 ಕಾಂಗ್ರೆಸ್ ಪಕ್ಷದ ಶಾಲುಗಳು, ಇನ್ನೊಂದು ಆಟೋ ರಿಕ್ಷಾಕ್ಕೆ 100 ವ್ಯಾಟ್ ಆಂಪ್ಲಿಫೈರ್, ಲೌಡ್‌ಸ್ಪೀಕರ್ ಅಳವಡಿಸಲು ಏ.15ರಂದು ಅನುಮತಿ ಪಡೆಯಲಾಗಿತ್ತು.
ಅದರಂತೆ ಎ.17ರಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲರು ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಆದರೆ, ಒಬ್ಬ ಟಿವಿಎಸ್ ಬೈಕ್ ಸವಾರ ಹಾಗೂ ಒಂದು ಪ್ಯಾಸೇಂಜರ್ ರಿಕ್ಷಾ ಚಾಲಕ ಕಾಂಗ್ರೆಸ್ ಪಕ್ಷದ ಧ್ವಜವನ್ನು ಚುನಾವಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ತಮ್ಮ ವಾಹನಗಳಿಗೆ ಅಳವಡಿಸಿಕೊಂಡು ಏ.17ರ ಮಧ್ಯಾಹ್ನ 12-30ರಿಂದ 3 ಗಂಟೆಯವರೆಗೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.
ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸದರಿ ಆರೋಪಿತರ ಮೇಲೆ ಕಲಂ.3, ಕರ್ನಾಟಕ ಓಪನ್ ಡಿಸ್ಪಿಗರ್ಮೆಂಟ್ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಎಫ್‌ಎಸ್‌ಟಿ ಅಧಿಕಾರಿ ಗುರುನಾಥ ಮಾಣೆಕಪ್ಪ ದಸಪಳ್ಳಿ ಇವರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ನೀಡಿರುವ ಮಾಹಿತಿಯನ್ವಯ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ಪಕ್ಷದ ಗದಗ ಮತಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿಯವರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಾಹನಕ್ಕೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಐವರ ವಿರುದ್ಧ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.
ಅನಿಲ ಮೆಣಸಿನಕಾಯಿ ಅವರು ಮೆರವಣಿಗೆಯಲ್ಲಿ ತೆರಳುವ ತೆರೆದ ವಾಹನಗಳಿಗೆ ಬಿಜೆಪಿಯ ಧ್ವಜ, ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಿಕೊಳ್ಳಲು ಪಕ್ಷದ ಜಿಲ್ಲಾಧ್ಯಕ್ಷರು ಎ.16ರಂದು ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡಿದ್ದು, ಅದರಂತೆ ಅನಿಲ ಮೆಣಸಿನಕಾಯಿ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಎ.18ರಂದು ತೆರಳಿದ್ದರು.
ಆದರೆ, ಐದು ಗೂಡ್ಸ್ ವಾಹನಗಳ ಚಾಲಕರು ಚುನಾವಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ತಮ್ಮ ವಾಹನಗಳಿಗೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಎ.18ರ ಮಧ್ಯಾಹ್ನ 12-30ರಿಂದ 3 ಗಂಟೆಯವರೆಗೆ ಶಹರದ ಎ.ಸಿ. ಕಚೇರಿಯ ಮುಂದೆ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.
ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಸದರಿ ಆರೋಪಿತರ ಮೇಲೆ ಕಲಂ.3, ಕರ್ನಾಟಕ ಓಪನ್ ಡಿಸ್ಪಿಗರ್ಮೆಂಟ್ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಎಫ್‌ಎಸ್‌ಟಿ ಅಧಿಕಾರಿ ಗುರುನಾಥ ಮಾಣೆಕಪ್ಪ ದಸಪಳ್ಳಿ ಇವರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ನೀಡಿರುವ ಮಾಹಿತಿಯನ್ವಯ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.