Home Blog Page 3278

ಮೂತ್ರ ವಿಸರ್ಜನೆ ಸಯಮದಲ್ಲಿ ವಿದ್ಯುತ್ ಶಾಕ್ ಗೆ ಇಬ್ಬರು ಬಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮೂತ್ರ ವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ನಿಂದಾಗಿ ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿರುವ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ನಗರದ ಕಲಾಸಿಪಾಳ್ಯದಲ್ಲಿ ನಡೆದಿದೆ. ಕರಿಯಪ್ಪ (22) ಹಾಗೂ ನಾಗರಾಜು (19) ಇಬ್ಬರೂ ಮೃತ ದುರ್ದೈವಿಗಳು.

ಈ ಕಾರ್ಮಿಕರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರು ಎಂದು ತಿಳಿದು ಬಂದಿದೆ. ಇಬ್ಬರೂ ಒಜಾಸ್ ಎನ್ನುವ ಕಂಪನಿಯಲ್ಲಿ ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದರು. ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದ ಇವರು ನಿನ್ನೆ ಮಲ್ಲಸಂದ್ರ ಬಳಿಯ ರಾಜಕಾಲುವೆ ಕೆಲಸ ಮುಗಿಸಿ ಎಚ್‌ ಎಸ್‌ ಆರ್ ಲೇಔಟ್‌ ನಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಲಾಲ್ ಬಾಗ್ ರಸ್ತೆಯ ನಾಲೆಯ ರಸ್ತೆ ಬಳಿ ಕೆಲಸ ಮಾಡುತ್ತಿದ್ದ ಸಂಗಡಿಗರನ್ನು ಕರೆದೊಯ್ಯಲು ಬಂದಿದ್ದಾರೆ. ಆಗ ಇಬ್ಬರೂ ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಈ ಸಮಯದಲ್ಲಿ ತುಂಡಾಗಿದ್ದ ವಿದ್ಯುತ್ ವೈರ್ ತಗುಲಿ ಸ್ಥಳದಲ್ಲಿಯೇ ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ಕಲಾಸಿಪಾಳ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304(ಎ) ಅಡಿಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಲಸಿಕೆ ಹಾಕಿಸಿಕೊಳ್ಳಬಾರದೆಂದು ಊರನ್ನೇ ಖಾಲಿ ಮಾಡಿರುವ ಜನರು!

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಲಸಿಕೆ ಪಡೆಯಬೇಕಾಗುತ್ತದೆಂದು ಮನೆಗೆ ಬೀಗ ಹಾಕಿ ಬಹುತೇಕ ಗ್ರಾಮಸ್ಥರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲು ಹೋಗಿದ್ದ ಅಧಿಕಾರಿಗಳಿಗೆ ಶಾಕ್ ಆಗಿದೆ.
ಊರಿನ ಬಹುತೇಕ ಮನೆಗಳಿಗೆ ಬೀಗ ಹಾಕಿ ಗ್ರಾಮಸ್ಥರು ಪರಾರಿಯಾಗಿದ್ದಾರೆ. ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಲಸಿಕೆ ಪಡೆಯಲು ಹಿಂದೇಟು ಹಾಕಿ, ಮನೆಗಳಿಗೆ ಬೀಗ ಹಾಕಿ ಗ್ರಾಮಸ್ಥರು ಹೋಗಿದ್ದಾರೆ.

ಇನ್ನೂ ಹಲವರು ಮನೆಯೊಳಗೆ ಇದ್ದರೂ ಹೊರಬಾರದೆ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಲವರು ಲಸಿಕೆ ಪಡೆಯಿದಿದ್ದರೂ ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ.

ಹೀಗಾಗಿ ಸಹಾಯಕ ಆಯುಕ್ತ ಪ್ರಶಾಂತ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮನೆಯಲ್ಲಿದ್ದವರನ್ನು ಹುಡುಕಿ ತಿಳುವಳಿಕೆ ಹೇಳಿ, ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಆದರೂ ಗ್ರಾಮದ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಬಹುತೇಕ ಜನರು ಲಸಿಕೆ ಪಡೆಯದೆ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಲಸಿಕೆ ಹಾಕಿಸಲು ಅಧಿಕಾರಿಗಳು ಮಾತ್ರ ಸಂಕಷ್ಟ ಪಡುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್ ಗಳ ಮೂಲಕ 6 ತಿಂಗಳು ಬಡವರಿಗೆ ಅನುಕೂಲ ಮಾಡಬೇಕು; ಸಿದ್ದರಾಮಯ್ಯ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಗಳ ಮೂಲಕ ಬಡವರಿಗೆ ಅನಕೂಲವಾಗುಂತೆ ಉಚಿತ ಆಹಾರವನ್ನು ನೀಡಲಾಗುತ್ತಿದೆ. ಇದು ಇನ್ನೂ ಮುಂದಿನ ಆರು ತಿಂಗಳವರೆಗೆ ನಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಡಜನರಿಗೆ ಕೈ ಗೆಟುಕುವ ದರದಲ್ಲಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು ಎಂಬುದು ಇಂದಿರಾ ಕ್ಯಾಂಟೀನ್ ಯೋಜನೆಯ ಹಾಗೂ ನಮ್ಮ ಸರ್ಕಾರದ ಮೂಲ ಉದ್ದೇಶವಾಗಿತ್ತು. ಆದರೆ ಈಗಿನ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಈ ಕ್ಯಾಂಟೀನ್ ಗಳಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರು ಇಡಲಾಗಿದೆ ಎಂಬ ಏಕೈಕ ಕಾರಣಕ್ಕೆ ಅನುದಾನ ಬಿಡುಗಡೆ ಮಾಡದೆ, ಮುಚ್ಚಲು ಹೊರಟಿತ್ತು’ ಎಂದಿದ್ದಾರೆ.

‘ಕಳೆದೆರಡು ತಿಂಗಳುಗಳ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡಜನರ ಹಸಿವು ನೀಗಿಸಲು ನೆರವಾದದ್ದು ನಮ್ಮ ಸರ್ಕಾರದ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ. ಲಾಕ್ ಡೌನ್ ಇರುವ ಕಾರಣ ಸರ್ಕಾರ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿತ್ತು’ ಎಂದು ಹೇಳಿದ್ದಾರೆ.

‘ಈಗ ಲಾಕ್ ಡೌನ್ ತೆರವಾಗಿರುವ ಕಾರಣ ರಾಜ್ಯ ಸರ್ಕಾರ ಹಿಂದಿನಂತೆ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡದೆ, ಬೀಗ ಹಾಕಬೇಕಾದ ಸ್ಥಿತಿಗೆ ತಳ್ಳಲಿದೆ. ಈ ಬಗ್ಗೆ ಜನ ಜಾಗೃತರಾಗಬೇಕು. ಇಂಥದ್ದೊಂದು ಜನಪರವಾದ ಯೋಜನೆ ನಿಲ್ಲದಂತೆ ಜನರೇ ಸರ್ಕಾರದ ಕಿವಿಹಿಂಡುವ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ.

ರಾಯರ ದರ್ಶನ ಪ್ರಾರಂಭ!

ವಿಜಯಸಾಕ್ಷಿ ಸುದ್ದಿ, ರಾಯಚೂರು

ಮಂತ್ರಾಲಯದಲ್ಲಿನ ಶ್ರೀಗುರು ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ. ಹೀಗಾಗಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ರಾಯರ ದರ್ಶನ ಪಡೆಯುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ರಾಯರ ದರ್ಶನ ಪಡೆಯುತ್ತಿದ್ದಾರೆ.

ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಕೋವಿಡ್ ನಿಯಮಾನುಸಾರ ರಾಯರ ದರ್ಶನ ಪಡೆಯುತ್ತಿದ್ದಾರೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9ರ ವರೆಗೆ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿರುವ ಗುರು ರಾಘವೇಂದ್ರ ಸ್ವಾಮೀಜಿ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ. ಕೊರೊನಾ ಹಾವಳಿಯಿಂದಾಗಿ ದೇವಸ್ಥಾನದ ಬಾಗಿಲನ್ನು ಬಂದ್ ಮಾಡಲಾಗಿತ್ತು.

ಎನ್ ಫೀಲ್ಡ್ ಖರೀದಿಸುವುದು ಸದ್ಯಕ್ಕೆ ಬೇಡ ಎಂದಿದ್ದಕ್ಕೆ ಸಾಫ್ಟವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಯಲ್ ಎನ್ ಫೀಲ್ಡ್ ಬೈಕ್ ಖರೀದಿಸುವುದು ಸದ್ಯಕ್ಕೆ ಬೇಡ ಎಂದಿದ್ದಕ್ಕೆ ಮನನೊಂದ ಸಾಫ್ಟವೇರ್ ಎಂಜನೀಯರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ಕುವೆಂಪು ನಗರದಲ್ಲಿ ನಡೆದಿದೆ. ಸಾಫ್ಟವೇರ್ ಎಂಜನೀಯರ್ ಅಜಯ್ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟವೇರ್ ಎಂಜನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ ಕೆಲವು ತಿಂಗಳುಗಳಿಂದ ವರ್ಕ್ ಫ್ರಂ ಹೋಂ ಪಡೆದು ಕಾರ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಮನೆಯಲ್ಲಿ ರಾಯಲ್‌ ಎನ್‌ ಫೀಲ್ಡ್‌ ಬೈಕ್‌ ಖರೀದಿಸಬೇಕು ಎಂದು ತಮ್ಮ ತಾಯಿ -ತಂದೆ ಮುಂದೆ ಹೇಳಿದ್ದಾರೆ.

ಆದರೆ, ಇದಕ್ಕೆ ಪೋಷಕರು ಸದ್ಯಕ್ಕೆ ಬೇಡ. ಸ್ವಲ್ಪ ದಿನ ಹೋಗಲಿ, ಆ ನಂತರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಹೀಗಾಗಿ ಮನನೊಂದು ಅಜಯ್‌ ರಾತ್ರಿ ಊಟ ಮುಗಿಸಿ ತಾಯಿ, ತಂದೆ ಹೊರಗೆ ವಾಕಿಂಗ್‌ ಹೋಗಿದ್ದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ ದಂಡ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನೈಸ್‌ ಕಂಪನಿ ವಿರುದ್ಧ ಮಾಡಿದ್ದ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ರೂ. 2 ಕೋಟಿ ದಂಡ ವಿಧಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ ನೈಸ್ ಕಂಪನಿಗೆ ರೂ. 2 ಕೋಟಿ ಪರಿಹಾರ ನೀಡಬೇಕೆಂದು ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ ಆದೇಶಿಸಿದೆ.

ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ದಲ್ಲಿ ದೇವೇಗೌಡರು ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನೈಸ್‌ ಕಂಪನಿಯು ಮಾನನಷ್ಟ ಮೊಕದ್ದಮೆ ಹೂಡಿತ್ತು. ಕಂಪನಿ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ದೇವೇಗೌಡ ವಿಫಲರಾಗಿದ್ದಾರೆ. ಹೀಗಾಗಿ ಕಂಪನಿಗೆ ರೂ. 2 ಕೋಟಿ ನಷ್ಟ ಪರಿಹಾರ ಕಟ್ಟಿಕೊಡಬೇಕೆಂದು ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನಗೌಡ ತೀರ್ಪು ನೀಡಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ದೇವೇಗೌಡರು, ನೈಸ್ ಕಂಪನಿಯು ಸಾರ್ವಜನಿಕ ಹಣ ಲೂಟಿ ಮಾಡುವ ಯೋಜನೆ ಎಂದು ಆರೋಪಿಸಿದ್ದರು. ‘ಗೌಡರ ಘರ್ಜನೆ’ ಎಂಬ ಶೀರ್ಷಿಕೆಯಡಿ ಈ ಸಂದರ್ಶನ ಬಿತ್ತರವಾಗಿತ್ತು. ಇದರ ವಿರುದ್ಧ ನೈಸ್ ಕಂಪನಿ ಕೋರ್ಟ್ ಮೊರೆ ಹೋಗಿತ್ತು.

ಎರಡನೇ ಅಲೆಯಲ್ಲಿ ಹೆಚ್ಚು ಜನ ಸಾಯಲು ಬಿಜೆಪಿ ಸರ್ಕಾರ ಕಾರಣ;ಸಿದ್ದರಾಮಯ್ಯ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಬಿಜೆಪಿ ಸರ್ಕಾರವೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯಕ್ಕೆ ಕೊರೊನಾ ಕಾಲಿಟ್ಟು ಒಂದು ವರ್ಷ ಮೂರು ತಿಂಗಳು ಆಗಿವೆ. ಸದ್ಯ ನಾವು ಎರಡನೇ ಅಲೆಯಲ್ಲಿದ್ದೇವೆ. ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಮೊದಲನೇ ಅಲೆಯಲ್ಲಿ ಬಹಳ ಜನ ಸಾಯಲಿಲ್ಲ, ಎರಡನೇ ಅಲೆಯಲ್ಲಿ ಹೆಚ್ಚು ಜನ ಸತ್ತರು. ಇದಕ್ಕೆ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಕೊರೊನಾ ಬಂದವರಿಗೆ ಬೆಡ್ ಸಿಗಲಿಲ್ಲ, ಆಕ್ಸಿಜನ್ ಬೆಡ್ ಸಿಗಲಿಲ್ಲ, ರೆಮಡಿಸಿವರ್, ಐಸಿಯು, ಅಂಬ್ಯುಲೆನ್ಸ್, ವೆಂಟಿಲೇಟರ್ ಸಿಗಲಿಲ್ಲ. ಹೀಗಾಗಿ ಜನ ಸಾಯುವಂತಾಯಿತು ಎಂದು ಹೇಳಿದ್ದಾರೆ.

ಅಂದರ್-ಬಾಹರ್ ಜೂಜಾಟ; ಗ್ರಾ.ಪಂ‌ ಉಪಾಧ್ಯಕ್ಷ ಸೇರಿ 12 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಫೈನಾನ್ಷಿಯರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸೇರಿದಂತೆ 12 ಜನರ ತಂಡವೊಂದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ನಡೆದಿದೆ.

ಗದಗ ತಾಲೂಕಿನ ಕಿರಿಟಗೇರಿ ಗ್ರಾಮದ ಬಳಿ ಇರುವ ಹಳ್ಳವೊಂದರಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಷಣ್ಮುಖ ನಿಂಗಪ್ಪ ದಂಡಿನ, ಶಂಕರ್ ಯಮನಪ್ಪ ಬಳ್ಳಾರಿ, ಬಸವರಾಜ್ ಕಳಕಪ್ಪ ಪೂಜಾರ, ಚನ್ನಪ್ಪ ರಾಮಲಿಂಗಪ್ಪ ಹರದೊಲಿ, ಯಲ್ಲಪ್ಪ ಕನಕಪ್ಪ ಭಜಂತ್ರಿ, ಶಿವಾನಂದ ಈರಪ್ಪ ಕರಿಗೌಡರ್, ಮಲ್ಲೇಶ್ ತಿಮ್ಮಣ್ಣ ಕಣಕಿ, ಶೇಖಪ್ಪ ಬಸವರಾಜ್ ಹುನಗುಂಡಿ, ಗುರುಬಸಯ್ಯ ಈಶ್ವರಯ್ಯ ಹಿರೇಮಠ, ಮಾಲತೇಶ್ ಕರಿಯಪ್ಪ ಮೇಟಿ, ಈಶ್ವರ ಮಲ್ಲಪ್ಪ ಯಳವತ್ತಿ, ಹಾಗೂ ಅಂದಾನಪ್ಪ ಶಿವಪ್ಪ ಬಿಂಗಿ ಎಂಬುವವರನ್ನು ಬಂಧಿಸಲಾಗಿದೆ.

ಗ್ರಾಮೀಣ ಠಾಣೆಯ ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ 42 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ; ಜಿಲ್ಲೆಯಲ್ಲಿ ಕಂಟ್ರೋಲ್‌ ಗೆ ಬಂತು ಸೋಂಕು, ಸಹಜ ಸ್ಥಿತಿಯತ್ತ ಗದಗ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ಕಂಟ್ರೋಲ್‌ ನತ್ತ ಬರುತ್ತಿದೆಯಾ? ಹೌದು ಸೋಮವಾರದ ವರದಿಯಂತೆ‌ ಜಿಲ್ಲೆಯಲ್ಲಿ ಕೇವಲ 17 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯ ಮುಂಡರಗಿ, ನರಗುಂದ ತಾಲೂಕಿನಲ್ಲಿ ತಲಾ ಒಬ್ಬರಿಗೆ, ಶಿರಹಟ್ಟಿ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ. ಇದರಿಂದಾಗಿ ಮುಂಡರಗಿ ತಾಲೂಕು ಹಾಗೂ ರೋಣ ತಾಲೂಕಿನಲ್ಲಿ ಸೋಂಕು ಹತೋಟಿಗೆ ಬಂದಿದೆ.

ಇವತ್ತಿನ ವರದಿಯಲ್ಲಿ ಕೋವಿಡ್ ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ಇದುವರೆಗೂ ಕೋವಿಡ್ ನಿಂದಾಗಿ 294 ಜನ ಮೃತಪಟ್ಟಂತಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ 70 ವರ್ಷದ ವ್ಯಕ್ತಿ ಜೂನ್ 17 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಅವರಿಗೆ ‌ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 19 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಮೃತರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ.

ಇಂದು 17 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25628 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -08, ಮುಂಡರಗಿ-01, ನರಗುಂದ-01, ರೋಣ-05, ಶಿರಹಟ್ಟಿ-02, ಹೊರಜಿಲ್ಲೆಯ-00 ಸೇರಿದಂತೆ 17 ಪ್ರಕರಣಗಳು ದೃಢಪಟ್ಟಿವೆ.

ಇಂದು 65 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25029 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 305 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 75 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅನ್ ಲಾಕ್ ಜಿಲ್ಲೆಗಳ ಪಟ್ಟಿಗೆ ಮತ್ತೆ 6 ಜಿಲ್ಲೆಗಳು ಸೇರ್ಪಡೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ತೆರುವುಗೊಳಿಸಲಾಗುತ್ತಿದೆ. ಇತೀಚೆಗಷ್ಟೇ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಣೆ ಮಾಡಲಾಗಿತ್ತು. ಈಗ ಮತ್ತೆ 6 ಜಿಲ್ಲೆಗಳಲ್ಲಿ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ.

ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿಯೂ ಅನ್ ಲಾಕ್ ವಿನಾಯಿತಿ ನೀಡಲಾಗಿದೆ. 2ನೇ ಹಂತದ ಕೊರೊನಾ ಪಾಸಿಟಿವಿಟಿ ರೇಟ್ ಆಧರಿಸಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಸಡಿಲಿಸಿ ಬೆಳಿಗ್ಗೆಯಿಂದ ಸಂಜೆ 5ರ ವರೆಗೆ ಎಲ್ಲ ಅಂಗಡಿ –ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ.

ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಅನ್ ಲಾಕ್ ತೆರವುಗೊಳಿಸಲಾಗಿತ್ತು. ಈಗ ಈ ಸಾಲಿಗೆ 6 ಜಿಲ್ಲೆಗಳು ಸೇರಿವೆ.

error: Content is protected !!