ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾರಟಗಿ ಮಹಿಳಾ ಅದಿಕಾರಿಯೊಬ್ಬರಿಗೆ ಕನಕಗಿರಿ ಶಾಸಕ ಬಸವರಾಜ ದಢೇಸೂಗುರು ಬೆಂಬಲಿಗರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು, ಕಿರುಕುಳಕ್ಕೊಳಗಾದ ಮಹಿಳಾ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಸೋಮವಾರ ರಾತ್ರಿ ಎಸ್‌ಪಿ ಕಚೇರಿಗೆ ಆಗಮಿಸಿದ್ದರೆಂಬ ಸುದ್ದಿ ಸಂಚಲನ ಮೂಡಿಸಿದೆ.
ಈ ಬೆಳವಣಿಗೆ ನಿಜವೋ? ಸುಳ್ಳೋ? ಎಂಬುದಿನ್ನು ಖಚಿತವಾಗಿಲ್ಲ. ಈ ಕುರಿತು ಮಾಹಿತಿ ಪಡೆಯಲು ಎಸ್ಪಿ ಹಾಗೂ ಮಹಿಳಾ ಅಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಮೂಲಗಳ ಪ್ರಕಾರ ಇತ್ತಿಚೆಗೆ ಮಹಿಳಾ ಅಧಿಕಾರಿಯ ವರ್ಗಾವಣೆಗೆ ಸಂಬಂಧಿಸಿದಂತೆ ಶಾಸಕರ ಜೊತೆ ವಾಗ್ವಾದ ನಡೆದಿದ್ದು ಆಕ್ರೋಶಗೊಂಡ ಬೆಂಬಲಿಗರು ಅಧಿಕಾರಿಯ ಕೈ ಹಿಡಿದು ಎಳೆದಾಡಿದ್ದಾರೆ ಎನ್ನಲಾಗಿದೆ. ಶಾಸಕರಿಗೂ ಮತ್ತು ಮಹಿಳಾ ಅಧಿಕಾರಿಗೂ ಇಷ್ಟರಮಟ್ಟಿಗೆ ಸಲುಗೆ ಬೆಳೆದಿದ್ದಾರೂ ಹೇಗೆ ಎಂಬ ಪ್ರಶ್ನೆ ಈಗ ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.
ಈ ಕುರಿತು ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಶಾಸಕ ಬಸವರಾಜ ದಢೇಸೂಗುರು ಅವರು, ಪಟ್ಟಣ ಪಂಚಾಯಿತಿ ಚುನಾವಣೆ ಗದ್ದಲದಲ್ಲಿ ಇದ್ದೇವೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಸದ್ಯಕ್ಕೆ ಚುನಾವಣಾ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.
ಗದಗ-ಬೆಟಗೇರಿ ಅವಳಿ ನಗರದ ಜನರ ಸಮಸ್ಯೆಗಳನ್ನು ಅರಿಯಲು ಪ್ರತಿ ಮನೆ ಮನೆಗಳಿಗೂ ಭೇಟಿ ನೀಡಿ ಅವರು ನೀಡುವ ಸಲಹೆಗಳನ್ನು ಅರ್ಥೈಯಿಸಿಕೊಂಡು ಕನಿಷ್ಠ 6 ತಿಂಗಳ ಕಾಲಾವಕಾಶದೊಳಗೆ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ಅಲ್ಲದೇ, ಪುನಃ ಅವರ ಮನೆಗಳಿಗೆ ತಿಳಿಸಲಾಗುವುದು’ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.
ಸೋಮವಾರ ಹುಡ್ಕೋ ಕಾಲನಿಯ ಬಯಲು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತಭಿಕ್ಷೆ ಅಭಿಯಾನ ಪ್ರಾರಂಭಿಸಿದ ಅವರು 35ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಉಷಾ ಮಹೇಶ್ ದಾಸರ ಅವರ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಕೈಗೊಂಡು ಬಳಿಕ ಮಾತನಾಡಿದರು.
ಅವಳಿ ನಗರದಲ್ಲಿ ಸುಮಾರು 36 ಸಾವಿರ ಮನೆಗಳಿದ್ದು, ಪ್ರತಿನಿತ್ಯ 2000ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಮತಭಿಕ್ಷೆ ಕೇಳಬೇಕೆಂದು ತೀರ್ಮಾನಿಸಲಾಗಿದೆ. ಅಲ್ಲದೇ, ಈ ಬಾರಿ ಬಿಜೆಪಿ ನಗರಸಭೆ ಅಧಿಕಾರಕ್ಕೆ ಬರುತ್ತದಲ್ಲದೇ, ಅವಳಿ ನಗರದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಈ ಹಿಂದೆ ನಗರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ದುರಾಡಳಿತ ನಡೆಸಿದೆ. ಅಲ್ಲದೇ, ಕಾಂಗ್ರೆಸ್‌ನದ್ದು ಭ್ರಷ್ಟಚಾರ ಸಿದ್ಧಾಂತವಾಗಿದೆ. ಹೀಗಾಗಿ ಪ್ರತಿ 10 ತಿಂಗಳಿಗೊಮ್ಮೆ ನಗರಸಭೆ ಅಧ್ಯಕ್ಷರನ್ನು ಬದಲಾಯಿಸಿ ಭ್ರಷ್ಟಾಚಾರ ನಡೆಸಿದರು. ಇದರಿಂದ ಅವಳಿ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಕುಡಿಯುವ ನೀರು ಯೋಜನೆಯಡಿ ಇಲ್ಲಿಯವರೆಗೆ ಅವಳಿ ನಗರದ ಎಷ್ಟು ಮನೆಗಳಿಗೆ ಪೈಪ್‌ಲೈನ್ ಅವಳವಡಿಸಲಾಗಿದೆ ಎಂಬುವುದು ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ.
ನಗರದೆಲ್ಲೆಡೆ ಅವೈಜ್ಞಾನಿಕವಾಗಿ ಯುಜಿಡಿ, ಕುಡಿಯುವ ನೀರು ಯೋಜನೆಯ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗಿವೆ. ಸುಮಾರು 150 ಕೋಟಿ ರೂ. ಯುಜಿಡಿ ಕಾಮಗಾರಿಗೆ ನೀಡಲಾಗಿದೆ. ಆದರೆ, ಯುಜಿಡಿ ಕಾಮಗಾರಿಯ ಪರಿಸ್ಥಿತಿ ಏನಾಗಿದೆ ಎಂಬುವುದು ಜನರಿಗೆ ಗೊತ್ತಿದೆ’ ಎಂದು ಅನಿಲ್ ಮೆಣಸಿನಕಾಯಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಸಂಗಮೇಶ್ ದುಂದೂರ, ಎಂ.ಎಸ್.ಕರೀಗೌಡ್ರ, 35ನೇ ವಾರ್ಡ್ ಅಭ್ಯರ್ಥಿ ಉಷಾ ದಾಸರ, ಮಹೇಶ್ ದಾಸರ, ಪ್ರಶಾಂತ್ ನಾಯ್ಕರ, ಸಿದ್ದು ಪಲ್ಲೇದ, ಪರಮೇಶ್ ನಾಯಕ್, ಜಯಣ್ಣ ಶೆಟ್ಟರ್, ಕೆ ಕೆ ಮಳಗೌಡರ, ಮೋಹನ ಮಾಳಗಿಮನಿ, ಬಸವರಾಜ್ ಗಡ್ಡೆಪ್ಪನವರ್, ಪ್ರಕಾಶ್ ಕೋಟಿ, ರಾಹುಲ್ ಸುಗಂಧಿ, ಮಲ್ಲಿಕಾರ್ಜುನಗೌಡ ಹೊಳೆಯಣ್ಣವರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೆರಡು ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಬಿಜೆಪಿ ಕದನ ಕಲಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಅಳಿದು ತೂಗಿ ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಸ್ವತಃ ಶಾಸಕ ಎಚ್.ಕೆ.ಪಾಟೀಲ್ ಅವರು ಕರೆ ಮಾಡಿ ಟಿಕೆಟ್ ನೀಡಿರುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಮಾಜಿ ಶಾಸಕ ಡಿ.ಆರ್.ಪಾಟೀಲ್ ಹಾಗೂ ಶಹರ ಘಟಕ ಅಧ್ಯಕ್ಷ ಗುರಣ್ಣ ಬಳಗಾನೂರ ಅವರು `ಬಿ’ ಫಾರ್ಮ್ ವಿತರಿಸುತ್ತಿದ್ದಾರೆ. ಅವಳಿ ನಗರದ 35 ವಾರ್ಡ್ಗಳ ಪೈಕಿ 25 ವಾರ್ಡ್ಗಳಿಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇನ್ನುಳಿದ 10 ವಾರ್ಡ್ಗಳಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇದ್ದು, ಸೋಮವಾರ ಸಂಜೆ ಅಷ್ಟೊತ್ತಿಗೆ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ವಾರ್ಡ್ವಾರು ಅಭ್ಯರ್ಥಿಗಳ ವಿವರ:
ಗದಗ ಬೆಟಗೇರಿ ಅವಳಿ ನಗರದ ವಾರ್ಡ್ ನಂ.1 ಲಕ್ಷ್ಮೀ ಅನಿಲ್‌ಕುಮಾರ್ ಸಿದ್ದಮ್ಮನಹಳ್ಳಿ (ಹಿಂದುಳಿದ ವರ್ಗ ಎ’ ಮಹಿಳೆ), ವಾರ್ಡ್ ನಂ.2 ಸುರೇಶ್ ಕಟ್ಟಿಮನಿ (ಪರಿಶಿಷ್ಟ ಜಾತಿ),ವಾರ್ಡ್ ನಂ.4 ಶಕುಂತಲಾ ಹೊಳೆಬಸಪ್ಪ ಅಕ್ಕಿ(ಹಿಂದುಳಿದ ವರ್ಗ ಬಿ’ ಮಹಿಳೆ) ವಾರ್ಡ್ ನಂ.7 ನಾಗಲಿಂಗ ಐಲಿ(ಹಿಂದುಳಿದ ವರ್ಗ ಎ), ವಾರ್ಡ್ ನಂ.8 ಪೂರ್ಣಿಮಾ ಪ್ರೇಮನಾಥ್ ಬರದ್ವಾಡ (ಸಾಮಾನ್ಯ ಮಹಿಳೆ),
ವಾರ್ಡ್ ನಂ.9 ಚಂದ್ರು ಕರಿಸೋಮನಗೌಡ(ಹಿಂದುಳಿದ ವರ್ಗ ಬಿ), ವಾರ್ಡ್ ನಂ.10 ಇಮ್ತಿಯಾಜ್ ಶಿರಹಟ್ಟಿ(ಸಾಮಾನ್ಯ), ವಾರ್ಡ್ ನಂ.11 ಕುಂಕುಮಾದೇವಿ ಹದ್ದಣ್ಣವರ(ಹಿಂದುಳಿದ ವರ್ಗ ಎ’ ಮಹಿಳೆ), ವಾರ್ಡ್ ನಂ.12 ಚಂದ್ರಕಲಾ ಮಂಜುನಾಥ ಪೂಜಾರ(ಸಾಮಾನ್ಯ ಮಹಿಳೆ), ವಾರ್ಡ್ ನಂ.15 ಮೋಹನ್ ಅಣವೀರಪ್ಪ ದೊಡ್ಡಕುಂಡಿ(ಸಾಮಾನ್ಯ), ವಾರ್ಡ್ ನಂ.16 ಕೃಷ್ಣಾ ಪರಾಪುರ(ಸಾಮಾನ್ಯ), ವಾರ್ಡ್ ನಂ.17 ನೂರ್‌ಜಾನ್ ನರೇಗಲ್(ಸಾಮಾನ್ಯ ಮಹಿಳೆ), ವಾರ್ಡ್ ನಂ.18 ಜೂನ್‌ಸಾಬ್ ನಮಾಜಿ(ಹಿಂದುಳಿದ ವರ್ಗ ಎ), ವಾರ್ಡ್ ನಂ.19 ಸಂಗಮೇಶ್ ಕವಳಿಕಾಯಿ(ಸಾಮಾನ್ಯ), ವಾರ್ಡ್ ನಂ.20 ಪರವಿನ್‌ಬಾನು ಅಬ್ದುಲ್ ಮುನಾಫ್(ಹಿಂದುಳಿದ ವರ್ಗ ಎ ಮಹಿಳೆ) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಅದರಂತೆ, ವಾರ್ಡ್ ನಂ.23 ಬರಕತ್ ಅಲಿ ಮುಲ್ಲಾ(ಹಿಂದುಳಿದ ವರ್ಗ ಎ), ವಾರ್ಡ್ ನಂ.25 ಅಶೋಕ ಮಂದಾಲಿ(ಸಾಮಾನ್ಯ), ವಾರ್ಡ್ ನಂ.26 ಸಾಹಿರಾಬಾನು ಬಸೀರ್‌ಅಹ್ಮದ್ ಬಳ್ಳಾರಿ (ಹಿಂದುಳಿದ ವರ್ಗ `ಎ’ ಮಹಿಳೆ), ವಾರ್ಡ್ ನಂ.27 ಲಲಿತಾ ಬಸೆಟ್ಟೆಪ್ಪ ಅಸೂಟಿ(ಸಾಮಾನ್ಯ ಮಹಿಳೆ), ವಾರ್ಡ್ ನಂ.29 ಲಕ್ಷ್ಮಣ ಚಂದಾವರಿ(ಪರಿಶಿಷ್ಟ ಜಾತಿ),
ಜಿಲ್ಲೆಯ ಹಿರಿಯೂರು ಬಳಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು 10 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಹಿರಿಯೂರು ತಾಲೂಕಿನ ಹಾಲೂರು ಸಮೀಪ ನಡೆದಿದೆ.
ಮೃತರೆಲ್ಲರೂ ಗದಗ ತಾಲೂಕಿನ ಹುಯಿಲಗೋಳ ಗ್ರಾಮದವರು ಎನ್ನಲಾಗಿದೆ. ಹನುಮಂತಪ್ಪ(30), ಪ್ರಶಾಂತ್ ಹಟ್ಟಿ(29) ಗುರಪ್ಪ ಅಲಿಯಾಸ್ ಗುರುಮೂರ್ತಿ ಹೂಗಾರ್ (29) ಹಾಗೂ ರಮೇಶ್ ಅಲಿಯಾಸ್ ರಾಮನಗೌಡ (30) ಮೃತ ದುರ್ದೈವಿಗಳಾಗಿದ್ದಾರೆ.
ಬೆಂಗಳೂರಿಗೆ ಈರುಳ್ಳಿ ತುಂಬಿಕೊಂಡು ಹೊರಟಿದ್ದ ಲಾರಿ ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತವಾಗಿತ್ತು. ಅಪಘಾತವಾಗಿದ್ದ ಲಾರಿಗೆ ಹಿಂಬದಿಯಿಂದ 3 ಈಚರ್, 3 ಲಾರಿ, 1 ಕಾರ್ ಡಿಕ್ಕಿ ಹೊಡೆದಿವೆ. ಇದರ ಪರಿಣಾಮ 4 ಮಂದಿ ಸಾವನ್ನಪ್ಪಿ 10 ಮಂದಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳು ಹಿರಿಯೂರು, ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮೃತರು ಹುಯಿಲಗೋಳ ಗ್ರಾಮದಿಂದ ಒಟ್ಟು 6 ಮಂದಿ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಬೆಳ್ಳಂಬೆಳಗ್ಗೆ ಯಮಕಿಂಕರ ತನ್ನ ಅಟ್ಟಹಾಸ ಮೆರೆದಿದ್ದಾನೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರ್ಷದ ನವೆಂಬರ್, ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳುಗಳು ಪ್ರವಾಸಕ್ಕೆ ಪ್ರಶಕ್ತವಾಗಿದ್ದು, ಈ ತಿಂಗಳುಗಳಲ್ಲಿ ಅಧಿಕ ಜನರು ಪ್ರವಾಸ ಕೈಗೊಳ್ಳುತ್ತಾರೆ. ಅದರಂತೆ, ಗದಗ ಜಿಲ್ಲೆಯ ಪ್ರಾಚೀನ ಕಾಲದ ಐತಿಹಾಸಿಕ ದೇವಾಲಯಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗುಮಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ತುಸು ಚೇತರಿಕೆ ಕಾಣಿಸುತ್ತಿದೆ.
ಮುಂಡರಗಿ ತಾಲೂಕಿನ ಡಂಬಳ(ಧರ್ಮಪುರ) ಗ್ರಾಮದ ಐತಿಹಾಸಿಕ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕುಟಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಗ್ರಾಮಕ್ಕೆ ಬರುತ್ತಿರುವ ಪ್ರವಾಸಿಗರು ಗ್ರಾಮದಲ್ಲಿರುವ ದೊಡ್ಡ ಬಸವೇಶ್ವರ ದೇವಾಲಯ, ಜಪದ ಬಾವಿ, ಸಿದ್ಧೇಶ್ವರ ದೇವಾಲಯ, ತೋಂಟದಾರ್ಯ ಮಠ, ಜಮಾಲ ಶಾವಲಿ ದರ್ಗಾ, ಬೀಗರ ಬಾವಿ, ಸೋಮನಾಥ ದೇವಾಲಯ, ವಿಕ್ಟೋರಿಯಾ ಮಹಾರಾಣಿಯ ಕೆರೆ, ಕೋಟೆ, ಗಣಪತಿ ದೇವಾಲಯ ಸೇರಿದಂತೆ ಗ್ರಾಮದಲ್ಲಿರುವ ಇನ್ನಿತರ ಪುರಾತನ ಕಾಲದ ಐತಿಹಾಸಿಕ ಸ್ಥಳಗಳ ಸೊಬಗನ್ನು ಸವಿಯುತ್ತಿದ್ದಾರೆ.
ಡಂಬಳವು ಐತಿಹಾಸಿಕ ಗ್ರಾಮವಾಗಿದ್ದು, ಇಲ್ಲಿರುವ ಹಲವು ಪುರಾತನ ದೇವಾಲಯಗಳು, ಇಲ್ಲಿನ ಪ್ರಾಕೃತಿಕ ಸೌಂದರ್ಯ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಪ್ರವಾಸಿಗರಾದ ಶ್ರೀನಿವಾಸ ಕಟ್ಟಿಮನಿ, ಮಂಜುನಾಥ ಮುಧೋಳ ಹೇಳಿದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಸಾಮಾನ್ಯವಾಗಿ ಚಳಿಗಾಲದಲ್ಲಿ ಬೇವಿನಮರದಲ್ಲಿ ಬಿಳಿ ರೂಪದ ದ್ರವ ಸುರಿಯುತ್ತದೆ. ಇದು ಇಂದು-ನಿನ್ನೆಯದಲ್ಲ, ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಸ್ಥರಿಗೆ ಇದೊಂದು ಪವಾಡದಂತೆ ಭಾಸವಾಗಿದೆ.
ಬಿಜಕಲ್‌ನ ಗೋಪಾಲರಾವ್ ಎಂಬುವವರ ಹೊಲದಲ್ಲಿ ಬೇವಿನಮರದಿಂದ ಬಿಳಿ ದ್ರವ ಸ್ರವಿಸುತ್ತಿದೆ. ಇದನ್ನು ಕಂಡವರು, ಬೇವಿನಮರದ ಬುಡದಲ್ಲಿ ಗದ್ದೆಮ್ಮ ದೇವಿ ಮೂರ್ತಿ ಇದೆ. ಮರದಿಂದ ಬಿಳಿ ದ್ರವ ಸ್ರವಿಸುತ್ತಿರುವುದು ದೇವಿಯ ಪವಾಡ ಎಂದು ಹೇಳುತ್ತಿದ್ದಂತೆ, ಜನಸಾಗರ ಸೇರಿದೆ. ಕೊನೆಗೆ ಮರದ ಬಳಿ ಟೆಂಟ್ ಹಾಕಿ ಪೂಜೆ-ಪುನಸ್ಕಾರ ಪ್ರಕ್ರಿಯೆಗಳು ಭರ್ಜರಿಯಾಗಿ ನಡೆಯುತ್ತಿವೆ. ಇದನ್ನ ಕಣ್ತುಂಬಿಕೊಳ್ಳಲು ಜನ ಟಂಟಂ, ಆಟೋ, ಟ್ರ್ಕಾಕ್ಟರ್ ಸಮೇತ ತಂಡೋಪತಂಡವಾಗಿ ಆಗಮಿಸಿ, ಧನ್ಯತಾ ಭಾವ ಪ್ರದರ್ಶಿಸುತ್ತಿದ್ದಾರೆ.
ವಾಸ್ತವವಾಗಿ ಚಳಿಗಾಲದಲ್ಲಿ ಬೇವಿನ ಮರದಿಂದ ಬಿಳಿದ್ರವ ಸುರಿಯುವುದಕ್ಕೆ ವೈಜ್ಞಾನಿಕ ಕಾರಣಗಳಿವೆಯೇ ಹೊರತು ದೈವದ ಕಾರಣಗಳಲ್ಲ ಎಂದು ತಜ್ಞರು ಹೇಳುತ್ತಾರೆ.
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಅಷ್ಟೇ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳ ಟಿಕೆಟ್’ಗಾಗಿ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಬಿಜೆಪಿ 35 ವಾರ್ಡ್ ಗಳ ಪೈಕಿ 30 ವಾರ್ಡ್ ಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಕಾಂಗ್ರೆಸ್ ಇನ್ನೂವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ಬೆನ್ನಲ್ಲೇ ಪತ್ನಿಯರಿಗೆ ಟಿಕೆಟ್ ಕೈ ತಪ್ಪಿದ ಕಾರಣಕ್ಕಾಗಿ ಆಕ್ರೋಶಗೊಂಡ ಕಾರ್ಯಕರ್ತನೊಬ್ಬ ರಾತ್ರೋರಾತ್ರಿ ಧರಣಿ ನಡೆಸಿದರೇ, ಮತ್ತೊಬ್ಬ ಕಾರ್ಯಕರ್ತ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಬೆಟಗೇರಿಯ ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲು ಇದ್ದ 5ನೇವಾರ್ಡ್’ನ ಕಾಂಗ್ರೆಸ್ ಟಿಕೆಟ್ ಪಡೆಯಲು ತನ್ನ ಪತ್ನಿಗಾಗಿ ಪ್ರಯತ್ನ ನಡೆಸಿದ್ದ ವಿಷ್ಣು ಬಗಾಡೆ ಟಿಕೆಟ್ ಕೈ ತಪ್ಪಿದ ಪರಿಣಾಮ ತನ್ನ ಆಪ್ತರೆದರು ಕಣ್ಣೀರು ಹಾಕಿದ್ದು, ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನೊಂದು ಪ್ರಕರಣದಲ್ಲಿ 20ನೇ ವಾರ್ಡ್’ನ ಕಾಂಗ್ರೆಸ್ ಟಿಕೆಟ್ ಪತ್ನಿಗೆ ನೀಡುವಂತೆ ಚಾಂದ್ ಕೊಟ್ಟೂರ ಕಳೆದ ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷದ ಹೈಕಮಾಂಡ್ ಟಿಕೆಟ್ ಕೊಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಕೆ.ಎಚ್.ಪಾಟೀಲ್ ಅವರ ಪುತ್ಥಳಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಚಾಂದ್ ಕೊಟ್ಟೂರ ಅವರು ಧರಣಿ ನಡೆಸುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್ ಅಬ್ಬಿಗೇರಿ, ಶಹಬಾಜ್ ಮುಲ್ಲಾ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಶನಿವಾರ ರಾತ್ರಿ 10 ಗಂಟೆಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ನಲ್ಲಿ 35 ವಾರ್ಡ್ಗಳಲ್ಲಿ 100ಕ್ಕೂ ಅಧಿಕ ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾದಂತಿದೆ. ಇದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕೈ ನಾಯಕರಿಗೆ ಟಿಕೆಟ್ ಹಂಚಿಕೆ ಮುನ್ನವೇ ಅಸಮಾಧಾನದ ಬಿಸಿ ತಟ್ಟುತ್ತಿದೆ. ಇನ್ನು ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದರೆ, ಅಸಮಾಧಾನ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿದ್ದು, ಚುನಾವಣೆ ಸಂದರ್ಭದಲ್ಲಿ ಗೆಲುವಿಗೆ ಕಂಟಕವಾಗಿ ಪರಿಣಮಿಸಬಾರದೆಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದ್ದು, ಟಿಕೆಟ್ ಹಂಚಿಕೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
*ಉಪನ್ಯಾಸಕರ ಮೊಬೈಲ್ ನಲ್ಲಿ ಹರಿದಾಡಿದ ಇತಿಹಾಸ ನಕ್ಷೆ* • ತಪ್ಪು ಗಂಭೀರವೋ? ಸಾಮಾನ್ಯವೋ? ಎಂದ ಡಿಡಿಪಿಯು
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ವಿಶೇಷ, ಗದಗ:
ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಕುಂಠಿತಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹುದೊಡ್ಡ ಹೊಡೆತ ಕೊಟ್ಟಿದೆ.
ಮತ್ತೊಂದೆಡೆ, ಡೆಲ್ಟಾ ಹಾಗೂ ಒಮಿಕ್ರಾನ್ ಭೀತಿ ಕಾಡುತ್ತಿರುವುದರಿಂದ ಸದ್ಯ ನಡೆಯುತ್ತಿರುವ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳೇ ವಾರ್ಷಿಕ ಪರೀಕ್ಷೆಯಾಗುವ ಸಾಧ್ಯತೆಗಳು ಇವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳೇ ತಿಳಿಸುತ್ತಿವೆ. ಆದರೆ, ಗದಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ರಾಜ್ಯಾದ್ಯಂತ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳನ್ನು ನಡೆಸುತ್ತಿದೆ. ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಕೆಮಿಸ್ಟ್ರಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಇನ್ನೂ ಕೆಲವು ವಿಷಯಗಳ ಪರೀಕ್ಷೆಗಳು ನಡೆಯಬೇಕಿದೆ. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಿಸ್ತುಬದ್ಧ ಪರೀಕ್ಷೆಗಳನ್ನು ನಡೆಸದೆ ಕಾಟಾಚಾರಕ್ಕೆ ಎಂಬಂತೆ ಪ್ರಶ್ನೆ ಪತ್ರಿಕೆಗಳನ್ನು ತೆಗೆದು ಪಿಯುಸಿ ಮಧ್ಯಂತರ ಪರೀಕ್ಷೆ ನಡೆಸುತ್ತಿರುವುದು ವಿಪರ್ಯಾಸ.
ಡಿ.9ರಿಂದ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದ್ದು, ಡಿ.23ರಂದು ಕೊನೆಗೊಳ್ಳಲಿವೆ. ಗದಗ ಜಿಲ್ಲೆಯಲ್ಲಿ ಒಟ್ಟು 9,957 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಡಿ.10ರಂದು ನಡೆದ ಪ್ರಥಮ ವಿಷಯ ಕನ್ನಡ ಭಾಷಾ ಪತ್ರಿಕೆಯ 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ ರೋಮನ್ ಸಂಖ್ಯೆ ಮೂರನೇ ಪ್ರಶ್ನೆಯ ಯಾವುದಾದರೂ ಒಂದಕ್ಕೆ ಸಂದರ್ಭ ಸೂಚಿಸಿ ಸ್ವಾರಸ್ಯ ಬರೆಯರಿ ಎಂಬ ಮೂರು ಅಂಕದ `ಆ’ ವಿಭಾಗದ ಎರಡು ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಿಂದ ನಾಪತ್ತೆಯಾಗಿದ್ದವು. ಇದು ಶಿಕ್ಷಕರನ್ನೊಳಗೊಂಡಂತೆ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೀಡು ಮಾಡಿತ್ತು.
ಡಿ.11ರಂದು ನಡೆದ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆಯ ಪ್ರಶ್ನೆ ಸಂಖ್ಯೆ 30 ನಾಪತ್ತೆಯಾಗಿತ್ತು. ವಿದ್ಯಾರ್ಥಿಗಳು ಪ್ರಶ್ನೆಗಳಿಗಾಗಿ ದುರ್ಬಿನ್ ಹಾಕಿಕೊಂಡು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ರೋಮನ್ ಸಂಖ್ಯೆ ನಾಲ್ಕನೇ ಪ್ರಶ್ನೆಯ ಇ’ ವಿಭಾಗದ ನಾಲ್ಕು ಅಂಕದ ಪ್ರಶ್ನೆಯಲ್ಲಿ ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ ಎಂಬುದರ ಬದಲಿಗೆ 'ಪ್ರಬಂಧ’ ಬರೆಯರಿ ಎಂದು ನಮೂದಾಗಿತ್ತು. ಇದರಿಂದ ವಿದ್ಯಾರ್ಥಿಗಳು ತಬ್ಬಿಬ್ಬುಗೊಂಡಿದ್ದರು. ಬಳಿಕ ಸ್ವತಃ ಶಿಕ್ಷಕರೇ ಪ್ರಶ್ನೆ ಪತ್ರಿಕೆಯಲ್ಲಿ ಪ್ರಬಂಧ’ ಇದ್ದಲ್ಲಿಪತ್ರ’ ಎಂದು ಬರೆದು ಸುಸ್ತಾದ ಪ್ರಸಂಗವೂ ನಡೆಯಿತು.
ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿದ ಇತಿಹಾಸದ ನಕ್ಷೆ!:
ಯಾವುದೇ ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆಗಳಾಗಲಿ ಪರೀಕ್ಷಾ ಕೊಠಡಿಗಳಲ್ಲಿ ಮೊಬೈಲ್ ನಿಷಿದ್ಧ. ಕೊಠಡಿ ಮೇಲ್ವಿಚಾರಕರು ಸಹಿತ ಮೊಬೈಲ್ ತರುವಂತಿಲ್ಲ. ಆದರೆ, ದುರ್ದೈವದ ಸಂಗತಿ ಎಂದರೆ ಡಿ.9 ಗುರುವಾರ ನಡೆದ ಇತಿಹಾಸ ವಿಷಯದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ನಕ್ಷೆಯೇ ಇರಲಿಲ್ಲ. ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಗಮನಿಸಿದ ಬಳಿಕ ಎಚ್ಚೆತ್ತುಕೊಂಡ ಡಿಡಿಪಿಯು ಎಚ್.ಎಸ್. ರಾಜೂರು ಅವರು ಪಿಯು ಬೋರ್ಡ್ ಕಚೇರಿಗೆ ಕರೆ ಮಾಡಿ ನಕ್ಷೆಯನ್ನು ವಾಟ್ಸ್ಆ್ಯಪ್‌ಗೆ ಹಾಕಿಸಿಕೊಂಡು, ಜಿಲ್ಲೆಯ ಎಲ್ಲ ಕಾಲೇಜುಗಳ ಕೆಲವು ಉಪನ್ಯಾಸಕರಿಗೆ ಕಳುಹಿಸಿದ್ದಾರೆ. ಪರೀಕ್ಷೆ ನಡೆದ ಕೆಲಹೊತ್ತಿನ ಬಳಿಕ ಮ್ಯಾಪ್ ಝರಾಕ್ಸ್ ಮಾಡಿಸಿ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಹಂಚಿದ್ದಾರೆ. ಈ ಮೂಲಕ ಪರೀಕ್ಷಾ ಪಾವಿತ್ರ್ಯಕ್ಕೆ ಸ್ವತಃ ಅಧಿಕಾರಿಗಳೇ ಧಕ್ಕೆಯನ್ನುಂಟು ಮಾಡಿರುವುದು ಶೋಚನೀಯ.
ಕಾಗುಣಿತವೇ ತಪ್ಪು!:
ಡಿ.10ರಂದು ಜರುಗಿದ ಕನ್ನಡ ಪ್ರಶ್ನೆಪತ್ರಿಕೆಯ ಕೆಲವು ಕಡೆಗಳಲ್ಲಿ ಕಾಗುಣಿತಗಳು ತಪ್ಪಾಗಿ ಮುದ್ರಿತವಾಗಿದ್ದವು. ಇದರಿಂದ ವಿದ್ಯಾರ್ಥಿಗಳು ಪ್ರಶ್ನೆ ಅರ್ಥೈಸಿಕೊಳ್ಳಲು ಹೆಣಗಾಡಬೇಕಾಯಿತು. ಪ್ರ.12ರಲ್ಲಿ ಷಡ್ರಸಾನ್ನವನಿಕ್ಕಿ’ ಎಂಬುವ ಬದಲುಷಡ್ರಾಸನ್ನವನಿಕ್ಕಿ’ ಎಂದಾಗಿತ್ತು. ಪ್ರ.20ರಲ್ಲಿ ನಿರೂಪಕರು’ ಎಂಬಲ್ಲಿನಿರೂಒಕರು’ ಎಂದಾಗಿತ್ತು. ಅದರಂತೆ, ರೋಮನ್ ಸಂಖ್ಯೆ ನಾಲ್ಕರ ಆ’ ವಿಭಾಗದಲ್ಲಿಪ್ರಬಂಧವನ್ನು’ ಎಂಬಲ್ಲಿ `ಪ್ರಬಂಧಗಳನ್ನು’ ಎಂದು ನಮೂದಾಗಿತ್ತು.
ಡಿಡಿಪಿಯು ಬಾಲಿಶ ಹೇಳಿಕೆ
ದ್ವಿತೀಯ ಪಿಯುಸಿ ಕನ್ನಡ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಮೂರು ಅಂಕಗಳ ಎರಡು ಪ್ರಶ್ನೆಗಳು ಮೈನಸ್ ಆಗಿ ಕೇವಲ 97 ಅಂಕಗಳ ಪ್ರಶ್ನೆ ಪತ್ರಿಕೆ ಮಾತ್ರವೇ ಇತ್ತು. ಗ್ರೇಸ್‌ಮಾರ್ಕ್ಸ್ ಕೊಡುವಂತೆ ಪಿಯು ಬೋರ್ಡ್ ನಿರ್ದೇಶಕರಿಗೆ ಮನವಿ ಮಾಡಿಕೊಳ್ಳಲಾಗುವುದು. ಅವರು ಏನು ಹೇಳುತ್ತಾರೋ ನೋಡೋಣ. ಮಧ್ಯಂತರ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ವೇಳೆ ವಿದ್ಯಾರ್ಥಿಗಳಿಗೆ ಎರಡು ಗ್ರೇಸ್‌ಮಾರ್ಕ್ಸ್ ಕೊಡೋಣ ಅಂತ ಹೇಳಿದ್ದು, ಎಲ್ಲರೂ ಅಷ್ಟಕ್ಕೆ ಸುಮ್ಮನಾಗಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ತಪ್ಪು ಗಂಭೀರವೋ ಸಾಮಾನ್ಯವೋ ಎಂಬುದನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು. ಕನ್ನಡ ವಿಷಯದ ಪರೀಕ್ಷೆ ಡಿ.10ರಂದು ಮುಗಿದಿದೆ. ಮೌಲ್ಯಮಾಪನಕ್ಕೆ ಇನ್ನೂ 15 ದಿನ ಸಮಯವಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ ಗ್ರೆಸ್‌ಮಾರ್ಕ್ಸ್ ಕೊಡುವುದು, ಇಲ್ಲದಿದ್ದರೆ ಇಲ್ಲ ಎಂದು ಡಿಡಿಪಿಯು ಎಚ್.ಎಸ್.ರಾಜೂರು ಬಾಲಿಶವಾಗಿ ಪ್ರತಿಕ್ರಿಯಿಸಿದರು.
ನನಗೆ ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ನಾನು ಮಾಹಿತಿ ತರಿಸಿಕೊಂಡು ಮಾತನಾಡುತ್ತೇನೆ. ವಿದ್ಯಾರ್ಥಿಗಳಿಗೆ ಗ್ರೇಸ್‌ಮಾರ್ಕ್ಸ್ ಕೊಡುವ ಬಗ್ಗೆ ಪರೀಕ್ಷಾಂಗದ ನಿರ್ದೇಶಕರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಸ್ನೇಹಲತಾ, ನಿರ್ದೇಶಕರು. ಪಿಯು ಬೋರ್ಡ್, ಬೆಂಗಳೂರು
ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳು ಮೈನಸ್ ಆಗಿರುವುದು ಪಿಯು ಬೋರ್ಡ್ನಿಂದಲ್ಲ, ನಮ್ಮಿಂದ ತಪ್ಪಾಗಿದೆ. ಪಿಯು ಬೋರ್ಡ್ನವರು ಉತ್ತರ ಪತ್ರಿಕೆಯಲ್ಲಿ ಮ್ಯಾಪ್ ಇಡಬೇಕಿತ್ತು. ಆದರೆ, ಅವರು ಇಟ್ಟಿರಲಿಲ್ಲ. ಪಿಯು ಬೋರ್ಡ್ನವರು ಡಿಟಿಪಿ ಮಾಡಿ ಕಳುಹಿಸಿದ್ದು ಸರಿಯಾಗಿಯೇ ಇತ್ತಾದರೂ, ಮುದ್ರಣ ಮಾಡುವಾಗ ಪ್ರಶ್ನೆಗಳು ತಪ್ಪಿ ಹೋಗಿದೆ. ಇನ್ನು ಪ್ರಶ್ನೆಪತ್ರಿಕೆಯಲ್ಲಿ ಒಮ್ಮೊಮ್ಮೆ ಕಾಗುಣಿತ ತಪ್ಪಾಗಿರುತ್ತವೆ.
ಎಚ. ಎಸ್ . ರಾಜೂರು, ಗದಗ ಡಿಡಿಪಿಯು (ಪ್ರಭಾರ)
ಪ್ರಶ್ನೆಪತ್ರಿಕೆಗಳು ಮುದ್ರಣಗೊಳ್ಳುವುದಕ್ಕಿಂತ ಮುನ್ನ ಪ್ರೂಫ್ ರೀಡ್ ಮಾಡುವುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಆದ್ಯ ಕರ್ತವ್ಯ. ಆದರೆ, ಅವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇಂತಹ ಅವಘಡ ಸಂಭವಿಸಿದಾಗ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು.
ಗದಗ-ಬೆಟಗೇರಿ ನಗರಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಅವಳಿ ನಗರದ 35 ವಾರ್ಡ್ಗಳಲ್ಲಿ 30 ವಾರ್ಡ್ಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಶನಿವಾರ ಸಂಜೆ ತನ್ನ ಕೋರ್ ಕಮೀಟಿ ಸಭೆಯಲ್ಲಿ ಘೋಷಿಸಿದೆ.
ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಮುಖಂಡ ಅನಿಲ್ ಮೆನಸಿನಕಾಯಿ, ಶ್ರೀಪತಿ ಉಡುಪಿ, ಶ್ರೀಕಾಂತ್ ಖಟವಣೆ, ಎಂ.ಎಸ್.ಕರಿಗೌಡ್ರ, ಕಾಂತಿಲಾಲ್ ಬನ್ಸಾಲಿ, ಸಂಗಮೇಶ್ ದುಂದೂರ ಸೇರಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ಬಾರಿ ವಿಶೇಷವೇನೆಂದರೆ ಘೋಷಿಸಿದ ಮೂವತ್ತು ಅಭ್ಯರ್ಥಿಗಳಲ್ಲಿ ಇಬ್ಬರು ಮುಸ್ಲಿಂ ಅಭ್ಯರ್ಥಿಗಳಿರುವುದು ಗಮನಾರ್ಹ.
ಘೋಷಿಸಿದ ವಾರ್ಡ್ಗಳ ಪೈಕಿ 03, 22, 28, 32 ಹಾಗೂ 33ನೇ ವಾರ್ಡ್ಗಳಿಗೆ ಇನ್ನು ಅಭ್ಯರ್ಥಿಗಳ ಘೋಷಿಸಿಲ್ಲ. ಘೋಷಿಸಿದ ಅಭ್ಯರ್ಥಿಗಳಲ್ಲಿ ಕೊನೆಘಳಿಗೆಯಲ್ಲಿ ಬದಲಾವಣೆಯಾದರೂ ಅಚ್ಚರಿ ಪಡುವಂತಿಲ್ಲ. ಇನ್ನು ತೀವ್ರ ಪೈಪೋಟಿ ಇರುವ ಐದು ವಾರ್ಡ್ ಗಳಲ್ಲಿ ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ ಎನ್ನಲಾಗಿದೆ.
ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ತೀವ್ರ ಪೈಪೋಟಿ
ವಿಜಯಸಾಕ್ಷಿ ವಿಶೇಷ, ಗದಗ
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಡಿ. 8ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದೆ. ಎಂಟು ವರ್ಷಗಳ ಬಳಿಕ ಅವಳಿ ನಗರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ಜರಗುತ್ತಿರುವುದರಿಂದ ಕದನ ಕುತೂಹಲ ಕೆರಳಿಸಿದೆ.
ಟಿಕೆಟ್‌ಗಾಗಿ ಹೆಸರು ನೋಂದಾಯಿಸಿರುವ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಭಾವಿ ರಾಜಕೀಯ ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ. ಪಕ್ಷಗಳಲ್ಲಿ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ ಬಂಡಾಯ ಅಭ್ಯರ್ಥಿಗಳಾಗಿಯಾದರೂ ಚುನಾವಣೆ ಕಣಕ್ಕಿಳಿಯಲು ಸಜ್ಜುಗೊಳ್ಳುತ್ತಿದ್ದಾರೆ. ಇದು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ವಿಧಾನ ಪರಿಷತ್ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಅವಳಿ ನಗರದ 35 ವಾರ್ಡ್‌ಗಳಲ್ಲೂ ಚುನಾವಣಾ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಮಾರುದ್ಧವಿದೆ. ಉಭಯ ಪಕ್ಷಗಳಲ್ಲೂ ಆಕಾಂಕ್ಷಿಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲದಲ್ಲಿದ್ದು, ಅಳಿದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವಲ್ಲಿ ಮಗ್ನರಾಗಿದ್ದಾರೆ.
ಬಿಜೆಪಿ ಟಿಕೆಟ್‌ಗಾಗಿ 210 ಜನರು ಅರ್ಜಿ ಸಲ್ಲಿಸಿದರೆ, ಕಾಂಗ್ರೆಸ್‌ನಿಂದ 110 ಜನರು ಟಿಕೆಟ್ ನೀಡುವಂತೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಅರ್ಜಿ ಸಲ್ಲಿಸಿರುವರಲ್ಲಿ ಯುವ ಜನತೆಯೇ ಹೆಚ್ಚಿದ್ದಾರೆ ಎನ್ನಲಾಗುತ್ತಿದೆ. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಸುಮ್ಮನೆ ಕುಳಿತುಕೊಳ್ಳದೆ ಟಿಕೆಟ್‌ಗಾಗಿ ನಾಯಕರ ಮನೆಗೆ ಅಲೆದಾಡುತ್ತಿದ್ದಾರೆ. ಪಕ್ಷದಲ್ಲಿ ಪ್ರಭಾವಿ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅವಳಿ ನಗರದ 22ನೇ ವಾರ್ಡ್ ಗಂಗಿಮಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ 11 ಜನರು ಪೈಪೋಟಿ ನಡೆಸುತ್ತಿರುವುದು ವಿಶೇಷ.
ಅನಿಲ್ ಪ್ರಭಾವದ ನಿರೀಕ್ಷೆ
ಗದಗ ಮತಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಕಾಂಗ್ರೆಸ್ ಬಹುತೇಕ ಗದಗ-ಬೆಟಗೇರಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಬಂದಿದೆ. 2007ರಲ್ಲಿ ಮಾತ್ರ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಅವಳಿ ನಗರದಲ್ಲಿ ಕಾಂಗ್ರೆಸ್ ಸಂಪೂರ್ಣ ಹಿಡಿತ ಸಾಧಿಸಿದ್ದರೂ ಗದಗ ಮತಕ್ಷೇತ್ರದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರು ಅವಳಿ ನಗರದ 28 ವಾರ್ಡ್‌ಗಳಲ್ಲಿ ಪಡೆದಿರುವ ಮತಗಳು ಬಿಜೆಪಿ ಗೆಲುವಿಗೆ ಹೆಚ್ಚು ಸಹಕಾರಿಯಾಗಲಿದೆ. ಬಿಜೆಪಿ ನಾಯಕರೂ ಇದೇ ಲೆಕ್ಕಾಚಾರಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರದ ವೈಫಲ್ಯವನ್ನು ಮುಂದಿಟ್ಟು ಬಿಜೆಪಿಯನ್ನು ನೆಲಕಚ್ಚಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ ಎನ್ನಲಾಗುತ್ತಿದೆ. ಉಭಯ ಪಕ್ಷಗಳಿಗೆ ಪೈಪೋಟಿ ನೀಡಲು ಜೆಡಿಎಸ್ ಹವಣಿಸುತ್ತಿದೆ.
ಯಾರಿಗೆ ಅದೃಷ್ಟ?
ಈ ಬಾರಿ ನಗರಸಭೆಯ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ಹಪಾಹಪಿಸುತ್ತಿದ್ದು, ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಮತ್ತೊಂದೆಡೆ, ರಾಜ್ಯದಲ್ಲಿ ಆಪರೇಷನ್ ಕಮಲ ಸಂಸ್ಕೃತಿ ಹುಟ್ಟು ಹಾಕಿರುವ ಬಿಜೆಪಿಯ ಕೆಲವು ಪ್ರಭಾವಿ ಆಕಾಂಕ್ಷಿಗಳಿಗೆ ಕಾಂಗ್ರೆಸ್ಸಿಗರು ಆಸೆ, ಆಮಿಷಗಳನ್ನೊಡ್ಡಿ ಹೈಜಾಕ್ ಮಾಡುತ್ತಿದೆ ಎನ್ನಲಾಗುತ್ತಿದೆ. ಇದರಿಂದ ಗದಗ-ಬೆಟಗೇರಿ ನಗರಸಭೆಯ ಚುನಾವಣೆಗೂ ಮುನ್ನವೇ ‘ಆಯಾ ರಾಮ್ ಗಯಾ ರಾಮ್’ ಸಂಸ್ಕೃತಿ ಶುರುವಾಗಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಚುನಾವಣೆಯ ವೇಳೆ ಯಾವುದೇ ಮುಖಂಡರು ಪಕ್ಷಾಂತರ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದುತ್ವ ಪ್ರತಿಪಾದಕ ಶ್ರೀರಾಮಸೇನೆ ಬೆಂಬಲಿತ ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಇದರಿಂದಲೂ ಕೆಲವು ಅಭ್ಯರ್ಥಿಗಳ ಗೆಲುವಿಗೆ ತೊಡಕಾಗಬಹುದು.
ಗದಗ-ಬೆಟಗೇರಿ ಚುನಾವಣೆ ಟಿಕೆಟ್ ನೀಡುವಂತೆ 200ಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಕನಿಷ್ಠ ಐವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಡುಗಡೆಗೊಳಿಸಲಾಗುವುದು. ಆಕಾಂಕ್ಷಿಗಳ ಸಂಘಟನಾ ಶಕ್ತಿ, ಗೆಲ್ಲಬಹುದಾದ ಸಾಮರ್ಥ್ಯ ಹೀಗೆ ಇನ್ನಿತರ ಹಲವು ಮಾನದಂಡಗಳನ್ನು ಇಟ್ಟುಕೊಂಡು ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು.
ಮೋಹನ್ ಮಾಳಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ
ಟಿಕೆಟ್‌ಗಾಗಿ 110 ಜನರು ಹೆಸರು ನೋಂದಾಯಿಸಿದ್ದು, ಡಿ.11ರಂದು ಆಯ್ಕೆ ಸಮಿತಿಯ ಸಭೆ ನಡೆಸಿ ಪ್ರತಿ ವಾರ್ಡ್‌ಗಳ ಮುಖಂಡರೊಂದಿಗೆ ಚರ್ಚಿಸಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಾಮಾಜಿಕ ನ್ಯಾಯದ ಆಧಾರದಲ್ಲಿ ನಗರದ ಎಲ್ಲ ವಾರ್ಡ್‌ಗಳಲ್ಲಿನ ಪ್ರತಿ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಹಂಚಿಕೆ ಮಾಡಲಾಗುವುದು.
ಗುರುಣ್ಣ ಬಳಗಾನೂರ, ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ
ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡ್ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈಗಾಗಲೇ ಜೆಡಿಎಸ್ ಟಿಕೆಟ್‌ಗಾಗಿ 60ಕ್ಕೂ ಜನರು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಕೆಲ ಹಿರಿಯರು, ಕಾರ್ಯಕರ್ತರು ಸ್ಪರ್ಧಿಸಲು ಉತ್ಸಾಹ ತೋರಿದ್ದು, ಮೂಲ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು.
ಅಂದಾನಯ್ಯ ಕುರ್ತಕೋಟಿಮಠ, ಜೆಡಿಎಸ್ ಜಿಲ್ಲಾಧ್ಯಕ್ಷ
ಬೆಟಗೇರಿಯ ಕೆಲ ಬಿಜೆಪಿಯ ಪ್ರಭಾವಿ ಮುಖಂಡರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹೈಜಾಕ್ ಮಾಡ್ತಾ ಇದ್ದಾರೆ ಎನ್ನಲಾಗಿದೆ. ಬಿಜೆಪಿಯ ಮಾಜಿ ಸದಸ್ಯರ ಮನೆಗೆ ಹೋಗಿ ಪಕ್ಷಕ್ಕೆ ಕರೆ ತರಲು ಹರಸಾಹಸ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಕಾರ್ಯಕರ್ತರು ಹೇಳುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದ ಕೆಲ ಪ್ರಭಾವಿ ಮುಖಂಡರು ಕಾಂಗ್ರೆಸ್ ಪಕ್ಷ ಬಿಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ರೆ ಮುಸ್ಲಿಂ ಮುಖಂಡರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತದೆ. ಒಟ್ನಲ್ಲಿ ಆಯಾ ರಾಮ್, ಗಯಾ ರಾಮ್ ಆರಂಭವಾಗಿದ್ದುಂತೂ ಸತ್ಯ.