Home Blog Page 3279

ಚುನಾವಣಾ ಕರ್ತವ್ಯ ಲೋಪ; ಜೆ.ಇ. ಮಹೇಶ ರಮಾವತ್ ಅಮಾನತು

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಲ್ಲಾಪುರ ಉಪವಿಭಾಗದ ಎಂ.ಆರ್.ಬಿ.ಸಿ. ಜೆ.ಇ. ಮಹೇಶ ರಮಾವತ ಅವರು ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರಿ, ಕರ್ತವ್ಯಲೋಪ ಮಾಡಿರುವ ಹಿನ್ನಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಆದೇಶ ಹೊರಡಿಸಿದ್ದಾರೆ.

ಮಹೇಶ ರಮಾವತ ಅವರನ್ನು 67-ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ-ರೋಣ ರಸ್ತೆ, ಪುರ್ತಗೇರಿ ಕ್ರಾಸ್ ಚೆಕ್ ಪೋಸ್ಟನಲ್ಲಿ ತನಿಖಾ ಕಾರ್ಯವನ್ನು ನಿರ್ವಹಿಸಲು ಆದೇಶಿಸಲಾಗಿತ್ತು.

ಸದರಿಯವರು ನಿಗದಿತ ಆದೇಶದಂತೆ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗಿ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿಸಿದರ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134ರ ಉಲ್ಲಂಘನೆ ಮಾಡಿದ ಮಹೇಶ ರಮಾವತ ಅವರನ್ನು ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಅಮಾನತ್ತು ಅವಧಿಯಲ್ಲಿ ತಮ್ಮ ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್ ಆದೇಶದಲ್ಲಿ ತಿಳಿಸಿದ್ದಾರೆ.

ದಾಖಲೆ ಇಲ್ಲದೆ ಬಟ್ಟೆಗಳ ಸಾಗಾಟ; ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ಬಟ್ಟೆ ಜಪ್ತಿ

ಬಿಂಕದಕಟ್ಟಿ, ದುಂದೂರ ಚೆಕ್ ಪೋಸ್ಟ್ ನಲ್ಲಿ ಪತ್ತೆ……

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಪ್ರತ್ಯೇಕ ಪ್ರಕರಣದಲ್ಲಿ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳನ್ನು ಸೀಜ್ ಮಾಡಲಾಗಿದೆ.

ಯಾವುದೇ ದಾಖಲೆ ಇಲ್ಲದೆ ರೆಡಿಮೇಡ್ ಬಟ್ಟೆಗಳನ್ನು ಸಾಗಾಟ ಮಾಡುತ್ತಿದ್ದಾಗ ಬಿಂಕದಕಟ್ಟಿಯ ಜೀವನ ರಕ್ಷಾ ಬಳಿಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

1ಲಕ್ಷ 75 ಸಾವಿರ ರೂ. ಮೌಲ್ಯದ ಬಟ್ಟೆಗಳನ್ನು ಸೀಜ್ ಮಾಡಿ, ಮೂರು ಜನರ ವಿರುದ್ಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಗದಗ ತಾಲೂಕಿನ ದುಂದೂರ ‌ಚೆಕ್ ಪೋಸ್ಟ್ ನಲ್ಲಿ 3ಲಕ್ಷ 72 ಸಾವಿರದ 460 ರೂ. ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.

ಸೋಮವಾರ ಮುಂಜಾನೆ ಹುಬ್ಬಳ್ಳಿಯಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕಡೆ ಹೊರಟಾಗ ದುಂದೂರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಈ ರೆಡಿಮೇಡ್ ಬಟ್ಟೆಗಳು ಪತ್ತೆಯಾಗಿವೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ; ನಗರಸಭೆ ಅಧ್ಯಕ್ಷೆ ಉಷಾ ದಾಸರ ವಿರುದ್ಧ ಕೇಸ್

ದಾರ್ಮಿಕ ಆಚರಣೆ ದುರ್ಬಳಕೆ ಆರೋಪ…..

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ವಿಧಾನಸಭೆಗೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾರ್ಮಿಕ ಸ್ಥಳಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳನ್ನು ಮಾಡದಂತೆ ಚುನಾವಣಾ ಆಯೋಗ ಕಾನೂನು ರೂಪಿಸಿದೆ.

ಮೊನ್ನೆ ನಡೆದ ಗದಗನ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ, ಬಿಜೆಪಿ ಪಕ್ಷದ ಉಷಾ ಮಹೇಶ್ ದಾಸರ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದು ತೇರಿಗೆ ಎಸೆಯುವ ಬಾಳೆ ಹಣ್ಣಿನ ಮೇಲೆ ಶಿರಹಟ್ಟಿ ಕ್ಷೇತ್ರದ ಶಾಸಕಿ ಉಷಾ ಮಹೇಶ್ ದಾಸರ ಅಂತ ಬರೆದು, ಅದರ ಪೋಟೋ ತಗೆದು ರಾಜಕೀಯ ಪ್ರಚಾರ ಮಾಡಿ, ದಾರ್ಮಿಕ ಆಚರಣೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೋಟೋ…

ಅದಷ್ಟೆ ಅಲ್ಲದೆ ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಇದನ್ನು ನೋಡಿದ ಸಾರ್ವಜನಿಕರು ಲೈಕ್ ಹಾಗೂ ಕಾಮೆಂಟ್ ಮಾಡಿದ್ದರಿಂದ ಉಷಾ ಮಹೇಶ್ ದಾಸರ ಇವರು, ನನ್ನನ್ನು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ಶಾಸಕಿಯನ್ನಾಗಿ ನೋಡಲು ನಿತ್ಯ ಪ್ರಾರ್ಥಿಸುತ್ತಿರುವ ಜನರ ಆತ್ಮಾಭಿಮಾನಕ್ಕೆ, ಪ್ರೀತಿಗೆ ತಲೆಬಾಗಿ ನಮಿಸುವೆ. ನಿನ್ನೆಯ ದಿವಸ ತೋಂಟದಾರ್ಯ ಮಠದ ಜಾತ್ರೆಯ ಸಂದರ್ಭದ ಈ ಸನ್ನಿವೇಶ ತಿಳಿದು/ಕಂಡು ನನಗೆ ಭಾವೋಧ್ವೇಗದಲ್ಲಿ ಪದಗಳೆ ಹೊರಡುತ್ತಿಲ್ಲಾವೆಂದು ಧನ್ಯವಾದವನ್ನು ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ವಿವರಿಸಲಾಗಿದೆ.

ಈ ಕುರಿತು ಗದಗನ ಚುನಾವಣಾ ವಿಚಕ್ಷಣ ದಳದ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಂತೋಷ ತಂದೆ ನೀಲಕಂಠ ಹಂದಿಗನೂರ ಎಂಬುವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELIGIOUS INSTITUTIONS (PREVENTION OF MISUSE) ACT 1988(u/s-7 ಅಡಿಯಲ್ಲಿ c/r no-0035/2023 ಪ್ರಕರಣ ದಾಖಲಾಗಿದೆ.

ಟಿಕೆಟ್ ಕೊಟ್ರೆ ಸರಿ…ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ; ಸ್ವಾಭಿಮಾನ ಸಮಾವೇಶದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಘೋಷಣೆ

ಅಭಿಮಾನಿಗಳಿಂದ ಕಂಬಳಿ ಹಾಗೂ ಕುರಿಗಳ ಕಾಣಿಕೆ……

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ಕ್ಷೇತ್ರದ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಲಾಗುವುದು, ಕಾರ್ಯಕರ್ತರ, ಅಭಿಮಾನಿಗಳ ನಿರ್ಧಾರಕ್ಕೆ ಬದ್ದನಾಗಿದ್ದು, ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ರೆ ಸರಿ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವದಾಗಿ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಘೋಷಿಸಿದರು.

ಅವರು, ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲೂ ತಮ್ಮ ಹೆಸರು ಪ್ರಕಟವಾಗದ ಹಿನ್ನೆಲೆಯಲ್ಲಿ
ಶಿರಹಟ್ಟಿ ಪಟ್ಟಣದ ಹೊರವಲಯದಲ್ಲಿ ಸೇರಿದ್ದ ಬೆಂಬಲಿಗರ ಹಾಗೂ ಅಭಿಮಾನಿಗಳ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದರು.

ಇದಕ್ಕೂ ಮೊದಲು ಸಮಾವೇಶದಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದನ್ನು ನೋಡಿ ಭಾವುಕರಾದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಣ್ಣೀರು ಹಾಕುತ್ತಾ ವೇದಿಕೆ ಏರಿದರು.

ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮಾಜಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸೇರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು, ಅಭಿಮಾನಿಗಳು, ಕ್ಷೇತ್ರದ ಹೊರಗಿನವರು ಅಭ್ಯರ್ಥಿಗಳಿಗೆ ಟಿಕೆಟ್ ಬೇಡ, ರಾಯಚೂರು ಮೂಲದ ಅಂಬಣ್ಣ ಹಾಗೂ ಗದಗ ತಾಲೂಕಿನ ಸುಜಾತ ದೊಡ್ಡಮನಿಗೂ ಟಿಕೆಟ್ ಕೊಡೋದು ಬೇಡ ಎಂದು ಒತ್ತಾಯಿಸಿದರು. ಅಷ್ಟೇ ಅಲ್ಲದೆ ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದರು. ಹೈ ಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮೂಲಕ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಬಂಡಾಯ ಹೈ ಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಿಮಿಸಬಹುದು.

ಇದೇ ಸಂದರ್ಭದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುಲು ಅನೇಕ ಅಭಿಮಾನಿಗಳು ಕಂಬಳಿ ನೀಡಿ, ಕುರಿಗಳನ್ನು ಹಾಗೂ ಲಕ್ಷಾಂತರ ರೂ. ಹಣಕಾಸಿನ ನೆರವು ನೀಡಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಬಿಜೆಪಿ ಮುಖಂಡರ ವಿರುದ್ಧ ಕೇಸ್

ಶಾಸಕರಾದ ರಾಮಣ್ಣ ಲಮಾಣಿ, ಪ್ರದೀಪ್ ಶೆಟ್ಟರ್, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಸೇರಿ ಹಲವರ ವಿರುದ್ಧ ಪ್ರಕರಣ…….

ಪಕ್ಷದ ಮುಖಂಡರಲ್ಲಿ ಎಚ್ಚರಿಕೆ ಮೂಡಿಸಿದ ಮೊದಲ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ಪಕ್ಷದ ಕಾರ್ಯ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ವಿಪ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ಸೇರಿ ಹಲವರ ಮೇಲೆ ಕಾನೂನು ಕ್ರಮಕ್ಕಾಗಿ ದೂರು ಸಲ್ಲಿಸಲಾಗಿದೆ.

ಏ.೬ರಂದು ಗುರುವಾರದಂದು ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ನೇತೃತ್ವದಲ್ಲಿ ಸೇರಿದ್ದ ಆಕಾಂಕ್ಷಿಗಳು, ಕಾರ್ಯಕರ್ತರು ಬಿಜೆಪಿ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಲ್ಲದೆ, ಇದೇ ಸಂದರ್ಭದಲ್ಲಿ ಪಕ್ಷದಲ್ಲಿ ಉಂಟಾದ ಗೊಂದಲ ಬಗೆಹರಿಸಲು ಆಣೆ ಪ್ರಮಾಣ ಮಾಡಿಸಿದ್ದಾರೆ. ಈ ವಿಷಯ ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಆಗಿರುವ ಶಂಕರ ಹುಲ್ಲಮ್ಮನವರ ದೂರು ದಾಖಲಿಸಿದ್ದಾರೆ.

ಈ ವೇಳೆ ಹಾಜರಿದ್ದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಾ.ಚಂದ್ರು ಲಮಾಣಿ, ಗುರುನಾಥ ದಾನಪ್ಪನವರ, ಭೀಮಸಿಂಗ್ ರಾಥೋಡ, ಗದಗ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮೇಲೆ ಲಕ್ಷ್ಮೇಶ್ವರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಇದೇ ಮೊದಲ ಬಾರಿ ಇಂಥದೊಂದು ವಿಶೇಷ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಜಿಲ್ಲೆಯಲ್ಲಿ ಬೇರೆ ಬೇರೆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಎಚ್ಚರಿಕೆಯ ಘಂಟೆ ಮೊಳಗಿಸಿದೆ.

ಅಬಕಾರಿ ಪೊಲೀಸರ ಕಾರ್ಯಾಚರಣೆ; ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ, ಕಾರು ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ರಮವಾಗಿ ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಮದ್ಯ ಜಪ್ತಿ ‌ಮಾಡಿ‌, ಆರೋಪಿಯನ್ನು ಬಂಧಿಸಿದ ಘಟನೆ ಭಾನುವಾರ ಮುಂಜಾನೆ ಜರುಗಿದೆ.

ಗದಗ ತಾಲೂಕಿನ ಮುಳಗುಂದ ರಸ್ತೆಯ ಕಣವಿ ಕ್ರಾಸ್ ಬಳಿ ಅಬಕಾರಿ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಆರೋಪಿ ಮುಳಗುಂದ ಪಟ್ಟಣದ ವಿದ್ಯಾನಗರ‌ ನಿವಾಸಿ ಮಹಾದೇವಪ್ಪ ಮಲ್ಲಪ್ಪ ಕಣವಿ ಎಂಬುವರು, ‌ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ 33,724 ರೂ. ಮೌಲ್ಯದ 86.4 ಲೀಟರ್ ಮದ್ಯ ಸೀಜ್ ಮಾಡಲಾಗಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 11,14 ಹಾಗೂ 15ರ ಉಲ್ಲಂಘನೆಯಾಗಿದ್ದು, ಕಲಂ 32(1),38(ಎ) ಮತ್ತು 43 ರ ಅನ್ವಯ ಆರೋಪಿ ಮಹಾದೇವಪ್ಪ ಮಲ್ಲಪ್ಪ ಕಣವಿ ಎಂಬುವರನ್ನು ಬಂಧಿಸಿ, ಕಾರು ಕೂಡ ಸೀಜ್ ಮಾಡಲಾಗಿದೆ.

ಅಬಕಾರಿ ಡಿಸಿ ಭರತೇಶ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಶೈನಾಜ್ ಬೇಗಂ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿದ್ದಪ್ಪ ಹಿರೇತನದ ಹಾಗೂ ಆರ್ ಕೆ.ಗೌಡರ್ ಈ ಕಾರ್ಯಾಚರಣೆ ನಡೆಸಲಾಗಿದೆ.

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ; ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 100 ಗ್ಯಾಸ್‌ ಸ್ಟವ್‌ ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಯಾವುದೇ ಸೂಕ್ತ ದಾಖಲೆಗಳಿಲ್ಲದೇ ವಾಹನವೊಂದರಲ್ಲಿ ಸಾಗಿಸುತ್ತಿದ್ದ 100 ಗ್ಯಾಸ್‌ ಸ್ಟವ್‌ಗಳನ್ನು ಚೆಕ್‌ಪೋಸ್ಟ್‌ ಸಿಬ್ಬಂದಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಆರೋಪಿತರಾದ ಉತ್ತರಪ್ರದೇಶ ಮೂಲದ, ಹಾಲಿ ಗದುಗಿನ ಮಹೇಂದ್ರಕರ್‌ ಸರ್ಕಲ್‌ ಬಳಿ ವಾಸವಿರುವ ಖುರ್ಶಿದ್‌ ಶರೀಫ್‌ ಶಹಪೂರ ಹಾಗೂ ಹುಬ್ಬಳ್ಳಿ ನಿವಾಸಿ ಬಾಬಜಾನ್‌ ಮಹ್ಮದಗೌಸ್‌ ಮಿಶ್ರಿಕೋಟಿ ಇವರಿಬ್ಬರೂ ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ತಮ್ಮ ಅಶೋಕ ಲೈಲ್ಯಾಂಡ್‌ ದೋಸ್ತ್‌ ವಾಹನದಲ್ಲಿ ಬರುತ್ತಿರುವಾಗ ಹುಲಕೋಟಿಯ ದುಂದೂರು ಕ್ರಾಸ್‌ ಚೆಕ್‌ಪೋಸ್ಟ್‌ನಲ್ಲಿ ವಾಹನ ನಿಲ್ಲಿಸಿ ಪರಿಶೀಲಿಸಿದಾಗ, 1,20,000 ಬೆಲೆಬಾಳುವ 100 ಗ್ಯಾಸ್‌ ಸ್ಟವ್‌ಗಳು ಸಿಕ್ಕಿವೆ.

ಈ ಕುರಿತು ದಾಖಲಾತಿಗಳ ಬಗ್ಗೆ ಕೇಳಿದಾಗ ಆರೋಪಿತರು ಸಮರ್ಪಕ ಉತ್ತರ ನೀಡದೇ, ಸೂಕ್ತ ದಾಖಲೆಗಳನ್ನೂ ಒದಗಿಸದೇ ಇರುವುದರಿಂದ ಸದರಿ ವಾಹನದೊಂದಿಗೆ ಗ್ಯಾಸ್‌ ಸ್ಟವ್‌ಗಳನ್ನು ವಶಪಡಿಸಿಕೊಂಡು, ಕೆ.ಪಿ. ಕಾಯ್ದೆ 98ರ ಪ್ರಕಾರ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ಮಹಿಳೆಯ ವಿರುದ್ಧ ದೂರು ದಾಖಲು

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಬಸ್‌ ನಿಲ್ದಾಣದ ಎದುರಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಯಾವುದೇ ಅನುಮತಿಯಿಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳ ವಿರುದ್ಧ ಶಿರಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿರಹಟ್ಟಿ ತಾಲೂಕಿನ ದೇವಿಹಾಳದ ಗಂಗವ್ವ ಎಂಬ ಮಹಿಳೆ ಗ್ರಾಮದ ಬಸ್‌ ನಿಲ್ದಾಣದ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಯಾವುದೇ ಅನುಮತಿಯಿಲ್ಲದೇ ತನ್ನ ಸ್ವಂತ ಲಾಭಕ್ಕಾಗಿ ರಟ್ಟಿನ ಬಾಕ್ಸ್‌ನಲ್ಲಿ ಮದ್ಯದ ಪ್ಯಾಕೆಟ್‌ಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಪಿಎಸ್‌ಐ ವಿಜಯಕುಮಾರ ತಳವಾರ‌ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.

17,669 ರೂ. ಮೌಲ್ಯದ ಮದ್ಯದ ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆದು, ಸದರಿ ಆರೋಪಿತಳ ಮೇಲೆ ಕ್ರಮ ಜರುಗಿಸುವಂತೆ ಸರಕಾರಿ ದೂರು ದಾಖಲಿಸಿದ್ದಾರೆ.

ಶಿರಹಟ್ಟಿ ಪೊಲೀಸರ ಕಾರ್ಯಾಚರಣೆ; ಅಕ್ರಮ ಮದ್ಯ ಜಪ್ತಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ತಾಲೂಕಿನ ಮಜ್ಜೂರ ತಾಂಡಾದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರಿಗೆ ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೇ ತನ್ನ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ರಟ್ಟಿನ ಬಾಕ್ಸ್ ಗಳಲ್ಲಿ ಮದ್ಯದ ಟೆಟ್ರಾ ಪಾಕೀಟುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಶಿರಹಟ್ಟಿ ಪೊಲೀಸರು ಓರ್ವನನ್ನು ಬಂಧಿಸಿ, ಮದ್ಯ ವಶಪಡಿಸಿಕೊಂಡಿದ್ದಾರೆ.

ಆರೋಪಿಯಿಂದ ಅಂದಾಜು 31,224 ರೂ. ಮೌಲ್ಯದ 69 ಲೀ. ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪಿಎಸ್ಐಗಳಾದ ಈರಣ್ಣ ರಿತ್ತಿ, ವಿಜಯಕುಮಾರ್ ತಳವಾರ, ಸಿಬ್ಬಂದಿಗಳಾದ ಹನಮಂತಪ್ಪ ದೊಡ್ಡಮನಿ, ಮೆಹಬೂಬ್ ವಡ್ಡಟ್ಟಿ, ಸೋಮಶೇಖರ್ ರಾಮಗೇರಿ, ಫಕ್ಜೀರೇಶ್ ಲಮಾಣಿ, ಬಸವರಾಜ್ ಮುಳಗುಂದ ಹಾಗೂ ಠಾಕೂರ್ ಕಾರಬಾರಿ ಈ ಕಾರ್ಯಾಚರಣೆಯಲ್ಲಿ ಇದ್ದರು.

ಗದಗ-ಬೆಟಗೇರಿ ಪೊಲೀಸರ ಕಾರ್ಯಾಚರಣೆ; ಕಂತೆ ಕಂತೆ ಹಣ ಸೀಜ್, ಅಪಾರ ಪ್ರಮಾಣದ ಮದ್ಯ ಜಪ್ತಿ

ಶಿರಹಟ್ಟಿ ತಾಲೂಕಿನಲ್ಲೂ ಅಪಾರ ಪ್ರಮಾಣದ ಮದ್ಯ ಜಪ್ತಿ…….

ವಿಜಯಸಾಕ್ಷಿ ಸುದ್ದಿ, ಗದಗ/ಶಿರಹಟ್ಟಿ

ಗದಗ‌ ಶಹರ, ಬೆಟಗೇರಿ ‌ಹಾಗೂ ಶಿರಹಟ್ಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಂತೆ ಕಂತೆ ಹಣ ಸೀಜ್ ಮಾಡಿ, ಅಪಾರ ಪ್ರಮಾಣದ ಮದ್ಯ ಜಪ್ತಿ ಮಾಡಿದ್ದಾರೆ.

ಬೆಟಗೇರಿಯ ನರೇಗಲ್ ರಸ್ತೆಯ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿಯ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುವಾಗ ಯಾವುದೇ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದಾಗ 5ಲಕ್ಷ 50 ಸಾವಿರ ‌ಹಣ ಪತ್ತೆಯಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮುಳಗುಂದ ರಸ್ತೆಯ ಕುಟೀರ ಹೊಟೇಲ್ ಬಳಿಯ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುವಾಗ ಯಾವುದೇ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 2ಲಕ್ಷ 18.500 ರೂ. ಗಳನ್ನು ಸೀಜ್ ಮಾಡಲಾಗಿದೆ.

ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಹಾಗೆಯೇ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾ( ಶಿವಾಜಿ‌ ನಗರ)ದಲ್ಲಿ ಅಕ್ರಮ ಮದ್ಯ ಪತ್ತೆಯಾಗಿದೆ. ಸುಮಾರು 27ಸಾವಿರ ರೂ. ಮೌಲ್ಯದ 69.120 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

error: Content is protected !!