Home Blog Page 3280

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 561 ಸೀರೆಗಳು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಯಾವುದೇ ದಾಖಲೆಗಳಿಲ್ಲದೇ 561 ಸೀರೆಗಳನ್ನು ಸಾಗಿಸುತ್ತಿದ್ದಾಗ ದುಂದೂರು ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಎ.5ರಂದು ಆರೋಪಿತನಾದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ದೆಸನೂರಿನ ಆಲಮ್‌ಅತ್ತಾವಲ್ಲಾ ನಿಂಬರಗಿ ಮಧ್ಯಾಹ್ನ 1.35ರ ಸಮಯಕ್ಕೆ ಹುಬ್ಬಳ್ಳಿಯಿಂದ ಗದಗಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 34 ಸಾವಿರ ರೂ. ಬೆಲೆಬಾಳುವ 561 ಸಾಗಾಟ ಮಾಡುತ್ತಿದ್ದ.

ದುಂದೂರು ಚೆಕ್‌ಪೋಸ್ಟ್‌ ಬಳಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಸಿಕ್ಕಿದ್ದು, ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ, ಆರೋಪಿಯು ಸೂಕ್ತ ದಾಖಲೆ, ಉತ್ತರವನ್ನು ಕೊಡದಿರುವುದರಿಂದ ಪಂಚರ ಸಮಕ್ಷಮ ಪಂಚನಾಮೆ ಮಾಡಿಸಿ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸದರಿ ಆರೋಪಿಯು ಅನುಮಾನಾಸ್ಪದವಾಗಿ ಎಲ್ಲಿಂದಲೋ ಸೀರೆಗಳನ್ನು ತಂದು, ಕಳ್ಳತನ ಅಥವಾ ಮೋಸದಿಂದ ಸಾಗಾಟ ಮಾಡುತ್ತಿದ್ದ ಎಂದು ಸರ್ಕಾರದ ಪರವಾಗಿ ಕಲಂ 98 ಕೆ.ಪಿ. ಕಾಯ್ದೆಯಂತೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಕಾರ್ಯಾಚರಣೆ; 8 ಲಕ್ಷ ರೂ. ಮೌಲ್ಯದ ಬಣ್ಣ ಬಣ್ಣದ ರೇಷ್ಮೆ ಸೀರೆಗಳ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದ್ದೆ ತಡ ಅಕ್ರಮ ಚಟುವಟಿಕೆಗಳು ಗರಿಗೆದರಿವೆ.

ಚುನಾವಣೆಯಲ್ಲಿ ಹಣ, ಹೆಂಡ ಹಾಗೂ ಉಡುಗೊರೆಗಳ ಆಮಿಷವೊಡ್ಡಿ ಮತದಾರರ ಮನಸೆಳೆಯಲು ವಿವಿಧ ರೀತಿಯ ಕಸರತ್ತು ಆರಂಭವಾಗಿದೆ.

ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಗದಗ ಜಿಲ್ಲಾಡಳಿತ ಹದ್ದಿನಕಣ್ಣು ಇಟ್ಟಿದೆ. ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ನಿರ್ಮಿಸಿ ನಿರಂತರ ತಪಾಸಣೆ ನಡೆಸಲಾಗುತ್ತದೆ.

ಗದಗ ಸಮೀಪದ ಬಿಂಕದಕಟ್ಟಿ ಸಮೀಪದ ಚೆಕ್ ಪೋಸ್ಟ್ ನಲ್ಲಿ ಬೆಳ್ಳಂಬೆಳಿಗ್ಗೆ ಅಕ್ರಮವಾಗಿ ರೇಷ್ಮೆ ಸೀರೆಗಳನ್ನು ಸಾಗಾಟ ಮಾಡುವಾಗ ಸೀಜ್ ಮಾಡಲಾಗಿದೆ.

8 ಲಕ್ಷ ರೂ. ಮೌಲ್ಯದ 78 ರೇಷ್ಮೆ ಸೀರೆಗಳನ್ನು ಆಂದ್ರಪ್ರದೇಶದ ಕಡಪ ಜಿಲ್ಲೆಯಿಂದ ಹುಬ್ಬಳ್ಳಿಗೆ ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಈ ಸೀರೆಗಳನ್ನು ಸೀಜ್ ಮಾಡಲಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಸಿಡಿಲು ಬಡಿದು ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವು, ಮತ್ತೊಬ್ಬ ಗಂಭೀರ

ಕುರಿ ಮೇಯಿಸಲು ಹೋದಾಗ ದುರ್ಘಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದು ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.

ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಶರಣಪ್ಪ (20) ಹಾಗೂ ದೇವೇಂದ್ರಪ್ಪ (16) ಮೃತಪಟ್ಟಿದ್ದಾರೆ. ಮತ್ತೊಬ್ಬ ಸುನೀಲ ಎಂಬಾತ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಡಿಲಿನ ಹೊಡೆತಕ್ಕೆ ಹಲವು ಕುರಿಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಮೂವರು ಕುರಿ ಮೇಯಿಸಲು ಹೋಗಿದ್ದರು ಎನ್ನಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲ‌ ಮುಟ್ಟಿದೆ.

ಘಟನೆಯ ಸುದ್ದಿ ತಿಳಿದು ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯೇಕ ಕಾರ್ಯಚರಣೆ; ಮೂವರ ಬಂಧನ, ಮದ್ಯ ಜಪ್ತಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023

ಗದಗ : ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಎಪ್ರಿಲ್ 6 ರ ಬೆಳಗ್ಗೆ 9 ರಿಂದ ಎಪ್ರಿಲ್ 7 ರ ಬೆಳಗ್ಗೆ 9 ಗಂಟೆಯ ವರೆಗೆ ಪೊಲೀಸ್ ಹಾಗೂ ಅಬಕಾರಿ ತಂಡಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅಂದಾಜು 21,049 ರೂ ಮೌಲ್ಯದ 51.34 ಲೀ ಮದ್ಯವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.

ಮೇ. 6 ರಂದು ನರಗುಂದ ಕೆಎಸ್ಆರ್ ಟಿ.ಸಿ ಡಿಪೋ ಹತ್ತಿರ ಅಬಕಾರಿ ಇಲಾಖೆ ವತಿಯಿಂದ ಕುರ್ಲಗೇರಿ ಗ್ರಾಮದ ಹುಚ್ಚಪ್ಪ ಚಲವಾದಿ ಅವರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 3372 ರೂ. ಮೌಲ್ಯದ 8.64 ಲೀ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ವಾಹನ ಹಾಗೂ ಸವಾರನನ್ನು ವಶಕ್ಕೆ ಪಡೆಯಲಾಗಿದೆ.

ಮೇ.6 ರಂದು ದುಂದೂರ ಚೆಕ್ ಪೋಸ್ಟ ಹತ್ತಿರ ಹುಬ್ಬಳ್ಳಿ ಕಡೆಯಿಂದ ಬಂದ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಂತೂರ-ಬೆಂತೂರ ಗ್ರಾಮದ ಯಲ್ಲಪ್ಪ.ಪ.ಬಂಗಾರಿ ಅವರಿಂದ 3150 ರೂ. ಮೌಲ್ಯದ 7.380 ಲೀ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಮಧ್ಯಾಹ್ನ 2 ಗಂಟೆಯ ವೇಳೆಗೆ ಗಜೇಂದ್ರಗಡ ಪಟ್ಟಣದಲ್ಲಿ ಗಸ್ತು ನಿರ್ವಹಿಸುವಾಗ ನಾಗರಸಿಕೊಪ್ಪ ಕ್ರಾಸ್ ಹತ್ತಿರ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಲ್ಲಪ್ಪ.ವಿ. ತೋಟದ ಇವರು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 7104 ರೂ. ಮೌಲ್ಯದ 17.28 ಲೀ ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

ಲೋಕಾಯುಕ್ತ ಪೊಲೀಸರ ದಾಳಿ; ವಂಶಾವಳಿ ಪ್ರಮಾಣಪತ್ರ ಕೊಡಲು ಲಂಚ ಪಡೆಯುತ್ತಿದ್ದ ಬ್ರೋಕರ್ ಬಂಧನ, ರೆವಿನ್ಯೂ ಇನ್ಸ್‌ಪೆಕ್ಟರ್ ಪರಾರಿ

25 ಸಾವಿರ ರೂ.ಹಣ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ದಾಳಿ……

ವಿಜಯಸಾಕ್ಷಿ ಸುದ್ದಿ, ಗದಗ/ರೋಣ

ಕೋರ್ಟ್ ಮೂಲಕ ಇಬ್ಬರಿಗೆ ಹಂಚಿಕೆಯಾಗಿದ್ದ ಆಸ್ತಿಯ ವಂಶಾವಳಿ ಪ್ರಮಾಣಪತ್ರ ಕೊಡಲು ಲಂಚ ಪಡೆದ ಬ್ರೋಕರ್ ಓರ್ವನ ಮೇಲೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ರೋಣದ ತಾಲೂಕು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ರೆವಿನ್ಯೂ ಇನ್ಸ್‌ಪೆಕ್ಟರ್ ನಿಂಗಪ್ಪ ಅಡವೆಣ್ಣವರ ಹಾಗೂ ಬ್ರೋಕರ್ ಹುಸೇನಸಾಬ್ ಗೋನಾಳ ಎಂಬುವವರು, ಫಿರ್ಯಾದಿ ಸಲಾಯುದ್ದೀನ್ ಕಲಾದಗಿ ಎಂಬುವರು ಆಸ್ತಿಗೆ ಸಂಬಂಧಿಸಿದ ವಂಶಾವಳಿ ಪ್ರಮಾಣಪತ್ರ ಕೊಡಲು 25 ಸಾವಿರ ರೂ.ಗಳ ಲಂಚ ಕೇಳಿದ್ದರು.

ಗುರುವಾರ ಮಧ್ಯಾಹ್ನ ಫಿರ್ಯಾದಿ ಸಲಾಯುದ್ದೀನ ಲಂಚದ ಹಣ‌ 25 ಸಾವಿರ ರೂ.ಗಳನ್ನು ಬ್ರೋಕರ್ ಹುಸೇನಸಾಬ ಗೋನಾಳಿಗೆ ಕೊಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿ ಹುಸೇನಸಾಬನನ್ನು ವಶಕ್ಕೆ ಪಡೆದಿದ್ದಾರೆ.

ಈ ಮಾಹಿತಿ ತಿಳಿಯುತ್ತಿದ್ದಂತೆಯೇ ರೆವಿನ್ಯೂ ಇನ್ಸ್‌ಪೆಕ್ಟರ್ ನಿಂಗಪ್ಪ ಅಡವೆಣ್ಣವರ ಪರಾರಿಯಾಗಿದ್ದು, ಬಂಧಿಸಲು ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ.

ವಂಶಾವಳಿ ಪ್ರಮಾಣಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಈ ಮೊದಲೇ ಮೂರು ಬಾರಿ ತಿರಸ್ಕರಿಸಲಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್, ಅಜೀಜ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಿರೂಪಾಕ್ಷ ಅರಿಷಿಣದ ಹಾಗೂ
ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.

ದಾಖಲೆಗಳಿಲ್ಲದೇ ಅಕ್ಕಿ ಸಾಗಾಟ; ಕ್ಯಾಂಟರ್ ಸಮೇತ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

ಗದಗನ ಅಮರೇಶ್ವರ ನಗರ ನಿವಾಸಿ ಮೊಹಮ್ಮದ್ ರಫೀಕ ಮಾಳೆಕೊಪ್ಪ ಆರೋಪಿ…….

ಲಕ್ಷ್ಮೇಶ್ವರ/ಗದಗ : ಯಾವುದೇ ದಾಖಲೆಗಳಿಲ್ಲದೇ ರಾಣೇಬೆನ್‌ನೂರಿನಿಂದ ಲಕ್ಷ್ಮೇಶ್ವರಕ್ಕೆ ಸಾಗಿಸುತ್ತಿದ್ದ ಅಕ್ಕಿಯನ್ನು ಗೋನಾಳ ಚೆಕ್‌ಪೋಸ್ಟ್‌ನಲ್ಲಿ ಲಕ್ಷ್ಮೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಏಪ್ರಿಲ್‌ 1ರ ಮುಂಜಾನೆ 9.30ರ ಸಮಯದಲ್ಲಿ ಗಂಗಿಮಡಿ ರಸ್ತೆಯ ಅಮರೇಶ್ವರ ನಗರದ ಚಾಲಕ ಮೊಹಮ್ಮದರಫೀಕ್‌ ಬಾಬುಸಾಬ ಮಾಳೆಕೊಪ್ಪ ಈತನು ತನ್ನ ಕ್ಯಾಂಟರ್‌ ವಾಹನದಲ್ಲಿ ಯಾವುದೇ ಬಿಲ್‌ ಅಥವಾ ಕಾಗದ ಪತ್ರಗಳಿಲ್ಲದೇ ರಾಣೇಬೆನ್ನೂರಿನಲ್ಲಿ ಅಕ್ಕಿಯನ್ನು ತುಂಬಿಸಿಕೊಂಡು ಲಕ್ಷ್ಮೇಶ್ವರಕ್ಕೆ ಸಾಗಾಟ ಮಾಡುತ್ತಿದ್ದ.

ಗೋನಾಳ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ನಡೆಸುವಾಗ ಸಿಕ್ಕಿದ್ದು, ತಾನು ಸಾಗಾಟ ಮಾಡುತ್ತಿದ್ದ ಅಕ್ಕಿಯ ಬಗ್ಗೆ ಯಾವುದೇ ದಾಖಲಾತಿಗಳನ್ನು ಹೊಂದಿರಲಿಲ್ಲ ಮತ್ತು ಸಮರ್ಪಕ ಉತ್ತರವನ್ನೂ ನೀಡದಿರುವುದರಿಂದ ಅಕ್ಕಿಯನ್ನು ಯಾವುದೋ ದುರುದ್ದೇಶಕ್ಕಾಗಿ ಅಥವಾ ಹಂಚಿಕೆ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಸಂಶಯದ ಆಧಾರದ ಮೇಲೆ ಕಲಂ: 98, kp act/0040/2023 ಅಡಿಯಲ್ಲಿ ಚೆಕ್‌ಪೋಸ್ಟ್‌ ಅಧಿಕಾರಿಗಳು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

5 ಲಕ್ಷ ಪ್ರೋತ್ಸಾಹಧನ ಮಂಜೂರಾತಿಗೆ ಲಂಚ; ಸಮಾಜ ಕಲ್ಯಾಣ ಇಲಾಖೆ ಎಸ್ಡಿಎ ಲೋಕಾಯುಕ್ತ ಬಲೆಗೆ

ನಿಸರ್ಗ ಡಾಬಾ ಬಳಿ ಕಾರ್ಯಾಚರಣೆ…..

ಕೊಪ್ಪಳ: ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಯ ಎಸ್ಡಿಎ ವೆಂಕಟೇಶ ಸೋಮಪ್ಪ ಪೂಜಾರ ಅವರು ಲಂಚದ ಹಣ 5000 ಪಡೆದುಕೊಂಡು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ರೂ. 5ಲಕ್ಷ ಪ್ರೋತ್ಸಾಹಧನ ಮಂಜೂರಾತಿ ಕುರಿತಂತೆ ಅರ್ಜಿದಾರರಿಗೆ ವೆಂಕಟೇಶ ಸೋಮಪ್ಪ ಪೂಜಾರ ಅವರು 5 ಸಾವಿರ ರೂ.ಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಏ 5ರ ಮಧ್ಯಾಹ್ನ 1.55 ಗಂಟೆಯ ಸುಮಾರಿಗೆ ಹೊಸಪೇಟೆ ರಸ್ತೆಯ ನಿಸರ್ಗ ಡಾಬಾ ಮುಂದೆ ಇರುವ ಪಾನ್ ಶಾಪ್ ಹತ್ತಿರ ಫಿರ‍್ಯಾದಿದಾರರಿಂದ ಲಂಚದ ಹಣ ಪಡೆದುಕೊಂಡು ಟ್ರಾಪ್‌ಗೆ ಒಳಗಾಗಿದ್ದಾರೆ.

ಆರೋಪಿತನನ್ನು ಲೋಕಾಯುಕ್ತ ಪೊಲೀಸರು ತನ್ನ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದೆ.

ಲೋಕಾಯುಕ್ತ ಕೊಪ್ಪಳ ಪೊಲೀಸ್ ಉಪಾಧೀಕ್ಷಕರಾದ ಸಲೀಂಪಾಷಾ ಅವರ ಮಾರ್ಗದರ್ಶನದಲ್ಲಿ ಪಿ.ಐ (ತನಿಖಾಧಿಕಾರಿ) ಸಂತೋಷ ರಾಠೋಡ, ಪಿ.ಐ ಗಿರೀಶ ರೋಡ್ಕರ್, ಪಿಐ ರಾಜೇಶ ಬಟಗುರ್ಕಿ, ಪಿ.ಐ ಚಂದ್ರಪ್ಪ ಈಟಿ., ಸಿಹೆಚ್‌ಸಿ ಸಿದ್ದಯ್ಯ, ಸಿಹೆಚ್‌ಸಿ ರಾಮಣ್ಣ, ಸಿಹೆಚ್‌ಸಿ ಬಸವರಾಜ ಬೀಡನಾಳ, ಸಿಪಿಸಿ ರಂಗನಾಥ, ಸಿಪಿಸಿ ನಾಗಪ್ಪ, ಮಪಿಸಿ ತಾರಾಮತಿ, ಮಪಿಸಿ ಶೈಲಜಾ, ಎಪಿಸಿ ಆನಂದಕುಮಾರ, ಎಪಿಸಿ ಗುರು ದೇಶಪಾಂಡೆ, ಎಹೆಚ್‌ಸಿ ರಾಜು ಅವರು ಈ ಟ್ರಾಪ್ ಪ್ರಕರಣದಲ್ಲಿ ಭಾಗವಹಿಸಿರುತ್ತಾರೆ ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.

ಗದಗ-ಬೆಟಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಒಂದೇ ದಿನ 1 ಕೋಟಿ 45 ಲಕ್ಷ ರೂ. ಜಪ್ತಿ

ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023

ಗದಗ; ಜಿಲ್ಲಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು ವಿವಿಧೆಡೆ 18 ಚೆಕ್ ಪೋಸ್ಟಗಳನ್ನು ತೆರೆದು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ.

ಬುಧವಾರ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದಂಡಿನ ದುರ್ಗಮ್ಮ ದೇವಸ್ಥಾನದ ಹತ್ತಿರ ತೆರೆಯಲಾದ ಚೆಕ್ ಪೋಸ್ಟನಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ರಹಿತ 95 ಲಕ್ಷ ರೂ. ನಗದು ಪತ್ತೆಯಾಗಿದೆ.

ಗದಗ ತಾಲೂಕಿನ ದುಂದೂರ ಚೆಕ್ ಪೋಸ್ಟ್ ನಲ್ಲಿಯೂ‌ 50 ಲಕ್ಷ ರೂ. ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಕಂತೆ ಕಂತೆ ಹಣ ಸಾಗಾಟ ಮಾಡುತ್ತಿದ್ದಾಗ ಈ ಹಣ ಸೀಜ್ ಆಗಿದೆ.

ನಗದು ಬ್ಯಾಂಕಿಗೆ ಸಂಬಂಧಿಸಿದ್ದಾಗಿದೆಯೇ ಎಂಬುದರ ಕುರಿತು ಸ್ಥಳಕ್ಕೆ ಆಗಮಿಸಿದ ಆದಾಯ ತೆರಿಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗದಗ ಎಸ್ಪಿ ಬಿ.ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

ಚೆಕ್ ಪೋಸ್ಟ್ ನಲ್ಲಿ ತಪಾಸಣೆ; 80 ಸಾವಿರ ಮೌಲ್ಯದ ಮದ್ಯ, 2.50 ಲಕ್ಷ ರೂ.ಮೌಲ್ಯದ ಪ್ರಚಾರ ಸಾಮಗ್ರಿ ವಶ…….

ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ……..

ಗದಗ: ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಎಪ್ರಿಲ್ 4 ರ ಬೆಳಗ್ಗೆ 9 ರಿಂದ ಎಪ್ರಿಲ್ 5 ರ ಬೆಳಗ್ಗೆ 9 ಗಂಟೆಯ ವರೆಗೆ ಒಟ್ಟು 80,252 ರೂ. ಮೌಲ್ಯದ 188.28 ಲೀ ಮಧ್ಯ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ವಿವಿಧ ಚೆಕ್ ಪೋಸ್ಟಗಳಲ್ಲಿ ತಪಾಸಣೆ ವೇಳೆ 2,49,600 ಮೌಲ್ಯದ ಪ್ರಚಾರ ಸಾಮಗ್ರಿ ಹಾಗೂ 38 ಸ್ಟೀಲ್ ಬಾಕ್ಸ್, 132 ಸ್ಟೀಲ್ ಟ್ರಂಕಗಳನ್ನು ಹಾಗೂ 1 ವಾಹನವನ್ನು ಎಸ್.ಎಸ್.ಟಿ. ತಂಡದಿಂದ ಪಡೆದು 6 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪೊಲೀಸರ ಕಾರ್ಯಾಚರಣೆ; ಗಾಂಜಾ ಮಾರಾಟಕ್ಕೆ ಯತ್ನಿಸಿದ ಬೆಟಗೇರಿ ಸೆಟ್ಲಿಮೆಂಟ್‌ನ ಇಬ್ಬರ ಬಂಧನ

ಗಾಂಜಾ ಸಮೇತ ಆರೋಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಯುವಕರನ್ನು ಬೆಟಗೇರಿ ಪೊಲೀಸರು ಗಾಂಜಾ ಸಮೇತ ಬಂಧಿಸಿದ್ದಾರೆ.

ಬೆಟಗೇರಿ ಕುರಹಟ್ಟಿಪೇಟೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಹಿಂಭಾಗದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಬೆಟಗೇರಿ ಪೊಲೀಸ್‌ ಠಾಣೆಯ ಪಿಎಸ್‌ಐ ವಿಠ್ಠಲ್ ಎಲ್. ಹಾವನ್ನವರ ಹಾಗೂ ಸಿಬ್ಬಂದಿ, ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೆಟಗೇರಿ ಸೆಟ್ಲಿಮೆಂಟ್‌ನ ಡೋಮಿನಿಕ್‌ ಥಾಮಸ್‌ ಮಾಣಿಕ್ಯಂ(23) ಹಾಗೂ ಮಹ್ಮದ ಅಲಿ ಚಾಂದಸಾಬ್‌ ಅಂಗಡಿಗೇರಿ(22) ಎಂದು ಗುರುತಿಸಲಾಗಿದೆ.

ಈ ಇಬ್ಬರು ಆರೋಪಿಗಳು ಎಲ್ಲಿಂದಲೋ ಗಾಂಜಾ ತಂದು ಸಂಗ್ರಹಿಸಿ, 1215 ಗ್ರಾಂ. ತೂಕದ ಅಂದಾಜು 1,21,500 ರೂ. ಬೆಲೆಯ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವಾಗ ವಶಕ್ಕೆ ಪಡೆಯಲಾಗಿದೆ.

20(ಬಿ)(2), ಎನ್‌ಡಿಪಿಎಸ್‌ ಕಾಯ್ದೆ-1989ರ ಪ್ರಕಾರ 0022/23 ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!