Home Blog Page 3281

ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಎಲ್ಲ ಮತದಾರರು ಚಲಾಯಿಸಬೇಕು; ಪಿಡಿಓ ಶೈನಾಜ್

0

ವಿಜಯಸಾಕ್ಷಿ ಸುದ್ದಿ, ನರಗುಂದ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಎಲ್ಲರಿಗೂ ಸಮಾನವಾದ ಮತದಾನ ಮಾಡುವ ಹಕ್ಕಿದೆ. ದೇಶದ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಈ ಹಕ್ಕನ್ನು ಮರೆಯದೇ ಕಡ್ಡಾಯವಾಗಿ ಮತ ಚಲಾಯಿಸೋ ಮೂಲಕ ಸುವ್ಯವಸ್ಥಿತ ಆಡಳಿತ ರಚನೆಗೆ ಕಾರಣರಾಗೋಣ ಎಂದು ಚಿಕ್ಕನರಗುಂದ ಗ್ರಾಮ ಪಂಚಾಯತ ಪಿಡಿಓ ಕುಮಾರಿ ಶೈನಾಜ್ ಮುಜಾವರ ಹೇಳಿದರು.

ಅವರು ತಾಲೂಕಿನ ಚಿಕ್ಕನರಗುಂದ ಗ್ರಾಪಂ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಸಮುದಾಯ ಕಾಮಗಾರಿಯ ಬದು ನಿರ್ಮಾಣ ಕೆಲಸದ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ಮೇ 10 ರಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. ಮತದಾನದ ದಿನದಂದು ನಿಮ್ಮ ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಕೋನದಿಂದ ಕಡ್ಡಾಯವಾಗಿ ಮತದಾನ ಮಾಡಿ ಎಂದರು.

ನಮ್ಮ ಮತ ಮಾರಿಕೊಂಡರೇ ನಮ್ಮ ಆತ್ಮಸಾಕ್ಷಿಗೆ ನಾವು ದ್ರೋಹ ಬಗೆದಂತೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿರ್ಭೀತವಾಗಿ ಮತದಾನ ಮಾಡಿ ಎಂದು ತಿಳಿಸಿದರು.

ಬೇಸಿಗೆ ಅವಧಿಯಲ್ಲಿ ಚುನಾವಣೆ ಬಂದಿರೋದ್ರಿಂದ ಹಿರಿಯ ನಾಗರೀಕರಿಗೆ ಮತ್ತು ದಿವ್ಯಾಂಗರಿಗೆ ಇದೇ ಮೊದಲ ಭಾರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಶೈನಾಜ್ ಮುಜಾವರ್ ಮತದಾರರಿಗೆ ತಿಳಿಸಿದರು.

ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ತಾಲೂಕು ಪಂಚಾಯತ ನರೇಗಾ ವಿಭಾಗದ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಬೋಧಿಸಿದರು. ನಂತರ ಮಾತನಾಡಿದ ಸುರೇಶ್ ಬಾಳಿಕಾಯಿ, ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ದಿನವೊಂದಕ್ಕೆ 316 ರೂಪಾಯಿ ನೀಡಲಾಗುತ್ತದೆ.

ಬೇಸಿಗೆಯ ಅವಧಿಯಲ್ಲಿ ಕನಿಷ್ಟ 60 ದಿನಗಳವರೆಗೆ ನರೇಗಾದಲ್ಲಿ ಕೆಲಸ ಮಾಡಿದ ಕುಟುಂಬಕ್ಕೆ 18960 ರೂಪಾಯಿ ಕೂಲಿ ಮೊತ್ತ ಸಿಗುತ್ತದೆ. ಈ ಹಣವನ್ನು ಕೂಲಿಕಾರರು ಮುಂಗಾರು ಆರಂಭದಲ್ಲಿ ಕೃಷಿ ಚಟುವಟಿಕೆಗಳ ಬಳಕೆಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕನರಗುಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.

ಶಿರಹಟ್ಟಿ ಕ್ಷೇತ್ರದ ಬಿಜೆಪಿಯಲ್ಲಿ ಬಂಡಾಯದ ಬಿಸಿ; ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ‌ ನೀಡಿದ ಮುಖಂಡರು….

ಲಕ್ಷ್ಮೇಶ್ವರದಲ್ಲಿ ಸಭೆ ನಡೆಸಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ ಮುಖಂಡರು………

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಕ್ಷೇತ್ರದ ಜನರ ವಿರೋಧದ ನಡುವೆಯೂ ಶಾಸಕ ರಾಮಣ್ಣ ಲಮಾಣಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ಆಕಾಂಕ್ಷಿಗಳಲ್ಲಿ ಓರ್ವ ಸರ್ವಸಮ್ಮತ ಅಭ್ಯರ್ಥಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ರಾಮಣ್ಣನನ್ನು ಸೋಲಿಸಿಯೇ ಸಿದ್ಧ ಎಂದು ಮಾಜಿ ಶಾಸಕ ಜಿ.ಎಂ ಮಹಾಂತಶೆಟ್ಟರ ಹೈಕಮಾಂಡ್‌ಗೆ ಸೂಚನೆ ರವಾನಿಸಿದರು.

ಅವರು ಭಾನುವಾರ ಪಟ್ಟಣದ ಜ.ವೀರಗಂಗಾಧರ ಸಮುದಾಯ ಭವನದಲ್ಲಿ ಪಕ್ಷದ ಟಿಕೆಟ್ ಬದಲಾವಣೆಗಾಗಿ ಅಭಿಪ್ರಾಯ ಸಂಗ್ರಹ ಮತ್ತು ಸ್ಪಷ್ಟ ತೀರ್ಮಾನ ಕೈಗೊಳ್ಳಲು ಕರೆದ ಪಕ್ಷದ ಮುಖಂಡರ, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯಡಿಯೂರಪ್ಪರ ಬಳಿ ಹೋಗಿ ಟಿಕೆಟ್ ಕೊಡಿಸಿ ಗೆಲ್ಲಿಸಿದ ನನ್ನನ್ನೆ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಪಕ್ಷದಿಂದ ಹೊರ ಹಾಕುವಂತೆ ಶಾಸಕ ಹೇಳುತ್ತಾರೆ. ಹೊರ ಹಾಕಲಿ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ ಎಂದ ಅವರು ಶಾಸಕನಿಂದ ಕಾರ್ಯಕರ್ತರ ಕಡೆಗಣನೆಯಾಗಿದ್ದು ಕ್ಷೇತ್ರದ ಅಭಿವೃದ್ಧಿ ಮರೀಚಿಕೆಯಾಗಿದೆ, ಕುಟುಂಬ ರಾಜಕಾರಣದಿಂದ ಜನ ಬೇಸತ್ತಿದ್ದಾರೆ ಎಂದರು.

ಕಳೆದ ಅವಧಿಯಲ್ಲಿ ರಾಮಣ್ಣನ ಮುಖ ನೋಡಿ ಮತ ಹಾಕಿಲ್ಲ ಬದಲಾಗಿ ಮೋದಿ, ಯಡಿಯೂರಪ್ಪರಂತಹ ನಾಯಕರ ಮುಖ ಮತ್ತು ಪಕ್ಷ ನೋಡಿ ಗೆಲ್ಲಿಸಿದ್ದಾರೆ. ಶಿರಹಟ್ಟಿ ಮತಕ್ಷೇತ್ರದ ಜನತೆ ಮೊದಲಿನಿಂದಲೂ ಬಿಜೆಪಿ ಪರವಾಗಿದ್ದಾರೆ. ಕಾಂಗ್ರೆಸ್‌ನಲ್ಲಿಯೂ ಬಂಡಾಯ ಹೊಗೆಯಾಡುತ್ತಿದ್ದು ಕಾಂಗ್ರೆಸ್‌ನ ಒಂದು ಗುಂಪು ನಮ್ಮ ಸಂಪರ್ಕದಲ್ಲಿದ್ದಾರೆ. ಮೋದಿ ಅವರ ಶ್ರೇಷ್ಠವಾದ ಆಡಳಿತದಿಂದ ಪಕ್ಷದ ಪರ ಅಲೆ ಜೋರಾಗಿದ್ದರೂ ಕ್ಷೇತ್ರದ ಶಾಸಕರ ಬಗ್ಗೆ ವಿರೋಧದ ಅಲೆಯಿದೆ. ಆದಾಗ್ಯೂ ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷದ ಸೋಲು ಶತಸಿದ್ಧ. ಎಲ್ಲರೂ ಒಗ್ಗಟ್ಟಿನಿಂದ ಆಕಾಂಕ್ಷಿಗಳಲ್ಲಿ ಓರ್ವ ಸರ್ವಸಮ್ಮತ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುತ್ತೇವೆ. ಮತ್ತೇ ಮೋದಿ ಕೈ ಬಲಪಡಿಸುತ್ತೇವೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಈಶ್ವರ ಹುಲ್ಲಲ್ಲಿ, ತಿಮ್ಮರಡ್ಡಿ ಅಳವಂಡಿ, ಬಸವರಾಜ ಪಲ್ಲೇದ, ಸೋಮಣ್ಣ ಡಾಣಗಲ್, ನಿಂಗಪ್ಪ ಬನ್ನಿ, ಎಂ.ಆರ್.ಪಾಟೀಲ, ಶಂಕರ ಮರಾಠೆ, ಶಂಕರ ಭಾವಿ ಸೇರಿ ಅನೇಕ ಮುಖಂಡರು ಮಾತನಾಡಿ, ಕಳೆದ ಚುನಾವಣೆಯಲ್ಲಿ ೩೦ ಸಾವಿರ ಮತಗಳ ಅಂತರದ ಗೆಲುವು ಸಾಧಿಸಿರುವುದನ್ನೇ ಪದೇ ಪದೇ ಹೇಳುವ ಇವರ ಮುಖ ನೋಡಿ ಜನ ಮತ ಹಾಕಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಒಮ್ಮೆಯೂ ವಿಧಾನಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ಧ್ವನಿ ಎತ್ತಿಲ್ಲ. ಇವರ ನಿಷ್ಕಾಳಜಿಯಿಂದ ಕ್ಷೇತ್ರದ ಪಾಲಿನ ಕೋಟ್ಯಾಂತರ ರೂ ಅಭಿವೃದ್ಧಿ ಅನುದಾನವನ್ನು ಜಿಲ್ಲೆಯ ಉಳಿದ ಬಿಜೆಪಿ ಶಾಸಕರು ಪಡೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಒಂದು ರಸ್ತೆ ಸರಿಯಿಲ್ಲ. ನೀರಾವರಿ, ವಸತಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮೂಲಭೂತ ಸೌಲಭ್ಯಗಳಿಂದ ಜನ ರೋಷಿ ಹೋಗಿದ್ದಾರೆ. ಕಾರ್ಯಕರ್ತರು ಯಾರೆಂಬ ಅರಿವಿಲ್ಲ ಆದರೆ ಕಾಂಟ್ರಾಕ್ಟರ್‌ಗಳ ಬಗ್ಗೆ ಗೊತ್ತು. ಸದ್ಯ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಹೈಕಮಾಂಡ್ ಈ ಸತ್ಯ, ವಾಸ್ತವಾಂಶ ಅರಿತು ಬದಲಾವಣೆಗೆ ದಿಟ್ಟ ನಿರ್ಧಾರ ಕೈಗೊಳ್ಳದಿದ್ದರೆ ಬಂಡಾಯ ಅಭ್ಯರ್ಥಿ ನಿಲ್ಲಿಸಿ ಮತ್ತೆ ೩೦ ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ಎಲ್ಲರದ್ದಾಗಿದೆ ಎಂದರು.

ಈ ವೇಳೆ ತಿಪ್ಪಣ್ಣ ಕೊಂಚಿಗೇರಿ, ದಯಾನಂದ ಕಂಠಿಗೌಡ್ರ, ಈಶ್ವರ ಲಮಾಣಿ, ನಿಂಗಪ್ಪ ಬನ್ನಿ, ಶ್ರೀನಿವಾಸ ಅಬ್ಬಿಗೇರಿ, ಶಂಕರ ಮರಾಠೆ, ನೀಲಪ್ಪ ಹತ್ತಿ, ಅಶೋಕ ಬಳ್ಳಾರಿ, ಮಲ್ಲಮ್ಮ ಹಿರೇಹಾಳ, ರಮೇಶ ಹುಳಕಣ್ಣವರ, ರಮೇಶ ಬಾಗೇವಾಡಿ, ಶಿವನಗೌಡ ಪಾಟೀಲ, ಶರೀಪಸಾಬ ಛಬ್ಬಿ, ಪ್ರಕಾಶ ಹಲವಾಗಲಿ, ಮಲ್ಲಮ್ಮ ಆನೆಪ್ಪನವರ, ರೇಣವ್ವ ಲಮಾಣಿ, ಅಪ್ಪಣ್ಣ ಕುಬೇರ, ಗುಡದಯ್ಯ, ಭೀಮಣ್ಣ ಸುಣ್ಣದಮನಿ, ವಿರುಪಾಕ್ಷಪ್ಪ ಮೇಣಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡು ರಾಮಣ್ಣ ಲಮಾಣಿಯವರಿಗೆ ಟಿಕೆಟ್ ನೀಡದಂತೆ ಒಕ್ಕೂರಲಿನಿಂದ ಬೇಡಿಕೆ ಮಂಡಿಸಿದರು.

ಚುನಾವಣಾಧಿಕಾರಿಗಳು ಕೊಟ್ಟ ೨ ಗಂಟೆಗಳ ಕಾಲವಾಧಿಯಲ್ಲಿ ಸಭೆ ಮುಕ್ತಾಯಗೊಂಡಿತು.

ನಾನ್‌ ಟ್ರೇಡ್‌ ಸಿಮೆಂಟ್‌ ಕಳಿಸುತ್ತೇವೆಂದು ಮುಂಬೈ ವ್ಯಕ್ತಿಗಳಿಂದ ಲಕ್ಷಾಂತರ ರೂ. ಮೋಸ

ವಿಜಯಸಾಕ್ಷಿ ಸುದ್ದಿ, ಗದಗ

ಸಿಮೆಂಟ್‌ ಕಂಪನಿಗಳ ಪ್ರತಿನಿಧಿಗಳು ಎಂದು ಹೇಳಿಕೊಂಡು ಯಾರೋ ಇಬ್ಬರು ಆರೋಪಿತರು 4 ಸಾವಿರ ನಾನ್‌ ಟ್ರೇಡ್‌ ಸಿಮೆಂಟ್‌ ಚೀಲಗಳನ್ನು ಕಳಿಸುತ್ತೇವೆಂದು ಹೇಳಿ ಹಣ ಪಡೆದುಕೊಂಡು ಮೋಸವೆಸಗಿರುವ ಬಗ್ಗೆ ಗದಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.24ರ ಬೆಳಗಿನ 11.30ರಿಂದ ಮಾರ್ಚ್‌.13ರ ಮಧ್ಯಾಹ್ನ 12.30ರವರೆಗೂ ಈ ಕುರಿತು ಹಣ ವರ್ಗಾವಣೆಯಾಗಿದೆ.

ಪ್ರಕರಣದಲ್ಲಿ ಮೋಸ ಹೋಗಿರುವ ಲಕ್ಷ್ಮೇಶ್ವರದ ಮೊಮಿನ್‌ಗಲ್ಲಿಯ ವ್ಯಾಪಾರಿ ಎಂ.ಡಿ.ಮುಸ್ತಫಾ ಬಳ್ಳಾರಿ ಈ ಬಗ್ಗೆ ನೀಡಿದ ದೂರಿನಲ್ಲಿ, ಮುಂಬೈನ ಡಾಲ್ಮಿಯಾ ಸಿಮೆಂಟ್.ಲಿ ಹಾಗೂ ಬಿರ್ಲಾ ಶಕ್ತಿ ಸಿಮೆಂಟ್‌ ಕಂಪನಿಗಳ ಪ್ರತಿನಿಧಿಗಳು ಎಂದು ಹೇಳಿಕೊಂಡ ಆರೋಪಿತರಾದ ರವೀಂದ್ರ ಶರ್ಮಾ ಹಾಗೂ ರೋಹಿತ್‌ ಅಗರವಾಲ ಈ ಇಬ್ಬರು ಆರೋಪಿತರ ಮೇಲೆ ಪ್ರಕರಣ ದಾಖಲಾಗಿದೆ.

ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ 4000 ಚೀಲ ನಾನ್‌ ಟ್ರೇಡ್‌ ಸಿಮೆಂಟ್‌ ಕಳಿಸುತ್ತೇವೆ ಎಂದು ಹೇಳಿ ಡಿಪಾಸಿಟ್‌, ಕೋಡ್‌ ಜನರೇಟ್‌ ಮಾಡಲು ಇನ್ಸುರನ್ಸ್‌ ಬಿಲ್‌ ಟು ಬಿಲ್‌, ಅಗ್ರಿಮೆಂಟ್‌ ಎಂದು ನಾನಾ ಕಾರಣಗಳನ್ನು ಹೇಳಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಒಟ್ಟೂ 67,05,600 ರೂ. ಹಣ ಹಾಕಿಸಿಕೊಂಡು ಮಟೀರಿಯಲ್‌ ಕಳಿಸದೇ, ಹಣವನ್ನೂ ವಾಪಸ್‌ ಮಾಡದೇ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಗದಗ ಸಿಇಎನ್‌ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರತ್ಯೇಕ ಪ್ರಕರಣದಲ್ಲಿ ಮೂರು ಲಕ್ಷ ಹಣ ಪತ್ತೆ; ಕಾಂಗ್ರೆಸ್ ಪಕ್ಷದ ಶಾಲು ಜಪ್ತಿ

ದುಂದೂರ, ರೋಣ, ಮುಂಡರಗಿ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಸೀಜ್….ಕಾಂಗ್ರೆಸ್ ಪಕ್ಷದ ಧ್ವಜಗಳು, ಶಾಲು ಪತ್ತೆ……

ವಿಜಯಸಾಕ್ಷಿ ಸುದ್ದಿ, ಗದಗ/ರೋಣ

ಮತ್ತೆ ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಜಿಲ್ಲೆಯ ರೋಣ ಹಾಗೂ ಗದಗ ತಾಲೂಕಿನ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದಾಗ ಸೀಜ್ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ಶಾಲು ಕೂಡ ಜಪ್ತಿ ಮಾಡಲಾಗಿದೆ.

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಚೆಕ್ ಪೋಸ್ಟ್ ನಲ್ಲಿ ಒಂದು ಲಕ್ಷ ರೂ. ಪತ್ತೆಯಾದರೆ, ಹುಬ್ಬಳ್ಳಿ ರಸ್ತೆಯ ದುಂದೂರ ಚೆಕ್ ಪೋಸ್ಟ್ ನಲ್ಲಿ ಎರಡು ಲಕ್ಷ ರೂ. ಹಣ ಸೀಜ್ ಮಾಡಲಾಗಿದೆ.

ಮುಂಬೈ ನಿಂದ ತೋರಣಗಲ್ ಕಡೆ ಹೊರಟಿದ್ದ ವಾಹನದಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ವಾಹನದಲ್ಲಿ ಎರಡು ಲಕ್ಷ ರೂ. ಪತ್ತೆಯಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇನ್ನೂ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಚೆಕ್ ಪೋಸ್ಟ್ ನಲ್ಲಿ ಒಂದು ಲಕ್ಷ ರೂ. ಪತ್ತೆಯಾಗಿದೆ.

ಬದಾಮಿಯಿಂದ ರೋಣ ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ ಈ ಹಣ ಪತ್ತೆಯಾಗಿದೆ. ಹಣ ಸಾಗಿಸುತ್ತಿದ್ದ ಐದು ಜನರನ್ನು ವಿಚಾರಣೆ ನಡೆಸಿದಾಗ ಹಣದ ಮೂಲದ ಬಗ್ಗೆ ಸಮರ್ಪಕವಾಗಿ ಉತ್ತರ ನೀಡಲಿಲ್ಲ ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ 17 ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಜಪ್ತಿ ಮಾಡಲಾಗಿದೆ. ಕಾರಿನಲ್ಲಿ ಬದಾಮಿಯಿಂದ ರೋಣ ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ ಕಾಂಗ್ರೆಸ್ ಪಕ್ಷದ ಹಸ್ತದ ಗುರುತು ಇರುವ ಧ್ವಜಗಳು ಸಿಕ್ಕಿವೆ.

ಈ ಕುರಿತು ಈ ಎರಡೂ ಪ್ರಕರಣಗಳು ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.

ಗದಗ ನಗರದ ಮುಂಡರಗಿ ರಸ್ತೆಯ ಜೆ ಟಿ ಇಂಜಿನಿಯರಿಂಗ್ ಕಾಲೇಜ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಸುಮಾರು ಮೂರು ನೂರರಷ್ಟು ಕಾಂಗ್ರೆಸ್ ಪಕ್ಷದ ಶಾಲು ಸಿಕ್ಕಿವೆ.

ಹಸ್ತದ ಚಿನ್ಹೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಭಾವಚಿತ್ರ ಇರುವ ಶಾಲು ಜಪ್ತಿ ಮಾಡಲಾಗಿದೆ.

ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮದ್ಯ ಸಾಗಾಟ ಮಾಡುತ್ತಿದ್ದ ಐವರ ಬಂಧನ, ಮದ್ಯ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಮದ್ಯ ಜಪ್ತಿ ಮಾಡಿದ್ದಾರೆ.

ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿರುವ ಅಬಕಾರಿ ಪೊಲೀಸರು, ಐದು ಜನರನ್ನು ಬಂಧಿಸಿ, ಅವರಿಂದ ಮೂರು ಬೈಕ್ ಸೀಜ್ ಮಾಡಿದ್ದಾರೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ-ಹೊಳೆಇಟಗಿ ರಸ್ತೆಯಲ್ಲಿ ಬೈಕ್ ನಲ್ಲಿ ಮದ್ಯ ಸಾಗಿಸುತ್ತಿದ್ದ ಸಂತೋಷ ಹಾಗೂ ಮಹೇಶ್ ಎಂಬ ಇಬ್ಬರನ್ನು ಬಂಧಿಸಿ, ಅವರಿಂದ ಮದ್ಯ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.

ಗದಗ ತಾಲೂಕಿನ ಬೆಳಧಡಿ ತಾಂಡಾದ ಶಂಕರ್ ಎಂಬಾತನನ್ನು ಬಂಧಿಸಿ, ಆತನಿಂದ 5,570 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಗದಗನ ಕಳಸಾಪೂರ ರಸ್ತೆಯ ಲ್ಲಿ ಬೈಕ್ ನಲ್ಲಿ ಮದ್ಯ ಸಾಗಿಸುತ್ತಿದ್ದ ರಾಜು ಎಂಬಾತನನ್ನು ಬಂಧಿಸಿ, ಆತನಿಂದ 6058 ರೂ. ಮೌಲ್ಯದ ಮದ್ಯ ಹಾಗೂ ಬೈಕ್ ಸೀಜ್ ಮಾಡಲಾಗಿದೆ.

ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಮದ್ಯ ಸಾಗಿಸುತ್ತಿದ್ದ ಆರೋಪಿ ಆನಂದ ಎಂಬಾತನನ್ನು ಬಂಧಿಸಿ, ಆತನಿಂದ 15,902ರೂ ಮೌಲ್ಯದ ಮದ್ಯ ಹಾಗೂ ಬೈಕ್ ಸೀಜ್ ಮಾಡಲಾಗಿದೆ.

ಈ ಕುರಿತು ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಬಕಾರಿ ಡಿಸಿ ವೈ ಭರತೇಶ್ ಮಾಹಿತಿ ನೀಡಿದ್ದಾರೆ.

ಗದಗ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಹೊಸ ಹೆಜ್ಜೆ; ಮನೆ ಕಳ್ಳತನ ನಿಯಂತ್ರಣಕ್ಕೆ ಹೊಸ ತಂತ್ರಾಂಶ……..

0

Locked House Monitoring System…….

ವಿಜಯಸಾಕ್ಷಿ ಸುದ್ದಿ, ಗದಗ

ಇತ್ತೀಚಿನ ದಿನಗಳಲ್ಲಿ ಕೀಲಿ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುವ ಪ್ರಕರಣಗಳು ಹೆಚ್ಚುತ್ತಿದ್ದು, ಅಂತಹ ಮನೆಗಳ ಮೇಲೆ ಪೊಲೀಸರು ನಿಗಾವಹಿಸಲು ಅನುಕೂಲವಾಗಲೆಂದು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

ಪೊಲೀಸ್‌ ಇಲಾಖೆಯ ಹಾಗೂ ಸಾರ್ವಜನಿಕರ ಸಂಪರ್ಕ ಕೊಂಡಿಯಾಗಿ ಈ ತಂತ್ರಾಂಶ ಕಾರ್ಯನಿರ್ವಹಿಸಲಿದ್ದು, ಅತೀ ಶೀಘ್ರವಾಗಿ ಪೊಲೀಸರಿಗೆ ಕೀಲಿ ಹಾಕಿದ ಮನೆಗಳ ವಿವರ ದೊರಕುವಂತೆ ಮಾಡುವಲ್ಲಿ ಗದಗ ಜಿಲ್ಲಾ ಪೊಲೀಸ್‌ ಇಲಾಖೆ ಹೆಜ್ಜೆಯಿಟ್ಟಿದೆ.

ಸಾರ್ವಜನಿಕರು ಮನೆಗೆ ಬೀಗ ಹಾಕಿ ಬೇರೆ ಸ್ಥಳಗಳಿಗೆ ತೆರಳುವ ಸಂದರ್ಭದಲ್ಲಿ Locked House Monitoring System ಎಂಬ ತಂತ್ರಾಂಶದಲ್ಲಿ ವಿವರಗಳನ್ನು ಹಾಕಬಹುದಾಗಿದೆ.

ಇದರಿಂದ ಪೊಲೀಸರಿಗೆ ಕೀಲಿ ಹಾಕಿದ ಮನೆಗಳ ವಿವರ ಸರಳವಾಗಿ ಲಭ್ಯವಾಗಲಿದ್ದು, ಅಂಥ ಮನೆಗಳ ಮೇಲೆ ನಿಗಾವಹಿಸಲು ಅನುಕೂಲವಾಗಲಿದೆ. Locked House Monitoring System ಉಪಯೋಗಿಸಲು 9480021100 ಸಂಖ್ಯೆಗೆ ವಾಟ್ಸಪ್‌ನಲ್ಲಿ ʻHelpʼ ಎಂದು ಸಂದೇಶ ಕಳುಹಿಸಿದಾಗ Locked House Monitoring Systemನ ಲಿಂಕ್‌ ಬರುತ್ತದೆ.

ಅದರಲ್ಲಿ ಕೀಲಿ ಹಾಕಿದ ಮನೆಯ ವಿವರಗಳನ್ನು ಸಲ್ಲಿಸಬಹುದು. ಈ ಹೊಸ ಸೌಲಭ್ಯದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಗದಗ ಜಿಲ್ಲಾ ಪೊಲೀಸ್‌ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಅಂತೆಯೇ ಸಿಇಐಆರ್‌ ಪೋರ್ಟಲ್‌ ಸಹಾಯದಿಂದ ವಿವಿಧ ಕಂಪನಿಗಳ 2,02,196 ರೂ ಮೌಲ್ಯದ ಒಟ್ಟೂ 14 ಮೊಬೈಲ್‌ ಫೋನ್‌ಗಳನ್ನು ಜಪ್ತ ಮಾಡಿ, ಮೊಬೈಲ್‌ ಮಾಲಕರಿಗೆ ಮರಳಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಸೀರೆ ಸಮೇತ ವಾಹನ ಸೀಜ್

ಹುಬ್ಬಳ್ಳಿ ರಸ್ತೆಯ ದುಂದೂರ ಚೆಕ್‌ಪೋಸ್ಟ್‌ನಲ್ಲಿ ಪತ್ತೆ……

ವಿಜಯಸಾಕ್ಷಿ ಸುದ್ದಿ, ಗದಗ


ಯಾವುದೇ ಸೂಕ್ತ ದಾಖಲೆಯಿಲ್ಲದೇ ಟಾಟಾ ಏಸ್‌ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 66,980 ರೂ. ಮೌಲ್ಯದ 103 ಸೀರೆಗಳನ್ನು ವಾಹನ ಸಮೇತ ವಶಪಡಿಸಿಕೊಂಡಿರುವ ಗದಗ ಗ್ರಾಮೀಣ ಠಾಣೆಯ ಪೊಲೀಸರು ಕಲಂ: 41(ಎ) ಸಿಆರ್‌ಪಿಸಿ ಪ್ರಕಾರ ನೊಟೀಸ್‌ ನೀಡಿದ್ದಾರೆ.

ಗದಗ-ಹುಬ್ಬಳ್ಳಿ ರಸ್ತೆಯಲ್ಲಿ ದುಂದೂರ ಚೆಕ್‌ಪೋಸ್ಟ್‌ ಹತ್ತಿರ ಟಾಟಾ ಏಸ್‌ ವಾಹನದಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರದ ಮೂಲತಃ ಗದಗ ಜಿಲ್ಲೆಯ ಶಿಂಗಟರಾಯನಕೇರಿಯ ಶಿವಪ್ಪ ರಾಮಪ್ಪ ಪವಾರ ಈತನು ಎಲ್ಲಿಂದಲೋ 66,980 ರೂ. ಮೌಲ್ಯದ 103 ಸೀರೆಗಳನ್ನು ತೆಗೆದುಕೊಂಡು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಬರುತ್ತಿದ್ದಾಗ, ದುಂದೂರ ಚೆಕ್‌ಪೋಸ್ಟ್‌ನಲ್ಲಿ ತಡೆದು ಪರಿಶೀಲಿಸಿಲಾಯಿತು.

ವಿಚಾರಣೆ ನಡೆಸಿದಾಗ ವಾಹನದಲ್ಲಿದ್ದ ಸೀರೆಗಳ ಕುರಿತು ಸಮರ್ಪಕ ಉತ್ತರ ನೀಡಲಿಲ್ಲ. ಅಲ್ಲದೆ, ಸದರಿ ಸೀರೆಗಳ ಬಗ್ಗೆ ಸೂಕ್ತ ದಾಖಲಾತಿಯನ್ನೂ ನೀಡಲಿಲ್ಲವಾದ್ದರಿಂದ ಸೀರೆಗಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿರುವದಾಗಿ ಅನುಮಾನಗೊಂಡ ಸಿಬ್ಬಂದಿಗಳು ಪಂಚನಾಮೆ ನಡೆಸಿ, ಸೀರೆ ಹಾಗೂ ವಾಹನವನ್ನು ಜಪ್ತ ಮಾಡಿ ಎನ್‌.ಸಿ ನಂ.09/2023, ಕಲಂ-98 ಕೆ.ಪಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂಡರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬಿಜೆಪಿಗೆ ಸೇರಿದ ಪ್ರಚಾರ ಸಾಮಗ್ರಿಗಳು ಜಪ್ತಿ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ವಿಧಾನಸಭೆಗೆ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿನ್ನೆಯಿಂದ ನೀತಿ ಸಂಹಿತೆ ಜಾರಿಯಾಗಿದ್ದು, ಗದಗ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಚೆಕ್ ಪೋಸ್ಟ್ ನಲ್ಲಿ ಬಿಜೆಪಿಗೆ ಸೇರಿದ ಪ್ರಚಾರ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.

ಒಂದು ಸಾವಿರ ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್ ಮಾಸ್ಕ್, 100 ಟಿ-ಶರ್ಟ್, 1000 ಬ್ಯಾಡ್ಜ್, 120 ಸ್ಟೀಕರ್, 80 ಶಾಲು, ಬಿಜೆಪಿ ಭರವಸೆ ಇರುವ 420 ಸ್ಟೀಕರ್ ಸೇರಿದಂತೆ ಒಟ್ಟು 2720 ರಷ್ಟು ಪ್ರಚಾರ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.

ಹೊಸಪೇಟೆ (ವಿಜಯನಗರ)ದಿಂದ ಹೂವಿನ ಹಡಗಲಿ ತಾಲೂಕಿಗೆ ಸಾಗಾಟ ಮಾಡುವಾಗ ಈ ಸಾಮಗ್ರಿಗಳನ್ನು ಸೀಜ್ ಮಾಡಲಾಗಿದೆ.

ಡಿಸಿ ವೈಶಾಲಿ ಎಮ್.ಎಲ್ ಹಾಗೂ ಎಸ್ಪಿ ಬಿ.ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪ; ರಿಟರ್ನಿಂಗ್ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲು

ಡಿಸಿ ವೈಶಾಲಿ ಎಮ್.ಎಲ್ ಸೂಚನೆ ಮೇರೆಗೆ ಪ್ರಕರಣ…….

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್‌ ಅಧಿಕಾರಿಯಾಗಿ ನೇಮಿಸಿದ್ದ ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿಯೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರ ಸೂಚನೆ ಮೇರೆಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಜಾ ಪ್ರಾತಿನಿಧಿಕ ಕಾಯ್ದೆ 1951ರ ಕಲಂ134 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮೊದಲು ಜಿಲ್ಲಾ ಪಂಚಾಯತಿಯ ಗ್ರಾಮೀಣಾಭಿವೃದ್ಧಿ ಕೋಶದ
ಯೋಜನಾ  ನಿರ್ದೇಶಕರನ್ನು ನಿಯೋಜಿಸಲಾಗಿತ್ತು.

ಆದರೆ,  ಪ್ರಸ್ತುತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯು ಸ್ಥಳೀಯ ವಾಸಿಯಾಗಿರುವುದರಿಂದ, ಸರ್ಕಾರವು ಉಲ್ಲೇಖಿತ ಅಧಿಸೂಚನೆಯನ್ವಯ ಅವರನ್ನು ವರ್ಗಾವಣೆಗೊಳಿಸಿ, ಸದರಿ ಹುದ್ದೆಗೆ ಚಿದಾನಂದ, ಉಪ ಕಾರ್ಯದರ್ಶಿ-೩, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರನ್ನು ನಿಯೋಜಿಸಿದ್ದರು.

ಆದರೆ, ಈ ಅಧಿಕಾರಿಯು, ಈವರೆಗೂ ಸದರಿ ಹುದ್ದೆಗೆ ವರದಿ ಮಾಡಿಕೊಂಡಿರುವುದಿಲ್ಲ. ಈ ಕುರಿತಂತೆ ಕಾರ್ಯಾಲಯದ ಉಲ್ಲೇಖದನ್ವಯ ಕಾರಣ ಕೇಳಿ ಮೂರು ಬಾರಿ ನೋಟಿಸ್ ನೀಡಿ, 24 ಗಂಟೆಯೊಳಗೆ ತಮ್ಮ ಸಮಜಾಯಿಷಿ ನೀಡುವಂತೆಯೂ ಸೂಚಿಸಲಾಗಿತ್ತು. ಹಾಗೂ ಸದರಿ ನೋಟಿಸ್ ವಾಟ್ಸಪ್‌ ಸಂದೇಶದ ಮೂಲಕ ಜಾರಿ ಮಾಡಲಾಗಿತ್ತು.

ಆದರೆ ಸದರಿಯವರು ಈವರೆಗೂ ಉತ್ತರ ನೀಡದೆ, ಮಾರ್ಚ್‌ 4ರಿಂದ ಮಾರ್ಚ್‌ 28ರವರೆಗೂ ಕರ್ತವ್ಯಕ್ಕೂ ಹಾಜರಾಗದೇ, ಜಿಲ್ಲೆಯ ಯಾವುದೇ ಕರೆಗಳನ್ನೂ ಸ್ವೀಕರಿಸದೇ ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿರುವುದು ಕಂಡುಬಂದಿದ್ದು, ಸದರಿ ಅಧಿಕಾರಿ ಚಿದಾನಂದರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 134ರ ಅಡಿಯಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ವೈಶಾಲಿ ಎಂ.ಎಲ್.‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ ಅವರಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ಗ್ರಾಮ ಒನ್‌ ಸೇವಾ ಕೇಂದ್ರದ ಬಾಗಿಲು ಮುರಿದು ಮಾನಿಟರ್‌, ಪ್ರಿಂಟರ್‌ ಕಳುವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ತಾಲೂಕಿನ ಮೇವುಂಡಿಯ ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರವೊಂದರ ಬಾಗಿಲು ಮುರಿದ ಕಳ್ಳರು, ಕೇಂದ್ರದ ಒಳಗಿದ್ದ ಒಟ್ಟೂ 24 ಸಾವಿರ ಮೌಲ್ಯದ ಕಂಪ್ಯೂಟರ್‌ ಪರಿಕರಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್‌ 27ರ ಸಾಯಂಕಾಲ 5ರಿಂದ ಮಾರ್ಚ್‌ 28ರ ಮುಂಜಾನೆ 10 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮೇವುಂಡಿಯ ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರದ ಬಾಗಿಲನ್ನು ಮೀಟಿ ಮುರಿದು ಒಳಹೊಕ್ಕು, ಅಲ್ಲಿದ್ದ 6 ಸಾವಿರ ರೂ. ಮೌಲ್ಯದ ಎನ್‌ಐಸಿ ಕಂಪನಿಯ ಮಾನಿಟರ್‌ ಹಾಗೂ 18 ಸಾವಿರ ರೂ. ಬೆಲೆಬಾಳುವ ಎಪ್ಸನ್‌ ಕಂಪನಿಯ ಕಲರ್‌ ಪ್ರಿಂಟರ್‌ಗಳನ್ನು ಕಳ್ಳತನ ಮಾಡಿದ್ದಾರೆ.

ಈ ಕುರಿತು ಸೇವಾ ಕೇಂದ್ರದ ಕಂಪ್ಯೂಟರ್‌ ಆಪರೇಟರ್‌ ಕಮರುನ್ನಾ ಮೌಲಾಸಾಬ್‌ ನದಾಫ್‌ ಎಂಬುವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಡರಗಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!