Home Blog Page 3282

ಗ್ರಾಮ ಒನ್‌ ಸೇವಾ ಕೇಂದ್ರದ ಬಾಗಿಲು ಮುರಿದು ಮಾನಿಟರ್‌, ಪ್ರಿಂಟರ್‌ ಕಳುವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ತಾಲೂಕಿನ ಮೇವುಂಡಿಯ ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರವೊಂದರ ಬಾಗಿಲು ಮುರಿದ ಕಳ್ಳರು, ಕೇಂದ್ರದ ಒಳಗಿದ್ದ ಒಟ್ಟೂ 24 ಸಾವಿರ ಮೌಲ್ಯದ ಕಂಪ್ಯೂಟರ್‌ ಪರಿಕರಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್‌ 27ರ ಸಾಯಂಕಾಲ 5ರಿಂದ ಮಾರ್ಚ್‌ 28ರ ಮುಂಜಾನೆ 10 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮೇವುಂಡಿಯ ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರದ ಬಾಗಿಲನ್ನು ಮೀಟಿ ಮುರಿದು ಒಳಹೊಕ್ಕು, ಅಲ್ಲಿದ್ದ 6 ಸಾವಿರ ರೂ. ಮೌಲ್ಯದ ಎನ್‌ಐಸಿ ಕಂಪನಿಯ ಮಾನಿಟರ್‌ ಹಾಗೂ 18 ಸಾವಿರ ರೂ. ಬೆಲೆಬಾಳುವ ಎಪ್ಸನ್‌ ಕಂಪನಿಯ ಕಲರ್‌ ಪ್ರಿಂಟರ್‌ಗಳನ್ನು ಕಳ್ಳತನ ಮಾಡಿದ್ದಾರೆ.

ಈ ಕುರಿತು ಸೇವಾ ಕೇಂದ್ರದ ಕಂಪ್ಯೂಟರ್‌ ಆಪರೇಟರ್‌ ಕಮರುನ್ನಾ ಮೌಲಾಸಾಬ್‌ ನದಾಫ್‌ ಎಂಬುವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಡರಗಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಿಸಿಯೂಟದಲ್ಲಿ ಹಲ್ಲಿ, ಅಸ್ವಸ್ಥಗೊಂಡ ಶಾಲಾ ಮಕ್ಕಳು

ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ……

ವಿಜಯಸಾಕ್ಷಿ ಸುದ್ದಿ, ನವಲಗುಂದ

ಹಲ್ಲಿ ಬಿದ್ದ ಬಿಸಿಯೂಟವನ್ನು ಸೇವಿಸಿ 35 ಶಾಲಾ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ ಘಟನೆ ತಾಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದಿದೆ.

ಮುಂಜಾನೆ ಪರೀಕ್ಷೆ ಮುಗಿಸಿ ಮದ್ಯಾಹ್ನ ಊಟ ಮಾಡಿ ಮತ್ತೊಂದು ಪರೀಕ್ಷೆಗೆ ಹಾಜರಾಗಬೇಕಿತ್ತು. ಮಕ್ಕಳು ಊಟ ಮಾಡುವಾಗ ಮಕ್ಕಳು ತಲೆ ಸುತ್ತು ಬಂದು ಕೆಲವರು ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ಅರ್ಧದಷ್ಟು ಮಕ್ಕಳು ಬಿಸಿಯೂಟವನ್ನು ಸೇವಿಸಿದ್ದರು. ಅನ್ನದ ಪಾತ್ರೆಯಲ್ಲಿ ಹಲ್ಲಿ ಕಂಡ ತಕ್ಷಣವೇ ಮಕ್ಕಳಿಗೆ ಊಟ ಸೇವಿಸದಂತೆ ಎಚ್ಚರಿಕೆ ನೀಡಲಾಯಿತು. ಇದರ ಮಧ್ಯೆಯೇ ಕೆಲ ಮಕ್ಕಳು ಆಹಾರ ಸೇವಿಸಿದ್ದರಿಂದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪದೇ ಪದೇ ಇಂತಹ ಘಟನೆ ತಾಲೂಕಿನಲ್ಲಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮಕ್ಕಳಿಗೆ ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ.

ಬಿಸಿಯೂಟದಲ್ಲಿ ಹಲ್ಲಿ ಕಂಡ ತಕ್ಷಣವೇ ಶಾಲೆಯ ಮಕ್ಕಳಿಗೆ ಒಂದೇ ಒಂದು ತುತ್ತನ್ನು ತಿನ್ನಲು ಬಿಟ್ಟಿಲ್ಲ. ಅಸ್ವಸ್ಥಗೊಂಡ ಮಕ್ಕಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ.

-ಎಮ್. ಎಚ್. ಸಾಯಿಗೋಳ, ಮುಖ್ಯೋಪಾಧ್ಯಾಯರು

35 ಮಕ್ಕಳು ಆಹಾರ ಸೇವಿಸಿದ್ದು ಅದರಲ್ಲಿ 7 ಮಕ್ಕಳಿಗೆ ವಾಂತಿ ಕಂಡ ಬಂದ ಹಿನ್ನೆಲೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಪಾಯದ ತೊಂದರೆ ಕಂಡುಬಂದಿಲ್ಲ. ಪಾಲಕರು ಹೆದರುವ ಅವಶ್ಯಕತೆಯಿಲ್ಲ.

-ಎಸ್. ಎಸ್. ಕೆಳದಿಮಠ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ

ಅಗ್ನಿ ಅವಘಡ; ತೆಂಗಿನ, ನೇರಳೆ ಮರಗಳು ಭಸ್ಮ, ಅಪಾರ ಹಾನಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿಯಿಂದ ಫಲಭರಿತ 20ಕ್ಕೂ ಹೆಚ್ಚು ತೆಂಗಿನ ಮರ, 25ಕ್ಕೂ ಹೆಚ್ಚು ನೇರಳೆ ಹಣ್ಣಿನ ಮರಗಳು ಸೇರಿ ಇತರೆ ಗಿಡಗಳು ಸುಟ್ಟು ಕರಕಲಾದ ಘಟನೆ ಮುನಿಯನ ತಾಂಡಾ ಹತ್ತಿರದ ತೋಟಕ್ಕೆ ಸೋಮವಾರ ಮಧ್ಯಾಹ್ನ ಜರುಗಿದೆ.

ಲಕ್ಷ್ಮೇಶ್ವರ ಪಟ್ಟಣದ ಪ್ರಗತಿಪರ ರೈತ ಚನ್ನಬಸಪ್ಪ ಜಗಲಿ ಅವರಿಗೆ ಸೇರಿದ ತೋಟ ಇದಾಗಿದೆ.

ಬೇಸಿಗೆ ಬಿಸಿಲಿಂದ ತೋಟದಲ್ಲಿನ ಒಣ ಹುಲ್ಲಿಗೆ ಹೊತ್ತಿ ಉರಿಯುತ್ತಿರುವುದನ್ನು ಕಂಡ ತೋಟದಲ್ಲಿಯೇ ಇದ್ದ ಹತ್ತಾರು ಕೂಲಿಯಾಳುಗಳು ಬೋರ್‌ವೆಲ್ ನೀರಿನಿಂದ ಬೆಂಕಿ ಆರಿಸಲು ಹೆಣಗಾಡಿದ್ದಾರೆ.

ಸುದ್ದಿ ತಿಳಿದು ತೋಟಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರಾದರೂ ಅಗ್ನಿಶಾಮಕ ವಾಹನ ತೋಟದೊಳಗೆ ಹೋಗಲು ದಾರಿಯಿರಲಿಲ್ಲ. ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 36 ಎಕರೆ ತೋಟದಲ್ಲಿ ತೆಂಗು, ತೇಗ, ಮಾವು ಹತ್ತಾರು ಜಾತಿಯ ಸಾವಿರಾರು ಮರಗಳಿದ್ದು ಹೆಚ್ಚಿನ ಹಾನಿ ತಪ್ಪಿದಂತಾಗಿದೆ.

ಆಕಸ್ಮಿಕ ಬೆಂಕಿ, ಮಳೆ-ಗಾಳಿ ಸೇರಿ ಪ್ರಾಕೃತಿಕ ವಿಕೋಪದಿಂದ ಬೆಳೆಹಾನಿಯಾಗಿ ರೈತರು ಸಾಕಷ್ಟು ತೊಂದರೆಗೆ ಸಿಲುಕಿದ್ದರೂ ಸರ್ಕಾರ ಇಂತಹ ರೈತರಿಗೆ ಕಿಂಚಿತ್ತಾದರೂ ಸಹಾಯ ನೀಡದಿರುವುದು ಖೇದಕರ ಸಂಗತಿ.

ಕಳೆದ ವರ್ಷವೂ ಅತಿಯಾದ ಮಳೆ-ಗಾಳಿಗೆ ನೂರಾರು ತೆಂಗಿನ ಮರಗಳು ನೆಲಕ್ಕುರುಳಿ ಹಾನಿಯಾಗಿತ್ತು. ಈ ವೇಳೆ ತೋಟಗಾರಿಕೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ಆದರೆ ಇದುವರೆಗೂ ನಯಾಪೈಸೆ ಬೆಳೆಹಾನಿ ಪರಿಹಾರ ಬಂದಿಲ್ಲ. ಯಾರಿಗೆ ಹೇಳಿದರೂ ಏನೂ ಪ್ರಯೋಜನವಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಬೈಕ್ ಗೆ ಲಾರಿ ಡಿಕ್ಕಿ; ಓರ್ವ ಸ್ಥಳದಲ್ಲಿಯೇ ಸಾವು, ಮತ್ತೊಬ್ಬ ಗಂಭೀರ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.

ತಾಲೂಕಿನ ನಿಡಗುಂದಿ ಗ್ರಾಮದ ವೀರಪ್ಪ (65) ಎಂಬುವರು ಸ್ಥಳದಲ್ಲೇ ಮೃತಪಟ್ಟಿ ದುರ್ಧೈವಿ.

ಗಜೇಂದ್ರಗಡ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದ್ದು, ನಿಡಗುಂದಿಯಿಂದ ಗಜೇಂದ್ರಗಡಕ್ಕೆ ಬೈಕ್ ಸವಾರರು ಬರುತ್ತಿದ್ದರು ಎನ್ನಲಾಗಿದೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸುದ್ದಿ ತಿಳಿದು ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಬೆಳ್ಳಂಬೆಳಿಗ್ಗೆ ಗದಗ ಸಬ್ ಜೈಲ್ ಮೇಲೆ ಪೊಲೀಸರ ದಿಢೀರ್ ದಾಳಿ

0

ಎಸ್ಪಿ ‌ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ………

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಗೂ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸರು ಗದಗನ ಸಬ್ ಜೈಲ್ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಅಕ್ರಮ ಚಟುವಟಿಕೆಗಳ ನಿಯಂತ್ರಣದ ಅಡಿಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಸುಮಾರು ಒಂದು ಗಂಟೆಗಳ ಕಾಲ ಕಾರಾಗೃಹದಲ್ಲಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿ ಕೈದಿಗಳನ್ನು ಹಾಗೂ ವಿಚಾರಣಾಧೀನ ಕೈದಿಗಳನ್ನು ಹಾಗೂ ಅವರು ವಾಸಿಸುವ ಕೊಠಡಿಗಳನ್ನು ಪರಿಶೀಲನೆ ನಡೆಸಲಾಯಿತು. ಮೊಬೈಲ್ ಬಳಿಕೆ, ಧೂಮಪಾನ ಸೇರಿದಂತೆ ಖೈದಿಗಳ ಚಟುವಟಿಕೆಗಳನ್ನು ಪರಿಶೀಲಿಸಲಾಯಿತು.

ಗದಗ ಎಸ್ಪಿ ಬಿ.ಎಸ್ ನೇಮಗೌಡ ಹಾಗೂ ಡಿವೈಎಸ್ಪಿಗಳಾದ ಮಡಿವಾಳಪ್ಪ ಸಂಕದ, ವಾಯ್ ಎಸ್ ಏಗನಗೌಡರ್, ಗದಗ, ಬೆಟಗೇರಿ ಠಾಣೆಗಳ ಸಿಪಿಐ, ಪಿಎಸ್ಐ ಸೇರಿದಂತೆ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿದ್ದರು.

ಮುಸ್ಲಿಂ ಸಮುದಾಯದ 4% ಮೀಸಲಾತಿ ಕಿತ್ತೊಗೆದ ರಾಜ್ಯ ಸರ್ಕಾರ; ಮುಸ್ಲಿಂ ಮುಖಂಡರಿಂದ ಖಂಡನೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಏಕಾಏಕಿ ಮುಸ್ಲಿಂ ಸಮುದಾಯದ ಶೇ.4 ರ ಮೀಸಲಾತಿ ಕಿತ್ತುಕೊಂಡಿರುವುದು ಖಂಡನೀಯ ಎಂದು ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಹೇಳಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವ ಆಧಾರದ ಮೇಲೆ ಮೀಸಲಾತಿ ಕಿತ್ತುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ಮಹಾರಾಜರು ನೇಮಿಸಿದ ಲೆಸ್ಲಿ ಮಿಲ್ಲರ್ ಆಯೋಗದ ವರದಿಯಿಂದ ಹಿಡಿದು ಡಾ. ನಾಗನಗೌಡ ಸಮಿತಿ, ಹಾವನೂರ ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಮುಸ್ಲಿಂ ಸಮುದಾಯ ಆರ್ಥಿಕವಾಗಿ ಹಿಂದುಳಿದ ಸಮುದಾಯ ಎಂದು ವರದಿ ಕೊಟ್ಟಿವೆ. ಆದರೆ, ರಾಜ್ಯ ಸರ್ಕಾರ ನಮ್ಮ ಸಮುದಾಯದ ಮೀಸಲಾತಿ ಕಿತ್ತುಕೊಂಡಿರುವುದು ನಮಗೆ ನೋವು ಕೊಟ್ಟಿದೆ ಎಂದರು.

ಯಾವುದೋ ಒಂದು ಸಮುದಾಯದ ಮನವೊಲಿಕೆಗಾಗಿ ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಮುಸ್ತಫಾ, ನಾವು ಮೀಸಲಾತಿ ಕಿತ್ತು ಕೊಂಡಿರುವುದನ್ನು ಖಂಡಿಸಿ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ತಮ್ಮ ಸಮುದಾಯಕ್ಕೆ ನೀಡಿದ್ದು ಇದನ್ನು ತಾವು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ವಾರ ಉಭಯಶ್ರೀಗಳನ್ನು ಭೇಟಿ ಮಾಡಿ ಕೇಳಿಕೊಳ್ಳುತ್ತೇವೆ. ಮುಸ್ಲಿಂ ಸಮುದಾಯದ ಮಕ್ಕಳನ್ನು ಕರೆದುಕೊಂಡು ಹೋಗಿ ಶ್ರೀಗಳ ಮಡಿಲಿಗೆ ಹಾಕಲಾಗುವುದು. ಪತ್ರ ಚಳವಳಿ ಮಾಡುತ್ತೇವೆ. ರಂಜಾನ್ ಮುಗಿದ ಬಳಿಕ ರಾಜ್ಯದ ಕೂಡಲಸಂಗಮ ಹಾಗೂ ನಿರ್ಮಲಾನಂದ ಸ್ವಾಮೀಜಿಗಳ ಮಠದಿಂದ ಮೀಸಲಾತಿಗಾಗಿ ರಥಯಾತ್ರೆ ಹಮ್ಮಿಕೊಳ್ಳುಲಿದ್ದೇವೆ. ಮುಖ್ಯಮಂತ್ರಿ ಬೊಮ್ಮಾಯಿಯವರೇ ನೀವು ವಿಷ ಕೊಟ್ಟರು, ಅದನ್ನು ಅಮೃತ ಎಂದು ಸೇವಿಸುವ ಮುಗ್ದ ಸಮಾಜ ನಮ್ಮದು. ನಮ್ಮ ಮೀಸಲಾತಿ ತೆಗೆಯುವಾಗ ಯಾವುದಾದರೂ ಅಧ್ಯಯನ ನಡೆಸಿದ್ರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ದಾಳಿ; ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ವಶಕ್ಕೆ

ತಹಸೀಲ್ದಾರ ಶೃತಿ ಮಳಪ್ಪಗೌಡ, ಆಹಾರ ನಿರೀಕ್ಷಕ ಜಗದೀಶ ಅಮಾತಿ, ಪೊಲೀಸ್ ಸಿಬ್ಬಂದಿಗಳ ಜಂಟಿ ದಾಳಿ

ವಿಜಯಸಾಕ್ಷಿ ಸುದ್ದಿ, ಮುಂಡರಗಿ/ಗದಗ

ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹ ಮಾಡಲಾಗಿದ್ದ ಗೋಡಾನ್ ಒಂದರ ಮೇಲೆ ದಾಳಿ ಮಾಡಿರುವ ತಹಸೀಲ್ದಾರ್ ಹಾಗೂ ಸಿಬ್ಬಂದಿ ಅಪಾರ ಪ್ರಮಾಣದ ಅನ್ನ ಭಾಗ್ಯ ಅಕ್ಕಿ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ  ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಕಾಂಗ್ರೆಸ್ ಮುಖಂಡ ಶ್ರೀಧರ್ ವಜ್ರಬಂಡಿ ಸೇರಿ ಮೂವರ ಬಂಧನ

ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಗೋಡಾನ್‌ ಒಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಡಲಾಗಿದ್ದ ಮಾಹಿತಿ ತಿಳಿದು ತಹಸೀಲ್ದಾರ ಶೃತಿ ಮಳಪ್ಪಗೌಡ, ಡಂಬಳದ ಆಹಾರ ನಿರೀಕ್ಷಕ ಜಗದೀಶ ಅಮಾತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಜಂಟಿಯಾಗಿ ದಾಳಿ ನಡೆಸಿ, ಅಕ್ಕಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ ಬಿಜೆಪಿ-ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಅನ್ನಭಾಗ್ಯ ಅಕ್ಕಿ ಪತ್ತೆ!

ಚುರ್ಚಿಹಾಳ ಹದ್ದಿಯಲ್ಲಿ ಬರುವ ಜಮೀನಿನ ಮಾಲಕ ಗದಗನ ಕಳಸಾಪೂರ ರಸ್ತೆಯ ರಘುನಾಥರಡ್ಡಿ ಬಸವರಡ್ಡಿ ಸಾಸ್ವಿಹಳ್ಳಿ ಇವರ ಮೇಲೆ ಪ್ರಕರಣ ದಾಖಲಾಗಿದೆ.

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತಗಡಿನ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಒಟ್ಟೂ 71.90 ಕ್ವಿಂಟಲ್‌ ತೂಕದ 1,65,370 ರೂ. ಬೆಲೆಯ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್ ಗೆ ಕ್ರೂಸರ್ ಡಿಕ್ಕಿ; ಹತ್ತಕ್ಕೂ ಹೆಚ್ಚು ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಅಪಘಾತದ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆ……

ವಿಜಯಸಾಕ್ಷಿ ಸುದ್ದಿ, ಗದಗ

ಟಿಪ್ಪರ್ ಗೆ ಹಿಂದಿನಿಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಹುಲಕೋಟಿ ಬಳಿ ಜರುಗಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ಜರುಗಿದ್ದು, ವೇಗವಾಗಿ ಹೊರಟಿದ್ದ ಕಾರೊಂದು ಸ್ಲೋ ಆಗಿದೆ. ಅದರ ಹಿಂದೆಯೇ ಹೊರಟಿದ್ದ ಟಿಪ್ಪರ್ ಚಾಲಕ ಕೂಡ ಸ್ಲೋ ಮಾಡಿದ್ದಾನೆ. ಕ್ರೂಸರ್ ಟಿಪ್ಪರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹುಬ್ಬಳ್ಳಿಯಿಂದ ಕ್ರೂಸರ್ ಗದಗ ಕಡೆ ಬರುತ್ತಿತ್ತು ಎನ್ನಲಾಗಿದೆ.

ಅಪಘಾತದ ಸುದ್ದಿ ತಿಳಿದು ಹೈವೇ ಪೆಟ್ರೋಲಿಂಗ್ ಪೊಲೀಸರು ತಮ್ಮ ವಾಹನದಲ್ಲಿ ನಾಲ್ಕು ಜನರನ್ನು ಹಾಗೂ 108 ಆಂಬ್ಯುಲೆನ್ಸ್ ನಲ್ಲಿ 7 ಜನರನ್ನು ಜಿಮ್ಸ್ ಆಸ್ಪತ್ರೆಗೆ ಸಾಗಿಸಿ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಸಿ ಕ್ಯಾಮರಾದಲ್ಲಿ ಸೆರೆ

ಅಪಘಾತದ ದೃಶ್ಯ ಸಮೀಪದ ಬಿಲ್ಡಿಂಗ್ ವೊಂದರಲ್ಲಿ ಇರುವ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಜೇಂದ್ರಗಡ ಚೆಕ್ ಪೋಸ್ಟ್ ನಲ್ಲಿ 6 ಲಕ್ಷಕ್ಕೂ ಹೆಚ್ಚು ಹಣ ಸೀಜ್, ಮುಳಗುಂದದಲ್ಲೂ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಗದಗ ಜಿಲ್ಲೆಯಲ್ಲಿ ಕುರುಡು ಕಾಂಚಾಣ ಎಗ್ಗಿಲ್ಲದೇ ಹರಿದಾಡುತ್ತಿದೆ. ಕಳೆದ ಹಲವು ದಿನಗಳಿಂದ ಜಿಲ್ಲಾಡಳಿತ ಸ್ಥಾಪಿಸಿರುವ ಚೆಕ್ ಪೋಸ್ಟ್ ನಲ್ಲಿ ಹಲವು ಪ್ರಕರಣಗಳು ಪತ್ತೆಯಾಗಿದ್ದು, ಕೋಟ್ಯಾಂತರ ರೂ. ಹಣ ಸೀಜ್ ಆಗಿದೆ.

ನಿನ್ನೆ ರಾತ್ರಿ ಪ್ರತ್ಯೇಕ ಪ್ರಕರಣದಲ್ಲಿ 6 ಲಕ್ಷ 40 ಸಾವಿರ ರೂ. ಹಣ ಹಾಗೂ 5ಲಕ್ಷಕ್ಕೂ ಹೆಚ್ಚು ಮೌಲ್ಯದ ಬಟ್ಟೆಗಳು ಜಪ್ತಿ ಮಾಡಲಾಗಿದೆ.

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಇಲಕಲ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದೆ 6ಲಕ್ಷ 40ಸಾವಿರ ರೂ. ಸೀಜ್ ಮಾಡಲಾಗಿದೆ. ಕೊಪ್ಪಳದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು, ಕಾರು ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಗದಗ -ಲಕ್ಷ್ಮೇಶ್ವರ ರಸ್ತೆಯ ಮುಳಗುಂದ ಪಟ್ಟಣದ ಬಸಾಪೂರ ಕ್ರಾಸ್ ಬಳಿಯ ಚೆಕ್ ಪೋಸ್ಟ್ ನಲ್ಲಿ 5 ಲಕ್ಷ ರೂ ಮೌಲ್ಯದ ಬಟ್ಟೆ ಮಟೇರಿಯಲ್ಸ್ ಸೀಜ್ ಮಾಡಲಾಗಿದೆ.
ಬೆಂಗಳೂರಿನಿಂದ ಗದಗ ಕಡೆ ಬಟ್ಟೆ ಹೊತ್ತೊಯ್ಯುತ್ತಿದ್ದ ಲಾರಿ ವಶಕ್ಕೆ ಪಡೆಯಲಾಗಿದೆ.

ಗಜೇಂದ್ರಗಡ ಹಾಗೂ ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಎರಡು ಪ್ರಕರಣ ನಡೆದಿವೆ.

ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ ಸಿದ್ಧ: ಶಾಸಕ ಎಚ್.ಕೆ. ಪಾಟೀಲ

ಬಿಜೆಪಿಯ ಅಭ್ಯರ್ಥಿ ಬಗ್ಗೆ ಯೋಚಿಸುವುದಿಲ್ಲ……

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್‌ ಪಕ್ಷವು ಶನಿವಾರ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸರ್ವಾನುಮತದಿಂದ ಘೋಷಣೆ ಮಾಡಿದೆ. ಪಕ್ಷದ ಪರವಾಗಿ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗುತ್ತಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ ಸಿದ್ಧವಾಗಿದೆ ಎಂದು ಗದಗ ಶಾಸಕ ಕೆ.ಎಚ್.‌ ಪಾಟೀಲರು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್‌ ಘೋಷಣೆಯ ನಂತರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಘೋಷಣೆಯ ಬಗ್ಗೆ ಎಲ್ಲಿಯೂ ಅಪಸ್ವರದ ಮಾತುಗಳು ಕೇಳಿಬಂದಿಲ್ಲ. ಉತ್ತಮ ರೀತಿಯಲ್ಲಿ ಟಿಕೆಟ್ ಹಂಚಿಕೆಯಾಗಿದೆ. ಇದು ನಮ್ಮ ಪಕ್ಷ ಸಂಘಟನೆಯ ದಿಟ್ಟ ಹೆಜ್ಜೆಗಳಲ್ಲೊಂದು. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮರ್ಗದರ್ಶನದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಉಳಿದ 100 ಸೀಟ್ ಬಗ್ಗೆ ಚರ್ಚೆ ನಡೆಸಿ ಶೀಘ್ರವಾಗಿ ಘೋಷಣೆ ಮಾಡಲಾಗುತ್ತದೆ. 26, 27ನೇ ತಾರೀಕು ಸಿಇಸಿ ಸಭೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದರು.

ಎಚ್.ಕೆ. ಪಾಟೀಲರ ಎದುರು ಬಿಜೆಪಿ ಪ್ರಭಾವಿ ನಾಯಕರನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲರು, ನನ್ನ ಪಕ್ಷದ ಹೈಕಮಾಂಡ್‌, ನಮ್ಮ ಕಾರ್ಯಕರ್ತರು ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಬಿಜೆಪಿ ಯಾರನ್ನು ಕಣಕ್ಕೆ ಇಳಿಸುತ್ತಾರೆಂಬ ಬಗ್ಗೆ ನಾನು ಯೋಚಿಸುವ ಸಂದರ್ಭವೇ ಇಲ್ಲ. ನನ್ನ ಕಾರ್ಯಕರ್ತರು ನನ್ನ ಬೆಂಬಲಕ್ಕಾಗಿ ದುಡಿಯುತ್ತಿದ್ದಾರೆ, ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ನಾನು ಕೂಡ ನಮ್ಮ ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷದ ಕರ್ಯಕರ್ತನಾಗಿ ಚುನಾವಣಾ ಕಣದಲ್ಲಿ ಹೋರಾಟ ಮಾಡುತ್ತೇನೆ ಎಂದರು.

ರಾಹುಲ್‌ ಗಾಂಧಿಯವರ ಅನರ್ಹತೆಯನ್ನು ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, ಪಾರ್ಲಿಮೆಂಟ್‌ ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆಯನ್ನಿಟ್ಟಿದೆ. ಎಂದೂ ದೇಶದಲ್ಲಿ ಇಂಥಹ ಘಟನೆಗಳು ಸಂಭವಿಸಿಲ್ಲ. ಈಗಾಗಲೇ ನ್ಯಾಯಾಲಯದಲ್ಲಿ ಇಂಥ ಅನೇಕ ಪ್ರಕರಣಗಳು ಅಲ್ಲಲ್ಲಿಗೇ ನಿಂತಿವೆ. ಆದರೆ, ಈ ಅವಸರದ ನಿರ್ಧಾರಕ್ಕೆ ಕಾರಣಗಳೇನು ಎಂಬ ಅಂಶವನ್ನು ಹುಡುಕಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ. ಎಲ್ಲವೂ ಪ್ರಶ್ನಾತೀತವಾಗಿದೆ ಎಂದರು.

error: Content is protected !!