ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ ಸಿದ್ಧ: ಶಾಸಕ ಎಚ್.ಕೆ. ಪಾಟೀಲ

0
Spread the love

ಬಿಜೆಪಿಯ ಅಭ್ಯರ್ಥಿ ಬಗ್ಗೆ ಯೋಚಿಸುವುದಿಲ್ಲ……

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್‌ ಪಕ್ಷವು ಶನಿವಾರ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸರ್ವಾನುಮತದಿಂದ ಘೋಷಣೆ ಮಾಡಿದೆ. ಪಕ್ಷದ ಪರವಾಗಿ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗುತ್ತಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ ಸಿದ್ಧವಾಗಿದೆ ಎಂದು ಗದಗ ಶಾಸಕ ಕೆ.ಎಚ್.‌ ಪಾಟೀಲರು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್‌ ಘೋಷಣೆಯ ನಂತರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಘೋಷಣೆಯ ಬಗ್ಗೆ ಎಲ್ಲಿಯೂ ಅಪಸ್ವರದ ಮಾತುಗಳು ಕೇಳಿಬಂದಿಲ್ಲ. ಉತ್ತಮ ರೀತಿಯಲ್ಲಿ ಟಿಕೆಟ್ ಹಂಚಿಕೆಯಾಗಿದೆ. ಇದು ನಮ್ಮ ಪಕ್ಷ ಸಂಘಟನೆಯ ದಿಟ್ಟ ಹೆಜ್ಜೆಗಳಲ್ಲೊಂದು. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮರ್ಗದರ್ಶನದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಉಳಿದ 100 ಸೀಟ್ ಬಗ್ಗೆ ಚರ್ಚೆ ನಡೆಸಿ ಶೀಘ್ರವಾಗಿ ಘೋಷಣೆ ಮಾಡಲಾಗುತ್ತದೆ. 26, 27ನೇ ತಾರೀಕು ಸಿಇಸಿ ಸಭೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದರು.

ಎಚ್.ಕೆ. ಪಾಟೀಲರ ಎದುರು ಬಿಜೆಪಿ ಪ್ರಭಾವಿ ನಾಯಕರನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲರು, ನನ್ನ ಪಕ್ಷದ ಹೈಕಮಾಂಡ್‌, ನಮ್ಮ ಕಾರ್ಯಕರ್ತರು ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಬಿಜೆಪಿ ಯಾರನ್ನು ಕಣಕ್ಕೆ ಇಳಿಸುತ್ತಾರೆಂಬ ಬಗ್ಗೆ ನಾನು ಯೋಚಿಸುವ ಸಂದರ್ಭವೇ ಇಲ್ಲ. ನನ್ನ ಕಾರ್ಯಕರ್ತರು ನನ್ನ ಬೆಂಬಲಕ್ಕಾಗಿ ದುಡಿಯುತ್ತಿದ್ದಾರೆ, ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ನಾನು ಕೂಡ ನಮ್ಮ ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷದ ಕರ್ಯಕರ್ತನಾಗಿ ಚುನಾವಣಾ ಕಣದಲ್ಲಿ ಹೋರಾಟ ಮಾಡುತ್ತೇನೆ ಎಂದರು.

ರಾಹುಲ್‌ ಗಾಂಧಿಯವರ ಅನರ್ಹತೆಯನ್ನು ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, ಪಾರ್ಲಿಮೆಂಟ್‌ ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆಯನ್ನಿಟ್ಟಿದೆ. ಎಂದೂ ದೇಶದಲ್ಲಿ ಇಂಥಹ ಘಟನೆಗಳು ಸಂಭವಿಸಿಲ್ಲ. ಈಗಾಗಲೇ ನ್ಯಾಯಾಲಯದಲ್ಲಿ ಇಂಥ ಅನೇಕ ಪ್ರಕರಣಗಳು ಅಲ್ಲಲ್ಲಿಗೇ ನಿಂತಿವೆ. ಆದರೆ, ಈ ಅವಸರದ ನಿರ್ಧಾರಕ್ಕೆ ಕಾರಣಗಳೇನು ಎಂಬ ಅಂಶವನ್ನು ಹುಡುಕಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ. ಎಲ್ಲವೂ ಪ್ರಶ್ನಾತೀತವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here