ವಿಜಯಸಾಕ್ಷಿ ಸುದ್ದಿ, ಗದಗ
ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಗದಗ ಜಿಲ್ಲೆಯಲ್ಲಿ ಕುರುಡು ಕಾಂಚಾಣ ಎಗ್ಗಿಲ್ಲದೇ ಹರಿದಾಡುತ್ತಿದೆ. ಕಳೆದ ಹಲವು ದಿನಗಳಿಂದ ಜಿಲ್ಲಾಡಳಿತ ಸ್ಥಾಪಿಸಿರುವ ಚೆಕ್ ಪೋಸ್ಟ್ ನಲ್ಲಿ ಹಲವು ಪ್ರಕರಣಗಳು ಪತ್ತೆಯಾಗಿದ್ದು, ಕೋಟ್ಯಾಂತರ ರೂ. ಹಣ ಸೀಜ್ ಆಗಿದೆ.
ನಿನ್ನೆ ರಾತ್ರಿ ಪ್ರತ್ಯೇಕ ಪ್ರಕರಣದಲ್ಲಿ 6 ಲಕ್ಷ 40 ಸಾವಿರ ರೂ. ಹಣ ಹಾಗೂ 5ಲಕ್ಷಕ್ಕೂ ಹೆಚ್ಚು ಮೌಲ್ಯದ ಬಟ್ಟೆಗಳು ಜಪ್ತಿ ಮಾಡಲಾಗಿದೆ.

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಇಲಕಲ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದೆ 6ಲಕ್ಷ 40ಸಾವಿರ ರೂ. ಸೀಜ್ ಮಾಡಲಾಗಿದೆ. ಕೊಪ್ಪಳದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು, ಕಾರು ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ಮಾಹಿತಿ ಪಡೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಗದಗ -ಲಕ್ಷ್ಮೇಶ್ವರ ರಸ್ತೆಯ ಮುಳಗುಂದ ಪಟ್ಟಣದ ಬಸಾಪೂರ ಕ್ರಾಸ್ ಬಳಿಯ ಚೆಕ್ ಪೋಸ್ಟ್ ನಲ್ಲಿ 5 ಲಕ್ಷ ರೂ ಮೌಲ್ಯದ ಬಟ್ಟೆ ಮಟೇರಿಯಲ್ಸ್ ಸೀಜ್ ಮಾಡಲಾಗಿದೆ.
ಬೆಂಗಳೂರಿನಿಂದ ಗದಗ ಕಡೆ ಬಟ್ಟೆ ಹೊತ್ತೊಯ್ಯುತ್ತಿದ್ದ ಲಾರಿ ವಶಕ್ಕೆ ಪಡೆಯಲಾಗಿದೆ.
ಗಜೇಂದ್ರಗಡ ಹಾಗೂ ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಎರಡು ಪ್ರಕರಣ ನಡೆದಿವೆ.