Home Blog Page 3283

ಮುಸ್ಲಿಂ ಸಮುದಾಯದ 4% ಮೀಸಲಾತಿ ಕಿತ್ತೊಗೆದ ರಾಜ್ಯ ಸರ್ಕಾರ; ಮುಸ್ಲಿಂ ಮುಖಂಡರಿಂದ ಖಂಡನೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಏಕಾಏಕಿ ಮುಸ್ಲಿಂ ಸಮುದಾಯದ ಶೇ.4 ರ ಮೀಸಲಾತಿ ಕಿತ್ತುಕೊಂಡಿರುವುದು ಖಂಡನೀಯ ಎಂದು ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಹೇಳಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವ ಆಧಾರದ ಮೇಲೆ ಮೀಸಲಾತಿ ಕಿತ್ತುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ಮಹಾರಾಜರು ನೇಮಿಸಿದ ಲೆಸ್ಲಿ ಮಿಲ್ಲರ್ ಆಯೋಗದ ವರದಿಯಿಂದ ಹಿಡಿದು ಡಾ. ನಾಗನಗೌಡ ಸಮಿತಿ, ಹಾವನೂರ ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಮುಸ್ಲಿಂ ಸಮುದಾಯ ಆರ್ಥಿಕವಾಗಿ ಹಿಂದುಳಿದ ಸಮುದಾಯ ಎಂದು ವರದಿ ಕೊಟ್ಟಿವೆ. ಆದರೆ, ರಾಜ್ಯ ಸರ್ಕಾರ ನಮ್ಮ ಸಮುದಾಯದ ಮೀಸಲಾತಿ ಕಿತ್ತುಕೊಂಡಿರುವುದು ನಮಗೆ ನೋವು ಕೊಟ್ಟಿದೆ ಎಂದರು.

ಯಾವುದೋ ಒಂದು ಸಮುದಾಯದ ಮನವೊಲಿಕೆಗಾಗಿ ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಮುಸ್ತಫಾ, ನಾವು ಮೀಸಲಾತಿ ಕಿತ್ತು ಕೊಂಡಿರುವುದನ್ನು ಖಂಡಿಸಿ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ತಮ್ಮ ಸಮುದಾಯಕ್ಕೆ ನೀಡಿದ್ದು ಇದನ್ನು ತಾವು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ವಾರ ಉಭಯಶ್ರೀಗಳನ್ನು ಭೇಟಿ ಮಾಡಿ ಕೇಳಿಕೊಳ್ಳುತ್ತೇವೆ. ಮುಸ್ಲಿಂ ಸಮುದಾಯದ ಮಕ್ಕಳನ್ನು ಕರೆದುಕೊಂಡು ಹೋಗಿ ಶ್ರೀಗಳ ಮಡಿಲಿಗೆ ಹಾಕಲಾಗುವುದು. ಪತ್ರ ಚಳವಳಿ ಮಾಡುತ್ತೇವೆ. ರಂಜಾನ್ ಮುಗಿದ ಬಳಿಕ ರಾಜ್ಯದ ಕೂಡಲಸಂಗಮ ಹಾಗೂ ನಿರ್ಮಲಾನಂದ ಸ್ವಾಮೀಜಿಗಳ ಮಠದಿಂದ ಮೀಸಲಾತಿಗಾಗಿ ರಥಯಾತ್ರೆ ಹಮ್ಮಿಕೊಳ್ಳುಲಿದ್ದೇವೆ. ಮುಖ್ಯಮಂತ್ರಿ ಬೊಮ್ಮಾಯಿಯವರೇ ನೀವು ವಿಷ ಕೊಟ್ಟರು, ಅದನ್ನು ಅಮೃತ ಎಂದು ಸೇವಿಸುವ ಮುಗ್ದ ಸಮಾಜ ನಮ್ಮದು. ನಮ್ಮ ಮೀಸಲಾತಿ ತೆಗೆಯುವಾಗ ಯಾವುದಾದರೂ ಅಧ್ಯಯನ ನಡೆಸಿದ್ರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ದಾಳಿ; ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ವಶಕ್ಕೆ

ತಹಸೀಲ್ದಾರ ಶೃತಿ ಮಳಪ್ಪಗೌಡ, ಆಹಾರ ನಿರೀಕ್ಷಕ ಜಗದೀಶ ಅಮಾತಿ, ಪೊಲೀಸ್ ಸಿಬ್ಬಂದಿಗಳ ಜಂಟಿ ದಾಳಿ

ವಿಜಯಸಾಕ್ಷಿ ಸುದ್ದಿ, ಮುಂಡರಗಿ/ಗದಗ

ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹ ಮಾಡಲಾಗಿದ್ದ ಗೋಡಾನ್ ಒಂದರ ಮೇಲೆ ದಾಳಿ ಮಾಡಿರುವ ತಹಸೀಲ್ದಾರ್ ಹಾಗೂ ಸಿಬ್ಬಂದಿ ಅಪಾರ ಪ್ರಮಾಣದ ಅನ್ನ ಭಾಗ್ಯ ಅಕ್ಕಿ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ  ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಕಾಂಗ್ರೆಸ್ ಮುಖಂಡ ಶ್ರೀಧರ್ ವಜ್ರಬಂಡಿ ಸೇರಿ ಮೂವರ ಬಂಧನ

ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಗೋಡಾನ್‌ ಒಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಡಲಾಗಿದ್ದ ಮಾಹಿತಿ ತಿಳಿದು ತಹಸೀಲ್ದಾರ ಶೃತಿ ಮಳಪ್ಪಗೌಡ, ಡಂಬಳದ ಆಹಾರ ನಿರೀಕ್ಷಕ ಜಗದೀಶ ಅಮಾತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಜಂಟಿಯಾಗಿ ದಾಳಿ ನಡೆಸಿ, ಅಕ್ಕಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ ಬಿಜೆಪಿ-ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಅನ್ನಭಾಗ್ಯ ಅಕ್ಕಿ ಪತ್ತೆ!

ಚುರ್ಚಿಹಾಳ ಹದ್ದಿಯಲ್ಲಿ ಬರುವ ಜಮೀನಿನ ಮಾಲಕ ಗದಗನ ಕಳಸಾಪೂರ ರಸ್ತೆಯ ರಘುನಾಥರಡ್ಡಿ ಬಸವರಡ್ಡಿ ಸಾಸ್ವಿಹಳ್ಳಿ ಇವರ ಮೇಲೆ ಪ್ರಕರಣ ದಾಖಲಾಗಿದೆ.

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತಗಡಿನ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಒಟ್ಟೂ 71.90 ಕ್ವಿಂಟಲ್‌ ತೂಕದ 1,65,370 ರೂ. ಬೆಲೆಯ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್ ಗೆ ಕ್ರೂಸರ್ ಡಿಕ್ಕಿ; ಹತ್ತಕ್ಕೂ ಹೆಚ್ಚು ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಅಪಘಾತದ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆ……

ವಿಜಯಸಾಕ್ಷಿ ಸುದ್ದಿ, ಗದಗ

ಟಿಪ್ಪರ್ ಗೆ ಹಿಂದಿನಿಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಹುಲಕೋಟಿ ಬಳಿ ಜರುಗಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ಜರುಗಿದ್ದು, ವೇಗವಾಗಿ ಹೊರಟಿದ್ದ ಕಾರೊಂದು ಸ್ಲೋ ಆಗಿದೆ. ಅದರ ಹಿಂದೆಯೇ ಹೊರಟಿದ್ದ ಟಿಪ್ಪರ್ ಚಾಲಕ ಕೂಡ ಸ್ಲೋ ಮಾಡಿದ್ದಾನೆ. ಕ್ರೂಸರ್ ಟಿಪ್ಪರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹುಬ್ಬಳ್ಳಿಯಿಂದ ಕ್ರೂಸರ್ ಗದಗ ಕಡೆ ಬರುತ್ತಿತ್ತು ಎನ್ನಲಾಗಿದೆ.

ಅಪಘಾತದ ಸುದ್ದಿ ತಿಳಿದು ಹೈವೇ ಪೆಟ್ರೋಲಿಂಗ್ ಪೊಲೀಸರು ತಮ್ಮ ವಾಹನದಲ್ಲಿ ನಾಲ್ಕು ಜನರನ್ನು ಹಾಗೂ 108 ಆಂಬ್ಯುಲೆನ್ಸ್ ನಲ್ಲಿ 7 ಜನರನ್ನು ಜಿಮ್ಸ್ ಆಸ್ಪತ್ರೆಗೆ ಸಾಗಿಸಿ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಸಿ ಕ್ಯಾಮರಾದಲ್ಲಿ ಸೆರೆ

ಅಪಘಾತದ ದೃಶ್ಯ ಸಮೀಪದ ಬಿಲ್ಡಿಂಗ್ ವೊಂದರಲ್ಲಿ ಇರುವ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಜೇಂದ್ರಗಡ ಚೆಕ್ ಪೋಸ್ಟ್ ನಲ್ಲಿ 6 ಲಕ್ಷಕ್ಕೂ ಹೆಚ್ಚು ಹಣ ಸೀಜ್, ಮುಳಗುಂದದಲ್ಲೂ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಗದಗ ಜಿಲ್ಲೆಯಲ್ಲಿ ಕುರುಡು ಕಾಂಚಾಣ ಎಗ್ಗಿಲ್ಲದೇ ಹರಿದಾಡುತ್ತಿದೆ. ಕಳೆದ ಹಲವು ದಿನಗಳಿಂದ ಜಿಲ್ಲಾಡಳಿತ ಸ್ಥಾಪಿಸಿರುವ ಚೆಕ್ ಪೋಸ್ಟ್ ನಲ್ಲಿ ಹಲವು ಪ್ರಕರಣಗಳು ಪತ್ತೆಯಾಗಿದ್ದು, ಕೋಟ್ಯಾಂತರ ರೂ. ಹಣ ಸೀಜ್ ಆಗಿದೆ.

ನಿನ್ನೆ ರಾತ್ರಿ ಪ್ರತ್ಯೇಕ ಪ್ರಕರಣದಲ್ಲಿ 6 ಲಕ್ಷ 40 ಸಾವಿರ ರೂ. ಹಣ ಹಾಗೂ 5ಲಕ್ಷಕ್ಕೂ ಹೆಚ್ಚು ಮೌಲ್ಯದ ಬಟ್ಟೆಗಳು ಜಪ್ತಿ ಮಾಡಲಾಗಿದೆ.

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಇಲಕಲ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದೆ 6ಲಕ್ಷ 40ಸಾವಿರ ರೂ. ಸೀಜ್ ಮಾಡಲಾಗಿದೆ. ಕೊಪ್ಪಳದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು, ಕಾರು ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಗದಗ -ಲಕ್ಷ್ಮೇಶ್ವರ ರಸ್ತೆಯ ಮುಳಗುಂದ ಪಟ್ಟಣದ ಬಸಾಪೂರ ಕ್ರಾಸ್ ಬಳಿಯ ಚೆಕ್ ಪೋಸ್ಟ್ ನಲ್ಲಿ 5 ಲಕ್ಷ ರೂ ಮೌಲ್ಯದ ಬಟ್ಟೆ ಮಟೇರಿಯಲ್ಸ್ ಸೀಜ್ ಮಾಡಲಾಗಿದೆ.
ಬೆಂಗಳೂರಿನಿಂದ ಗದಗ ಕಡೆ ಬಟ್ಟೆ ಹೊತ್ತೊಯ್ಯುತ್ತಿದ್ದ ಲಾರಿ ವಶಕ್ಕೆ ಪಡೆಯಲಾಗಿದೆ.

ಗಜೇಂದ್ರಗಡ ಹಾಗೂ ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಎರಡು ಪ್ರಕರಣ ನಡೆದಿವೆ.

ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ ಸಿದ್ಧ: ಶಾಸಕ ಎಚ್.ಕೆ. ಪಾಟೀಲ

ಬಿಜೆಪಿಯ ಅಭ್ಯರ್ಥಿ ಬಗ್ಗೆ ಯೋಚಿಸುವುದಿಲ್ಲ……

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್‌ ಪಕ್ಷವು ಶನಿವಾರ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸರ್ವಾನುಮತದಿಂದ ಘೋಷಣೆ ಮಾಡಿದೆ. ಪಕ್ಷದ ಪರವಾಗಿ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗುತ್ತಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ ಸಿದ್ಧವಾಗಿದೆ ಎಂದು ಗದಗ ಶಾಸಕ ಕೆ.ಎಚ್.‌ ಪಾಟೀಲರು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್‌ ಘೋಷಣೆಯ ನಂತರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಘೋಷಣೆಯ ಬಗ್ಗೆ ಎಲ್ಲಿಯೂ ಅಪಸ್ವರದ ಮಾತುಗಳು ಕೇಳಿಬಂದಿಲ್ಲ. ಉತ್ತಮ ರೀತಿಯಲ್ಲಿ ಟಿಕೆಟ್ ಹಂಚಿಕೆಯಾಗಿದೆ. ಇದು ನಮ್ಮ ಪಕ್ಷ ಸಂಘಟನೆಯ ದಿಟ್ಟ ಹೆಜ್ಜೆಗಳಲ್ಲೊಂದು. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮರ್ಗದರ್ಶನದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಉಳಿದ 100 ಸೀಟ್ ಬಗ್ಗೆ ಚರ್ಚೆ ನಡೆಸಿ ಶೀಘ್ರವಾಗಿ ಘೋಷಣೆ ಮಾಡಲಾಗುತ್ತದೆ. 26, 27ನೇ ತಾರೀಕು ಸಿಇಸಿ ಸಭೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದರು.

ಎಚ್.ಕೆ. ಪಾಟೀಲರ ಎದುರು ಬಿಜೆಪಿ ಪ್ರಭಾವಿ ನಾಯಕರನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲರು, ನನ್ನ ಪಕ್ಷದ ಹೈಕಮಾಂಡ್‌, ನಮ್ಮ ಕಾರ್ಯಕರ್ತರು ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಬಿಜೆಪಿ ಯಾರನ್ನು ಕಣಕ್ಕೆ ಇಳಿಸುತ್ತಾರೆಂಬ ಬಗ್ಗೆ ನಾನು ಯೋಚಿಸುವ ಸಂದರ್ಭವೇ ಇಲ್ಲ. ನನ್ನ ಕಾರ್ಯಕರ್ತರು ನನ್ನ ಬೆಂಬಲಕ್ಕಾಗಿ ದುಡಿಯುತ್ತಿದ್ದಾರೆ, ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ನಾನು ಕೂಡ ನಮ್ಮ ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷದ ಕರ್ಯಕರ್ತನಾಗಿ ಚುನಾವಣಾ ಕಣದಲ್ಲಿ ಹೋರಾಟ ಮಾಡುತ್ತೇನೆ ಎಂದರು.

ರಾಹುಲ್‌ ಗಾಂಧಿಯವರ ಅನರ್ಹತೆಯನ್ನು ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, ಪಾರ್ಲಿಮೆಂಟ್‌ ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆಯನ್ನಿಟ್ಟಿದೆ. ಎಂದೂ ದೇಶದಲ್ಲಿ ಇಂಥಹ ಘಟನೆಗಳು ಸಂಭವಿಸಿಲ್ಲ. ಈಗಾಗಲೇ ನ್ಯಾಯಾಲಯದಲ್ಲಿ ಇಂಥ ಅನೇಕ ಪ್ರಕರಣಗಳು ಅಲ್ಲಲ್ಲಿಗೇ ನಿಂತಿವೆ. ಆದರೆ, ಈ ಅವಸರದ ನಿರ್ಧಾರಕ್ಕೆ ಕಾರಣಗಳೇನು ಎಂಬ ಅಂಶವನ್ನು ಹುಡುಕಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ. ಎಲ್ಲವೂ ಪ್ರಶ್ನಾತೀತವಾಗಿದೆ ಎಂದರು.

ಪಡಿತರ ಅಕ್ಕಿ ಸಂಗ್ರಹಿಸಿ ಸಾಗಿಸುತ್ತಿದ್ದಾಗ ದಾಳಿ; ವಾಹನ ಸಮೇತ ಅಕ್ಕಿ ವಶಕ್ಕೆ

ನಂಬರ್ ಪ್ಲೇಟ್ ಇಲ್ಲದ ವಾಹನಗಳೇ ಅಕ್ಕಿ ದಂಧೆಕೋರರ ಸೀಕ್ರೆಟ್…….

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಬೇರೆ ಬೇರೆ ಸಾರ್ವಜನಿಕರಿಂದ ಸಂಗ್ರಹಿಸಿ, ಲಾಭದ ಉದ್ದೇಶದಿಂದ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲೆಂದು ಸಾಗಿಸುತ್ತಿರುವಾಗ ದಾಳಿ ನಡೆಸಿದ ಆಹಾರ ನಿರೀಕ್ಷಕರು, ವಾಹನದ ಸಮೇತ 27.85 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮಾರ್ಚ್‌ 23ರ ಮುಂಜಾನೆ 1 ಗಂಟೆಯ ಸುಮಾರಿಗೆ ಬೆಟಗೇರಿ ಬಸ್‌ ನಿಲ್ದಾಣದ ಹತ್ತಿರ, ಸಾರ್ವಜನಿಕರಿಗೆ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾರ್ವಜನಿಕರಿಂದ ಖರೀದಿಸಿ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್‌ ಚೀಲದಲ್ಲಿ ಸಂಗ್ರಹಿಸಿ, 62 ಚೀಲಗಳಲ್ಲಿ ತುಂಬಿಸಿದ್ದ ಒಟ್ಟೂ 61,270 ರೂ ಬೆಲೆಯ 27 ಕ್ವಿಂಟಲ್‌ 85 ಕೆಜಿ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದಾಗ ಗೂಡ್ಸ್ ವಾಹನ ಸಿಕ್ಕಿದೆ.

ನಂಬರ್ ಪ್ಲೇಟ್ ಇಲ್ಲದ ಅಶೋಕ್‌ ಲೈಲಾಂಡ್‌ ಗೂಡ್ಸ್ ವಾಹನದೊಂದಿಗೆ ವಾಹನದ ಚಾಲಕ ಹಾಗೂ ಮಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಬೆಟಗೇರಿ ಪೊಲೀಸ್‌ ಠಾಣೆಯಲ್ಲಿ ಸರ್ಕಾರದ ಪರವಾಗಿ ದೂರು ದಾಖಲಿಸಲಾಗಿದೆ.

ಅನ್ನ ಭಾಗ್ಯ ಅಕ್ರಮ ಅಕ್ಕಿ ಸಾಗಾಟ ಮಾಡುವ ದಂಧೆಕೋರರು ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಬಳಿಸಿಕೊಂಡು ತಮ್ಮ ದಂಧೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಸೀಜ್

ವಿಜಯಸಾಕ್ಷಿ ಸುದ್ದಿ, ಗದಗ/ಲಕ್ಷ್ಮೇಶ್ವರ

ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 1 ಲಕ್ಷ 90 ಸಾವಿರ ರೂ. ಹಣ ಜಪ್ತಿ ಮಾಡಲಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಚೆಕ್ ಪೋಸ್ಟ್ ನಲ್ಲಿ ಈ ಹಣ ಸಿಕ್ಕಿದೆ. ಇನ್ನೋವಾ ಕಾರ್ ನಲ್ಲಿ ಸಾಗಾಟ ಮಾಡುವಾಗ ರಾಮಗಿರಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ವೇಳೆ ಈ ಹಣ ಸಿಕ್ಕಿದೆ.

ಆಂದ್ರಪ್ರದೇಶದ ಅನಂತಪೂರ ದಿಂದ ಧಾರವಾಡ ಜಿಲ್ಲೆಯ ಗುಡಗೇರಿಗೆ ಇನ್ನೋವಾ ಕಾರಿನಲ್ಲಿ ಈ ಹಣ ಸಾಗಾಟ ಮಾಡಲಾಗುತ್ತಿತ್ತು.

ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಹೆದ್ದಾರಿ ಕಾಮಗಾರಿ ಸರ್ವೆ ನಡೆಸುತ್ತಿದ್ದ ಸರ್ವೇಯರ್‌ ಮೇಲೆ ಹಲ್ಲೆ: ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಹೆದ್ದಾರಿ ಕಾಮಗಾರಿಯ ಸರ್ವೆ ಕೆಲಸ ಮಾಡುತ್ತಿದ್ದ ಸರ್ವೇಯರ್ ಮೇಲೆ ಹಲ್ಲೆ ನಡೆಸಿ, ಧಮಕಿ ಹಾಕಿ ಅವರ ವಾಹನವನ್ನು ಸುಟ್ಟು ಹಾಕುತ್ತೇನೆಂದು ಅವಾಚ್ಯ ಶಬ್ಧಗಳಿಂದ ವ್ಯಕ್ತಿಯೊಬ್ಬರು ನಿಂದಿಸಿರುವ ಬಗ್ಗೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ

ಪಶ್ಚಿಮ ಬಂಗಾಳದ ಮೆಹರಬನ್‌ಪುರದ, ಹಾಲಿ ಶಿರಹಟ್ಟಿಯ ಹೊಳೆ ಇಟಗಿಯಲ್ಲಿ ವಾಸವಿರುವ ಖಾಸಗಿ ಕಂಪನಿಯೊಂದರ ಸರ್ವೇಯರ್‌ ಸಿದ್ಧಾಂತ್‌ ದೇಯ್‌ ಎಂಬುವರು ಮಾರ್ಚ್‌.13ರಂದು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಬೆಳದಡಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ ಕಾಮಗಾರಿಯ ಸರ್ವೇ ಕಾರ್ಯ ನಡೆಸುತ್ತಿದ್ದರು.

ಆಗ, ಆರೋಪಿ ಬೆಳಧಡಿ ಗ್ರಾಮದ ಸಹದೇವಪ್ಪ ಶಿವಪ್ಪ ಜಡಿ, ಈತ ಏಕಾಏಕಿಯಾಗಿ ಬಂದು, ಫಿರ್ಯಾದಿಯನ್ನು ಅಡ್ಡಗಟ್ಟಿ ನಿಲ್ಲಿಸಿ, ನಮ್ಮ ಹೊಲದಲ್ಲಿ ಪೈಪ್‌ಲೈನ್‌ ಮಾಡಿಕೊಡುತ್ತೇವೆಂದು ಹೇಳಿ ಈವರೆಗೂ ಕೆಲಸ ಮಾಡಿಕೊಟ್ಟಿಲ್ಲ. ಇಲ್ಯಾಕೆ ರಸ್ತೆ ಕಾಮಗಾರಿ ಸರ್ವೇ ಮಾಡುತ್ತಿದ್ದೀರಿ ಎಂದು ಅವಾಚ್ಯವಾಗಿ ಬೈದಿದ್ದಾರೆ.

ಅಷ್ಟೇ ಅಲ್ಲದೆ ಬಟ್ಟೆಯನ್ನು ಹಿಡಿದೆಳೆದು, ಕೂಡಲೇ ಕೆಲಸವನ್ನು ನಿಲ್ಲಿಸಿ. ಇಲ್ಲವಾದರೆ ನಿಮ್ಮನ್ನು ಹೊಡೆದು ಸಾಯಿಸಿಯೇಬಿಡುತ್ತೇನೆಂದು ಧಮಕಿ ಹಾಕಿದ್ದಲ್ಲದೆ, ಫಿರ್ಯಾದಿ ಹಾಗೂ ಸಾಕ್ಷಿದಾರರು ತಂದಿದ್ದ ಕಂಪನಿಯ ವಾಹನವನ್ನು ನೋಡಿ, ಇದನ್ನು ಬೆಂಕಿ ಹಚ್ಚಿ ಸುಟ್ಟುಹಾಕುತ್ತೇನೆ ಎಂದು ಕೈಯಿಂದ ಹೊಡೆದು ಗಾಯಪಡಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗದಗ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳ್ಳಭಟ್ಟಿ ಸಾರಾಯಿ ಮಾರಾಟ; ಮಹಿಳೆ ಸಮೇತ ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಗಜೇಂದ್ರಗಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್.19ರ ಬೆಳಿಗ್ಗೆ 9.30ರ ಸಮಯಕ್ಕೆ ಆರೋಪಿತಳಾದ ಗಜೇಂದ್ರಗಡ ನೆಲ್ಲೂರಿನ ಸೀತವ್ವ ಶರಣಪ್ಪ ಲಮಾಣಿ, ಕಳ್ಳಭಟ್ಟಿ ಸಾರಾಯಿ ಹಾನಿಕಾರಕವೆಂದು ಗೊತ್ತಿದ್ದೂ ನೆಲ್ಲೂರ ಗ್ರಾಮದ ಸರಕಾರಿ ಹಳ್ಳದ ಬಳಿ ಕುಳಿತುಕೊಂಡು ಮಾರಾಟ ಮಾಡುತ್ತಿದ್ದಾಗ 2ಲೀ.ನ 4 ಪ್ಲಾಸ್ಟಿಕ್‌ಬಾಟಲಿಯಲ್ಲಿ ತುಂಬಿಸಿದ್ದ ಕಳ್ಳಭಟ್ಟಿ ಸಾರಾಯಿಯೊಂದಿಗೆ ಸಾರಾಯಿ ತಯಾರಿಕೆಗೆ ಬಳಸಿದ್ದ ಅಂದಾಜು 1,050ರೂ ಮೌಲ್ಯದ ಪಾತ್ರೆ, ಕೊಡ ಇತ್ಯಾದಿ ಪರಿಕರಗಳ ಸಮೇತ ಸಿಕ್ಕುಬಿದ್ದಿದ್ದಾಳೆ.

ಇದೇ ದಿನ, ಮಧ್ಯಾಹ್ನ 2.40ರ ಸಮಯಕ್ಕೆ ಗಜೇಂದ್ರಗಡದ ಜನತಾ ಪ್ಲಾಟ್‌ ನಿವಾಸಿ ಮಾರುತಿ ಗಿಡ್ಡಪ್ಪ ಗುಡೂರ ಈತನು ಗಜೇಂದ್ರಗಡ-ಕಾಲಕಾಲೇಶ್ವರ ರಸ್ತೆಯ ಪಂಪ್‌ಹೌಸ್‌ ಹತ್ತಿರ ರಸ್ತೆಯ ಮೇಲೆ ಕೂತು ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು, ಒಟ್ಟೂ 1 ಸಾವಿರ ರೂ. ಮೌಲ್ಯದ ಸಾರಾಯಿಯೊಂದಿಗೆ ವಶಕ್ಕೆ ಪಡೆದಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಕಲ್ಯಾಣಿ ಮಟಕಾ ಜೂಜಾಟ; ವ್ಯಾಪರಿ ಸಂಗಪ್ಪಶೆಟ್ಟರ ಬಂಧನ

ಶಿರಹಟ್ಟಿ ಪೊಲೀಸರ ಕಾರ್ಯಾಚರಣೆ…..

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕರಿಂದ ಹಣ ಪಡೆದು ಕಲ್ಯಾಣಿ ಮಟಕಾ ಎಂಬ ಜೂಜಾಟದಲ್ಲಿ ತೊಡಗಿದ್ದ ವ್ಯಾಪಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿರೂಪಾಕ್ಷಪ್ಪ ತಂದೆ ಶಂಕ್ರಪ್ಪ ಸಂಗಪ್ಪಶೆಟ್ಟರ್ ಎಂಬುವವರೇ ಬಂಧಿತ ಆರೋಪಿ.

ಫೆ.20 ರಂದು ಶಿರಹಟ್ಟಿ ಪಟ್ಟಣದ ಗಾಂಧಿ ಸರ್ಕಲ್ ಬಳಿ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಕಲ್ಯಾಣಿ ಮಟಕಾ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಶಿರಹಟ್ಟಿ ಪಿಎಸ್ಐ ಈರಪ್ಪ ಎಚ್ ರಿತ್ತಿ ಬಂಧಿಸಿದ್ದಾರೆ.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಯ್ಯಾಕ್ಟ್ 1963(u/s-78(3) 0024/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!