ಹೆದ್ದಾರಿ ಕಾಮಗಾರಿ ಸರ್ವೆ ನಡೆಸುತ್ತಿದ್ದ ಸರ್ವೇಯರ್‌ ಮೇಲೆ ಹಲ್ಲೆ: ಪ್ರಕರಣ ದಾಖಲು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಹೆದ್ದಾರಿ ಕಾಮಗಾರಿಯ ಸರ್ವೆ ಕೆಲಸ ಮಾಡುತ್ತಿದ್ದ ಸರ್ವೇಯರ್ ಮೇಲೆ ಹಲ್ಲೆ ನಡೆಸಿ, ಧಮಕಿ ಹಾಕಿ ಅವರ ವಾಹನವನ್ನು ಸುಟ್ಟು ಹಾಕುತ್ತೇನೆಂದು ಅವಾಚ್ಯ ಶಬ್ಧಗಳಿಂದ ವ್ಯಕ್ತಿಯೊಬ್ಬರು ನಿಂದಿಸಿರುವ ಬಗ್ಗೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ

ಪಶ್ಚಿಮ ಬಂಗಾಳದ ಮೆಹರಬನ್‌ಪುರದ, ಹಾಲಿ ಶಿರಹಟ್ಟಿಯ ಹೊಳೆ ಇಟಗಿಯಲ್ಲಿ ವಾಸವಿರುವ ಖಾಸಗಿ ಕಂಪನಿಯೊಂದರ ಸರ್ವೇಯರ್‌ ಸಿದ್ಧಾಂತ್‌ ದೇಯ್‌ ಎಂಬುವರು ಮಾರ್ಚ್‌.13ರಂದು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಬೆಳದಡಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ ಕಾಮಗಾರಿಯ ಸರ್ವೇ ಕಾರ್ಯ ನಡೆಸುತ್ತಿದ್ದರು.

ಆಗ, ಆರೋಪಿ ಬೆಳಧಡಿ ಗ್ರಾಮದ ಸಹದೇವಪ್ಪ ಶಿವಪ್ಪ ಜಡಿ, ಈತ ಏಕಾಏಕಿಯಾಗಿ ಬಂದು, ಫಿರ್ಯಾದಿಯನ್ನು ಅಡ್ಡಗಟ್ಟಿ ನಿಲ್ಲಿಸಿ, ನಮ್ಮ ಹೊಲದಲ್ಲಿ ಪೈಪ್‌ಲೈನ್‌ ಮಾಡಿಕೊಡುತ್ತೇವೆಂದು ಹೇಳಿ ಈವರೆಗೂ ಕೆಲಸ ಮಾಡಿಕೊಟ್ಟಿಲ್ಲ. ಇಲ್ಯಾಕೆ ರಸ್ತೆ ಕಾಮಗಾರಿ ಸರ್ವೇ ಮಾಡುತ್ತಿದ್ದೀರಿ ಎಂದು ಅವಾಚ್ಯವಾಗಿ ಬೈದಿದ್ದಾರೆ.

ಅಷ್ಟೇ ಅಲ್ಲದೆ ಬಟ್ಟೆಯನ್ನು ಹಿಡಿದೆಳೆದು, ಕೂಡಲೇ ಕೆಲಸವನ್ನು ನಿಲ್ಲಿಸಿ. ಇಲ್ಲವಾದರೆ ನಿಮ್ಮನ್ನು ಹೊಡೆದು ಸಾಯಿಸಿಯೇಬಿಡುತ್ತೇನೆಂದು ಧಮಕಿ ಹಾಕಿದ್ದಲ್ಲದೆ, ಫಿರ್ಯಾದಿ ಹಾಗೂ ಸಾಕ್ಷಿದಾರರು ತಂದಿದ್ದ ಕಂಪನಿಯ ವಾಹನವನ್ನು ನೋಡಿ, ಇದನ್ನು ಬೆಂಕಿ ಹಚ್ಚಿ ಸುಟ್ಟುಹಾಕುತ್ತೇನೆ ಎಂದು ಕೈಯಿಂದ ಹೊಡೆದು ಗಾಯಪಡಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗದಗ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here