ಮೆಕ್ಕೆಜೋಳ ತುಂಬಿಕೊಂಡು ಡಂಬಳ ಗ್ರಾಮಕ್ಕೆ ಹೊರಟಿದ್ದ ಟ್ರಾಕ್ಟರ್ ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಮೇತ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
ಸಮೀಪದ ಮುಂಡರಗಿ -ಮೇವುಂಡಿ ಮಧ್ಯ ಈ ದುರ್ಘಟನೆ ನಡೆದಿದೆ.
ಶಿವಾನಂದಯ್ಯ ಶಿವಲಿಂಗಯ್ಯ ಹಿರೇಮಠ, ತಾಯಿ ಅನಸೂಯಾ ಶಿವಲಿಂಗಯ್ಯ ಹಿರೇಮಠ (65) ಶಿವಾನಂದಯ್ಯ ನ ಪುತ್ರಿ 6 ವರ್ಷದ ನಮಸ್ವಿ ಮೃತ ದುರ್ಧೈವಿಗಳು. ಪತ್ನಿ ಗಿರಿಜಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಹುಬ್ಬಳ್ಳಿಗೆ ಹೊರಟಿತ್ತು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರು ವೀರಭದ್ರೇಶ್ವರ ದೇವರು ದರ್ಶನ ಪಡೆದು ವಾಪಾಸು ಹೋಗುವಾಗ ಈ ದುರಂತ ಸಂಭವಿಸಿದೆ.
KA -25-AB 2702 ನಂಬರ್ ಇರೋ ಕಾರಿನಲ್ಲಿ ಇದ್ದವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮುಂಡರಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಬ್ಬಳ್ಳಿಯ ಅಮರಗೋಳ ಬಳಿಯ ಕೆಎಚ್ ಬಿ ಕಾಲೋನಿಯ ನಿವಾಸಿಗಳು ಎನ್ನಲಾಗಿದೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ-2021 10 ಮತಗಟ್ಟೆ; 5,999 ಸದಸ್ಯರಿಗೆ ಮತದಾನದ ಹಕ್ಕು
ವಿಜಯಸಾಕ್ಷಿ ಸುದ್ದಿ, ಗದಗ:
ಮೈಸೂರು ಮಹಾರಾಜರು ಸ್ಥಾಪಿಸಿದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಕಸಾಪದ ನೂತನ ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಭಾನುವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಶತಮಾನ ಕಂಡ ಸಂಸ್ಥೆಗೆ ಗೆಲುವು ಸಾಧಿಸುವ ಮೂಲಕ ಹೊಸ ಭರವಸೆ ಮೂಡಿಸುವ ತವಕದಲ್ಲಿದ್ದಾರೆ.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗೆಲುವಿಗಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ರಾಜಕೀಯ ಪಕ್ಷಗಳು, ನಾಯಕರು ನಾಚುವಂತಹ ರೀತಿಯಲ್ಲಿ ಪ್ರಚಾರ ನಡೆಸಿರುವ ಕಸಾಪ ಅಭ್ಯರ್ಥಿಗಳು ಸದ್ಯ ಕೊನೆಯ ಕ್ಷಣದ ಕಸರತ್ತು ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಒಟ್ಟು 5,999 ಆಜೀವ ಸದಸ್ಯರಿದ್ದು, ಶೇ. 70 ಪಾಲು ಸರ್ಕಾರಿ ನೌಕರರೇ ಇದ್ದಾರೆ. ಗದಗ- 1,901, ಶಿರಹಟ್ಟಿ- 298, ಲಕ್ಷ್ಮೇಶ್ವರ- 613, ನರೇಗಲ್- 196, ಹೊಳೆಆಲೂರ- 300, ರೋಣ- 453, ನರಗುಂದ- 662, ಮುಂಡರಗಿ- 782 ಹಾಗೂ ಗಜೇಂದ್ರಗಡ 794 ಮತದಾರರಿದ್ದಾರೆ. 10 ಮತಗಟ್ಟೆಗಳನ್ನು ತೆರೆಯಲಾಗಿದೆ.
ತಮ್ಮನಗೌಡರ, ಕಮ್ಮಾರ ಏಕಾಂಗಿ ಹೋರಾಟ:
ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಡಾ| ಶರಣು ಗೋಗೇರಿ ಹಾಗೂ ವಿವೇಕಾನಂದಗೌಡ ಪಾಟೀಲ್ ಬಿರುಸಿನ ಪ್ರಚಾರ ನಡೆಸಿದ್ದು, ಇಬ್ಬರ ನಡುವೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. ಕಳೆದ ಬಾರಿ ಪರಾಜಿತಗೊಂಡ ಸಂಗಮೇಶ ತಮ್ಮನಗೌಡರ ಹಾಗೂ ಐ.ಕೆ. ಕಮ್ಮಾರ ಏಕಾಂಗಿ ಹೋರಾಟ ನಡೆಸಿದ್ದಾರೆ. ಅಬ್ಬರವಿಲ್ಲದೆ ಜಿಲ್ಲಾದ್ಯಂತ ಓಡಾಡಿ, ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಮತ ನೀಡುವಂತೆ ಮನವಿ ಮಾಡಿದ್ದಾರೆ. ಮತದಾರರ ಒಲವು ಯಾರಿಗೆ ಎಂಬುದು ಫಲಿತಾಂಶದಿಂದಲೇ ತಿಳಿಯಬೇಕಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಲ್ಲಿ ನನ್ನ ಬಗ್ಗೆ ಒಳ್ಳೆಯ ವಾತಾವರಣವಿದ್ದು, ಬದಲಾವಣೆ ಆಗಬೇಕೆಂದು ಬಯಸಿದ್ದಾರೆ. ಐದು ವರ್ಷಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ಆಗಿಲ್ಲ. ಸಾಹಿತ್ಯಿಕ ಚಟುವಟಿಕೆಗಳೂ ನಡೆಯದೆ ಕಸಾಪದಿಂದ ಸಾಹಿತಿಗಳು ದೂರ ಸರಿದಿದ್ದಾರೆ. ಬದಲಾವಣೆ ಆಗಬೇಕೆಂಬುವುದು ಎಲ್ಲರ ಅಭಿಪ್ರಾಯ ಆಗಿದ್ದು, ಗೆಲ್ಲುತ್ತೇನೆಂಬ ನಂಬಿಕೆ ಇದೆ.
ವಿವೇಕಾನಂದಗೌಡ ಪಾಟೀಲ್, ಅಭ್ಯರ್ಥಿ
ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿ ರಾಜಕಾರಣ, ಗುಂಪುಗಾರಿಕೆ ಮಾಡದೆ ಒಂದು ಸಿದ್ಧಾಂತದ ಮೇಲೆ ಸರಳ ರೂಪದಲ್ಲಿ ಚುನಾವಣೆ ಮಾಡುತ್ತಿದ್ದೇನೆ. ಸೋಲು ಗೆಲುವು ಮುಖ್ಯವಲ್ಲ. ಆದರೆ, ಚುನಾವಣೆ ಹೀಗೆ ಇರಬೇಕೆಂದು ರಾಜ್ಯಕ್ಕೆ ತೋರಿಸುತ್ತಿದ್ದೇನೆ. ಜಿಲ್ಲೆಯಾದ್ಯಂತ ಸಾಕಷ್ಟು ಅಡ್ಡಾಡಿ ಪ್ರಚಾರ ಮಾಡಿದ್ದೇನೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದೆ. ಈ ಬಾರಿ ಗೆಲ್ಲುವ ಆಶಾವಾದವಿದೆ.
ಸಂಗಮೇಶ ತಮ್ಮನಗೌಡರ, ಅಭ್ಯರ್ಥಿ
ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಗೆಲ್ಲುವುದು ಬಹುತೇಕ ಖಚಿತ. ರಾಜ್ಯದಲ್ಲಿಯೇ ಹೆಚ್ಚು ಮತಗಳನ್ನು ಪಡೆಯುವ ಮೂಲಕ ದಾಖಲೆಯ ಅಂತರದಲ್ಲಿ ಗೆಲ್ಲಬೇಕೆಂದು ಪ್ರಯತ್ನಿಸುತ್ತಿದ್ದೇನೆ.
ಡಾ| ಶರಣು ಗೋಗೇರಿ, ಕಸಾಪ ನಿಕಟಪೂರ್ವ ಅಧ್ಯಕ್ಷ
ನನ್ನ ಮತ್ತು ನನ್ನ ಸಾಹಿತ್ಯಿಕ ಸಾಧನೆಯನ್ನು ಗದುಗಿನ ಜನ ಬಹಳ ಹತ್ತಿರದಿಂದ ನೋಡಿದ್ದಾರೆ. ಸರ್ಕಾರಿ ನೌಕರರಿಗೆ ವಿದ್ಯಾರ್ಥಿಗಳ ಸೇವೆ ಮಾಡುವುದೇ ಕಷ್ಟ, ಇನ್ನು ಕಸಾಪಕ್ಕೆ ಪೂರ್ಣಾವಧಿಯ ಸೇವೆ ಒದಗಿಸಲು ಹೇಗೆ ಸಾಧ್ಯ? ಕಳೆದ ಐದು ವರ್ಷಗಳ ಅವಧಿ ಆಜೀವ ಸದಸ್ಯರಿಗೆ ತೃಪ್ತಿದಾಯಕ ಆಗಿರದ ಕಾರಣ ಜನರು ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ. ಜಯ ನನ್ನದೇ.
–ಐ.ಕೆ. ಕಮ್ಮಾರ, ಅಭ್ಯರ್ಥಿ
ಕಳೆದ ಬಾರಿಯ ಫಲಿತಾಂಶ
ಕಳೆದ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಆರು ಜನ ಅಭ್ಯರ್ಥಿಗಳ ಪೈಕಿ ಡಾ| ಶರಣು ಗೋಗೇರಿ ಹಾಗೂ ಸಂಗಮೇಶ ತಮ್ಮನಗೌಡರ ಪುನಃ ಅಖಾಡಕ್ಕಿಳಿದ್ದಾರೆ. ಕಳೆದ ಬಾರಿ ಒಟ್ಟು 2,500 ಮತಗಳು ಚಲಾವಣೆಯಾಗಿದ್ದವು. ಡಾ| ಶರಣು ಗೋಗೇರಿ 1,250 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಡಾ| ಶಿವಪ್ಪ ಕುರಿ 650 ಮತ ಪಡೆದು ಠೇವಣಿ ಉಳಿಸಿಕೊಂಡಿದ್ದರು. ಸಂಗಮೇಶ ತಮ್ಮನಗೌಡರ 238 ಮತ ಗಳಿಸಲಷ್ಟೇ ಶಕ್ತರಾಗಿದ್ದರು. ಎಸ್.ಬಿ.ಕುಷ್ಠಗಿ 377 ಮತ ಪಡೆದಿದ್ದರೆ, ಮಂಜುನಾಥ ಡೋಣಿ ಹಾಗೂ ಮಹಿಳಾ ಅಭ್ಯರ್ಥಿ ಪಾಟೀಲ್ ಸೋಲಿನ ಕಹಿಯುಂಡಿದ್ದರು.
ಗದಗ ಜಿಲ್ಲೆಯಲ್ಲಿ ಶುಕ್ರವಾರ ನಿರಂತರವಾಗಿ ಮಳೆಯಾಗುತ್ತಿದ್ದು, ಶನಿವಾರ ಸಹ ಮಳೆ ಮುಂದುವರಿಯುವದಾಗಿ ಹವಾಮಾನ ಇಲಾಖೆ ವರದಿ ನೀಡಿದೆ. ಮಕ್ಕಳ ಸುರಕ್ಷತೆ ಹಾಗೂ ಮುಂಜಾಗ್ರತೆ ಹಿತದೃಷ್ಟಿಯಿಂದ ನಾಳೆ, ನವೆಂಬರ 20 ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ನೀಡಿರುವ ಕುರಿತು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ, ವಿದ್ಯಾರ್ಥಿ ಪಾಲಕರಿಗೆ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಧಾರವಾಡ ಎಂಎಲ್‌ಸಿ ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈಗಾಗಲೇ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರದೀಪ ಶೆಟ್ಟರ್ ಅವರ ಹೆಸರು ಅಂತಿಮಗೊಂಡಿದ್ದು, ಬಿಜೆಪಿ ಜನ ಸ್ವರಾಜ್ ಯಾತ್ರೆ ಮೂಲಕ ಬಿರುಸಿನ ಪ್ರಚಾರ ನಡೆಸಿದೆ.
ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡವುದು ಪಕ್ಕಾ ಆಗಿದೆ. ಅದರಲ್ಲಿ ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸಿದೆಯಾದರೂ ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ನಾಯಕ ಇಸ್ಮಾಯಿಲ್ ತಮಟಗಾರ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೇ, ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರೂ ಇಸ್ಮಾಯಿಲ್ ತಮಟಗಾರ ಅವರಿಗೆ ಎಂಎಲ್‌ಸಿ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಒಟ್ಟು 16 ಜನ ಅಲ್ಪಸಂಖ್ಯಾತರು ಧಾರವಾಡ ಎಂಎಲ್‌ಸಿ ಟಿಕೆಟ್ ಕೇಳಿದ್ದು, ಈಗಾಗಲೇ 25 ಎಂಎಲ್‌ಸಿ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.
ಡಿಕೆಶಿ ಅವರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಸ್ಮಾಯಿಲ್ ತಮಟಗಾರ ಜೊತೆಗೆ ಸಲೀಂ ಅಹ್ಮದ್ ಅವರ ಹೆಸರೂ ಇದೆ. ಆದರೆ, ಹೈಕಮಾಂಡ್ ಮಾತ್ರ ಸಲೀಂ ಅಹ್ಮದ್‌ಗೆ ಮಣೆ ಹಾಕಿದ್ದು, ಅವರ ಹೆಸರನ್ನೇ ಅಂತಿಮ ಮಾಡಿಕೊಳ್ಳುವಂತೆ ಡಿಕೆಶಿಗೆ ಸೂಚಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ಸಲೀಂ ಅಹ್ಮದ್ ಹೈಕಮಾಂಡ್ ಜೊತೆ ಉತ್ತಮ ನಂಟು ಇಟ್ಟುಕೊಂಡಿದ್ದಾರೆ. ಅಲ್ಲದೇ, ಸೋನಿಯಾ ಗಾಂಧಿ ಅವರ ಕುಟುಂಬ ಸದಸ್ಯರಂತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ ಎನ್ನಲಾಗಿದೆ.
ಸಲೀಂ ಅಹ್ಮದ್ ಈ ಹಿಂದೆ ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರೂ ಆಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿ, ಇರದಿರಲಿ ಸಲೀಂ ಅಹ್ಮದ್‌ಗೆ ಹುದ್ದೆ ಕೊಡುತ್ತಾರೆ. ಹೀಗಾಗಿ ಹೊಸಬರಿಗೆ ಅವಕಾಶ ಕೊಡಬೇಕು. ಅದರಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವುದಾದರೆ, ಹುಬ್ಬಳ್ಳಿ-ಧಾರವಾಡ ಅಲ್ಪಸಂಖ್ಯಾತ ನಾಯಕರಾದ ಇಸ್ಮಾಯಿಲ್ ತಮಟಗಾರ, ಎ.ಎಂ.ಹಿಂಡಸಗೇರಿ, ಶಾಕೀರ್ ಸನದಿ ಅವರಿಗೆ ಟಿಕೆಟ್ ನೀಡಬೇಕು ಎಂದು ಅಲ್ಪಸಂಖ್ಯಾತ ಮುಖಂಡರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಆನಂದಸ್ವಾಮಿ ಗಡ್ಡದ್ದೇವರಮಠ ಅಸಮಾಧಾನ
ಧಾರವಾಡ ವಿಧಾನ ಪರಿಷತ್ ಟಿಕೆಟ್‌ಗಾಗಿ ಕಾಂಗ್ರೆಸ್‌ನ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ ಅವರ ಪುತ್ರ ಆನಂದಸ್ವಾಮಿ ಗಡ್ಡದ್ದೇವರಮಠ ಲಾಭಿ ನಡೆಸಿದ್ದರು. ಆದರೆ, ಹೈಕಮಾಂಡ್ ಟಿಕೆಟ್ ನೀಡದ್ದಕ್ಕೆ ಸದ್ಯ ಅಸಮಾಧಾನಗೊಂಡಿದ್ದಾರೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಹೊಸಬರಿಗೆ ಮಣೆ ಹಾಕಲಿದ್ದು, ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಆನಂದಸ್ವಾಮಿ ಗಡ್ಡದ್ದೇವರಮಠ ಅವರಿಗೆ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಅವರಿಗೆ ಎಂಎಲ್‌ಸಿ ಟಿಕೆಟ್ ಕೈತಪ್ಪಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಟ್ನಲ್ಲಿ ಸದಾ ಹೈ ಪೈ ರಾಜಕಾರಣಿಯಾಗಿರುವ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಸಿಕ್ಕಲ್ಲಿ ಆಯಾಸ ಪಡದೇ ಎಮ್ ಎಲ್ ಸಿ ಆಗೋದು ಪಕ್ಕಾ ಎನ್ನಲಾಗುತ್ತದೆ.
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ರೈತಾಪಿ ಸಮುದಾಯಕ್ಕೆ ಸಮಾಧಾನ ಮೂಡಿಸಿದೆ. ನನಗಂತೂ ಸಂತೋಷ ತಂದಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಸಂತಸ ವ್ಯಕ್ತಪಡಿಸಿರುವ ಅವರು, ‘ಕೇಂದ್ರ ಸರ್ಕಾರದ ನೀತಿ ಕೆಟ್ಟ ಮೇಲೆ ಮತಿ ಬಂತು ಎಂಬ ಹಾಗಾಗಿದೆ. ಕೇಂದ್ರ ಸರ್ಕಾರ ಕೆಟ್ಟ ಕಾನೂನುಗಳನ್ನು ಮಾಡುವ ಮೂಲಕ ಸಿರಿವಂತರಿಗೆ ಸಹಾಯ ಮಾಡುವ ದುರಾಲೋಚನೆ ಇಟ್ಟುಕೊಂಡಿದ್ದರು. ರೈತರನ್ನು ಬಗ್ಗು ಬಡಿಯಬೇಕೆಂಬ ಆಲೋಚನೆಗೆ ಪೂರ್ಣ ವಿರಾಮ ಸಿಕ್ಕಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಮಾಡಿದಂತಹ ತಪ್ಪಿನಿಂದಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರ ಹೋರಾಟ, ಸತ್ಯಾಗ್ರಹ ನಡೆದಾಗ ರೈತರ ಮೇಲೆ ಜೀಪ್ ಹಾಯಿಸಿ ಕೊಲ್ಲುವ ಮಟ್ಟಕ್ಕೆ ಹೋದ ರಾಜಕೀಯ ನಾಯಕರು, ಬಿಜೆಪಿ ಕಾರ್ಯಕರ್ತರು ಉತ್ತರಿಸಬೇಕು. ಅಡುಗೆ ಆದ ಮೇಲೆ ಒಲೆ ಹತ್ತಿದ ಹಾಗೆ, ಪರವಾಗಿಲ್ಲ ಇಷ್ಟೆಲ್ಲಾ ಗಲಾಟೆಗಳಾದ ಮೇಲಾದರೂ ವಾಪಸ್ ಪಡೆದರಲ್ಲ. ಪಶ್ಚಾತ್ತಾಪದ ಮೊದಲ ಹೆಜ್ಜೆ ಇದಾಗಿದೆ ಎಂದರು.
ಕೇಂದ್ರ ಸರ್ಕಾರ, ಹೋರಾಟದಲ್ಲಿ ಮರಣ ಹೊಂದಿದ ರೈತರಿಗೆ ಪರಿಹಾರ ಕೊಡಬೇಕು. ಪ್ರತಿಭಟನೆ ಮಾಡುತ್ತಿರುವ ರೈತರನ್ನು ನಕಲಿ ರೈತರು, ದೇಶದ್ರೋಹಿಗಳು, ಭಯೋತ್ಪಾದಕರು ಎಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ರೈತರ ಪಾದಮುಟ್ಟಿ ಕ್ಷಮೆಯಾಚಿಸಬೇಕು ಎಂದಿರುವ ಅವರು, ಇದು ಕಾಂಗ್ರೆಸ್ ಪಕ್ಷದ ನಾಯಕರ ದಿಟ್ಟ ನಿಲುವಿಗೆ ಸಿಕ್ಕ ಜಯ ಇದಾಗಿದೆ ಎಂದು ಎಚ್.ಕೆ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಗೆ ಕನ್ನ ಹಾಕುತ್ತಿರುವುದು ಹೊಸತೇನಲ್ಲ. ನಿತ್ಯ ಜನರಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಬೇರೆಡೆ ಸಾಗಿಸುತ್ತಿದ್ದಾರೆ. ಇದು ಆಹಾರ ಮತ್ತು ಪೊಲೀಸ್ ಇಲಾಖೆಗೆ ಚೆನ್ನಾಗಿಯೇ ಗೊತ್ತಿದೆ. ಆದರೂ, ಅಕ್ಕಿ ದಂಧೆಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುವ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿದ್ದು, ಗದಗ ಜಿಲ್ಲಾ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅದರಲ್ಲೂ ಜಿಲ್ಲೆಯ ಮುಂಡರಗಿ ಪೊಲೀಸರ ಕಾರ್ಯವೈಖರಿ ಎದ್ದು ಕಾಣುತ್ತದೆ.
ಹೌದು, ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಸುತ್ತಿದ್ದ ಗದಗ ಜಿಲ್ಲೆಯ ಅಕ್ಕಿ ದಂಧೆಕೋರನಿಗೆ, ವಿಜಯನಗರ ಜಿಲ್ಲೆಯ ಕೊಟ್ಟೂರ ಪೊಲೀಸರು ಹೆಡಿಮುರಿ ಕಟ್ಟಿದ್ದಾರೆ. ಕಾಳಸಂತೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಅದನ್ನು ಬೇರೆ ಜಿಲ್ಲೆಗೆ ಸಾಗಿಸುತ್ತಿದ್ದ ಮುಂಡರಗಿಯ ಮೈಲಾರಲಿಂಗೇಶ್ವರ ಟ್ರೇಡರ್‌ನ ಮಾಲೀಕ ವೀರೇಶ್ ಬಡಿಗೇರ ಎಂಬುವವನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹಲವು ವರ್ಷಗಳಿಂದ ಅಕ್ಕಿ ದಂಧೆ ಮಾಡುತ್ತಾ ಬಂದಿರುವ ವಿರೇಶ್ ಮುಂಡರಗಿಯಿಂದ ಮಂಡ್ಯ ಜಿಲ್ಲೆಯ ಹುಲಿವಾಹನ ಗ್ರಾಮಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದ ಗೂಡ್ಸ್ ವಾಹನದ ಮೇಲೆ ದಾಳಿ ನಡೆಸಿರುವ ಕೊಟ್ಟೂರ ಪೊಲೀಸರು, ಪಟ್ಟಣದ ಹೊರವಲಯದ ಇಟ್ಟಿಗಿ ರಸ್ತೆಯಲ್ಲಿ ವೀರೇಶ್ ಬಡಿಗೇರನಿಗೆ ಸೇರಿರುವ ಒಟ್ಟು 5,15,160 ರೂ. ಮೌಲ್ಯದ 50 ಕೆ.ಜಿ.ಯ ಒಟ್ಟು 360 ಮೂಟೆಗಳನ್ನು ಜಪ್ತಿ ಮಾಡಿದ್ದಾರೆ. ಚಾಲಕ ಪಾಲಾಕ್ಷ್ ಎಂಬಾತನನ್ನು ಬಂಧಿಸಲಾಗಿದೆ.
ಈ ಹಿಂದೆಯೂ ವೀರೇಶ್ ಬಡಿಗೇರನಿಗೆ ಸೇರಿದ್ದು ಎನ್ನಲಾದ ಅನ್ನಭಾಗ್ಯ ಅಕ್ಕಿ ತುಂಬಿದ ಲಾರಿಯೊಂದು ಮುಂಡರಗಿ-ಮುರ್ಲಾಪುರ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿದಾರರು ನೀಡಿದ ಮಾಹಿತಿ ಮೇರೆಗೆ ಮುಂಡರಗಿ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ದಾಖಲೆಗಳ ಪ್ರಕಾರ ವೀರೇಶ್ ಮುಂಡರಗಿಯಿಂದ ಮಂಡ್ಯದ ಹುಲಿವಾಹನ ಗ್ರಾಮಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದ ಎಂದು ಗೊತ್ತಾಗಿದೆ. ಆದರೆ, ಮುಂಡರಗಿ ಪೊಲೀಸರಿಗೆ ಕಾಣಿಸದ ಅಕ್ಕಿ ಸಾಗಾಟ ವಾಹನ, ವಿಜಯನಗರ ಜಿಲ್ಲೆಯ ಕೊಟ್ಟೂರ ಪೊಲೀಸರಿಗೆ ಕಾಣಿಸಿದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಇನ್ನು ಅಷ್ಟೊಂದು ಪ್ರಮಾಣದ ಪಡಿತರ ಅಕ್ಕಿ ತುಂಬಿಕೊಂಡ ಗೂಡ್ಸ್ ವಾಹನ ಮುಂಡರಗಿ ಪಟ್ಟಣದಿಂದ ಹೊರ ಹೋಗಿದ್ದು ಹೇಗೆ? ಇದು ಪೊಲೀಸ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ? ಅಥವಾ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸಿದ್ದು ಏಕೆ? ಎಂಬ ಸಂಶಯ ಜಿಲ್ಲೆಯ ಜನರಲ್ಲಿ ವ್ಯಕ್ತವಾಗುತ್ತದೆ.
ರಾಜ್ಯ ಸರ್ಕಾರದ ವಿರುದ್ಧ ಅಲೆ ಎದ್ದಿದೆ, ಇದರಲ್ಲಿ ಸರ್ಕಾರ ಕೊಚ್ಚಿಕೊಂಡು ಹೋಗುತ್ತದೆ ಎಂದು ಸಿದ್ರಾಮಯ್ಯ ಹೇಳುತ್ತಿದ್ದು, ಅಲೆ, ಬಿರುಗಾಳಿ, ಸುನಾಮಿ ಎಂಬ ಶಬ್ದಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಇಂದು ಗದಗ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 2023ರ ವಿಧಾನಸಭಾ ಚುನಾವಣೆವರೆಗೂ ಕಾಯಬೇಕಿಲ್ಲ. ಅವರು ಹೇಳಿದಂತೆ, ಸದ್ಯ ನಡೆಯುತ್ತಿರುವ ಎಂಎಲ್ಸಿ ಚುನಾವಣೆಯಲ್ಲಿ ಸೋಲುನ್ನುವ ಮೂಲಕ ಅಲೆ, ಬಿರುಗಾಳಿ, ಸುನಾಮಿಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಮಾಜಿ ಸಿಎಂ ಸಿದ್ರಾಮಯ್ಯ ಬೂಟಾಟಿಕೆ ನಡೆಸುತ್ತಿದ್ದು, ಅವರ ನಡೆ ನುಡಿ ನೋಡಿದರೆ ಹೊಸ ಟ್ರೆಂಡ್ ಆರಂಭಿಸಿದ್ದಾರೆ. ಅವರು ಹಾವಾಡಿಗರಂತೆ ಮಾತನಾಡುತ್ತಿದ್ದಾರೆ ಎಂದ ಅವರು, ಸಿದ್ರಾಮಯ್ಯ ಅವರ ನಾಯಕತ್ವವನ್ನು ಸ್ವಪಕ್ಷದವರೇ ಸ್ವೀಕರಿಸಲು ತಯಾರಿಲ್ಲ. ನಿನ್ನೆ ಯಾವುದೋ ಒಂದು ಕಾಂಗ್ರೆಸ್ ಸಮಾರಂಭದಲ್ಲಿ ಜಮೀರ್ ಅಹ್ಮದ್ ಗೆ ಜೈಕಾರ ಹಾಕಿದ್ದಕ್ಕೆ ಮಾಜಿ ಸಿಎಂ ಸಿದ್ರಾಮಯ್ಯ ಅವರು ತಮ್ಮ ಭಾಷಣ ಮೊಟಕುಗೊಳಿಸಬೇಕಾಯಿತು. ಹೀಗಾಗಿ ಅವರಲ್ಲಿಯೇ ಹೊಂದಾಣಿಕೆ ಇಲ್ಲ. ಸಿದ್ರಾಮಯ್ಯ, ಡಿಕೆಶಿ, ಪರಮೇಶ್ವರ ಎಂಬ ಮೂರು ಬಣಗಳಿದ್ದು, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದ 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಜನಸ್ವರಾಜ್ ಯಾತ್ರೆ ಮೂಲಕ ಬಿಜೆಪಿ ನಾಲ್ಕು ತಂಡಗಳಾಗಿ ಪ್ರಚಾರ ನಡೆಸಲಿದೆ. ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಯಲ್ಲಾಪುರದಿಂದ, ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊಪ್ಪಳದಿಂದ ಪ್ರಚಾರ ಕಾರ್ಯ ಆರಂಭಿಸಲಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಬಿಟ್ ಕಾಯಿನ್ ಪ್ರಕರಣವನ್ನು ಸಿಬಿಐ, ಇಡಿಗೆ, ಎನ್ಪೋರ್ಸ್ ಮೆಂಟ್ ಗೆ ಕೊಡಬೇಕೋ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಸರ್ಕಾರವೂ ಒಪ್ಪಿಗೆ ನೀಡಲಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಅವರಿಗೆ ತಕ್ಕ ಶಾಸ್ತಿ ಆಗಲಿದೆ. ತಪ್ಪಿತಸ್ಥರು ಪಾತಾಳದಲ್ಲಿ ಅಡಗಿದ್ದರೂ ಅಂತವರನ್ನು ಕರೆ ತರುವ ಶಕ್ತಿ ಸರ್ಕಾರಕ್ಕೆ ಇದೆ.
ಆದ್ರೆ, ಕಾಂಗ್ರೆಸ್ ನಾಯಕರು ಇದನ್ನು ಹೇಳಲು ತಯಾರಿಲ್ಲ. ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಸಿದ್ರಾಮಯ್ಯ ಅವರು ಬಿಡುಗಡೆ ಮಾಡಬೇಕು. ವಿನಾಕಾರಣ ಬಿಜೆಪಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಕಾಂಗ್ರೆಸ್ ಬಿಜೆಪಿ ಮೇಲೆ ಕೆಸರೆರಚಲು ಮುಂದಾಗುತ್ತಿದೆ. ಮಾಜಿ ಸಿಎಂ ಬಳಕೆ ಮಾಡದ ಪದಗಳನ್ನು ಸಿದ್ರಾಮಯ್ಯ ಬಳಸುತ್ತಿದ್ದಾರೆ. ಕಾಂಗ್ರೆಸ್ ನವರು ಸತ್ಯಕ್ಕೆ ದೂರವಾದದ್ದನ್ನೇ ಮಾತನಾಡುತ್ತಿದ್ದು, ಕಾಂಗ್ರೆಸ್ ವೊಂದು ಸುಳ್ಳಿನ ಪ್ಯಾಕ್ಟರಿ ಇದ್ದಂತೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ತಾಲೂಕಿನ ಚಿಕ್ಕನರಗುಂದ ಗ್ರಾಮದ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಪ್ರೌಢಶಾಲೆಗೆ ಬುಧವಾರ ಬಿಇಒ ಆರ್.ಎಸ್.ಕುಡಚಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದ ಅವರು, ಕರ್ನಾಟಕ ಪಬ್ಲಿಕ್ ಶಾಲೆಯ ತರಗತಿಗಳಿಗೆ ಯೋಗ್ಯವಾಗಿರುವ ಮೂರು ಕೊಠಡಿಗಳನ್ನು ಬಳಸಿಕೊಳ್ಳುವಂತೆ ಆದೇಶಿಸಿದರು.
ಇನ್ನು ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿಯವರು ವಲಯ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅವ್ಯವಸ್ಥೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರು.
ಸ್ಥಳದಲ್ಲಿದ್ದ ಬಿಆರ್‌ಪಿ ಹಾಗೂ ಸಿಆರ್‌ಪಿಗಳಿಗೆ ಶೀಘ್ರವೇ ಸರಿಪಡಿಸುವಂತೆ ಬಿಇಒ ಸೂಚಿಸಿದರಲ್ಲದೇ, ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯಗಳ ದಾಸ್ತಾನು ಕೊಠಡಿಯ ಅವ್ಯವಸ್ಥೆ ಕಂಡು ಶಿಕ್ಷಕ ಎಫ್.ಜಿ.ಆಯಟ್ಟಿಯವರನ್ನು ತರಾಟೆಗೆ ತೆಗೆದುಕೊಂಡರು. ‘ಈಗಾಗಲೇ ನಮ್ಮ ಶಾಲೆಯಲ್ಲಿ ಪಿಂಕ್ ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದೆ.
ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲಾ ಮಕ್ಕಳಿಗೆ ಶೌಚಾಲಯದ ಕೊರತೆ ಉಂಟಾಗುತ್ತದೆ. ಹೀಗಾಗಿ ಹೆಚ್ಚುವರಿ ಶೌಚಾಲಯ ಕಲ್ಪಿಸಬೇಕು ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ವ್ಹಿ.ಎನ್.ಬೋಸ್ಲೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ಹನಮರಡ್ಡಿ ರಾಯರಡ್ಡಿ, ಬಿಆರ್‌ಪಿ ಎಂ.ಬಿ.ಪಾಟೀಲ್, ಸಿಆರ್‌ಪಿ ಡಿ.ಎಸ್.ಕಾನಣ್ಣವರ್, ಮುಖ್ಯ ಶಿಕ್ಷಕ ವ್ಹಿ.ಜಿ.ಬೋಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ದವಾಖಾನಿ ಇದು, ಗಪ್ ನಿಲ್ಲು, ಇಲ್ಲ ಹೊರಗ್ ಬಾ…!’ ಮಗನ ಶವದ ಮುಂದೆ ಕಣ್ಣೀರು ಹಾಕುತ್ತಾ ನಿಂತಿದ್ದ ಸಂತೋಷನ ಅಮಾಯಕ ತಾಯಿಗೆ ಪೊಲೀಸರು ಈ ರೀತಿ ಬೆದರಿಸಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಮೃತ ಸಂತೋಷನದ್ದು ಸಹಜ ಸಾವಾಗಿದ್ದರೆ, ಪೊಲೀಸರು ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ತಾಯಿಯ ಜತೆಗೆ ದುರ್ವರ್ತನೆ ತೋರುತ್ತಿರಲಿಲ್ಲ. ಅಲ್ಲದೆ, ಪೊಲೀಸರ ಈ ನಡವಳಿಕೆ, ಸಂತೋಷ ಪೊಲೀಸರ ಹೊಡೆತದಿಂದಲೇ ಸತ್ತಿದ್ದಾನೆ ವಿನಾ ಹೃದಯಾಘಾತದಿಂದ ಅಲ್ಲ. ಸಂತೋಷನದು ಸಹಜ ಸಾವಲ್ಲ ಎಂಬುದನ್ನು ಸಾಕ್ಷೀಕರಿಸಿದಂತಿದೆ ಎಂದು ಮೂಲಗಳು ಹೇಳುತ್ತಿವೆ.
ಹೋದವನು ಬಂದಿದ್ದು ಹೆಣವಾಗಿ:
ಸಂತೋಷ ಕರ್ಕಿಕಟ್ಟಿ ನ. 4 ರಂದು ದೀಪಾವಳಿ ಅಮಾವಾಸ್ಯೆಯಂದು ತಾನೇ 112ಗೆ ಕರೆ ಮಾಡಿ ಅದೇ ವಾಹನದಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದ ಎನ್ನಲಾಗುತ್ತದೆ. ಹಾಗೆ ಹೋದವನು ಅರ್ಧ ಗಂಟೆಯಲ್ಲಿಯೇ ವಾಪಸ್ ಮನೆಗೆ ಬಂದಿದ್ದಾನೆ. ಬಂದ ಒಂದು ಗಂಟೆಯಲ್ಲಿ ಶಹರ ಠಾಣೆಯಿಂದ ಪೊಲೀಸರು ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತಾಡಿದ್ದು ಯಾರು ಅಂತ ಗೊತ್ತಾಗಿಲ್ಲ. ಸಂತೋಷ ಮಾತ್ರ ‘ಬಂದೆ ಸರ್’ ಅಂದವನೇ, ಮನೆಯಲ್ಲಿ ಪೊಲೀಸ್ ಸ್ಟೇಶನ್‌ಗೆ ಹೋಗಿ ಬರ್ತೀನಿ ಅಂತ ಹೇಳಿ ಹೋಗಿದ್ದಾನೆ.
ಮೊದಲ ಬಾರಿಗೆ ಹೋಗಿ ವಾಪಸ್ ಬಂದ ಸಂತೋಷ್, ಎರಡನೇ ಸಾರಿ ಆಚೆ ಹೋಗಿ ಮರಳಿ ಮನೆಗೆ ಬಂದಿದ್ದು ಮಾತ್ರ ಹೆಣವಾಗಿ! ಹಾಗಿದ್ದರೆ, ಪೊಲೀಸ್ ಠಾಣೆಗೆ ಬರುವಂತೆ ಸಂತೋಷನಿಗೆ ಕರೆ ಮಾಡಿದ್ದು ಯಾರು? ಅಲ್ಲದೆ, ಸಂತೋಷ ಪೊಲೀಸ್ ಠಾಣೆಗೆ ಬಂದಾಗ ಕರ್ತವ್ಯದಲ್ಲಿದ್ದವರು ಯಾರ್ಯಾರು? ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರಿಸಬೇಕಾಗಿದೆ.
ಸಂತೋಷ್ ಶಹರ ಪೊಲೀಸ್ ಠಾಣೆಗೆ ಬಂದಿದ್ದ ವೇಳೆ ಅಲ್ಲಿದ್ದ ಸಾರ್ವಜನಿಕರು ಯಾರು? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರೇ ಹೇಳುವ ಹಾಗೆ, ಪಿಟ್ಸ್ ಅಥವಾ ಎದೆನೋವು ಕಾಣಿಸಿಕೊಂಡಾಗ ವಾಹನದಲ್ಲಿ ಜನರು ಎತ್ತಿ ಹಾಕಿದ್ದಾರೆ ಅಂತೆ. ಹಾಗಿದ್ದರೆ, ಆ ಜನ ಯಾರು?.
ಜೂಜಾಟದಲ್ಲಿ ಸಿಕ್ಕಿಬಿದ್ದವರು ಯಾರು?:
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಹಲವರನ್ನು ಠಾಣೆಗೆ ಕರೆ ತರಲಾಗಿತ್ತು ಅಂತೆ. ಈ ವೇಳೆ ಸಂತೋಷನಿಗೆ ಪೊಲೀಸರು ಹೊಡೆದಿದ್ದು, ಹೊಡೆತದ ರಭಸಕ್ಕೆ ಅಲ್ಲೇ ಕುಸಿದು ಬಿದ್ದ ಸಂತೋಷನನ್ನು ಅಲ್ಲಿಯೇ ಇದ್ದ ಇಸ್ಟೀಟು ಜೂಜುಕೋರರೇ ವಾಹನದಲ್ಲಿ ಎತ್ತಿ ಹಾಕಿದ್ದಾರೆ ಎನ್ನಲಾಗಿದೆ. ಅದಾಗಲೇ ಸಂತೋಷನ ಪ್ರಾಣಪಕ್ಷಿ ಹಾರಿ ಹೋಗಿತ್ತಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಇದನ್ನು ಕಣ್ಣಾರೇ ಕಂಡ ಇಸ್ಪೀಟು ಜೂಜಾಟದಲ್ಲಿ ಸಿಕ್ಕಿಬಿದ್ದವರ ಮೇಲೆ ಪ್ರಕರಣ ದಾಖಲಾಯಿತೇ? ಅಥವಾ ಪೊಲೀಸರೇ ಹೆದರಿ ಹಾಗೆ ಬಿಟ್ಟು ಕಳುಹಿಸಿದರೇ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಲಾಕಪ್ ಡೆತ್ ಸುದ್ದಿ ಹರಿದಾಡಿದ್ದು ಹೇಗೆ?:
ಠಾಣೆಯಲ್ಲಿ ನಡೆದ ಈ ಪ್ರಕರಣ ಅಷ್ಟು ಬೇಗ ಹೊರಬರುತ್ತಿರಲಿಲ್ಲ. ಸುಮಾರು ಕೇಸ್‌ಗಳು ಠಾಣೆಯಿಂದ ಆಚೆಗೆ ಬರೋದೇ ಇಲ್ಲ. ಹಾಗಿದ್ದರೆ ಈ ಪ್ರಕರಣ ಹರಡಲು ಅಂದು ಸಿಕ್ಕಿ ಬಿದ್ದಿದ್ದ ಜೂಜುಕೋರರು ಕಾರಣವಾದರೇ? ಸಂಜೆ ನಡೆದ ಈ ಘಟನೆ ಎರಡೇ ಗಂಟೆಯಲ್ಲಿ ಅವಳಿ ನಗರದ ತುಂಬೆಲ್ಲ ಲಾಕಪ್ ಡೆತ್ ಆಗಿದೆ ಎಂದು ಹರಡಿದ್ದು ಹೀಗೆ ಎಂಬ ಮಾಹಿತಿಯನ್ನು ಬಲ್ಲ ಮೂಲಗಳು ತಿಳಿಸಿವೆ.
ಇನ್ನಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಕಾಗಕ್ಕ, ಗುಬ್ಬಕ್ಕನ ಕಥೆ ಹೇಳಿದ ಶಹರ ಠಾಣೆಯ ಪೊಲೀಸರ ಬಗ್ಗೆ ಪ್ರಾಥಮಿಕ ತನಿಖೆಯಾದರೂ ಮಾಡಲು ಮುಂದಾಗ್ತಾರಾ? ಘಟನೆಗೆ ಕಾರಣವೆನ್ನಲಾಗುವ ಒಂದಿಬ್ಬರು ಪೊಲೀಸರ ರಕ್ಷಣೆ ಮಾಡ್ತಾರಾ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡಬೇಕಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತಾಲೂಕಿನ ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೈದರ್‌ನಗರದಲ್ಲಿ ಮಂಗಳವಾರ ರಾತ್ರಿ ಮದ್ಯ ಅಕ್ರಮ ಸಾಗಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಸುಮಾರು 23.30ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಕೊಪ್ಪಳ ಗ್ರಾಮೀಣ ವೃತ್ತದ ಪಿಐ ವಿಶ್ವನಾಥ ಹಿರೇಗೌಡರ್ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.